ಸಾರ್ವಜನಿಕ ಬದುಕಿನಲ್ಲಿರುವ ವ್ಯಕ್ತಿಗಳಿಗೂ ಖಾಸಗೀ ಬದುಕಿದೆ : ಅದನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ

ಸಾರ್ವಜನಿಕ ಬದುಕಿನಲ್ಲಿರುವ ವ್ಯಕ್ತಿಗಳಿಗೂ ಖಾಸಗೀ ಬದುಕಿದೆ : ಅದನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ

ಯಾರದೇ ಖಾಸಗಿ ಬದುಕು ಇನ್ನೊಬ್ಬರಿಗೆ ಆಹಾರವಾಗಬಾರದು. ಅದರೊಳಗೆ ಪ್ರವೇಶಿಸುವ ಹಕ್ಕು ಯಾರಿಗೂ ಇಲ್ಲ. ಸಾರ್ವಜನಿಕ ಬದುಕಿನಲ್ಲಿರುವ ವ್ಯಕ್ತಿಗಳ ಖಾಸಗಿ ಬದುಕನ್ನು ಮಾಧ್ಯಮಗಳು ಪ್ರಸಾರ ಮಾಡುವ ರೀತಿಗೆ ಸ್ನೇಹಾ ನೀಲಪ್ಪಗೌಡ ಆಕ್ಷೇಪ ವ್ಯಕ್ತಪಡಿಸಿದ್ದಾರೆ. 


ಪ್ರತಿಯೊಬ್ಬ ವ್ಯಕ್ತಿಗೂ ಅವ್ರದ್ದೇ ಆದ ಖಾಸಗಿ ಬದುಕಿದೆ. ಸಾರ್ವಜನಿಕ  ಬದುಕಿನಲ್ಲಿರೋ ಸೆಲೆಬ್ರಿಟಿಗಳಿಗೂ ಕೂಡ. ಹೀಗಿರುವಾಗ ಪದೇ ಪದೇ ಬೇರೊಬ್ಬರ ವೈಯಕ್ತಿಕ ಜೀವನದ ಕಡೆ ಬೆರಳು ಮಾಡೋದು ಎಷ್ಟು ಸರಿ ಅನ್ನೋ ಪ್ರಶ್ನೆ ಎದುರಾಗತ್ತೆ. ತಮ್ಮ ಬೇಳೆ ಬೇಯಿಸಿಕೊಳ್ಳೋ ಸಲುವಾಗಿ ಬೇರೊಬ್ಬರ ಬಗ್ಗೆ ಮಾಡೋ ಅಪಪ್ರಚಾರದಿಂದ ಅವರಿಗೆಷ್ಟು ನೋವಾಗತ್ತೆ, ಸಮಾಜ ಅವ್ರನ್ನು ಯಾವ ರೀತಿ ನೋಡತ್ತೆ, ಕುಟುಂಬ ಹಾಗೂ ಆಪ್ತ ವರ್ಗದವ್ರಿಂದ ಅವರು ಹೇಗೆಲ್ಲಾ ನಿರ್ಲಕ್ಷ್ಯಕ್ಕೊಳಗಾಗ್ತಾರೆ, ಅವರ ಸ್ಥಾನಮಾನಗಳಿಗಾಗೋ ಧಕ್ಕೆ ಎಂಥದ್ದು ಅನ್ನೋ ಕಿಂಚಿತ್ತು ಮಾನವೀಯತೆಯಾದ್ರೂ ಇರಬೇಕಲ್ವಾ..? ಖಂಡಿತ.. ನಾನಿಂದು ವೈಯಕ್ತಿಕ ಕಾರಣಗಳಿಗೆ ಸಮಾಜದಲ್ಲಿ ಅವಕಾಶ ವಂಚಿತರಾದವ್ರು ಹಾಗೆಯೇ ಮಾನಸಿಕ ವೇದನೆ ಅನುಭವಿಸಿದವ್ರ ಬಗ್ಗೆ ನಿಮಗೆ ಹೇಳ ಹೊರಟಿದ್ದೀನಿ.


ಮೀಟೂ ಆರೋಪ ಮಾಡಿದ್ದೇ ಘೋರ ಅಪರಾಧ..!


