ಬಿಜೆಪಿ ಎಂಬ ಪಕ್ಷವೂ, ಬೇಜವಾಬ್ದಾರಿ ನಾಯಕರೂ

ಬಿಜೆಪಿ ಎಂಬ ಪಕ್ಷವೂ, ಬೇಜವಾಬ್ದಾರಿ ನಾಯಕರೂ

ಉತ್ತರ ಕರ್ನಾಟಕ ಕೆಲ ಭಾಗಗಳಲ್ಲಿ ಅತಿವೃಷ್ಟಿಯಾಗಿ ಜನರು ತತ್ತರಿಸುತ್ತಿರುವಾಗ ಆ ಕ್ಷೇತ್ರಗಳ ಸಂಸದರಾಗಿ ಸಂತ್ರಸ್ತರಿಗೆ ನೆರವಾಗುವ ಬದಲು ಅಲಸ್ಯದ ಮಾತುಗಳನ್ನು ಆಡಿರುವುದು ಖಂಡನೀಯ.

ಕೇಂದ್ರ ಹಾಗೂ ರಾಜ್ಯದಲ್ಲೂ ಬಿಜೆಪಿಯೇ ಅಧಿಕಾರ ಚುಕ್ಕಾಣಿ ಹಿಡಿದಿದೆ ಆದರೆ ನೆರೆ ಹಾವಳಿಯಿಂದ ಆದ ಅನಾಹುತಕ್ಕೆ ಕೇಂದ್ರ ಆಗಲಿ ,ರಾಜ್ಯ ಆಗಲಿ ಯಾವುದೇ ಪರಿಹಾರವನ್ನು ಒದಗಿಸುವ ಕನಿಷ್ಠ ಸೌಜನ್ಯವನ್ನೂ ತೋರಲಿಲ್ಲ. ಬದಲಾಗಿ ತಮಗೆ ಇಷ್ಟ ಬಂದ ಹಾಗೇ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದಾರೆ. 

ಸಂಸದ ಅಶ್ವತ್ಥ ನಾರಯಣ ಅವರಲ್ಲಿ ಪರಿಹಾರ ನಿಧಿಯನ್ನು ಯಾವಾಗ ಒದಗಿಸುತ್ತಿರಾ ಎಂದು ಕೇಳಿದ್ದಕ್ಕೆ “ಪರಿಹಾರ ಬೇಕಾದರೆ ಅಲ್ಲಿನ ಶಾಲಾ ಮಕ್ಕಳೇ ದೇಣಿಗೆ ಪಡೆದುಕೊಳ್ಳಲಿ” ಎಂಬ ಮಾತನ್ನು ಆಡಿರುವುದು ಯಾವ ರೀತಿಯಲ್ಲೂ ಸಮರ್ಥನೀಯವಲ್ಲ. ಶಾಲಾ ಮಕ್ಕಳೇ ದೇಣಿಗೆ ಮೂಲಕ ಪರಿಹಾರ ಸಂಗ್ರಹಿಸುವುದಾದರೆ ಈ ಸಚಿವ ಸ್ಥಾನವಾದರೂ ಏಕಿರಬೇಕು? 

ಇವರೊಬ್ಬರೇ ಅಲ್ಲ. ಸಂಸದ ತೇಜಸ್ವಿ ಸೂರ್ಯ ಕೂಡ “ಪರಿಹಾರಕ್ಕೆ ಕೇಂದ್ರ ಸರ್ಕಾರದ ಅಗತ್ಯವಿಲ್ಲ ರಾಜ್ಯ ಸರ್ಕಾರವೇ ಪರಿಹಾರ ಭರಿಸುವಷ್ಟು ಸಮರ್ಥವಿದೆ” ಎಂಬ ಹೇಳಿಕೆ ನೀಡಿ ಪೇಚಿಗೆ ಸಿಲುಕಿದ್ದಾರೆ 

ಈಗಲೇ ಕೇಂದ್ರ ಸರ್ಕಾರವು ಪರಿಹಾರ ನೀಡದೆ ಆಟವಾಡುತ್ತಿರುವಾಗ ಬಿಜೆಪಿ ಸಂಸದರ ಈ  ಆಸಡ್ಡೆ ಮಾತುಗಳು ಪರಿಹಾರ ಸಿಗದೇ ಇರುವ ಹಾಗೇ ಮಾಡಿ ಬಿಡುವ ಯೋಜನೆಯಂತಿದೆ.

