ಉಪ ಚುನಾವಣಾ ಫಲಿತಾಂಶ ತೆರೆದಿಟ್ಟ ಆಂತರ್ಯ

ಆರ್ ಎಸ್‍ಎಸ್‍ ಮೂಲದಿಂದ ಯಡಿಯೂರಪ್ಪರನ್ನ ಬಗ್ಗು ಬಡಿಯುವಂಥ ಒಳಗೊಳಗಿನ ಕೆಲಸಗಳು ಎಗ್ಗಿಲ್ಲದೆ ನಡೆಯುತ್ತಿದ್ದುದಕ್ಕೆ, ಈ ಫಲಿತಾಂಶ ಕೊಂಚವಾದರೂ ಕಡಿವಾಣವನ್ನಾಕಿದೆ. ಅಂತೆಯೇ ಪ್ರಧಾನಿ ಮೋದಿ, ಅಮಿತ್ ಶಾಗಿಂತ ಇಲ್ಲಿ ಯಡಿಯೂರಪ್ಪ ಅಸ್ತಿತ್ವವೇ ಚಲಾವಣೆಗೆ ಬಂದಿದ್ದು ವಿಶೇಷ.

ಉಪ ಚುನಾವಣಾ ಫಲಿತಾಂಶ ತೆರೆದಿಟ್ಟ ಆಂತರ್ಯ

ಕಾಂಗ್ರೆಸ್ ಮತ್ತು ಜನತಾದಳ ನಿರೀಕ್ಷಿಸಿದ್ದ ಕಡೇ ಕ್ಷಣದ ಯಾವ ಪವಾಡವೂ ಆಗದೆ, ಬಿಜೆಪಿ ಸರ್ಕಾರದ ಬುಡ ಭದ್ರವಾಗಿದ್ದು, ಮುಂದೇನಿದ್ದರೂ ಸಂಪುಟ ರಚನೆಯ ಸರ್ಕಸ್ ಎಂಬುದನ್ನಷ್ಟೇ ಸಮತೂಲಿತವಾಗಿ ನಿಭಾಯಿಸಬೇಕಾದ್ದು ಮಾತ್ರ ಬಾಕಿಯುಳಿದಿದೆ.

ಸರ್ಕಾರದ ಅಳಿವು ಉಳಿವಿನ ಪ್ರಶ್ನೆಯಾಗಿದ್ದ 15 ಕ್ಷೇತ್ರಗಳ ಉಪಚುನಾವಣೆಯಲ್ಲಿ 12 ಸ್ಥಾನಗಳನ್ನ ಬುಟ್ಟಿಗೆ ಹಾಕಿಕೊಳ್ಳುವ ಮೂಲಕ  ಬಿಜೆಪಿ ತನ್ನ ಸ್ವಂತ ಬಲವನ್ನು 117 ಕ್ಕೇರಿಸಿಕೊಂಡಿದೆ. ಇದು ಮ್ಯಾಜಿಕ್ ಸಂಖ್ಯೆ 113 ಕ್ಕಿಂತಲೂ 4 ಜಾಸ್ತಿ. ಹೀಗಾಗಿ ಪಕ್ಷೇತರ ಇಬ್ಬರ ಮರ್ಜಿಯೂ ಬೇಕಾಗಿಲ್ಲ. ಮುಂದೆ ರಾಜರಾಜೇಶ್ವರಿನಗರ  ಮತ್ತು ಮಸ್ಕಿ ಕ್ಷೇತ್ರದಲ್ಲೂ ಗೆದ್ದುಕೊಳ್ಳುವ ಅವಕಾಶವೂ ಹೆಚ್ಚಿದೆ. ಈ ಲೆಕ್ಕದ ಹಿನ್ನೆಲೆಯಲ್ಲಿ ಕಮಲ ಪಕ್ಷಕ್ಕೆ ತನ್ನದೇ ಸ್ವಂತ ಬಲವಿದೆ, ಅನ್ಯರಾಗಲಿ ಮತ್ತೊಂದು ಸುತ್ತಿನ ಆಪರೇಷನ್ ನಡೆಸುವ ಅನಿವಾರ್ಯತೆಯಾಗಲಿ ಇಲ್ಲ. ಇದೇ  ವಾಸ್ತವ.

