ಜುಗಾಡುಗಳು ಮತ್ತು  ಕಾಯ್ದೆಗಳು

ವಾಹನಗಳನ್ನು ಮಿತಿಮೀರಿದ ವೇಗದಲ್ಲಿ ಹಾಗೂ ಬೇಕಾಬಿಟ್ಟಿ ಓಡಿಸು-ವುದು, ಹೆಲ್ಮೆಟ್ ಧರಿಸದೆ ವಾಹನ ಓಡಿಸುವುದು, ದ್ವಿಚಕ್ರ ವಾಹನದ ಮೇಲೆ 3–4 ಮಂದಿ ಸವಾರಿ ಮಾಡುವುದು, ಹದಿನೈದು ವರ್ಷದೊಳಗಿನ ಪಡ್ಡೆಗಳೂ ಆಟೋ ಓಡಿಸುವುದು, ಬೈಕ್ ಓಡಿಸುವುದು ಇಲ್ಲಿನ ನಿತ್ಯ ಕಾಣಸಿಗುವ ದೃಶ್ಯಗಳು.

ಜುಗಾಡುಗಳು ಮತ್ತು  ಕಾಯ್ದೆಗಳು

ಒಬ್ಬ ದೊಡ್ಡ ಶ್ರೀಮಂತನಿದ್ದ,  ಶ್ರೀಮಂತನೆಂದರೆ ಗೊತ್ತಲ್ಲ, ಮನೆಯಲ್ಲಿರುವ ಒಬ್ಬೊಬ್ಬರಿಗೂ ಒಂದೊಂದು ಕಾರು.  ವಿದೇಶಿ ಮತ್ತು ಹೊಸ ಹೊಸ ಬ್ರ್ಯಾಂಡಿನ ವಾಹನಗಳ ದೊಡ್ದ ಗ್ರಾರೇಜೇ ಇತ್ತು ಅವರ ಫಾರ್ಮ್ ಹೌಸಿನಲ್ಲಿ.ಬಡವರ ಮಕ್ಕಳು ತೆಂಗಿನ ಗರಿಯಿಂದ ಪೀಪಿ ಮಾಡಲು ಕಲಿತಷ್ಟೇ ಸುಲಭವಾಗಿ ಶ್ರೀಮಂತರ ಮಕ್ಕಳು  ಬಾಲ್ಯದಿಂದಲೇ ಡ್ರೈವಿಂಗ್ ಕಲಿತುಬಿಡುತ್ತಾರೆ.  

ಹದಿವಯಸಿನಲ್ಲಿ  ಗಾಡಿ ಗುದ್ದಿ ಸಣ್ಣ ಪುಟ್ಟ ಅಪಘಾತಗಳಾದರೂ  ದುಡ್ಡಿರುವ ಅವರ ಅಪ್ಪಂದಿರು ಸಲೀಸಾಗಿ ಕೇಸು ಗೀಸು ಆಗದಂತೆ ನಿಭಾಯಿಸಿಬಿಡುತ್ತಾರೆ. ಹೀಗೆ ಈ ಶ್ರೀಮಂತನ ಹರೆಯದ ಮಗನ ವಿದೇಶಿ ಕಾರು ರಸ್ತೆ  ಅಪಘಾತಕ್ಕೀಡಾಗಿ ಯಾರೋ ನತದೃಷ್ಟ ಕಾರಿನ ಚಕ್ರದ ಅಡಿಗೆ ಬಂದು  ಸತ್ತೇ ಹೋದ. ಮುಂದೇನಾಯ್ತು   ?   

