ಕಮಲ ಪಕ್ಷದಲ್ಲಿ ಶೀತಲ ಸಮರ ಸೋತವರ ದೇಹಾದ್ಯಂತ ಬೆವರು

ಸಚಿವ ಸ್ಥಾನ ಎಂಬುದು ಶಾಸಕನಾಗಿರುವ ಅಳಿಯ ಮತ್ತು ಸೋತಿರುವ ಗೆಳೆಯನ ನಡುವೆಯೇ ಪೈಪೋಟಿಯಾಗುತ್ತಿರುವುದರಿಂದ, ಸಹಜವಾಗಿ ಶ್ರೀನಿವಾಸ ಪ್ರಸಾದ್ ಅಳಿಯನ ಪರವಾಗಿ ನಿಂತಿದ್ದಾರೆ. ಹಾಗಾಗಿಯೇ ಸೋತಿರುವ ಗೆಳೆಯನಿಗೆ ಮಂತ್ರಿ ಮಾಡಲಾಗಲ್ಲ ಎಂದೇಳುತ್ತಿದ್ದಾರೆ. ಇದರಿಂದ ಬೆಚ್ಚಿ ಬಿದ್ದಿರುವುದು ಸೋತಿರುವ  ಇಬ್ಬರಾದರೆ, ಸಂತಸ ಹೆಚ್ಚಿರುವುದು ಮೂಲ ಬಿಜೆಪಿಗರಲ್ಲಿ.

ಕಮಲ ಪಕ್ಷದಲ್ಲಿ ಶೀತಲ ಸಮರ ಸೋತವರ ದೇಹಾದ್ಯಂತ ಬೆವರು

ಅಮೆರಿಕ-ಇರಾನ್ ವಿಚಾರದಲ್ಲಿ ಯಾವ ದೇಶದ ಮೇಲೆ ಯಾರು ಕ್ಷಿಪಣಿ ಎಸೆಯುತ್ತಾರೋ ಎಂಬ ಆತಂಕವಿದೆ. ವಾತಾವರಣ ಜಾಗತಿಕವಾಗಿ ಇದೆ. ಅಂಥದ್ದೇ ರಾಜಕೀಯಕ್ಷೋಭೆ, ವಾಗ್ಬಾಣಗಳ ವಿನಿಮಯ ಯಾವ ಬಣದಿಂದ ಯಾವಾಗ ಆಗುತ್ತೋ ಎಂಬ ಬಿಗುವಿನ ವಾತಾವರಣವೂ ರಾಜ್ಯದಲ್ಲಿ ಸೃಷ್ಟಿಯಾಗುತ್ತಿರುವುದು ಕುತೂಹಲಕರವಾಗಿದೆ.

ಯಡಿಯೂರಪ್ಪ ಬಲವೃದ್ಧಿಸಿಕೊಂಡು, ಸ್ವಂತಿಕೆಯಿಂದ ಮುನ್ನಡೆಯುತ್ತೇನೆ ಎಂಬ ಠೇಂಕಾರವನ್ನು ಅಪರೋಕ್ಷವಾಗಿ ಮೊಳಗಿಸುತ್ತಲೇ ಇದ್ದಾರೆ. ಸಂಘಪರಿವಾರದವರು ಒಡ್ಡುತ್ತಿರುವ ಅಡೆತಡೆಗಳಿಗೆ ಮನ್ನಣೆ ಕೊಡುತ್ತಿಲ್ಲ. ಇದೇ ಹಗ್ಗಜಗ್ಗಾಟ ಮಂತ್ರಿ ಮಂಡಲ ವಿಚಾರದಲ್ಲೂ ನಡೆದಿದ್ದು, ಇದಕ್ಕೀಗ ಸಂಸದ ಶ್ರೀನಿವಾಸ ಪ್ರಸಾದ್  ಹೇಳಿಕೆ  ಹೊಸ ಬಾಂಬ್‌ ಸಿಡಿಸಿದೆ.

