ಚುನಾವಣೆ ಮುಂದೂಡಿದ್ಯಾರೋ... ರಂಗಾ...! ಮತ್ತೆ ಚುನಾವಣೆಯ ದಿನಾಂಕ ನಿಗಿದಿಪಡಿಸಿದವರ್ಯಾರೋ ಮಂಗಾ....?

ಅಲ್ರೀ, ಕಾಕಾ..... "ಈ ರಾಮ್ಲು ಅಣ್ಣಾ..... ಆರೋಗ್ಯ ಇಲಾಖೆ ಮಂತ್ರಿ ಆದ ಮ್ಯಾಲ್ ಹೊಸ್ದಾಗಿ ಆದೇಶ ಮಾಡೇತಲ್ರೀ,  ಇನ್ ಮ್ಯಾಕ್ ಸರ್ಕಾರಿ ಡಾಕ್ಟರ್ ಖಾಸ್ಗಿ ಆಸ್ಪತ್ರಿ ನಡ್ಸೋಂಗಿಲ್ಲ!. ಒಂದವೇಳ್ಯಾ ನಡ್ಸಿದ್ರ...ಅಂತಾ ಡಾಕ್ಟರ್‍ಗಳ ಸೌಲಭ್ಯಾನ ಕಟ್ಟ ಮಾಡ್ತವಿ ಅಂತ್ ಹೇಳೇತಿ. ಇದು ಜಾರಿಗೆ ಬರೋದ ಅಷ್ಟ ಸುಲ್ಬಾ ಅಂತಿರೇನು"?

ಚುನಾವಣೆ ಮುಂದೂಡಿದ್ಯಾರೋ... ರಂಗಾ...! ಮತ್ತೆ ಚುನಾವಣೆಯ ದಿನಾಂಕ ನಿಗಿದಿಪಡಿಸಿದವರ್ಯಾರೋ ಮಂಗಾ....?

ಏನ್ರೀ ಕಾಕಾ ಇದು.... ಏನ್ ನಡ್ಯಾಕ ಹತ್ತೇತಿ ನಮ್ಮ ದೇಶದೊಳ್ಗ್!. ಒಂದು ತಿಳಿಲಿಲ್ದಂಗ್ ಆಗೇತಿ..!. ಅಲ್ಲಾ "ಉಪಚುನಾವಣೆ ನಡ್ಸ್ರೀ ಅಂತ್ ಯಾರರ ಚು....ಆಯೋಗಕ್ಕ ಮನ್ವಿ ಮಾಡಿಕೊಂಡಿದ್ರ"..... ಇಲ್ಲಾ,  "ಚುನಾವಣಾ ದಿನಾಂಕ್ ನಿಗ್ದಿ ಮಾಡಿದವ್ರೂ ಕೋರ್ಟಿನ್ಯಾಗ ಕೇಸ್ ನಡ್ಯಾಕಹತ್ತೇತಿ ಅಂತ್ ಒಮ್ಮೆಲೇ ಸದ್ಯಕ್ ಉಪಚುನಾವಣೆ ದಿನಾಂಕ ಮುಂದೂಡಲಾಗಿದೆ ಅಂತ್ ಹೇಳಿದವ್ರು", "ಈಗ ಮತ್ತೆ ಡಿಸೆಂಬರ್ ಐದಕ್ಕ ಉಪಚುನಾವಣೆ ಅಂತ್ ದಿನಾಂಕ ಘೋಷ್ಣೆ ಮಾಡಾರಲ್ಲ ಈ ಚು... ಆಯೋಗದವ್ರು,  ಜನ್ರನ್ ಏನಂತ ತಿಳ್ಕಂಡಾರ ಇವ್ರು....?

ಯಾಕೋ ಬಾಳಾ ಕಾವುನ್ಯಾಗ ಅದಿಯಲ್ಲೋ ಬಸಣ್ಣಾ, ಬಾ ಇಲ್ಲೆ.  "ಅಲ್ಲೋ ಇಂತಾವೆಲ್ಲಾ ಪ್ರಶ್ನೆನ ಊರಾಗ ಎತ್ತಬ್ಯಾಡಾ ಅಂತ್ ಎಷ್ಟ ಸಲಾ ಹೇಳಿಲ್ಲಾ ನಿನ್ಗ"!. "ಇವೆಲ್ಲಾ ದೊಡ್ಡ ದೊಡ್ಡರ ವಿಚಾರಾ ಇವು"!. "ನನ್ಗ-ನಿನ್ಗ ಇವು ಅನ್ವಯಿಸಂಗಿಲ್ಲ ಬಿಡು. ಅಷ್ಟಕ್ಕೂ ನಾವೇನ ಇಲೇಕ್ಷನ್ಗೆ ನಿಲ್ಲೋರ ಹೇಳು!. ಹಾಳಾಗಿ ಹೋಗ್ಲಿ ಬಿಡು... ಯಾವಾಗರ ಯಾಕ ಇಲೆಕ್ಷನ್ ಮಾಡ್ಲಿ, ಯಾವಾಗರ ದಿನಾಂಕ ಮುಂದೂಡ್ಲಿ ಏನಾಗಬೇಕಾಗೇತಿ"..?