ಆ ಹದಿವಯಸ್ಸಿನ ಮಗ ಏನೂ ಆಗದಂತೆ  ಕಾಲೇಜು, ಪಾರ್ಟಿ, ಗೆಳೆಯರು ಅಂತ ಆರಾಮವಾಗಿದ್ದ.  ಮುಂದೆ ಟೆಕ್ಶಾಸಿನ ದೊಡ್ದ ವಿಶ್ವವಿದ್ಯಾಲಯಕ್ಕೂ ಓದಲು ಹೋದ. ಆದರೆ ಅವರ ಪ್ರಾಮಾಣಿಕ , ವಫಾದಾರ್  ಡ್ರೈವರ್  ಅವರ ಅನ್ನದ ಋಣ ತೀರಿಸಲು ಆ ಅಪಘಾತದ ಹೊಣೆಹೊತ್ತು ಜೈಲಿನಲ್ಲಿದ್ದು ಬಂದ.  ಕೇಸ್ ಮುಚ್ಚಿಹೋಯಿತು.  ಡ್ರೈವರಿನ ಮನೆಯ ಖರ್ಚು ವೆಚ್ಚ,  ಅವನ ನಾಲ್ಕು ಮಕ್ಕಳ ವಿದ್ಯಾಭ್ಯಾಸ , ಹೆಣ್ಣುಮಕ್ಕಳ ಮದುವೆ ಎಲ್ಲವೂ  ಸಾಹೇಬರ ಕೃಪೆಯಿಂದಲೆ ಸಂಪನ್ನವಾಯ್ತು.   ಹೀಗೇ ಬದುಕೂ ಸುಖವಾಗಿ ನಡೆಯತೊಡಗಿತು. ಈಗ ಡ್ರೈವರ್ ಸುಸ್ಥಿತಿಯಲ್ಲಿದ್ದಾನೆ. 

ಇದು Jolly LLB ಯಂಥ ಯಾವ ಸಿನೆಮಾ ಕಥೆಯಲ್ಲ. ನಿಜ ಜೀವನದಲ್ಲಿ ನಾ ಕಂಡ  ಸತ್ಯಕಥೆ.  ಹೀಗೇ  ನೆನಪಾಯ್ತು.     

ಇವತ್ತು (ಸೆ.19) ದೆಹಲಿ ಮತ್ತು ಎನ್ ಸಿ ಆರ್ ಪ್ರದೇಶದಲ್ಲೆಲ್ಲ  ಯುನೈಟೆಡ್ ಫ್ರಂಟ್ ಆಫ್ ಟ್ರಾನ್ಸ್ ಪೋರ್ಟ್ ಅಸೋಸಿಯೇಶನ್ (UFTA) ನೇತೃತ್ವದಲ್ಲಿ ವಾಹನ ಚಾಲಕರ ಹರತಾಳದಿಂದಾಗಿ ಬೀದಿಗಳಲ್ಲಿ ಆಟೋಗಳು ಕಾಣದೇ ಜನ ಜಾತ್ರೆಯೋ ಜಾತ್ರೆ.   ಅಂತೂ ನಿತ್ಯದ  ಸರಕಾರಿ ಬಸ್ಸು ಬಂದು ಹೇಗೋ ಆಫೀಸಿಗೆ ತಲುಪಿದ್ದಾಯ್ತು. 

