ಕೇಂದ್ರ ಸರ್ಕಾರಕ್ಕೆ ಹಿಂದಿಯ ನಶೆ

ವಾಸ್ತವವಾಗಿ ನಮ್ಮ ಇತಿಹಾಸವನ್ನು ನೋಡಿದಾಗ ನಮ್ಮ ದೇಶದ ವಿವಿಧ ಭಾಗಗಳಲ್ಲಿ ಸುಮಾರು 325 ಭಾಷೆಗಳನ್ನಾಡುವ ಜನರಿದ್ದಾರೆ. ಹಾಗೆಯೇ ಅವರು ವಾಸಿಸುವ ಪ್ರಾಂತ್ಯ ಹಲವು ವೈವಿಧ್ಯತೆಯಿಂದ ಕೂಡಿದೆ. ಅವರ ಸಂಸ್ಕ್ರತಿಯೂ ಬೇರೆ ಬೇರೆ ಆಗಿರುತ್ತದೆ

ಕೇಂದ್ರ ಸರ್ಕಾರಕ್ಕೆ ಹಿಂದಿಯ ನಶೆ

ಒಂದು ದೇಶ, ಒಂದೇ ಭಾಷೆ, ಒಂದೇ ಧರ್ಮ, ಒಂದೇ ಸಂಸ್ಕೃತಿ. ಹೀಗೆ ಹೊಸದೊಂದು ರಾಗ ದೇಶದಲ್ಲಿ ಶುರುವಾಗಿದೆ. ಭಾರತ ಬಹು ಭಾಷೆ, ಹಲವು ಧರ್ಮ, ಸಾವಿರಾರು ಜಾತಿ, ಹತ್ತಾರು ಬಗೆಯ ಸಂಸ್ಕೃತಿಯಿಂದ ಕೂಡಿದ ದೇಶ. ಬಹು ಸಂಸ್ಕೃತಿ ನಮ್ಮ ದೇಶದ ವೈಶಿಷ್ಟ್ಯತೆ. ಈ ವೈವಿಧ್ಯತೆಯಲ್ಲಿಯೆ ನಾವು ಏಕತೆ ಕಾಣುತ್ತಾ ಬಂದಿದ್ದೇವೆ. ಹಾಗಾಗಿ ನಾವೆಲ್ಲ ಭಾರತೀಯರು ಎನ್ನುವ ತಿಳುವಳಿಕೆ ಮತ್ತು ಬದ್ಧತೆ ನಮ್ಮನ್ನು ಮತ್ತು ನಮ್ಮ ದೇಶವನ್ನು ಒಟ್ಟಾಗಿ ಕಾಪಾಡಿಕೊಂಡು ಬಂದಿದೆ. ಒಬ್ಬರ ಭಾಷೆ, ಮತ್ತೊಬ್ಬರ ಧರ್ಮ ಮತ್ತು ಸಂಸ್ಕೃತಿಯನ್ನು ಮತ್ತೊಬ್ಬರ ಮೇಲೆ ಹೇರಲು ಹೊರಟರೆ ದೇಶದ ಭವಿಷ್ಯ ಏನಾಗುವುದೋ ಊಹಿಸಲೂ ಅಸಾಧ್ಯ. ಅದಕ್ಕಾಗಿ ಈ ಬಹುಸಂಸ್ಕೃತಿಯ ವೈವಿಧ್ಯತೆಗೆ ಧಕ್ಕೆ ತರದಂತೆ ದೇಶವನ್ನು ನಾವು ಕಾಪಾಡಿಕೊಳ್ಳಬೇಕಾಗಿರುವುದು ತುರ್ತು ಅಗತ್ಯ. ಆಗ ದೇಶವೂ ಉಳಿದೀತು ನಾವೂ ಉಳಿದೇವು.

