ಗ್ರಾಮ ಜಗತ್ತಿನ ವಿಸ್ಮಯಗಳ ಅನಾವರಣ

ಸ್ವಾತಂತ್ರ್ಯಾಪೂರ್ವದಲ್ಲಿ ಪ್ರಾರಂಭವಾಗುವ ಕಥೆಯು ಸ್ವಾತಂತ್ರ್ಯಾನಂತರದಲ್ಲೂ ಮುಂದುವರೆದು, ಎರಡು ಕಾಲಘಟ್ಟದಲ್ಲಿನ ಈ ದೇಶದ ರಾಜಕೀಯ, ಸಾಮಾಜಿಕ, ನೈತಿಕ ಮತ್ತು ಇವುಗಳ ಹಿನ್ನೆಲೆಯಲ್ಲಿ ರೂಪಾಂತರಗೊಳ್ಳುತ್ತಿರುವ ಗ್ರಾಮ ಬದುಕಿನ ಚಿತ್ರಣವನ್ನು ಕಟ್ಟಿಕೊಡುತ್ತದೆ

ಗ್ರಾಮ ಜಗತ್ತಿನ ವಿಸ್ಮಯಗಳ ಅನಾವರಣ

ಬಾಳಾಸಾಹೇಬ ಲೋಕಾಪುರರು ನಮ್ಮ ನಡುವಿನ ಸಮರ್ಥ ಹಿರಿಯ ಕಥೆಗಾರರು. ಅವರು ಕಥೆಗಳ ವಿಚಾರಕ್ಕೆ ಬಂದರೆ ತಮ್ಮ ಸುತ್ತಲಿನ ಲೋಕವನ್ನು ವಿಶಿಷ್ಟವಾಗಿ ಗ್ರಹಿಸಿ, ಆ ಗ್ರಹಿಕೆಗಳನ್ನು ಅನುಭಾವದ ನೆಲೆಯಲ್ಲಿ ಕಥೆಯೊಳಗೆ ತರುತ್ತಾರೆ. ಕಥೆಗಾರರಾಗಿ ಅವರ ಕಲ್ಪನೆ ವಿಶಿಷ್ಟವಾಗಿದ್ದು, ಈ ಕಲ್ಪನೆಯಿಂದಲೇ ಹೊಸ ಲೋಕವೊಂದನ್ನು ಕಾಣಿಸುತ್ತಾರೆ. ಅಲ್ಲದೇ ಬಾಳಾಸಾಹೇಬರು ಕಾಲಾನುಕ್ರಮದಲ್ಲಿ ತಮ್ಮ ಕಥೆಗಳ ರಚನಾಕ್ರಮವನ್ನು ಅಗತ್ಯತೆಗೆ ತಕ್ಕಂತೆ ಮರುರೂಪಿಸಿಕೊಳ್ಳುವಂಥ ಜವಾಬ್ದಾರಿಯನ್ನೂ ಸಹ ಹೊಂದಿದ್ದಾರೆ. 

