ನಾಗರಿಕ ಪೌರತ್ವ ಕಾಯಿದೆ: ಅಲೆಮಾರಿ, ಆದಿವಾಸಿಗಳ ಗತಿ ಏನು..?

ಯಾವುದೇ ದಾಖಲೆಯಿಲ್ಲದ, ನೆಲೆಯಿಲ್ಲದ ಈ ಅಲೆಮಾರಿ ಮೂಲನಿವಾಸಿಗಳ ಪರಿಸ್ಥಿತಿ ಏನು? ಯಾಕೆಂದರೆ ಈ ಕಾಯಿದೆಯ ಪ್ರಕಾರ ಪೌರತ್ವ ಸಾಭೀತುಪಡಿಸೋದು ಅವರು ಹುಟ್ಟಿದ ದಿನದ, ಹುಟ್ಟಿದ ಜಾಗದ ಆಧಾರದ ದಾಖಲೆಗಳ ಮೇಲೆ! ಆದರೆ ಈ ಸಮುದಾಯಗಳಿಗೆ ಈ ಮೂಲ ದಾಖಲಾತಿಗಳೇ ಇಲ್ಲ..!! ಹಾಗಾದರೆ ಇವರು ಈ ದೇಶದ ಪ್ರಜೆಗಳಾಗಿ ಜೀವಿಸಲು ಸಾಧ್ಯವಿಲ್ಲವೆ? ಈ ನತದೃಷ್ಟರ ಮುಂದಿನ ಭವಿಷ್ಯವೇನು..?

ನಾಗರಿಕ ಪೌರತ್ವ ಕಾಯಿದೆ: ಅಲೆಮಾರಿ, ಆದಿವಾಸಿಗಳ ಗತಿ ಏನು..?

ಮೊನ್ನೆಯಿಂದ ಕೊಡಗಿನ ಕೆಲವು ಆದಿವಾಸಿಗಳಿರುವ ಭಾಗಗಳಲ್ಲಿ ಸುತ್ತಾಡುತಿದ್ದೇನೆ. ನನ್ನ ಅರಿವಿಗೇ ಬಾರದಂತಹ ಕೆಲ ಆದಿವಾಸಿಗಳ ಹೆಸರುಗಳನ್ನು ಕಂಡು, ಕೇಳಿ ದಂಗುಬಡಿದು ಹೋದೆ! 'ಬೊನೆಪಟ್ಟ' ಎಂಬ  ಸಮುದಾಯದಲ್ಲಿ ಕೇವಲ‌ ಹದಿನೈದು ಜನರಿದ್ದಾರೆ! ಮಿಕ್ಕಂತೆ ಐರಿ, ಕೊಯವ, ಕಣಿಯ, ಬಣ್ಣ, ಮೇದ, ಬಾನಿಯ, ಕಾಪಾಳ, ಪಣಿಕ, ಕುಡಿಯ, ಮಾರಂಗಿ, ಕೆಂಬಟ್ಟಿ ಮುಂತಾದ ನೂರರಿಂದ ಇನ್ನೂರು ಜನಸಂಖ್ಯೆಯಿರುವ ಸುಮಾರು ಇಪ್ಪತ್ತು ಸಮುದಾಯಗಳಿವೆ.

ಇವರಲ್ಲಿ ಕೆಲವರು ಹೆಸರಿಗೆ ಪರಿಶಿಷ್ಟ ಜಾತಿಯಲ್ಲಿದ್ದರೆ ಮತ್ತೆ ಕೆಲವರು ಪರಿಶಿಷ್ಟ ವರ್ಗದ ಪಟ್ಟಿಯಲ್ಲಿದ್ದಾರೆ, ಮತ್ತೇ ಕೆಲವರು ಹಿಂದುಳಿದ ಪ್ರವರ್ಗ ಒಂದು ಮತ್ತು ಪ್ರವರ್ಗ 2(a) ಪಟ್ಟಿಯಲ್ಲಿದ್ದಾರೆ. ಇನ್ನೂ ಕೆಲವರು ಯಾವ ಪಟ್ಟಿಯಲ್ಲೂ ಇಲ್ಲ! 'ಐಂಬಕೊಲ್ಲು' ಎಂಬ ಸಮುದಾಯ ನಶಿಸಿಯೇ ಹೋಗಿದೆ(extinct)!!

