ಚುನಾವಣೆಯೂ ಅಂದುಕೊಂಡಂತೆ ಆಗುವುದೇ...

ಈ ಪಕ್ಷಾಂತರ ಅಭ್ಯರ್ಥಿಗಳನ್ನು ಐದು ವರ್ಷಗಳಿಗಾಗಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಆರಿಸಿ ಕಳುಹಿಸಿದ್ದರು. ಅವರು ತಮ್ಮ ಹಿತಾಸಕ್ತಿಗಾಗಿ ಶಾಸಕ ಸ್ಥಾನಗಳಿಗೆ ರಾಜೀನಾಮೆ ನೀಡಿ ಮತ್ತೆ ನಮ್ಮನ್ನು ಗೆಲ್ಲಿಸಿ ಎಂದು ಯಾವ ಮುಖ ಹೊತ್ತು ಜನರ ಬಳಿ ಮತಯಾಚಿಸುತ್ತಾರೆ ಎನ್ನುವುದು ಪ್ರಶ್ನೆ

ಚುನಾವಣೆಯೂ ಅಂದುಕೊಂಡಂತೆ ಆಗುವುದೇ...

ಎಲ್ಲವೂ ಅವರು ಅಂದುಕೊಂಡಂತೆಯೇ ಆಗುತ್ತಿದೆ. ಅಯೋಧ್ಯೆ ಪ್ರಕರಣದಲ್ಲಿ ಭಾರತೀಯ ಜನತಾ ಪಕ್ಷದ ಉತ್ತರ ಭಾರತದ ಸಂಸದರೊಬ್ಬರು “ಸುಪ್ರೀಂ ಕೋರ್ಟ್ ನಮ್ಮ ಪರವಾಗಿ ತೀರ್ಪು ನೀಡಲಿದೆ” ಎಂದಿದ್ದರು. ಇತ್ತ ಕರ್ನಾಟಕದ ವಿಷಯದಲ್ಲೂ ಅದೇ ಆಗಿದೆ. ಜನತಾ-ಕಾಂಗ್ರೆಸ್ ಮೈತ್ರಿ ಸರ್ಕಾರದ ಅಧಃಪತನಕ್ಕೆ ಕಾರಣರಾಗಿ ಅನರ್ಹ ಶಾಸಕರೆಂದು ತಮ್ಮ ಅನರ್ಹತೆಯನ್ನು ರದ್ದುಗೊಳಿಸಬೇಕೆಂದು ಸುಪ್ರೀಂ ಕೋರ್ಟಿಗೆ ಹೋಗಿದ್ದ 15 ಮಂದಿಯ ಪ್ರಕರಣದಲ್ಲಿಯೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ “ಸುಪ್ರೀಂ ಕೋರ್ಟ್ ತೀರ್ಪು ಅನರ್ಹ ಶಾಸಕರ ಪರ ಬರಲಿದೆ ಎಂದು ತೀರ್ಪು ಬರುವ ಮುನ್ನವೇ ಭವಿಷ್ಯ ನುಡಿದಿದ್ದರು. ಹಾಗಾಗಿ ನಮ್ಮ ಸರ್ಕಾರ ಸುಭದ್ರವಾಗಿದ್ದು ನಾನೇ ಮುಂದಿನ ಮೂರುವರ್ಷದವರೆಗೆ ಮುಖ್ಯಮಂತ್ರಿ ಆಗಿರುತ್ತೇನೆ” ಎಂದಿದ್ದರು.

ನಿಜ. ಬಿಜೆಪಿಯ ನಾಯಕರ ಆಶಯದಂತೆಯೇ ಎಲ್ಲವೂ ಆಗುತ್ತಿದೆ. ಆದರೆ ನ್ಯಾಯಾಲಯದಿಂದ ಬಂದ ತೀರ್ಪುಗಳು ಮತ್ತು ಘಟನೆಗಳು ಕಾಕತಾಳೀಯ ಇರಬಹುದು. ಆದರೆ ಬಿಜೆಪಿಯ ನಾಯಕರ ಭವಿಷ್ಯವಾಣಿಯಿಂದ ನ್ಯಾಯಾಂಗ ವ್ಯವಸ್ಥೆಯನ್ನು ಜನರು ಅನುಮಾನದಿಂದ ನೋಡುವಂತೆ ಆಡಿರುವ ಮಾತುಗಳು ದುರದೃಷ್ಟಕರ. 

