ವಿಶ್ವ ಕಪ್ ಗೆ ಗರಿಗೆದರಿ ನಿಂತ 'ನೀಲ'ಶ್ಯಾಮರು 

ವಿಶ್ವ ಕಪ್ ಗೆ  ಗರಿಗೆದರಿ ನಿಂತ 'ನೀಲ'ಶ್ಯಾಮರು 

ಬಲಗಿವಿಗೆ ಸೋಂಕು ತಗುಲಿ ಕೀವು ಸುರಿಯುತ್ತಿದ್ದು, ಕಿವಿಗೆ ಕೈ ತಗುಲಿಸಬಾರದೆಂಬ ಎಚ್ಚರಿಕೆಯಲ್ಲಿದ್ದಾರೇನೋ ಎನ್ನುವಷ್ಟು ದೂರಕ್ಕೆ ತನ್ನ ಬಲಗೈಯನ್ನು ತೆಗೆದುಕೊಂಡು ಹೋಗಿ ಬಾಲ್ ಒಗೆಯುವ ಲಸಿತ್ ಮಲಿಂಗರನ್ನು ನಾವು ನೋಡಿದ್ದೀವಿ. ಆತ ನೆನ್ನೆ ಹೈದರಾಬಾದ್ ನ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ಫೈನಲ್ ನ ಅಂತಿಮ ಓವರ್ ಮಾಡಲು ಬಂದಾಗ ರೋಹಿತ್ ಶರ್ಮಾ ಅವರ ಆ ನಿರ್ಧಾರದ ವಿರುದ್ಧ ಇಲ್ಲಿ ಪ್ರಸ್ತಾಪಿಸಲು ನಾನು ನೋಟ್ ಮಾಡಿಕೊಂಡದ್ದು ನಿಜ.

 ಏಕೆಂದರೆ, ಅದುವರೆವಿಗೂ ಮಾಡಿದ ಮೂರು ಓವರ್ ಗಳಲ್ಲಿ ಆತ ಕೊಟ್ಟಿದ್ದ ರನ್ಸ್ 42. ಆತನ ಮೂರನೇ ಓವರ್ ನ ಮೊದಲನೇ ಬಾಲನ್ನು ದ್ವಾಯ್ನ್ ಬ್ರಾವೊ ಸಿಕ್ಸ್ ಬಾರಿಸಿಯಾಗಿತ್ತು. ಮೂರು, ನಾಲ್ಕು, ಮತ್ತು ಐದನೇ ಬಾಲ್ ನಲ್ಲಿ ಸತತವಾಗಿ ಬೌಂಡರಿ ಚಚ್ಚಿದ್ದ ಶೇನ್ ವಾಟ್ಸನ್ ಆವರೆವಿಗೂ ಮಂದಗತಿಯಲ್ಲಿ ಸಾಗಿದ್ದ ಚೆನ್ನೈನ ಇನ್ನಿಂಗ್ಸಿನ ಆವೇಗವನ್ನು ಹೆಚ್ಚಿಸಿದ್ದರು.

ಒಂದು ಓವರ್ ಮಾಡಿ ಕೇವಲ ಮೂರು ರನ್ ನೀಡಿದ್ದ  ಹಾರ್ದಿಕ್ ಪಾಂಡ್ಯನನ್ನು ಕೊನೆಯ ಓವರ್ ಮಾಡಲು ಬಳಸಿಕೊಳ್ಳಬಹುದೆಂಬ ನಿರೀಕ್ಷೆ ನನ್ನದಾಗಿತ್ತು. ಮುಂಬೈನ ಕೋಚ್ ಮಹೇಲ ಜಯವರ್ದನೆ, ಅನುಭವವನ್ನು ಪರಿಗಣಿಸಿ ನಾಯಕ ರೋಹಿತ್ ಶರ್ಮ ಮಲಿಂಗರ ಕೈಗೆ ಚೆಂಡು ಕೊಟ್ಟ ನಿರ್ಧಾರವನ್ನು ಮ್ಯಾಚ್ ನಂತರ ಪ್ರಶಂಸಿಸಿದರು.