ದುರಂತವೆಂದರೆ ಇಲ್ಲಿನ ಬುಡಕಟ್ಟು ಸಮುದಾಯಗಳವರು ಈವರೆಗೂ ತಮ್ಮ ಜಾತಿಪಟ್ಟಿ ಅಥವಾ ಪ್ರವರ್ಗಗಳಿಂದ ಶಿಕ್ಷಣಕ್ಕಾಗಲಿ, ಉದ್ಯೋಗಕ್ಕಾಗಲಿ ಯಾವುದೇ ರೀತಿಯ ಮೀಸಲಾತಿಯನ್ನೂ ಪಡೆದಿಲ್ಲ! ಸರ್ಕಾರದ ಯಾವ ಸವಲತ್ತನ್ನೂ ಪಡೆದಿಲ್ಲ, ಇವರಲ್ಲಿ ಯಾರೂ ನಾಲ್ಕನೇ ದರ್ಜೆಯ ಸಣ್ಣ ಸರ್ಕಾರಿ ಹುದ್ದೆಯನ್ನೂ ಪಡೆದಿಲ್ಲ!? ಯಾಕೆಂದರೆ ಇವರಿಗೆ ಜಾತಿ ಸಿಂಧುತ್ವ ಪ್ರಮಾಣಪತ್ರವೇ ಸಿಗುತ್ತಿಲ್ಲ!! ಇವರ ಬಳಿ ಇವರ ಇರುವಿಕೆಯನ್ನು ಸಾಬೀತುಪಡಿಸುವ ಯಾವುದೇ ಸರ್ಕಾರಿ ದಾಖಲೆಗಳೇ ಇಲ್ಲ! ಹಾಗೆ ನೋಡಿದರೆ ಇವರಿಗೆ ಅಸ್ತಿತ್ವವೇ ಇಲ್ಲ! ಇವರಿಗೆ ವಿಳಾಸವೂ ಇಲ್ಲ! ಇವರ ಅಸ್ತಿತ್ವವನ್ನು ನಿರೂಪಿಸುವ ಯಾವುದೇ ದಾಖಲಾತಿಗಳ ಅಸ್ಮಿತೆ(identity)ಯೇ ಇಲ್ಲ!!

ಈ ಹಿನ್ನೆಲೆಯಲ್ಲಿ ಇವರು ರಾಷ್ಟ್ರೀಯ ಪೌರತ್ವ ಕಾಯಿದೆ ಅಥವಾ ಪೌರತ್ವ ತಿದ್ದುಪಡಿ ಕಾಯಿದೆಗಳ ಮೂಲಕ ತಮ್ಮ ಪೌರತ್ವವನ್ನು ಸಾಭೀತುಪಡಿಸಬೇಕು!? ಮೂಲಭೂತವಾಗಿ ಇವರಲ್ಲಿ ಯಾರೂ ಮುಸ್ಲಿಮರಿಲ್ಲ! ಇತರೆ ಯಾವುದೇ ಧರ್ಮೀಯರೂ ಅಲ್ಲ, ಇವರು ಇಲ್ಲಿನ ನೆಲಕ್ಕೆ ಸೇರಿದ ಬುಡಕಟ್ಟುಗಳು, ಇಲ್ಲಿನ ಮೂಲನಿವಾಸಿಗಳು, ಆದರೆ ದಾಖಲಾತಿಗಳಿಲ್ಲದ ಕಾರಣಕ್ಕೆ ಈ ಕಾಯಿದೆಗಳ ಪ್ರಕಾರ ಇವರು ಅಕ್ರಮ ವಲಸಿಗರಾಗುತ್ತಾರೆ! ಇನ್ನು ಮುಂದೆ ಇವರು 'ವಲಸಿಗರ ಕೇಂದ್ರ'ದಲ್ಲಿ ಕೊಳೆಯಬಹುದು!  ನೆಮ್ಮದಿಯ ವಿಷಯವೆಂದರೆ ಇವರಿಗೆ ಈ ಯಾವುದೇ ಅಪಾಯಗಳು, ಹುನ್ನಾರಗಳ ಪರಿವೆಯೇ ಇಲ್ಲದಿರುವುದು!! ignorance is the bliss ಎನ್ನುವಂತೆ ಮುಗ್ಧರಾಗಿ, ಅಮಾಯಕವಾಗಿ ಜೀವಿಸುತಿದ್ದಾರೆ! ಇವರಲ್ಲನೇಕರು ಮೊನ್ನೆಯ ಚುನಾವಣೆಯಲ್ಲಿ ಅಪಾರ 'ದೇಶಭಕ್ತಿ'ಯಿಂದ ಬಿಜೆಪಿಗೇ ಮತ ಹಾಕಿದ್ದಾರೆ! ಆದರೆ, ಬಿಜೆಪಿ ಸರ್ಕಾರ ಇವರ ಕತ್ತಿಗೆ ಕತ್ತಿ ಇಟ್ಟಿರುವುದೇ ಇವರ ಅರಿವಿಗೆ ಬಂದಿಲ್ಲ!!