ಕಥೆಗಾರ ಬಾಳಾಸಾಹೇಬರಿಗೆ ಸಂಬಂಧಿಸಿದಂತೆ ಈ ಎಲ್ಲ ವಿಚಾರವನ್ನು ಗಮನದಲ್ಲಿಟ್ಟುಕೊಂಡು ನೋಡಿದಾಗ ಅವರ ‘ಕೃಷ್ಣೆ ಹರಿದಳು’ ಕಾದಂಬರಿಯು ಓದುಗನಿಗೆ ವಿಶಿಷ್ಟವೆನಿಸುತ್ತದೆ. ಈ ಕಾದಂಬರಿಯಲ್ಲಿ ಒಂದು ಪಾತ್ರವೇ ಆಗಿ ಹೋಗಿರುವ ‘ಶಿರಹಾಡಿ’ ಎಂಬ ಕಲ್ಪಿತ ಗ್ರಾಮಲೋಕದಲ್ಲಿ ಬರುವ ಒಂದು ಕಾಲಘಟ್ಟದಲ್ಲಿನ ಪಾತ್ರಗಳು, ಸನ್ನಿವೇಶಗಳು, ಘಟನೆಗಳೆಲ್ಲವೂ ಒಂದರೊಳಗೊಂದು ಸೇರಿಕೊಂಡು ಓದುಗನ ಕಣ್ಮುಂದೆ ಅನೂಹ್ಯವಾದ ಲೋಕವೊಂದನ್ನು ಕಾಣಿಸುತ್ತ ಹೋಗುತ್ತವೆ. ಜೊತೆಗೆ, ಜೀವ ಸಂಜೀವಿನಿಯಾಗಿ ಹರಿಯುವ ಕೃಷ್ಣಾ ನದಿ ತೀರದ ಈ ಗ್ರಾಮದಲ್ಲಿ, ವಾಸ್ತವದಲ್ಲಿ ಕಾಲಾಂತರದಲ್ಲೂ ಉಳಿದುಕೊಂಡು ಬಂದಿರುವ ಫ್ಯೂಡಲ್ ಸಂಸ್ಕೃತಿಯ ಕ್ರೌರ್ಯದ ಪರಮಾವಧಿಯನ್ನು ಮತ್ತು ಅದರ ಆಳದೊಳಗೆ ಅತ್ಯಂತ ಕೀಳು ಮಟ್ಟದಲ್ಲಿ ರೂಢಿಯಲ್ಲಿರುವ ಜಾತಿಪದ್ಧತಿ, ಸಾಮಾಜಿಕ ಪಾತಳಿಯನ್ನು ಮೀರಿದ ಆಕ್ರಮಣಕಾರಿ ಲೈಂಗಿಕ ಸಂಬಂಧ, ನಂಬಿಕೆಗಳು, ಆಚರಣೆಗಳು- ಇವೆಲ್ಲವುಗಳನ್ನು ಸಾಧ್ಯಂತವಾಗಿ ಅನಾವರಣ ಮಾಡುತ್ತ ಹೋಗುತ್ತದೆ. ಅಲ್ಲದೇ, ನಮ್ಮ ನಾಗರಿಕತೆಗಳು ನದಿ ತೀರದಲ್ಲಿ ಬೆಳೆದು ಬಂದಿರುವುದಕ್ಕೆ ಕೇವಲ ಬದುಕು ಕಟ್ಟಿಕೊಳ್ಳುವುದಷ್ಟೇ ಕಾರಣವಾಗಿರದೆ ಅದರಾಚೆ ಈ ಎಲ್ಲ ಕ್ರಿಯೆಗಳಿಗೂ ಪರೋಕ್ಷವಾಗಿ ನದಿಯೇ ಕಾರಣವಾಗಿರುವುದು ಮತ್ತು ಅದನ್ನು ಸ್ವಯಂ ತಾನೇ ಲೋಕವ್ಯಾಪಿಯಾಗಿ ಸಾರ್ವತ್ರಿಕರಣಗೊಳಿಸಿರಬಹುದಾದ ಅಂಶವನ್ನು ಅರಿವಿಗೆ ತರುತ್ತದೆ. ಇಲ್ಲಿ ಏನೇನೋ ಘಟನೆಗಳು ಸಂಭವಿಸುತ್ತವೆ! ಮತ್ತು ಅವಕ್ಕೆಲ್ಲ ಪರೋಕ್ಷವಾಗಿ ನದಿಯೇ ಕಾರಣವಾಗಿದೆ ಎಂದೆಲ್ಲ ಎನಿಸುತ್ತದೆ. 

ಇನ್ನು, ಕಾದಂಬರಿಯ ರಚನೆಯ ವಿಚಾರಕ್ಕೆ ಬಂದರೆ ನದಿಯೊಂದು ನಮ್ಮ ಹಕ್ಕು, ಅದೇ ನಮ್ಮ ಆಸ್ತಿ, ಅದನ್ನು ಹೊರತು ಪಡಿಸಿ ನಮಗೇನೂ ಬೇಕಿಲ್ಲ ಎಂಬಂತೆ ಬದುಕುತ್ತಿರುವ ನದಿ ತೀರದ ಹಳ್ಳಿಯ ಜನರ ಬದುಕಿನ ಕುರಿತಾದ ಅದ್ಬುತವಾದ ಲೋಕವೊಂದನ್ನು ಭೂತ-ವರ್ತಮಾನಗಳಿಗೆ ಬೆಸೆಯುವಂತೆ ಅನಾವರಣ ಮಾಡುತ್ತ ಹೋಗುವಲ್ಲಿ ಸ್ವಯಂ ಕಾದಂಬರಿಕಾರರೇ ನಿರೂಪಕರಾಗಿ ಒಳಪ್ರವೇಶಿಸುವಂಥ ಹೊಸದೊಂದು ಕಥಾತಂತ್ರವನ್ನು ಬಳಸಿರುವುದು ಓದುಗರನ್ನು ಇನ್ನಷ್ಟು ಆಳವಾಗಿ ಇಲ್ಲಿನ ವಿಚಾರಗಳೊಂದಿಗೆ ಒಳಗೊಳ್ಳುವಂತೆ ಮಾಡುತ್ತದೆ. ಆ ಮೂಲಕ ಓದುಗನು ಕಾದಂಬರಿಯ ತುಂಬ ಆವರಿಸಿಕೊಂಡಿರುವ ಪರಿಸರದ ಲೋಕವನ್ನು ಸುಮ್ಮನೆ ತದೇಕ ಚಿತ್ತದಿಂದ ಕಾಣುತ್ತ, ಕೇಳುತ್ತ ಹೋಗುವಂತೆ ಮಾಡುತ್ತದೆ. 