ಪಕ್ಷ ಬಿಟ್ಟು ಬಂದವರಿಗೆ ಮೋಸ ಮಾಡಲ್ಲ ಎಂಬ ಯಡಿಯೂರಪ್ಪ ನಿಲುವಿಗೆ ಅಪಸ್ವರ, ಪ್ರತಿರೋಧಗಳಿವೆ. ಇವನ್ನೆಲ್ಲ ಸಂಭಾಳಿಸಿಕೊಳ್ಳುವ ತಾಪತ್ರಯದಲ್ಲಿಅವರಿರುವಾಗಲೆ ಮಂತ್ರಿ ಮಾಡಿ ಎಂದು ಬೆಂಬತ್ತಿರುವ ಸೋತ ವ್ಯಕ್ತಿಗಳಾದ ಎಂ.ಟಿ.ಬಿ. ನಾಗರಾಜ್ ಮತ್ತು ಎ.ಎಚ್.ವಿಶ್ವನಾಥ್‌ಗೆ ಬೆವತುಕೊಳ್ಳುವಂತೆ ಶ್ರೀನಿವಾಸ ಪ್ರಸಾದ್ ಮಾಡಿಟ್ಟಿದ್ದಾರೆ.

ನ್ಯಾಯಾಲಯ ಅನರ್ಹತೆಯನ್ನು ಎತ್ತಿಹಿಡಿದಿದೆ, ಚುನಾವಣೆಯಲ್ಲಿ ಗೆದ್ದುಬರುವವರೆಗೆ ಅದು ಮುಂದುವರಿಯುತ್ತೆ. ಹಾಗಾಗಿ ಸೋತಿರುವವರಿಗೆ ಮಂತ್ರಿಗಿರಿಕೊಡಲಾಗಲ್ಲ  ಎಂಬುದೇ ಶ್ರೀನಿವಾಸ ಪ್ರಸಾದ್ ಹೇಳಿಕೆಯ ಸಾರಾಂಶ. ಅಂದರಿದು ನೇರವಾಗಿ ಎಂಟಿಬಿ ನಾಗರಾಜ್ ಮತ್ತು ವಿಶ್ವನಾಥ್‌ಗೆ ಸಚಿವ ಸ್ಥಾನ ಸಿಗಬಾರದು, ಸಿಗಲ್ಲ  ಎಂಬುದನ್ನೇ ಪ್ರತಿಪಾದಿಸುತ್ತಿದೆ. ಹಾಗೆ ನೋಡಿದರೆ ವಿಶ್ವನಾಥ್‌ ರನ್ನು  ಬಿಜೆಪಿಗೆ ಬರುವಂತೆ ಪ್ರೇರೇಪಿಸಿದ್ದೇ ಪ್ರಸಾದ್. ಯಡಿಯೂರಪ್ಪ ಸರ್ಕಾರ ಬರುವುದರಲ್ಲಿ ಇವರು ಕೂಡ ಆಪರೇಷನ್‌ ಕಮಲದ ಭಾಗವಾಗಿ ಕಾರ್ಯನಿರ್ವಹಿಸಿದವರೂ ಹೌದು. ಇದು ಗುಟ್ಟೇನಲ್ಲ, ಖುದ್ದಾಗಿ ವಿಶ್ವನಾಥ್‌ ಕೂಡ ಇವರಿಂದಾಗಿಯೇ ಈ ಪಕ್ಷಕ್ಕೆ ಬಂದೆ ಎಂದು ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ.

