ಜಾತಿ ಎಂಬ ‘ಸತ್ಯ’ ಮತ್ತು ಡಿವಿಎಸ್ ಗೌಡ

ಜಾತಿ ಎಂಬ ‘ಸತ್ಯ’ ಮತ್ತು ಡಿವಿಎಸ್ ಗೌಡ

ಪ್ರಿಯ ಓದುಗರೇ,

ಈ ಸದಾನಂದಗೌಡ ಅರ್ಥಾತ್ ಡಿವಿಎಸ್ ಗೌಡ ಹೆಸರಿಗೆ ತಕ್ಕಂತೆ ಸದಾ ಹಸನ್ಮುಖಿಯಾಗಿರುವ ಪ್ಲಾಸ್ಟಿಕ್ ಸರ್ಜರಿ ಮಾಡಿಕೊಂಡಿದ್ದಾರೇನೋ ಎನ್ನುವಂಥ ಮುಖಭಾವ ಇರುವ ಕೇಂದ್ರ ಸಚಿವ ಮೊನ್ನೆ ಮೊನ್ನೆಯಷ್ಟೇ ಬೆಂಗಳೂರು ನಿರ್ಮಾತೃ ಕೆಂಪೇಗೌಡರಿಗೆ ಸಂಬಂಧಿಸಿದ ವಿಚಾರ ಸಂಕಿರಣವೊಂದರಲ್ಲಿ ಆಡಿದ ಮಾತುಗಳು ಬೆಚ್ಚಿ ಬೀಳಿಸುವಂತಿದ್ದವು. 

‘ನಾನು ಕೇವಲ ಸದಾನಂದ ಎಂದು ಮಾತ್ರ ಕರೆಸಿಕೊಂಡಿದ್ದಾಗ ಚುನಾವಣೆಯಲ್ಲಿ ಸೋಲನುಭವಿಸಿದ್ದೆ. ಆದರೆ ಹೆಸರಿನ ಜತೆ ಗೌಡ ಎಂದು ಸೇರಿಸಿಕೊಂಡಿದ್ದರಿಂದಲೇ ಮುಖ್ಯಮಂತ್ರಿಯಾಗುವುದು, ಕೇಂದ್ರ ಸಚಿವನಾಗುವುದು ಸಾಧ್ಯವಾಯಿತು. ಗೌಡ ಎಂದು ಹೇಳಿಕೊಳ್ಳುವುದು ನನಗೆ ನಿಜಕ್ಕೂ ಹೆಮ್ಮೆ’ ಎಂದು ಡಿವಿಎಸ್ ಗೌಡ ಹೇಳಿಕೊಂಡರು. 

ಅವರು ಗೌಡ ಎಂದು ತಮ್ಮ ಹೆಸರಿನ ಜತೆ ಜಾತಿಸೂಚಕ ಸೇರಿಸಿಕೊಂಡಿದ್ದರಿಂದ ಮುಖ್ಯಮಂತ್ರಿಯಾದೆ ಎಂದು ಹೇಳುವುದು ಜಾತ್ಯತೀತ ಕಲ್ಪನೆಗೆ ಬಗೆಯುವ ದ್ರೋಹವಾಗುತ್ತದೆ. ಭಾರತ ಎಂಬ ಒಕ್ಕೂಟ ರಾಷ್ಟ್ರ ಜಾತ್ಯತೀತ ತಳಹದಿಯ ಮೇಲೆ ನಿಂತಿರುವ ರಾಷ್ಟ್ರ. ಈ ದೇಶದಲ್ಲಿ ಜಾತಿ ವ್ಯವಸ್ಥೆ ಇದೆ. ಈ ಜಾತಿ ವ್ಯವಸ್ಥೆ ತೊಲಗಬೇಕೆಂದು ಬಹುಶಃ ಸದಾನಂದಗೌಡರೂ ಯಾವುದಾದರೂ ಒಂದು ಭಾಷಣದಲ್ಲಿ ಹೇಳಿರುತ್ತಾರೆ. ಅಂಬೇಡ್ಕರ್ ಜಯಂತಿ ಯಂದು ಯಾವುದಾದರೂ ಕಾರ್ಯಕ್ರಮದಲ್ಲಿ ಸಂವಿಧಾನದ ಆಶಯಗಳ ಬಗ್ಗೆ ಬೊಗಳೆ ಬಿಟ್ಟಿರುತ್ತಾರೆ.

