ಹುತ್ತವ ಬಡಿದೊಡೆ ಹಾವು ಸಾಯಬಲ್ಲುದೇ?

ಹುತ್ತವ ಬಡಿದೊಡೆ ಹಾವು ಸಾಯಬಲ್ಲುದೇ?

"ಧರ್ಮ! ಧರ್ಮ! ಅದಕ್ಕೆ ಯಾವುದಾದರೊಂದು ಕಳಂಕ ಯಾವಾಗಲೂ ಬಂದೇ ಬರುತ್ತೆ. ಮನುಷ್ಯರಿಗೇನಾಗಿದೆ ಹೇಳು"- ಇದು ಲಂಕೇಶರ ಸಂಕ್ರಾಂತಿ ನಾಟಕದಲ್ಲಿನ ಬಿಜ್ಜಳನ ಮಾತು. ರುದ್ರ ಮತ್ತು ಉಷಾ ಕೂಡಿದ ಪ್ರಸಂಗಕ್ಕೆ ಬೆಚ್ಚಿದ ಬ್ರಾಹ್ಮಣರು ಧಾರ್ಮಿಕ ಬಣ್ಣ ಬಳಿದು ದೂರು ಹೇಳುವ ಪ್ರಸಂಗದಲ್ಲಿ ಬಿಜ್ಜಳ ಹೀಗೆ ಕೇಳುತ್ತಾನೆ. ನಿಜ ಮನುಷ್ಯರಿಗೇನಾಗಿದೆಯೆಂದು ನಾವು ಮೊದಲು ಕೇಳಿಕೊಳ್ಳಬೇಕಾದ ಕಾಲದಲ್ಲಿದ್ದೇವೆ. ಧರ್ಮದ ಬಗ್ಗೆ ಕೊರಳೆತ್ತಿ ಮಾತಾಡುವ ಜನರೇ ಆಧುನಿಕ ಬಂಡವಾಳಿಗರ ಹೆಗಲ ಮೇಲೂ ಕೈ ಹಾಕಿದ್ದಾರೆ. ಆದರೆ ಅದು ಅವರ ಧಾರ್ಮಿಕ ಮಾತುಗಳ ಭರದಲ್ಲಿ ಮರೆಯಾಗಿದೆ. ಜನ ತಮ್ಮ ದೈನಂದಿನ ಬದುಕಿನ ಕಷ್ಟಗಳ ಮೂಲ ಹುಡುಕದಂತೆ ಅವರನ್ನು ಧಾರ್ಮಿಕ ಚರ್ಚಾಪಟುಗಳನ್ನಾಗಿಸಿ ಪ್ರಭುತ್ವ ತನಗೆ ಬೇಕಾದ ಬಿಲಗಳನ್ನು ಸದ್ದಿಲ್ಲದೇ ಕೊರೆದುಕೊಳ್ಳುತ್ತಿದೆ. 

