ಮಂಗಳೂರು ಹಿಂಸಾಚಾರ; ಆರೋಪಿಗಳೆಲ್ಲರೂ ಮುಸ್ಲಿಂರು ಎನ್ನುತ್ತಿರುವ ಪೊಲೀಸರ ಕಾರ್ಯಸೂಚಿ ಹಿಂದೆ ಏನಿದೆ?

2,000ಕ್ಕೂ ಹೆಚ್ಚು ಮಂದಿ ಪ್ರತಿಭಟನಾಕಾರರು ಅಪರಿಚಿತರು ಎಂದು ಹೇಳಿರುವ ಬೆನ್ನಲ್ಲೇ ಅವರೆಲ್ಲರೂ ಮುಸ್ಲಿಂರು ಎಂದು ಪೊಲೀಸರು ಗುರುತಿಸಿದ್ದಾರೆ.

ಮಂಗಳೂರು ಹಿಂಸಾಚಾರ; ಆರೋಪಿಗಳೆಲ್ಲರೂ ಮುಸ್ಲಿಂರು ಎನ್ನುತ್ತಿರುವ ಪೊಲೀಸರ ಕಾರ್ಯಸೂಚಿ ಹಿಂದೆ ಏನಿದೆ?

ಮಂಗಳೂರು:ಕಳೆದ ಕೆಲ ದಿನಗಳ ಹಿಂದೆ ಮಂಗಳೂರಿನಲ್ಲಿ ನಡೆದ ಹಿಂಸಾಚಾರ ಪ್ರಕರಣದಲ್ಲಿ ಇಲ್ಲಿನ ಪೊಲೀಸರು ಪ್ರಧಾನಿ ಮೋದಿ ಅವರನ್ನೇ ಅನುಕರಿಸುತ್ತಿದ್ದಾರೆಯೇ ಎಂಬ ಅನುಮಾನಗಳು ವ್ಯಕ್ತವಾಗಿವೆ. ಇಡೀ ಪ್ರಕರಣದಲ್ಲಿ ಮಂಗಳೂರು ಪೊಲೀಸರು ಹೇಗೆ ಪಕ್ಷಪಾತದಿಂದ ನಡೆದುಕೊಳ್ಳುತ್ತಿದ್ದಾರೆ ಎಂಬ ಬಗ್ಗೆಯೂ ಒಂದಷ್ಟು ಚಿತ್ರಣಗಳು ನಿಚ್ಚಳವಾಗಿ ಗೋಚರಿಸಲಾರಂಭಿಸಿವೆ.

ಪ್ರತಿಭಟನಾಕಾರ ಪತ್ತೆಗೆ ಅವರು ಧರಿಸಿದ್ದ ಬಟ್ಟೆಯಿಂದ ಮೋದಿ ಗುರುತಿಸಿದ್ದರು ಎಂಬುದು ಚರ್ಚೆಗೆ ಕಾರಣವಾಗಿತ್ತು. ಇದೀಗ ಆ ಚರ್ಚೆಯನ್ನು ಮಂಗಳೂರು ಪೊಲೀಸರು ಮುಂದುವರೆಸಿದ್ದಾರೆ. ಡಿಸೆಂಬರ್‌ 19 ರಂದು ಹಿಂಸಾಚಾರಕ್ಕೆ ತಿರುಗಿದ್ದ ಪ್ರತಿಭಟನೆಗೆ ಸಂಬಂಧಿಸಿದಂತೆ ಒಟ್ಟು 24 ಮಂದಿ ವಿರುದ್ಧ ಎಫ್‌ಐಆರ್‌ ದಾಖಲಿಸಿದೆ. ಈ ಪೈಕಿ 6 ಮಂದಿಯನ್ನು ಅಪರಿಚಿತ ಮುಸ್ಲಿಂ ಯುವಕರು ಎಂದು ನಮೂದಾಗಿದೆ. ಇವರು ಕಾನೂನುಬಾಹಿರ ಚಟುವಟಿಕೆ, ಹಲ್ಲೆ, ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡಿದ್ದಾರೆ ಎಂದು ಮಂಗಳೂರು ಪೊಲೀಸರು ಎಫ್‌ಐಆರ್‌ನಲ್ಲಿ ಉಲ್ಲೇಖಿಸಿದ್ದಾರೆ.

