ಬಿಜೆಪಿ ಆಡಳಿತದಲ್ಲಿ ಮೆಡಿಕಲ್ ಸೀಟು ಬ್ಲಾಕಿಂಗ್ ಅಬಾಧಿತ : 212 ವಿದ್ಯಾರ್ಥಿಗಳ ಫಲಿತಾಂಶಕ್ಕಿಲ್ಲ ತಡೆ

ಮೆಡಿಕಲ್ ಸೀಟು ಬ್ಲಾಕಿಂಗ್ ಮೂಲಕ ಪ್ರವೇಶ ಪಡೆದಿದ್ದ 212 ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶ ಪ್ರಕಟಣೆಗೆ ರಾಜ್ಯ ಸರ್ಕಾರ ಹಸಿರು ನಿಶಾನೆ ತೋರಿಸಿರುವುದರಿಂದ ಇಂಥ ಪ್ರಕರಣ ಬಿಜೆಪಿ ಆಡಳಿತಾವಧಿಯಲ್ಲಿ ಅಬಾಧಿತವಾಗಿ ಮುಂದುವರೆಯುವ ಲಕ್ಷಣಗಳು ಗೋಚರಿಸಿವೆ.

ಬಿಜೆಪಿ ಆಡಳಿತದಲ್ಲಿ ಮೆಡಿಕಲ್ ಸೀಟು ಬ್ಲಾಕಿಂಗ್ ಅಬಾಧಿತ : 212 ವಿದ್ಯಾರ್ಥಿಗಳ ಫಲಿತಾಂಶಕ್ಕಿಲ್ಲ ತಡೆ

ಮೆಡಿಕಲ್ ಸೀಟ್ ಬ್ಲಾಕಿಂಗ್ ನಲ್ಲಿ ಭಾಗಿ ಆಗಿದ್ದಾರೆ ಎನ್ನಲಾಗಿದ್ದ 212 ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶ ಪ್ರಕಟಿಸಲು ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ಧರಿಸಿದೆ. ಈ ಸಂಬಂಧ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯಕ್ಕೆ ಇಲಾಖೆ ನಿರ್ದೇಶಿಸಿದೆ. ಆದರೆ ನಿರ್ದೇಶನ ಈವರೆಗೂ ವಿಶ್ವವಿದ್ಯಾಲಯಕ್ಕೆ ತಲುಪಿಲ್ಲ ಎನ್ನಲಾಗಿದೆ.

ಸರ್ಕಾರದ ಈ ನಿರ್ದೇಶನ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹಂಚಿಕೆ ಮಾಡಿದ್ದ ಸಂಖ್ಯೆಗಿಂತಲೂ ಹೆಚ್ಚುವರಿ ಪ್ರವೇಶ ದಾಖಲಾತಿಯನ್ನು ಸಕ್ರಮಗೊಳಿಸಿದಂತಾಗಿದೆ. ಮೈತ್ರಿ ಸರ್ಕಾರದಲ್ಲಿ ನಡೆದಿದ್ದ ಈ ಹಗರಣವನ್ನು ಬಿಜೆಪಿ ಸರ್ಕಾರವೂ ಮುಂದುವರೆಸಿದಂತಾಗಿದೆ.

ಪ್ರಕರಣದಲ್ಲಿ ಭಾಗಿ ಆಗಿರುವ 17 ಕಾಲೇಜುಗಳ ಪೈಕಿ ಶಾಸಕ ಶಾಮನೂರು ಶಿವಶಂಕರಪ್ಪ ಅವರು ಮತ್ತು ಅವರ ಕುಟುಂಬ ಸದಸ್ಯರು ಟ್ರಸ್ಟಿಯಾಗಿರುವ ಸಂಸ್ಥೆ,  ಆದಿಕೇಶವಲು ಸಮೂಹ,  ಶಾಸಕ ವೀರಣ್ಣ ಚರಂತಿಮಠ  ಕಾರ್ಯಾಧ್ಯಕ್ಷರಾಗಿರುವ ಸಂಸ್ಥೆಯೂ ಸೇರಿರುವುದು ವಿಶೇಷ. ಹೀಗಾಗಿಯೇ ಈ ಕಾಲೇಜುಗಳ ವಿರುದ್ಧ ಈವರೆಗೂ ಯಾವುದೇ ಕ್ರಮ ವಹಿಸಿಲ್ಲ ಎನ್ನಲಾಗಿದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹಂಚಿಕೆ ಮಾಡಿದ್ದ ಸಂಖ್ಯೆಗಿಂತಲೂ ಹೆಚ್ಚುವರಿ ಪ್ರವೇಶ ಕಲ್ಪಿಸಿದೆ ಎಂಬ ಆರೋಪಕ್ಕೆ ಗುರಿಯಾಗಿದ್ದ 212 ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶವನ್ನು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ತಡೆ ಹಿಡಿದಿತ್ತು.

