ಬಿಜೆಪಿಗೆ ಸೂಕ್ತರು, ರಾಜಕೀಯಕ್ಕೆ ನಾ(ಲಾ)ಯಖರು

ಬಿಜೆಪಿಯಲ್ಲಿರುವವರಲ್ಲಿ  ಇಂಥದ್ದೊಂದು ಅಂಟುಜಾಡ್ಯ ಇದೆ. ಬಾಯಿಗೆ ಬಂದಂತೆ ಒದರುವುದು ಬಿಜೆಪಿ ನಾಯಕರ ಆಜನ್ಮಸಿದ್ಧ ಹಕ್ಕು ಎಂಬಂತೆ ವರ್ತಿಸುತ್ತಾರೆ. ಸಿ.ಟಿ.ರವಿಯ ಹಾಗೆ ರೈಲ್ವೇ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಎಂಬವರಿದ್ದಾರೆ ಎನ್ನುವುದು ಗೊತ್ತಾಗಿದ್ದೂ ಇತ್ತೀಚೆಗೆ.ಇದೂ ಕೂಡ ಪೌರತ್ವ ತಿದ್ದುಪಡಿ ಕಾಯಿದೆ ವಿರೋಧಿ ಹೋರಾಟ ಹಿನ್ನೆಲೆಯಲ್ಲೇ.

ಬಿಜೆಪಿಗೆ ಸೂಕ್ತರು, ರಾಜಕೀಯಕ್ಕೆ ನಾ(ಲಾ)ಯಖರು

 

ಪೌರತ್ವ ತಿದ್ದುಪಡಿ ಕಾಯಿದೆ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ಹಿನ್ನೆಲೆಯಲ್ಲಿ ಸಿ.ಟಿ.ರವಿ ಎಂಬ ಕನ್ನಡ-ಸಂಸ್ಕೃತಿ ಸಚಿವ ಎಷ್ಟೊಂದು ಬೇಜವಾಬ್ದಾರಿಯಿಂದ ಮಾತಾಡಿದ್ದಾರೆಂಬುದನ್ನು ನೀವು ನೋಡಿರುತ್ತೀರಿ, ಕೇಳಿರುತ್ತೀರಿ. ಈ ಮಹಾಶಯನನ್ನು ಕನ್ನಡ-ಸಂಸ್ಕೃತಿ ಸಚಿವನನ್ನಾಗಿ ಮಾಡಿದವರೇ ಎಷ್ಟೊಂದು ನಿರ್ಲಕ್ಷ್ಯದ, ಬೇಜವಾಬ್ದಾರಿತನದ ನಿರ್ಧಾರ ತೆಗೆದುಕೊಂಡಿದ್ದಾರೆನ್ನುವುದು ನೇಮಕ ಮಾಡಿದಾಗಲೇ ಗೊತ್ತಾಗಿತ್ತಾದರೂ ಈಗೀಗ ನಿರ್ಧಾರ ತಪ್ಪು ಎನ್ನುವುದನ್ನು ಸಾಬೀತುಪಡಿಸುವಂತೆ ರವಿ ನಡವಳಿಕೆ ಇದೆ. ಈತ ಬಾಬಾಬುಡನ್ ಗಿರಿ ವಿವಾದದಿಂದ ಹುಟ್ಟಿಕೊಂಡ ‘ನಾಯಕ’. ಇದು ಬಿಟ್ಟರೆ ಬೇರೇನೂ ಗೊತ್ತಿದ್ದಂತಿಲ್ಲ. ಬಿಜೆಪಿಯ ಬಹುತೇಕ ನಾಯಕರು ರಾಜಕೀಯದಲ್ಲಿ ಸ್ಥಾಪನೆಯಾಗಿರುವುದೇ ಇಂಥ ವಿವಾದಗಳಿಂದ. ವಿವಾದಗಳು ಸೃಷ್ಟಿಸಿದ ನಾಯಕರಿರುವ ಜಗತ್ತಿನ ಏಕೈಕ ಪಕ್ಷವೆಂದರೆ ಬಿಜೆಪಿಯೇ ಇರಬೇಕು.