ರಾಜಕೀಯ ಷಡ್ಯಂತರದಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಅನರ್ಹತೆಗೆ ಒಳಗಾಗಿದ್ದ ಕಾಂಗ್ರೆಸ್ಸಿನ ಹದಿನೈದು ಮಂದಿ ಶಾಸಕರು ಈಗ ಬಿಜೆಪಿಗೆ ಸೇರಿದ್ದಾಯಿತು. ಉಪಚುನಾವಣೆಯಲ್ಲಿ ಹದಿಮೂರು ಮಂದಿ ಬಿಜೆಪಿ ಟಿಕೆಟ್ ಪಡೆಯುವಲ್ಲಿ ಯಶಸ್ವಿಯೂ ಆಗಿದ್ದಾರೆ. ಆದರೆ ರೋಷನ್ ಬೇಗ್ ಮತ್ತು ಆರ್. ಶಂಕರ್ ಅವರಿಗೆ ಬಿಜೆಪಿ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡಲು ನಿರಾಕರಿಸುವ ಮೂಲಕ ಅವರ ರಾಜಕೀಯ ಭವಿಷ್ಯವನ್ನು ಅತಂತ್ರಗೊಳಿಸಿದೆ.

ಶಿವಾಜಿನಗರ ಕ್ಷೇತ್ರದಲ್ಲಿ ಬಿಜೆಪಿಯು ತನ್ನ ಪಕ್ಷದ ಶರವಣ ಮತ್ತು ರಾಣೆಬೆನ್ನೂರು ಕ್ಷೇತ್ರದಲ್ಲಿ ಅರುಣ್ ಕುಮಾರ್ ಎಂಬುವವರನ್ನು ಅಭ್ಯರ್ಥಿಯನ್ನಾಗಿ ಮಾಡುವ ಮೂಲಕ ಅಚ್ಚರಿ ಉಂಟು ಮಾಡಿದೆ. ಆದರೂ ಬಿಜೆಪಿಯ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕೆಂದು ರೋಷನ್ ಬೇಗ್ ಮತ್ತು ಆರ್. ಶಂಕರ್ ಅವರಿಗೆ ಸೂಚನೆ ನೀಡಿರುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿಕೊಂಡಿದ್ದಾರೆ. ಆದರೆ ಈಗ ಬಿಜೆಪಿಗೆ ಬಂದು ಮತ್ತೆ ಅತಂತ್ರರಾಗಿರುವ ಇವರು ಹಾಗೆ ನಡೆದುಕೊಳ್ಳಬೇಕಲ್ಲ!!

ಹೀಗೆ ಅತಂತ್ರ ಸ್ಥಿತಿ ಒದಗಿರುವುದು ಬಿಜೆಪಿಯ ನಾಯಕರೊಬ್ಬರೂ ಸೇರಿದ್ದಾರೆ. ಕಳೆದ ಚುನಾವಣೆಯಲ್ಲಿ ಸೋತಿದ್ದರೂ ಮೂರು ತಿಂಗಳ ಹಿಂದೆಯಷ್ಟೇ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಉಪಮುಖ್ಯಮಂತ್ರಿಯಾಗಿ ನೇಮಕಗೊಳ್ಳುವ ಮೂಲಕ ರಾಜ್ಯದ ರಾಜಕೀಯವನ್ನೇ ಅಚ್ಚರಿಗೊಳಿಸಿದ ಲಕ್ಷ್ಮಣ ಸವದಿಯವರಿಗೆ ಈ ಸ್ಥಿತಿ ಬಂದೊದಗಿದೆ. ಕಳೆದ ಚುನಾವಣೆಯಲ್ಲಿ ಸವದಿಯವರನ್ನು ಸೋಲಿಸಿದ್ದ ಕಾಂಗ್ರೆಸ್ಸಿನ ಮಹೇಶ್ ಕುಮಠಳ್ಳಿ ಅವರೀಗ ಅಥಣಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ.  ಈ ಬೆಳವಣಿಗೆ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರಿಗೆ ನುಂಗಲಾರದ ತುತ್ತು. ಅವರೀಗ ಒಂದು ಕಾಲಕ್ಕೆ ತಮ್ಮ ಸ್ವಂತ ಕ್ಷೇತ್ರವನ್ನಾಗಿ ಹೊಂದಿದ್ದ ಅಥಣಿಯನ್ನು ಈಗ ತಮ್ಮ ರಾಜಕೀಯ ವಿರೋಧಿಗೇ ಒಪ್ಪಿಸುವಂತಾಗಿದೆ.