ಫಲಿತಾಂಶ ಪ್ರಕಟಣೆಗೆ ನಿರ್ಧರಿಸಿರುವ ವೈದ್ಯಕೀಯ ಶಿಕ್ಷಣ ಇಲಾಖೆ, ಮೆಡಿಕಲ್ ಸೀಟ್ ಬ್ಲಾಕಿಂಗ್ ನಲ್ಲಿ ಭಾಗಿ ಆಗಿವೆ ಎನ್ನಲಾಗಿರುವ  ಪ್ರತಿಷ್ಠಿತ 17 ವೈದ್ಯಕೀಯ ಕಾಲೇಜುಗಳ ವಿರುದ್ಧ ಕ್ರಮ ಕೈಗೊಳ್ಳುವ ಸಂಬಂಧ ಇನ್ನೂ ಯಾವುದೇ ಅಂತಿಮ ನಿರ್ಧಾರ ಕೈಗೊಳ್ಳದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

2018-19ನೇ ಸಾಲಿನಲ್ಲಿ ನಡೆದಿರುವ ಪ್ರವೇಶಾತಿಯಲ್ಲಿ  ಹೊರ ರಾಜ್ಯದ ವಿದ್ಯಾರ್ಥಿಗಳು ಭಾಗಿ ಆಗಿರುವ ಈ ಅಕ್ರಮವನ್ನು ಸೀಟ್ ಬ್ಲಾಕಿಂಗ್ ಎಂದು ವೈದ್ಯಕೀಯ ಶಿಕ್ಷಣ ಇಲಾಖೆ ಪರಿಗಣಿಸಿತ್ತಾದರೂ ಆರೋಪಿತ ಕಾಲೇಜುಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವ ಸಂಬಂಧ ಅಂತಿಮ ತೀರ್ಮಾನ ಕೈಗೊಳ್ಳಲು 15 ದಿನಗಳ ಕಾಲಾವಕಾಶ ಬೇಕು ಎಂದು ವೈದ್ಯಕೀಯ ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಯೊಬ್ಬರು 'ಡೆಕ್ಕನ್'ನ್ಯೂಸ್'ಗೆ ತಿಳಿಸಿದ್ದಾರೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹಂಚಿಕೆ ಮಾಡಿದ್ದ ಸೀಟುಗಳಿಗೆ ವ್ಯತಿರಿಕ್ತವಾಗಿ 212 ವಿದ್ಯಾರ್ಥಿಗಳಿಗೆ ಹೆಚ್ಚುವರಿ  ಪ್ರವೇಶಾತಿ ನೀಡಿರುವುದನ್ನು ವಿಸ್ತ್ರತ ತನಿಖೆ ನಡೆಸಬೇಕು ಎಂದು ಸಭೆ ನಿರ್ಧರಿಸಿತ್ತು. ಈ ಪ್ರಕರಣದ ಕುರಿತು ಇಷ್ಟೆಲ್ಲಾ ಬೆಳವಣಿಗೆಗಳು ನಡೆದಿದ್ದರೂ ಹಿಂದಿನ ಮೈತ್ರಿ ಸರ್ಕಾರ ಸೀಟ್ ಬ್ಲಾಕಿಂಗ್ ಬಗ್ಗೆ ತನಿಖೆ ನಡೆಸಿರಲಿಲ್ಲ.

ಅಕ್ರಮದಲ್ಲಿ ಭಾಗಿ ಆಗಿದ್ದ ಒಟ್ಟು 212 ವಿದ್ಯಾರ್ಥಿಗಳಿಗೆ 2019ರ ಜೂನ್ 22ರಿಂದ ಪ್ರಾರಂಭಗೊಂಡಿದ್ದ ಪರೀಕ್ಷೆಗೆ ಹಾಜರಾಗಲು  ಅನುಮತಿಯೂ ದೊರೆತಿತ್ತು. ಅಲ್ಲದೆ, 212 ಸೀಟುಗಳನ್ನು ಹೆಚ್ಚುವರಿ ದಾಖಲಾತಿ ಎಂದು ಪರಿಗಣಿಸಿ, ಆ ಸೀಟುಗಳನ್ನು ಆಯಾ ಕಾಲೇಜುಗಳ ಕೋಟಾದಡಿಯಿಂದ(ಶೇ.30 ಮುಕ್ತ ಪ್ರವೇಶ)ಪಡೆದು 2019-20ನೇ ಸಾಲಿನಲ್ಲಿ ಸರ್ಕಾರಿ ಸೀಟುಗಳೆಂದು ಮಾರ್ಪಡಿಸಿ ದಾಖಲು ಮಾಡಿಕೊಳ್ಳಬೇಕು ಎಂದು ಹಿಂದಿನ ವೈದ್ಯಕೀಯ ಶಿಕ್ಷಣ ಸಚಿವ ಈ ತುಕಾರಾಮ್  ಸೂಚಿಸಿದ್ದನ್ನು ಸ್ಮರಿಸಬಹುದು.