ಆದರೆ, ಸಾರ್ವತ್ರಿಕವಾಗಿ 224 ಸ್ಥಾನಗಳಿಗೆ ಚುನಾವಣೆ ನಡೆದಾಗ, ಈ ಪಕ್ಷ ಬಹುಮತಕ್ಕೆ ಅಗತ್ಯವಾದಷ್ಟು ಸ್ಥಾನ ಗೆದ್ದಿಲ್ಲ, ಆಪರೇಷನ್ ಮೂಲಕವೇ ಅದನ್ನ ಹೊಂದಿಸಿಕೊಂಡಿದೆ ಎಂಬುದನ್ನು ಮರೆಯುವಂತಿಲ್ಲ.

ದಶಕದ ಹಿಂದೆ ಅಂದರೆ 2008ರಲ್ಲಿ ಚುನಾವಣೆ ನಡೆದಾಗ ಬಿಜೆಪಿ ಗಳಿಸಿದ್ದು 110 ಸ್ಥಾನ.( ಮತಗಳಿಕೆ ಶೇ.33.86). ಆಗ ಸರ್ಕಾರ ಉಳಿಸಿಕೊಳ್ಳಲು ಆಪರೇಷನ್ ಕಮಲ ಹುಟ್ಟುಹಾಕಿ ಉಪಚುನಾವಣೆಯಲ್ಲಿ ಗೆದ್ದುಕೊಂಡು ಅಧಿಕಾರ ಉಳಿಸಿಕೊಂಡಿತ್ತು. ಆದರೆ ಮುಖ್ಯಮಂತ್ರಿಗಳು ಮೂರು ಮಂದಿಯಾದರು.

ಈ 2008ರಲ್ಲಿ 105 ಸ್ಥಾನ ಗಳಿಸಿಕೊಂಡ ಬಿಜೆಪಿ(ಮತ ಗಳಿಕೆ ಶೇ.36.34) ಅಧಿಕಾರ ಉಳಿಸಿಕೊಳ್ಳುವುದಕ್ಕಾಗಿ ನಡೆಸಿದ ಆಪರೇಷನ್‍ ನ ಉಪಚುನಾವಣೆಯಲ್ಲಿ 12 ಸ್ಥಾನ ಗೆದ್ದು, ಸರ್ಕಾರ ಸುಭದ್ರವಾಗಿದೆ.

ಸಂಖ್ಯೆ ಏನೋ ಸರ್ಕಾರ ನಡೆಸಲು ಸಾಕಾಗುವಷ್ಟಿದೆ ಎಂಬುದರಲ್ಲಿ ಅನುಮಾನಗಳಿಲ್ಲ. ಆದರೆ, ಕಳೆದ ದಶಕದ ಸರ್ಕಾರದಲ್ಲಿ ಬಳ್ಳಾರಿ ಗಣಿಯವರ ಬಂಡಾಯದಿಂದ ಆಂತರಿಕವಾಗಿ ಪರಿಪಾಟಲಿಗೆ ಸಿಲುಕಿಕೊಂಡಿದ್ದ ಯಡಿಯೂರಪ್ಪ, ಈ ಸಲ ಹೊಸದಾಗಿ ಪಕ್ಷಕ್ಕೆ ಬಂದು ಶಾಸಕರಾಗಿರುವವರಿಂದ ತಾಪತ್ರಯವನ್ನ ಎದುರಿಸಬೇಕಾಗಿ ಬರಬಹುದೇ ಎಂಬ ಶಂಕೆಗಳಂತೂ ಇದ್ದೇ ಇವೆ. ಇದಕ್ಕೆ ಪೂರಕವಾಗಿ ಫಲಿತಾಂಶ ಹೊರಬಂದ ಅರಗಳಿಗೆಯಲ್ಲೇ ಶ್ರೀಮಂತ ಪಾಟೀಲ್ ಕೃಷಿ ಅಥವಾ ನೀರಾವರಿ ಖಾತೆ, ಬಿ.ಸಿ.ಪಾಟೀಲ್ ಗೃಹ ಖಾತೆ ಮೇಲೆ ಇರುವ ಆಸೆಯನ್ನು ಪರೋಕ್ಷವಾಗಿ ಹೊರಗಾಕಿದ್ದಾರೆ.  ಎಸ್.ಟಿ.ಸೋಮಶೇಖರ್ ಹಾಗು ಇತರರು ಚುನಾವಣಾ ಪ್ರಚಾರದಲ್ಲೇ ಮಂತ್ರಿಯಾಗುವವರಿಗೆ ಮತಕೊಡಿ ಎಂದು ಹೇಳಿರುವುದರಿಂದ ನಮಗೆ ಸಚಿವ ಸ್ಥಾನ ಕೊಡಬೇಕು ಎಂಬ ಹಕ್ಕು ಮಂಡಿಸಿದ್ದಾರೆ.