ರಾಜಕಾರಣ ಮತ್ತು ರಾಜಕೀಯ ಎಂದರೆ ನಡೆಯುವುದೇ ಹೀಗೆ. ಹಲವು ಸಂದರ್ಭದಲ್ಲಿ ಇಂತಹ ಅಚ್ಚರಿ ಸಂಗತಿಗಳು ಘಟಿಸುತ್ತಿರುತ್ತವೆ. ಅಕಸ್ಮತ್ತಾಗಿ ಆಗುವ ಇಂತಹ ಆಘಾತಗಳನ್ನು ರಾಜಕಾರಣಿಗಳು ಸಹಿಸಿಕೊಳ್ಳಲೇಬೇಕು. ಪಕ್ಷ ರಾಜಕಾರಣದಲ್ಲಿ ಇದೆಲ್ಲ ಸಾಮಾನ್ಯ ಎನ್ನುವಂತೆ ಹೀಗೆ ನಡೆಯುವುದರಲ್ಲಿ ಅಚ್ಚರಿ ಏನಿಲ್ಲ. ಇಂತಹ ಅಚ್ಚರಿಗಳಿಗೆ ಸಕ್ರಿಯ ರಾಜಕಾರಣಕ್ಕೆ ಬಂದವರೆಲ್ಲ ಎದೆಕೊಡುವ ಶಕ್ತಿಯನ್ನು ಬೆಳೆಸಿಕೊಳ್ಳುವುದು ಅನಿವಾರ್ಯ ಎಂಬುದನ್ನು ಈ ಬೆಳವಣಿಗೆ ತೋರಿಸಿಕೊಡುತ್ತದೆ.

ಬಿಜೆಪಿಯು ಕಾಂಗ್ರೆಸ್ಸಿನ ಈ ಶಾಸಕರನ್ನು “ನಿಮ್ಮ ತ್ಯಾಗದಿಂದ ನಮ್ಮ ಸರ್ಕಾರ ಬಂದಾಗ ನಿಮಗೆಲ್ಲ ಸಚಿವಸ್ಥಾನ ಮತ್ತು ನಿಮ್ಮ ಕ್ಷೇತ್ರಗಳ ಅಭಿವೃದ್ಧಿಗೆ ಕೇಳಿದಷ್ಟು ಅನುದಾನ ನೀಡಲಾಗುವುದು” ಎಂದು ಹತ್ತಾರು ಆಮಿಷಗಳನ್ನೆಲ್ಲ ನೀಡಿದ್ದರಿಂದ ಅವರೆಲ್ಲ ರಾಜೀನಾಮೆ ನೀಡಿ ಬೀದಿಪಾಲಾಗಿದ್ದರು. ಸುಪ್ರೀಂ ಕೋರ್ಟ್ ತೀರ್ಪಿನಿಂದಾಗಿ ಮತ್ತೆ ಅವರು ಉಪಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ಮತ್ತೆ ತಮ್ಮ ರಾಜಕೀಯ ಜನಪ್ರಿಯತೆಯನ್ನು ಜನರ ಮುಂದೆ ಪರೀಕ್ಷೆಗೆ ಒಳಪಡಿಸುತ್ತಿದ್ದಾರೆ. ಕಳೆದ ಲೋಕಸಭೆ ಮತ್ತು ಇತ್ತೀಚೆಗೆ ಮಹಾರಾಷ್ಟ್ರದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷಾಂತರ ಮಾಡಿದರಾರನ್ನೂ ಮತದಾರರು ಗೆಲ್ಲಿಸಿಲ್ಲ ಎನ್ನುವ ಜಾಣ್ಮೆ ಕರ್ನಾಟಕದ ಮತದಾರರಿಗೂ ಬಂದುಬಿಟ್ಟರೆ ಇವರ ರಾಜಕೀಯ ಜೀವನ ಅಯೋಮಯ ಆಗುವುದನ್ನು ಯಾರೂ ತಡೆಯಲು ಆಗುವುದಿಲ್ಲ.