ಆದರೀಗ ಅದೇ ಶ್ರೀನಿವಾಸ ಪ್ರಸಾದ್, ಸೋತ ವಿಶ್ವನಾಥ್‌ ಗೆ ಮಂತ್ರಿಕೊಡುವಂತಿಲ್ಲ ಎಂಬ ತಕರಾರು ಎತ್ತಿದ್ದಾರೆ. ಅದಕ್ಕೆ ಅವರು ಬಳಸುತ್ತಿರುವುದು ನ್ಯಾಯಾಲಯದ ತೀರ್ಪು ಎಂಬುದು ಮೇಲ್ನೋಟಕ್ಕೆ ಕಾಣುವಂಥದ್ದು. ಆದರೆ ಒಳಗೆ ಇರುವುದು ತನ್ನ ಅಳಿಯನಿಗೆ ಮಂತ್ರಿ ಭಾಗ್ಯ ದೊರೆಯಲಿ ಎಂಬಂಶ.  ನಂಜನಗೂಡಿನ ಶಾಸಕ ಹರ್ಷವರ್ಧನ್, ಶ್ರೀನಿವಾಸ ಪ್ರಸಾದ್ ಅಳಿಯ, ಇವರು ನನ್ನ ಮಾವನಿಗೆ ಕೇಂದ್ರದಲ್ಲಿ ಮಂತ್ರಿಸ್ಥಾನ ಕೊಟ್ಟಿದ್ದರೆ ಕೇಳುತ್ತಿರಲಿಲ್ಲ, ಆದರೆ ಕೊಟ್ಟಿಲ್ಲವಲ್ಲ ಹಾಗಾಗಿ ದಲಿತ ಕೋಟಾದಿಂದ ರಾಜ್ಯದಲ್ಲಿ ನನ್ನನ್ನು ಮಂತ್ರಿ  ಮಾಡಿ ಎಂದು ಪಟ್ಟು ಹಿಡಿದಿದ್ದಾರೆ. ಇವರ ಈ ಆಸೆಗೆ ಅಡ್ಡಿಯಾಗಿರುವುದು ವಿಶ್ವನಾಥ್. ಹುಣಸೂರಲ್ಲಿ ಸೋತಿದ್ದರೂ ಸಚಿವ ಸ್ಥಾನ ಬೇಕು ಎಂಬುದಿವರ ಹಂಬಲವೂ ಹೌದು, ಮೋಸ ಮಾಡಲ್ಲ ಎಂದು ಮುಖ್ಯಮಂತ್ರಿ ಮಾತುಕೊಟ್ಟಿರುವುದು ದಿಟವೂ ಹೌದು.

ಸಚಿವ ಸ್ಥಾನ ಎಂಬುದು ಶಾಸಕನಾಗಿರುವ ಅಳಿಯ ಮತ್ತು ಸೋತಿರುವ ಗೆಳೆಯನ ನಡುವೆಯೇ ಪೈಪೋಟಿಯಾಗುತ್ತಿರುವುದರಿಂದ, ಸಹಜವಾಗಿ ಶ್ರೀನಿವಾಸ ಪ್ರಸಾದ್ ಅಳಿಯನ ಪರವಾಗಿ ನಿಂತಿದ್ದಾರೆ. ಹಾಗಾಗಿಯೇ ಸೋತಿರುವ ಗೆಳೆಯನಿಗೆ ಮಂತ್ರಿ ಮಾಡಲಾಗಲ್ಲ ಎಂದೇಳುತ್ತಿದ್ದಾರೆ. ಇದರಿಂದ ಬೆಚ್ಚಿ ಬಿದ್ದಿರುವುದು ಸೋತಿರುವ  ಇಬ್ಬರಾದರೆ, ಸಂತಸ ಹೆಚ್ಚಿರುವುದು ಮೂಲ ಬಿಜೆಪಿಗರಲ್ಲಿ.