ಯಾವುದೇ ಒಂದು ರಾಜ್ಯದ ಮೇಲೆ ತನ್ನದಲ್ಲದ ಭಾಷೆ, ಧರ್ಮ ಮತ್ತು ಸಂಸ್ಕೃತಿಯನ್ನು ಬಲವಂತವಾಗಿ ಹೇರಲು ಹೊರಟರೆ ಪ್ರತಿಭಟನೆ, ಅಶಾಂತಿ ಕಟ್ಟಿಟ್ಟ ಬುತ್ತಿ ಎನ್ನುವುದಕ್ಕೆ ಇತ್ತೀಚೆಗೆ ಬೆಂಗಳೂರಿನ ‘ನಮ್ಮ ಮೆಟ್ರೊ’ ನಿಲ್ದಾಣಗಳ ಫಲಕಗಳಲ್ಲಿ ಹಿಂದಿಯನ್ನು ಬಳಸಿದರ ವಿರುದ್ಧ ಎದ್ದ ಕನ್ನಡ ಸಂಘಟನೆಗಳ ಪ್ರತಿಭಟನೆ. ಇದಲ್ಲದೆ ಡಾ. ಕಸ್ತೂರಿ ರಂಗನ್ ನೇತೃತ್ವದ ರಾಷ್ಟ್ರೀಯ ಶಿಕ್ಷಣ ನೀತಿಯ ಕರಡುವಿನಲ್ಲಿ ಮಾತೃಭಾಷೆಯಲ್ಲದೆ ಹಿಂದಿ ಭಾಷೆ ಕಲಿಕೆಯನ್ನು ಕಡ್ಡಾಯ ಮಾಡಿದ್ದು. ಆದರೆ ದಕ್ಷಿಣ ರಾಜ್ಯಗಳಾದ ಮುಖ್ಯವಾಗಿ ತಮಿಳುನಾಡಿನ ದ್ರಾವಿಡ ಮುನ್ನೇತ್ರ ಕಳಗಂ ಪಕ್ಷ ಹಿಂದಿ ಕಡ್ಡಾಯದ ವಿರುದ್ಧ ದನಿ ಎತ್ತಿತು. ಇದೇ ದನಿಯನ್ನು ಎತ್ತಿದ್ದು ಮರಾಠ ಭಾಷೆಯನ್ನಾಡುವ ಮಹಾರಾಷ್ಟ್ರ. ನಂತರ ಕರ್ನಾಟಕದಲ್ಲೂ ಹಿಂದಿ ಹೇರಿಕೆಗೆ ವಿರೋಧ ವ್ಯಕ್ತವಾಯಿತು. ದಕ್ಷಿಣ ರಾಜ್ಯಗಳ ಹಿಂದಿ ವಿರೋಧಿ ಭಾವನೆಯನ್ನು ಅರ್ಥ ಮಾಡಿಕೊಂಡ ಕೇಂದ್ರ ಸರ್ಕಾರ ಕರಡು ಕೇವಲ ಸಾರ್ವಜನಿಕರ ಅಭಿಪ್ರಾಯಕ್ಕಾಗಿ ಪ್ರಕಟಿಸಲಾಯಿತು. ಆದರೆ ಹಿಂದಿಯೇತರ ರಾಜ್ಯಗಳ ಮೇಲೆ ಹಿಂದಿ ಕಡ್ಡಾಯವಿಲ್ಲ ಎಂಬ ಸ್ಪಷ್ಟನೆಯನ್ನು ಮಾನವ ಸಂಪನ್ಮೂಲ ಸಚಿವಾಲಯದ ಪ್ರಕಟಣೆ ಹೊರಡಿಸಿತು.

ಇಷ್ಟಾದರೂ “ಹಿಂದಿ, ಹಿಂದೂಸ್ತಾನ, ಹಿಂದೂ ಧರ್ಮ” ಎನ್ನುವ ಗುಂಗಿನಲ್ಲೇ ಭಾರತೀಯ ಜನತಾ ಪಕ್ಷ, ಅದರ ಸರ್ಕಾರ ಮತ್ತು ಸಂಘ ಪರಿವಾರ ತೇಲಾಡುತ್ತಾ ಬರುತ್ತಿದೆ. ಇಡೀ ದೇಶವನ್ನೇ ಒಂದು ಭಾಷೆ, ಒಂದೇ ಸಂಸ್ಕೃತಿಯಲ್ಲಿ ಕಟ್ಟಿಹಾಕಲು ಹೊರಟಿದೆ. ಭಾಷೆ, ಧರ್ಮ ಮತ್ತು ಜಾತಿ ತುಂಬಾ ಸೂಕ್ಷ್ಮವಾದ ವಿಚಾರಗಳು. ದೇಶಕ್ಕೆ ಸ್ವಾತಂತ್ರ್ಯ ಬರುವ ಮುನ್ನ ನಮ್ಮನ್ನಾಳಿದ ಬ್ರಿಟೀಷರು ಸಹಾ ಈ ಸೂಕ್ಷ್ಮವನ್ನು ಅರ್ಥಮಾಡಿಕೊಂಡಿದ್ದರು.