ಇತ್ತೀಚೆಗಷ್ಟೇ ಮೀಟೂ ಅಭಿಯಾನ ರಾಷ್ಟ್ರವ್ಯಾಪಿ ಸದ್ದು ಮಾಡಿತ್ತು. ಎಲ್ಲಾ ಮಹಿಳೆಯರು ತಮಗಾದ ನೋವುಗಳನ್ನು ಈ ವೇದಿಕೆ ಮೂಲಕ ತೋಡಿಕೊಂಡ್ರು. ಒಂದಿಷ್ಟು ಮಂದಿ ಸುಳ್ಳು ಆರೋಪ ಮಾಡಿದ್ದಾರೆ ಅನ್ನೋ ದೂರುಗಳಿದ್ರು ಕೂಡ ಕೆಲವರಾದ್ರೂ ಸತ್ಯವನ್ನು ಬಿಚ್ಚಿಟ್ಟಿರ್ತಾರೆ ಅನ್ನೋದಂತು ಸತ್ಯ. ಅವ್ರು ಆರೋಪಿಸಿದ್ದು ಸರಿಯೋ ಅಥವಾ ತಪ್ಪೋ ಅನ್ನೋದನ್ನು ನಾವು ನಿರ್ಧರಿಸೋಕಾಗಲ್ಲ. ಯಾಕಂದ್ರೆ ಪ್ರತಿಯೊಬ್ಬ ಪ್ರಜೆಗೂ ವಾಕ್ ಸ್ವಾತಂತ್ರ್ಯ ಇದೆ. ತಮಗಾದ ನೋವು ಅನ್ಯಾಯಗಳನ್ನು ಹೇಳಿಕೊಳ್ಳೋದು ಅವರವರಿಗೆ ಬಿಟ್ಟಿದ್ದು. ಹೀಗಿದ್ರೂ ಸಹ ಸಂತ್ರಸ್ತರನ್ನು ಅಪರಾಧಿಗಳು ಅನ್ನೋ ಭಾವನೆಯಲ್ಲಿ ನೋಡೋದ್ಯಾಕೆ. ಉದಾಹರಣೆಗೆ ಶೃತಿ ಹರಿಹರನ್, ಅರ್ಜುನ್ ಸರ್ಜಾರ ಮೇಲೆ ಶೃತಿ ಮಾಡಿರೋ ಆರೋಪ ಸತ್ಯವೋ ಸುಳ್ಳೊ ಗೊತ್ತಿಲ್ಲ.ಅವರು ಆರೋಪ ಮಾಡಿದ ರೀತಿ, ಸಂದರ್ಭ,ವಿಷಯ ಎಲ್ಲವೂ ಕಾನೂನಿಗೆ ಸಂಬಂಧಪಟ್ಟ ವಿಚಾರವಾಗಿದ್ದರೂ ಚರ್ಚೆಯನ್ನೂ ಹುಟ್ಟು ಹಾಕಿತು. ಹಾಗೆಂದು ಆರೋಪ ಮಾಡಿದ್ದೇ ತಪ್ಪು ಎನ್ನುವಂತೆ ನಡೆದಿರುವ ಬೆಳವಣಿಗೆಗಳು ಬೇಸರ ಹುಟ್ಟಿಸುತ್ತದೆ. ಈ ಪ್ರಕರಣದ ನಂತರ ಏನಾಯಿತು ಗೊತ್ತೇ?   ಕನ್ನಡ ಸೇರಿದಂತೆ ಬೇರೆ ಬೇರೆ ಭಾಷೆಗಳಲ್ಲಿ ತಮ್ಮ ನಟನೆ, ನೃತ್ಯದ ಮೂಲಕ ಹೆಸರಾಗಿದ್ದ ಶೃತಿ ಹರಿಹರನ್ ಈಗ ಸಿನಿರಂಗದಲ್ಲಿ ಅಷ್ಟಾಗಿ ಕಾಣಿಸಿಕೊಳ್ತಿಲ್ಲ. ಶೃತಿ ಮೀಟೂ ಆರೋಪ ಮಾಡಿದ್ರು ಅನ್ನೋ ಒಂದೇ ಒಂದು ಕಾರಣಕ್ಕೆ ಆಕೆಗೆ ಸಿನಿಮಾಗಳಲ್ಲಿ ಅವಕಾಶ  ನೀಡಲ್ಲ ಅನ್ನೋದು ಎಷ್ಟು ಸರಿ? ಹಾಗಂತ ಅವ್ರಿಗೆ ಸಿನಿಮಾ ಬಿಟ್ಟು ಬೇರೆ ಬದುಕಿಲ್ಲ ಅಂತೇನಿರಲ್ಲ. ಪ್ರತಿಭೆಗೆ ಬೆಲೆ ಕೊಡೋ ಬದಲು ಅವ್ರ ಖಾಸಗಿ ಬದುಕಿನ ಅಂತೆ ಕಂತೆಗಳಿಗೆ ಯಾಕೆ ತಲೆಕೆಡಿಸಿಕೊಳ್ಳಬೇಕು? ಇಂಥ ಪ್ರತಿಷ್ಠೆಗಳಿಂದಲೇ ಕನ್ನಡದಲ್ಲಿ ನಟಿಯರಿಗೆ ಬರ ಅನ್ನೋ ಹಾಗೆ ಪರಭಾಷಾ ನಟಿಯರನ್ನು ಕರೆತರ್ತಿರೋದು.