ಇಂತಹ ಪರಿಸ್ಥಿತಿಯಲ್ಲಿ ಜನ ಸೇರಿಸಿ ಬರೀ ತತ್ವಗಳನ್ನು ಹೇಳುತ್ತಾ ಸಾಗಿದರೆ ಪ್ರಯೋಜನವಿಲ್ಲ. ಬದಲಾಗಿ ಜನಸಾಮಾನ್ಯರನ್ನು ಅವರ ನಿತ್ಯದ ಸಮಸ್ಯೆಗಳಿಗೆ ಮುಖಾಮುಖಿಯಾಗಿಸಿ,ಅದಕ್ಕೆ ಪರಿಹಾರೋಪಾಯಗಳನ್ನು ಹುಡುಕಿ, ಅವರನ್ನು ಸಮಸ್ಯೆಗಳಿಂದ ಮುಕ್ತಿಗೊಳಿಸುವ ದಾರಿಗೆ ಕರೆತರಬೇಕಿದೆ. ಅದು ಬಿಟ್ಟು ಸಶಕ್ತ ಪರ್ಯಾಯವಿಲ್ಲದೆ ಅವರಿಗೆ ತತ್ವಾದರ್ಶದ ಓಗರವುಣಿಸ ಹೊರಟರೆ ಉಜ್ಜನ ಸ್ಥಿತಿಯಾಗುತ್ತದೆ. ಪ್ರಭುತ್ವ ತಾನು ಬದುಕಲು ರುದ್ರನ ರಕ್ತ ಹರಿಸುತ್ತದೆ.ಯಾಕೆಂದರೆ ಭಿನ್ನಾಭಿಪ್ರಾಯಗಳ ಅಸ್ತಿತ್ವ, ಸಹಬಾಳ್ವೆ, ವಿವಿಧ ಜಾತಿ ಜನರಿಗೆ ಆತ್ಮಗೌರವ ಹಾಗೆಯೇ ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಲು  ಒತ್ತಾಸೆ ನೀಡಲೇಬೇಕಾದ ಈ ಹೊತ್ತಿನಲ್ಲಿ ಬರೀ ಧಾರ್ಮಿಕವೋ! ಜಾತ್ಯತೀತವೋ ಆದ ಆದರ್ಶದ ಮಾತುಗಳನ್ನಾಡುತ್ತ ಹತ್ತಾರು ಶತಮಾನಗಳನ್ನು ದಾಟಿ ಬಂದ ನಾವುಗಳು ಬದುಕಿನ ನೆಲೆಗಟ್ಟನ್ನೇ ಬದಲಿಸುವ ಕ್ರಿಯೆಗೆ ಇಳಿದಿರುವುದು ತೀರಾ ವಿರಳ. ಪ್ರಜಾಸತ್ತೆಯಿಲ್ಲದ ಕಾಲದಲ್ಲಿ ಶರಣರು ಈ ಪ್ರಯತ್ನ ಮಾಡಿ, ಈ ನೆಲದ ಧಾರ್ಮಿಕ ಮತ್ತು ಜಾತಿ ವ್ಯವಸ್ಥೆಯ ಕ್ರೌರ್ಯಕ್ಕೆ ತಮ್ಮ ಜೀವನ ಧ್ಯೇಯವನ್ನು ಬಲಿ ಕೊಡಲಾರದೆ ಮೂಲಭೂತವಾದಿಗಳ, ಜಾತಿವಂತರ ಒಳ ಸಂಚುಗಳಿಂದ ಘಾಸಿಗೊಂಡರು. ಆದರೆ ಈಗಲೂ ಈ ಜಾತಿವಂತರ ಭಕ್ತಿಯ ಮೆರವಣಿಗೆ ನಿಂತಿಲ್ಲ. ಒಬ್ಬ ಸಾಮಾನ್ಯ ಮಹಿಳೆ ಆಯ್ದಕ್ಕಿ ಲಕ್ಕಮ್ಮ

     "ಗರ್ವದಿಂದ ಮಾಡುವ ಭಕ್ತಿ ದ್ರವ್ಯದ ಕೇಡು;
      ನಡೆಯಿಲ್ಲದ ನುಡಿ ಅರಿವಿಂಗೆ ಹಾನಿ;
      ಕೊಡದೆ ತ್ಯಾಗಿ ಎನಿಸಿಕೊಂಬುದು-
      ಮುಡಿಯಿಲ್ಲದ ಶೃಂಗಾರ;
      ದೃಢವಿಲ್ಲದ ಭಕ್ತಿ ಅಡಿ ಒಡೆದ ಕುಂಭದಲಿ
      ಸುಜಲವ ತುಂಬಿದಂತೆ-
      ಮಾರಯ್ಯ ಪ್ರಿಯ ಅಮಲೇಶ್ವರ ಲಿಂಗವ