ಹಾಗಾಗಿ ಅವರು ಯಾವುದೇ ಭಾಷೆ ಮತ್ತು ಧರ್ಮವನ್ನು ಯಾರ ಮೇಲೂ ಹೇರಲು ಅಥವಾ ಅದನ್ನು ಕಡೆಗಣಿಸಲು ಹೋಗಲಿಲ್ಲ. ಹಾಗೆಯೇ ಸ್ವಾತಂತ್ರ್ಯ ಬಂದ ಬಳಿಕ ಆಡಳಿತ ನಡೆಸಲು ನಮ್ಮ ಸಂವಿಧಾನ ರಚನೆಗೆ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಅಧ್ಯಕ್ಷತೆಯಲ್ಲಿ ರಚಿಸಿದ ಸಮಿತಿಯೂ ದೇಶದ ಬಹು ಭಾಷೆ, ಬಹು ಧರ್ಮ ಮತ್ತು ಬಹುಸಂಸ್ಕೃತಿಯನ್ನು ಗೌರವಿಸಲು ದಿನಗಟ್ಟಲೆ ಚರ್ಚಿಸಿ ಸೂಕ್ತ ಕಾಯ್ದೆಗಳನ್ನು ರಚಿಸಿತು. ನಮ್ಮ ವೈವಿಧ್ಯತೆಯನ್ನು ಕಾಪಾಡಲು ಸಂವಿಧಾನ ನಮಗೆ ಹತ್ತಾರು ಮಾರ್ಗಗಳನ್ನು ಹುಡುಕಿಕೊಟ್ಟಿದೆ. ಆದರೂ ಕೆಲವು ಶಕ್ತಿಗಳು ರಾಜಮಾರ್ಗವನ್ನು ಬಿಟ್ಟು ಅಡ್ಡದಾರಿ ಹಿಡಿದು ಜನರ ದಾರಿ ತಪ್ಪಿಸುವ ಪ್ರಯತ್ನ ನಿರಂತರವಾಗಿ ನಡೆಸುತ್ತಾ ಬಂದಿದೆ. ಅಂತಹ ಒಂದು ಪ್ರಯತ್ನವನ್ನು ಈಗ ಕೇಂದ್ರದ ಗೃಹ ಸಚಿವ ಅಮಿತ್ ಷಾ ಮಾಡಲು ಹೊರಟಂತಿದೆ. ದೇಶದ ಇತಿಹಾಸ ಮತ್ತು ಸಂಸ್ಕೃತಿಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದವರಿಂದ ಪದೇ ಪದೇ ಆಗುವ ದುರಂತವಿದು.

ವಾಸ್ತವವಾಗಿ ನಮ್ಮ ಇತಿಹಾಸವನ್ನು ನೋಡಿದಾಗ ನಮ್ಮ ದೇಶದ ವಿವಿಧ ಭಾಗಗಳಲ್ಲಿ ಸುಮಾರು 325 ಭಾಷೆಗಳನ್ನಾಡುವ ಜನರಿದ್ದಾರೆ. ಹಾಗೆಯೇ ಅವರು ವಾಸಿಸುವ ಪ್ರಾಂತ್ಯ ಹಲವು ವೈವಿಧ್ಯತೆಯಿಂದ ಕೂಡಿದೆ. ಅವರ ಸಂಸ್ಕೃತಿಯೂ ಬೇರೆ ಬೇರೆ ಆಗಿರುತ್ತದೆ. ಈ 325 ಭಾಷೆಗಳ ಪೈಕಿ ಶೇ 40ರಷ್ಟು ಮಂದಿ ಹಿಂದಿ ಭಾಷೆಯನ್ನಾಡುತ್ತಾರೆ. ಹಿಂದಿ ಮಾತನಾಡುವ ಜನರ ಪ್ರದೇಶವು ದೇಶದ ಅರ್ಧ ಭಾಗದಷ್ಟಿದೆ. ಉಳಿದಂತೆ ಬೇರೆ ಬೇರೆ ಪ್ರಾಂತ್ಯ ಮತ್ತು ರಾಜ್ಯಗಳಲ್ಲಿ ಬೇರೆ ಬೇರೆ ಭಾಷೆಗಳನ್ನಾಡುವವರಿದ್ದಾರೆ. ಈ ಎಲ್ಲ ಭಾಷೆಗಳು ಸ್ಥಳೀಯವಾಗಿ ಅವರವರ ಮಾತೃ ಭಾಷೆಯಾಗಿರುತ್ತದೆ.