2013 ರಿಂದ ವರ್ಷ ಬಿಟ್ಟು ವರ್ಷ ನಾಲ್ಕು ಬಾರಿ ಐಪಿಎಲ್ ಪ್ರಶಸ್ತಿ ಗೆದ್ದ ಮುಂಬೈ ತಂಡವನ್ನು ಅಷ್ಟೂ ಸಂದರ್ಭದಲ್ಲಿ ಮುನ್ನಡೆಸಿದ್ದು ರೋಹಿತ್ ಶರ್ಮಾರೇ ಎಂಬುದನ್ನು ನೋಡಿದಾಗ ಆತನ ನಿರ್ಧಾರ ಜೂಜಾಟದಲ್ಲಿನ ರಿಸ್ಕ್ ಆಗಿರದೇ, ಬುದ್ಧಿಪೂರ್ವಕವಾಗಿ ತೆಗೆದುಕೊಂಡ ನಿರ್ಧಾರ ಎಂಬ ಅಂಶ ಗೋಚರವಾಗುತ್ತದೆ. ಮುಂಬೈ ತಂಡದಲ್ಲಿ ಅತಿಹೆಚ್ಚು ವಿಕೆಟ್ ಪಡೆದ ಬೌಲರ್ ಮಲಿಂಗಾರೇ ಎಂಬುದನ್ನು ರೋಹಿತ್ ಮರೆತಿರಲಿಲ್ಲ.  

  ಹಾಗೆಯೇ, ಬ್ಯಾಟನ್ನು ಕತ್ತಿಯಂತೆ ಝಳಪಿಸುವಲ್ಲಿ ಶಾರ್ದುಲ್ ಠಾಕೂರ್ ಗಿಂತ ಹೆಚ್ಚು ಅನುಭವವಿರುವ ಹರ್ಭಜನ್ ಸಿಂಗನ್ನು ವಾಟ್ಸನ್ ವಿಕೆಟ್ ಪತನದ ನಂತರ ಕಳಿಸದೇ ಇದ್ದುದು ಚೆನ್ನೈ ತಂಡದ ನಾಯಕ ಧೋನಿ ಮಾಡಿದ ನಿರ್ಣಾಯಕ ತಪ್ಪೇ ಎಂಬುದೂ ಸಾಕಷ್ಟು ಕಾಲ ಚರ್ಚಿತವಾಗುವ ವಿಚಾರ. 

ನಮ್ಮ ತಂಡದ ಸಾಮರ್ಥ್ಯವನ್ನು ನೋಡಿದರೆ ನಾವು ಫೈನಲ್ ಪ್ರವೇಶಿಸಿದ್ದೇ ಆಶ್ಚರ್ಯಕರ ಸಂಗತಿ ಎಂದು ಧೋನಿ ಮ್ಯಾಚ್ ನಂತರ  ಹೇಳಿದ್ದು ಕೇವಲ ವಿನಯದ ಮಾತಲ್ಲ. ಆ ಮಾತನ್ನು ಮುಂದುವರಿಸಿ ಆತ ಹೇಳಿದ್ದು ಫೈನಲಿಸ್ಟ್ಗಳಿಬ್ಬರೂ ತಪ್ಪು ಮಾಡಿದೆವು, ಆದರೆ ಅವರು (ಮುಂಬೈ) ಒಂದು ಕಡಿಮೆ ತಪ್ಪು ಮಾಡಿದರು ಎಂದು ಮಾರ್ಮಿಕವಾಗಿ ನುಡಿದರು. ಮುಂಬೈಗಿಂತ ಒಂದು ವಿಕೆಟ್ ಕಡಿಮೆ ಕಳೆದುಕೊಂಡ ಚೆನ್ನೈ ತಂಡ ಎದುರಾಳಿಗಿಂತ ಎರಡು ಹೆಚ್ಚು ರನ್ ಗಳಿಸುವಲ್ಲಿ ಮುಗ್ಗರಿಸಿತು. ಕಳೆದ ವರ್ಷದ ಫೈನಲ್ ನಲ್ಲಿ ಶತಕ ಬಾರಿಸುವ ಮೂಲಕ ತನ್ನ ತಂಡವನ್ನು ಹೈದರಾಬಾದ್ ವಿರುದ್ಧ ಗೆಲ್ಲಿಸಿದ್ದ ಶೇನ್ ವಾಟ್ಸನ್ ನೆನ್ನೆ ಕೂಡ ಚೆನ್ನೈ ಗೆದ್ದಿದ್ದರೆ ಪಂದ್ಯ ಪುರುಷೋತ್ತಮ ಪ್ರಶಸ್ತಿ ಗೆಲ್ಲುವ ಹಾದಿಯಲ್ಲಿದ್ದರು.