ಇಲ್ಲಿ ನೊಯಿಡಾ, ಗಾಜಿಯಾಬಾದ್, ದಾದ್ರಿಗಳಲ್ಲಿ ಚಲಿಸುವ ಶೇರಿಂಗ್ ಆಟೋಗಳೇ ಬಹುತೇಕ ಪ್ರಯಾಣಿಕರ ಆಸರೆ.  ಟೆಂಪೋ / ಆಟೋ ಎನ್ನುವ ಈ ವಾಹನದಲ್ಲಿ ಚಾಲಕ ಕಟ್ಟುನಿಟ್ಟಾಗಿ  ಎಂಟು ಹತ್ತು ಜನರನ್ನು ತುರುಕಿ  ಕೂರಿಸಿಕೊಂಡು ನಮಗೆ ಬೇಕಾದ ಗಮ್ಯಕ್ಕೆ ಒಯ್ಯುತ್ತಾನೆ. ಐದು ಹತ್ತು ರುಪಾಯಿ ಬಾಡಿಗೆಯಲ್ಲಿ ಸೂರಜ್ಪುರ್ ದಾರ್ದಿವರೆಗಿನ ಕೂಲಿ ಕಾರ್ಮಿಕರು. ಕಚೇರಿ ಕೆಲಸಗಾರರು ಎಲ್ಲ ವರ್ಗದ ಜನರೂ ಇರುತ್ತಾರೆ.  ಹತ್ತಿ ಇಳಿಯುವ ನಿಲ್ದಾಣಗಳಲ್ಲಿ ಇಳಿಯುವವರನ್ನು ಇಳಿಸುತ್ತ ಹತ್ತುವವರನ್ನು ಹತ್ತಿಸಿಕೊಳ್ಳುತ್ತ  ದುಡಿಮೆದಾರರ ಸ್ನೇಹಜೀವಿಯಾಗಿರುವ ಈ ದೊಡ್ದ ಟೆಂಪೋ ಕಮ್ ಆಟೋಗಳಿಗೆ  ಪರ್ಮಿಟ್ ಗಾಜಿಯಾಬಾದಿನದಾದರೆ ಅವರು ನೋಯಿಡಾದಲ್ಲೋ, ದಾದ್ರಿಯಲ್ಲೋ ನಡೆಸುತ್ತಿರುತ್ತಾರೆ.   ಲೈಸೆನ್ಸ್ ಇಲ್ಲ ಅದಿಲ್ಲ ಇದಿಲ್ಲ ನಂಬರ್ ಪ್ಲೆಟ್ ಸರಿಯಿಲ್ಲ ಇತ್ಯಾದಿ ಅಡೆತಡೆಗಳೇ ಹೆಚ್ಚು.ಟ್ರ್ಯಾಫಿಕ್ ಪೋಲಿಸರಿಗೆ ಲಂಚ ಕೊಟ್ಟು ಏನೋ  ಜುಗಾಡು ಮಾಡಿಕೊಂಡಿರುತ್ತಾರೆ. ಇನ್ನು ಖಾಸಗಿ ಬಸ್ಸುಗಳ ಬಗ್ಗೆ ಬರೆಯದಿರುವುದೇ ಕ್ಷೇಮ. ಯಾಕೆಂದರೆ ಅವೆಲ್ಲದರ ಮಾಲಿಕತ್ವ ಪ್ರತಿಷ್ಠಿತರಲ್ಲಿದ್ದು ಪೋಲಿಸರು ಅವರ ಕೈಗೂಸುಗಳಾಗಿರುವುದೇ ಹೆಚ್ಚು !   

ಈಗ ಮೋಟಾರು ವಾಹನ  ಕಾಯಿದೆ ಜಾರಿಗೆ ಬಂದು ಇದುವರೆಗೂ ವಾಹನಗಳನ್ನು ಅನಧಿಕೃತವಾಗಿ ಯಾವ ಕಾಗದಗಳೂ ಇರದೇ ನಡೆಸುತ್ತಿದ್ದ ಚಾಲಕರಿಂದ  ತಿಂಗಳ ಭತ್ಯೆ ಲಂಚ ತಿನ್ನುತ್ತಾ ಸುಮ್ಮನಿರುತ್ತಿದ್ದ ಟ್ರಾಫಿಕ್ ಪೋಲಿಸರುಗಳು ಕೈಯಲ್ಲಿ ಬೆತ್ತ ಹಿಡಿದು ಬಡಿದು ನಿಲ್ಲಸತೊಡಗಿದರೆ ಏನಾಗಬಾರದು ?   

ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ರಸ್ತೆ ಅಪಘಾತಗಳ ಪ್ರಮಾಣವನ್ನು ತಗ್ಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ರೂಪಿಸಿದ ‘ಮೋಟಾರು ವಾಹನ (ತಿದ್ದುಪಡಿ) ಕಾಯ್ದೆ– 2019’ ಇದೀಗ ಜಾರಿಗೆ ಬಂದಂದಿನಿಂದಲೂ ಸುದ್ದಿ ಸಮಾಚಾರಗಳಲ್ಲಿ  ದಂಡ ತೆರುವವರ ಗೋಳನ್ನು ನೋಡುತ್ತಲೇ ಇದ್ದೇವೆ. ಹೆಚ್ಚಾಗಿ  ಸಾರಿಗೆ ನಿಯಮಗಳನ್ನು ಪಾಲಿಸದವರು. ಮತ್ತು ಆ ನಿಯಮಗಳ ಬಗ್ಗೆ ಮಾಹಿತಿ ಇಲ್ಲದ  ಅನಕ್ಷರಸ್ಥ ಚಾಲಕರ ಗುಂಪೇ ಹೆಚ್ಚಿದೆ ಉತ್ತರಪ್ರದೇಶದ ಭಾಗದಲ್ಲಿ. 

UFTA ಅಧ್ಯಕ್ಷ ಡಾ.ಹರೀಶ್ ಸಭರವಾಲ್ ಅವರ ಪ್ರಕಾರ  2004 ರಿಂದ 2019ರ ವರೆಗೆ ಸುಮಾರು ಒಂದೂವರೆ ದಶಕದಲ್ಲಿ ಪಾರ್ಕಿಂಗ್ ಶುಲ್ಕ ರೂಪದಲ್ಲಿ ಟ್ರಾನ್ಸಪೋರ್ಟರುಗಳು ಸರಕಾರಕ್ಕೆ 12000 ಕೋಟಿಗೂ ಹೆಚ್ಚು ಆದಾಯವನ್ನು ನೀಡಿದ್ದಾರೆ  ಬದಲಿಗೆ ಸರಕಾರ ಪಾರ್ಕಿಂಗ್ ಸೌಲಭ್ಯವನ್ನು ಒದಗಿಸಿಲ್ಲ. ಟ್ರಾನ್ಸಪೋರ್ಟರ್ ದಂಡವನ್ನು ಪಾವತಿಸಬಹುದು ಆದರೆ ಸರಕಾರವು ಮೊದಲು ಸಂಚಾರ ವ್ಯವಸ್ಥೆಯ ರಚನೆಯನ್ನು ಸರಿಪಡಿಸಬೇಕು , ಮೋಟಾರು ವಾಹನ ಕಾಯ್ದೆಯಲ್ಲಿ ಹೆಚ್ಚಿದ ದಂಡದ ಪ್ರಮಾಣವನ್ನು ಕಡಿಮೆ ಮಾಡಬೇಕು ಮತ್ತು ಮೂರನೇ ವ್ಯಕ್ತಿಯ ವಿಮೆಯ ಮೊತ್ತವನ್ನು ತೆಗೆದುಹಾಕಬೇಕು ಎನ್ನುವ ಬೇಡಿಕೆಯನ್ನಿಟ್ಟಿದ್ದಾರೆ.