ಕಾದಂಬರಿಯು ಮುಂದುವರೆದಂತೆ ಒಂದು ಕಾಲದಲ್ಲಿ ಗ್ರಾಮ ಬದುಕಿನಲ್ಲಿ ದೇಸಗತಿ ಮನೆತನಗಳು ಹೊಂದಿದ್ದ ಗೌರವ ಕಾಲ ಕ್ರಮೇಣ ಹೇಗೆ ಕ್ಷೀಣಿಸುತ್ತ ಹೋಯಿತು ಮತ್ತು ಅದರ ಹಿಂದಿನ ಕಾರಣಗಳನ್ನು ಶೋಧಿಸುತ್ತದೆ. ಜೊತೆಗೆ, ಹೊರ ಜಗತ್ತಿಗೆ ಗೋಚರಿಸಲಾಗದ ದೇಸಗತಿ ಮನೆತನಗಳ ಒಳಮರ್ಮವನ್ನು ತೆರೆದಿಡುತ್ತದೆ. ಇಲ್ಲಿ, ಗುರುಪಾದಪ್ಪಗೌಡನ ಗೌಡಕಿ ಮನೆತನದ ಆಗುಹೋಗುಗಳಿಗಿಂತ ಭಿನ್ನವಾಗಿ ಸಾಗುವ ದೇಸಾಯಿ ಕಡೆಯ ಆಗುಹೋಗುಗಳು- ಇವೆರಡೂ ಕಾದಂಬರಿಯ ಪ್ರದಾನಧಾರೆಯೆನಿಸಿದರೂ ಇದಕ್ಕೆ ಪೂರಕವಾಗಿಯೇ ಇರುವಂತೆ ಅನೇಕ ಪಾತ್ರಗಳು, ಘಟನೆಗಳು, ಸಂಗತಿಗಳು ಉಪಧಾರೆಯಾಗಿ ಸೇರಿಕೊಂಡಿವೆ. ಇವೆಲ್ಲಕ್ಕೂ ಸಾಕ್ಷಿಯಾಗಿರುವ ಕೃಷ್ಣೆ ಕೇವಲ ನದಿಯಾಗಿ ಅಷ್ಟೇ ಹರಿಯದೇ ‘ಶಿರಹಾಡಿ’ ಎಂಬ ಈ ಗ್ರಾಮದಲ್ಲಿರುವ ಸಕಲ ಜೀವಾತ್ಮಗಳ ಚೈತನ್ಯವನ್ನು ಉಕ್ಕಿಸುವ ಜೀವಜಲವೇ ಆಗಿದೆ. ಈ ಜೀವ ಚೈತನ್ಯದಲ್ಲಿ ದ್ವೇಷ, ಅಸೂಯೆ, ಸಿಟ್ಟು, ಆಕ್ರೋಶ, ಅನೈತಿಕ ಸಂಬಂಧ- ಇವೆಲ್ಲವೂ ಇವೆ. ಮತ್ತು, ಇವೇ ಅಧಿಕಾರದಾಹ ಪ್ರೇರಿತವಾದ ಗ್ರಾಮರಾಜಕಾರಣಕ್ಕೂ ಕಾರಣವಾಗಿದೆ. ಇಲ್ಲಿನ ರಾಜಕಾರಣದ ಒಳಸುಳಿಗಳು ಅದೆಷ್ಟು ಜಟಿಲವಾಗಿವೆಯೆಂದರೆ ರಾಕೇಶ ಸರದೇಸಾಯಿಯ ಜೊತೆಯಲ್ಲಿ ಗುರುತಿಸಿಕೊಂಡಿದ್ದ ಸರಪಂಚ ಮಹಾದೇವಪ್ಪ ಮತ್ತು ಕುಲಕರ್ಣಿ ಗೋಪಾಲರಾವ್ ಇಬ್ಬರೂ ಒಳಗೊಳಗೆ ರಾಕೇಶ ಸರದೇಸಾಯಿಯ ವಿರುದ್ಧವೇ ಕತ್ತಿ ಮಸೆಯುತ್ತಿರುತ್ತಾರೆ. 