ಮುಟ್ಟದ ಭಕ್ತಿ." ಎನ್ನುತ್ತಾಳೆ.ಹೌದು ಈಗ ಭಕ್ತಿ ಎಂಬುದು ಜಾತಿ ಅಥವಾ ಧರ್ಮ ಅಥವಾ ಶ್ರೀಮಂತಿಕೆ ಪ್ರದರ್ಶನದ ಭಾಗ ಮಾತ್ರ. ಇಂತಹ ಭಕ್ತರೇ ನಮ್ಮ ಬಹುತೇಕ ಮಠಗಳ ಅನುಯಾಯಿಗಳು. ಜಾತ್ಯತೀತ ಧರ್ಮವೊಂದರ ಜಾತಿವಂತ ಮಹಾಭಕ್ತರು. ಈ ಭಕ್ತ ಮಹಾಶಯರು ಅಸ್ಪೃಶ್ಯತೆಯ ಆಚರಣೆ ಬಿಟ್ಟಿಲ್ಲ. ಬದಲಾಗಿ ಅದನ್ನು ಹೊಸ ಹೊಸ ಪರಿಕ್ರಮಗಳಿಂದ ಆಚರಿಸುತ್ತಿದ್ದಾರೆ. ಸಹಬಾಳ್ವೆಯ ಭಾಷಣ ಕೇಳುತ್ತಲೇ ಸಂಕುಚಿತ ಗೂಡುಗಳಲ್ಲಿದ್ದುಕೊಂಡು ತಮ್ಮ ಕುಲದ ದಾರ್ಷ್ಟ್ಯವನ್ನು ಪ್ರಯೋಗಿಸುತ್ತಿದ್ದಾರೆ. ಈ ಪ್ರಯೋಗ ಸಾಮಾಜಿಕ, ಧಾರ್ಮಿಕ, ರಾಜಕೀಯ ರಂಗದಾಚೆಗೂ ಬಂಡವಾಳಶಾಹಿಗಳ ಜೊತೆ ಸೇರಿ ನಡೆಯುತ್ತಿದೆ. ಈ ಒಕ್ಕೂಟಗಳ ಪರಿಣಾಮವನ್ನೇ ಎಲ್ಲಾ ಜಾತಿಯ ಬಡವರು ಅನುಭವಿಸುತ್ತಿರುವುದು. ಹಾಗಾಗಿ ಜೀವ ಹತ್ಯೆಯೂ ಕೂಡ ಸಾಮಾನ್ಯ ಸಂಗತಿಯೇ! ಒಬ್ಬ ಬಂಡವಾಳಿಗನ ಸಾವಿಗೆ ಸಿಕ್ಕಷ್ಟು ಪ್ರಾಮುಖ್ಯತೆ, ರೈತನೊಬ್ಬನ ಆತ್ಮಹತ್ಯೆಗೆ, ಜಾತಿ ಧರ್ಮದ ಕಾರಣದಿಂದ ಕೊಲ್ಲಲ್ಪಟ್ಟವನಿಗೆ ಸಿಗುವುದೇ ಇಲ್ಲ. 

ಹಾಗಾಗಿ ಕಲ್ಯಾಣವೆಂಬುದು ಮತ್ತೆ ನಡೆಯಬೇಕಾದರೆ ಹೇಗಿರಬೇಕು?  ಇದು ಬರೀ ಕಾರ್ಯಕ್ರಮ ಆಗಬೇಕೋ? ಕ್ರಿಯೆಯಾಗಬೇಕೋ? ಇಲ್ಲಿ ನಾವು ನೋಡುತ್ತಿರುವ ಭಕ್ತರು ವಚನಕಾರ್ತಿ ಕಾಳವ್ವೆ ನೋಡಿದ ರೀತಿಯಲ್ಲಿಯೇ ಕಾಣುತ್ತಿದ್ದಾರೆ. ಹೇಗೆಂದರೆ ಆಕೆಯ ವಚನವನ್ನೇ ಗಮನಿಸಿ:

     "ತೂಬರ ಕೊಳ್ಳಿಯಂತೆ ಉರಿವಾತ ಭಕ್ತನೆ?
       ಹುಸಿದು ತಂದು ಮಾಡುವಾತ ಭಕ್ತನೆ?
       ಭಕ್ತರ ಕುಲವನೆತ್ತಿ ನಿಂದಿಸುವಾತ ಭಕ್ತನೆ?"