ಅಲ್ಲದೆ ಇತರ ಆರೋಪಿಗಳ ವಿರುದ್ಧವೂ ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಮತ್ತು ದೇಶದ್ರೋಹದ ಪ್ರಕರಣವನ್ನೂ ದಾಖಲಿಸಿದ್ದಾರೆ. 2,000ಕ್ಕೂ ಹೆಚ್ಚು ಮಂದಿ ಪ್ರತಿಭಟನಾಕಾರರು ಅಪರಿಚಿತರು ಎಂದು ಹೇಳಿರುವ ಮಂಗಳೂರು ಪೊಲೀಸರು, ಅವರೆಲ್ಲರೂ ಮುಸ್ಲಿಂರು ಎಂದು ಗುರುತಿಸಿದ್ದಾರೆ.

ದೂರುದಾರರು ಕೊಟ್ಟಿರುವ ದೂರಿನ ಆಧಾರದ ಮೇಲೆ ಪೊಲೀಸರು ಎಫ್‍ಐಆರ್‍ ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ಸಲ್ಲಿಕೆಯಾಗಿರುವ 3 ದೂರುಗಳಲ್ಲಿನ ಹೇಳಿಕೆಗಳು ಹೇಗಿವೆ ಎಂದರೆ ವ್ಯಕ್ತಿ ಧರಿಸಿದ ಬಟ್ಟೆ, ಭಾಷೆಯಿಂದ ಅವರು ಮುಸ್ಲಿಂರು ಎಂದು ಗುರುತಿಸಲಾಗಿದೆ. ಇದರಿಂದ ದೂರು ನೀಡಿರುವವರು ಮುಸ್ಲಿಂರನ್ನು ಗುರಿಯಾಗಿಸಿಕೊಂಡಿರುವುದು ಸ್ಪಷ್ಟವಾಗಿ ಕಂಡು ಬರುತ್ತದೆ. ಅಥವಾ ಮಂಗಳೂರು ಪೊಲೀಸರು ಕೂಡ ಇಂತಹ ದೂರುಗಳಿಗೆ ಮನ್ನಣೆ ನೀಡಿದ್ದಾರೆಯೇ ಎಂಬ ಅನುಮಾನಗಳು ವ್ಯಕ್ತವಾಗುತ್ತವೆ.

ಈ ದೂರುಗಳನ್ನು ಉಲ್ಲೇಖಿಸಿರುವ ಎಫ್‌ಐಆರ್‌ಗಳಲ್ಲಿ ಮಾಡಿರುವ ಆರೋಪಗಳೆಲ್ಲವೂ ಆಧಾರ ರಹಿತವಾಗಿವೆ. ಈ ವಿಚಾರದಲ್ಲಿ ಮಂಗಳೂರು ಪೊಲೀಖಸರು ಕೋಮುವಾದಿ ವಿಧಾನ ಅನುಸರಿಸಿದ್ದಾರೆಯೇ ಎಂಬ ಅನುಮಾನಗಳು ಕಾಡತೊಡಗಿವೆ.

ಇನ್ನು, ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗುತ್ತಿರುವ ದೂರುಗಳ ಪೈಕಿ ಬಹುತೇಕ ದೂರುಗಳಲ್ಲಿ ಮಂಗಳೂರು ಪೊಲೀಸರ ಪಕ್ಷಪಾತ ಸ್ಪಷ್ಟವಾಗಿ ಎದ್ದು ಕಾಣುತ್ತಿದೆ.  ಜುಮಾ ಮಸೀದಿ ಬಳಿ ಅಂಗಡಿ ಮಾಲೀಕರೊಬ್ಬರು ಮುಸ್ಲಿಮ್‍ ಪುರುಷರ ತಂಡ ದಾಳಿ ಮಾಡಿದಾಗ ತನ್ನ ಅಂಗಡಿಯನ್ನು ಮುಚ್ಚಿತ್ತು ಎಂದು ತಾನು ನೀಡಿದ ದೂರಿನಲ್ಲಿ ತಿಳಿಸಿದ್ದಾನೆ. ದಾಳಿ ಮಾಡಿದವರನ್ನು ನೋಡಲು ಸಾಧ್ಯವಾಗಲಿಲ್ಲ ಎಂದು ಹೇಳಿರುವ ಅಂಗಡಿ ಮಾಲೀಕ, ಕೆಲವು ದಿನಗಳ ನಂತರ ತನ್ನ ಅಂಗಡಿಯ ಮೇಲೆ ದಾಳಿ ನಡೆಸಿದವರನ್ನು ಕಂಡು ಹಿಡಿದೆ ಎನ್ನುತ್ತಾರೆ.