ಆದರೆ, ಇವೆಲ್ಲಕ್ಕೂ ಭಿನ್ನವಾಗಿರುವ ‘ಅಪ್ಪಣ್ಣ’ ಎಂಬ ಪಾತ್ರವೊಂದು ಅನುಭಾವದ ನೆಲೆಯಲ್ಲಿ ಇಲ್ಲಿ ಮೈದಳೆದಿದೆ. ಸಾತ್ವಿಕನಾದ ಅಪ್ಪಣ್ಣ ಏನಕೇನ ಕಾರಣಗಳಿಂದಾಗಿ ಕಷ್ಟವನ್ನು ಅನುಭವಿಸುತ್ತಾನೆ. ಆತನ ಹೊಲದಲ್ಲಿ ಜೋಳದ ಬೆಳೆಯನ್ನು ದೇಸಾಯಿಗೆ ವಿರುದ್ಧವಾಗಿರುವ ಒಂದು ಗುಂಪು ಅಪ್ರಜ್ಞಾಪೂರ್ವಕವಾಗಿ ನಿರ್ಧಯವಾಗಿ ನಾಶ ಮಾಡುತ್ತದೆ. ಅದಕ್ಕೆ ನ್ಯಾಯ ಕೇಳಲೆಂದು ಗುರುಪಾದಪ್ಪಗೌಡನ ಬಳಿ ಹೋದಾಗ ವಿನಾಕಾರಣವಾಗಿ ದೇಸಾಯಿಯ ಕೊಲೆಯ ಅಪವಾದ ಹೊತ್ತು ಆತ ಊರು ಬಿಡುವಂತಾಗುತ್ತದೆ. ಆದರೆ ತನಗಾದ ಅನ್ಯಾಯಕ್ಕೆ ಸೇಡಿನ ಬೆನ್ನು ಬೀಳದೇ, ತನ್ನ ಪಾಡಿಗೆ ತಾನು ಕೊನೆಯವರೆಗೂ ಸಾತ್ವಿಕವಾದ ಬಾಳನ್ನು ಬಾಳುತ್ತ, ಇತರರಿಗೆ ಮಾದರಿಯಾಗಿ ನಿಲ್ಲುತ್ತಾನೆ, ಅಪ್ಪಣ್ಣ. 

ಈ ಕಾದಂಬರಿಯಲ್ಲಿ ಜೋಗಯ್ಯ ಎನ್ನುವ ಪಾತ್ರ ಆಗಾಗ ಪ್ರವೇಶ ಪಡೆಯುತ್ತಿರುತ್ತದೆ. ಈ ಪಾತ್ರ, ಕಾದಂಬರಿಯಲ್ಲಿ ಬರುವ ಇನ್ನುಳಿದ ಮುಖ್ಯಪಾತ್ರಗಳ ಮುಂದೆ ಧುತ್ತನೆ ಪ್ರತ್ಯಕ್ಷವಾಗಿ ಆ ಪರಿಸರ, ಸನ್ನಿವೇಶದಲ್ಲಿ ಆತಂಕ ಸೃಷ್ಟಿಸುತ್ತಿರುತ್ತದೆ. ಅಪ್ಪಣ್ಣನ ಪಾತ್ರದಂತೆ ಅನುಭಾವದ ಹಿನ್ನೆಲೆಯಲ್ಲಿರುವಂತೆ ತೋರುವ ಜೋಗಯ್ಯನ ಪಾತ್ರ, ಉಳಿದ ಆ ಪಾತ್ರಗಳೆಲ್ಲ ತಮ್ಮದೇ ಲೋಕದಲ್ಲಿ ಇದ್ದುಕೊಂಡು ಅಮಾನವೀಯ ಕೃತ್ಯಗಳಲ್ಲಿ ತೊಡಗಿಸಿಕೊಂಡಾಗಲೆಲ್ಲ ಆ ಪಾತ್ರಗಳ ಧೋರಣೆಯನ್ನು ವಿರೋಧಿಸುವ, ಆತಂಕ ಹುಟ್ಟಿಸುವ ಕೆಲಸವನ್ನು ಮಾಡುತ್ತಿರುತ್ತದೆ. ಇಡಿಯಾಗಿ ಕಾದಂಬರಿಯಲ್ಲಿ ನಿರ್ಲಿಪ್ತವಾಗಿ ರೂಪುಗೊಂಡಿರುವ ಈ ಪಾತ್ರ ವಾಸ್ತವ ಬದುಕಿಗೆ ತೀರ ಹತ್ತಿರವಾಗಿದೆ. 

