ಅಯೋಮಯವಾದ ಆದಾಯ ತೆರಿಗೆ ದಾಳಿ

ರಾಜಕೀಯ ವೈರಿಯಾಗಿದ್ದ ಡಿಕೆಶಿಯನ್ನೂ, ಪರಮೇಶ್ವರ್ ಅವರನ್ನೂ ಬಲಿಹಾಕಲು ಇಂಥ ಕುಣಿಕೆ ಸಿದ್ದಪಡಿಸುವಲ್ಲಿ ವಿಪಕ್ಷ ನಾಯಕನ ಪಾತ್ರವೂ ಇದೆ ಎಂಬ ಸುದ್ದಿಗಳನ್ನ ಬಿತ್ತಲಾಗುತ್ತಿದೆ.

ಅಯೋಮಯವಾದ ಆದಾಯ ತೆರಿಗೆ ದಾಳಿ

ಆದಾಯ ತೆರಿಗೆ ದಾಳಿ ಎಂಬುದನ್ನ ರಾಜಕೀಯಕರಣಗೊಳಿಸಿ, ವಿಪಕ್ಷಗಳ ಪಾಲಿಗೆ  ಇದೊಂದು ಪೆಡಂಭೂತ ಎಂಬಂತೆ ಮಾಡಿಡಲಾಗಿದೆ. ಡಾ.ಜಿ.ಪರಮೇಶ್ವರ್ ಆಪ್ತ ಸಹಾಯಕನ  ಆತ್ಮಹತ್ಯೆ ಪ್ರಕರಣ ಇದಕ್ಕೆ ಮತ್ತೊಂದಿಷ್ಟು ಗರಂ ಮಸಾಲೆಯನ್ನ ಬೆರೆಸಿದೆ ಎಂಬುದು ಒತ್ತಟ್ಟಿಗಿರಲಿ, ವಿನಾಕಾರಣ ಇದರೊಳಕ್ಕೆ ಸಿದ್ದರಾಮಯ್ಯರನ್ನ ಎಳೆತರುವ  ಕುತಂತ್ರಗಳೂ ಸಾಟಿಯಿಲ್ಲದಂತೆ ನಡೆದಿವೆ.

ಡಿ.ಕೆ.ಶಿವಕುಮಾರ್ ಜಾರಿ ನಿರ್ದೇಶನಾಲಯದ ಬಲೆಗೆ ಸಿಕ್ಕಿ  ಪರದಾಡುತ್ತಿದ್ದಾರೆ. ಅವರನ್ನ ಸೌಜನ್ಯಕ್ಕಾದರೂ ನೋಡಲು ಸಿದ್ದರಾಮಯ್ಯ ಹೋಗಿಲ್ಲ ಎಂಬುದನ್ನೇ ನೆಪವಾಗಿಟ್ಟುಕೊಂಡು, ರಾಜಕೀಯ ವೈರಿಯಾಗಿದ್ದ ಡಿಕೆಶಿಯನ್ನೂ, ಪರಮೇಶ್ವರ್ ಅವರನ್ನೂ ಬಲಿಹಾಕಲು ಇಂಥ ಕುಣಿಕೆ ಸಿದ್ದಪಡಿಸುವಲ್ಲಿ ವಿಪಕ್ಷ ನಾಯಕನ ಪಾತ್ರವೂ ಇದೆ ಎಂಬ ಸುದ್ದಿಗಳನ್ನೇ ಬಿತ್ತಲಾಗುತ್ತಿದೆ.