ಈಗ ತಮ್ಮ ಹೆಸರಿನ ಜತೆ ಗೌಡ ಎಂದು ಸೇರಿಕೊಂಡಿರುವುದರಿಂದಲೇ ತಮಗೆ ಉನ್ನತ ಅಧಿಕಾರಗಳು ದೊರೆತವು ಎಂದು ಹೇಳುತ್ತಿದ್ದಾರೆಂದರೆ ನಿಜಕ್ಕೂ ಅರ್ಹರಾದ ಇತರ ಜಾತಿಯ ರಾಜಕಾರಣಿಗಳಿಗೆ ಅನ್ಯಾಯವಾಗಿದೆ ಎಂದೇ ಅರ್ಥ. ಗೌಡ ಎಂದು ಸೇರ್ಪಡೆಯಾದ ನಂತರ ತಮಗೆ ಇಂಥ ಅವಕಾಶ ಪ್ರಾಪ್ತಿಯಾಯಿತು ಎಂದರೆ ಅವರು ವೈಯಕ್ತಿಕವಾಗಿ ಆ ಸ್ಥಾನಕ್ಕೆ ಯೋಗ್ಯರಲ್ಲ, ಕೇವಲ ಜಾತಿ ಕಾರಣಕ್ಕಾಗಿ ಅವರಿಗೆ ಪಟ್ಟ ಕಟ್ಟಲಾಯಿತು ಎಂದರ್ಥ. ಹೀಗೆ ಹೇಳುವ ಮೂಲಕ ಸಂವಿಧಾನದ ಆಶಯಗಳನ್ನು ಅವರು ನಿರ್ಲಕ್ಷಿಸಿದ್ದಾರೆ.

ಕೇಂದ್ರ ಸರ್ಕಾರದ ಪ್ರತಿನಿಧಿಯಾಗಿ ಅವರು ಇಂಥ ಮಾತುಗಳನ್ನು ಆಡುತ್ತಿದ್ದಾರೆಂದರೆ ಸಂವಿಧಾನವನ್ನೂ ಉಲ್ಲಂಘಿಸಿದ್ದಾರೆ ಎಂದು ಭಾವಿಸಬೇಕಾಗುತ್ತದೆ. ಅವರು ಒಕ್ಕೂಟ ಸರ್ಕಾರವನ್ನು ಪ್ರತಿನಿಧಿಸುತ್ತಿರುವುದು ಕರ್ನಾಟಕದಿಂದಲೇ ಹೊರತು ಒಕ್ಕಲಿಗ ಸಮುದಾಯದಿಂದಲ್ಲ. ಓರ್ವ ಸಾಮಾನ್ಯ ವ್ಯಕ್ತಿ ಹೇಳುವುದಕ್ಕೂ ಸರ್ಕಾರದ ಪ್ರತಿನಿಧಿಯಾಗಿ ಹೇಳುವುದಕ್ಕೂ ವ್ಯತ್ಯಾಸವಿದೆ. ಇದು ಕೂಡ ಒಂದು ರೀತಿಯಲ್ಲಿ ಅಪರಾಧವೇ. ಜನ ಪ್ರತಿನಿಧಿಗಳಾದವರು ಜಾತಿ ಸಂಘಟನೆಗಳ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದನ್ನೂ ನಿಲ್ಲಿಸಬೇಕು. ಇಲ್ಲವಾದರೆ ಅವರು ತಮ್ಮ ಜಾತಿಗಷ್ಟೇ ಬದ್ಧರಾಗಿ ಇತರರನ್ನು ಕಡೆಗಣಿಸುತ್ತಾರೆಂಬ ಇತರ ಸಮುದಾಯಗಳ ಅನುಮಾನವನ್ನು ಹೋಗಲಾಡಿಸುವುದು ಕಷ್ಟವಾಗುತ್ತದೆ. ಹಾಗೆ ಜಾತಿ ಸಂಘಟನೆಗಳ ಸಭೆ, ಸಮಾರಂಭಗಳಲ್ಲಿ ಪಾಲ್ಗೊಳ್ಳುವುದು ರಾಜಕಾರಣಿಗಳಿಗೆ ಶೋಭೆ ತರುವುದಿಲ್ಲ.