ಆದರೆ ಇವರ ಷಡ್ಯಂತರದಿಂದ ಅಧಿಕಾರಕ್ಕೆ ಬಂದಿರುವ ಯಡಿಯೂರಪ್ಪ ಅವರು ಮಾತ್ರ ಈ ಉಪಚುನಾವಣೆಯಲ್ಲಿ ನಿಲ್ಲುವ ಎಲ್ಲರನ್ನೂ ಒಟ್ಟು ಹದಿನೈದು ಸ್ಥಾನಗಳನ್ನು ಗೆಲ್ಲಿಸುವ ಹೊಣೆ ತಮ್ಮದು ಎಂದು ಧೈರ್ಯ ತುಂಬಿದ್ದಾರೆ. ಈ ಶಾಸಕರ ನಡೆಯನ್ನು ಒಂದು ಸರ್ಕಾರವನ್ನು ಉರುಳಿಸಿ ಆಡಿದ ಆಟವನ್ನು ನಮ್ಮ ಮತದಾರರು ಮೆಚ್ಚುತ್ತಾರೆಯೇ ಎನ್ನುವುದನ್ನು ಬರಲಿರುವ ಚುನಾವಣೆಯ ಫಲಿತಾಂಶವೇ ಹೇಳಬೇಕಿದೆ.

ಬಿಜೆಪಿ ಇವರ “ರಾಜಕೀಯ ಕುತಂತ್ರ”ದಿಂದ ಅಧಿಕಾರಕ್ಕೇನೋ ಬಂದಿತು. ಆದರೆ ಈ ಕ್ಷೇತ್ರಗಳಲ್ಲಿ ಸೋತಿದ್ದ ಬಿಜೆಪಿಯ ನಾಯಕರು ಮನಸಾರೆ ಈ ಮಾಜಿ ಕಾಂಗ್ರೆಸ್ಸಿಗರನ್ನು ಸುಲಭವಾಗಿ ಗೆಲ್ಲಲು ಬಿಡುತ್ತಾರೆ ಎಂದು ನಂಬುವುದು ಕಷ್ಟ. ಮತ್ತೆ ಈ ಪಕ್ಷಾಂತರಿಗಳಿಗೆ ಆ ಕ್ಷೇತ್ರಗಳು ವಶವಾದರೆ ಮೂಲ ಬಿಜೆಪಿಯ ನಾಯಕರ ರಾಜಕೀಯ ಭವಿಷ್ಯವೂ ಅತಂತ್ರವಾಗುವುದರಲ್ಲಿ ಎರಡು ಮಾತಿಲ್ಲ ಎಂಬುದಕ್ಕೆ ಆಯಾ ಕ್ಷೇತ್ರಗಳಲ್ಲಿ ಈಗ ಎದ್ದಿರುವ ಅಪಸ್ವರದ ಮಾತುಗಳು ಸಾಕ್ಷಿಯಾಗಿವೆ.

ಕಾಂಗ್ರೆಸ್ಸಿನಲ್ಲಿದ್ದಾಗ ಬಿಜೆಪಿ ನಾಯಕರನ್ನು ಮನಸಾರೆ ಬೈಯ್ಯುತ್ತಿದ್ದ, ಹಲವು ಕ್ಷೇತ್ರಗಳಲ್ಲಿ ತಮ್ಮ ವಿರೋಧಿಗಳ ವಿರುದ್ಧ ಹತ್ತಾರು ಮೊಕದ್ದಮೆ ಹಾಕಿಸಿರುವುದು ಸಹಾ ಬಿಜೆಪಿ ಕಾರ್ಯಕರ್ತರು ಇವರ ಬಗೆಗೆ ಮತ್ತಷ್ಟು ಕುದಿಯುವಂತೆ ಮಾಡಿರುವುದನ್ನು ಆಯಾ ಕ್ಷೇತ್ರಗಳ ಕಾರ್ಯಕರ್ತರನ್ನು ಮಾತನಾಡಿಸಿದಾಗ ತಿಳಿಯುತ್ತದೆ.

ಇದಿಷ್ಟಕ್ಕೇ ಇದು ಮುಗಿಯುವುದಿಲ್ಲ. ಬಿಜೆಪಿಯ ಪರವಾಗಿ ಚುನಾವಣೆಗಳಲ್ಲಿ ನಿರಂತರವಾಗಿ ಕೆಲಸ ಮಾಡುತ್ತಾ ಬಂದಿರುವ ಸಾವಿರಾರು ನಿಷ್ಠಾವಂತ ಸಂಘಪರಿವಾರದ ಕಾರ್ಯಕರ್ತರಿದ್ದಾರೆ. ಅವರೀಗ ಬಿಜೆಪಿಯ ಈ ಬೆಳವಣಿಗೆ ಹೊಟ್ಟೆಯಲ್ಲಿ ಬೆಂಕಿ ಇಟ್ಟಂತಾಗಿದೆ. ಅನೇಕ ಕಾರ್ಯಕರ್ತರು ಫೇಸ್ ಬುಕ್ ಮತ್ತು ಇತರೆ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಈ ಆಕ್ರೋಶವನ್ನು ಮುಕ್ತವಾಗಿ ವ್ಯಕ್ತಪಡಿಸಿರುವುದನ್ನೂ ಗಮನಿಸಬೇಕಿದೆ