ಈ ಕಥಾನಕದಲ್ಲಿ ಪುರುಷರನ್ನು ಮೀರಿ ಹೆಣ್ಣು ಅನೇಕ ಸ್ತರಗಳಲ್ಲಿ ತನ್ನನ್ನು ಸ್ಥಾಪಿಸಿಕೊಳ್ಳಲು ಹೆಣಗುವುದಕ್ಕೆ ಪುರಾವೆ ಎಂಬಂತೆ ಗಿರೆವ್ವನ ಪಾತ್ರ ಇಲ್ಲಿ ಮೈದಳೆದಿದೆ. ಗಂಡ ಶಿವರಾಮನನ್ನು ಇಲ್ಲವಾಗಿಸಿ ಬದುಕನ್ನೇ ಸರ್ವನಾಶ ಮಾಡಿದ ದೇಸಾಯಿಯಿಂದಲೇ ಅತ್ಯಾಚಾರಕ್ಕೊಳಗಾದ ಗಿರೆವ್ವ, ಆತನ ವಿರುದ್ಧ ಸಿಡಿದೆದ್ದು, ಯಾವ ಊರಿನ ಸರಹದ್ದಿಗೂ ಸಿಗದಂತೆ ಅನಾಮಧೇಯ ಸ್ಥಳದಲ್ಲಿ ದೇಸಾಯಿಯ ವೃಷಣ ಕತ್ತರಿಸಿ ಕೊಲೆ ಮಾಡುತ್ತಾಳೆ. ಆದರೆ, ಇಷ್ಟಕ್ಕೆ ತಣಿಯದ ಆಕೆಯ ಎದೆಯಲ್ಲಿ ಹೊತ್ತಿದ ಸೇಡಿನ ಜ್ವಾಲೆ ತನ್ನ ಮೇಲೆರಗಿದ ಸರಪಂಚ ಮತ್ತು ಕುಲಕರ್ಣಿಯ ಕೊಲೆಗೆ ಹಾತೊರೆಯುತ್ತಲೇ ಇರುತ್ತಾಳೆ. 