ಡಿವಿಎಸ್ ಗೌಡರು ನಿಜಕ್ಕೂ ಮುಖ್ಯಮಂತ್ರಿಯಾಗಿದ್ದು ಯಡಿಯೂರಪ್ಪ ಅವರ ಔದಾರ್ಯದಿಂದಲೇ ಹೊರತುಅವರ ಹೆಸರಿನ ಜತೆ ಗೌಡ ಇತ್ತೆಂಬ ಕಾರಣದಿಂದಲ್ಲ. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾದ ಅನಿವಾರ್ಯ ಸಂದರ್ಭ ಸೃಷ್ಟಿಯಾದಾಗ ತಮ್ಮ ನಂಬಿಕಸ್ಥ ವ್ಯಕ್ತಿ ಎನ್ನುವ ಕಾರಣಕ್ಕೆ ಸದಾನಂದಗೌಡರಿಗೆ ಈ ಜವಾಬ್ದಾರಿಯನ್ನು ಅನುಗ್ರಹಿಸಿದ್ದರು. ಹೀಗಾಗಿ ಸದಾನಂದ ಗೌಡರು ತಮಗೆ ಒದಗಿ ಬಂದ ಅಚ್ಚರಿಯ ಅವಕಾಶಕ್ಕಾಗಿ ಧನ್ಯವಾದ ಹೇಳಬೇಕಿರುವುದು, ಕೃತಜ್ಞರಾಗಿರಬೇಕಿರುವುದು ಯಡಿಯೂರಪ್ಪನವರಿಗೇ ಹೊರತು ‘ಗೌಡ’ ಎಂಬ ಜಾತಿ ಸೂಚಕಕ್ಕಲ್ಲ. ಸರ್ಕಾರದ ಪ್ರತಿನಿಧಿಯಾಗಿ, ಕನ್ನಡ ನೆಲದ ಪ್ರತಿನಿಧಿಯಾಗಿ ಅವರು ಇಂಥ ನಿರ್ಲಜ್ಜ ಹೇಳಿಕೆ ನೀಡುತ್ತಿದ್ದಾರೆ ಎಂದರೆ ರಾಜಕೀಯ ರಂಗದಲ್ಲಿ ಇರುವುದಕ್ಕೂ ಅವರು ಅಯೋಗ್ಯರು. ಯಾವುದೇ ಶ್ರಮ, ಹೋರಾಟ ಇಲ್ಲದೇ ಇಷ್ಟೊಂದು ಸುಲಭವಾಗಿ, ನಿರಾಯಾಸವಾಗಿ ಮುಖ್ಯಮಂತ್ರಿ ಸ್ಥಾನಕ್ಕೆ, ಕೇಂದ್ರ ಸಚಿವ ಸ್ಥಾನಕ್ಕೆ ಬಂದಿರುವ ಇನ್ನೋರ್ವ ರಾಜಕಾರಣಿಯನ್ನು ನನ್ನ ವೃತ್ತಿ ಜೀವನದಲ್ಲಿ ನೋಡಿಲ್ಲ.   ಈ ನಾಡು ನಾನಾ ಜಾತಿ, ಜನಾಂಗ, ಧರ್ಮಗಳನ್ನು ಒಳಗೊಂಡಿದೆ.