ವಿಮಾನಾಪಘಾತಗಳು ಹೆಚ್ಚಾಗಿ ಸಂಭವಿಸುವುದು ವಿಮಾನ ಟೇಕ್-ಆಫ್ ಆಗುವಾಗ ಮತ್ತು ಇಳಿಯುವಾಗ. ಹಾರಾಟದ ಸಮಯದಲ್ಲಿ ಕೆಲವೊಮ್ಮೆ ಗಾಳಿಯ ಒತ್ತಡದಲ್ಲಿ ಏರುಪೇರಾದಾಗ ವಿಮಾನ ತಳಮಳದಲ್ಲಿ ಗಾಬರಿಯಾಗುವಂತೆ ಅಲುಗಾಡುತ್ತದೆ. ಚೆನ್ನೈ ತಂಡವನ್ನು ನುರಿತ ಪೈಲಟ್ನಂತೆ ಆಟದ ಆರಂಭದಲ್ಲೂ (ಪವರ್ ಪ್ಲೇ), ಅಂತಿಮ ಓವರ್ ಗಳಲ್ಲೂ ಸುರಕ್ಷಿತವಾಗಿ ಕೊಂಡೊಯ್ಯುತ್ತಿದ್ದ ಶೇನ್ ವಾಟ್ಸನ್ ಒಮ್ಮೆ ಮಾತ್ರ ತಮ್ಮ ಬ್ಯಾಟಿಂಗಲ್ಲಿ ಎಡವಿ ಕ್ಯಾಚ್ ನೀಡಿ ಔಟಾಗುವುವರಲ್ಲಿದ್ದರು. ಇನ್ನೇನು ತಂಡ ಗೆದ್ದೇ ಬಿಟ್ಟಿತು ಅನ್ನುವಷ್ಟರಲ್ಲಿ ರನ್ ಔಟ್ ಆದದ್ದು ಚೆನ್ನೈಗೆ ಬಿದ್ದ ಹೊಡೆತ. 

ಬಲಿಷ್ಠ ಮುಂಬೈ ತಂಡದ ಬ್ಯಾಟ್ಸ್ಮನ್ ಗಳ ಪೈಕಿ ಪೊಲ್ಲಾರ್ಡ್ ಬಿಟ್ಟರೆ ಬೇರೆಲ್ಲರೂ 30 ರನ್ ಒಳಗೇ ಔಟಾದರು. ಆ ಸಾಧನೆಯ ಹಿರಿಮೆ ಚೆನ್ನೈ ಬೌಲರ್ ಗಳದ್ದು. ಆದರೆ ಆ ಸಾಧನೆ ಸಾಧನೆಯೇ ಅಲ್ಲ ಅನ್ನುವಂತೆ ಬೌಲಿಂಗ್ ಪ್ರದರ್ಶನ ನೀಡಿದ್ದು ಮುಂಬೈನ ಬೌಲರ್ ಗಳು. ಎರಡೂ ತಂಡಗಳು ಆರು ಬೌಲರ್ ಗಳ ಸೇವೆಯನ್ನು ಬಳಸಿಕೊಂಡವು. ಮುಂಬೈನ ಇಬ್ಬರು ಬೌಲರ್ ಗಳು - ರಾಹುಲ್ ಚಾಹರ್ ಮತ್ತು ಜಸ್ಪ್ರೀತ್ ಭುಮ್ರ - ತಮ್ಮ ನಾಲ್ಕು ಓವರ್ ಕೋಟಾದಲ್ಲಿ ಕೊಟ್ಟ ಒಟ್ಟು ರನ್ ತಲಾ 14. ಅದರ ಸರಾಸರಿ 3.5 ರನ್. 