ಆದರೆ, ಗಿರೆವ್ವನ ಮನೋಸ್ಥಿತಿಗೆ ವಿರುದ್ಧವಾದ ಸುಂದರಾ ಮತ್ತು ಸಿದ್ಧರಾಮ- ಎಂಬ ಎರಡು ಪಾತ್ರಗಳು ಕಾದಂಬರಿಯಲ್ಲಿ ಬರುತ್ತವೆ. ಕೃಷ್ಣೆ, ತನ್ನ ಒಡಲನ್ನು ತುಂಬಿಕೊಂಡು ಇಡಿಯಾಗಿ ಊರನ್ನೇ ಆವರಿಸಿದ ಹೊತ್ತಲ್ಲೇ ಸುಂದರಾಳಿಗೆ ಎದೆಯೊಳಗೆ ಹೆಪ್ಪುಗಟ್ಟಿದ ಬಯಕೆಗಳ ಮಿಸುಕಾಟದ ಆನಂದದ ಕಂಪನವನ್ನು ಅನುಭವಿಸಬೇಕೆನ್ನುವ ಆಶೆ ಗರಿಗೆದರುತ್ತದೆ. ಇದಕ್ಕೆಲ್ಲ ಊರಿನ ಸಕಲ ಜೀವರಾಶಿಗಳ ಜೀವ ಚೈತನ್ಯವೇ ಆಗಿದ್ದ, ಊರನ್ನೇ ನಡುಗಡ್ಡೆಯಾಗಿಸಿದ ನದಿಯು ಸುಂದರಾಳ ಆಂತರ್ಯದೊಳಗಿನ ಬಯಕೆಗಳನ್ನು ಮೀಟಿದ್ದೇ ಕಾರಣವಾಗಿದೆ. ಮತ್ತು, ದೇಹದ ಬಯಕೆಗಳಿಗೆ ವಯಸ್ಸಿನ ಮಿತಿ ಇಲ್ಲ; ಶೃಂಗಾರದ ಮಾತಿಗೆ ಸಾವೆಂಬುದೂ ಇಲ್ಲ- ಎಂಬಂತೆ ಇಲ್ಲಿ ತನ್ನ ಒಡಲು ತುಂಬಿಕೊಂಡು ನಿಂತ ಹಿರಿ ಹೊಳೆಯು ಸುಂದರಾ ಮತ್ತು ಸಿದ್ಧರಾಮನ ನಡುವೆ ಅನೇಕ ವರ್ಷಗಳ ನಂತರದಲ್ಲಿ ಕಾಮವೆಂಬುದು ಉದ್ದೀಪನಗೊಂಡು ಹುಚ್ಚೆದ್ದು ಕುಣಿಯಲಾರಂಭಿಸಿರುವುದಕ್ಕೆ ರೂಪಕದಂತೆ ಬಳಕೆಯಾಗಿದೆ. 

ಸ್ವಾತಂತ್ರ್ಯಾಪೂರ್ವದಲ್ಲಿ ಪ್ರಾರಂಭವಾಗುವ ಕಥೆಯು ಸ್ವಾತಂತ್ರ್ಯಾನಂತರದಲ್ಲೂ ಮುಂದುವರೆದು, ಎರಡು ಕಾಲಘಟ್ಟದಲ್ಲಿನ ಈ ದೇಶದ ರಾಜಕೀಯ, ಸಾಮಾಜಿಕ, ನೈತಿಕ ಮತ್ತು ಇವುಗಳ ಹಿನ್ನೆಲೆಯಲ್ಲಿ ರೂಪಾಂತರಗೊಳ್ಳುತ್ತಿರುವ ಗ್ರಾಮ ಬದುಕಿನ ಚಿತ್ರಣವನ್ನು ಕಟ್ಟಿಕೊಡುತ್ತದೆ. ಈ ಮಾತಿಗೆ ಪೂರಕವಾಗಿ ಶಿವಲಿಂಗೇಗೌಡನು ಹೊಲೇರ ಮಾದಪ್ಪನ ಮೊಮ್ಮಗಳು ಗೌರಿಯನ್ನು ಮದುವೆಯಾಗಿ ಹಳ್ಳಿಗೆ ಕರೆತರುತ್ತಾನೆ. ಇದನ್ನು ತಾಯಿ ಇಂದ್ರಾಯಿಣಿ ಸ್ವಾಗತಿಸುತ್ತಾಳೆ. ಇತ್ತ ನೌಕರಿ ಅರಸಿ ಮುಂಬೈಗೆ ಹೋಗಿದ್ದ ಪ್ರಕಾಶನು ಹಳ್ಳಿಯ ಬದುಕನ್ನು ನೆಚ್ಚಿ ಶಿರಹಾಡಿಗೆ ಮರಳುತ್ತಾನೆ. ಗಾಂಧಿ ಪ್ರಭಾವಕ್ಕೆ ಒಳಗಾಗಿ ಊರಲ್ಲಿ ಆಶ್ರಮವೊಂದು ತೆರೆದಿದೆ. ಸಾತ್ವಿಕ ಮನಸ್ಸಿನ ಅಪ್ಪಣ್ಣ ಮತ್ತು ಹುಚ್ಚಮಲ್ಲವಳಾದ ಸುಂದರಾ ಆಶ್ರಮ ಸೇರಿಕೊಂಡಿದ್ದಾರೆ. ಶಿವಲಿಂಗೇಗೌಡನ ಬಾಲ್ಯದ ಗೆಳೆಯ ಬಾಪ್ಯಾ ಆಶ್ರಮದ ಉಸ್ತುವಾರಿ ವಹಿಸಿಕೊಂಡಿದ್ದಾನೆ. ಇವೆಲ್ಲದ್ದಕ್ಕೂ ಸಾಕ್ಷಿಯೆಂಬಂತೆ ಕೃಷ್ಣೆ ಈವತ್ತಿಗೂ ತಣ್ಣಗೆ ಹರಿಯುತ್ತಲೇ ಇದ್ದಾಳೆ ಮನುಷ್ಯನ ಚಲನಶೀಲ ಬದುಕಿಗೆ ಹರಿವ ನದಿ ಸಂಕೇತವಾಗಿ ನಿಂತಿದೆ. 