ಉಪ ಚುನಾವಣೆಯಲ್ಲಿ ಗೆದ್ದ 11 ಮಂದಿಯಲ್ಲೇ ಕೆಲವರಿಗೆ ಮಂತ್ರಿ ಸ್ಥಾನ ವಂಚಿತವಾಗುವ ಲಕ್ಷಣಗಳಿವೆ. ಅದರಿಂದ ಅವರಾಗಲೇ ಧುಮುಗುಡುತ್ತಿದ್ದಾರೆ. ಸೋತ ಇಬ್ಬರಂತೂ ದಿನ ಬಿಟ್ಟು ದಿನ ಮುಖ್ಯಮಂತ್ರಿಯನ್ನು ಕಂಡು ದು:ಖ ದುಮ್ಮಾನ ತೋಡಿಕೊಳ್ಳುತ್ತಲೇ ಇದ್ದಾರೆ. ಇವರನ್ನೆಲ್ಲ ಸಂತೈಸುವ ವೇಳೆಗಾಗಲೇ ಪ್ರಸಾದ್‌ ಎತ್ತಿರುವ ಮಾತುಗಳು ಕಮಲ ಪಾಳಯದಲ್ಲಿ ಮಿಂಚಿನ ಸಂಚಲನ ಮೂಡಿಸಿವೆ. ಏನೋ ಮಾಡಲು ಹೋಗಿ, ಇನ್ನೇನೋ ಆಗುತ್ತಿರುವ ಪರಿಯಿಂದಾಗಿ ಕಂಗಾಲಾಗಿರುವ ವಿಶ್ವನಾಥ್ ಹೃದಯ ಬಡಿತ ಹೆಚ್ಚಿಸಿಕೊಂಡು ರಾಜಕೀಯ ಭವಿಷ್ಯಕ್ಕಾಗಿ ಪರದಾಡುತ್ತಿದ್ದಾರೆ.

ಸಂಸದ ಶ್ರೀನಿವಾಸ ಪ್ರಸಾದ್ ಬಿಜೆಪಿಯಲ್ಲಿದ್ದರೂ, ಸಂಘದವರಲ್ಲ. ಸಂವಿಧಾನದ ಬಗ್ಗೆ ಕೇಂದ್ರ ಸಚಿವರಾಗಿದ್ದ ಅನಂತಕುಮಾರ್  ಹೆಗ್ಡೆ ಹೇಳಿಕೆಗೆ ತಿರುಗೇಟು, ಮೂರು ಉಪಮುಖ್ಯಮಂತ್ರಿ ಮಾಡಿದ್ದಕ್ಕೆ ಅಮಿತ್ ಶಾ ನಿಲುವು ಸರೀಗಿಲ್ಲ ಎಂದೇಳಿದ್ದರು. ಹೀಗಾಗಿ ಪರಿವಾರದಿಂದ  ಅಂತರಕಾಯ್ದುಕೊಂಡು, ಯಾರನ್ನ ಬೇಕಾದರೂ ಟೀಕಿಸುವ, ಏನನ್ನು ಬೇಕಾದರೂ ಹೊಗಳುವ ಪಾತ್ರ ಪೋಷಣೆ ಮಾಡಿಕೊಂಡು ಬರುತ್ತಿರುವ ಇವರಿಗೆ ಯಡಿಯೂರಪ್ಪ ಬಗ್ಗೆ ಅಕ್ಕರೆಯಿದೆ, ಪರಿವಾರಕ್ಕೇ ಜೋತು ಬೀಳದವರು ಅವರು ಎಂಬ ನಂಬಿಕೆ ಇದೆ. ಹೀಗಾಗಿಯೇ ಇವರೀಗ ಸೋತವರಿಗೆ ಮಂತ್ರಿಗಿರಿ ಇಲ್ಲ ಎಂದೇಳಿರುವುದು ಮುಖ್ಯಮಂತ್ರಿ ಮುಖವಾಣಿಯಾಗಿಯೇ ಹೊಸ ಹೊಸ ಇರಬಹುದಾ ಎಂಬ ಪ್ರಶ್ನೆಗಳು ಎದ್ದು ಕೂತಿರುವುದರಿಂದ ಪಕ್ಷದೊಳಗೆಯೇ ಶೀತಲ ಸಮರ ಹೆಚ್ಚುತ್ತಿದ್ದು, ಸೋತವರ ದೇಹದಲ್ಲಿ ಬೆವರು ಕಿತ್ತು ಬರುತ್ತಿದೆ.