ಕೇಂದ್ರದ ಮುಂಗಡ ಪತ್ರ : ಒಂದು ಹಿನ್ನೋಟ

ಕೇಂದ್ರದ ಮುಂಗಡ ಪತ್ರ : ಒಂದು ಹಿನ್ನೋಟ
ಕೇಂದ್ರದ ಮುಂಗಡ ಪತ್ರ : ಒಂದು ಹಿನ್ನೋಟ

ಮೋದಿಯವರ ಎರಡನೇ ಇನ್ನಿಂಗ್ಸ್ ಸರ್ಕಾರದ ಆಯವ್ಯಯ ಮಂಡನೆಗೆ ದಿನ ಹತ್ತಿರಾಗುತ್ತಿದ್ದು, ಇದರ ಅಂಗವಾಗಿ ಸಾಂಪ್ರದಾಯಿಕವಾಗಿ ಹಲ್ವಾ ತಯಾರಿಸಿ, ಹಣಕಾಸು ಇಲಾಖೆ ಸಿಬ್ಬಂದಿ ವರ್ಗಕ್ಕೆ ಹಂಚಲಾಗಿದೆ.

ಆಯವ್ಯಯವನ್ನ ರೂಪಿಸುವ ಮತ್ತು ಮುದ್ರಿಸುವುದರ ರಹಸ್ಯವನ್ನ ಮಂಡನೆಯಾಗುವವರೆಗೂ ಕಾಯ್ದುಕೊಳ್ಳಬೇಕಾದ್ದರಿಂದ, ಹಣಕಾಸು ಇಲಾಖೆಯ ಸಿಬ್ಬಂದಿಯನ್ನ ಸಂಸತ್ತಿನ ಸೌತ್ ಬ್ಲಾಕ್‍ನಲ್ಲಿಯೇ ಹತ್ತುದಿನಗಳ ಕಾಲ ಉಳಿಸಲಾಗುತ್ತೆ. ಅವರುಗಳು ಮೊಬೈಲ್, ಇ ಮೇಲ್ ಸೇರಿದಂತೆ ಯಾವುದರ ಮೂಲಕವೂ ತಮ್ಮ ಕುಟುಂಬ ಸೇರಿದಂತೆ ಹೊರಗಿನರೊಡನೆ ಸಂಪರ್ಕ ಹೊಂದಲಾಗಲ್ಲ. ಹೀಗಾಗಿ ಮುದ್ರಣ ಕಾರ್ಯ ಆರಂಭಕ್ಕೆ ಹಲ್ವಾ ತಯಾರಿಸಿ, ಹಂಚಿ ತಿನ್ನುವ ಸಂಪ್ರದಾಯವನ್ನ ಅನುಸರಿಸಿಕೊಂಡೇ ಬರಲಾಗುತ್ತಿದೆ. ಹಲ್ವಾ ತಯಾರಿಕೆ ಸಂಪ್ರದಾಯ ಆರಂಭವಾಗಿದ್ದು ಯಾವಾಗಿಂದ ಎಂಬ ನಿಖರ ಮಾಹಿತಿಗಳಿಲ್ಲವಾದರೂ, ರಾಷ್ಟ್ರಪತಿ ಭವನದಲ್ಲಿ ಮುಂಗಡ ಪತ್ರ ಮುದ್ರಣವಾಗುತ್ತಿದ್ದುದನ್ನು, 1950 ರಲ್ಲಿ ಸಂಸತ್ತಿನ ಸೌತ್ ಬ್ಲಾಕ್‍ಗೆ ಸ್ಥಳಾಂತರಿಸಿದ ದಾಖಲೆಗಳಿವೆ.