ಕೆಲವು ಕಾರ್ಯಕರ್ತರ ಅಭಿಪ್ರಾಯವನ್ನು ಇಲ್ಲಿ ಗಮನಿಸುವುದು ಅವಶ್ಯ. ಸಂಘಪರಿವಾರದ ಹಿರಿಯ ಮತ್ತು ಪತ್ರಕರ್ತರೊಬ್ಬರು ಫೇಸ್ ಬುಕ್ ನಲ್ಲಿ ಬರೆಯುತ್ತಾರೆ: “ಅನರ್ಹರು ಹೇಗೋ ಅರ್ಹರಾಗಿಬಿಡುತ್ತಾರೆ. ಆದರೆ ಈ ಪ್ರಕ್ರಿಯೆಯಲ್ಲಿ ಸೋಲುವುದು ಮಾತ್ರ ಸಿದ್ದಾಂತ, ಆದರ್ಶ ಮತ್ತು ನಿಷ್ಠಾವಂತ ಕಾರ್ಯಕರ್ತರು. ಅವರು ಯಾರು ಯಾರಿಗೋ ಜೈ ಎನ್ನಬೇಕು. ಯಾರ ಪರವಾಗಿಯೋ ತಮ್ಮ ಬೆವರು ಹರಿಸಬೇಕು” ಎನ್ನುವ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ಆದರೆ ಇದಕ್ಕೆ ಪ್ರತ್ಯುತ್ತರ ನೀಡಿರುವ ನಾಗರಾಜ್ ಎಂಬುವವರು ವಾಸ್ತವ ರಾಜಕಾರಣದ ಅಂತಃರಂಗವನ್ನು ಬಲ್ಲವರಾಗಿ “ ನೀವು ಹೇಳೋ ರೀತಿಲಿ ರಾಜಕೀಯ ಮಾಡಿದ್ರೆ ಇನ್ನೂ 100 ವರ್ಷ ಬೇಕಾಗಿತ್ತು ರಾಮಮಂದಿರ ಕಟ್ಟೋಕ್ಕೆ, 370 ರದ್ದು ಮಾಡೋಕೆ.” ಎನ್ನುತ್ತಾ ಈಗಿನ ಬಿಜೆಪಿಯ ರಾಜಕಾರಣವನ್ನು ಸಮರ್ಥಿಸಿಕೊಳ್ಳುತ್ತಾರೆ.

ಅದಕ್ಕೆ ಉತ್ತರಿಸಿರುವ ಕೇಶವ ಆರ್ಯ ಪೆರುವಾಜೆ  ಎನ್ನುವವರು “ ಬಿಜೆಪಿಯಲ್ಲಿದ್ದು ಉದ್ದುದ್ದ ಭಾಷಣ ಬಿಗಿದು ಕೋಟಿಗಟ್ಟಲೆ ಅಕ್ರಮ ಆಸ್ತಿ ಮಾಡಿಕೊಂಡ ಶಾಸಕ, ಸಂಸದರನ್ನು ಸಮರ್ಥಿಸಿಕೊಳ್ಳುವ ನಮ್ಮ ಹಿರಿಯರ ತಪ್ಪು ನಿರ್ಧಾರಗಳೇ ಬಿಜೆಪಿ ಈ ಸ್ಥಿತಿಗೆ ಬರಲು ಕಾರಣ”. ಮತ್ತೆ ಇವರು ಹೇಳುವುದು “ಸಂಘದ ಕಾರ್ಯಕರ್ತರನ್ನು ರಸ್ತೆ ಬದಿಯಲ್ಲಿ ನಿಂತು ಬಾಯಿಗೆ ಬಂದ ಹಾಗೆ ತೆಗಳಿದವರೆಲ್ಲ ಇಂದು ಬಿಜೆಪಿಗೆ ಅನಿವಾರ್ಯ ಆಗಿದ್ದರೆ ಸಿದ್ಧಾಂತ ನಿಷ್ಠೆಗೆ ಬೆಲೆ ಇಲ್ಲ. ಅಧಿಕಾರದ ಮುಂದೆ ಇದೆಲ್ಲ ಸುಮ್ಮನೆ” ಎನ್ನುವ ತಣ್ಣನೆಯ ಕೋಪವನ್ನು ವ್ಯಕ್ತಪಡಿಸುತ್ತಾರೆ