ಹಂಗ್ ಅಂದ್ರ ಹೆಂಗ್ಯರೀ ಕಾಕಾ.... "ಇಲೇಕ್ಷನ್ ವಿಷ್ಯಾದಾಗ ಹುಡ್ಗಾಟ ಆಡಬರ್ದು ನೋಡ್ರೀ".....!. "ಅಕ್ಟೋಬರ್ 21ಕ್ಕ ಇಲೇಕ್ಷನ್ ಅಂತ" ಈ ಚು.... ಆಯೋಗದವ್ರು ಹೇಳಿದ್ದ್ರಿಂದಾ ನಾನು ಇಲ್ಷೇಕ್ಷನ್ಯಾಗ್ ಒಂದ್ ಕೈ ನೋಡಿದ್ರಾತು ಅಂತ್ ಉಪಚುನಾವಣೆ ಘೊಷ್ಣಾಮಾಡಿದ್ದ 15ಕ್ಷೇತ್ರದಾಗೂ ಒಂದ್ ರೌಂಡ್ ಹೊಡ್ಕಂಡ್ ಬಂದಿದ್ದೆ"!.  "ಅಷ್ಟು ಸುಲಭಕ್ಕ ಯಾವ್ ಕ್ಷೇತ್ರಾನು ಅಟೆಂಗಿಲ್ಲ ಅನ್ನೋದನ್ ತಿಳ್ಕೊಂಡು ಇದ್ದಿದ್ರಾಗ ರಾಣೇಬೆನ್ನೂರು ಕ್ಷೇತ್ರ ಬೇಶೈತಿ ಅಂತ್ ಅಲ್ಲೆ ಒಂದ ಕೈ ನೋಡಿದ್ರಾತು ಅಂತ್ ತಯಾರಾಗಿದ್ದೆ"?,  ಯಾವಾಗ ಈ ಚು..... ಆಯೋದವ್ರು ಚುನಾವಣೆ ದಿನಾಂಕ್ ಮುಂದೂಡಲಾಗಿದೆ ಅಂತ್ "ಛೂ"...ಬಿಟ್ರೋ ಅಲ್ಗೆ ನಾನು "ಚುನಾವಣಾ ಸಹವಾಸ ಬ್ಯಾಡ ತಗಿ ಅಂತ್ !ಬಂದ್ ಊರ್ ಸೇರ್ಕೊಂಡಿದ್ದೆ", "ಖಾದಿ ಅಂಗಿ-ಅನ್‍ಸೈಜ್ ಖಾದಿ ಚೊಣ್ಣಾ ಮಡ್ಚಿಟ್ಟಿದ್ದೆ". "ಊರಿಗೆ ಬಂದು ಇನ್ನು ನಾಲ್ಕ ತಾಸಾಗಿಲ್ಲ ಮತ್ತ ಉಪಚುನಾವಣೆ ಡಿಸೆಂಬರ್ ಐದಕ್ಕ ಅಂತ್ ಚು... ಆಯೋಗದವ್ರು ಛೂ ಬಿಟ್ಟಿರೋದನ್ನ ಟಿವಿಯೋಳ್ಗ, ಪೇಪರ್ನಾಗ ನೋಡಿ ತಲಿ ಕೆಟ್ಟಹೋಗೇತಿ ನೋಡ್ರೀ"!...ಚುನಾವಣೆಗೆ ನಿತ್ಗಾಬೇಕೋ. ಬಿಡಬೇಕೋ ಒಂದು ತಿಳಿಲಿಲ್ದಂಗ್ ಆಗಿ ತಲಿ ಅನ್ನೋದ ಕೆಟ್ಟ ಮಸರಗಡ್ಗಿ ಆಗೇತಿ ನೋಡ್ರೀ...!.

