ಕೇಂದ್ರದ ‘ಪ್ರಯತ್ನ’ದ ಫಲವಾಗಿಯೇ ಜಿಯೋ ಎದುರು ಮುಗ್ಗರಿಸುತ್ತಿರುವ ಬಿಎಸ್ಎನ್ಎಲ್

ಕೇಂದ್ರದ ‘ಪ್ರಯತ್ನ’ದ ಫಲವಾಗಿಯೇ ಜಿಯೋ ಎದುರು ಮುಗ್ಗರಿಸುತ್ತಿರುವ ಬಿಎಸ್ಎನ್ಎಲ್

ಬಿಎಸ್ಎನ್ಎಲ್ ಎಂಬ ಸರ್ಕಾರಿ ಸಂಸ್ಥೆ ಮೊಬೈಲ್ ಸಂಪರ್ಕ ಒದಗಿಸಲು ಶುರುಮಾಡಿದ ಎರಡೇ ವರ್ಷದಲ್ಲಿ ಏರ್ಟೆಲ್ ಎಂಬ ಬೃಹತ್ ಖಾಸಗಿ ಸಂಸ್ಥೆಯನ್ನೂ ಮೀರುವಂತೆ ಬೆಳೆದಿದ್ದು ಸಂಪರ್ಕ ಜಗತ್ತಿಗೆ ಅಚ್ಚರಿಯಾಗಿತ್ತು. ಆದರೆ ಇದೀಗ ಹದಿನೈದು ವರ್ಷಗಳ ನಂತರ ಸರ್ಕಾರವೇ ‘ಬಿಎಸ್ಎನ್ಎಲ್ ಸಾಕುವುದೂ ಒಂದೇ ಬಿಳಿಯಾನೆ ಸಾಕುವುದೂ ಒಂದೇ ‘ ಎನ್ನುವ ರೋಧನೆ ಹಾಗೂ ನೌಕರರಿಗೆ ಸಂಬಳ ಬಿಡುಗಡೆಗೊಳಿಸದಿರುವ ವರದಿಗಳು ಮಾಧ್ಯಮಗಳಲ್ಲಿ ಆಗಿಂದಾಗ್ಗೆ ಕಾಣಿಸತೊಡಗಿದೆ. ಮೇಲ್ನೋಟಕ್ಕೆ ಸರ್ಕಾರ ಹೇಳುತ್ತಿರುವ ವಿಚಾರ ಸರಿ ಅನ್ನಿಸಿದರೂ ಬಿಎಸ್ಎನ್ಎಲ್ ಬೆಳವಣಿಗೆಯ ವಿವಿಧ ಹಂತಗಳನ್ನು ಗಮನಿಸಿದರೆ ಸಂಸ್ಥೆಯ ಇಂದಿನ ಸ್ಥಿತಿಯ ಹಿಂದೆ ಸರ್ಕಾರಗಳ ಅನೇಕ ವರ್ಷಗಳ ‘ಪ್ರಯತ್ನ’ವೂ ಇದೆ ಎನ್ನುವ ಅನುಮಾನ ಹುಟ್ಟಿಕೊಳ್ಳುತ್ತದೆ. 