ಕೌಟುಂಬಿಕ ಜಗಳವೂ ಸೆನ್ಸೇಷನಲ್ ಸುದ್ದಿ..


ಇನ್ನು ನಟ ದುನಿಯಾ ವಿಜಯ್ ವಿಚಾರದಲ್ಲೂ ಇದೇ ಆಗಿದ್ದು. ಕೌಟುಂಬಿಕ ಜಗಳವನ್ನು ಬೀದಿಗೆ ತರೋ ಪ್ರಯತ್ನ ನಡೀತು.  ಗಂಡ-ಹೆಂಡತಿ  ಜಗಳ ಎಲ್ಲಾ ಕುಟುಂಬದಲ್ಲಿ ನಡೆಯೋದು ಸಹಜ. ಆದ್ರೆ ಅದನ್ನೇ ಚರ್ಚಾ ವಿಚಾರವಾಗಿ ಮಾಡಿಕೊಂಡು ಮಾಧ್ಯಮಗಳು ನಟ ದುನಿಯಾ ವಿಜಿಯವ್ರ ಇಡೀ ಕುಟುಂಬಕ್ಕೆ ಮಾನಸಿಕ ವೇದನೆ ನೀಡಿದ್ವು. ಈ ಘಟನೆ ಕೂಡ ದುನಿಯಾ ವಿಜಯ್ ರವರ ವೃತ್ತಿ ಜೀವನಕ್ಕೆ ಹೊಡೆತವುಂಟು ಮಾಡ್ತು. ನಿಜವಾದ ಕಲಾವಿದನಿಗೆ ಅವಕಾಶ ಸಿಕ್ಕರೂ ಸಿಗದಿದ್ರೂ ಆತನ ಪ್ರತಿಭೆ ಎಲ್ಲಿಯೂ ಹೋಗಲ್ಲ. ಈ ಎಲ್ಲಾ ಘಟನೆಗಳಿಂದ ನಟ ದುನಿಯಾ ವಿಜಯ್ ಹೊರಬರೋಕೆ ಬಹಳಷ್ಟು ದಿನಗಳೇ ಬೇಕಾಯ್ತು. ಎಂಥ ಹಿಟ್ ಸಿನಿಮಾಗಳನ್ನು ಕೊಟ್ಟಿದ್ರು ಸಹ ಇಂಥ ಘಟನೆಗಳಿಂದ ನಟರು ಜನರಿಗೆ ಬಿಂಬಿತವಾಗೋ ರೀತಿಯೇ ಬೇರೆ ಇರತ್ತೆ. ಇದ್ರಿಂದ ಸಿನಿಮಾರಂಗದಲ್ಲಿ ಮೊದಲಿನಂತೆ ನೆಲೆಯೂರೋದು ತುಂಬಾ ಕಷ್ಟ ಆಗತ್ತೆ. ಸದ್ಯ ಈ ಎಲ್ಲಾ ವಿಚಾರಗಳಿಂದ ಹೊರಬಂದು ದುನಿಯಾ ವಿಜಿ ಈಗ ಮತ್ತೆ ನಟನೆ ನಿರ್ದೇಶನಕ್ಕಿಳಿದಿದ್ದಾರೆ. ಆದ್ರೆ ನೊಂದವರಲ್ಲಿ ಎಷ್ಟು ಜನ ತಾನೆ ಇದನ್ನು ಸಹಿಸಿಕೊಳ್ತಾರೆ..?