ಅಲ್ಲೋ ಚುನಾವಣೆ ಮುಂದೂಡಿ ಮತ್ತ ದಿನಾಂಕ್ ನಿಗ್ದಿ ಪಡ್ಸಿದ್ದಕ್ ನಿ ಹಿಂಗ್ ಅಂತೀ....? "ಆದ್ರ ಪಾಪಾ ನಮ್ಮ ರಾಜಕೀಯ ಪಕ್ಷದವ್ರು, "ಕೈ" "ಹೊರಿ ಒಕ್ಕಟ್ಟು..  ಕಮಲಾ ಹಿಡ್ದು, ಅದ್ನ ಬಿಟ್ಟು ಮತ್ತಿನ್ನೇನೋ ಹಿಡ್ದವ್ರ ಪಾಡು ಏನಾಗಿರಬ್ಯಾಡ್" !. ಸ್ವಲ್ಪ ಯೋಚ್ನಾ ಮಾಡಿ ಏನೋ ಕಬರಗೇಡಿ. "ಅವ್ರು ಈಗಾಗ್ಲೆ ಕಂಡಾ ಬಟ್ಟೆ ರೊಕ್ಕಾ ಖರ್ಚುಮಾಡ್ಯಾರಲೇ ಅವ್ರು, ನಿಂದೇನು ಮಾಹಾ ಬಾಳಾಂದ್ರ ಒಂದೈವತ್ತ ಸಾವ್ರಾ ಖರ್ಚಾಗಿರಬೋದು"....?

"ಏನ್ರೀ ಕಾಕಾ ಹಿಂಗಂದ್ ಬಿಟ್ರೀ....ಅಲ್ರೀ..ನಾ ಒಬ್ಬ ಸಾಮಾನ್ಯ ಮನ್ಷ್ಯಾ ಅದೇನ್ರೀ"?..." ರಾಜಕೀಯ ಪಕ್ಷದವ್ರಿಗೇನ್ರೀ ಎಲ್ಲಿಂದರ್ ಬರತೈತಿ .ರೊಕ್ಕಾ"!. "ನಂದ ಹಂಗಲ್ರೀ... ಹೊಲಾ ಮಾರಿದ್ದ ರೊಕ್ಕರೀ ಅದು!,  ನಮ್ಮ ಅಪ್ಪಾ...ಕಷ್ಟಾ ಪಟ್ಟು ದುಡ್ದ ಗಳ್ಸಿದ್ದ ಮೂರು ಎಕ್ರೆ ಹೊಲಾ ಮಾರಿ   ಇಲೇಕ್ಷನ್ಗೆ ನಿತಗೊಳ್ಳಾಕ ಹೊಂಟಿದ್ದೆ ನೋಡ್ರೀ"...

"ಅಲ್ಲಲೇ ನಿನ್ನ ಕೈಯಾಗ ಕಡ್ಡಿಕೊಟ್ಟ್ ಹೇಳಿದ್ದೆ, ಲೇ ತಮ್ಮಾ ಇಲೇಕ್ಷನ್ ಸಹವಾಸಕ್ಕ ಹೋಗಬ್ಯಾಡ್!. ಇಲೇಕ್ಷನ್ ನಮ್ಮಂತವ್ರಿಗೆ ಅಲ್ಲ", "ಇರೋ ರೊಕ್ಕಾನ ಮಕ್ಕಳ-ಮರಿ ಹೆಸ್ರಿಗೆ ಬ್ಯಾಂಕಿನ್ಯಾಗ ಇಟ್ಟು ಸುಮ್ಕ ಇರು ಅಂತ್"!. ಮತ್ತ ಇಲೇಕ್ಷನ್ ಸುದ್ದಿ ತಗದಿಯಾ ಮಗ್ನ....?

"ಅಲ್ರೀ ಕಾಕಾ ಇಲೇಕ್ಷನ್ ಸುದ್ದಿ ಬಿಟ್ರ.... ಬ್ಯಾರೇ ಏನೈತಿ ಹೇಳ್ರೀ"...?. ಏನು ಇಲ್ಲಾ...!. ನನ್ಗ ಒಂದು ತಿಳಿವಲ್ದು..? "ಈ ಚು ಆಯೋಗದ್ವರು ಯಾಕ ಚುನಾವಣಾ ದಿನಾಂಕ್ ನಿಗ್ದಿ ಮಾಡಿದ್ರು.....! "ಮತ್ಯಾಕ ದಿನಾಂಕ್ ಮುಂದೂಡಿದ್ರು", "ಈಗ ಮತ್ಯಾಕ ಚುನಾವಣಾ ಘೋಷ್ಣಾ ಮಾಡಿದ್ರು ಅಂತ್".?