ಭಾರತದ ಸಂಪರ್ಕ ಕ್ಷೇತ್ರ ಭಾರಿ ವೇಗದಲ್ಲಿ ಬೆಳೆಯುತ್ತಿದ್ದರೂ ಬಿಎಸ್ಎನ್ಎಲ್ ಹಿಂದಿನ ರೂಪವಾದ ‘ಕೇಂದ್ರ ಟೆಲಿಕಾಂ ಸೇವೆ ಇಲಾಖೆ(ಡಿಟಿಎಸ್)ಯನ್ನು ಖಾಸಗಿ ಸಂಸ್ಥೆಗಳೆದುರು ಸ್ಪರ್ಧಿಸಲು ಸರ್ಕಾರವೇ ಅವಕಾಶ ನೀಡಿರಲಿಲ್ಲ. 1991 ರಲ್ಲಿ ಭಾರತ ಹೊರತಂದ ನವ ಉದಾರೀಕರಣ ಆರ್ಥಿಕ ನೀತಿಯೂ ಸರ್ಕಾರಿ ಸಂಪರ್ಕ ಸಂಸ್ಥೆಯ ಬೆಳವಣಿಗೆಗೆ ತೊಡಕಾಗಿ ಪರಿಣಮಿಸಿತ್ತು. ಹೀಗಾಗಿ ದೇಶದ ಖಾಸಗಿ ಸಂಪರ್ಕ ಸಂಸ್ಥೆಗಳಿಗೆ ಮೊಬೈಲ್ ಸಂಪರ್ಕ ಒದಗಿಸುವ ಪರವಾನಿಗೆ 1995 ರಲ್ಲೇ ಸಿಕ್ಕರೂ ಬಿಎಸ್ಎನ್ಎಲ್ ತನ್ನ ಮೊಬೈಲ್ ಸೇವೆ ಆರಂಭಿಸಿದ್ದು 2002 ರಲ್ಲಿ . ಸರ್ಕಾರವೇ ಮೊದಲು ಖಾಸಗಿ ಸಂಸ್ಥೆಗಳಿಗೆ ಸಾಕಷ್ಟು ಬೆಳೆಯಲು ಅವಕಾಶ ನೀಡಿ ಅಂತಿಮವಾಗಿ ತನ್ನದೇ ಸಂಸ್ಥೆಯನ್ನು ಸ್ಪರ್ಧೆಗಿಳಿಸಿತು. 2000 ಇಸವಿ ಸುಮಾರಿಗೆ ಡಿಟಿಎಸ್ ಸಂಸ್ಥೆ ಭಾರತೀಯ ಸಂಚಾರ ನಿಗಮ ನಿಯಮಿತವಾಗಿ ಸರ್ಕಾರ ಹೊಸರೂಪ ನೀಡಿತ್ತು. 

21 ನೇ ಶತಮಾನದ ಆರಂಭದಲ್ಲಿ ಹುಟ್ಟಿದ ಬಿಎಸ್ಎನ್ಎಲ್ ಎನ್ನುವ ಕೂಸು ಸಂಪರ್ಕ ಕ್ಷೇತ್ರದಲ್ಲಿ ಹಿಡಿತ ಸಾಧಿಸಿದ್ದ ಬೃಹತ್ ಖಾಸಗಿ ಕಂಪನಿಗಳೊಂದಿಂಗೆ ಸ್ಪರ್ಧಿಸಬೇಕಾದ ಅನಿವಾರ್ಯತೆ ಉಂಟಾಗಿತ್ತು. ಖಾಸಗಿ ಸಂಸ್ಥೆಗಳೊಂದಿಗೆ ಸ್ಪರ್ಧಿಸುತ್ತಲೇ 2002ರಲ್ಲಿ ಬಿಎಸ್ಎನ್ಎಲ್ ತನ್ನ ಮೊಬೈಲ್ ಸೇವೆಯನ್ನು ಆರಂಭಿಸಿ ಹಳ್ಳಿ ಹಳ್ಳಿಗೂ ಸೇವೆಯನ್ನು ವಿಸ್ತರಿಸಿತೊಡಗಿತು. ಖಾಸಗೀಕರಣ ಭಾರತದ ಜನಸಾಮಾನ್ಯರ ನಂಬಿಕೆ ಒಡೆದಿತ್ತೋ ಎನ್ನುವಂತೆ ಜನರು ಬಿಎಸ್ಎನ್ಎಲ್ ಗೆ ಹತ್ತಿರವಾಗ ತೊಡಗಿದರು. ಹೀಗಾಗಿ 2004 ರ ಸುಮಾರಿಗೆ ಅಂದಿನ ಪ್ರಮುಖ ಸಂಪರ್ಕ ಸಂಸ್ಥೆಯಾಗಿದ್ದ ಏರ್ಟೆಲ್ ಹೊಂದಿದ್ದ ಗ್ರಾಹಕರ ಸಂಖ್ಯೆ ಸರಿಗಟ್ಟುವ ಹತ್ತಿರಕ್ಕೆ ಬಿಎಸ್ಎನ್ಎಲ್ ದಾಪುಗಾಲಿಟ್ಟಿತು. 