ಇಂಥ ದಾಳಿಗೆಲ್ಲ ಬಿಜೆಪಿಯೇ ಕಾರಣ, ವಿಪಕ್ಷಗಳನ್ನ ನಾಮಾವಶೇಷ ಮಾಡಲು ಹೀಗೆ ಮಾಡಲಾಗುತ್ತಿದೆ ಎಂಬ ಆರೋಪಗಳು ನಿಗಿನಿಗಿಯಾಗುತ್ತಿರುವಾಗಲೇ, ಅದನ್ನ ಮಂಕುಗೊಳಿಸುವುದಕ್ಕಾಗಿ ಸಿದ್ದರಾಮಯ್ಯ ಮೇಲೆ ಗೂಬೆ ಕೂರಿಸುವಂಥದ್ದೂ ನಡೆಯುತ್ತಿದ್ದು, ಇನ್ನೂ ಮುಂದಕ್ಕೋಗಿ  ವರಿಷ್ಟರಿಂದ ಮುಖಭಂಗಕ್ಕೊಳಗಾಗುತ್ತಿರುವ  ಯಡಿಯೂರಪ್ಪ, ಸ್ವಪಕ್ಷೀಯರಿಂದಲೇ ಕಾಲೆಳತಕ್ಕೆ ಸಿಲುಕಿರುವ ಸಿದ್ದರಾಮಯ್ಯ ಇಬ್ಬರೂ ಒಂದಾಗಿ  ಪ್ರತ್ಯೇಕ   ಪ್ರಾದೇಶಿಕ ಪಕ್ಷ ಕಟ್ಟಿಕೊಳ್ಳುತ್ತಾರೆ ಎಂಬುವವರೆಗೂ  ಸೂತ್ರವಿಲ್ಲದ ಗಾಳಿ ಪಟದ ಸುದ್ದಿಗಳು  ರಾಜಕೀಯವೆಂಬ ನಭೋಮಂಡಲದಲ್ಲಿ ಓತಪ್ರೇತವಾಗಿ  ಹಾರಾಡುತ್ತಿವೆ.

ಇದೇ ಆದಾಯ ತೆರಿಗೆ ಕಿರುಕುಳದಿಂದಲೇ ಕಾಫಿ ಡೇ ಸಿದ್ದಾರ್ಥ ನೇತ್ರಾವತಿ ನದಿ ಪಾಲಾದರು ಎಂಬ ಆರೋಪಗಳಿವೆ. ಪ್ರಸ್ತುತ ಸದ್ದುಗದ್ದಲವಿಲ್ಲದೆಯೇ ಕೇಂದ್ರ ಸಚಿವರಾದ ನಿತಿನ್ ಗಡ್ಕರಿ, ನಿರ್ಮಲ ಸೀತಾರಾಮನ್ ಖುದ್ದಾಗಿ ಸಿದ್ದಾರ್ಥ ಆಸ್ತಿಯ ತಕರಾರುಗಳನ್ನ ಬಗೆಹರಿಸಲು ನಿಂತಿದ್ದಾರೆ. ಪರಿಣಾಮವಾಗಿ ಒಂದಷ್ಟು ವ್ಯವಹಾರಿಕ ಸಂಸ್ಥೆಯ ಆಸ್ತಿಗಳನ್ನ ಮಾರಲು ಇದ್ದ ತೊಡಕುಗಳನ್ನ ಪರಿಹರಿಸಿಕೊಡಲಾಗಿರುವುದರಿಂದ, ಮಾರಾಟದ ವ್ಯವಸ್ಥೆಗಳಾಗಿದ್ದು ಸಾಲ ಮರುಪಾವತಿಗೆ ವ್ಯವಸ್ತೆಗಳಾಗಿವೆ.

ಅಷ್ಟೇನು ಸಾಕ್ಷರತೆಯಿಲ್ಲದ  ಬಹುಪಾಲು ಹಿಂದುಳಿದ ಮತ್ತು ಅರಣ್ಯವಾಸಿ ಕುಟುಂಬದ ಯುವಕರಿಗೆ ತನ್ನ ನ್ಯಾಸದ ವತಿಯಿಂದ ತರಬೇತಿ ಗೊಳಿಸುವ ಕಾರ್ಯವನ್ನ  ಸಿದ್ದಾರ್ಥ ನಡೆಸುತ್ತಿದ್ದರು., ಮೊದಲ ಹಂತದಲ್ಲಿ ಅವರಿಗೆ ಆರೋಗ್ಯ ಸ್ವಚ್ಚತೆ ಬಗ್ಗೆ, ಅಕ್ಷರದ ಬಗ್ಗೆ ತಿಳಿಸಿ, ಬಳಿಕ ನಗರಗಳ ವಾಸ, ಮುಂಬೈಯಂಥ ಮಹಾನಗರಗಳ ಪರಿಚಯ ಇತ್ಯಾದಿಯನ್ನ ಹಂತಹಂತವಾಗಿ ಕೊಡಿಸುವಂಥ ಕಾರ್ಯಕ್ರಮ ಇದು. ಇದರ ಫಲಾನುಭವಿಗಳಲ್ಲಿ ಬಹುತೇಕ ಮಂದಿಗೆ ಅವರದೇ ಕಂಪನಿಗಳಲ್ಲಿ ಉದ್ಯೋಗ ಕೊಡಲಾಗಿತ್ತು ಮಾತ್ರವಲ್ಲ, ಕೆಲವಷ್ಟು ಮಂದಿ ಬೇರೆ ಸಂಸ್ಥೆಗಳಲ್ಲಿ ಲಕ್ಷಾಂತರ ಪಗಾರ ತೆಗೆದುಕೊಳ್ಳುವ ಹುದ್ದೆಯಲ್ಲೂ ಇದ್ದಾರೆ.