ಮತ್ತೊಬ್ಬ ಹಿರಿಯ ಸಂಘಪರಿವಾರದ ಸುಂದರೇಶ ಚಿಲಕುಂದ ಸುಬ್ಬರಾವ್ ಎಂಬುವವರು ಹೇಳುವುದು “ಸಾಮಾನ್ಯ ಕಾರ್ಯಕರ್ತರು ಜೀವನ ಪೂರ್ತಿ ಅನುಭವಿಸಲೇಬೇಕಾದ ನೋವು ಸಂಕಟ ಇದು. ಒಂದು ವಿಚಾರ ಮತ್ತು ಸಿದ್ಧಾಂತಕ್ಕೆ ತಮ್ಮ ಜೀವನವನ್ನು ಸಮರ್ಪಿಸಿಕೊಂಡವರಿಗೆ ಇದು ತಪ್ಪಿದ್ದಲ್ಲ! ಒಂದಲ್ಲಾ ಒಂದು ದಿನ ಪರಮವೈಭವದ ಸ್ಥಿತಿ ಕಾಣುತ್ತೇವೆ ಎಂಬ ಕನಸೇ ನಮ್ಮನ್ನು ಇನ್ನೂ ಕ್ರಿಯಾಶೀಲರನ್ನಾಗಿಸಿಬಿಟ್ಟಿದೆ!!

ಮತ್ತೊಬ್ಬ ಸುಬ್ರಮಣ್ಯ ಕಮಲಾಪುರ ಅವರು ಹೇಳುವುದು “ಬೇಸರ ಆದರೂ ತೋರ್ಪಡಿಸುವಂತಿಲ್ಲ. ಇನ್ನು ನಾಲ್ಕುವರೆ ವರ್ಷದಲ್ಲಿ ಲೂಟಿ ಕೋರರನ್ನು ಹದ ಹಾಕಿದರೆ ನಮಗೆ ಸ್ವಲ್ಪ ನೆಮ್ಮದಿ ಸಿಗಬಹುದು ಎನ್ನುತ್ತಾರೆ. ಇನ್ನು ಕೆಲವರು ಮಹಾಭಾರತದ ಪ್ರಸಂಗಗಳನ್ನು ಉಲ್ಲೇಖಿಸಿ ತಮ್ಮ ಮೂಗಿನ ನೇರಕ್ಕೆ ವಾದಗಳನ್ನು ಮುಂದಿಟ್ಟಿದ್ದಾರೆ.

ಇದು ಬಿಜೆಪಿ ಮತ್ತು ಅದಕ್ಕೆ ಬೆನ್ನೆಲುಬಾಗಿ ನಿಂತಿರುವ ಸಂಘಪರಿವಾರದ ಬಹುತೇಕ ಕಾರ್ಯಕರ್ತರ ಅಭಿಪ್ರಾಯ. ಹೀಗಿರುವಾಗ ಎಲ್ಲರನ್ನೂ ಗೆಲ್ಲಿಸಿಕೊಂಡು ಬರುವ ಭರವಸೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಹೇಗೆ ಬಂದಿದೆಯೋ ತಿಳಿಯದು. ಚುನಾವಣೆ ಫಲಿತಾಂಶ ಅವರು ಹೇಳಿದಂತೆಯೇ ನಡೆಯುತ್ತದೆಯೋ ಇಲ್ಲವೋ ಆದರೂ ಒಬ್ಬ ನಾಯಕರು ತಮ್ಮನ್ನು ನಂಬಿದವರಿಗೆ ಧೈರ್ಯ ತುಂಬಲು ಹೇಳುವ ಮಾತು ಸಹಜ ಎಂದುಕೊಳ್ಳಬೇಕಾಗುತ್ತದೆ.