"ನಿನ್ಗ ಅಲ್ಲೋ... ತಂದೆ, ಯಾರ್ಗೀ ಗೊತ್ತಾಗವಲ್ದು!.... ಅದು ಭಾರಿ ಚಿದಂಬರ್‍ರಹಸ್ಯ"!. "ಈ ರಹಸ್ಯಾದ ಹಿಂದಿನ ಸತ್ಯಾ ಕೇಳಬೇಕಂದ್ರ, ಪೂರ್ಣಚಂದ್ರ ತೇಜಸ್ವಿಯವ್ರು ಇಲ್ಲಾ"!. "ಅವ್ರೇನಾದ್ರು ಇದ್ದಿದ್ರ ನಾವು ಕೇಳದ್ಕಿಂತಾ ಮೊದ್ಲ ಅವ್ರು ಈರಹಸ್ಯಾನ ಬಿಡ್ಸಿ ಹೇಳತಿದ್ರು".. "ಆದ್ರ  ಈ ಪುಣ್ಯಾತ್ಮ ಪೂರ್ಣಚಂದ್ರ ಕಣ್ಮರೆ ಆದ ಮ್ಯಾಕ್ ಬರಿ ಅಮಾಸಿ ಚಂದ್ರನಹಂಗ್ ಕಾಣೋ ಮುಸ್ಡಿನ ಬಾಳಾ ಕಾನಾಕ ಹತ್ಯಾವು"...?

ಅಂದಂಗ್ ಕಾಕಾರ ತೇಜಸ್ವಿ ಅಂದಕೂಡ್ಲ ನನ್ಗ ನೆನ್ಪಾತು ನೋಡ್ರೀ...!, "ಹೋದವಾರ್ ಚಿಕ್ಕೋಡಿಗೆ ಬಂದಿದ್ದನಂತಲ್ಲರೀ ಬೆಂಗಳೂರ ದಕ್ಷ್ಣಿ ಎಂಪಿ ತೇಜಸ್ವಿ ಅನ್ನೋ ಮನ್ಷ್ಯಾ.... ಅವಾ ಹೊಟ್ಟಿಗೇನು ತಗೊಳ್ಳತಾನೋ ಏನು?.ಗೊತ್ತಿಲ್ರೀ". ಆದ್ರ ಅನ್ನಾ ತಿನ್ನೋಬಾಯಾಗ್ ಯಂತಾ ಹೊಲ್ಸ್ ಮಾತಾಡ್ಯಾನ ಅಂತೀರಿ"!....  "ಅಲ್ರೀ ರಾಜ್ಯದಾಗ ಪ್ರವಾಹ ಬಂದು, ಜನಾ ಮನಿ-ಮಠ ಕಳ್ಕೊಂಡು ಹೊಟ್ಟಿಗೆ ಹಿಟ್ಟು ಇಲ್ದಂಗ್ ಕಂಗಾಲಾಗ್ಯಾರ್". ಇಂತಾ ಹೊತ್ತಿನ್ಯಾಗ ಈ ಮನ್ಷ್ಯಾ "ಕೇಂದ್ರ ಸರ್ಕಾರ ಇಂತಾವಕ್ ಎಲ್ಲಾ ರೊಕ್ಕಾ ಕೊಡೋದಿಲ್ಲ", "ರಾಜ್ಯ ಸರ್ಕಾರದಾಗ ಸಾಕಷ್ಟು ರೊಕ್ಕ ಐತಿ, ಕೇಂದ್ರ ನೆರ್ವು ಕೊಡ್ಬೇಕಂತ್ ಎಲ್ಲೈತಿ ಅಂತ್ ಹೇಳ್ಕಿ ನೀಡ್ಯಾನ್ ನೋಡ್ರೀ"!...

ಹೌದ್ಪಾ..ಹೌದು... "ಇಲ್ಲೇ ನೋಡಿದ್ರ ಯಡೆಯೂರ್ಸು ಕೇಂದ್ರವ್ರು ಇವತ್ತಾ ರೊಕ್ಕಾ ಕೊಡ್ತಾರಾ, ನಳೆ ಕೊಡ್ತಾರ್ ಮುಂದ್ ಕೊಡ್ತಾರಾ..ಹಿಂದ್ ಕೊಡ್ತಾರ ಅಂತ್ ಹೇಳ್ಕಿ ನೀಡಾಕ ಹತ್ತೇತಿ"...! "ಕೇಂದ್ರದವ್ರು ರಾಜ್ಯದ ಕಡಿಗೆ ತಿರ್ಗಿ ಸತಿಗಿ ನೋಡಾಕ ವಲ್ರೂ".! "ಇಂತಾ ಹೊತ್ತಿನ್ಯಾಗ್  ಸಮಾದಾನದ ಮಾತ ಹೇಳೋದ ಬಿಟ್ಟು, ಇವ್ರು ಇಂತಾ ಮಾತಗಳನ್ನ ಆಡಿದ್ರ ಹೆಂಗ್ಯ"?  