ಈ ಬಹು ಭಾಷೆ ಇರುವ ಜನರಿಗೆ ಯಾವ ಭಾಷೆಯಲ್ಲಿ ಆಡಳಿತ ನೀಡುವುದು ಎನ್ನುವ ಪ್ರಶ್ನೆ ಸಂವಿಧಾನ ರಚನಾ ಸಭೆಯಲ್ಲಿ ವ್ಯಾಪಕ ಚರ್ಚೆ ನಡೆದಿದೆ. ಬ್ರಿಟೀಷರು ನಮ್ಮನ್ನಾಳಿದ ಪರಿಣಾಮವಾಗಿ ನಮಗೆ ಇಂಗ್ಲಿಷ್ ಎನ್ನುವುದು ಒಂದು ವರವಾಗಿ ಸಿಕ್ಕಿತು. ಇದು ಒಂದು ರೀತಿಯಲ್ಲಿ ಸಂರ್ಪಕ ಭಾಷೆಯಾಗಿ ದೇಶದ ಉದ್ದಗಲಕ್ಕೂ ಬೆಳೆಯಿತು. ಹಿಂದಿ ಕೇವಲ ಉತ್ತರ ಭಾರತದ ರಾಜ್ಯಗಳಲ್ಲಿ ಮಾತೃ ಭಾಷೆಯಾಗಿತ್ತು. ಉಳಿದ ಭಾಗಗಳಲ್ಲಿ ಸಂಪರ್ಕ ಭಾಷೆ ಎಂದರೆ ಇಂಗ್ಲಿಷ್ ಮಾತ್ರ. ಸಂವಿಧಾನದ 343ನೇ ವಿಧಿ ಮತ್ತು ಆಡಳಿತ ಭಾಷಗಳ ಕಾಯ್ದೆ ಪ್ರಕಾರ ಹಿಂದಿಯನ್ನು ಕೇಂದ್ರ ಸರ್ಕಾರ ಆಡಳಿತ ಭಾಷೆಯನ್ನಾಗಿ ಘೋಷಿಸಿತು. ಆಗಿನ ಈ ನಿರ್ಧಾರಕ್ಕೆ ತಮಿಳುನಾಡು ಮತ್ತು ಇತರೆ ಹಿಂದಿಯೇತರ ರಾಜ್ಯಗಳಿಂದ ತೀವ್ರ ವಿರೋಧ ವ್ಯಕ್ತವಾಯಿತು. ಆಗ ಕೇಂದ್ರ ಸರ್ಕಾರವು 15 ವರ್ಷಗಳವರೆಗೆ ಕೇಂದ್ರ ಸರ್ಕಾರ, ಸಂಸತ್ ಕಲಾಪದಲ್ಲಿ ಮತ್ತು  ಹೈಕೋರ್ಟುಗಳಲ್ಲಿ ಆಡಳಿತ ಭಾಷೆಯನ್ನಾಗಿ ಇಂಗ್ಲೀಷನ್ನು ಜಾರಿಗೆ ತಂದಿತು. ಈ ಅವಧಿ ಮುಗಿದ ಬಳಿಕ 1965ರಲ್ಲಿ ಹಿಂದಿ ಭಾಷೆಯನ್ನೇ ಆಡಳಿತ ಭಾಷೆಯನ್ನಾಗಿ ಮಾಡಲು ಕೇಂದ್ರ ಸರ್ಕಾರ ತೀರ್ಮಾನಿಸಿದಾಗ ತಮಿಳುನಾಡಿನಲ್ಲಿ ಹಿಂದಿ ವಿರೋಧಿ ಭಾಷಾ ಚಳುವಳಿ ಭುಗಿಲೆದ್ದಿತು. ಈ ವಿರೋಧವನ್ನು ತಡೆಯಲು 1967ರಲ್ಲಿ ಆಡಳಿತ ಭಾಷಾ ಕಾಯ್ದೆಗೆ ತಿದ್ದುಪಡಿ ತಂದು ಹಿಂದಿಯ ಜೊತೆಗೆ ಇಂಗ್ಲೀಷನ್ನೂ ಕೇಂದ್ರ ಸರ್ಕಾರದ ಆಡಳಿತ ಭಾಷೆಯನ್ನಾಗಿ ಘೋಷಿಸಿತು. ಆಡಳಿತದಲ್ಲಿ ದ್ವಿಭಾಷಾ ನೀತಿ ಜಾರಿಗೆ ಬಂದದ್ದರಿಂದ ಹಿಂದಿ ವಿರೋಧಿ ಚಳವಳಿಯ ಕಾವು ತಗ್ಗಿತು. ಹಿಂದಿಯೇತರ ರಾಜ್ಯಗಳು ತಮ್ಮ ನೆಲದ ಭಾಷೆ ಇಲ್ಲವೇ ಇಂಗ್ಲೀಷನ್ನು ಆಡಳಿತ ಭಾಷೆಗಳನ್ನಾಗಿ ಮಾಡಿಕೊಳ್ಳಲು ಈ ಕಾಯ್ದೆ ಅನುವು ಮಾಡಿಕೊಟ್ಟಿತು.