ಆಕ್ರಮಣಕಾರಿ ಬ್ಯಾಟಿಂಗ್ ಹೆಚ್ಚು ಕಾಣದ ಟೆಸ್ಟ್ ಮ್ಯಾಚ್ ನಲ್ಲಿ ಪರಿಣಾಮಕಾರಿ ಬೌಲರ್ ಒಬ್ಬನ ಸರಾಸರಿಯಂತಿತ್ತು. ಮಾಡಿದ್ದು ಒಂದೇ ಓವರ್ ಆದರೂ ಮೂರ್ ರನ್ ಕೊಟ್ಟು ವಾಟ್ಸನ್ ಅಂಥ ದೈತ್ಯ ಬ್ಯಾಟ್ಸ್ಮನ್ನನ್ನು ತಣ್ಣಗಾಗಿಸುವಲ್ಲಿ ಕೈಜೋಡಿಸಿದ್ದು ಹಾರ್ದಿಕ್ ಪಾಂಡ್ಯ. ರಾಹುಲ್ ಒಂದು ವಿಕೆಟ್ ಕೆಡವಿದರೆ, ಜಸ್ಪ್ರೀತ್ ಎರಡು ವಿಕೆಟ್ ಗಳನ್ನು ಕಬಳಿಸಿದರು. ರನ್ ನೀಡುವಲ್ಲಿ ಜಿಗುಟುತನ ತೋರಿದ ರಾಹುಲ್ ಜಸ್ಪ್ರೀತ್ ಮಾಡಿದ ಚೆನ್ನೈ ಇನ್ನಿಂಗ್ಸ್ ನ 17 ನೇ ಓವರ್ ನಲ್ಲಿ ವಾಟ್ಸನ್ ನೀಡಿದ ಕ್ಯಾಚ್ ಹಿಡಿದಿದ್ದರೆ ಎರಡೂ ತಂಡಗಳು ಸಮಬಲಾಢ್ಯವಲ್ಲ ಎನ್ನುವುದು ಸಾಬೀತಾಗುತ್ತಿತ್ತು.

ಅಸಮರ್ಪಕ ಫೀಲ್ಡಿಂಗ್ ಮಾಡಿಯೂ ಮುಂಬೈ ಸೋಲದಿದ್ದುದು ಪರಮಾಶ್ಚರ್ಯವೇ ಸರಿ. ಪಂದ್ಯಾವಳಿಯ ಉದ್ದಕ್ಕೂ ಆಕರ್ಷವಾಗಿಯೇ ಆಡುತ್ತಾ ಬಂದ ಧೋನಿ ಮತ್ತು ಸುರೇಶ ರೈನಾ ಮಿಂಚದೇ ಇದ್ದುದು ಚೆನ್ನೈಗೆ ಮುಳುವಾಯಿತು. ಈ ವರ್ಷದ ಪಂದ್ಯಾವಳಿಯಲ್ಲಿ ಈ ಎರಡೂ ತಂಡಗಳು ಒಟ್ಟು ನಾಲ್ಕು ಬಾರಿ ಸೆಣಸಿದವು. ಸರಾಸರಿ ನಿಯಮದಂತೆ ಕೊನೆಯ ಸೆಣಸಾಟದಲ್ಲಿ ಚೆನ್ನೈ ಗೆಲ್ಲಬಹುದೆಂಬ ನಿರೀಕ್ಷೆ ನಿರೀಕ್ಷೆಯಾಗಿಯೇ ಉಳಿಯಿತು. ನಾಲ್ಕೂ ಬಾರಿಯೂ ಮುಂಬೈ ವಿಜಯಿಯಾಯಿತು. 