ಗೆದ್ದಿರುವ ಡಜನ್ ಶಾಸಕರ ಪೈಕಿ ಹತ್ತು ಮಂದಿಗಾದರೂ ಮಂತ್ರಿಗಿರಿ ಕೊಡಲೇಬೇಕು. ಟಿಕೆಟ್ ವಂಚಿತವಾಗಿದ್ದ ರಾಣಿಬೆನ್ನೂರಿನ ಆರ್. ಶಂಕರ್ ಗೆ ಕೊಟ್ಟ ಮಾತು ನಡೆಸಬೇಕು. ಉಪಮುಖ್ಯಮಂತ್ರಿ ಸ್ಥಾನ ಶ್ರೀರಾಮುಲುಗೋ ರಮೇಶ್ ಜಾರಕಿಹೊಳಿಗೋ, ಇದು ಹೊಸದಾಗಿ ಕೊಡಬೇಕೋ ಇಲ್ಲ ಲಕ್ಷ್ಮಣ ಸವದಿಯಿಂದ ಕಿತ್ತುಕೊಳ್ಳಬೇಕೋ ಎಂಬುದು ಗೋಜಲು ಮೂಡಿಸಿದೆ.

ಮರುಜನ್ಮ ಪಡೆದೆ ಎಂದೇಳಿಕೊಳ್ಳುತ್ತಿದ್ದ ಎಚ್.ವಿಶ್ವನಾಥ್ ತಾನಾಗಿಯೇ ರಾಜಕೀಯ ಆತ್ಮಹತ್ಯೆ  ಮಾಡಿಕೊಂಡು ಗುಟುಕು ಜೀವ ಉಳಿಸಿಕೊಂಡಿರುವುದನ್ನ ನೇರ್ಪು ಮಾಡಬೇಕಾ, ಹೊಸಕೋಟೆಯಲ್ಲಿ ಸ್ವತಂತ್ರವಾಗಿ ಗೆದ್ದಿರುವ ಶರತ್ ಬಚ್ಚೇಗೌಡರನ್ನು ಪಕ್ಷಕ್ಕೆ ಸೇರಿಸಿಕೊಂಡು, ಇವರ ತಂದೆ ಸಂಸದ ಬಚ್ಚೇಗೌಡರನ್ನೂ ಉಳಿಸಿಕೊಳ್ಳಲು ಎಂಟಿಬಿ ನಾಗರಾಜ್‍ರನ್ನು ದೂರವಿಡಬೇಕಾ ಎಂಬುದು ಮುಂಚೂಣಿಗೆ ಬಂದಿದೆ.

ಇಡೀ ಇತಿಹಾಸದಲ್ಲಿ ಇದೇ ಮೊದಲ ಸಲ ಯಡಿಯೂರಪ್ಪ ತನ್ನ ತವರು ಜಿಲ್ಲೆ ಮಂಡ್ಯದ ಕೆ.ಆರ್.ಪೇಟೆಯಲ್ಲಿ ಪಕ್ಷದ ಖಾತೆ ತೆರೆಯುವಲ್ಲಿ ಯಶಸ್ವಿಯಾಗಿರುವುದರ ಜೊತೆಯಲ್ಲೇ, ಜನತಾದಳದ ಭದ್ರಕೋಟೆಯನ್ನ ಪುಡಿ ಮಾಡಿ, ಆ ಜಿಲ್ಲೆಯಲ್ಲಿ ತನ್ನ ಪುತ್ರ ವಿಜಯೇಂದ್ರ ಅಧಿಪತ್ಯ ಸ್ಥಾಪಿಸುವ ಅವಕಾಶವನ್ನ ಯಶಸ್ವಿಯಾಗಿ ಸೃಷ್ಟಿಸಿಕೊಂಡಿದ್ದಾರೆ.

ಆರ್ ಎಸ್‍ಎಸ್‍ ಮೂಲದಿಂದ ಯಡಿಯೂರಪ್ಪರನ್ನ ಬಗ್ಗು ಬಡಿಯುವಂಥ ಒಳಗೊಳಗಿನ ಕೆಲಸಗಳು ಎಗ್ಗಿಲ್ಲದೆ ನಡೆಯುತ್ತಿದ್ದುದಕ್ಕೆ, ಈ ಫಲಿತಾಂಶ ಕೊಂಚವಾದರೂ ಕಡಿವಾಣವನ್ನಾಕಿದೆ. ಅಂತೆಯೇ ಪ್ರಧಾನಿ ಮೋದಿ, ಅಮಿತ್ ಶಾಗಿಂತ ಇಲ್ಲಿ ಯಡಿಯೂರಪ್ಪ ಅಸ್ತಿತ್ವವೇ ಚಲಾವಣೆಗೆ ಬಂದಿದ್ದು ವಿಶೇಷ.