ಸ್ವಾತಂತ್ರ್ಯಾ ನಂತರದಲ್ಲಿ ಮೊಟ್ಟಮೊದಲ ಆಯವ್ಯಯವನ್ನು ನವೆಂಬರ್ 26, 1947 ರಂದು ಮಂಡಿಸಿದ್ದು ಆರ್.ಕೆ. ಷಣ್ಮುಖಂಚೆಟ್ಟಿ. ಆವಾಗೆಲ್ಲ ಇಂಗ್ಲಿಷರ ಆಡಳಿತದಲ್ಲಿ ಅನುಸರಿಸಲಾಗುತ್ತಿದ್ದಂತೆಯೇ ಫೆಬ್ರವರಿ ಕೊನೆಯ ದಿನದಂದು ಸಂಜೆ ಐದು ಗಂಟೆಗೆ ಆಯವ್ಯಯ ಮಂಡನೆಯಾಗುತ್ತಿತ್ತು. ಸಂಜೆ ವೇಳೆ ಮಂಡನೆಯಾಗುವುದರಿಂದ ರಾತ್ರಿ ಎಲ್ಲಾ ತೆರಿಗೆ ಸಂಗ್ರಾಹಕರು, ಉತ್ಪಾದಕರು ದರಗಳನ್ನು ಹೊಂದಾಣಿಕೆ ಮಾಡಿಕೊಳ್ಳಲು ಅನುಕೂಲ ಎಂಬ ತರ್ಕ ಇತ್ತು. ಇದನ್ನೇ 2016ರವರೆಗೂ ಅನುಸರಿಸಲಾಯಿತಾದರೂ, ವಾಜಪೇಯಿ ಸಂಪುಟದಲ್ಲಿ ಅರ್ಥಸಚಿವರಾಗಿದ್ದ ಯಶವಂತ ಸಿನ್ಹಾ 1999 ರಲ್ಲಿ ಬೆಳಗ್ಗೆ 11 ಕ್ಕೆ ಆಯವ್ಯಯ ಮಂಡಿಸುವ ಹೊಸ ಸಂಪ್ರದಾಯ ಆರಂಭಿಸಿದರು.

ಫೆಬ್ರವರಿ ಕೊನೆಯ ದಿನ ಮಂಡನೆ ಎಂಬುದಕ್ಕೆ 2007 ರಲ್ಲಿ ಅರುಣ್ ಜೇಟ್ಲಿ ಕೊನೆ ಹಾಡಿ, ಫೆಬ್ರವರಿ 1 ರಂದೇ ಮಂಡಿಸಿದರಲ್ಲದೆ, 92 ವರ್ಷಗಳಿಂದ ಪ್ರತ್ಯೇಕವಾಗಿ ಮಂಡಿಸಲಾಗುತ್ತಿದ್ದ ರೈಲ್ವೆ ಆಯವ್ಯಯವನ್ನೂ ಸಾಮಾನ್ಯ ಆಯವ್ಯಯದೊಡನೆಯೇ ಸೇರಿಸಿದರು.

ಮೊರಾರ್ಜಿ ದೇಸಾಯಿ 10 ಸಲ ಆಯವ್ಯಯ ಮಂಡಿಸಿದ್ದು ಅವರ ಹುಟ್ಟುಹಬ್ಬದಂದೇ ಎರಡು ಸಲ ಆಯವ್ಯಯ ಮಂಡಿಸಿದ ಖ್ಯಾತಿ ಅವರದ್ದಾಗಿದೆ (ಫೆ 29, 1964 ಮತ್ತು 68) ರಾಜ್ಯಸಭೆ ಸದಸ್ಯರಾಗಿ ಹಣಕಾಸು ಸಚಿವರಾಗಿದ್ದ ಪ್ರಣಬ್ ಮುಖರ್ಜಿ ಮೂರು ವರ್ಷ(1982-85) ಮಂಡಿಸಿದ್ದರು, 