ಇದು ಕರ್ನಾಟಕದ ಒಂದು ಸಣ್ಣ ಜಿಲ್ಲೆಯ ಕತೆಯಷ್ಟೇ! ಪ್ರತಿದಿನ ರಾಜ್ಯಾದ್ಯಂತ ಅನೇಕ ಅಲೆಮಾರಿಗಳು, ಅದರಲ್ಲೂ ದಕ್ಕಲಿಗರು, ದರ್ವೇಸಿಗಳು, ಡೊಂಬಾರಿಗಳು, ಸುಡುಗಾಡುಸಿದ್ದರು, ಸಿಂದೊಳ್ಳು, ಡವರಿಗಳು, ಕರಕರಮುಂಡೇರು, ಭಂಗಿಗಳು, ಜಾತಗಾರರು, ದುರ್ಗಾಮುರ್ಗೇರು, ಸೋಲಿಗರು, ಜೇನು ಕುರುಬ, ಬೆಟ್ಟ ಕುರುಬರು, ಮನ್ಸರು, ಕುಣಬಿಯರು, ಕೊರಗರು,  ದೊಂಬಿದಾಸರು, ಚೆನ್ನದಾಸರು, ಮಾಲದಾಸರು, ಕಿಂದರಜೋಗಿಗಳು, ಡಬ್ಬಾ ಜೋಗಿಗಳು, ಕೊರಮಕೊರಚರು, ಶಿಳ್ಳೇಕ್ಯಾತರು, ದೊಂಬರು, ಹಂದಿಜೋಗಿಗಳು, ಹಕ್ಕಿಪಿಕ್ಕರು, ಹಲಾಲ್ ಕೋರರೇ ಮುಂತಾದ ಅನೇಕ ಅಸಂಖ್ಯಾತ ಅಲೆಮಾರಿ, ಬುಡಕಟ್ಟು ಸಮುದಾಯಗಳು ತಮ್ಮ ಜಾತಿ ಸರ್ಟಿಫಿಕೇಟ್ ಗಾಗಿ ಆಫೀಸುಗಳ ಕಂಬ ಕಂಬ ಸುತ್ತಿ ಕಡೆಗೆ  ತಮಗೆ ಜಾತಿ ಸರ್ಟಿಫಿಕೇಟ್ ಕೊಡುತ್ತಿಲ್ಲವೆಂದು ದೂರುತ್ತಾ ನಮ್ಮ ಕಛೇರಿಗೆ ಬರುತ್ತಾರೆ! ಈ ಜಾತಿ ಸಿಂಧುತ್ವ ಪ್ರಮಾಣಪತ್ರ ಕೊಡದೇ ಇರಲು ಕಾರಣ‌ ಈ ಅಲೆಮಾರಿ ಅಥವಾ ಆದಿವಾಸಿಗಳು ಸಂಬಂಧಪಟ್ಟ ಅಧಿಕಾರಿಗಳಿಗೆ ಹುಟ್ಟಿದ ದಿನಾಂಕದ ಪ್ರಮಾಣ ಪತ್ರ(birth certificate) ನೀಡದಿರುವುದು!? ಇದಕ್ಕೆ ಕಾರಣವೇನೆಂದರೆ ಈ ಅಲೆಮಾರಿಗಳು ಯಾವ ಊರಿನ ರೈಲ್ವೇ ಸ್ಟೇಷನ್, ಬಸ್ ಸ್ಟ್ಯಾಂಡ್, ಸ್ಮಶಾನ, ಕೊಳಚೆ ಪ್ರದೇಶ ಮುಂತಾಗಿ ಯಾವ ಕೇರಿಯ ಯಾವ ಬೀದಿ ಬದಿಯಲ್ಲಿ, ಎಂದು ಹುಟ್ಟಿದ್ದಾರೆಂಬುದೇ ಅವರನ್ನು ಹೆತ್ತವರಿಗೇ ಗೊತ್ತಿಲ್ಲ!? ಅವರನ್ನು ಹೆತ್ತವರು ಅಪ್ಪಟ ಅನಕ್ಷರಸ್ತರು! ಪೇಪರ್, ಪೆನ್ನುಗಳನ್ನೇ ಕಾಣದವರು! ಅಕ್ಷರದಿಂದ ವಂಚಿತರಾದವರು! ಇಂತವರು ಅವರ ಮಕ್ಕಳ ಹುಟ್ಟಿದ ದಿನಾಂಕವನ್ನು ಎಲ್ಲಿ ದಾಖಲಿಸಬೇಕು? ಹೇಗೆ ನೆನಪಿಟ್ಟುಕೊಳ್ಳಬೇಕು..?