ದೇಶದಲ್ಲಿ 2006ರ ಆಸುಪಾಸಿನಲ್ಲಿ ಸಂಪರ್ಕ ಕ್ರಾಂತಿ ತನ್ನ ತುಟ್ಟ ತುದಿ ಮುಟ್ಟುವಂತೆ ಬೆಳೆದಿತ್ತು. ಆದರೆ ಇದೇ ಸಂದರ್ಭದಲ್ಲಿ ಸರ್ಕಾರ ಬಿಎಸ್ಎನ್ಎಲ್ ನ ಬೆಳವಣಿಗೆ ಮೊಟಕುಗೊಳಿಸುವ ಪ್ರಯತ್ನವನ್ನೂ ಆರಂಭಿಸಿತು. 2006 ರಿಂದ 2012 ರ ವರೆಗೆ ಬಿಎಸ್ಎನ್ಎಲ್ ಗೆ ಯಾವುದೇ ಉಪಕರಣ ಕೊಳ್ಳುವುದಕ್ಕೆ ಅವಕಾಶ ನೀಡಿರಲಿಲ್ಲ. 2007 ರಲ್ಲಿ ಸುಮಾರು 45 ಲಕ್ಷ ಸಂಪರ್ಕ ಗುತ್ತಿಗೆಯನ್ನು ಸರ್ಕಾರ ರದ್ದುಗೊಳಿಸಿತು. 2010 ರಲ್ಲಿ 93 ಲಕ್ಷ ಸಂಪರ್ಕ ಗುತ್ತಿಗೆಯನ್ನು ರದ್ದುಗೊಳಿಸಿ ಮತ್ತೊಂದು ಆಘಾತ ನೀಡಿದೆ.

ಸಂಸ್ಥೆಯನ್ನು ದುರ್ಬಲಗೊಳಿಸುವ ಸರ್ಕಾರದ ಪ್ರಯತ್ನಗಳ ವಿರುದ್ಧ ಬಿಎಸ್ಎನ್ಎಲ್ ಕೆಲಸಗಾರರ ಯೂನಿಯನ್ ಗಳು ದನಿಯೆತ್ತಿದರೂ ಪ್ರಯೋಜನವಾಗಿದ್ದು ಕಮ್ಮಿ. ಗ್ರಾಹಕರು ಕಡಿಮೆಯಾಗುತ್ತಿರುವುದನ್ನು ಮನಗಂಡ ಸಂಸ್ಥೆ ಹೊಸ ಹೊಸ ಆಫರ್ ಗಳನ್ನು ಜನರಿಗೆ ಪರಿಚಯಿಸತೊಡಗಿತು. ರಾತ್ರಿ ಸಮಯದಲ್ಲಿ ಉಚಿತ ಕರೆ ಸೇವೆ, ಭಾರತದಾದ್ಯಂತ ರೋಮಿಂಗ್ ರಹಿತ ಕರೆ ಸೇವೆ ಮೊದಲಾದ ಆಕರ್ಷಕ ಸೇವೆಯನ್ನು ಒದಗಿಸಿತು. 

ಬಿಎಸ್ಎನ್ಎಲ್ ತನ್ನ ಬಿಕ್ಕಟ್ಟಿನ ಪರಿಸ್ಥಿತಿಯಲ್ಲೂ 2015 ರಲ್ಲಿ ಸುಮಾರು 16 ಲಕ್ಷ ಮೊಬೈಲ್ ಸಂಪರ್ಕವನ್ನು ಒದಗಿಸುವ ಮೂಲಕ ಖಾಸಗಿ ಸಂಸ್ಥೆಗಳಿಗಿಂತಲೂ ಹೆಚ್ಚಿನ ಸಂಪರ್ಕ ನೀಡಿತ್ತು. 2016 ರ ವರೆಗೆ ಸಂಸ್ಥೆ ತನ್ನ ಆದಾಯ ಗಳಿಕೆಯಲ್ಲೂ ಲಾಭದಾಯಕವಾಗಿ ಕಂಡಿತ್ತು. 2012 ರಲ್ಲಿ ಸಂಸ್ಥೆಯ ಒಟ್ಟು ಆದಾಯ 27,127 ಕೋಟಿ ರೂ.ಗಳಿಂದ 2016 ರಲ್ಲಿ 32,918 ಕೋಟಿ ರೂ.ಗೆ ಏರಿಕೆಯಾಗಿತ್ತು. ಆದರೆ 2016ರಲ್ಲಿ ಜಿಯೋ ಎಲ್ಲಾ ಸರ್ಕಾರಿ ನಿಯಮಗಳನ್ನು ಸಡಿಲಗೊಳಿಸಿಕೊಂಡು ಹೊರತಂದ ಉಚಿತ ಸೇವೆಗಳ ಎದುರು ಬಿಎಸ್ಎನ್ಎಲ್ ಮುಗ್ಗರಿಸತೊಡಗಿತು.