ಸಂವಿಧಾನದಲ್ಲಿ ಹಿಂದಿ ಸೇರಿದಂತೆ 22 ಭಾಷೆಗಳಿಗೆ ಆಡಳಿತ ಭಾಷೆಯ ಸ್ಥಾನಮಾನ ನೀಡಲಾಗಿದೆ. ಅವುಗಳೆಂದರೆ ಅಸ್ಸಾಮಿ (ಅಸ್ಸಾಂ) ಬೆಂಗಾಲಿ (ಪಶ್ಚಿಮ ಬಂಗಾಳ), ಬೋಡೊ (ಅಸ್ಸಾಂ), ಡೋಗ್ರಿ (ಜಮ್ಮು ಮತ್ತು ಕಾಶ್ಮೀರ), ಗುಜರಾತಿ (ದಾದ್ರ, ನಗರ ಹವೇಲಿ, ದಾಮನ್, ಡಿಯೂ ಮತ್ತು ಗುಜರಾತ್), ಹಿಂದಿ (ದೆಹಲಿ, ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ,ಬಿಹಾರ) ಕನ್ನಡ (ಕರ್ನಾಟಕ) ಕಾಶ್ಮೀರಿ (ಜಮ್ಮು ಮತ್ತು ಕಾಶ್ಮೀರ) ,ಕೊಂಕಣಿ (ಗೋವಾ), ಮೈಥಿಲಿ (ಬಿಹಾರ), ಮಲಯಾಳಂ (ಕೇರಳ ಮತ್ತು ಲಕ್ಷದ್ವೀಪ), ಮಣಿಪುರಿ (ಮಣಿಪುರ), ಮರಾಠಿ (ಮಹಾರಾಷ್ಟ್ರ ಮತ್ತು ಗೋವಾ), ನೇಪಾಳಿ (ಸಿಕ್ಕಿಂ), ಒರಿಯಾ (ಒಡಿಸ್ಸಾ), ಪಂಜಾಬಿ (ಪಂಜಾಬ್, ಚಂಡೀಗಢ, ಎರಡನೇ ಆಡಳಿತ ಭಾಷೆಯಾಗಿ ದೆಹಲಿ ಮತ್ತು ಹರಿಯಾಣ), ಸಂಸ್ಕೃತ ( ಹಿಂದೂ, ಜೈನ ಮತ್ತು ಭೌದ್ಧ ಧರ್ಮಗಳ ಬೋಧನೆ), ಸಂಥಾಲಿ (ಬಿಹಾರ, ಜಾರ್ ಖಾಂಡ, ಒಡಿಸ್ಸಾ, ಚತ್ತೀಸ್ಗಢ ಮತ್ತು ಚೋಟಾ ನಾಗ್ಪುರ), ಸಿಂಧಿ (ಸಿಂಧಿ ಜನರಾಡುವ ಭಾಷೆ), ತಮಿಳು (ತಮಿಳುನಾಡು ಮತ್ತು ಪುದುಚೇರಿ), ತೆಲುಗು (ಆಂಧ್ರ ಪ್ರದೇಶ ಮತ್ತು ತೆಲಂಗಾಣ ), ಉರ್ದು (ಜಮ್ಮು ಮತ್ತು ಕಾಶ್ಮೀರ, ಆಂಧ್ರ ಪ್ರದೇಶ, ಉತ್ತರ ಪ್ರದೇಶ, ದೆಹಲಿ),

ಈ ಭಾಷೆಗಳನ್ನು ಸಂವಿಧಾನದ ಎಂಟನೇ ಪರಿಚ್ಚೇದದಲ್ಲಿ ಅಳವಡಿಸುವ ಮೂಲಕ ಇವುಗಳಿಗೆ ವಿಶೇಷ ರಕ್ಷಣೆ ನೀಡಲಾಗಿದೆ. ಇನ್ನೂ ಹಲವು ಭಾಷೆಗಳನ್ನು ಸೇರಿಸಬೇಕೆನ್ನುವ ಬೇಡಿಕೆ ಕೇಂದ್ರ ಸರ್ಕಾರದ ಮುಂದಿದೆ. ಆಡಳಿತದ ದೃಷ್ಟಿಯಿಂದ ದ್ವಿಭಾಷಾ ಸೂತ್ರವನ್ನು ಅಳವಡಿಸಿಕೊಳ್ಳಲಾಗಿದೆ. ಆದರೆ ಶಿಕ್ಷಣದಲ್ಲಿ ತ್ರಿಭಾಷಾ ಸೂತ್ರವನ್ನು 1956ರಲ್ಲಿ ಅಖಿಲ ಭಾರತ ಶಿಕ್ಷಣ ಮಂಡಳಿ ಮಾಡಿದ ಶಿಫಾರಸ್ಸನ್ನು ರಾಷ್ಟ್ರೀಯ ಶಿಕ್ಷಣ ನೀತಿಯನ್ನಾಗಿ ಮುಖ್ಯಮಂತ್ರಿಗಳ ಸಭೆ ಒಪ್ಪಿಕೊಂಡಿತು. ಈ ನೀತಿ 1968, 1992 ಮತ್ತು 2000 ಇಸವಿಯವರೆಗೆ ಸಣ್ಣಪುಟ್ಟ ಮಾರ್ಪಾಡಾಗುತ್ತಾ ಬಂದಿದೆ. ಈ ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಕಾರ ಹಿಂದಿ ಭಾಷಿಕ ರಾಜ್ಯಗಳು ದಕ್ಷಿಣದ ಒಂದು ಭಾಷೆಯನ್ನು ಹಾಗೆಯೇ ದಕ್ಷಿಣ ಹಾಗು ಈಶಾನ್ಯ ರಾಜ್ಯಗಳು ಹಿಂದಿ ಭಾಷೆಯನ್ನು ತಮ್ಮ ಪ್ರಾಂತೀಯ ಭಾಷೆ ಹಾಗು ಇಂಗ್ಲೀಷ್ ಜೊತೆಗೆ ಬೋಧನೆ ಮಾಡಬೇಕು.