ವಿದೇಶದಲ್ಲಿ ಇರುವಂತೆ ಸರಕಾರವು ದಂಡವನ್ನು ಹೆಚ್ಚಿಸಿದರೆ ಸಮಸ್ಯೆ ಪರಿಹಾರವಾಗುವುದಿಲ್ಲ.ವಿದೇಶಗಳಲ್ಲಿ ಇರುವಂತೆ ಸಾರಿಗೆದಾರರಿಗೆ ಸೌಲಭ್ಯವನ್ನೂ ಒದಗಿಸಬೇಕು ಎನ್ನುತ್ತಾರೆ.  ನಾವೆಲ್ಲ ಗಮನಿಸುವಂತೆ  ಟ್ರಾಫಿಕ್ ನಿಯಮಗಳನ್ನು ಪಾಲಿಸುವವರೆಷ್ಟು ಜನರಿದ್ದಾರೆ ?  ಹೀಗೆ ಹತ್ತು ಹಲವು ಕಾರಣಗಳಿಂದ  ಸಾರಿಗೆದಾರರಲ್ಲಿ ಸರ್ಕಾರದ ವಿರುದ್ಧ ಕೋಪವಿದೆ. ಮೊದಲು ಅಮೆರಿಕದಂತಹ ಸೌಲಭ್ಯಗಳನ್ನು ನೀಡಿ, ನಂತರ ಅಲ್ಲಿನಷ್ಟು ದಂಡವನ್ನು ಪಾವತಿಸಿ ಎಂದು ಅವರು ಹೇಳುತ್ತಾರೆ. ದಂಡದ ಹೊರತಾಗಿ, ಪೊಲೀಸರ  ಕೆಟ್ಟ ವರ್ತನೆಯಿಂದಲೂ  ಚಾಲಕರಲ್ಲಿ ಅಸಮಾಧಾನವಿದೆ.

ಸೆಪ್ಟೆಂಬರ್ 1 ರಿಂದ ತಿದ್ದುಪಡಿ ಮಾಡಲಾದ ಮೋಟಾರು ವಾಹನ ಕಾಯ್ದೆ ಜಾರಿಗೆ ಬಂದಾಗಿನಿಂದ, ದೆಹಲಿ-ಎನ್‌ಸಿಆರ್ ಸೇರಿದಂತೆ ದೇಶಾದ್ಯಂತ ಇಂತಹ ಭಾರೀ ಚಲಾನುಗಳನ್ನು ಹೇರಲಾಯಿತು. ಬಹುಶಃ ಇದನ್ನು ಯಾರೂ ನಿರೀಕ್ಷಿಸಿರಲಿಲ್ಲ. ಒಬ್ಬ ಟ್ರಕ್ ಸವಾರನಿಗೆ ಒಂದೂವರೆ ಲಕ್ಷ  ಚಲಾನ್ ಹಾಕಿದ್ದು,  15-20 ಸಾವಿರ ರೂ.ಗಳ ಸ್ಕೂಟಿಯವನಿಗೆ ಇಪ್ಪತ್ತುಸಾವಿರದಷ್ಟು ಚಲಾನ್ ಹಾಕಿದ್ದ ಸುದ್ದಿಗಳನ್ನು ಕೇಳಿಯೇ ಭಯವಾಗಿತ್ತು. ಇಷ್ಟು ಬಿಗಿಯಾದ ಕಾನೂನನ್ನು ಯಾವ ಪೂರ್ವ ತಯಾರಿ ಇಲ್ಲದೇ ಜಾರಿಗೊಳಿಸುವ ಮೊದಲು ಸಣ್ಣ ಎಚ್ಚರಿಕೆಯ ಗಂಟೆಯಾಗಿ ಸಣ್ಣ ಪ್ರಮಾಣದ ದಂಡವನ್ನು ಜಾರಿಗೊಳಿಸಿ ನಂತರ ಬಿಗಿಯಾದ ಕಾಯ್ದೆಯನ್ನು ಜಾರಿಗೊಳಿಸಬಹುದಿತ್ತು.   ಎಲ್ಲಕ್ಕಿಂತ ಮುಖ್ಯವಾಗಿ ಸಾರಿಗೆ ನಿಯಮಗಳನ್ನು ಎಲ್ಲರೂ ಪಾಲಿಸುವಂತೆ ತಿಳುವಳಿಕೆ ಮೂಡಿಸುವ ಕಾರ್ಯಾಗಾರಗಳ ಸ್ವರೂಪದಲ್ಲಿ ದಂಡ ವಿಧಿಸುವಂತಾದರೆ ಎಷ್ಟೋ ಪ್ರಯೋಜನವಾಗಬಹುದು.   ದಂಡದ ಪ್ರಮಾಣವನ್ನು ಹಲವು ಪಟ್ಟು ಹೆಚ್ಚಿಸಿದ ಸರ್ಕಾರದ ನಡೆಗೆ ಹಲವು ರಾಜ್ಯಗಳಿಂದ ಹಲವು ವಲಯಗಳಿಂದ ತೀವ್ರ ವಿರೋಧ ಕೂಡ ವ್ಯಕ್ತವಾಗಿದೆ. ಕೆಲ ರಾಜ್ಯಗಳು ದಂಡದ ಪ್ರಮಾಣವನ್ನು ಕಡಿಮೆಗೊಳಿಸಿದ ಸುದ್ದಿಗಳೂ ಇವೆ.  

