ಬಿಜೆಪಿ ರಾಷ್ಟ್ರಾಧ್ಯಕ್ಷರಾಗಿ ಜೆ.ಪಿ ನಡ್ಡಾ ಆಯ್ಕೆ

ಬಿಜೆಪಿ ರಾಷ್ಟ್ರಾಧ್ಯಕ್ಷರಾಗಿ ಜೆ.ಪಿ ನಡ್ಡಾ ಆಯ್ಕೆ

ದೆಹಲಿ: ಗೃಹ ಸಚಿವ ಅಮಿತ್​ ಶಾ ಅವಧಿ ಮುಗಿಯುತ್ತಿದ್ದಂತೆಯೇ ಬಿಜೆಪಿಯ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ಜೆ.ಪಿ ನಡ್ಡಾ ಆಯ್ಕೆಯಾಗಿದ್ದಾರೆ. ಇದೇ ಜನವರಿ 20ರಂದು ಜೆಪಿ ನಡ್ಡಾ ಬಿಜೆಪಿ ರಾಷ್ಟ್ರಾಧ್ಯಕ್ಷರಾಗಿ ಪಕ್ಷದ ಚುಕ್ಕಾಣಿ ಹಿಡಿಯಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಹೊಸ ಅಧ್ಯಕ್ಷರ ಚುನಾವಣೆಯ ವೇಳಾಪಟ್ಟಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು, ನಡ್ಡಾ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗುತ್ತದೆ ಎಂದು ಪಕ್ಷದ ಮೂಲಗಳು ವಿಶ್ವಾಸ ವ್ಯಕ್ತಪಡಿಸಿವೆ.

ಜೆಪಿ ನಡ್ಡಾ ಅವರನ್ನು ನೂತನ ಬಿಜೆಪಿ ರಾಷ್ಟ್ರಾಧ್ಯಕ್ಷರನ್ನಾಗಿ ನೇಮಕ ಮಾಡಲು ಕೇಸರಿ ಪಾಳಯದಲ್ಲಿ ಭರ್ಜರಿ ಸಿದ್ಧತೆ ನಡೆದಿದೆ. ಈ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ, ನಿರ್ಗಮಿತ ಬಿಜೆಪಿ ರಾಷ್ಟ್ರಾಧ್ಯಕ್ಷ ಹಾಗೂ ಕೇಂದ್ರ ಗೃಹ ಸಚಿವ ಅಮಿತ್​ ಶಾ ಸೇರಿದಂತೆ ಬಿಜೆಪಿಯ ಸಂಸದರು, ಶಾಸಕರು, ಮುಖಂಡರು ಭಾಗಿಯಾಗಲಿದ್ದಾರೆ.

2019ರಲ್ಲಿ ಜುಲೈನಲ್ಲಿ ನಡ್ಡಾ ಅವರು ಪಕ್ಷದ ಕಾರ್ಯಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರು. ಗೃಹ ಸಚಿವರಾಗಿರುವ ಅಮಿತ್‌ ಶಾ ಅಧ್ಯಕ್ಷರಾಗಿ ಮುಂದುವರಿದಿದ್ದರು.