ದಾಳಿ ಮಾಡಿದವರ ಗುರುತು ಹೇಗೆ ಖಚಿತಪಡಿಸುತ್ತಿರಾ ಎಂದು ಸುದ್ದಿ ಸಂಸ್ಥೆಯೊಂದು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಅಂಗಡಿ ಮಾಲೀಕ, ದಾಳಿ ನಡೆಸುವ ಸಮಯದಲ್ಲಿ ನಾನು ಇಲ್ಲದಿದ್ದರೂ, ಅವರು ಮುಸ್ಲಿಂ ಪುರುಷರು ಎಂದು ನನಗೆ ಖಾತ್ರಿಯಿದೆ" ಎಂದು ಖಚಿತವಾಗಿ ಹೇಳಿದ್ದಾರೆ.

ಹಾಗೆಯೇ ಅದೇ ಪೊಲೀಸ್ ಠಾಣೆಯಲ್ಲಿ ನೋಂದಾಯಿತವಾಗಿರುವ ಮತ್ತೊಂದು ಎಫ್‌ಐಆರ್‌ ಕೂಡ ದೂರಿನ ಸತ್ಯಾಸತ್ಯತೆಯನ್ನೇ ಒರೆಗೆ ಹಚ್ಚಿದೆ.  42 ವರ್ಷದ ಆಭರಣ ಅಂಗಡಿ ಮಾಲೀಕ ರವೀಂದ್ರ ನಿಕ್ಕಮ್ ಎಂಬುವರು ಮಂಗಳೂರಿನ ಭವಾನಿ ಬೀದಿಯಲ್ಲಿರುವ ರಾಜಲಕ್ಷ್ಮಿ ಜ್ಯುವೆಲ್ಲರ್ಸ್ ಹೆಸರಿನ ಅಂಗಡಿಯ ಮೇಲೆ ಸುಮಾರು 50-60 ಮುಸ್ಲಿಂ ಯುವಕರು ದಾಳಿ ನಡೆಸುತ್ತಿರುವುದು ಕಂಡು ಬಂದಿದೆ. ಅವರ ದೇಹ ಮತ್ತು ಭಾಷೆಯನ್ನು ಮೂಲಕ ಮುಸ್ಲಿಂರು ಎಂದು ಗುರುತಿಸಲು ಸಾಧ್ಯವಾಯಿತು ಹೇಳಿದ್ದಾರೆ.

ರವೀಂದ್ರ ನಿಕ್ಕಮ್‌ ಎಂಬುವರು ನೀಡಿರುವ ದೂರನ್ನೇ ಎನ್.ಮಹೇಶ್ ಅವರ ದೂರು ಕೂಡ ಹಿಂಬಾಲಿಸಿದಂತಿದೆ. ಮುಸ್ಲಿಂ ಪುರುಷರ ಒಂದು ದೊಡ್ಡ ಜನ ಸಮೂಹ ತನ್ನ ವಾಹನವನ್ನು ಸುತ್ತುವರೆದಿತ್ತು ಎಂದ ಆರೋಪಿಸಿರುವ ಮಹೇಶ್‌, ಡಿಸೆಂಬರ್ 19 ರಂದು ಮಧ್ಯಾಹ್ನ 3:45 ಕ್ಕೆ ಗಸ್ತು ಕರ್ತವ್ಯದಲ್ಲಿದ್ದಾಗ, ಸುಮಾರು 1500-2000 ಮುಸ್ಲಿಮ್‍ ಪುರುಷರ ಒಂದು ದೊಡ್ಡ ಜನಸಮೂಹ ತನ್ನ ವಾಹನವನ್ನು ಸುತ್ತುವರೆದು ದೊಡ್ಡ ಕಲ್ಲುಗಳು, ಕೋಲುಗಳು ಮತ್ತು ಸೋಡಾ ಬಾಟಲಿಗಳಿಂದ ದಾಳಿ ಮಾಡಿತು ಎಂದು ವಿವರಿಸಿದ್ದಾರೆ.