ಇತ್ತೀಚಿನ ವರ್ಷಗಳಲ್ಲಿ ದೇಶದೊಳಗೆ ವಾಹನಗಳ ಬಳಕೆ ವಿಪರೀತವಾಗಿ ಹೆಚ್ಚಿದೆ.  ದೇಶದಲ್ಲಿ ಪ್ರತಿವರ್ಷ ಸರಾಸರಿ ಐದು ಲಕ್ಷ ಅಪಘಾತಗಳು ಸಂಭವಿಸು¬ತ್ತಿವೆ. 1.5ಲಕ್ಷಕ್ಕೂ ಮೀರಿ ಜನರು ಜೀವ ಕಳೆದುಕೊಳ್ಳುತ್ತಿದ್ದಾರೆ ಎನ್ನುತ್ತದೆ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ (ಎನ್‌ಸಿಆರ್‌ಬಿ) ವರದಿ. ಇದುವರೆಗೂ ಜಾರಿಯಲ್ಲಿದ್ದ 1988ರ ಮೋಟಾರು ವಾಹನ ಕಾಯ್ದೆಯಲ್ಲಿ ಕಾಯ್ದೆಯನ್ನು ಉಲ್ಲಂಘಿಸಿದವರಿಗೆ ತೀರಾ ಕಡಿಮೆ ಪ್ರಮಾಣದ ದಂಡ ಹಾಗೂ ಶಿಕ್ಷೆ ಇತ್ತು. ಸಂಚಾರ ವ್ಯವಸ್ಥೆಯಲ್ಲಿ ಶಿಸ್ತು ತರಲು ಈ ಕಾಯ್ದೆ ಅಷ್ಟೊಂದು ಪರಿಣಾಮಕಾರಿ ಆಗಿರಲಿಲ್ಲ ಎನ್ನುವುದು ಕೆಲವರ ವಾದ.

ವಾಹನಗಳನ್ನು ಮಿತಿಮೀರಿದ ವೇಗದಲ್ಲಿ ಹಾಗೂ ಬೇಕಾಬಿಟ್ಟಿ ಓಡಿಸು-ವುದು, ಹೆಲ್ಮೆಟ್ ಧರಿಸದೆ ವಾಹನ ಓಡಿಸುವುದು, ದ್ವಿಚಕ್ರ ವಾಹನದ ಮೇಲೆ 3–4 ಮಂದಿ ಸವಾರಿ ಮಾಡುವುದು, ಹದಿನೈದು ವರ್ಷದೊಳಗಿನ ಪಡ್ಡೆಗಳೂ ಆಟೋ ಓಡಿಸುವುದು, ಬೈಕ್ ಓಡಿಸುವುದು ಇಲ್ಲಿನ ನಿತ್ಯ ಕಾಣಸಿಗುವ ದೃಶ್ಯಗಳು.  ಹಿಂದೆ ಬರುವ ವಾಹನಗಳ ಮೇಲೆ ನಿಗಾ ಇಡಲು ತಮ್ಮ ವಾಹನದಲ್ಲಿ ಹಿಂಗನ್ನಡಿ ಇರಬೇಕು ಎನ್ನುವ ಸಣ್ಣ ಅರಿವೂ ಇರದ ಜನರಿದ್ದಾರೆ. ಸಿಗ್ನಲ್ ಕೊಡದೇ ರೊಂಯ್ಯನೇ  ಬೇಕೆಂದಾಗ, ಬೇಕೆಂದಲ್ಲಿ ವಾಹನವನ್ನು ತಿರುಗಿಸಿ ಮತ್ತೊಂದು ವಾಹನಕ್ಕೆ ಗುದ್ದಿ ಸುಖ್ಕಾಸುಮ್ಮನೇ ರೇಗಾಡುವ, ಜಗಳಾಡುವ ತಲೆಹಿಡುಕರಿದ್ದಾರೆ. ಮುಂದಿರುವ ವಾಹನದಿಂದ ಸುರಕ್ಷಿತ ಅಂತರದಲ್ಲಿ ತಮ್ಮ ವಾಹನವನ್ನು ನಿಲ್ಲಿಸಬೇಕು ಅಂತಲೂ ಖಬರಿರುವುದಿಲ್ಲ. 

