ಕಪ್ಪು ಬಣ್ಣಕ್ಕೂ, ಓಡುವ ಸಾಮರ್ಥ್ಯಕ್ಕೂ ಉಂಟೇ ನಂಟು?

ಕಪ್ಪು ಬಣ್ಣಕ್ಕೂ, ಓಡುವ ಸಾಮರ್ಥ್ಯಕ್ಕೂ ಉಂಟೇ ನಂಟು?

ಟೋಕ್ಯೋ ಒಲಂಪಿಕ್ಸ್ ಗೆ ಇನ್ನು ಹತ್ತು ತಿಂಗಳುಗಳು ಉಳಿದಿವೆ. ಜುಲೈ-ಆಗಸ್ಟ್ ತಿಂಗಳುಗಳಲ್ಲಿ ನಡೆಯುವ ಕ್ರೀಡಾಕೂಟವನ್ನು ಇಡೀ ವಿಶ್ವವೇ ಕಾತರದಿಂದ ಎದುರು ನೋಡುತ್ತಿದೆ. ಶ್ರೇಷ್ಠಾತಿಶ್ರೇಷ್ಠ ಕ್ರೀಡಾಪಟುಗಳ ಜಾತ್ರೆಗೆ ಗ್ರೀಕ್ ಮೂಲದ ಕ್ರೀಡಾ ವಿಜ್ಞಾನಿಯೊಬ್ಬರು ವಿಭಿನ್ನ ರೀತಿಯ ಸಿದ್ಧತೆ ನಡೆಸಿದ್ದಾರೆ.

ಆಸ್ಟ್ರೇಲಿಯಾದಲ್ಲಿ ಜನಿಸಿದ ಗ್ರೀಕ್ ಪ್ರಜೆಯಾದ ಯಾನಿಸ್ ಪಿಟ್ಸಿಲಡಿಸ್ ಮ್ಯಾರಥಾನ್ ಓಟಗಾರರು ತಮ್ಮ ಗುರಿಯನ್ನು ಎರಡು ಗಂಟೆಯೊಳಗೆ ಮುಟ್ಟಬಲ್ಲ ಸಾಧ್ಯತೆಯ ಕುರಿತು ಸಂಶೋಧನೆ ನಡೆಸುತ್ತಿದ್ದಾರೆ. ಸದ್ಯಕ್ಕೆ ಮ್ಯಾರಥಾನ್ ಸ್ಪರ್ಧೆಯ ಒಲಂಪಿಕ್ಸ್ ದಾಖಲೆ ಸುಮಾರು ಎರಡು ಗಂಟೆ, ಆರು ನಿಮಿಷಗಳು. ಯಾನಿಸ್ ನಡೆಸುತ್ತಿರುವ ಸಂಶೋಧನೆ ಫಲಪ್ರದವಾದರೆ ಎರಡು ಗಂಟೆಯೊಳಗೆ ಮ್ಯಾರಥಾನನ್ನು ಓಡಲು ಸಾಧ್ಯವಾಗುತ್ತದೆ. ಇದು ಅಥ್ಲೆಟಿಕ್ಸ್ ಲೋಕಕ್ಕೆ ಯಾನಿಸ್ ನೀಡುವ ಗಣನೀಯ ಕೊಡುಗೆಯಾಗುತ್ತದೆ.

ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಕ್ರೀಡಾಪಟುಗಳು ಹೆಚ್ಚು ಹೆಚ್ಚು ಬಹಿಷ್ಕೃತ ಮಾದಕವಸ್ತುಗಳಿಗೆ ಮೊರೆಹೋಗುವುದು, ಆ ನಂತರ ಅದಕ್ಕೆ ಬೆಲೆ ತೆರುವಂಥ ಪ್ರಕರಣಗಳು ವರದಿಯಾಗುತ್ತಲೇ ಇರುವಂಥ ಸಂದರ್ಭದಲ್ಲಿ ಯಾನಿಸ್ ಕೊಡುಗೆ ದೊಡ್ಡ ಕ್ರಾಂತಿಯನ್ನೇ ಉಂಟುಮಾಡಬಲ್ಲದು, ಏಕೆಂದರೆ ಸಾಮರ್ಥ್ಯದ ವೃದ್ಧಿಗೆ ಅವರು ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುತ್ತಿದ್ದಾರೆ. ಆ ವಿನೂತನ ತಂತ್ರಜ್ಞಾನ ಪರಿಚಯವಾದಲ್ಲಿ ಉದ್ದೀಪನಾ ವಸ್ತುಗಳ ಸೇವನೆ ಇಲ್ಲವಾಗುತ್ತದೆ ಎಂಬ ಭರವಸೆ ಈ ಗ್ರೀಕ್ ವಿಜ್ಞಾನಿಯದ್ದು.

