ಸಾವು ಬಂದಾಗ ಬಿಟ್ ಕಾಯಿನ್ ಗತಿಯೇನು? 

ಸಾವು ಬಂದಾಗ ಬಿಟ್ ಕಾಯಿನ್ ಗತಿಯೇನು? 

ಮೊದಲು ಜನರು ತಮ್ಮ ಸಂಪತ್ತನ್ನು ಬ್ಯಾಂಕಿನಲ್ಲೋ,  ಚಿನ್ನದ ರೂಪದಲ್ಲೋ ಕೂಡಿಡುತ್ತಿದ್ದರು. ಈಗ ಡಿಜಿಟಲ್ ಯುಗ. ಕಂಪ್ಯೂಟರ್ ನಲ್ಲಿ ತಮ್ಮ ಹಣವನ್ನು ಕೂಡಿಡುತ್ತಿದ್ದಾರೆ. ಅದೂ ಬಿಟ್ ಕಾಯಿನ್ ರೂಪದಲ್ಲಿ. ಈ ದುಡ್ಡನ್ನು ಕೈಯಿಂದ ಮುಟ್ಟಲಾಗುವುದಿಲ್ಲ. ಆದರೆ ಬೆಲೆಯನ್ನು ನೋಡಬಹುದು. ಯಾವಾಗಲೂ ಹಣದ ಹರಿಯುವಿಕೆ ಮತ್ತು ಜನರ ಗಮನ ಡಿಜಿಟಲ್ ಕರೆನ್ಸಿಯ ಕಡೆಗೆ ಕಡಿಮೆಯೇ. ಪ್ರಸಕ್ತ 2019 ರಲ್ಲಿ ಬಿಟ್ ಕಾಯಿನ್ ತನ್ನ ಬೆಲೆಯಲ್ಲಿ ಸ್ವಲ್ಪ ಮಟ್ಟಿಗೆ ಏರಿಕೆ ಕಂಡಿದೆ. ಇದರ ಜೊತೆಯಲ್ಲಿ ಫೇಸ್ ಬುಕ್ ಕೂಡ ಹೊಸ ಡಿಜಿಟಲ್ ಕರೆನ್ಸಿಯನ್ನು ಪರಿಚಯಿಸುತ್ತಿದೆ. ಅದುವೇ ’ ಲಿಬ್ರಾ ‘. 

ಕ್ರಿಪ್ಟೋ ಕರೆನ್ಸಿ ಸೇರಿದಂತೆ ಡಿಜಿಟಲ್ ಕರೆನ್ಸಿಗಳು ನಾವು ಪ್ರಸಕ್ತ ಜೀವಿಸುತ್ತಿರುವ ವಿಶ್ವದ ಪರಿಕಲ್ಪನೆಯನ್ನು ಪ್ರತಿಬಿಂಬಿಸುತ್ತವೆ. ಈಗ ಸಾಂಪ್ರದಾಯಿಕ ಕೊಡು ಕೊಳ್ಳುವಿಕೆಯು ಆನ್ ಲೈನ್ ಮಾದರಿಯಾಗಿ ಬದಲಾವಣೆಗೊಳಪಟ್ಟಿದೆ. ವ್ಯವಹಾರವು ಈಗ ಜಗತ್ತಿನ ಎಲ್ಲೆಡೆ, ಯಾವ ಸಮಯದಲ್ಲಾದರೂ, ಒಬ್ಬರನ್ನೊಬ್ಬರು ನೋಡದೆಯೇ, ಆನ್ ಲೈನ್ ನಲ್ಲೇ ಆಗುತ್ತಿದೆ. ಇದಕ್ಕೆ ಕಾರಣ ಎಲೆಕ್ಟ್ರಾನಿಕ್ ಮತ್ತು ಡಿಜಿಟಲ್ ಕರೆನ್ಸಿಗಳು. ಇತ್ತೀಚಿಗೆ ಎಲ್ಲ ಕಡೆ ಇದರದೇ ಹವಾ !!. ಜೂನ್ 2019ರ ವರದಿಯ ಪ್ರಕಾರ ಕ್ರಿಪ್ಟೋ ಕರೆನ್ಸಿಯು 335 ಬಿಲಿಯನ್ ಡಾಲರ್ ನಷ್ಟಿದೆ. 

ಆದರೆ ಇದು ಎಷ್ಟರ ಮಟ್ಟಿಗೆ ಬೆಲೆಯುಳ್ಳದ್ದಾಗಿದೆ?  ಒಂದೊಮ್ಮೆ ಅದರ ಒಡೆಯ ಮರಣಿಸಿದರೆ ಅಥವಾ ವ್ಯವಹಾರ ನಡೆಸಲು ಅಶಕ್ತನಾದರೆ  ಈ ಸಂಪತ್ತಿಗೆ ಏನಾಗುತ್ತದೆ?. ಡಿಜಿಟಲ್ ಕರೆನ್ಸಿಗಳು ಮತ್ತು ಆಸ್ತಿಗಳು, ನಮ್ಮ  ವ್ಯವಹಾರ ಮತ್ತು ವಹಿವಾಟುಗಳನ್ನು ಸುಲಭಗೊಳಿಸುವುದೇನೋ ಸರಿ, ಆದರೆ ಈ ಸಂಪತ್ತಿನ ವರ್ಗಾವಣೆ ಪ್ರಕ್ರಿಯೆಗೆ ಬಂದಾಗ ತೊಡಕಾಗುತ್ತದೆ. ಈ ರೀತಿಯ ಅಸ್ತಿ ವಿಲೇವಾರಿಯಲ್ಲಿ ಸಾಂಪ್ರದಾಯಿಕ ವಿಧಾನಗಳಾದ ವಿಲ್ ಬರೆಯುವಿಕೆ, ಅಥವಾ ಅಸ್ತಿ ನೋಡಿಕೊಳ್ಳಲು ವಾರಸುದಾರರ ನೇಮಿಸುವಿಕೆಯು ಇಲ್ಲಿ ಕೆಲಸಕ್ಕೆ ಬರುವುದಿಲ್ಲ. 