ರಾಜಕೀಯ ಪ್ರತಿನಿಧಿ ಒಂದು ಸಮುದಾಯದ ಮುಖವಾಗಿರುವುದಿಲ್ಲ. ಆತ ಕನ್ನಡ ಸಂಸ್ಕೃತಿಯ ಪ್ರತಿನಿಧಿಯಾಗಿರುತ್ತಾನೆ. ಇಲ್ಲಿನ ನೆಲ,ಜಲ, ಭಾಷೆಯನ್ನು ಪ್ರತಿನಿಧಿಸುತ್ತಾನೆ. ಆತ ಎಲ್ಲ ಕನ್ನಡಿಗರ ನೋವು, ನಲಿವುಗಳ ಕನ್ನಡಿಯಂತಿರಬೇಕಾಗುತ್ತದೆ. ಆದರೆ ಡಿವಿಎಸ್ ಗೌಡರ ಮಾತು ಒಡೆದ ಕನ್ನಡಿಯ ದೊಡ್ಡ ಚೂರೊಂದರಂತಿದೆ.  

ಇದೆಲ್ಲ ನೋಡುತ್ತಿದ್ದರೆ ಆತಂಕವಾಗುತ್ತದೆ. ಮನುಷ್ಯ ‘ಸುಶಿಕ್ಷಿತ’ನಾದಷ್ಟೂ ಜಾತ್ಯತೀತನಾಗುವ ಬದಲು ಹೆಚ್ಚು ಜಾತಿವಾದಿಯಾಗಿ ಕಾಣಿಸಿಕೊಳ್ಳುತ್ತಿದ್ದಾನೆ. ಇಂಥ ಬೆಳವಣಿಗೆ ನನಗೆ ಆಗಿಂದಾಗ್ಗೆ ಅಚ್ಚರಿ ಉಂಟುಮಾಡುತ್ತಲೇ ಇರುತ್ತದೆ. ಹಾಗಾದರೆ ಸುಶಿಕ್ಷಿತನಾಗುವುದಕ್ಕೂ ಈ ಪದವಿಗಳಿಗೂ ಯಾವುದೇ ಸಂಬಂಧ ಇಲ್ಲ ಎನ್ನುವುದು ಗೊತ್ತಾಗುತ್ತಲೇ ಇದೆ. ಜಾತಿಸೂಚಕ ಪದಗಳನ್ನು ತಮ್ಮ ವಾಹನಗಳ ಮೇಲೆ ಹಾಕಿಕೊಳ್ಳುವುದೂ ಇತ್ತಿಚಿನ ವರ್ಷಗಳಲ್ಲಿ ಒಂದು ಫ್ಯಾಷನ್ ಆಗಿಬಿಟ್ಟಿದೆ. ಗೌಡಾಸ್, ಕುರುಬಾಸ್, ನಾಯ್ಡೂಸ್, ಯಾದವಾಸ್ ಎಂಬ ನಿರ್ಲಜ್ಜ ಘೋಷಣೆ ವಾಹನಗಳ ಮೇಲೆ ರಾರಾಜಿಸುತ್ತಿರುತ್ತದೆ.  ದ.ರಾ.ಬೇಂದ್ರೆ ತಮ್ಮ ಕವನವೊಂದರಲ್ಲಿ ಹೇಳಿದ್ದಾರೆ ‘ಮತದ ಹೆಮ್ಮೆ, ಬರಡು ಎಮ್ಮೆ’. ನಾನು ಇಂಥ ಜಾತಿ ಎನ್ನುವುದು ಹೆಮ್ಮೆಯ ಸಂಗತಿಯೇ? 