ಇತ್ತೀಚೆಗೆ ಬಾಹ್ಯಾಕಾಶ ವಿಜ್ಞಾನಿ ಪ್ರೊ ಕೆ. ಕಸ್ತೂರಿರಂಗನ್ ನೇತೃತ್ವದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ-2019 ರೂಪಿಸಲಾಗಿದೆ. ಒಂಬತ್ತು ಸದಸ್ಯರ ಸಮಿತಿಯು ಕೇಂದ್ರ ಸರ್ಕಾರಕ್ಕೆ ತನ್ನ ವರದಿಯನ್ನು ಸಲ್ಲಿಸಿದೆ. ಈ ವರದಿಯಲ್ಲಿ ಹಿಂದಿ ಭಾಷೆಗೆ ಅಗ್ರಸ್ಥಾನ ನೀಡಲಾಗಿದೆ. ಪ್ರಾಥಮಿಕ ಶಾಲಾ ಹಂತದಲ್ಲಿ ಇಡೀ ದೇಶದಾದ್ಯಂತ ಹಿಂದಿ ಭಾಷೆಯ ಕಲಿಕೆಯನ್ನು ಕಡ್ಡಾಯಗೊಳಿಸುವ ಪ್ರಸ್ತಾವನೆ ಮಾಡಲಾಗಿತ್ತಾದರೂ, ತಮಿಳುನಾಡಿನ ಡಿಎಂಕೆ ಈ ನೀತಿಗೆ ತನ್ನ ಪ್ರಬಲ ವಿರೋಧ ವ್ಯಕ್ತಪಡಿಸಿದ್ದರಿಂದ ಹಿಂದಿ ಕಲಿಕೆಯನ್ನು ಕಡ್ಡಾಯವಾಗಿ ಹೇರುವ ಪ್ರಸ್ತಾವ ವರದಿಯಲ್ಲಿ ಇಲ್ಲ ಎಂದು ಸರ್ಕಾರ ಹೇಳಿಕೊಂಡಿದೆ. ಹಾಗಾಗಿ ಸದ್ಯಕ್ಕೆ ಈ ವಿವಾದ ತಣ್ಣಗಾಗಿದೆ. 

ಹಿಂದಿಯನ್ನು ಶಾಲೆಗಳಲ್ಲಿ ಬೋಧಿಸುವುದಕ್ಕೆ ತಮಿಳುನಾಡು 1965ರಿಂದ ತನ್ನ ಪ್ರತಿರೋಧವನ್ನು ವ್ಯಕ್ತ ಮಾಡುತ್ತಲೇ ಬರುತ್ತಿದೆ. ಆಡಳಿತ ಮತ್ತು ಇತರೆ ವ್ಯವಹಾರದಲ್ಲೂ ಹಿಂದಿ ಬಳಕೆಗೆ ತಮಿಳುನಾಡು ಸರ್ಕಾರ ಮತ್ತು ಜನರು ನಿರಂತರವಾಗಿ ವಿರೋಧ ಮಾಡುತ್ತಲೇ ಬರುತ್ತಿದ್ದಾರೆ. ಹಿಂದಿ ಆರ್ಯರ ಭಾಷೆ ಎನ್ನುವ ಆರೋಪ. ಆರ್ಯ ಸಂಸ್ಕೃತಿಯನ್ನು ನಮ್ಮ ದ್ರಾವಿಡರ ಮೇಲೆ ಹೇರಲಾಗುತ್ತಿದೆ ಎನ್ನುವ ಭಾವನೆಯೂ ತಮಿಳರಲ್ಲಿ ಆಳವಾಗಿ ಬೇರೂರಿರುವ ಕಾರಣ ಹಿಂದಿಯನ್ನು ತಮಿಳುನಾಡಿನ ಒಳಗೆ ಈಗಲೂ ಬಿಟ್ಟುಕೊಳ್ಳುತ್ತಿಲ್ಲ. ಇದು ತಮಿಳು ಜನರ  ಅಸ್ಮಿತೆ ಮತ್ತು ಶಕ್ತಿ.