ಇವಾ ನೋಡಿದ್ರ ಹಿಂಗ್!.... ಇನ್ ಆವಾ ಮೈಸೂರು ಎಂಪಿ ಅದಾನಲ್ರೀ ಸಿಮ್ಮಾ... ಅವಾ  "ಮಹಿಷ ದಸ್ರಾ ಮಾಡಾಕ ಹೊಂಟಿರೋರ್ನ ಮಹಿಷ್ಗ ಹುಟ್ಟಿದೋರು ಅಂತ್ ಕರ್ದಾನ"! ದಸ್ರಾ ಬಗ್ಗೆ ದುಸ್ರಾ ಮಾತಡಂಗಿಲ್ಲ,   "ಮಹಿಷ್ ದಸ್ರಾನ ಮಹಿಷ್ಗ ಹುಟ್ಟಿದೋರು ತಮ್ಮ ಮನಿಮುಂದ್ ಆಚರ್ಸಿಲಿ ಅಂತ್ ಗುಡ್ಗು ಹಾಕ್ಯಾನಂತ ನೋಡ್ರೀ"....?

ಅಲ್ಲೋ ಇದೇನೋ ಕೇಡಿಗ್ಗಾಲ್ ಬಂತು ಅಂತೇನಿ.....!  "ಮಹಿಷಾ ದಸ್ರಾ ಹೊಸ್ದಾಗಿ ಏನು ಆಚರಿಸಾಕ ಹತ್ತೀಲ್ಲಲ್ಲ.! ಬಾಳಾ ವರ್ಷತು"... "ದೇವ್ರಿರಿದ್ದಲ್ಲೇ ಈ ರಾಕ್ಷಸ್ರು  ಇದ್ದ ಇರ್ತಾರ"!.... "ದೇವ್ರ ಜೊತಿಗೆ ಇವ್ಕು ಪೂಜೆ-ಪುನಸ್ಕಾರ ಆಕ್ಕಾವು".... ಹಂಗ್‍ಂತ್ "ಈ ರಾಕ್ಷಸ್ರನ್ ದೇವ್ರ ಹತ್ರದಿಂದಾ ದೂರ ಮಾಡಾಕ ಆಗಾಗಿಂಲ್ಲಾ"?. "ನಮ್ಮ ದೇಶ್ ಅಂದ್ರ ಮೊದ್ಲ ಕೋಟಿಗಟ್ಲೆ ದೇವ್ರು ಅದಾವು".... "ದೇವ್ರನ್ ಪೂಜಾ ಮಾಡೋರು ದೇವ್ರನ್ ಪೂಜಾ ಮಾಡಿಕೊಳ್ಳಲಿ"!.... "ರಾಕ್ಷಸ್ರನ್ ಪೂಜಾ ಮಾಡೋರು  ಪೂಜಾ ಮಾಡಿಕೊಳ್ಳಲಿ... . ಇದ್ರಾಗ್ ಇಂವದ್ದೇನಂತ್ ಕಡ್ಡಿ. ...?

"ಕಡ್ಡೆಲ್ಲ್ರೀ...ಕಡ್ಡಿನ ಗುಡ್ಡಾ ಮಾಡಾಕ ಹತ್ಯಾರ ನೋಡ್ರೀ"....

"ಇದ್ರಾಗ ನೋಡೋದು ಎನೂ ಬಂತೋ...? ಎಲ್ಲಾನು ಕಣ್ಗೆ ಕಾಣಾಕ ಹತ್ತೇತಿ"...! ಕಡ್ಡಿ ತಗೊಂಡು ಗುಡ್ಡಾ ಮಾಡಾಕ ಹೊಂಟಿರೋ ವಿಷ್ಯಾ ಹೊಸಾದೇನಲ್ಲಾ"...?. "ಈಗ ನೀನ ಹೇಳ್ದೆಲ್ಲ.... ಚುನಾವಣೆ ಮುಂದಿಡಿದ್ದೂ".. "ಮತ್ತ ಚುನಾವಣೆ ದಿನಾಂಕ್ ಮರು ನಿಗ್ದಿ ಪಡ್ಸಿದ್ದು".... ಇದ್ಕು ಈ ಕಡ್ಡಿ-ಗುಡ್ಡಕು ಸಂಬಂಧ ಐತ್ಯಾ!  "ಸ್ವಲ್ಪ ಬುದ್ದಿ ಖರ್ಚುಮಾಡಿ ಹುಡ್ಕಿ ನೋಡೂ... ನಿನ್ಗ ಚುನಾವಣೆ ಮುಂದೂಡಿದ್ಕ ಉತ್ರಾ ಸಿಕ್ರು ಸಿಗಬಹ್ದು".?