ಇಲ್ಲಿನ ಬಹುತೇಕರು ನಿಯಮ ಉಲ್ಲಂಘಿಸಿ ಒಂದುವೇಳೆ ಸಿಕ್ಕಿಬಿದ್ದರೆ, ತಕ್ಷಣ ತಮ್ಮ ಪರಿಚಯದ ಹಿರಿಯ ಪೋಲೀಸ್ ಅಧಿಕಾರಿಯಿಂದ ಹಿಡಿದು ಎಮ್ ಎಲ್ ಎಗಳ ಧಮಕಿಯನ್ನೂ ಕೊಡುತ್ತಾರೆ.  ಇಲ್ಲ ಪೋಲಿಸರ ಕೈಗಿಷ್ಟು ಇಟ್ಟು ಪಾರಾಗುವ ಜುಗಾಡು ಜಾಡ್ಯ ದೇಶದ ದಶದಿಕ್ಕಿನಲ್ಲೂ ಹಬ್ಬಿಹರಡಿದೆ ಎನ್ನಬಹುದು. 

ದಕ್ಷಿಣಭಾರತಕ್ಕಿಂತ ಉತ್ತರಭಾರತದಲ್ಲಿ ದಲ್ಲಾಳರು, ಭ್ರಷ್ಟ ಅಧಿಕಾರಿಗಳ ಸಂಖ್ಯೆ ಹೆಚ್ಚಿದೆ.  ಮೊದಲು ಡ್ರೈವಿಂಗ್ ಲೈಸೆನ್ಸ್ ಪಡೆಯಲು  ಸಣ್ಣ ಪರೀಕ್ಷೆಯಿರುತ್ತಿತ್ತು. ಅದರಲ್ಲಿ  ಪಾಸಾಗಬೇಕಿತ್ತು.   ಈಗ ಅದೆಲ್ಲ ಬೇಕಿಲ್ಲ. ಎಲ್ಲ ಸಮಸ್ಯೆಗೂ ಒಂದು ಜುಗಾಡಿದೆ. ಆರ್ ಟಿಒ ಕಚೇರಿಯಲ್ಲಿ ಡ್ರೈವಿಂಗ್ ಶಾಲೆಗಳನ್ನು ನಡೆಸುವವರೇ ದಲ್ಲಾಳಿಗಳ  ಮೂಲಕ ಲೈಸನ್ಸ್ ನ್ನು ಮಾಡಿಸಿಕೊಡುತ್ತಾರೆ,.  ದುಡ್ಡುಕೊಟ್ಟರೆ ಆಯಿತು. ಬಹುತೇಕ ಡ್ರೈವರುಗಳಿಗೆ ಟ್ರಾಫಿಕ್ ನಿಯಮಗಳೇ ಗೊತ್ತಿರುವುದಿಲ್ಲ.ಅವರು ನಡೆಸಿದ್ದೇ ಕಾಯಿದೆ.  ರಸ್ತೆಯಲ್ಲಿ ನಡೆಯುವ ನಾವೇ ನಾಕೂ ದಿಕ್ಕಿನಲ್ಲಿ ಕಣ್ಣು ಹಾಯಿಸಿ ಸುರಕ್ಷಿತವಾಗಿ ನಡೆದಾಡುವ ಕಾಲವಿದು.   