17 ಕಾಲೇಜುಗಳಿಗೆ ದಾಖಲಾಗಿದ್ದ 212 ವಿದ್ಯಾರ್ಥಿಗಳ ಪ್ರವೇಶವನ್ನು ಸಂಬಂಧಿಸಿದ ಪ್ರಾಧಿಕಾರ ಒಪ್ಪಿಗೆ ಸೂಚಿಸಿರಲಿಲ್ಲ. ಹೀಗಾಗಿ ಈ ವಿದ್ಯಾರ್ಥಿಗಳು ಪ್ರಾಯೋಗಿಕ ಪರೀಕ್ಷೆಗೆ ಹಾಜರಾಗಲು ಅವಕಾಶವೇ ಇರಲಿಲ್ಲ. ಆದರೂ ಹಿಂದಿನ ವೈದ್ಯಕೀಯ ಶಿಕ್ಷಣ ಸಚಿವ ಈ ತುಕಾರಾಂ ಅವರು ' ಈ ಪ್ರಕರಣದಲ್ಲಿ 212 ವಿದ್ಯಾರ್ಥಿಗಳು ಭಾಗಿ ಆಗಿರುವುದು ಸಹ ನನ್ನ ಗಮನಕ್ಕೆ ಬಂದಿರುತ್ತದೆ. ವಿದ್ಯಾರ್ಥಿಗಳ ಹಿತಾಸಕ್ತಿಯನ್ನು ಗಮನದಲ್ಲಿರಿಸಿಕೊಂಡು ಹಾಗೂ ಸಮಿತಿಯಿಂದ ವರದಿ ಪಡೆಯಲು ಸಮಯದ ಅಭಾವವಿರುವುದರಿಂದ ಸಮಿತಿಯ ಅಂತಿಮ ಶಿಫಾರಸ್ಸಿಗೆ ಬದ್ಧರಾಗುವ ಷರತ್ತಿಗೊಳಪಟ್ಟು ಪರೀಕ್ಷೆಗೆ ಹಾಜರಾಗಲು ಕ್ರಮ ವಹಿಸಲು ಆದೇಶಿಸಿದೆ,' ಎಂದು  ತುಕಾರಾಂ ಅವರು ಆದೇಶಿಸಿದ್ದರು.

'ಮಾಪ್-ಅಪ್ ರೌಂಡ್ ನಂತರ ಸೀಟು ಬಿಟ್ಟು ಹೋದ 212 ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಲ್ಲಿ 15000 ರ್ಯಾಂಕಿಂಗ್ ಒಳಗಡೆ ಇದ್ದರು. ಅಲ್ಲದೆ ಮೆರಿಟ್ ವಿದ್ಯಾರ್ಥಿಗಳು ಆಗಿರುವುದರಿಂದ ದೇಶದ ಬೇರೆ ಕಾಲೇಜುಗಳಲ್ಲಿ ದಾಖಲಾಗಿರುವ ಸಾಧ್ಯತೆಗಳಿರುತ್ತವೆ. ಇದನ್ನು ಸೀಟ್ ಬ್ಲಾಕಿಂಗ್ ಎಂದು ಪರಿಗಣಿಸಿ ಬೇರೆ ಕಾಲೇಜುಗಳಲ್ಲಿ ಇವರು ಪಡೆದಿರುವ ದಾಖಲಾತಿಯನ್ನು ರದ್ದುಪಡಿಸಲು ಎಂ ಸಿ ಐ ಗೆ ಪತ್ರ ಬರೆಯಬೇಕು, ' ಎಂದು ವೈದ್ಯಕೀಯ ಶಿಕ್ಷಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಹಿಂದಿನ ಸಚಿವ ಈ ತುಕಾರಾಮ್ ಅವರು ಸೂಚಿಸಿರುವುದು ಅವರ ಟಿಪ್ಪಣಿಯಿಂದ ತಿಳಿದು ಬಂದಿದೆ.