ಅಲ್ರೀ, ಕಾಕಾ..... "ಈ ರಾಮ್ಲು ಅಣ್ಣಾ..... ಆರೋಗ್ಯ ಇಲಾಖೆ ಮಂತ್ರಿ ಆದ ಮ್ಯಾಲ್ ಹೊಸ್ದಾಗಿ ಆದೇಶ ಮಾಡೇತಲ್ರೀ,  ಇನ್ ಮ್ಯಾಕ್ ಸರ್ಕಾರಿ ಡಾಕ್ಟರ್ ಖಾಸ್ಗಿ ಆಸ್ಪತ್ರಿ ನಡ್ಸೋಂಗಿಲ್ಲ!. ಒಂದವೇಳ್ಯಾ ನಡ್ಸಿದ್ರ...ಅಂತಾ ಡಾಕ್ಟರ್‍ಗಳ ಸೌಲಭ್ಯಾನ ಕಟ್ಟ ಮಾಡ್ತವಿ ಅಂತ್ ಹೇಳೇತಿ. ಇದು ಜಾರಿಗೆ ಬರೋದ ಅಷ್ಟ ಸುಲ್ಬಾ ಅಂತಿರೇನು"?

"ರಾಮ್ಲು ಅಣ್ಣ ಹೊಸಾದೇನು ಹೇಳಿಲ್ಲ, ಬಿಡೋ.... ಈ ಕಾನೂನು ಮದ್ಲ ಇತ್ತು...?. ಮುಂದು ಇರತೈತಿ...!. ಆದ್ರ ಇದು ಕಾರ್ಯರೂಪಕ್ಕ ಬರಂಗಿಲ್ಲ"?. "ಈ ಡಾಕ್ಟರ್ ಲಾಭಿ... ದೊಡ್ಡದೋ ತಮ್ಮಾ.... ಬಾಳಾ ದೊಡ್ಡದು"...!. "ಸರ್ಕಾರಿ ದಾವಾಖಾನಿ ಒಳ್ಗ ನೌಕರಿ ಮಾಡೋ  ಡಾಕ್ಟರವೂ ಹೊರಗಡೆ ಆಸ್ಪತ್ರಿ ಇಲ್ಲಾ! ಹೇಳು ನೋಡೋಣಾ"?. "ಒಂದ್ ಒಂದ್ ಆಸ್ಪತ್ರಿನು ಸಿಗಂಗಿಲ್ಲ..!. "ಬೆಕ್ಕಿಗೆ ಗಂಟಿ ಕಟ್ಟೋರು ಯಾರು? ಹೇಳು"...ಎಲ್ಲಾರು ಬೆಕ್ಕ....! "ಕೆಲ್ವು ಡಾಕ್ಟರ್‍ಗಳ್ವು ಸ್ವಂತ್ ದಾವಾಖಾನಿ ಇಲ್ಲಾ"...! "ಆದ್ರ ಅವ್ರು, ಸರ್ಕಾರಿ ಡ್ಯೂಟಿ ಮುಗ್ದ ಮ್ಯಾಕ ಖಾಸ್ಗಿ ದಾವಾಖಾನಿ ಒಳ್ಗ ರೋಗಿಗಳ್ನ ಚೆಕ್ ಮಾಡ್ತಾರ"!. "ಸರ್ಕಾರಿ ದಾವಾಖಾನಿಗೆ ಬರೋ ರೋಗಿಗಳನ್  ರಾತ್ರಿ ಹೊತ್ತಿನ್ಯಾಗ ತಾವು ಇಂತಾ ಖಾಸ್ಗಿ ದಾವಾಖಾನಿ ಒಳ್ಗಗ ಇರ್ತನಿ, ಅಲ್ಗೆ ಬರ್ರೀ ... ಅಲ್ಲೆ ಎಲ್ಲಾ ಚೆಕ್ ಮಾಡಿ ಹೇಳ್ತನಿ" ಅಂತ್ ಹೇಳಿ, "ರೋಗಿಗಳ್ನ ಖಾಸ್ಗಿ ದಾವಾಕಾನಿಗೆ ಬರಾಕ ಹೇಳಿ ಕಳ್ಸತಾರ?. ಸರ್ಕಾರ ಚಾಪಿ ಕೆಳ್ಗ ಹೋದ್ರ... ಈ ಸರ್ಕಾರಿ ಡಾಕ್ಟರ್ ರಂಗೋಲಿ ಕೆಳ್ಗ ನುಸಳತಾರ್?. ಅದೇನ ಮಾಡ್ತತೈತೋ ಮಾಡ್ಲಿ ರಾಮ್ಲು ಅಣ್ಣಾ"!. ಅಂದಂಗ್,  "ಏನ್ಪಾ ನಿಮ್ಮ ಪ್ಯಾಂಟಮ್ ಪಕ್ಷದವ್ರು ಪಾರ್ಟಿ ಮೀಟಿಂಗನ್ಯಾಗ್ ಒಬ್ರಿಗೊಬ್ರು ಪ್ಯಾಂಟು-ಅಂಗಿ ಹಿಡ್ಕಂಡ್ ಹರ್ಕಂಡ್ ಕೈ.. ಕೈ.. ಹಿಡ್ಕಂಡ್ ಹೊಡದಾಡ್ಯಾವಂತಲ್ಲೋ"..?.