ವಿರೋಧ ಪಕ್ಷಗಳ ದೃಷ್ಟಿಯಿಂದ ನೋಡುವುದಾದರೆ, 9 ರ ನಂತರ ನಾನೇ ಮುಖ್ಯಮಂತ್ರಿ ಎನ್ನುತ್ತಿದ್ದ ಸಿದ್ದರಾಮಯ್ಯರನ್ನ ಅವರ ಪಕ್ಷದವರೇ ಒಂಟಿ ಮಾಡಿಬಿಟ್ಟರೆ, ಮುಂದಿದೆ ನೋಡಿ ಮಹಾ ನಾಟಕ ಎಂಬರ್ಥದ ಮಾತು ಹೇಳುತ್ತಾ ಜನತಾದಳ ಗೊಂದಲ ಮೂಡಿಸುತಾ ಹೊರಟಿದ್ದರಿಂದ ಮತದಾರರಿಗೆ ಸುಭದ್ರ ಸರ್ಕಾರವಿರಲಿ ಎಂಬ ಧೋರಣೆಯೇ ಬಲಗೊಂಡಿದ್ದು ಒಂದೆಡೆಯಾದರೆ, ಲಿಂಗಾಯತ ಸಮುದಾಯ ಇನ್ನೊಂದೆಡೆ ಒಟ್ಟಾಗಿ ನಿಂತುಬಿಟ್ಟಿತು.  ಹೀಗಾಗಿ ಉತ್ತರ ಕರ್ನಾಟಕದ ಏಳಕ್ಕೆ ಏಳೂ ಸ್ಥಾನಗಳಲ್ಲಿ ಬಿಜೆಪಿ ಗೆದ್ದಿದ್ದರೆ, ಎಂಟು ಸ್ಥಾನಗಳಿದ್ದ ಹಳೇ ಮೈಸೂರು ಭಾಗದಲ್ಲಿ ಐದು ಸ್ಥಾನ ತನ್ನದಾಗಿಸಿಕೊಳ್ಳಲು ಯಶಸ್ವಿಯಾಗಿದೆ.

ಇಡೀ ಫಲಿತಾಂಶ ಯಡಿಯೂರಪ್ಪ ಸರ್ಕಾರ ಇರಲಿ ಎಂದು ಒಂದು ಸಮುದಾಯ ಪಟ್ಟಾಗಿ ನಿಂತಿದ್ದು, ಮಂಡ್ಯ ಜಿಲ್ಲೆಯಲ್ಲಿ ಮೊಟ್ಟ ಮೊದಲಿಗೆ ಬಿಜೆಪಿ ಗೆದ್ದಿದ್ದು, ವಿಜಯೇಂದ್ರ ಉತ್ತರಾಧಿಕಾರಿಯಾಗಿ ರೂಪುಗೊಂಡಿದ್ದು, ಸಿದ್ದರಾಮಯ್ಯ ನಾಯಕತ್ವಕ್ಕೆ ಕಾಂಗ್ರೆಸ್‍ನಲ್ಲೇ ಒಡಕು ಹೆಚ್ಚುವಂತಾಗುತ್ತಿರುವುದು, ಜನತಾದಳ ಶೂನ್ಯವಾಗಿರುವುದು, ವಿಶ್ವನಾಥ್ ತನ್ನ ಕಾಲ ಮೇಲೆ ತಾನೇ ಚಪ್ಪಡಿ ಕಲ್ಲು ಎತ್ತಿ ಹಾಕಿಕೊಂಡಿರುವಂಥದ್ದನ್ನ ತೋರಿಸಿಕೊಟ್ಟಿದೆ.

ಅನರ್ಹರು ಎನಿಸಿಕೊಂಡರೂ,  ಪಕ್ಷಾಂತರ ಮಾಡಿದರೂ ಪರವಾಗಿಲ್ಲ ಎಂದು ಮತದಾರರೇ ಪರವಾನಗಿ ಕೊಟ್ಟಿಬಿಟ್ಟಿದ್ದಾರೆ ಎಂಬುದನ್ನೂ ಇಲ್ಲಿ ಮರೆಯುವಂತಿಲ್ಲ.