ಜಾತಿ ಎನ್ನುವುದು ಕೇವಲ ಒಂದು ಮನೋಸ್ಥಿತಿ.ಜಾತ್ಯತೀತತೆ ಎನ್ನುವುದು ನಡವಳಿಕೆಗೆ ಸಂಬಂಧಿಸಿದ್ದು. ಅದು ಒಬ್ಬ ವ್ಯಕ್ತಿಯ ಒಟ್ಟಾರೆ ನಡವಳಿಕೆಯಿಂದ ಸಹಜವಾಗಿಯೇ ಇತರರಿಗೆ ಗೋಚರಿಸುತ್ತದೆ. ಆದರೆ ಅನಗತ್ಯವಾಗಿ ಜಾತ್ಯತೀತರೆಂದು  ಘೋಷಿಸಿಕೊಳ್ಳುವವರು ತಮ್ಮ ಪೊಳ್ಳುತನವನ್ನು ಬಯಲು ಮಾಡಿಕೊಳ್ಳುತ್ತಾರಷ್ಟೇ. ಜಾತಿ ಮದುವೆಯಾಗಿಯೂ ಅಪ್ಪಟ ಜಾತ್ಯತೀತರಾಗಿರುವ ಅದೆಷ್ಟೋ ವ್ಯಕ್ತಿಗಳನ್ನು ನಾನು ನೋಡಿದ್ದೇನೆ. ಅಂತರ್ಜಾತಿ ಮದುವೆಯಾಗಿಯೂ ಜಾತೀಯತೆಯಿಂದ ಬಿಡುಗಡೆ ಹೊಂದದವರನ್ನೂ ನಾನು ಬಲ್ಲೆ. ಈ ಮಾತನ್ನು ನಾನು ಸಾರ್ವತ್ರೀಕರಿಸಿ ಹೇಳುತ್ತಿಲ್ಲ.ನನ್ನ ಈ ಮಾತಿಗೆ ಅಪವಾದಗಳೂ ಇವೆ.

ಸಿದ್ದರಾಮಯ್ಯ ಅವರನ್ನು ಕುರುಬ ಸಮುದಾಯಕ್ಕೆ ಸೇರಿದ ವ್ಯಕ್ತಿಯೊಬ್ಬ ಟೀಕಿಸಿದ ಮಾತ್ರಕ್ಕೆ ಆತ ಜಾತ್ಯತೀತ ನಾಗಿ ಬಿಡುವುದಿಲ್ಲ. ದೇವೇಗೌಡರನ್ನು ಒಕ್ಕಲಿಗನೊಬ್ಬ ಮೆಚ್ಚಿಕೊಂಡ ಮಾತ್ರಕ್ಕೆ ಆತ ಜಾತೀಯತೆಯನ್ನು ಮೈಗೂಡಿಸಿಕೊಂಡಿದ್ದಾನೆಂದು ಹೇಳಲಾಗುವುದಿಲ್ಲ."ನಾನೊಬ್ಬ ದಲಿತನಾಗಿದ್ದೂ ಮಲ್ಲಿಕಾರ್ಜುನ ಖರ್ಗೆ ಅಥವಾ ಪರಮೇಶ್ವರ್ ಅವರನ್ನು ಒಪ್ಪಿಕೊಳ್ಳದೆ ಸಿದ್ದರಾಮಯ್ಯ ಅವರನ್ನು ಬೆಂಬಲಿಸುತ್ತಿದ್ದೇನೆ" ಎಂದು ಹೇಳಿಕೊಳ್ಳುವವರ ಅಂತರಂಗದಲ್ಲಿ ಜಾತ್ಯತೀತತೆಗಿಂತ ಅವರದೇ ಆದ ಅಜೆಂಡಾ ಇರುವ ಸಾಧ್ಯತೆಯೇ ಹೆಚ್ಚು.ಲಿಂಗಾಯತರನ್ನೇ ನೋಡಿ. ಜಾತಿರಹಿತ ಸಮಾಜದ ಕಲ್ಪನೆಯೊಂದಿಗೆ ವಿಕಾಸಗೊಂಡ ಈ ಸಮುದಾಯ ಜಾತಿ ಕೆಸರಿನಲ್ಲಿ ಬಿದ್ದು ಒದ್ದಾಡುತ್ತಿರುವುದು ಬಸವಣ್ಣನಿಗೆ ಬಗೆದ ದ್ರೋಹವಷ್ಟೇ ಅಲ್ಲ, ಈ ನಾಡಿನ ಐತಿಹಾಸಿಕ ದುರಂತ. ಹಾಗೆ ದೇವೇಗೌಡರು ಮೂಲತಃ ಜಾತ್ಯತೀತ ಸಮುದಾಯವಾದ ಒಕ್ಕಲಿಗರನ್ನು ತಮ್ಮ ಸ್ವಾರ್ಥಕ್ಕಾಗಿ ಹಾದಿ ತಪ್ಪಿಸಿರುವುದು ಕನ್ನಡನಾಡಿನ ರಾಜಕೀಯ ಇತಿಹಾಸದ ಅಳಿಸಲಾಗದ ಕಳಂಕ.ಒಬ್ಬ ನಿಜ ನಾಯಕನಾದವನು ಮನಃಪೂರ್ವಕವಾಗಿಯೇ ತನ್ನ ಜಾತಿಯವರನ್ನು ಹತ್ತಿರಕ್ಕೆ ಬಿಟ್ಟುಕೊಳ್ಳುವುದಿಲ್ಲ. ಹಾಗೇ ಸಹಜವಾಗಿಯೇ ಜಾತ್ಯತೀತನಾದ ವ್ಯಕ್ತಿ ತನ್ನ ಜಾತಿಯವನೊಬ್ಬ ಈ ನಾಡನ್ನು ಮುನ್ನಡೆಸುವ ಅಧಿಕಾರ ಪಡೆದಾಗ ಅವನ ಬಳಿ ಸುಳಿಯುವುದೂ ಇಲ್ಲ.