ಹೌದ್ರೀ, ಕಾಕಾರ... ನಾನೂ ಪೇಪರ್ನಾಗ ಓದಿದ್ದೆ. "ಈ ಮುನಿಯಪ್ಪ, ಸಿದ್ದಾಮಣ್ಣನಮ್ಯಾಗ ಮುರ್ಕೊಂಡು ಬಿದ್ದು ನಾ ಸೋಲಾಕ ನೀನ ಕಾರ್ಣ"!. "ರಮೇಶ್ಕುಮಾರ್ ಪ್ಯಾಂಟ್‍ಲೆಸ್ ಪಕ್ಷದವ್ರು ಜೊತಿ ಸೇರಿ" ನನ್ನ ಸೋಲಸ್ಯಾನ್. ನಿನ್ನ ಒಂದ ಕೈ ನೋಡ್ಕೋತೇನಿ. "ದಿನೇಶ ಗುಂಡುರಾವ್ ಸಿದ್ದ್ರಾಮಣ್ಣನ ಚೇಲಾ", "ಕೈಚೀಲಾ. ಬಕೆಟು" , "ಅದು-ಇದು"  ಅಂತ್ ಹೆಂಗ್ ಬೇಕಂಗ್ ಬಾಯಿಗೆ ಬಂದಂಗ್ ಒದ್ರಾಡೇತಿ ಅಂತ್ ನೋಡ್ರಿ?...

ಅಲ್ಲೋ,.... "ಇಲೇಕ್ಷನ್ ಮುಗ್ದು ಆರು ತಿಂಗಳಾದಮ್ಯಾಲ್ ಹೊಳ್ಳಿ ಮತ್ತ ಉಪಚುನಾವಣೆ ಬಂದ ಮ್ಯಾಲು ಇವ್ಕ ಬುದ್ದಿ ಬಂದಂಗ್ ಕಾಣವಲ್ದು"?. ಬಡಿದಾಡಿಕೊಂಡು ಹಾಳಾಗಿ ಹೋಗ್ಲಿ ಬಿಡೂ, "ಅಲ್ಲೋ ಉಳ್ಳಾಗಡ್ಡಿ ರೇಟೂ ಕಡ್ಮಿ ಆಗೇತೋ ಇಲ್ಲೋ ಮರಾಯಾ"!.. "ಹಬ್ಬದ ಮ್ಯಾಲ ಹಬ್ಬಾ ಬರಾಕ ಹತ್ಯಾವು"!.  "ಉಳ್ಳಾಗಡ್ಡಿ ಇಲ್ದ ಊಟಾ ರುಚಿನ ಹತ್ತಂಗಿಲ್ಲ!. ಈ ಸರ್ಕಾದವ್ರು ರೇಷನ್ ಅಂಗ್ಡಾಗ ಯಾಕ್ ಉಳ್ಳಾಗಡ್ಡಿ ಕೊಡಬಾರ್ದ".....?. ಉಳ್ಳಾಗಡ್ಡಿ ಕೊಡಾಕ ಹೇಳೋ ನಿಮ್ಮ ಯಡೆಯೂರತಪ್ಪ್ಗ್...