ಕೇಂದ್ರದಲ್ಲಿ ಯಾವುದೇ ಸರ್ಕಾರವಿರಲಿ ಪ್ರಕೃತಿ ವಿಕೋಪದಿಂದ ತತ್ತರಿಸುವ ಯಾವುದೇ ರಾಜ್ಯವಾಗಲಿ  ಪರಿಹಾರ ಒದಗಿಸಿ ಮತ್ತೆ ಆ ರಾಜ್ಯಗಳನ್ನು ಪುನರುತ್ಥಾನ ಮಾಡುವ ಕರ್ತವ್ಯ ಕೇವಲ ರಾಜ್ಯಕ್ಕೆ ಮಾತ್ರವಲ್ಲ, ಕೇಂದ್ರಕ್ಕೂ ಇರುತ್ತದೆ ಆದರೆ ಇದುವರೆಗೂ ಉತ್ತರ ಕರ್ನಾಟಕದ ಜನರ ಬವಣೆ ನೀಗಿಸಲು ಪರಿಹಾರ ನೀಡದೇ ಮುಂದೂಡುತ್ತಿರುವುದು ಎಷ್ಟು ಸರಿ? 

ಕಳೆದ ಕೆಲ ದಿನಗಳ ಹಿಂದೆ ಕೆ ಎಸ್ ಈಶ್ವರಪ್ಪ ನೆರೆ ಪೀಡಿತ ಪ್ರದೇಶಗಳಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಲು ಹೋದಾಗ ತಮ್ಮ ಕಾರಿನಿಂದ ಇಳಿಯದೇ ಅಲ್ಲಿಯೇ ನೆರೆ ಹಾನಿಯಾಗಿರುವ ಪ್ರದೇಶವನ್ನು ವೀಕ್ಷಿಸುತ್ತಿರುವುದು ಕಂಡು ನೆರೆ ಸಂತ್ರಸ್ತರು ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು ಆಗ ಕೂಡ ಅವರು  ಪರಿಹಾರವಾಗಿ 10,000 ರೂ ಗಳನ್ನು ನೀಡಿದ್ದೇವಲ್ಲ ಇನ್ನೇನು ಎಂಬ ಉಡಾಫೆ ಮಾತುಗಳನ್ನು ಆಡಿ ಅಲ್ಲಿನ ಜನರಿಂದ ಮಂಗಳಾರತಿ ಮಾಡಿಸಿಕೊಂಡಿದ್ದರು. 

ಇತ್ತ ರಾಜ್ಯದಲ್ಲಿ ಜನರು ನೆರೆ ಹಾವಳಿಯಿಂದ ಗೋಳಾಡುತ್ತಿದ್ದರೆ ದೇಶದ ಪ್ರಧಾನಿಯಾದ ನರೇಂದ್ರ ಮೋದಿ ಅಮೆರಿಕಾದಲ್ಲಿ ಅಯೋಜಿಸಿದ್ದ “ಹೌಡಿ ಮೋದಿ” ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಲ್ಲದೆ “ಭಾರತದಲ್ಲಿ ಎಲ್ಲವೂ ಚೆನ್ನಾಗಿದೆ” ಎಂದು ಕನ್ನಡದಲ್ಲೂ ಹೇಳಿದರಾದರೂ ಪ್ರಕೃತಿ ವಿಕೋಪದಿಂದ ಕಂಗೆಟ್ಟಿರುವ ಕನ್ನಡನಾಡಿಗೆ ಯಾವುದೇ ರೀತಿಯಲ್ಲೂ ನೆರವಾಗಲಿಲ್ಲ. ವಾಸ್ತವವಾಗಿ ಭಾರತದಲ್ಲಿ ಈಗಿರುವ ಸಮಸ್ಯೆಗಳು ಲೆಕ್ಕವಿಲ್ಲದಷ್ಟಿವೆ. ಆರ್ಥಿಕ ಕುಸಿತ,  ನಿರುದ್ಯೋಗ ಮೊದಲಾದ ಸಮಸ್ಯೆಗಳಿಂದ ನಲುಗುತ್ತಿರುವ ಭಾರತಕ್ಕೆ ಬಲ ತುಂಬಬೇಕಾದ ಪ್ರಧಾನಿ ವಿದೇಶಗಳಿಗೆ ತೆರಳಿ ಚಪ್ಪಾಳೆ ಗಿಟ್ಟಿಸುವ ಭಾಷಣ ಮಾಡುವುದನ್ನೇ ಸಾಧನೆ ಎಂದು ತಿಳಿದುಕೊಂಡಿದ್ದಾರೋ ಹೇಗೋ? ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ದೇಶ ಮುಂದಿನ ದಿನಗಳಲ್ಲಿ ಯಾವ ಸ್ಥಿತಿಗೆ ತಲುಪಬಹುದು ಎಂಬುದಕ್ಕೆ ಅವರ ಈ ವರ್ತನೆ  ಮುನ್ನುಡಿಯಂತಿದೆ.