ವ್ಯಕ್ತಿಯ ಮರಣ ದೃಢೀಕರಣ ಪತ್ರ ನೋಟರಿ ನೀಡಬಹುದೆ?: ಸುಪ್ರೀಂ ಕೋರ್ಟ್

ವ್ಯಕ್ತಿಯ ಮರಣ ದೃಢೀಕರಣ ಪತ್ರ ನೋಟರಿ ನೀಡಬಹುದೆ?: ಸುಪ್ರೀಂ ಕೋರ್ಟ್

ಬೆಂಗಳೂರು: ವ್ಯಕ್ತಿಯ ಮರಣಾ ನಂತರ ಆತನ ಮರಣ ದೃಢಪಡಿಸಲು ಕುಟುಂಬದ ಸದಸ್ಯರು ಸ್ಥಳೀಯಾಡಳಿತ ಸಂಸ್ಥೆಗಳಿಗೆ, ನಗರಸಭೆ ಇಲ್ಲವೇ ಮಹಾನಗರ ಪಾಲಿಕೆಗೆ ಮಾಹಿತಿ ನೀಡಿ ಪ್ರಮಾಣಪತ್ರ ಪಡೆಯುವುದು ಕಡ್ಡಾಯ.

ಆದರೆ, ಸರ್ಕಾರ ನಿಗದಿಪಡಿಸಿದ ಅವಧಿ ಮೀರಿದ ನಂತರವೂ ಕಾರಣಾಂತರದಿಂದ ಈ ಪ್ರಮಾಣಪತ್ರ ಪಡೆಯಲಾಗದಿದ್ದರೆ, ಅಂತಹ ಸಂದರ್ಭದಲ್ಲಿ, ನೋಟರಿಯು ಆ ವ್ಯಕ್ತಿಯ ಮರಣವನ್ನು ದೃಢೀಕರಿಸಿ ಪ್ರಮಾಣ ಪತ್ರ ನೀಡಿದರೆ, ಅದಕ್ಕೆ ಕಾನೂನು ಮಾನ್ಯತೆ ನೀಡಬಹುದೆ? ಈ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರಕ್ಕೆ ಅವಕಾಶ ಇರುವುದಿಲ್ಲವೇ ಎಂಬುದು ಸುಪ್ರೀಂಕೋರ್ಟ್ ಮುಂದಿರುವ ಸಂಶಯ.

ಈ ಅಂಶವು,  ಕೇವಲ ವ್ಯಕ್ತಿಯ ಮರಣಾನಂತರದ ಪ್ರಮಾಣಪತ್ರ ನೀಡಲು ನೋಟರಿ ಅವರಿಗೆ ಅಧಿಕಾರ ಇದೆ ಅಥವಾ ಇಲ್ಲ ಎಂಬುದಷ್ಟಕ್ಕೇ ಸೀಮಿತವಾಗಿಲ್ಲ. ಅಂತರ್ಜಾತಿ ವಿವಾಹ ಇಲ್ಲವೇ ಮನೆಯ ಹಿರಿಯರೂ ಸೇರಿಯೇ ಮದುವೆ ನಿಗದಿ ಪಡಿಸಿದ ಮೇಲೆ ವಧು,ವರರ  ನೋಂದಣಿಯನ್ನು ವಿವಾಹ ನೋಂದಣಿ  ಕಚೇರಿಯಲ್ಲಿ ನಡೆಸಬೇಕು.

ಒಂದು ವೇಳೆ, ನೋಟರಿಗೂ ಇಂತಹ ಪ್ರಕರಣದಲ್ಲಿಅಧಿಕಾರ ಮುಂದುವರಿದರೆ ಕಾನೂನು ವಲಯವು ಹತ್ತು ಹಲವು ಸಂಶಯಗಳ ಆಗರವಾಗುತ್ತದೆ. ಸರ್ಕಾರಿ ಕಚೇರಿಯಲ್ಲಿ ನೋಂದಣಿ ಕಡ್ಡಾಯ ಇಲ್ಲವೇ ದಾಖಲೀಕರಣ ಇಲ್ಲವೇ ಮಾನ್ಯತೆ ಅಗತ್ಯ ಇರುವ ಪ್ರಕರಣಗಳಿಗೆ ಕೇವಲ ನೋಟರಿಯ ದೃಢೀಕರಣ ಪತ್ರ ಸಾಕೆ?

ಶಾಲಾ-ಕಾಲೇಜು ಪ್ರವೇಶ ಇಲ್ಲವೇ ಉದ್ಯೋಗ ವಲಯಗಳಿಗೂ ನೋಟರಿಯ ಅಧಿಕಾರವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದಾದರೆ ಹಾಗೂ ಅದಕ್ಕೆ ಕಾನೂನಿನ ಮಾನ್ಯತೆ ಸಿಗುವಂತಾದರೆ ಹೇಗೆ ಎಂಬುದು ಸುಪ್ರೀಂಕೋರ್ಟ್ ಎತ್ತಿರುವ ಸಂಶಯದ ಗಂಭೀರತೆ.