ದೇಶದಲ್ಲಿ ಮೊಬೈಲ್ ಬಳಕೆದಾರರು 2016 ರ  ಸುಮಾರಿಗೆ ಜಿಯೋ, 4ಜಿ ಹಿಂದೆ ಓಡಲಾರಂಭಿಸಿದರೆ ಬಿಎಸ್ಎನ್ಎಲ್ ಈವರೆಗೂ 4ಜಿ ಸೇವೆ ನೀಡಲು ಅವಕಾಶವೇ ನೀಡಿಲ್ಲ ಎಂದು ಬಿಎಸ್ಎನ್ಎಲ್ ಉದ್ಯೋಗಿಗಳ ಯೂನಿಯನ್ ಗಳು ಆರೋಪಿಸಿವೆ. ಸರ್ಕಾರ ಬಿಎಸ್ಎನ್ಎಲ್ ಗೆ ಅಗತ್ಯವಿರುವ ಉಪಕರಣಗಳನ್ನು ಖರೀದಿಸುವ ಗೋಜಿಗೂ ಹೋಗದೆ ಸಂಸ್ಥೆಯನ್ನು ‘ರೋಗಗ್ರಸ್ಥ’ ಎನ್ನುವ ಪಟ್ಟಿಯಲ್ಲಿರಿಸಿ ಪರಿಣಾಮಗಳನ್ನು ಕಾದು ನೋಡುವ ತಂತ್ರದಲ್ಲಿ ತೊಡಗಿದಂತೆ ಕಾಣುತ್ತದೆ ಎನ್ನುವುದು ಬಿಎಸ್ಎನ್ಎಲ್ ನ ನಿವೃತ್ತ ಅಧಿಕಾರಿಗಳ ಆರೋಪ 

‘ಜಿಯೋ ಸುನಾಮಿ’ಗೆ ಟಾಟಾ ಟೆಲಿಸರ್ವಿಸ್, ಏರ್ಸೆಲ್ ಮೊದಲಾದ ಸಣ್ಣ ಪುಟ್ಟ ಕಂಪನಿಗಳು ಬಾಗಿಲು ಮುಚ್ಚಿಕೊಂಡಿವೆ. ಕೆಲವು ಸಂಸ್ಥೆಗಳು ದೊಡ್ಡ ಸಂಸ್ಥೆಗಳೊಂದಿಗೆ ವಿಲೀನಗೊಂಡಿದೆ. ಸಂಪರ್ಕ ಕ್ಷೇತ್ರದಲ್ಲಿ ಉಂಟಾಗಿರುವ ಕಷ್ಟಗಳು ನಡುವೆ ಬಿಎಸ್ಎನ್ಎಲ್ ಸಂಸ್ಥೆಯನ್ನೂ ತಟ್ಟಿದೆ. ನೂತನ ಸೇವೆಗಳನ್ನು ಒದಗಿಸಲು ಸರ್ಕಾರವೇ ತೊಡಕಾದರೆ ಬಿಎಸ್ಎನ್ಎಲ್ ಲಾಭದಲ್ಲಿ ಮುನ್ನಡೆಯುವುದು ಅಸಾಧ್ಯ ಎನ್ನವುದು ಅಲ್ಲಿನ ಹಿರಿಯ ಅಧಿಕಾರಿಗಳ ಅಭಿಪ್ರಾಯ

ಉದ್ಯೋಗ ಸಂಪರ್ಕ ಕಡಿಯಲು ಸರ್ಕಾರದ ಪ್ರಯತ್ನ  

ಬಿಎಸ್ಎನ್ಎಲ್ ಇದೀಗ ಸುಮಾರು 1.75 ಲಕ್ಷ ಉದ್ಯೋಗಿಗಳ ಬಲದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಸರ್ಕಾರ ನೌಕರರಿಗೆ ಸರಿಯಾಗಿ ವೇತನ ನೀಡದೆ ಸತಾಯಿಸುತ್ತಲೂ ಸ್ವಯಂ ಪ್ರೇರಿತ ನಿವೃತ್ತಿ ತಗೊಳ್ಳಿ ಎಂದು ಪುಸಲಾಯಿಸುತ್ತಲೂ ಉದ್ಯೋಗಿಗಳ ಸಂಖ್ಯೆ ಕಡಿತಕ್ಕೆ ಇನ್ನಿಲ್ಲದ ಪ್ರಯತ್ನದಲ್ಲಿದೆ ಎಂದು ಸಂಸ್ಥೆಯ ಉದ್ಯೋಗಿಗಳು ಆರೋಪಿಸಿದ್ದಾರೆ.