ಇವರದೇ ಹುಟ್ಟಿದ ದಿನಾಂಕದ, ಹುಟ್ಟಿದ ಸ್ಥಳದ ದಾಖಲೆಗಳಿಲ್ಲದೆ ಪರದಾಡುವಾಗ NRC ಮತ್ತು NPR ಗಳು ಇವರನ್ನು ಹೆತ್ತವರ ಹುಟ್ಟಿದ ದಿನಾಂಕಗಳನ್ನು ಮತ್ತು ಊರಿನ ದಾಖಲೆಗಳನ್ನು ಕೇಳುತ್ತವೆ!? ಇವನ್ನು ಎಲ್ಲಿಂದ ತಂದುಕೊಡಬೇಕು?NPR ಅನ್ನು ಜಾರಿಗೆ ತರಲು ಕಳೆದ ಸೋಮವಾರ ಕೇಂದ್ರ ಸರ್ಕಾರ ಮದ್ಯಪ್ರದೇಶದಲ್ಲಿ 3,941.35 ಕೋಟಿ ಹಣವನ್ನು ಮೊದಲ ಕಂತಾಗಿ ಬಿಡುಗಡೆ ಮಾಡಿದೆ. ಇಲ್ಲಿ ಏಳರಿಂದ ಎಂಟು ಪರ್ಸೆಂಟ್ ಅಲೆಮಾರಿಗಳಿದ್ದಾರೆ(notified and denotified tribes) ಇದರಲ್ಲಿ 51 ಜಾತಿಗಳಿವೆ. ಇದು ಕೇವಲ ಮದ್ಯಪ್ರದೇಶದ ಮೂಲಕ ನಮ್ಮ ಅರಿವಿಗೆ ಬಂದ ವಿಷಯ. ಹಿಂದೆ ಜಾರಿಯಲ್ಲಿದ್ದ criminal tribes act 1871 ಹಿನ್ನೆಲೆಯಲ್ಲಿ  ಕೇಂದ್ರ ಸರ್ಕಾರಕ್ಕೆ NT(notified tribes) ಮತ್ತು DNT(denotified tribes) ಸಂಭಂದಿಸಿದಂತೆ ವಿಮುಕ್ತ ಅಪರಾಧಿ ಬುಡಕಟ್ಟುಗಳ ಕುರಿತಂತೆ 'ಬಾಲಕೃಷ್ಣ ರೇಣುಖೆ ಆಯೋಗ' ವರದಿ ಕೊಟ್ಟಂತೆ ಇಡೀ ಭಾರತದಲ್ಲಿ ಹನ್ನೊಂದು ಕೋಟಿ ಜನ NT ಮತ್ತು DNT ಗೆ ಸೇರಿದ ಅಲೆಮಾರಿ ಬುಡಕಟ್ಟು ಜನರಿದ್ದಾರೆ. ಇವರಿಗೆ ಮನೆ ಇಲ್ಲ, ನೆಲೆ ಇಲ್ಲ, ಭೂಮಿ ಇಲ್ಲ, ಬ್ಯಾಂಕ್ ಅಕೌಂಟ್ ಇಲ್ಲ! ಸುಮಾರು ಶೇ. 25 ರಿಂದ 30% ಜನಕ್ಕೆ ರೇಷನ್ ಕಾರ್ಡ್, ಆಧಾರ್ ಕಾರ್ಡ್ ಗಳಿವೆ.