ಮನುಷ್ಯನ ನಿಲುವು-ನಡೆಗಳನ್ನು ಬಹಳ ಸಮಯದಿಂದ ಸೂಕ್ಷ್ಮವಾಗಿ ಗಮನಿಸುತ್ತಿರುವ ನನಗೆ ರಾಜ್ಯದಲ್ಲಿ ಮೊತ್ತ ಮೊದಲ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುವುದರಲ್ಲಿ ರವಿಯ ಪಾತ್ರವೂ ಮುಖ್ಯವಾಗಿತ್ತೆನ್ನುವುದು ಅರಿವಿತ್ತು. ಬಾಬಾಬುಡನ್ ಗಿರಿ ಬೊಂಬಡಾ ಕೂಡ ಬಿಜೆಪಿ ಪರ ಮತ ಹೊಂಚುವುದರಲ್ಲಿ ಒಂದಷ್ಟು ನೆರವಾಗಿತ್ತು. ಹೀಗಾಗಿಯೇ ಮೊದಲ ಬಿಜೆಪಿ ಸರ್ಕಾರದ ಮೊದಲ ಸಚಿವ ಸಂಪುಟದಲ್ಲಿ  ರವಿಗೆ ಸ್ಥಾನವೇ ಸಿಕ್ಕದಿದ್ದಾಗ ನನಗೂ ಅಚ್ಚರಿಯಾಗಿತ್ತು! ಬಿಜೆಪಿಗೆ ತುಂಬ ಸೂಕ್ತ ವ್ಯಕ್ತಿಯಾದ ರವಿಯನ್ನೇಕೆ ಮೊದಲ ಸಲವೇ ಪರಿಗಣಿಸಲಿಲ್ಲ ಎಂಬ ಪ್ರಶ್ನೆ ನನ್ನ ತಲೆಯನ್ನೂ ತಿಂದಿತ್ತು.

ಅದಿರಲಿ. ಈಗ ಪೌರತ್ವ ತಿದ್ದುಪಡಿ ಕಾಯಿದೆ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ಹಿನ್ನೆಲೆಯಲ್ಲಿ ಶಾಸಕ ಯು.ಟಿ.ಖಾದರ್ ಗೆ ಪ್ರತಿಕ್ರಿಯಿಸುವ ಆತುರದಲ್ಲಿ ರವಿ ಬೀದಿಬದಿಯ ಜಗಳಗಂಟನಂತೆ ವರ್ತಿಸಿದ್ದಾರೆ. ಅವರ ಮಾತುಗಳು ಅಲ್ಪಸಂಖ್ಯಾತರನ್ನು ಬೆದರಿಸುವಂತಿತ್ತು. ರಾಷ್ಟ್ರೀಯ ಪೌರತ್ವ ನೋಂದಣಿ-ಎನ್.ಆರ್.ಸಿ. ಸಂವಿಧಾನ ವಿರೋಧಿ ಮತ್ತು ತಾರತಮ್ಯ ಉಂಟುಮಾಡುವುದರಿಂದಾಗಿ ತಮ್ಮ ಹೆಸರು ನೋಂದಾಯಿಸುವುದಿಲ್ಲ ಎಂದು ಖಾದರ್ ಹೇಳಿದ್ದರು. ಇದು ಚರ್ಚೆಯಾಗಬೇಕಾದ ವಿಚಾರವೇ ಹೊರತು ಬಾಯಿಗೆ ಬಂದಂತೆ ಒದರುವುದಲ್ಲ.

ಸಿ.ಟಿ. ರವಿ ಪ್ರಕಾರ ಪೌರತ್ವ ತಿದ್ದುಪಡಿ ಕಾಯಿದೆ ವಿರುದ್ಧ ಪ್ರತಿಭಟಿಸುತ್ತಿರುವುದೇ ಪ್ರಜಾಸತ್ತೆ ಮತ್ತು ಸಂವಿಧಾನ ವಿರೋಧಿಯಾಗಿದೆ.  ಗೋಧ್ರಾದಲ್ಲಿ ಕರಸೇವಕರನ್ನು ಸುಟ್ಟ ಘಟನೆಗೆ ಯಾವ ರೀತಿಯಲ್ಲಿ ಪ್ರತಿಕಾರ ತೀರಿಸಲಾಯಿತು ಎಂಬುದನ್ನೂ ನೆನಪಿಸುವ ಅವರು, ನಾವೂ ಪ್ರತಿಕ್ರಿಯಿಸಲು ಶುರು ಮಾಡಿದರೆ ಏನಾಗುತ್ತದೆ ಎಂಬುದನ್ನು ನೀವೂ ನೋಡಿರುತ್ತೀರಿ ಎಂದು ಹೇಳಿದ್ದಾರೆ. ಅಂದರೆ ಅವರ ಮಾತಿನಲ್ಲೇ ಧಮಕಿ ಇದೆ. ಬಹುಸಂಖ್ಯಾತರು ಸಹನೆಯಿಂದಿದ್ದಾರೆ. ಬಹುಸಂಖ್ಯಾತರು ಬೀದಿಗಿಳಿದರೆ ನಿಮ್ಮ ಪರಿಸ್ಥಿತಿ ಏನಾಗಬಹುದೆಂದು ಕಲ್ಪಿಸಿಕೊಳ್ಳಿ. ಬಹುಸಂಖ್ಯಾತರ ಸಹನೆ ಪರೀಕ್ಷಿಸಬೇಡಿ ಎಂಬ ಎಚ್ಚರಿಕೆಯ ಮಾತುಗಳನ್ನೂ ಅವರು ಆಡಿದ್ದಾರೆ.