ಈ ತೀಕ್ಷ್ಣ ಪ್ರಶ್ನೆಗಳನ್ನು ಈಗಲೂ ಕೇಳಿಕೊಳ್ಳಬೇಕಿದೆ. ದೇವರ ಹಬ್ಬ, ತೇರು, ಜಾತ್ರೆಗಳು ಎಲ್ಲಾ ಜಾತಿ ಜನಾಂಗದ ಬೆರೆಯುವಿಕೆಯ ಅವಕಾಶವಾಗಿದ್ದವುಗಳು ಈಗ ಶ್ರೀಮಂತ ಮೇಲ್ವರ್ಗದ ಅಡಿಯಾಳ್ತನದಲ್ಲಿ ಜರುಗುವ ಆಚರಣೆಗಳಾಗಿವೆ. ಈ ಆಚರಣೆಗಳು ಅದೆಷ್ಟೇ ಸಾಮುದಾಯಿಕವೆಂಬಂತೆ ತೋರಿದರೂ ಆಳದ ನಿಯಂತ್ರಣ ಮತ್ತು ನಿರ್ದೇಶನ ಹಣ ಬಲದ ಮೇಲ್ಜಾತಿಯದ್ದೇ ಆಗಿರುತ್ತದೆ. ಅಂತೆಯೇ ಬಡತನದ ಸಂಕಷ್ಟ ಮತ್ತು ಅಸ್ಪೃಶ್ಯತೆಯ ಅಪಮಾನದ ಸಮಾನ ಹಂಚಿಕೆಯ ರಾಷ್ಟ್ರದಲ್ಲಿ ವಿಮೋಚನೆಯ ಪ್ರಯತ್ನ ಯಾರ ಮೂಲಕ ನಡೆಯಬೇಕು? ಜಾತ್ಯತೀತ ಸೋಗಿನಡಿ ಜಾತಿವಾದ ಆಚರಿಸುತ್ತಿರುವ ಮಠಗಳಿಂದಲೇ? ಅಥವಾ ಬಂಡವಾಳಶಾಹಿಗಳಿಗೆ ಆತ್ಮ ಒತ್ತೆಯಿಟ್ಟ ಸರ್ಕಾರಗಳಿಂದಲೇ? ಈ ಎರಡರಿಂದಲೂ ಅಸಾಧ್ಯ. ಭಕ್ತಿ ಇಲ್ಲಿ ಅಡಿಯಾಳ್ತನವಾಗಿರುವಾಗ ಬಿಡುಗಡೆಯ ಬಯಕೆ ಈ ಎರಡು ನೆಲೆ ನೆಚ್ಚಿದರೂ ಆಗದು. ಯಾಕೆಂದರೆ ಸಾಂಸ್ಥೀಕರಣಗೊಂಡ ಧರ್ಮ, ಮಠ ಅದೆಷ್ಟೇ ಜಾತ್ಯತೀತವೆಂದರೂ ನಂಬಲಾಗದು. ಬಂಡವಾಳಿಗರ ಮಿತ್ರನಾಗಿರುವ ಈ ಸಂಸ್ಥೆಗಳು ತಮ್ಮ ನಿಜವಾದ ಸಾಮಾಜಿಕ ಕಾಳಜಿ ತೋರಬೇಕಾದರೆ ಮೊದಲು ತಮ್ಮ ಭಕ್ತ ವಲಯದಲ್ಲೇ ಜಾತ್ಯತೀತ ಸಮಾಜದ ನಿರ್ಮಾಣಕ್ಕೆ ಕಾರ್ಯೋನ್ಮುಖವಾಗಬೇಕು. ದೇಶ ಸುತ್ತಿ ತತ್ವ ಹೇಳುವ ಬದಲು, ತನ್ನ ಅನುಯಾಯಿಗಳಿರುವ ಪ್ರದೇಶದಲ್ಲೇ ಬಸವಾದಿ ವಚನಕಾರರ ಮೌಲ್ಯಗಳ ವಾಸ್ತವೀಕರಿಸಲು ಪ್ರಯತ್ನಿಸಬೇಕು. ಅದ ಬಿಟ್ಟು ಎಷ್ಟೇ ತತ್ವಾದರ್ಶಗಳ ಸಮ್ಮೇಳನ ಮಾಡಿದರೂ ಅದು " ಹುತ್ತವ ಬಡಿದರೆ ಹಾವು ಸಾಯಬಲ್ಲುದೇ ಅಯ್ಯಾ" ಎಂಬಂತಾಗುತ್ತದೆ.