ಬಿಎಸ್ಎನ್ಎಲ್ ಸಂಸ್ಥೆಯ ಉದ್ಯೋಗಿಗಳ ನಿವೃತ್ತಿ ವಯಸ್ಸನ್ನು ಸರ್ಕಾರ 60 ರಿಂದ 58 ಕ್ಕೆ ಇಳಿಸುವ ಮೂಲಕ ಸಂಸ್ಥೆಯಿಂದ ಹೊರದಬ್ಬುವ ಆತುರಕ್ಕೆ ಬಿದ್ದಿದೆ. 2019 ರಲ್ಲಿ ಸುಮಾರು 40 ಸಾವಿರ ಉದ್ಯೋಗಿಗಳನ್ನು ಸ್ವಯಂ ನಿವೃತ್ತಿ -ವಿಆರ್ ಎಸ್ ಮೂಲಕ ಹೊರಹಾಕುವುದಕ್ಕೆ ಸರ್ಕಾರ ಪ್ರಯತ್ನಿಸಿದೆ. ಹೀಗಾಗಿ ಬಿಎಸ್ಎನ್ಎಲ್ ಉದ್ಯೋಗಿಗಳನ್ನು ಇತರೆ ಸರ್ಕಾರಿ ಉದ್ಯೋಗಿಗಳಿಗಿಂತ ಬೇರೆಯಾಗಿ ನೋಡುತ್ತಿರುವುದರಿಂದ ಸರ್ಕಾರವನ್ನು ಅನುಮಾನದಿಂದ ನೋಡುವಂತಾಗಿದೆ, ಇತರೆ ಸರ್ಕಾರಿ ಉದ್ಯೋಗಿಗಳಿಗೆ ಅನ್ವಯವಾಗುವ ನಿಯಮಗಳನ್ನೇ ಬಿಎಸ್ಎನ್ಎಲ್ ಗೂ ಕೊಡಬೇಕು ಎನ್ನುವ ಆಗ್ರಹ ಮಾಡಬೇಕಿದೆ ಎಂದು ಎಯುಎಬಿ ಯೂನಿಯನ್ ಸದಸ್ಯ ಸುದರ್ಶನ್ ಹೇಳುತ್ತಾರೆ.

ಬಿಎಸ್ಎನ್ಎಲ್ ಬೆಳೆದ ಹಿನ್ನೆಲೆ ಹಾಗೂ ಇಂದಿನ ಮುಗ್ಗಟ್ಟಿನ ಪರಿಸ್ಥಿತಿಯನ್ನು ಕೊಂಚ ಅವಲೋಕಿಸಿದರೂ ಸರ್ಕಾರ ಲಾಭಾದಾಯಕವಾಗುವ ಸಂಸ್ಥೆಯನ್ನು ಹೇಗೆ ‘ಬೆಳೆಸುತ್ತಿದೆ’ ಎನ್ನುವುದಕ್ಕೆ ಉತ್ತಮ ಉದಾಹರಣೆಯಾಗಿದೆ. ಈಗಲೂ ಬಿಎಸ್ಎನ್ಎಲ್ ಗೆ 4ಜಿ ಸೇವೆಯನ್ನು ಒದಗಿಸುವ ಅವಕಾಶ ಸಿಕ್ಕರೆ ಮತ್ತೆ ಸಂಸ್ಥೆ ಪುಟಿದೇಳುತ್ತದೆ ಎನ್ನುವುದು ಅಲ್ಲಿನ ಅಧಿಕಾರಿಗಳ ಯೋಚನೆ. ಆದರೆ ಇತ್ತೀಚಿನ ಬಜೆಟ್ ನಲ್ಲಿ 1 ಲಕ್ಷ ಕೋಟಿ ರೂಪಾಯಿಗೂ ಹೆಚ್ಚಿನ ಬಂಡವಾಳವನ್ನು ಹಿಂತೆಗೆದುಕೊಳ್ಳುತ್ತೇವೆ ಎಂದು ಘೋಷಿಸಿರುವ ನಿರ್ಮಲಾ ಸೀತಾರಾಮನ್ ಅವರ ‘ಯೋಜನೆ’ಯಿಂದಾಗಿ ಬಿಎಸ್ಎನ್ಎಲ್ ಇನ್ಯಾವ ಸ್ಥಿತಿ ಮುಟ್ಟುತ್ತದೋ ಎನ್ನುವ ಆತಂಕ ಉದ್ಯೋಗಿಗಳ ಮುಂದಿದೆ.