ಅಶ್ಲೀಲ ಕಮೆಂಟ್ಸ್‌ ಗಳಿಂದ ವೈಯಕ್ತಿಕ ತೇಜೋವಧೆ..


ಈ ಜೆನರೇಷನ್ ಅಲ್ಲಿ ಅಭಿಮಾನಿಗಳು ಸೆಲೆಬ್ರಿಟಿಗಳನ್ನು ತಲುಪೋದು ತೀರಾ ಕಷ್ಟದ ವಿಚಾರವೇನಲ್ಲ. ಕಾಲ ಬದಲಾದಂತೆ ಟೆಕ್ನಾಲಜಿಯೂ ಬದಲಾಗಿದೆ. ಸಾಮಾಜಿಕ ಜಾಲತಾಣಗಳು ವ್ಯಾಪಕವಾಗಿ ಈ ದಿನಗಳಲ್ಲಿ ಸದ್ದು ಮಾಡ್ತಿವೆ. ಇನ್ಸ್ ಟ್ರಾಗ್ರಾಂ,  ಫೇಸ್ ಬುಕ್, ಟ್ವಿಟರ್, ಹೆಲೋ , ಶೇರ್ ಚಾಟ್ ಹೀಗೆ ಸಾಕಷ್ಟು ಅಪ್ಲಿಕೇಷನ್ ಗಳ ಮೂಲಕ ಜನಸಾಮಾನ್ಯರು ಸೆಲೆಬ್ರಿಟಿಗಳನ್ನು ತಲುಪಬಹುದು. ಆದ್ರೆ ಅಭಿಮಾನಿಗಳು ಅಭಿಮಾನದ ಹಾದಿಯನ್ನು ಸದುಪಯೋಗ ಪಡೆಸಿಕೊಳ್ಳುವತ್ತ ಸಾಗ್ತಿಲ್ಲ. ಬದಲಾಗಿ ಸೆಲೆಬ್ರಿಗಳ ಡ್ರೆಸ್, ಅವ್ರ ವೈಯಕ್ತಿಕ ಬದುಕಿನ ಬಗ್ಗೆ ಕಮೆಂಟ್ ಮಾಡುವತ್ತ ಗಮನ ಹರಿಸ್ತಿದ್ದಾರೆ. ಯಾವುದಾದರೂ ಸೆಲೆಬ್ರಿಗಳನ್ನು ಫೊಟೋ ಹಾಕೋದನ್ನೇ ಕಾದು ಕುಳಿತು ವ್ಯಂಗ್ಯವಾಗಿ ನಿಂದಿಸೋದನ್ನೇ ಅಸ್ತ್ರವಾಗಿಸಿಕೊಂಡಿದ್ದಾರೆ. ಸಾಮಾನ್ಯ ವಿಚಾರವನ್ನು ಅಸಮಾನ್ಯ ಸುದ್ದಿಯಂತೆ ಎಲ್ಲೆಡೆ ಹರಡೋ ಜಾಣ್ಮೆ ರೂಢಿಸಿಕೊಂಡಿದ್ದಾರೆ. ಸೆಲೆಬ್ರಿಟಿಗಳು ದಪ್ಪಗಿದ್ದಾರೋ ತೆಳ್ಳಗಿದ್ದಾರೋ, ಬೆಳ್ಳಗಿದ್ದಾರೋ ಕಪ್ಪಗಿದ್ದಾರೋ ಅನ್ನೋ ಬಗ್ಗೆ ಅವರುಗಳಿಗೆ ಇಲ್ಲದ ಆತಂಕ ಕೈಲಾಗದ ಹಲವರಿಗಿರತ್ತೆ. ಪ್ರತ್ಯೇಕವಾಗಿ ನಟಿಯರ ಉಡುಪು ಮೈಮಾಟವನ್ನು ಅಸಹ್ಯ ಪದಗಳಿಂದ ಬಣ್ಣಿಸೋದೆ ಸೋಷಿಯಲ್ ಮೀಡಿಯಾ ಚತುರರ ಕಲೆಯಾಗಿದೆ. ಡುಮ್ಮಿ, ಆಂಟಿ, ಎಮ್ಮೆ ಹೀಗೆ ಸಾಕಷ್ಟು ಪದಗಳಂತು ಸರ್ವೇ ಸಾಮಾನ್ಯವಾಗಿದೆ.           
 