ಸಿದ್ದಾರ್ಥ ಸಾವಿನ ಬಳಿಕ, ಈ ತರಬೇತಿ ಸಂಸ್ಥೆ ಮುಂದುವರಿಸಬೇಕೇ ಬೇಡವೇ, ಇದಕ್ಕೆಲ್ಲ ಹಣ ಹೊಂದಿಸುವುದು ಹೇಗೆ ಎಂದು ಕುಟುಂಬಸ್ಥರು ಇಕ್ಕಟ್ಟಿನಲ್ಲಿರುವಾಗಲೇ ಕೇಂದ್ರ ಸಚಿವ ನಿತಿನ್ ಗಡ್ಕರಿ, ಅಂತರರಾಷ್ಟ್ರೀಯ ಸಂಸ್ಥೆಯ ಭಾರತೀಯ ಘಟಕ ಮುಖ್ಯಸ್ಥರೊಬ್ಬರ ಜತೆ ಮಾತುಕತೆ ನಡೆಸಿ, ಇಂಥ ಕಾರ್ಯಕ್ರಮ ಮುಂದುವರೆಸಿಕೊಂಡು ಹೋಗುವುದಕ್ಕೆ ಎಲ್ಲಾ ರೀತಿಯ ಸಹಕಾರ ನೀಡಿದ್ದಾರೆ. ಇವೆಲ್ಲ ಕೇಂದ್ರ ಮಟ್ಟದ ನಾಯಕರಿಂದಲೇ ದೊರೆಯುತ್ತಿರುವ ಸಹಕಾರವಾಗಿದ್ದು, ಬಿಜೆಪಿಗೆ ಎಸ್.ಎಂ.ಕೃಷ್ಣ ಹೋದರೂ ಅಳಿಯನನ್ನ ಉಳಿಸಿಕಕೊಳ್ಳಲಾಗಲಿಲ್ಲ ಎಂಬ ಆರೋಪಗಳೇನಿವೆಯೋ ಅದನ್ನೆಲ್ಲ  ಸುಳ್ಳಾಗಿಸುವಂದದಿ ಸಾಗಿರುವ ವಾಸ್ತವಗಳು ಆಗಿವೆ. ಹೀಗಾಗಿಯೇ ದಾಳಿ ಎಂಬುದರ ಮುಖಗಳು ಬೇರೆ ಬೇರೆ ಆಯಾಮದಲ್ಲೇ ಇದ್ದು, ಸಾರಾಸಗಟಾಗಿ ರಾಜಕೀಯ ಪ್ರೇರಿತ ಎನ್ನಲು ಆಗಲ್ಲ, ರಾಜಕೀಯ ಇಲ್ಲವೇ ಇಲ್ಲ ಎನ್ನಲೂ ಆಗಲ್ಲ. ಇದೇ ಕಾರಣಕ್ಕೆ ಸಿದ್ದರಾಮಯ್ಯ ಪಾತ್ರವನ್ನೂ ಸುಖಾಸುಮ್ಮನೆ ತಂದು ಮತ್ತೊಂದು ರಾಜಕೀಯ ಗೊಂದಲ ನಿರ್ಮಾಣದ ಪ್ರಯತ್ನವೂ ಸಾಗಿದೆ. ಇದರ ಹುಟ್ಟು ಕಾಂಗ್ರೆಸ್‍ನಲ್ಲಾಗಿದ್ದಾ, ಬಿಜೆಪಿಯಲ್ಲಾಗಿದ್ದಾ ಎಂಬುದಿನ್ನೂ ಖಾತರಿಯಾಗಿಲ್ಲ.