ಅಂತರ ರಾಷ್ಟ್ರೀಯ ಒಲಂಪಿಕ್ಸ್ ಸಮಿತಿಯ ವೈದ್ಯಕೀಯ ಆಯೋಗದ ಸದಸ್ಯರಾದ ಯಾನಿಸ್ ಬ್ರೈಟನ್ ವಿಶ್ವವಿದ್ಯಾಲಯದಲ್ಲಿ ತಮ್ಮ ಸಂಶೋಧನೆಯನ್ನು ನಡೆಸುತ್ತಿದ್ದಾರೆ. ಒಲಂಪಿಕ್ಸ್ ನಡೆಯುವ ವೇಳೆಯಲ್ಲಿ ಟೋಕಿಯೋದಲ್ಲಿ ತಾಪಮಾನ 35 ಡಿಗ್ರಿಯನ್ನು ಮುಟ್ಟುತ್ತದೆ. ಅಂತಹ ಉಷ್ಣಾಂಶ ಓಟಗಾರರ ಮೇಲೆ ಯಾವ ರೀತಿಯ ಪ್ರತಿಕೂಲ ಪರಿಣಾಮ ಬೀರಬಲ್ಲದೆಂಬುದನ್ನು ಕುರಿತೂ ಸಂಶೋಧನೆ ನಡೆಸುತ್ತಿರುವ ಯಾನಿಸ್ ಟೋಕಿಯೋ ವಾತಾವರಣವನ್ನು ಅಭ್ಯಸಿಸುತ್ತಿರುವ ಪರಿಣತ ತಂಡದ ಸದಸ್ಯರೂ ಹೌದು. ಓಟಗಾರರು ಕೈ ಮೇಲೆ ಧರಿಸುವ ಒಂದು ಎಲೆಕ್ಟ್ರಾನಿಕ್ ಪಟ್ಟಿ ಮತ್ತು ಒಂದು ಎಲೆಕ್ಟ್ರಾನಿಕ್ ಪಿಲ್ ಮಾತ್ರದಿಂದಲೇ  ಓಟಗಾರನಿಗೆ ಓಟ ಹಾನಿಕಾರಕವೋ ಅಲ್ಲವೋ ಎಂಬ ಮಾಹಿತಿ ಕ್ಷಣಾರ್ಧದಲ್ಲಿ ಲಭ್ಯವಾಗುತ್ತದೆ.

ತಂತ್ರಜ್ಞಾನದ ಬೆಳವಣಿಗೆ ಕಾಣುತ್ತಿರುವ ನಾಗಾಲೋಟದ ವೇಗ ಜಗತ್ತನ್ನು ವಾಮನ ಗಾತ್ರವನ್ನಾಗಿಸುತ್ತಲೇ ಹೋಗುತ್ತಿದೆ. ಏನೆಲ್ಲಾ ವಿಶಿಷ್ಠವಾದ, ವಿಚಿತ್ರವಾದ ರೀತಿಯಲ್ಲಿ ಭಾರತೀಯರು ಮಹತ್ತರ ಬದಲಾವಣೆಗೆ ಕಾರಣರಾಗುತ್ತಿದ್ದಾರೆ ಎಂಬುದಕ್ಕೆ ಯಾನಿಸ್ ಜೀವನ ಯಾತ್ರೆಯೇ ಸಾಕ್ಷಿ. ಅವರ ಸಂಶೋಧನೆ ಸಾಧ್ಯವಾದದ್ದೇ ಭಾರತೀಯರ ಬೆಂಬಲದಿಂದ.