ಈ ಮಧ್ಯೆ ಇವರೆಲ್ಲರ ಅಭಿಪ್ರಾಯದಂತೆ ನಮ್ಮ ಮತದಾರ ನಡೆದುಕೊಳ್ಳುತ್ತಾನೆ ಎಂದು ಹೇಳಲಾಗದು. ಜನತಾ-ಕಾಂಗ್ರೆಸ್  ಸರ್ಕಾರವನ್ನು ಬೀಳಿಸಿದ ರೀತಿ ನೀತಿ ಮತ್ತು ಈ ಶಾಸಕರು ಮುಂಬೈ ಹೋಟೆಲಲ್ಲಿ ತಿಂಗಳು ಗಟ್ಟಲೆ ಉಳಿದುಕೊಂಡು ನಡೆಸಿದ ರಾಜಕೀಯ ತಂತ್ರಗಳನ್ನು ಯಾರೂ ಮೆಚ್ಚಿರಲಾರರು. ಇವರು ಮತ್ತೆ ಚುನಾವಣೆಗೆ ನಿಲ್ಲಲು ಸುಪ್ರೀಂ ಕೋರ್ಟಿನ ತೀರ್ಪು ಸಹಕಾರಿಯಾಗಿರಬಹುದು. ಆದರೆ ಜನರ ತೀರ್ಪು ಸಹಾ ಹಾಗೆಯೇ ಇರುತ್ತದೆ ಎಂದು ಹೇಳಲು ಬಾರದು.

ಕಾಂಗ್ರೆಸ್ ಕಳೆದ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹವಾದಲ್ಲಿ ಕೊಚ್ಚಿ ಹೋಗಿರಬಹುದು. ಆದರೆ ಕಳೆದ ವಾರವಷ್ಟೇ ರಾಜ್ಯದ ಹಲವು ಸ್ಥಳೀಯ ಸಂಸ್ಥೆಗಳಿಗೆ ಅಂದರೆ ನಗರ ಪಾಲಿಕೆ ಮತ್ತು ಪುರಸಭೆಗಳಿಗೆ ಒಟ್ಟು 418 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 151, ಬಿಜೆಪಿ- 125, ಜನತಾದಳ 63 ಸ್ಥಾನಗಳನ್ನು ಗೆದ್ದಿವೆ. ಆದ್ದರಿಂದ ಚುನಾವಣೆ ಫಲಿತಾಂಶ ತಮ್ಮ ಪರವಾಗಿಯೇ ಬರುತ್ತದೆ ಎಂಬುದನ್ನು ಮೇಲ್ನೋಟಕ್ಕೆ ರಾಜಕಾರಣಕ್ಕಾಗಿ ಹೇಳಬಹುದೇ ಹೊರತು ಖಡಾ ಖಂಡಿತವಾಗಿ ಹದಿನೈದು ಸ್ಥಾನಗಳನ್ನೂ ನಾವೆ ಗೆಲ್ಲುತ್ತೇವೆ ಎಂಬ ಮುಖ್ಯಮಂತ್ರಿಗಳ ಮಾತನ್ನು ಸುಲಭವಾಗಿ ನಂಬಲು ಬರುವುದಿಲ್ಲ.

ಈಗ ಮತದಾರರ ಮುಂದಿರುವ ಪ್ರಶ್ನೆ ಈ ಪಕ್ಷಾಂತರ ಅಭ್ಯರ್ಥಿಗಳನ್ನು ಐದು ವರ್ಷಗಳಿಗಾಗಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಆರಿಸಿ ಕಳುಹಿಸಿದ್ದರು. ಅವರು ತಮ್ಮ ಹಿತಾಸಕ್ತಿಗಾಗಿ ಶಾಸಕ ಸ್ಥಾನಗಳಿಗೆ ರಾಜೀನಾಮೆ ನೀಡಿ ಮತ್ತೆ ನಮ್ಮನ್ನು ಗೆಲ್ಲಿಸಿ ಎಂದು ಯಾವ ಮುಖ ಹೊತ್ತು ಜನರ ಬಳಿ ಮತಯಾಚಿಸುತ್ತಾರೆ ಎನ್ನುವುದು ಪ್ರಶ್ನೆ. ಮೂರು ತಿಂಗಳ ಹಿಂದೆ ಬೇಡವಾದ ಶಾಸಕ ಸ್ಥಾನ ಹೀಗೇಕೆ ಬೇಕು? ಎನ್ನುವ ಪ್ರಶ್ನೆಗೆ ಕಾಲವೆ ಉತ್ತರಿಸಬೇಕು.