ನಾಲಗೆ ಹೇಗೆ ಬೇಕಾದರೂ ಹೊರಳುತ್ತದೆ ಎನ್ನುವುದಕ್ಕೆ ಅವರ ಮಾತುಗಳೇ ಸಾಕ್ಷಿ. “ಪಾಕಿಸ್ತಾನದಿಂದ ಬಂದವರಿಗೆಲ್ಲ ಪೌರತ್ವ ನೀಡುವುದಾಗಿ ಕಾಂಗ್ರೆಸ್ ಪಕ್ಷ ಹೇಳಿಕೊಂಡೇ ಬಂದಿದೆ. ಅಖಂಡ ಭಾರತವಾದರೆ ಅದಕ್ಕೂ ನಾವು ಸಿದ್ದರಿದ್ದೇವೆ. ಆದರೆ ಭಾರತವನ್ನು ಪಾಕಿಸ್ತಾನ ಆಗಲು ನಾವು ಬಿಡುವುದಿಲ್ಲ” ಎಂಬ ಅನಗತ್ಯ ಮಾತುಗಳನ್ನೂ ರವಿ ಉದುರಿಸುತ್ತಾರೆ.  ರವಿ ರಾಜ್ಯದ  ಸಚಿವ. ಸಂವಿಧಾನದ ಆಶಯಕ್ಕೆ ತಕ್ಕಂತೆ ಪ್ರಮಾಣ ವಚನ ಸ್ವೀಕರಿಸಿದವರು. ಯಾವುದೇ ಧರ‍್ಮ, ಜಾತಿ, ವ್ಯಕ್ತಿಗೆ ತಾರತಮ್ಯ ಮಾಡುವುದಿಲ್ಲ ಎಂಬ ನೆಲೆಯಲ್ಲಿಯೇ ಪ್ರತಿಜ್ಞಾವಿಧಿ ಕೈಗೊಂಡಿರುತ್ತಾರೆ. ಆದರೆ ಸಚಿವರ ನಡವಳಿಕೆ ಮಾತ್ರ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿಯೇ ಇದೆ. ಅದರಲ್ಲೂ ಅವರು ಸಂಸ್ಕೃತಿ ಸಚಿವರು. ಅವರ ಮಾತುಗಳೇ ಅವರ ಸಂಸ್ಕೃತಿಯನ್ನು ಬಯಲು ಮಾಡಿದೆ. ಸಂಸ್ಕೃತಿಯ ವಿಶಾಲ ಅರ್ಥವನ್ನು ರವಿ ಅವರ ಸಂಕುಚಿತ ಮನಸ್ಸು ತಪ್ಪಾಗಿ ಅರ್ಥೈಯಿಸಿಕೊಂಡಿದೆ. ಧರ‍್ಮ ಎಂದರೆ ವರ್ಷಕ್ಕೊಮ್ಮೆ ದತ್ತಪೀಠದ ಹೆಸರಲ್ಲಿ ಕೇಸರಿ ಬಟ್ಟೆ ಧರಿಸಿ ತೋರಿಕೆಯ ವಿಧಿಗಳ ಆಚರಣೆಯಲ್ಲ. ಕೇವಲ ಮತಾಚರಣೆಯನ್ನೇ ರವಿ ಧರ‍್ಮ ಎಂದುಕೊಂಡಿದ್ದಾರೆ. ಧರ‍್ಮಕ್ಕೂ ವಿಶೇಷ ಅರ್ಥವಿದೆ. ರವಿ ಅವರ ನಡವಳಿಕೆಯೇ ಧರ್ಮವಲ್ಲ. ಅಲ್ಪಸಂಖ್ಯಾತರ ಮೇಲೆ ಬಹುಸಂಖ್ಯಾತರು ಗುಟುರು ಹಾಕುವುದು ಯಾವ ಧರ‍್ಮ? ಗೋಧ್ರಾ ಪ್ರತಿಕ್ರಿಯೆಯಂಥ ಪರಿಸ್ಥಿತಿ ಮರುಕಳಿಸಬಹುದು ಎಂದು ಎಚ್ಚರಿಕೆ ನೀಡುವ ವ್ಯಕ್ತಿಯನ್ನು ಒಂದೇ ಕಾರಣದಿಂದ ಸಚಿವ ಸ್ಥಾನದಿಂದ ಕೈಬಿಡಬೇಕು.  ಯಡಿಯೂರಪ್ಪನವರಿಗೆ ಅದು ಸಾಧ್ಯವೇ?