ವಾಲಿಬಾಲ್ ಆಟಗಾರನಾಗಿ ಒಲಂಪಿಕ್ಸ್ ನಲ್ಲಿ ಪಾಲ್ಗೊಳ್ಳುವ ಆಸೆ ಹೊತ್ತ ಯಾನಿಸ್ ಗೆ ಕೈಬೀಸಿ ಕರೆದದ್ದು ಕ್ರೀಡಾ ವಿಜ್ಞಾನ. ಗ್ಲಾಸ್ಗೋನಲ್ಲಿ ಸೇವೆ ಸಲ್ಲಿಸುತ್ತಿರುವ ಆತನಿಗೆ 1973ರಲ್ಲಿ ಆರಂಭವಾದ ಬಲ್ಬೀರ್ಸ್ ಎಂಬ ಸೊಗಸಾದ ರೆಸ್ಟುರಾ ಪರಿಚಯವಾಗುತ್ತದೆ. ಅಲ್ಲಿನ ಊಟಕ್ಕೆ ಮಾರುಹೋಗುವ ಯಾನಿಸ್ ಬಲ್ಬೀರ್ಸ್ ನ ಮಾಮೂಲಿ ಗಿರಾಕಿಯಾಗುತ್ತಾರೆ. ರೆಸ್ಟುರಾ ಮಾಲೀಕನ ಮಗನಾದ ನೆಕಿ ಸುಮಾಲ್ರ ಪರಿಚಯವಾಗುತ್ತದೆ (2008). ಕ್ರೀಡೆಯಲ್ಲಿ ಸಾಧಿಸಲು ಅನುವಂಶಿಕ ಕಾರಣಗಳಿವೆಯೋ, ಮುಂತಾದ ಪ್ರಶ್ನೆಗಳನ್ನು ಧಾರಾಕಾರವಾಗಿ ನಿತ್ಯ ಕೇಳುತ್ತಲೇ ಹೋಗುವ ಸುಮಾಲ್ ನ ಎಲ್ಲಾ ಪ್ರಶ್ನೆಗಳಿಗೆ ಸಮರ್ಥವಾದ ಉತ್ತರ ಸಿಗುತ್ತವೆ.

ಅದರಿಂದ ಪ್ರಭಾವಿತನಾದ ಸುಮಾಲ್ ಯಾನಿಸ್ ನ ಸಂಶೋಧನೆಗೆ ಸಹಾಯ ನೀಡುತ್ತಾರೆ. ಸಂಕಷ್ಟದಲ್ಲಿದ್ದ ಯಾನಿಸ್ ತನ್ನ ಸಂಶೋಧನೆಗೆ ಹಣ ಹೊಂದಿಸಿಕೊಳ್ಳಲು  ತನ್ನ ಮನೆಯನ್ನು ಎರಡು ಬಾರಿ ಅಡವಿಡಬೇಕಾಗುತ್ತದೆ. ಮದುವೆಯೂ ಮುರಿದುಬೀಳುತ್ತದೆ. ದೈನೇಸಿ ಸ್ಥಿತಿಯಲ್ಲಿದ್ದ ಯಾನಿಸ್ ಗೆ ಸುಮಾಲ್ ಮೂಲಕ ದೊರಕುವ ಹಣದಿಂದ ನವಚೈತನ್ಯ ಮೂಡುತ್ತದೆ.

ಇಂಗ್ಲೆಂಡ್ ಮತ್ತು ಸ್ಕಾಟ್ಲೆಂಡ್ ಗಳಲ್ಲಿ ಸಂಶೋಧನೆ ಮಾಡುತ್ತಲೇ ಯಾನಿಸ್ (ದೂರದ ಓಟಕ್ಕೆ ಹೆಸರಾದ) ಪೂರ್ವ ಆಫ್ರಿಕಾ ಮತ್ತು (ಸ್ಪ್ರಿಂಟ್ ಗೆ ಹೆಸರುವಾಸಿಯಾದ) ಜಮೈಕಾಗೆ ತೆರಳಿ ಅಲ್ಲಿಯ (ಕಪ್ಪು) ಶ್ರೇಷ್ಠ ಆಟಗಾರರ ಜೀನ್ಸ್ ಸ್ಯಾಮ್ಪ್ಗ್ ಗಳನ್ನು ಹೊತ್ತು ತಂದರು.

ಒಲಂಪಿಕ್ಸ್ ಕ್ರೀಡಾವಳಿಯಲ್ಲಿ ಕಪ್ಪು ಆಟಗಾರ ಪ್ರಾಬಲ್ಯ ತಿಳಿದಿರುವಂಥದ್ದೇ. ಅಪಾರ ಜನಪ್ರಿಯತೆ ಹೊಂದಿದ ಸ್ಪೋರ್ಟ್ಸ್ ಇಲ್ಲಸ್ಟ್ರೇಟೆಡ್ ಪತ್ರಿಕೆಯ ಸಂಪಾದಕ ಮಾರ್ಟಿನ್ ಕೇನ್ 1971 ರಲ್ಲಿ ಕ್ರೀಡಾಪಟು ಬೆಳೆಯುವ ವಾತಾವರಣ ಅವರ ಸಾಧನೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಬರೆದಾಗ ದೊಡ್ಡ ವಿವಾದ ಉಂಟಾಗಿತ್ತು. ಕಪ್ಪು ಕ್ರೀಡಾಪಟುಗಳ ಕುರಿತು ಪ್ರಕಟವಾದ ಮೊದಲ ಲೇಖನ ಅದೇನಲ್ಲ.  