ಸೆಣಸಿದ್ದು ಮುಂಬೈ ಮತ್ತು ಚೆನ್ನೈ. ಮರಾಠಿ ಮತ್ತು ತಮಿಳು ಮಾತನಾಡುವ ಜನರನ್ನು ಹೊರತು ಪಡಿಸಿ ಉಳಿದ ಭಾರತೀಯರು ಯಾವ ತಂಡವನ್ನು ಬೆಂಬಲಿಸುತ್ತಾರೆ? ಬೆಂಬಲಿಸಬೇಕು? ಇದು ತಲೆಕೆಡಿಸುವ ಪ್ರಶ್ನೆ. ಬೆಂಬಲಿಗರ ಭಾವನೆ ಮತ್ತು ತೆವಲುಗಳಿಂದ ಉತ್ತರ ಹೊರಬರಬೇಕು. ಒಬ್ಬ ಕ್ರೀಡಾವರದಿಗಾರ(ಳಿ)ನಿಗೆ ಅದೇ ಮಾನದಂಡ ಅನ್ವಯವಾಗುವುದಿಲ್ಲ. ಬೇರಾವುದೇ ವರದಿಗಾರರಂತೆ ಅವರು ನಿಷ್ಪಕ್ಷಪಾತವಾಗಿರಬೇಕಾಗುತ್ತದೆ. ನಿಷ್ಪಕ್ಷಪಾತವಾಗಿದ್ದಲ್ಲಿ, ನಿರುಮ್ಮಳವಾಗಿ ವರದಿಮಾಡಲು ಸಹಾಯಕ. ನಿಸ್ಪೃಹತೆಯೇ ನೆನ್ನೆಯ ರೋಚಕ ಪಂದ್ಯದಂಥ ಸಂದರ್ಭಗಳಲ್ಲಿ ರಕ್ತದೊತ್ತಡಕ್ಕೆ ಮದ್ದಾಗಬಹುದು. ಪಕ್ಷಪಾತವಹಿಸದೇ ವರದಿಮಾಡಲು ಸಹಾಯವಾಗಬಲ್ಲದು. 

 ನಿಜ ಹೇಳುತ್ತೇನೆ, ನೆನ್ನೆ ನಾನು ಒಳಗೊಳಗೇ ಚೆನ್ನೈ ಗೆಲ್ಲಲೆಂದು ಬಯಸಿದ್ದೆ. ಅದಕ್ಕಿದ್ದ ಕಾರಣ ಧೋನಿ ಭಾರತ ಕಂಡ ಅತಿ ಯಶಸ್ವಿ ನಾಯಕರೊಲ್ಲೊಬ್ಬ. ನೆನ್ನೆಗೆ ಮುನ್ನ ನಡೆದ 11 ಐಪಿಎಲ್ ಫೈನಲ್ ಗಳಲ್ಲಿ ಎಂಟು ಬಾರಿ ತನ್ನ ತಂಡವನ್ನು ಆ ಹಂತಕ್ಕೆ ತಲುಪಿಸುವಲ್ಲಿ ಆತನ ಕೊಡುಗೆ ಅಪಾರ. ಇಡೀ ಐಪಿಎಲ್ ಆಟಗಾರರ ಪೈಕಿ ಆತ ಹಿರಿಯ. ಸದ್ಯದಲ್ಲೇ ನಡೆಯುವ ವಿಶ್ವ ಕಪ್ ಪಂದ್ಯಾವಳಿಯೇ ಆತನ ಕೊನೆಯ ವಿಶ್ವ ಕಪ್. ಮೇಲಾಗಿ, ಬ್ಯಾಟ್ಸ್ಮನ್ನಾಗಿ, ಕೀಪರ್ ಆಗಿ, ಚಿಂತಕನಾಗಿ ಹೆಚ್ಚುಕಡಿಮೆ ಸರಣಿಪೂರ್ತಿ ಮಿಂಚಿದ ವ್ಯಕ್ತಿ.