ಇಲ್ಲಿ ಬರುವ ಅನೇಕ ಮಾನವೀಯ ಸನ್ನಿವೇಶಗಳಲ್ಲಿ ಉತ್ತರ ಕರ್ನಾಟಕದ ಚಿಕ್ಕೋಡಿ ಮೇಲ್ಗಡೆ ಭಾಗದ ಹಳ್ಳಿಗಳಲ್ಲಿನ ಆಡುಭಾಷೆಯನ್ನು ಮರುಸೃಷ್ಟಿ ಮಾಡಿ ಬಳಸಿದ್ದಾರೆ. ಮತ್ತು ಅದರಲ್ಲಿ ಯಶಸ್ವಿಯೂ ಆಗಿದ್ದಾರೆ. ಈ ಭಾಷೆಯನ್ನು ಇಡಿಯಾಗಿ ಜನಪದೀಯ ದಾಟಿಯಲ್ಲಿ ನಿರೂಪಣೆಯಲ್ಲೂ ಬಳಸಿದ್ದರೆ ಇನ್ನೂ ರೋಚಕವಾಗಿರುತ್ತಿತ್ತು. ಆದಾಗ್ಯೂ, ಬಯಲು ಸೀಮೆಯ ಅದರಲ್ಲೂ ಮಹಾರಾಷ್ಟ್ರದ ಗಡಿಭಾಗದಲ್ಲಿನ ಜನರ ಬದುಕನ್ನು ತೀರ ಸಹಜವಾಗಿ ಮತ್ತು ವಾಸ್ತವಕ್ಕೆ ಹತ್ತಿರವಿರುವಂತೆ ಅನಾವರಣ ಮಾಡಿರುವ ಕಾದಂಬರಿ ಮಿರ್ಜಿ ಅಣ್ಣಾರಾಯರ ‘ನಿಸರ್ಗ’ ನಂತರ ‘ಕೃಷ್ಣೆ ಹರಿದಳು’ ಎನ್ನಬೇಕು. 

ಕಟ್ಟಕಡೆಗೆ ಹೇಳಬೇಕಾದ ಮಾತೊಂದಿದೆ. ಅದು, ಬಾಳಸಾಹೇಬರು ಹುಟ್ಟಿ ಬೆಳೆದ ಆ ಗ್ರಾಮದ ಪರಿಸರದೊಂದಿಗಿನ ಒಡನಾಟದಿಂದಾಗಿ ಕಂಡುಕೊಂಡ ಆ ಜಗತ್ತಿನ ವಿಸ್ಮಯಗಳನ್ನೆಲ್ಲ ಅಷ್ಟೇ ಪ್ರಾಮಾಣಿಕವಾಗಿಯೂ ಮತ್ತು ವಾಸ್ತವಕ್ಕೆ ಹತ್ತಿರವಾಗಿರುವಂತೆಯೂ ಈ ಕಾದಂಬರಿಯಲ್ಲಿ ನಿರೂಪಿಸುತ್ತ ಹೋಗುತ್ತಾರೆ. ಅಂದರೆ, ಅವರ ಅನುಭವಗಳೆಲ್ಲವನ್ನೂ ಇಲ್ಲಿ ಬಸಿದಿದ್ದಾರೆ. ಬದುಕಿನ ಕುರಿತಾದ ಸುಖ, ದುಃಖ, ನೋವು, ನಿರಾಶೆ, ಅಧಿಕಾರದ ಲಾಲಸೆ, ಸಂಬಂಧಗಳು, ಅನೈತಿಕ ಸಂಬಂಧಗಳು- ಇವೆಲ್ಲವೂ ಇಲ್ಲಿ ಮೇಳೈಸಿವೆ. 
 
                                                                              - ಕಲ್ಲೇಶ್ ಕುಂಬಾರ್, ಹಾರೂಗೇರಿ