ತರಬೇತುದಾರರು, ಕ್ರೀಡಾಪಟುಗಳು, ಸಾಂಸ್ಕೃತಿಕ ಮಾನವಶಾಸ್ತ್ರಜ್ಞರು, ಸಮಾಜಶಾಸ್ತ್ರ ಪರಿಣತರು, ಮನೋವಿಜ್ಞಾನಿಗಳು, ವೈದ್ಯರು ಮುಂತಾದವರೆಲ್ಲ ಈ ವಿಷಯದ ಬಗ್ಗೆ ತಮ್ಮ ತಮ್ಮ ಅಭಿಪ್ರಾಯಗಳನ್ನು ಮಂಡಿಸುತ್ತಲೇ ಬಂದಿದ್ದಾರೆ. ಮಾರ್ಟಿನ್ ಕೇನ್ ರ ಅಭಿಪ್ರಾಯಕ್ಕೆ ಯಾವುದೇ ವೈಜ್ಞಾನಿಕ ತಳಹದಿ ಇಲ್ಲವೆಂಬ ಕಾರಣಕ್ಕೆ ಅವರ ವಾದವನ್ನು ತಳ್ಳಿಹಾಕಲಾಯಿತು. ಅದಕ್ಕೆ ವ್ಯತಿರಿಕ್ತವಾಗಿ ಮೂಡಿಬಂದ ವಾದವೆಂದರೆ ಕರಿಯರು ಕೆಲವೊಂದು ಕ್ರೀಡೆಗಳಲ್ಲೂ, ಬಿಳಿಯರು ಬೇರೆ ಕೆಲವು ಕ್ರೀಡೆಗಳಲ್ಲೂ ವಿಶೇಷ ಸಾಮರ್ಥ್ಯ ಹೊಂದಿದ್ದಾರೆ.

ಈ ವಾದವನ್ನೂ ಸಾರಾಸಗಟಾಗಿ ಒಪ್ಪುವುದು ಕಷ್ಟವೇ. ಮ್ಯಾರಥಾನ್ ಓಟದ ಚರ್ಚೆಗಷ್ಟೇ ಸೀಮಿತಗೊಳಿಸಿದಲ್ಲಿ, ನಮಗೆ ಕಾಣಬರುವ ಕುತೂಹಲಕರ ಸಂಗತಿಯೆಂದರೆ ಈ ವಿಭಾಗದಲ್ಲಿ ಪ್ರಾಬಲ್ಯ ಹೊಂದಿರುವ ಇಥಿಯೋಪಿಯ ಮತ್ತು ಕೀನ್ಯಾ ದೇಶಗಳ ಯಶಸ್ವೀ ಓಟಗಾರರ ಮೂಲ ದ ಗ್ರೇಟ್ ರಿಫ್ಟ್ ವ್ಯಾಲಿಗೆ ಹೊಂದುಕೊಂಡಿರುವ ಪರ್ವತಪ್ರದೇಶ. ಇಥಿಯೋಪಿಯ ಸ್ಪರ್ಧಿಗಳು ಹೆಚ್ಚಾಗಿ ತಯಾರಾಗುವುದು ಅರ್ಸಿ ಮತ್ತು  ಶೇವ ಎಂಬ ಜಿಲ್ಲೆಗಳಿಂದ. ಕೀನ್ಯಾ ಸ್ಪರ್ಧಿಗಳ ತೌರು ನಂದಿ ಎಂಬ ಜಿಲ್ಲೆ. ಅಂದರೆ, ಆಫ್ರಿಕಾದ ಪಶ್ಚಿಮ ಭಾಗದಲ್ಲಿನ ದೇಶಗಳಲ್ಲಿರುವ ಕರಿಯರಲ್ಲಿ ಈ ಜನಗಳ ವಿಶಿಷ್ಠ ಸಾಮರ್ಥ್ಯ ಇಲ್ಲ. (ಅದೇ ರೀತಿ 100 ಮೀ, 200 ಮೀ, 400 ಮೀ ಓಟಗಳಲ್ಲಿ ವಿಶೇಷ ಸಾಮರ್ಥ್ಯ ಹೊಂದಿರತಕ್ಕಂಥ ಕರಿಯರು ವೆಸ್ಟ್ ಇಂಡೀಸ್ ನ ಜಮೈಕಾ ಮೂಲದವರು ಎಂಬುದೂ ಗಮನಾರ್ಹ.)