ಪ್ರಬಲ ಜಾತಿಗೆ ಸೇರಿದ ವ್ಯಕ್ತಿಯೊಬ್ಬ ಮುಖ್ಯಮಂತ್ರಿಯಾದಾಗ ಆತ ತನ್ನ ಸಮುದಾಯವನ್ನು ಪೋಷಿಸುವುದು, ಆತನ ಜಾತಿಗೆ ಸೇರಿದವರು ಜಾತಿ ಅಸ್ತ್ರ ಜಳಪಿಸುವುದರಿಂದ ಜಾತ್ಯತೀತ ಎಂದು ನಂಬಿಕೊಂಡಿರುವ ಸಮಾಜಕ್ಕೆ ಆಗುವ ಹಾನಿ ಅಪಾರ.ಪ್ರಬಲ ಜಾತಿಗಳಿಗೆ ತಗುಲಿರುವ ಜಾತಿ ಕಾಯಿಲೆ ಉಲ್ಬಣಗೊಂಡಿರುವುದರಿಂದ  ಈಗಾಗಲೇ ಆಗಿರುವ ಹಾನಿ ಸರಿಪಡಿಸಲು ಸದ್ಯಕ್ಕಂತೂ ಸಾಧ್ಯವಿಲ್ಲ.ಆದರೆ ಸಣ್ಣ ಪುಟ್ಟ ಜಾತಿಗಳಿಗೆ ಸೇರಿದ ವ್ಯಕ್ತಿಯೊಬ್ಬ ಮುಖ್ಯಮಂತ್ರಿಯಾದರೆ ಆತನ ಸಮುದಾಯಕ್ಕೆ ಸೇರಿದವರು ಜಾತಿಯ ನೆರವು ಪಡೆಯಲು ಮುಂದಾದರೆ, ಅದನ್ನು ಆತ ಪೋಷಿಸಿದರೂ ಅದರಿಂದ ಅಂಥ ಹಾನಿಯೂ ಆಗುವುದಿಲ್ಲ, ಅದು ಅಪರಾಧವೂ ಅಲ್ಲ. ಯಾಕೆಂದರೆ ಅಲ್ಪಸಂಖ್ಯಾತರಲ್ಲೇ ಅಲ್ಪಸಂಖ್ಯಾತವಾಗಿರುವ ಅದೆಷ್ಟೋ ಜಾತಿಗಳಿಗೆ ಸೇರಿದ ಪ್ರತಿಭಾವಂತರು,ಕ್ರಿಯಾಶೀಲರು, ದಕ್ಷರು, ದಿಟ್ಟರು, ಸಮರ್ಥರಿಗೆ ಅಧಿಕಾರ ಎನ್ನುವುದೇ ಮರೀಚಿಕೆಯಾಗಿರುತ್ತದೆ.ಪ್ರಬಲ ಜಾತಿಗಳ ನಾಯಕರಿಗೆ ಮತ್ತು ಜನರಿಗೆ ದುರ್ಬಲರನ್ನು ಸಲಹುವ ಗುಣ ಬರುವವರೆಗೆ ಸದ್ಯದ ಪರಿಸ್ಥಿತಿಯಿಂದ ಮುಕ್ತಿ ಸಿಗುವ ಸಾಧ್ಯತೆಯೇ ಇಲ್ಲ.

