ಅಕ್ಷರಗಳಿಗೆ ಕಡ್ಡಿ ಗೀರಿ

ಅಕ್ಷರಗಳಿಗೆ ಕಡ್ಡಿ ಗೀರಿ

ಅಕ್ಷರಗಳೆಲ್ಲ ಬಂಡೇಳಬೇಕಿತ್ತು ಈಗ

 

ಅದೇನು,ಅವೆಲ್ಲ ಗುಳೆ ಹೊರಟಂತಿವೆ

ಸಾಲು ಪುಟ ಪುಸ್ತಕದ ಶೆಲ್ಪುಗಳಿಂದ ಜಾರಿ

 

ಹೋಗಿದ್ದೇ ತಿಳಿಯದ ಅವರು

ಕಲಿತ ಮಾತುಗಳ ಒಪ್ಪಿಸಲು 

ಎರವಲು ಸ್ವರ ವರ್ಣಗಳ ಎರಚುತ್ತಿದ್ದಾರೆ

ಎದುರಿಗಿದ್ದವರ ಮುಖದ ಅಬೋಧ 

ಭಾವ ಅವರ ಕಣ್ಣಿಗೆ ಬಿದ್ದಂತಿಲ್ಲ

 

ಇನ್ನು ಕೆಲವರು ಮಾತು ಕಳಕೊಂಡವರು

ಕುಳಿತಿದ್ದಾರೆ ಪರಸ್ಪರ ಕಣ್ಣಲ್ಲಿ ಇಣುಕುತ್ತ

ಕಂಡ ತಮ್ಮದೇ ಬಿಂಬ ಚಹರೆಗಳ 

ಗುರುತಿಸಲು ಹೆಣಗುತ್ತ ಕನ್ನಡಿಯಲ್ಲಿ 

ಕಂಡೆವೆಂಬಂತೆ ಭ್ರಮಿಸಿ ಬೆಚ್ಚುತ್ತ

 

ಪಿಸುಮಾತುಗಳಲ್ಲಿ ಕದಲಿಸುತ್ತಿದ್ದ

ಆ ಅವರಿಗೆ ಈಗ ತಿಳಿದೇ ಇಲ್ಲ 

ತಮ್ಮ ಉಡುಗಿ ಹೋದ ಧ್ವನಿಶಕ್ತಿ

ಪರಿಣಾಮಕ್ಕಾಗಿ ವಿಪರೀತ ಅಭಿನಯ

ಏರು ಕೊರಲು, ಕಂಠ ಚಣಚಣಕ್ಕೂ 

ಕೀರಲಾಗುತ್ತ-

ದಯನೀಯ ಪ್ರತಿಮೆ

 

ಅರೆ ನಿದ್ರೆಯಲ್ಲಿ ಹಠಾತ್ತನೆ ಎದ್ದ

ರಾಜ ತಾನೇ ಮುಂದಾಳಾಗಿ 

ಇಳಿದಿದ್ದಾನೆ ರಣರಂಗಕ್ಕೆ

ಉಟ್ಟ ಬಟ್ಟೆಯಲ್ಲೇ ಓಡಿಬಂದಿದ್ದಾನೆ

ಕವಚ ಧರಿಸಲೂ ಮರೆತು

ತುಕ್ಕು ಹಿಡಿದ ಗುರಾಣಿ ಮೊಂಡು ಕತ್ತಿಯ 

ಹಿಡಿದು,ಪಾಪ- ಮರೆತೇ ಹೋಗಿದ್ದಾನೆ

ಯುದ್ಧ ಯಾರೊಡನಿತ್ತು ??

 

ನೆರವಿ ಸೇರಿದ ಅಕ್ಷರಗಳ ಪರೇಡು

ನಡೆದಿದೆ. ಮಂದಿ ಟಿ.ವಿ.ಯಲ್ಲಿ ಪ್ರಭಾತ ಫೇರಿ

ಕಂಡಂತೆ ಆಕಳಿಸುತ್ತ ಚಾನಲ್ ಬದಲಿಸುತ್ತಿದ್ದಾರೆ

ಬಿಸಿಲಲ್ಲಿ ಬಿದ್ದ ಅಕ್ಷರಗಳಿಗೆ ನೀರು-

ನೆರಳು ಸಿಗದೆ ಕಂಗಾಲು

 

ಕೆಲವು ನಿಂತಿವೆ ಇನ್ನೂ ಕೆಲವು 

ಎಲ್ಲೆಂದರಲ್ಲಿ ಉರುಳಿ ನಿದ್ದೆ ಹೋಗಿವೆ

ಉಳಿದವು ನಡುರಸ್ತೆಯಲ್ಲೇ

ಗುಪ್ಪೆಯಾಗಿ

 

ಕಡ್ಡಿಗೀರಿ ಇನ್ನು

ಹೊತ್ತಿಸುವುದು ಹೇಗೆ ಅವನ್ನು