ಈ ಅಸಾಧಾರಣ ಕ್ರೀಡಾಪಟುಗಳ ಸಾಧನೆಯ ಹಿಂದಿನ ರಹಸ್ಯವನ್ನು ಶೋಧಿಸಿದ ಅಧ್ಯಯನ ಅದಕ್ಕೆ ಈ ಅಂಶಗಳನ್ನು ಹೊರಹಾಕಿದೆ :

1. ಪರ್ವತಪ್ರದೇಶವಾದ ಕಾರಣ ಅಲ್ಲಿನ ಗಾಳಿಯಿಂದ ಲಭಿಸುವ ಲಾಭ. ಆ ಮೂರೂ ಜಿಲ್ಲೆಗಳಲ್ಲಿನ ಜನರ ರಕ್ತದಲ್ಲಿನ ಹೆಮೊಗ್ಲೋಬಿನ್ ನ ಪ್ರಮಾಣ ಅಧಿಕವಾಗಿದ್ದು ರಕ್ತನಾಳಗಳಲ್ಲಿ ಆಮ್ಲಜನಕ ಮತ್ತು ಇಂಗಾಲಾಮ್ಲದ ಹರಿವನ್ನು ಸುಸೂತ್ರಗೊಳಿಸುತ್ತದೆ. ಮೆಕ್ಸಿಕೋ, ಆಂಡಿಸ್, ಮಧ್ಯ ಏಷ್ಯಾಗಳನ್ನು ಪ್ರತಿನಿಧಿಸುವ ಕ್ರೀಡಾಪಟುಗಳು ಪರ್ವತ ಪ್ರದೇಶದವರೇ (ಸಮುದ್ರಮಟ್ಟದಿಂದ 2000 ಮೀ ಮೇಲೆ)  ಆಗಿದ್ದರೂ, ಅವರಲ್ಲಿ ಈ ವೈಶಿಷ್ಠ್ಯ ಕಂಡುಬರುವುದಿಲ್ಲ

2. ಓಡುವಾಗ ದೇಹದಲ್ಲಿ ಉತ್ಪತ್ತಿಯಾಗುವ ಶಾಖವನ್ನು ನಿರ್ವಹಿಸುವುದರಲ್ಲಿ ಹೆಚ್ಚಿನ ಸಾಮರ್ಥ್ಯ

3. ಕಾಲಿನ ತೂಕ ಹಲವು ಗ್ರಾಮ್ಗಳಷ್ಟು ಕಡಿಮೆ ಇದ್ದು, ಅದರಿಂದ ದೊರಕುವ ಪ್ರಯೋಜನ  

4. ಒಲಂಪಿಕ್ಸ್ ನಲ್ಲಿ ಪದಕಗಳನ್ನು ಗಿಟ್ಟಿಸುತ್ತಾ ಹೋದಂತೆ ಯಶಸ್ಸಿನಿಂದ ಸಿಕ್ಕ ಆರ್ಥಿಕ ಪ್ರಗತಿ ಹೆಚ್ಚು ಹೆಚ್ಚು ಜನರನ್ನು ಓಟದ ಸ್ಪರ್ಧೆಯತ್ತ ಆಕರ್ಷಿಸುತ್ತಿದೆ

5. ಅಂತಹ ಅಪಾರವಾದ ಯಶಸ್ಸು ಅವರಲ್ಲಿ ಗೆಲುವಿನ ವಿಶ್ವಾಸ ಮೂಡಿಸುವುದಷ್ಟೇ ಅಲ್ಲದೇ ಅವರ ಮನೋಭೂಮಿಕೆಯನ್ನೇ ಬದಲಿಸಿಬಿಟ್ಟಿದೆ. ಯಾವುದೇ ಕ್ಷೇತ್ರದಲ್ಲಿ ಯಶಸ್ಸಿಗೆ ಅಂತಹ ಗುಣಾತ್ಮಕ ಮನೋಭೂಮಿಕೆ ಅವಶ್ಯ ಎಂದು ಮನೋವಿಜ್ಞಾನ ಹೇಳುತ್ತದೆ.