ಏ...ಹೌದಲ್ರೀ,  "ರೇಷನ್ ಅಂಗಡ್ಯಾಗ ಉಳ್ಳಾಗಡ್ಡಿ ಕೊಟ್ರ ಬಾಳಾ ಚಲೋದು"!. "ಸರ್ಕಾರಾ ನ ನೇರ ಉಳ್ಳಾಗಡ್ಡಿ ಖರೀದಿ ಮಾಡೋದ್ರಿಂದಾ ಏಜೆಂಟ್ಗಳ ಹಾವಳಿ ಕಡ್ಮಿಆಕ್ಕೈತಿ"..? "ಇದ್ರಿಂದಾ ರೈತರಿಗೂ ಒಳ್ಳೆ ದರಾ ಸಿಗತೈತಿ! , ಅವ್ರಿಗೆ ಅನುಕೂಲ ಆಕ್ಕೈತಿ"! "ಈ ಬಗ್ಗೆ ಪ್ರಧಾನಮಂತ್ರಿಗೆ , ಮುಖ್ಯಮಂತ್ರಿಗೆ ಪತ್ರಾ ಬರ್ದು ಚಳುವಳಿ ಮಾಡ್ರೀ" ಅಂತ್ ನಮ್ಮ ಗೋಟಾಳ ಪಕ್ಷದ ವಾಟಾಳ್ಗ ಹೇಳ್ತನಿ" "ಯಾಕಂದ್ರ ನಮ್ಮ ಮುಖ್ಯಮಂತ್ರಿಗಳು ತಂತಿಮ್ಯಾಲ್ ನಡ್ಯಾಕ ಹತ್ತೇನಿ ಅಂತ ಹೇಳ್ಕಿ ನೀಡ್ಯಾರ್. ಅವ್ರು ನನ್ನ ಕೈಗೆಸಿಗೋದಿಲ್ಲ"!, ಇನ್ನು ನಮ್ಮ ಪ್ರಧಾನಮಂತ್ರಿಗಳು ಅಮೇರಿಕಾಕ್ಕ ಹೋದೋರು ವಾಪಾಸ್ ಇನ್ನು ಇಂಡಿಯಾಕ್ಕ ಬಂದಾರೋ ಇಲ್ಲೋ ತಿಳಿವಲ್ದು?.  ಬರ್ತನಿ... ಕಾಕಾ,  ಎನ್ನುತ್ತಾ ಬಸಣ್ಣ ಹೊರಡಲು ಸಿದ್ದನಾದ, ಅಷ್ಟರಾಗ   ಕಾಕಾ ಏ ತಡಿಯೋ ಬಸಣ್ಣಾ, ಒಂದ್ ಹೊಸಾ ಕವಿತಾ ಬರ್ದೇನಿ ಅದ್ನ ಹೇಳ್ತನಿ ಕೇಳೋ ಇಲ್ಲೆ.

 ಚುನಾವಣೆ ಮುಂದೂಡಿದ್ಯಾರೋ... ರಂಗಾ...! 
 ಮತ್ತೆ ಚುನಾವಣೆಯ ದಿನಾಂಕ 
 ನಿಗಿದಿ ಪಡಿಸಿದವರ್ಯಾರೋ ಮಂಗಾ....?
 ಉಳ್ಳಗಾಡ್ಡಿ ದರಾ ಎರ್ಸಿದ್ಯಾರೋ ರಂಗಾ...
 ಕೇಂದ್ರದಾಗ ರೊಕ್ಕಾ ಇಲ್ಲಾಂದೋರು ಯಾರೋ ರಂಗಾ...
 ಮಹಿಷ್ಗ ಹುಟ್ಟಿದ್ಯಾರೋ ಯಾರೋ ಮಂಗಾ.....
 ಡಿಕೆಶಿ-ಚಿದಂಬರ್‍ನ  ಜೇಲನ್ಯಾಗ ಇಟ್ಟೋರು ಯಾರೋ ರಂಗಾ 
 ಬಕೇಟ್ ಯಾರೋ ರಂಗಾ, ಕೈಚೀಲಾ ಯಾರೋ ರಂಗಾ
 ಉಪಚುನಾವಣಾಗ ಟಿಕೆಟ್ ಯರ್ಗೋ ರಂಗಾ...ಗೆಲ್ಲೋರು ಯಾರೋ ಮಂಗಾ....
 ಯಡೆಯೂರಪ್ಪಗ ತಂತಿಮ್ಯಾಲ ನಡಿಅಂದೋರೋ ಯಾರೋ ರಂಗಾ...
 ತಂತಿಮ್ಯಾಗಿಂದ ಯಡೆಯೂಉ ಬಿದ್ದ್ರ ಹೆಂಗ್ಯೋ ಮಂಗಾ.....

ಸಾಕ ನಿಲ್ಸ್ರೀ.... ನಿಮ್ಮ ಕವಿತಾ ಸಾಕು... ಹೊಟ್ಟಿ ಹಸ್ದಾವು!. ರೊಟ್ಟಿ ತಿನ್ನಬೇಕು, ಇಲ್ಲಾಂದ್ರ ನಿಮ್ಮ ಕವಿತಾ ಕೇಳಿ ಮೂರ್ಚಿರೋಗ ಬಂದ್ರು ಬರಬಹ್ದೂ..  ಎನ್ನುತ್ತಾ ಬಸ್ಯಾ ಮನಗೆ ಹೋಗಲು ಅಡ್ಡ ಹಾದಿ ಹಿಡಿದ...