ತಮ್ಮ ರಾಜ್ಯದ ಹೈಕೋರ್ಟಿನಲ್ಲಿ ತಮಿಳು ಭಾಷೆಯನ್ನೇ ಬಳಸಬೇಕು. ತಮಿಳಿನಲ್ಲೇ ತೀರ್ಪು ನೀಡಬೇಕೆಂದು ತಮಿಳುನಾಡು ವಿಧಾನಸಭೆಯು 2006ರಲ್ಲಿ ಕಾಯ್ದೆ ಮಾಡಿತು. ಇದೇ ಮಾರ್ಗವನ್ನು ಪಶ್ಚಿಮ ಬಂಗಾಳವೂ ಅನುಸರಿಸಿತು. ಆದರೆ ಸುಪ್ರೀಂ ಕೋರ್ಟ್ ಈ ಕಾಯ್ದೆಯನ್ನು ತಳ್ಳಿಹಾಕಿತು. ಹಿಂದಿ ಮಾತನಾಡುವ ದೆಹಲಿ, ಬಿಹಾರ, ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ರಾಜಸ್ತಾನ ಹೈಕೋರ್ಟ್ ಗಳಲ್ಲಿ ಹಿಂದಿ ಬಳಕೆ ಇರುವುದರಿಂದ 1963ರ ಆಡಳಿತ ಭಾಷೆಯ ಕಾಯ್ದೆಯ ವಿಧಿ 348ರ ಸೆಕ್ಷನ್ 7ರ ಪ್ರಕಾರ ತಮಗೂ ಈ ಅವಕಾಶ ಇರಬೇಕೆನ್ನುವುದು ತಮಿಳುನಾಡು ಮತ್ತು ಪಶ್ಚಿಮ ಬಂಗಾಳದ ಉದ್ದೇಶವಾಗಿತ್ತು. ಆದರೆ ನ್ಯಾಯಾಧೀಶರ ಅಂತರ್ ರಾಜ್ಯ ವರ್ಗಾವಣೆ ಹಾಗು ಇತರೆ ಆಡಳಿತಾತ್ಮಕ ಅಡಚಣೆಯಿಂದ ಸುಪ್ರೀಂ ಕೋರ್ಟ್ ಈ ಎರಡು ರಾಜ್ಯಗಳ ವಾದವನ್ನು ತಳ್ಳಿಹಾಕಿತು.

ಹಿಂದಿ ಭಾಷೆಯ ಬಳಕೆಗೆ ಮೊದಲಿನಿಂದಲೂ ತೀವ್ರವಾಗಿ ವಿರೋಧ ಒಡ್ಡುತ್ತಲೇ ಬಂದಿರುವ ತಮಿಳುನಾಡು, ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರದಲ್ಲಿ ಭಾಗಿಯಾಗಿದ್ದಾಗ ಡಿಎಂಕೆ ಸಚಿವ ಎಂ.ಕೆ ಅಳಗಿರಿ ಹಿಂದಿ ಬದಲಿಗೆ ತಮಿಳಿನಲ್ಲೇ ಮಾತನಾಡುವುದಾಗಿ ಹಠ ಹಿಡಿದರು. ಆದರೆ ಸಭಾಧ್ಯಕ್ಷರು ಅದನ್ನು ಒಪ್ಪಲಿಲ್ಲ. ದುಭಾಷಿಕರ ನೆರವನ್ನು ಸದಸ್ಯರು ಮಾತ್ರ ಬಳಸಿಕೊಳ್ಳಬಹುದು. ಈ ಅವಕಾಶ ಸಚಿವರಿಗೆ ನೀಡಲಾಗದು. ಹಿಂದಿ ಬಳಕೆ ಮಾಡದಿದ್ದರೆ ಇಂಗ್ಲೀಷನ್ನು ಧಾರಾಳವಾಗಿ ಬಳಸಬಹುದೆಂದು ಸಭಾಧ್ಯಕ್ಷರು ತೀರ್ಪು ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಆದರೂ ಕೇಂದ್ರ ಸರ್ಕಾರ ಹಿಂದಿಯೇತರ ರಾಜ್ಯಗಳ ಮೇಲೆ ಹಿಂದಿ ಭಾಷೆಯ ಅಸ್ತ್ರವನ್ನು ಹತ್ತಾರು ದಾರಿಯ ಮೂಲಕ ಬಳಸುತ್ತಾ ಬಂದಿದೆ. ಇದು ಒಕ್ಕೂಟ ವ್ಯವಸ್ಥೆಯ ನಮ್ಮ ಜನತಂತ್ರ ನೀತಿಗೆ ವಿರೋಧ ಎನ್ನುವುದು ಪ್ರಜಾಪ್ರಭುತ್ವದ ಜ್ಞಾನ ಇರುವ ಎಲ್ಲರಿಗೂ ತಿಳಿದದ್ದೆ. ಕೇಂದ್ರ ಸರ್ಕಾರ ಹಿಂದಿ ಭಾಷೆಯ ಬಳಕೆ ಮತ್ತು ಅಭಿವ್ರುದ್ಧಿಗೆ ಮಾಡುತ್ತಿರುವ ಭಾರೀ ಮೊತ್ತದ ಹಣವನ್ನು ನೋಡಿದಾಗ ಉಳಿದ ಭಾರತೀಯ ಭಾಷೆಗಳಿಗೆ ಏಕೆ ಮಾಡುತ್ತಿಲ್ಲ? ಸಹಜವಾಗಿಯೆ ಈ ಧೋರಣೆಗೆ ಹಿಂದಿಯೇತರ ರಾಜ್ಯ ಸರ್ಕಾರಗಳ ಪ್ರತಿಭಟನೆ ಆಗಿಂದ್ದಾಗ್ಗೆ ಹಲವು ರೀತಿಯಲ್ಲಿ ವ್ಯಕ್ತವಾಗುತ್ತಲೇ ಇದೆ.