ಚೆನ್ನೈ ತಂಡದ ಪರ ಮಾತನಾಡಿದರೆ ಉತ್ತರ ಭಾರತೀಯರು ನನ್ನನ್ನೂ ಮದರಾಸಿ, ಆ ಕಾರಣಕ್ಕೆ ಅದನ್ನು ಬೆಂಬಲಿಸುತ್ತಿದ್ದೇನೆ ಎನ್ನುವ ಸಾಧ್ಯತೆ ದಟ್ಟವಾಗಿದೆ. ಆದರೆ ಆ ಆರೋಪ(?)ವನ್ನು ನಾನೊಬ್ಬನೇ ಹೊರಬೇಕಿಲ್ಲ, ಅದನ್ನು ನಾವುಗಳಾರೂ ಮೊದಲಬಾರಿ ಎದುರಿಸುತ್ತಿಲ್ಲ. ಬಹಳಷ್ಟು ಮಂದಿ ಕನ್ನಡಿಗರಿಗೆ ಫೈನಲ್ ಪಂದ್ಯದಲ್ಲಿ ಒಬ್ಬ ಕನ್ನಡಿಗನೂ ಇರಲಿಲ್ಲವಲ್ಲ ಎಂಬ ಕೊರಗು ಕಾಡಬಹುದು. ಹೌದು, ಇದ್ದಿದ್ದರೆ ಚೆನ್ನಾಗಿತ್ತು, ಇರದಿದ್ದನ್ನು ದೂರುವುದು ಅಪೇಕ್ಷಣೀಯ ಕ್ರೀಡಾಮನೋಭಾವವಲ್ಲ.  

ನಾನು ವಾಸಿಸುವ ಮೈಸೂರಿನದೇ ಆದ ಸೈಕಲ್ ಬ್ರಾಂಡ್ ಅಗರಬತ್ತಿಯ ಸಂಸ್ಥೆ ಅಂತರ ರಾಷ್ಟ್ರೀಯ ಪಂದ್ಯಾವಳಿಗಳ ಮುಖ್ಯ ಕ್ರಿಕೆಟ್ ಪ್ರಾಯೋಜಕರಲ್ಲೊಂದು. ಅವರ ಜಾಹಿರಾತಿನ ಧ್ಯೇಯ ವಾಕ್ಯ: “ಪ್ರತಿಯೊಬ್ಬರಿಗೂ ದೇವರ ಮೊರೆಹೋಗಲು ಕಾರಣಬೇಕು” (Everybody has a reason to pray). ಅದನ್ನು ಅನುಸರಿಸುವಂತೆ ನೆನ್ನೆ ಹೈದರಾಬಾದ್ ನ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ಪ್ರಾರ್ಥನೆ ಸಲ್ಲಿಸದ ಕ್ರಿಕೆಟಿಗ, ಕ್ರಿಕೆಟ್ ಪ್ರೇಮಿಗಳೇ ಇರಲಿಲ್ಲವೇನೋ. ಪಂದ್ಯದ ಕೊನೆಯ ಎಸೆತದವರೆವಿಗೂ ಸಸ್ಪೆನ್ಸ್ ಮತ್ತು ಕುತೂಹಲವಿದ್ದೇ ಇತ್ತು. ವಿಂಗ್ ಕಮಾಂಡರ್ ಅಭಿನಂದನ್ ಪಾಕ್ ಸೆರೆಯಿಂದ ಹೊರಬರಲೆಂದು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಭಾರತೀಯರಿಗೆ ನೆನ್ನೆ ಪ್ರಾರ್ಥಿಸಲು ಮತ್ತೊಂದು ಸಂದರ್ಭ ಬಂದೊದಗಿತು. ವ್ಯತ್ಯಾಸವೇನೆಂದರೆ ಕೆಲವರು ಆ ತಂಡವನ್ನೂ, ಕೆಲವರು ಈ ತಂಡವನ್ನೂ ಬೆಂಬಲಿಸಿದ್ದರಿಂದ ಅದು ಒಕ್ಕೊರಲಿನಿಂದ ಮಾಡಿದ ಪ್ರಾರ್ಥನೆಯಾಗಿರಲಿಲ್ಲ.