ಇದು ಇಡೀ ದೇಶದ‌ ಅಲೆಮಾರಿ ಬುಡಕಟ್ಟುಗಳ ಪರಿಸ್ಥಿತಿ! ಹೀಗಿರುವಾಗ ಇನ್ನೇನು ಮೊದಲ ಹಂತದ NPR 2020 ಜಾರಿಯಾಗಲಿದೆ. ಯಾವುದೇ ದಾಖಲೆಯಿಲ್ಲದ, ನೆಲೆಯಿಲ್ಲದ ಈ ಅಲೆಮಾರಿ ಮೂಲನಿವಾಸಿಗಳ ಪರಿಸ್ಥಿತಿ ಏನು? ಯಾಕೆಂದರೆ ಈ ಕಾಯಿದೆಯ ಪ್ರಕಾರ ಪೌರತ್ವ ಸಾಬೀತುಪಡಿಸೋದು ಅವರು ಹುಟ್ಟಿದ ದಿನದ, ಹುಟ್ಟಿದ ಜಾಗದ ಆಧಾರದ ದಾಖಲೆಗಳ ಮೇಲೆ! ಆದರೆ ಈ ಸಮುದಾಯಗಳಿಗೆ ಈ ಮೂಲ ದಾಖಲಾತಿಗಳೇ ಇಲ್ಲ..!! ಹಾಗಾದರೆ ಇವರು ಈ ದೇಶದ ಪ್ರಜೆಗಳಾಗಿ ಜೀವಿಸಲು ಸಾಧ್ಯವಿಲ್ಲವೆ? ಈ ನತದೃಷ್ಟರ ಮುಂದಿನ ಭವಿಷ್ಯವೇನು..?