ಇಷ್ಟಾದರೂ ಕೇಂದ್ರ ಸರ್ಕಾರ ದೇಶದ ತನ್ನ ಎಲ್ಲ ಕಚೇರಿಗಳಲ್ಲಿ “ಹಿಂದಿ ಸಪ್ತಾಹ ಮತ್ತು ಹಿಂದಿ ದಿವಸ್” ಆಚರಿಸಿಕೊಂಡು ಬರುತ್ತಿದೆ. ಈ ಮೂಲಕ ಹಿಂದಿ ಭಾಷೆಯ ಬೆಳವಣಿಗೆಗೆ ವಿಶೇಷ ಒತ್ತು ನೀಡುತ್ತಲೇ ಬಂದಿದೆ. ಜನರು ಹೆಚ್ಚು ಹೆಚ್ಚು ಭಾಷೆಗಳನ್ನು ಕಲಿತಷ್ಟು ಅವರಿಗೇ ಒಳ್ಳೆಯದು ಎನ್ನುವುದರಲ್ಲಿ ಎರಡು ಮಾತಿಲ್ಲ. ಹಿಂದಿ ಕಲಿತರೆ ದೇಶದ ಎಲ್ಲ ಭಾಗಗಳಲ್ಲಿಯೂ ಸುಲಭವಾಗಿ ವ್ಯವಹರಿಸಬಹುದೆನ್ನುವುದೂ ಸತ್ಯ. ಆದರೆ ಈ ಭಾಷೆ ಗೊತ್ತಿರದ ಜನರ ಮೇಲೆ ಹೇರಬಾರದೆನ್ನುವುದು ಅಷ್ಟೇ ಸತ್ಯ. ಹಿಂದಿಯನ್ನು ಹಿಂದಿಯೇತರ ಭಾಷೆಗಳ ಮೇಲೆ ಹೇರಿಕೆ ಮಾಡಿದರೆ ಅಲ್ಲಿನ ಸ್ಥಳೀಯ ಭಾಷೆಗಳು ಮತ್ತು ಸಂಸ್ಕೃತಿ ಕ್ರಮೇಣ ನಾಶವಾಗುತ್ತವೆ. ಈ ಅಪಾಯದ ಬಗೆಗೆ ಕೇಂದ್ರ ಸರ್ಕಾರ ತನ್ನ ಜಾಣ ಮೌನವನ್ನು ಮುಂದುವರಿಸಿಕೊಂಡೇ ಬಂದಿದೆ. 

ಆದರೆ ಒಂದಂತು ಸತ್ಯ ನಮ್ಮ ದೇಶದ ಆಡಳಿತ ಭಾಷೆಗಳಾಗಿ ಹಿಂದಿ ಮತ್ತು ಇಂಗ್ಲೀಷ್ ಬಳಕೆಯಲ್ಲಿದೆ. ಆದರೆ ಹಿಂದಿ ರಾಷ್ಟ್ರಭಾಷೆ ಎನ್ನುವುದು ಎಲ್ಲಿಯೂ ನಮೂದಾಗಿಲ್ಲ. ಹಾಗಾಗಿ ದೇಶದ ಎಲ್ಲ ಭಾಷೆಗಳನ್ನು ಗೌರವಿಸುವುದನ್ನು ಜನತಂತ್ರ ವ್ಯವಸ್ಥೆಯಲ್ಲಿ ರಾಜಧರ್ಮವನ್ನಾಗಿ ಪಾಲಿಸುವುದು ಅವಶ್ಯ. ಇಲ್ಲವಾದರೆ ಬಹು ಭಾಷೆ ಮತ್ತು ಬಹುಸಂಸ್ಕೃತಿಯ ರಾಷ್ಟ್ರದ ಕಲ್ಪನೆಗೆ ಧಕ್ಕೆಯಾಗುವುದು ನಿಶ್ಚಿತ.