ಗೊಂದಲಕ್ಕೀಡು ಮಾಡುವ ದುರದೃಷ್ಟದ ಇಂತಹ ಪ್ರಕರಣಗಳು ಭವಿಷ್ಯದಲ್ಲಿ ಉದ್ಭವಿಸಬಾರದು. ಆದ್ದರಿಂದ, ವಕೀಲರು ಹಾಗೂ ನೋಟರಿ ಸಮೂಹ ಹೆಚ್ಚು ಜವಾಬ್ದಾರಿಯಿಂದ ಚಿಂತನೆ ನಡೆಸುವಂತೆಯೂ ಸುಪ್ರೀಂಕೋರ್ಟ್ ಸೂಚಿಸಿದ್ದು,  ಜು. 29ಕ್ಕೆ ಮತ್ತೆ ಈ ಪ್ರಕರಣವನ್ನು ವಿಚಾರಣೆಗೆ ತೆಗೆದುಕೊಳ್ಳಲಿದೆ.

ಏನಿದು ಪ್ರಕರಣ?

ಕಳೆದ ಒಂದು ವಾರದ ಹಿಂದೆಯಷ್ಟೆ (ಜು. 12) ಒಂದು ಪ್ರಕರಣ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಹಾಗೂ ಕೆ.ಎಂ.ಜೋಸೆಫ್ ಅವರಿದ್ದ ಪೀಠದ ಮುಂದೆ  ವಿಚಾರಣೆಗೆ ಬಂದಿತ್ತು. ಉತ್ತರಖಂಡದ ವಿ. ಗುರ್ಮಿತ್ ಕೌರ್ ಎಂಬುವರ ತಂದೆ ಸಂತೋಕ್ ಸಿಂಗ್ 2019ರ ಫೆ.13 ರಂದು ಮೃತಪಟ್ಟಿದ್ದರು. ಇವರ ಮರಣವನ್ನು ದೃಢೀಕರಿಸಿ ನೋಟರಿಯವರು 2019ರ ಜೂ. 19 ರಂದು ಪ್ರಮಾಣಪತ್ರ ನೀಡಿದ್ದರು. ಇದನ್ನು ಉತ್ತರಾಖಂಡ ಸರ್ಕಾರ ಪ್ರಶ್ನಿಸಿತು.

ನೋಟರಿ ಮೂಲಕ ಪ್ರಮಾಣಪತ್ರಗಳನ್ನು ಪಡೆಯುವುದು ಕೇವಲ ಒಂದು ಔಪಚಾರಿಕ ಪ್ರಕ್ರಿಯೆ ಮಾತ್ರ. ದಾಖಲೆಯಲ್ಲಿ ವಕೀಲರನ್ನು ಎಳೆದು ತರಬಹುದೇ ಎಂಬುದು ಪ್ರಶ್ನೆ. ಕಾನೂನು ಹಾಗೂ ಆಡಳಿತಾತ್ಮಕವಾಗಿಯೂ ಇದು ಗಂಭೀರ ಸಂಗತಿ.

ವ್ಯಕ್ತಿಯ ಮರಣವನ್ನು ದೃಢೀಕರಿಸಿ ನೋಟರಿ ಪ್ರಮಾಣಪತ್ರ ನೀಡಬಹುದೇ ಎಂಬ ಪ್ರಶ್ನೆಯ ಹಿನ್ನೆಲೆಯಲ್ಲಿ ನ್ಯಾಯಮೂರ್ತಿಗಳು ಗೌರವ್ ಬ್ಯಾನರ್ಜಿ ಅವರನ್ನು ನ್ಯಾಯಾಲಯ ಮಿತ್ರ (ಅಮಿಕಸ್ ಕ್ಯೂರಿ) ನನ್ನಾಗಿ ನೇಮಿಸಿದ್ದಾರೆ.

ಅಟಾರ್ನಿ ಜನರಲ್, ನ್ಯಾಯಾಲಯ ಮಿತ್ರ, ಸುಪ್ರೀಂಕೋರ್ಟ್‍ನ  ವಕೀಲರ ಸಂಘದ ಅಧ್ಯಕ್ಷ ಹಾಗೂ ಅಡ್ವೋಕೇಟ್ಸ್ ಆನ್ ರಿಕಾರ್ಡ್ (ಸುಪ್ರೀಂ ಕೋರ್ಟ್‍ನ 2013 ರ 4ನೇ ಆದೇಶದ ಪ್ರಕಾರ ನೋಂದಣಿಯಾಗಿರುವ ವಕೀಲರು) ಈ ಕುರಿತು ಚಿಂತನೆ ನಡೆಸಿ, 4 ವಾರದೊಳಗಾಗಿ ಸಲಹೆ ನೀಡುವಂತೆಯೂ ನ್ಯಾಯಮೂರ್ತಿಗಳು ನಿರ್ದೇಶಿಸಿದ್ದಾರೆ.

ಹಾಗೊಂದು ವೇಳೆ, ವ್ಯಕ್ತಿಯ ಮರಣ ದೃಢೀಕರಣದ ಪ್ರಮಾಣಪತ್ರ ನೀಡುವ ನೋಟರಿಯ ಅಧಿಕಾರಕ್ಕೆ ಕಾನೂನು ಮಾನ್ಯತೆ ಸಿಕ್ಕರೆ ಕಾನೂನು ವಲಯದಲ್ಲಿ ಭಾರಿ ತಲ್ಲಣಗಳು ಸೃಷ್ಟಿಯಾಗಲಿವೆ.

                                                                                                                                                                                                             -