ಪ್ರಧಾನಿಯಾಗಿದ್ದ ಜವಹರಲಾಲ್ ನೆಹರು 1958-59 ರಲ್ಲಿ ಹಣಕಾಸು ಖಾತೆಯನ್ನೂ ಹೊಂದಿದ್ದರು, ಮೊರಾರ್ಜಿ ದೇಸಾಯಿ ರಾಜೀನಾಮೆ ಕೊಟ್ಟಿದ್ದರಿಂದಾಗಿ ಇಂದಿರಾಗಾಂಧಿ 1970 ರಿಂದ 71 ವರೆಗೆ, ವಿ.ಪಿ.ಸಿಂಗ್ ರಾಜೀನಾಮೆಯಿಂದಾಗಿ ರಾಜೀವ್ ಗಾಂಧಿ1987ರಲ್ಲಿ ಹಣಕಾಸು ಸಚಿವರಾಗಿಯೂ ಇದ್ದದ್ದರಿಂದಾಗಿ, ಒಂದೇ ಕುಟುಂಬದ ಮೂವರು ಎಂಬ ಖ್ಯಾತಿ ಇವರದ್ದಾದರೆ, ಡಾ.ಮನಮೋಹನ್ ಸಿಂಗ್ ಪ್ರಧಾನಿಯಾಗಿಯೂ ಹಣಕಾಸು ಸಚಿವರಾಗಿ ಆಯವ್ಯಯ ಮಂಡಿಸಿದ ಖ್ಯಾತಿ ಪಡೆದಿದ್ದಾರೆ.
 ನಾರಾಯಣದತ್ತ ತಿವಾರಿ, ಮಧುದಂಡವತೆ, ಚಿದಂಬರಂ, ಪ್ರಣವ್ ಮುಖರ್ಜಿ, ಯಶವಂತ್ ಸಿನ್ಹಾ, ಯಶವಂತರಾವ್ ಚವಾಣ್, ಸಿ.ಡಿ.ದೇಶಮುಖ್, ಟಿಟಿ ಕೃಷ್ಣಮಾಚಾರಿ,ಅರುಣ್ ಜೇಟ್ಲಿ, ಪಿಯೂಷ್ ಘೋಯಲ್ ಇವರೆಲ್ಲ ಆಯವ್ಯಯ ಮಂಡಿಸಿದ್ದಾರೆ.

ಕಳೆದ ಸಲ ಅರುಣ್ ಜೇಟ್ಲಿ ಚಿಕಿತ್ಸೆಗಾಗಿ ಅಮೆರಿಕಾಗೆ ತೆರಳಿದ್ದರಿಂದ ಹಲ್ವಾ ಹಂಚಿಕೆಯ ಕಾರ್ಯಕ್ರಮದಲ್ಲೂ ಇರಲಿಲ್ಲ, ಮಧ್ಯಂತರ ಆಯವ್ಯಯವನ್ನೂ ಮಂಡಿಸಲಿಲ್ಲ. ಪಿಯೂಷ್ ಗೋಯಲ್ ಮಂಡಿಸುವಂತಾಗಿತ್ತು. ಈ ಸಲ ಜುಲೈ 5 ರಂದು ನಿರ್ಮಲಾ ಸೀತಾರಾಮನ್ ಪೂರ್ಣ ಪ್ರಮಾಣದ ಆಯವ್ಯಯ ಮಂಡಿಸುತ್ತಿದ್ದಾರೆ.

ಕರ್ನಾಟಕದಿಂದ  ಕೇಂದ್ರ ಹಣಕಾಸು ಖಾತೆ ಸಚಿವರು ಯಾರೂ ಆಗಿರಲಿಲ್ಲ ಎಂ ಬುದು ನಮ್ಮ ರಾಜ್ಯದಿಂದಲೇ ರಾಜ್ಯಸಭೆಗೆ ಆಯ್ಕೆಯಾಗಿರುವ ಕಾರಣಕ್ಕಾಗಿ ನಿರ್ಮಲಾ ಸೀತಾರಾಮನ್‍ರಿಂದಾಗಿ ಕೊನೆಯಾಗುತ್ತಿದೆ. ಹಾಗೆಯೇ ರಾಜ್ಯಸಭೆ ಸದಸ್ಯರಾಗಿ ಈ ಖಾತೆ ನಿಭಾಯಿಸುತ್ತ ಆಯವ್ಯಯ ಮಂಡಿಸುತ್ತಿರುವವರಲ್ಲಿ ಪ್ರಣಬ್ ಮುಖರ್ಜಿ ಬಿಟ್ಟರೆ ಇವರೇ ನಂತರದವರು. ಮಹಿಳೆಯಾಗಿ ಇಂದಿರಾಗಾಂಧಿ ನಂತರ ಇವರೇ ವಿತ್ತ ಸಚಿವೆ ಎಂಬುದು ವಿಶೇಷ.