ಆದರೆ ಮಂಗಳೂರಿನಲ್ಲಿರುವ ಮಾನವ ಹಕ್ಕುಗಳ ಸಂಘಟನೆ ಕಾರ್ಯಕರ್ತರು ಇಂತಹ ದೂರುಗಳನ್ನು ಒಪ್ಪಿಲ್ಲ. ಮಂಗಳೂರಿನ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಹಲವು ವಿಡಿಯೋಗಳು ವೈರಲ್‌ ಆಗಿವೆ. ಪ್ರತಿಭಟನಾಕಾರನ್ನೇ ಗುರಿಯನ್ನಾಗಿಸಿಕೊಂಡಿರುವ ಪೊಲೀಸರು, ಗುಂಡು ಹಾರಿಸುತ್ತಿರುವುದನ್ನು ವಿಡಿಯೋ ಸಾಕ್ಷೀಕರಿಸುತ್ತಿವೆ. ಈ ಘಟನೆಯಲ್ಲಿ ಮಂಗಳೂರು ಪೊಲೀಸರು ಕೋಮುವಾದಿ ರೀತಿಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ ಎಂದು ಸಂತ್ರಸ್ತರ ಕುಟುಂಬಗಳು ಮತ್ತು ಮಂಗಳೂರಿನ ಮಾನವ ಹಕ್ಕು ಸಂಘಟನೆಗಳ ಕಾರ್ಯಕರ್ತರು ಆರೋಪಿಸಿದ್ದಾರೆ.

ಆದರೆ ಮಂಗಳೂರು ಪೊಲೀಸ್‌ ಕಮಿಷನರ್‌ ಹರ್ಷ ಅವರ ಸಮರ್ಥನೆಯೇ ಬೇರೆ ಇದೆ. ಈ ಪ್ರಕರಣದಲ್ಲಿ ಪೊಲೀಸ್‌ ಇಲಾಖೆ ಕೋಮುವಾದಿಯಾಗಿ ವರ್ತಿಸುತ್ತಿದೆಯೇ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಹರ್ಷ, ಪೊಲೀಸ್ ಇಲಾಖೆ ಯಾವುದೇ ಜಾತಿ, ಮತ ಅಥವಾ ಧರ್ಮದ ಬಗ್ಗೆ ಪಕ್ಷಪಾತವನ್ನು ತೋರಿಸುವುದಿಲ್ಲ. ಸಾಕ್ಷ್ಯಗಳ ಆಧಾರದ ಮೇಲೆ ವಿವರವಾದ ತನಿಖೆ ನಡೆಸಲಾಗುತ್ತದೆ, ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ವಾದಿಸಿದ್ದಾರೆ.

ಡಿಸೆಂಬರ್ 19 ರಂದು ಮಂಗಳೂರು ನಗರದಾದ್ಯಂತ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯನ್ನು ವಿರೋಧಿಸಿ ಪ್ರತಿಭಟನೆ ನಡೆಸಲು ಹೆಚ್ಚಿನ ಸಂಖ್ಯೆಯ ಜನರು ಜಮಾಯಿಸಿದ್ದರು. ಆದರೆ ಪ್ರತಿಭಟನೆಯ ಹಿಂದಿನ ರಾತ್ರಿ ರಾಜ್ಯ ಸರ್ಕಾರ ಸೆಕ್ಷನ್ 144 ಅನ್ನು ಜಾರಿ ಮಾಡಿತು. ರಾಜ್ಯಾದ್ಯಂತ ಬೃಹತ್‍ ಸಭೆಗಳು, ಪ್ರತಿಭಟನಾ ಮೆರವಣಿಗೆ ಅನುಮತಿ ನಿರಾಕರಿಸಲಾಗಿತ್ತು. ಇದು ಮಂಗಳೂರಿನಲ್ಲಿ ಮತ್ತಷ್ಟು ಗೊಂದಲಕ್ಕೆ ಕಾರಣವಾಯಿತು ಎಂದು ಹೇಳಲಾಗುತ್ತಿದೆ.

ಪೊಲೀಸರು ಗೋಲಿಬಾರ್‍ ನಡೆಸಲು ನಿರ್ಧರಿಸಿದ ನಂತರ ಪ್ರತಿಭಟನೆಯು ಹಿಂಸೆಗೆ ತಿರುಗಿತು. ಗಲಭೆಯಲ್ಲಿ ಇಬ್ಬರು ಯುವಕರು ಮೃತಪಟ್ಟಿದ್ದರು. ಇತರ ಮೂವರು ವ್ಯಕ್ತಿಗಳಿಗೆ ಗುಂಡು ತಗುಲಿ ಗಂಭೀರವಾಗಿ ಗಾಯಗೊಂಡಿದ್ದರು. ಗಾಯಾಳುಗಳು ಇನ್ನೂ ಆಸ್ಪತ್ರೆಗಳಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.