ವೈದ್ಯಕೀಯ ಶಿಕ್ಷಣ ಇಲಾಖೆಯ ನಿರ್ದೇಶಕ ಡಾ ಪಿ ಜಿ ಗಿರೀಶ್ ಅಧ್ಯಕ್ಷತೆಯ ಸಮಿತಿ ಈ ಪ್ರಕರಣದ ಬಗ್ಗೆ ವರದಿ ಸಲ್ಲಿಸಿತ್ತು. ಈ ಸಮಿತಿ ವರದಿಯನ್ನು ಅವಲೋಕಿಸಿದ್ದ ಈ ತುಕಾರಾಂ ಅವರು 'ಸಮಿತಿಯು ಅಂತಿಮ ಶಿಫಾರಸ್ಸು ಮಾಡುವ ಮುನ್ನ ಇನ್ನೂ ಹೆಚ್ಚಿನ ಮಾಹಿತಿ ಸಂಗ್ರಹಿಸುವುದು ಅವಶ್ಯಕ. ಹೀಗಾಗಿ ಈ ಹಂತದಲ್ಲಿ ವರದಿಯನ್ನು ಅನುಮೋದಿಸುವ ಬಗ್ಗೆ ಯಾವುದೇ ನಿರ್ಧಾರ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ,' ಎಂದು ಅಭಿಪ್ರಾಯಿಸಿದ್ದರು.

ಬಿಜಾಪುರದ ಅಲ್ ಅಮೀನ್ ಮೆಡಿಕಲ್ ಕಾಲೇಜು(6) ಬೆಂಗಳೂರಿನ ಬಿಜಿಎಸ್ ಗ್ಲೋಬಲ್ ಇನ್ಸಿಟಿಟ್ಯೂಟ್ ಅಫ್ ಮೆಡಿಕಲ್ ಸೈನ್ಸ್,(24)ಈಸ್ಟ್ ಪಾಯಿಂಟ್ ಮೆಡಿಕಲ್ ಸೈನ್ಸ್(26) ಮಂಗಳೂರಿನ ಫಾ.ಮುಲ್ಲರ್ಸ್ ಮೆಡಿಕಲ್ ಕಾಲೇಜು(2)ದಾವಣಗೆರೆಯ ಜೆಜೆಎಂ ಮೆಡಿಕಲ್ ಕಾಲೇಜು(15), ಮಂಗಳೂರು ಕಣಚೂರು ಇನ್ಸಿಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್(14) ದಕ್ಷಿಣ ಕನ್ನಡ ಸುಳ್ಯದ ಕೆವಿಜೆ ಮೆಡಿಕಲ್ ಕಾಲೇಜು(4)  ಗುಲ್ಬರ್ಗಾದ ಎಂ ಆರ್ ಮೆಡಿಕಲ್ ಕಾಲೇಜು(9) ಬೆಂಗಳೂರಿನ ರಾಜರಾಜೇಶ್ವರಿ ಮೆಡಿಕಲ್ ಕಾಲೇಜು(10) ದಾವಣಗೆರೆಯ ಎಸ್ ಎಸ್ ಇನ್ಸಿಟಿಟ್ಯೂಟ್ ಮೆಡಿಕಲ್ ಸೈನ್ಸ್(17)  ಬೆಂಗಳೂರಿನ ಸಪ್ತಗಿರಿ ಇನ್ಸಿಟಿಟ್ಯೂಟ್ ಮೆಡಿಕಲ್ ಸೈನ್ಸ್(21) ಬಾಗಲಕೋಟೆಯ ಬಿವಿವಿ ಸಂಘದ ಎಸ್ ನಿಜಲಿಂಗಪ್ಪ ಮೆಡಿಕಲ್ ಕಾಲೇಜು(22) ಮಂಗಳೂರಿನ ಶ್ರೀನಿವಾಸ ಇನ್ಸಿಟಿಟ್ಯೂಟ್ ಮೆಡಿಕಲ್ ಸೈನ್ಸ್(11) ಶಿವಮೊಗ್ಗದ ಸುಬ್ಬಯ್ಯ ಇನ್ಸಿಟಿಟ್ಯೂಟ್ ಮೆಡಿಕಲ್ ಸೈನ್ಸ್(14) ಬೆಂಗಳೂರಿನ ವೈದೇಹಿ ಇನ್ಸಿಟಿಟ್ಯೂಟ್ ಮೆಡಿಕಲ್ ಸೈನ್ಸ್(14) ಮಂಗಳೂರಿನ ಎ ಜೆ ಇನ್ಸಿಟಿಟ್ಯೂಟ್ ಮೆಡಿಕಲ್ ಸೈನ್ಸ್(2), ಚಿತ್ರದುರ್ಗದ ಬಸವೇಶ್ವರ ಮೆಡಿಕಲ್ ಕಾಲೇಜುಗಳಿಗೆ ಒಟ್ಟು 212 ವಿದ್ಯಾರ್ಥಿಗಳಿಗೆ ಪ್ರವೇಶ ದೊರೆತಿತ್ತು.