ಲವ್ ಬ್ರೇಕಪ್, ಮ್ಯಾರೇಜ್ ಡಿವೋರ್ಸ್ ವಿಚಾರಗಳ ಮೇಲೆ ಎಲ್ಲಿಲ್ಲದ ಒಲವು..

 


ಕಳೆದ ಬಾರಿ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಅವ್ರ ಎಂಗೇಜ್‌ ಮೆಂಟ್ ಮುರಿದು ಬಿತ್ತು. ಅದು ಅವರುಗಳ ಕುಟುಂಬದ ನಿರ್ಧಾರ ಕೂಡ. ಆದ್ರೆ ವಿಚಾರವನ್ನು ಬಿತ್ತರಿಸುವಲ್ಲಿ, ಟ್ರೋಲ್ ಮಾಡುವಲ್ಲಿ ಇದ್ದ ಆಸಕ್ತಿ ಅಷ್ಟಿಷ್ಟಲ್ಲ. ಕೊನೆಗೊಮ್ಮೆ ಅವ್ರೇ ಅತ್ತು ಕರೆದು ಕೇಳಿಕೊಂಡ್ರು ಬಿಡದ ಮಟ್ಟಿಗೆ ರಕ್ಷಿತ್ ರಶ್ಮಿಕಾರನ್ನು ಕಾಡಿಸಿದ್ರು.  ಇದೆಲ್ಲದ್ರಿಂದ ನೊಂದ ರಕ್ಷಿತ್ ಶೆಟ್ಟಿ ಸಾಮಾಜಿಕ ಜಾಲತಾಣಗಳಿಂದ್ಲೇ ದೂರ ಉಳಿದ್ರು.  ಕೆಲ ಕಾಲ ರಶ್ಮಿಕಾ ಯಾವುದೇ ಮಾಧ್ಯಮಗಳ ಮುಂದೆ ಬರಲೇ ಇಲ್ಲ. ಆ ಘಟನೆ ನಡೆದು ಒಂದು ವರ್ಷವಾದ್ರೂ ಟ್ರೋಲ್ ಪೇಜ್‌ ಗಳು ಅದೇ ಅಸ್ತ್ರವನ್ನು ಇಂದಿಗೂ ಬಳಸಿಕೊಳ್ತಿದ್ದಾರೆ. ಇದ್ರಿಂದ ಇಬ್ಬರೂ ಕಲಾವಿದರ ವೃತ್ತಿ ಜೀವನಕ್ಕೆ ಯಾವುದೇ ಹೊಡೆತ ಬೀಳಲಿಲ್ಲವಾದ್ರೂ ಅವರುಗಳು ನೋವಂತೂ ಅನುಭವಿಸಿದ್ರು. ಸಾರ್ವಜನಿಕ ಬದುಕಿನಲ್ಲಿರುವವರಿಗೂ ಖಾಸಗಿ ಬದುಕೆಂಬುದು ಇರುತ್ತದೆ. ಸಾರ್ವಜನಿಕ ಬದುಕಿನಲ್ಲಿ ಅವರಿಂದ ಆಗುವ ಸಹಾಯ, ಕೆಡುಕು ಸುದ್ದಿಯಾಗಬೇಕೇ ಹೊರತು ಅವರ ಖಾಸಗಿ ಬದುಕಲ್ಲ. ಅದರೊಳಗೆ ಪ್ರವೇಶಿಸುವ ಹಕ್ಕು ಯಾರಿಗೂ ಇಲ್ಲ.