ಹೀಗೇ ಒಂದಿನ ನಾನು ವಾಹನಗಳು ಬರುತ್ತಿದ್ದ  ನನ್ನ ಬಲಭಾಗದ  ದಿಕ್ಕಿನಲ್ಲೇ ನೋಡುತ್ತ , ಕೆಂಪುದೀಪವನ್ನು ಗಮನಿಸಿಯೇ ರಸ್ತೆ ದಾಟಲು ಹೆಜ್ಜೆಯಿಟ್ಟೆ. ನನ್ನ ಎಡಭಾಗದಿಂದ ನುಗ್ಗಿದ ಸೈಕಲ್ಲು ಹೊಡೆದು ನನ್ನನ್ನು ಬೀಳಿಸಿಯೇ ಬಿಟ್ಟಿತು. ಸದ್ಯ ರಸ್ತೆಯ ಕೊನೆಯಲ್ಲಿದ್ದೆ. ಮಧ್ಯಭಾಗದಲ್ಲಿರಲಿಲ್ಲ. ಚಿಮ್ಮಿ ಹೋಗಿದ್ದ  ಕೈಯ್ಯಲ್ಲಿನ ಮೊಬೈಲು, ಚೀಲ ಎತ್ತಿಕೊಳ್ಳುವಷ್ಟರಲ್ಲಿ ನಾಕಾರು ಆಟೋ, ಸೈಕಲ್ಲುಗಳು ಈ ಅದ್ಭುತವಾದ ಘಟನೆಯನ್ನು  ನೋಡಲಿಕ್ಕೆ ನಿಂತಿದ್ದರು. ರಾಂಗ್ ಸೈಡಲ್ಲಿ ಬಂದ ಸೈಕಲ್ಲಿನವನ್ನನ್ನು  ಚೆನ್ನಾಗಿ  ಬೈದು, ನೋಡುತ್ತ ನಿಂತವರಿಗೂ ಒಂದಿಷ್ಟು ಬೈದು ರಸ್ತೆ ದಾಟಿದೆ.  ಹೀಗೆ  ರಸ್ತೆ ನಿಯಮಗಳು ಕೂಡ ಗೊತ್ತಿರದ , ಗೊತ್ತಿದ್ದರೂ ಪಾಲಿಸದ  ಅಜ್ಞಾನಿಗಳಿಗೆ ಹೆಚ್ಚಿನ ದಂಡ ತೆರುವುದರಿಂದಾದರೂ  ಬುದ್ಧಿ ಕಲಿಸಬಹುದು ಅನಿಸುತ್ತದೆ. ಆದರೆ ಹೆಚ್ಚಿನ ದಂಡವನ್ನು ವಿರೋಧಿಸಿ ನಡೆಯುತ್ತಿರುವ ಮುಷ್ಕರಗಳಿಗೂ ತನ್ನದೇ ಆದ ತರ್ಕಗಳಿವೆ, ಸಮಸ್ಯೆಗಳಿವೆ. ಸರಕಾರ ಮತ್ತೊಮ್ಮೆ ಮರುಪರಿಶೀಲಿಸುವ ಅಗತ್ಯವೂ ಇದೆ. 

ಯಾರಿಗ್ಗೊತ್ತು ಹೆಚ್ಚಿನ ಪ್ರಮಾಣದ ದಂಡಕ್ಕೂ ಒಂದು ಜುಗಾಡು ಕಂಡು ಹಿಡಿಯುತ್ತಾರೋ ಏನೋ…