ಜಾತಿ ವಾದಿಗಳಾಗಿರುವುದು ಅಥವಾ ಜಾತ್ಯತೀತರಂತೆ ನಟಿಸುವುದು ಸುಲಭ.ನಿಜ. ಜಾತ್ಯತೀತ ನಿಲುವನ್ನು ಹೊಂದಿರುವುದಕ್ಕೂ ಅಂಥ ಎದೆಗಾರಿಕೆ ಬೇಕು.ಅದು ಅಷ್ಟು ಸುಲಭವಲ್ಲ.ಹಾಗೆ ನೋಡಿದರೆ ಈ ನೆಲದ ಅಪ್ಪಟ ಜಾತ್ಯತೀತರು ದಲಿತರು.ಜಾತ್ಯತೀತತೆ ಎನ್ನುವುದು ಅವರ ಐತಿಹಾಸಿಕ ಅನಿವಾರ್ಯತೆ.ಜಾತಿ ಕಾರಣದಿಂದಲೇ ಸಾವಿರಾರು ವರ್ಷಗಳಿಂದ ನಿರಂತರವಾಗಿ ವಂಚನೆ, ಶೋಷಣೆಗೆ ಒಳಗಾಗಿರುವ ದಲಿತರಿಗೆ ಜಾತಿ ಬೇಕಿರುವುದು ಮೀಸಲಾತಿಗಾಗಿ ಮಾತ್ರ.ಮುಂದೊಂದು ದಿನ ಸಮಾನತೆಯ ಸಮಾಜದ ಕನಸು ಸಾಕಾರಗೊಂಡಾಗ ಮೀಸಲಾತಿಯನ್ನೂ ಧಿಕ್ಕರಿಸಿ ಮುನ್ನಡೆಯುವ ಸ್ವಾಭಿಮಾನಿಗಳಿವರು. ನಮ್ಮ ಜಾತ್ಯತೀತ ಎಂದು ಹೇಳಿಕೊಳ್ಳುವ ಸಮಾಜಕ್ಕೆ ನಿಜಕ್ಕೂ ಬೇಕಿರುವುದು ದಲಿತರ ಜಾತ್ಯತೀತ ಮನೋಭಾವ, ಬ್ರಾಹ್ಮಣರ ಶ್ರದ್ಧೆ, ಮುಸ್ಲಿಮರ ಸಾಹಸ ಮನೋಭಾವ, ಕ್ರೈಸ್ತರ ಸಮಾಜ ಪ್ರೀತಿ, ಶೂದ್ರರ ಕ್ರಿಯಾಶೀಲತೆಯೇ ಹೊರತು ಜಾತೀಯತೆ ಅಲ್ಲ.