ಇಂತಹ ಅಮಾಯಕರು ಈ ಭಯಂಕರ ಕಾಯಿದೆಗಳಿಂದ ಬಚಾವಾಗಲು ಸಾಧ್ಯವೇ ಇಲ್ಲ ಎಂಬುದನ್ನು ಈ ಕಾಯಿದೆಗಳನ್ನು ಬೆಂಬಲಿಸುವವರು ಯಾರೂ ಹೇಳುತ್ತಿಲ್ಲ! ಇದು ಕೇವಲ ಹೊರಗಿನಿಂದ ಬಂದ ಮುಸಲ್ಮಾನರಿಗೆ ಮಾತ್ರ ಅನ್ವಯಿಸುತ್ತದೆ ಎಂಬ ಸುಳ್ಳನ್ನು ವ್ಯವಸ್ಥಿತವಾಗಿ ಪ್ರಚಾರ ಮಾಡುತಿದ್ದಾರೆ.  NRC ಯನ್ನು ಜಾರಿಗೆ ತರುವ ಮೊದಲ ಹಂತವಾಗಿ NPR 2020ರ ಏಪ್ರಿಲ್ ನಿಂದ ಪ್ರಾರಂಭವಾಗಲಿದೆ.  ಮುಖ್ಯವಾಗಿ NRC ಯಡಿ ಮುಸ್ಲಿಮರು ಮಾತ್ರವಲ್ಲದೆ  ಈ ದೇಶದ 134 ಕೋಟಿ ದೇಶವಾಸಿಗಳೂ ಬಿಜೆಪಿ ಸರ್ಕಾರ ನಿಗದಿಪಡಿಸುವ ದಾಖಲೆಗಳನ್ನು ಒದಗಿಸಿ ನಾಗರಿಕತ್ವ ಸಾಬೀತು ಮಾಡಬೇಕಿದೆ. ಈ ಸತ್ಯವನ್ನು ಮರೆಮಾಚಿ 'ಇದು ಕೇವಲ ಪರದೇಶಿ ಮುಸಲ್ಮಾನರಿಗೆ‌ ಅನ್ವಯವಾಗುತ್ತದೆಂದು' ಹಸಿಹಸೀ ಸುಳ್ಳು ಹೇಳುತಿದ್ದಾರೆ! 

ಅಸ್ಸಾಮಿನ ಉದಾಹರಣೆಯನ್ನು ನೋಡಿದರೆ ನಮಗೆ ಸತ್ಯದರ್ಶನವಾಗುತ್ತದೆ!? ಅಸ್ಸಾಮಿನಲ್ಲಿ ಸರ್ಕಾರ ಕೇಳಿದ ದಾಖಲೆಗಳನ್ನು ಒದಗಿಸಲಾಗದೆ ಅಕ್ರಮ ವಲಸಿಗರೆಂದು ಘೋಷಿಸಲ್ಪಟ್ಟ 19 ಲಕ್ಷ ಜನರಲ್ಲಿ 5 ಲಕ್ಷ ಮುಸ್ಲಿಮರಾದರೆ 14 ಲಕ್ಷ ಜನ ಹಿಂದೂಗಳು ಎನ್ನುವುದನ್ನು ಮರೆಯಬಾರದು! ಈ ಹಿಂದೂಗಳಲ್ಲಿ ದಾಖಲಾತಿಗಳಿಲ್ಲದವರು ಎಂದರೆ ಈ ಆದಿವಾಸಿಗಳು, ಬುಡಕಟ್ಟುಗಳು, ಅಲೆಮಾರಿಗಳಲ್ಲದೆ ಮತ್ಯಾರಿರಲು ಸಾದ್ಯ? ಮುಸಲ್ಮಾನರ ಹೆಸರಲ್ಲಿ ದಮನಿತರಾದ ಬುಡಕಟ್ಟುಗಳಾದ ಅಲೆಮಾರಿ, ಆದಿವಾಸಿಗಳನ್ನೂ ಕೂಡ ನೆಲೆಯಿಲ್ಲದಂತೆ ಮಾಡುತ್ತಿರುವ ಈ ಜನದ್ರೋಹಿ, ದೇಶದ್ರೋಹಿ ಹುನ್ನಾರವನ್ನು ಅರಿತು, ನಾವೂ ಸಹ ಈ ಅಪಾಯಕಾರಿ, ಅಮಾನವೀಯ ಕಾಯಿದೆಗಳ ವಿರುದ್ದ ಸೆಟೆದು ನಿಂತು ಹೋರಾಟ ಮಾಡಿ ನಮ್ಮ ಅಸ್ಮಿತೆಗಳೊಂದಿಗೆ ಈ ದೇಶದ ಅಸ್ಮಿತೆಯನ್ನೂ ರಕ್ಷಿಸಬೇಕಿದೆ..!