ಇಂದು ಸಂಜೆಯೊಳಗೆ ರಾಜೀನಾಮೆ ಇತ್ಯರ್ಥಪಡಿಸುವುದು ಸಾದ್ಯವಿಲ್ಲ : ಸುಪ್ರೀಂ ಕೋರ್ಟ್‌ಗೆ ಸ್ಪೀಕರ್ ಮನವಿ

ಇಂದು ಸಂಜೆಯೊಳಗೆ ರಾಜೀನಾಮೆ ಇತ್ಯರ್ಥಪಡಿಸುವುದು ಸಾದ್ಯವಿಲ್ಲ : ಸುಪ್ರೀಂ ಕೋರ್ಟ್‌ಗೆ ಸ್ಪೀಕರ್ ಮನವಿ

ದೆಹಲಿ: ಸುಪ್ರೀಂ ಕೋರ್ಟ್ ನೀಡಿದ ಕಾಲಾವಕಾಶದೊಳಗೆ ರಾಜೀನಾಮೆ ಇತ್ಯರ್ಥಗೊಳಿಸುವುದು ಸಾಧ‍್ಯವಿಲ್ಲ ಎಂದು ಸ್ಪೀಕರ್‍ ರಮೇಶ್‍ ಕುಮಾರ್‍ ಮನವಿ ಸಲ್ಲಿಸಿದ್ದಾರೆ. ಸ್ಪೀಕರ್‍ ಮನವಿ ಅರ್ಜಿ ಪರಿಶೀಲಿಸಿದ ಸುಪ್ರೀಂ ಕೋರ್ಟ್ ವಿಚಾರಣೆಯನ್ನು ನಾಳೆಗೆ ಮುಂದೂಡಿದೆ.

ಇತ್ತೀಚೆಗೆ ರಾಜೀನಾಮೆ ಸಲ್ಲಿಸಿದ್ದ ಶಾಸಕರು ಕರ್ನಾಟಕ ಸ್ಪೀಕರ್‍ ರಾಜೀನಾಮೆಯನ್ನು ಶೀಘ್ರವೇ ಅಂಗೀಕರಿಸಬೇಕೆಂದು ಸುಪ್ರೀಂ ಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಿದ್ದರು. ಶಾಸಕರ ಮನವಿಯನ್ನು ಗುರುವಾರ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್ ಇವತ್ತು ಸಂಜೆಯೊಳಗೆ ಸ್ಪೀಕರ್‍ ರಾಜೀನಾಮೆ ಇತ್ಯರ್ಥಪಡಿಸಬೇಕು ಎಂದು ತಿಳಿಸಿದೆ. ವಿಚಾರಣೆ ಆಲಿಸಿದ ದೀಪಕ್‍ ಗುಪ್ತ ಮತ್ತು ಅನಿರುದ್ದಾ ಬೋಸ್‍ ನ್ಯಾಯಪೀಠ “ ರಾಜೀನಾಮೆ ಕುರಿತಂತೆ ಮಾನ್ಯ ಸ್ಪೀಕರ್‍ ಕೂಡಲೇ ನಿರ್ಧಾರ ತೆಗೆದುಕೊಳ್ಳಬೇಕು. ಈ ದಿನದ ಉಳಿದಿರುವ ಸಮಯದಲ್ಲಿ ನಿರ್ಧಾರ ತಿಳಿಸಬೇಕು” ಎಂದು ಆದೇಶ ನೀಡಿತ್ತು.

ಸುಪ್ರೀಂ ಕೋರ್ಟ್ ಆದೇಶ ಹೊರಬಂದ ಒಂದು ಗಂಟೆಯ ಬಳಿಕ ಸ್ಪೀಕರ್‍ ರಮೇಶ್‍ ಕುಮಾರ್‍ ನ್ಯಾಯಾಲಯ ನೀಡಿದ ಕಾಲವಕಾಶ ಸಾಲುವುದಿಲ್ಲ ಎಂದು ಮನವಿ ಅರ್ಜಿ ಸಲ್ಲಿಸಿದ್ದಾರೆ. ಶಾಸಕರು ನೀಡಿರುವ ರಾಜೀನಾಮೆ ಸ್ವಇಚ್ಚೆಯಿದಲೋ ಅಥವಾ ಬಲವಂತದಿಂದಲೋ ಎಂದು ಪರಿಶೀಲಿಸಬೇಕಾಗಿರುವುದರಿಂದ ಉಳಿದಿರುವ ಅಲ್ಪ ಸಮಯ ರಾಜೀನಾಮೆ ಇತ್ಯರ್ಥಗೊಳಿಸುವ ಪ್ರಕ್ರಿಯೆಗೆ ಸಾಲುವುದಿಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ರಮೇಶ್‍ ಕುಮಾರ್ ಅವರು ಸಲ್ಲಿಸಿರುವ ಅರ್ಜಿಯಲ್ಲಿ ‘ಸುಪ್ರೀಂ ಕೋರ್ಟ್ ಸ್ಪೀಕರ್‍ ಕಾರ್ಯಗಳಿಗೆ ಕಾಲಾವಕಾಶ ವಿಧಿಸಬಹುದೇ‘ ಎಂದು ಕೇಳಲಾಗಿದೆ.

ಸ್ಪೀಕರ್‍ ಮನವಿ ಅರ್ಜಿಯನ್ನು ಪರಿಶೀಲಿಸಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ರಂಜನ್‍ ಗೋಗೊಯ್‍ ನೇತೃತ್ವದ ನ್ಯಾಯಪೀಠ ಮನವಿ ಅರ್ಜಿ ವಿಚಾರಣೆಯನ್ನು ನಾಳೆಗೆ ಮುಂದೂಡಿದೆ.