ಈ ಕಲ್ಪನೆ ಸಾಕಾರಗೊಳ್ಳುವವರೆಗೆ ಈ ನೆಲದಲ್ಲಿ ಜಾತೀಯತೆಯ ವ್ರಣ ಹೆಚ್ಚಾಗಿ ಮೈ ಮನಸ್ಸಿನ ತುಂಬ ಕೀವು ತುಂಬಿ ರೋಗಗ್ರಸ್ತ ಸಮಾಜ ಎನ್ನುವುದನ್ನು ಸಾರಿ ಸಾರಿ ಹೇಳುತ್ತಲೇ ಇರುತ್ತದೆ.ಒಬ್ಬ ನಾಯಕನ ಯೋಗ್ಯತೆ ಆಧರಿಸಿ ನಿರ್ಧಾರ ಕೈಗೊಳ್ಳುವ ಬದಲು ಜಾತಿ ಕಾರಣಕ್ಕಾಗಿಯೇ ಟೀಕಿಸುವುದು, ಜಾತಿ ಕಾರಣಕ್ಕಾಗಿಯೇ ಬೆಂಬಲಿಸುವುದು ನಿಲ್ಲುವವರೆಗೆ ಈ ಸಮಾಜ ಗುಣಮುಖವಾಗುವುದಿಲ್ಲ. ರೋಗಗ್ರಸ್ತವಾಗಿಯೇ ಉಳಿಯುತ್ತದೆ.
ಪ್ರಬಲ ಮತ್ತು ಪ್ರಭಾವಿ ಜಾತಿಗಳು ದುರ್ಬಲ ಜಾತಿಗಳ ಜನರನ್ನು ಸಲಹುವ ಗುಣ ಬೆಳೆಸಿಕೊಳ್ಳಬೇಕೇ ಹೊರತು ಜಾತಿ ಸಂಘಟನೆಗಳನ್ನು ಕಟ್ಟಿಕೊಂಡು ತಮ್ಮ ನಿರ್ಧಾರಗಳನ್ನೇ ಇತರರ ಮೇಲೆ ಹೇರುವುದೂ ತರವಲ್ಲ.ಸಂಘಟನೆಗಳು ಬೇಕಿರುವುದು ದುರ್ಬಲರು ಮತ್ತು ಅತಂತ್ರ ಸಮುದಾಯಗಳಿಗೇ ಹೊರತು ಪ್ರಬಲರಿಗಲ್ಲ.ಪ್ರಬಲರು ಮತ್ತು ಪ್ರಭಾವಿ ಜಾತಿಗಳು ತಾಯ್ತನ ಮೆರೆದರೆ ಮಾತ್ರ ಸಮಾನತೆ ಸಾಧ್ಯವಾಗುತ್ತದೆ.

ಕುವೆಂಪು{ಹಾಗೂ ಕೆಂಪೇಗೌಡ} ಮತ್ತು ಬಸವಣ್ಣ ಜಾತ್ಯತೀತ ತತ್ವ ಪ್ರತಿಪಾದಕರು ಎಂದು ಒಕ್ಕಲಿಗರು ಮತ್ತು ಲಿಂಗಾಯತರು ಒಪ್ಪಿಕೊಳ್ಳುವುದೇ ನಿಜವಾದರೆ ಈ ಎರಡೂ ಜಾತಿ ಸಂಘಟನೆಗಳನ್ನು ತಕ್ಷಣ ವಿಸರ್ಜಿಸಲು ಆಯಾ ಜಾತಿಗಳ ಪ್ರಮುಖರು ಮುಂದಾಗಬೇಕು.ಆಗ ಮಾತ್ರ ಜಾತ್ಯತೀತತೆಯೆಡೆಗೆ ಈ ಜಾತಿಗಳ ನಡಿಗೆ ಸಾಧ್ಯವಾಗುತ್ತದೆ, ಇತರರಿಗೂ ಮಾದರಿಯಾಗುತ್ತದೆ.ಇಲ್ಲವಾದರೆ ಜಾತ್ಯತೀತತೆ ಎನ್ನುವುದು ಆಗಷ್ಟೇ ಹುಟ್ಟಿದ ಮಕ್ಕಳಿಗೂ ಅರ್ಥವಾಗುವ ಹುಸಿ ಘೋಷಣೆಯಾಗಿಯೇ ಉಳಿಯುತ್ತದೆ.ಕೇವಲ ಜಾತ್ಯತೀತತೆಯ ಮುಖವಾಡ ತೊಟ್ಟ ಯಾವುದೇ ಕಾರ್ಯಕ್ರಮ ಅಥವಾ ನಡಿಗೆ, ಹೆಗಲ ಮೇಲೆ ಕುರುಡನನ್ನು ಕೂರಿಸಿಕೊಂಡ ಹೆಳವನ ಪರಿಸ್ಥಿತಿಯಾಗಿಯೇ ಉಳಿಯುತ್ತದೆ.