 ಐಪಿಎಲ್ ನಲ್ಲಿ ಭಾರತದ ವಿಶ್ವ ಕಪ್ ತಂಡಕ್ಕೆ ಆಯ್ಕೆಯಾದ ಮುಖ್ಯ ಆಟಗಾರರ ಸಾಧನೆಯನ್ನು ಗಮನಿಸಿದರೆ ಅದು ಕ್ರಿಕೆಟ್ ಪ್ರೇಮೀ ಭಾರತೀಯರಲ್ಲಿ ಸಂತಸವನ್ನುಂಟುಮಾಡುತ್ತದೆ. ಉದಾಹರಣೆಗೆ,ಶಿಖರ್ ಧಾವನ್, ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ಎಂಎಸ್ ಧೋನಿ, ಹಾರ್ದಿಕ್ ಪಾಂಡ್ಯ,  ಜಸ್ಪ್ರೀತ್ ಭುಮ್ರ, ಕೆಎಲ್ ರಾಹುಲ್, ರವೀಂದ್ರ ಜಡೇಜ ರನ್ನು ಉದಾರಿಸಬಹುದು. ಅವರ ಸಾಧನೆಯ ಹಿರಿಮೆ ಒಂದು ಕಡೆಯಾದರೆ, ವಿಶ್ವ ಕಪ್ ಇನ್ನೆರಡು ವಾರವಿರಬೇಕಾದರೆ ಅವರು ಮಿತಿಮೀರಿ ಕ್ರಿಕೆಟ್ ನಿಂದ ನಿರುತ್ಸಾಹಿಗಳಾಗದಂತೆ, ನಿಸ್ತೇಜರಾಗದಂತೆ ಎಚ್ಚರಿಕೆ ವಹಿಸಲಾಗಿದೆ ಎಂಬುದು ಮೆಚ್ಚಬೇಕಾದ ಅಂಶ. ಟಿ-20 ಮತ್ತು ಏಕದಿವಸೀಯ ಪಂದ್ಯಗಳು ವಿಭಿನ್ನ ನಿಜ, ಆದರೆ ಐಪಿಎಲ್ ನ ಸುದೀರ್ಘ, ಸವಿಸ್ತಾರ ಅನುಭವದ ಹಿನ್ನೆಲೆಯಲ್ಲಿ ಆಯ್ಕೆಯಾದ ಎಲ್ಲ ಆಟಗಾರರು ಮುಂದಿನ ತಿಂಗಳು ಆರಂಭವಾಗುವ ವಿಶ್ವ ಕಪ್ ಪಂದ್ಯಗಳಲ್ಲಿ ಹೇಗೆ ಆಡುತ್ತಾರೆ ಕಾದು ನೋಡೋಣ.  ಸಾಮೂಹಿಕ ಪ್ರಾರ್ಥನೆಗೆ ಕ್ಷಣಗಣನೆ ಇನ್ನೂ ಆರಂಭವಾಗಿಲ್ಲ!