ಅದಕ್ಕಾಗಿ ಅಮೆರಿಕಾದಲ್ಲಿ ರಿವೈಸ್ಡ್ ಯುನಿಫಾರ್ಮ್ ಫಿಡ್ಯುಷ್ಯರಿ ಅಸ್ಸೆಸ್ಸ್ ಟು ಡಿಜಿಟಲ್ ಅಸೆಟ್ ಆಕ್ಟ್- RUFADAA ಎಂಬ ಕಾನೂನಿದೆ. 2017 ರಿಂದ ಈ ಕಾಯಿದೆ ಚಾಲ್ತಿಯಲ್ಲಿದೆ. ಇದು ಡಿಜಿಟಲ್ ಅಕೌಂಟ್ ಒಡೆತನಕ್ಕೆ ಕಾನೂನು ಕಟ್ಟಳೆಗಳನ್ನು ರೂಪಿಸುತ್ತದೆ. ಅದೂ ಅಲ್ಲದೆ ಡಿಜಿಟಲ್ ಉಯಿಲು ಪತ್ರ , ಟ್ರಸ್ಟ್ ಹಾಗೂ ಪವರ್ ಆಫ್ ಅಟಾರ್ನಿಗಳನ್ನು ನೇಮಿಸಿಕೊಂಡು ಡಿಜಿಟಲ್ ಆಸ್ತಿಯನ್ನು ಬಳಸಲು ಅನುಕೂಲ ಮಾಡಿಕೊಡುತ್ತದೆ.

ರುಫಡಾ ಅಡಿಯಲ್ಲಿ ಡಿಜಿಟಲ್ ಅಕೌಂಟ್ ನಿರ್ವಹಣೆ 

ಕ್ರಿಪ್ಟೋ ಕರೆನ್ಸಿಗಳು ಕೆಲವೊಮ್ಮೆ, ಕರೆನ್ಸಿ, ಗೋಲ್ಡ್ ಅಥವಾ ಕಾಯಿನ್ ಎಂಬ ಪದಗಳನ್ನು ಬಳಸುತ್ತವೆ. ಅಸಲಿಯಲ್ಲಿ ಇವು ದುಡ್ಡಲ್ಲ. ಒಂದರ್ಥದಲ್ಲಿ ವಸ್ತುವಿದ್ದಂತೆ. ಅದಕ್ಕೂ ತೆರಿಗೆಯಿದೆ. ಇದರೊಂದಿಗೆ ಡಿಜಿಟಲ್ ಕರೆನ್ಸಿಗಳು ಡಿಜಿಟಲ್ ಆಗಿದ್ದು ಆಯಾ ದೇಶದ ರಾಜ್ಯದ ಕಾನೂನಿನ ಚೌಕಟ್ಟಿಗೆ ಒಳಪಟ್ಟಿರುತ್ತವೆ. 

ಈ ಕಾಯಿದೆಯು ನಂಬಿಕಸ್ಥರಿಗೆ ಡಿಜಿಟಲ್ ಅಸ್ತಿ ಒಡೆಯನ ಮರಣಾನಂತರ ಅಥವಾ ಅಶಕ್ತತೆಯ ಕಾರಣದಲ್ಲಿ ಡಿಜಿಟಲ್ ಖಾತೆಯ ಪರಿಶೀಲನೆ ನಡೆಸಲು ಅವಕಾಶ ಮಾಡಿಕೊಡುತ್ತದೆ. ಈ ಕಾಯಿದೆ ಅಡಿಯಲ್ಲಿ ಆನ್ ಲೈನ್ ನಿರ್ವಹಣಾ ವ್ಯವಸ್ಥೆ ಎಲ್ಲಕ್ಕಿಂತ ಉನ್ನತ ಸ್ಥಾನದಲ್ಲಿದ್ದು, ಒಂದು ಡಿಜಿಟಲ್ ಖಾತೆ ಹೇಗೆ ನಿರ್ವಹಿಸಬೇಕೆಂದು ನಿರ್ದೇಶನ ನೀಡುತ್ತದೆ. ಒಮ್ಮೆ ಆನ್ ಲೈನ್ ಖಾತೆಯಲ್ಲಿ ಫಲಾನುಭವಿಯ ಹೆಸರನ್ನು ದಾಖಲಿಸಿದರೆ, ನಿಮ್ಮ ಡಿಜಿಟಲ್ ವಿಲ್ ಅಥವಾ ಪವರ್ ಆಫ್ ಅಟಾರ್ನಿ ಡಾಕ್ಯುಮೆಂಟ್ ಗೆ, ಅದು ತಾನಾಗಿಯೇ ಸೇರ್ಪಡೆಯಾಗುತ್ತದೆ. ಕಾನೂನು ಸಂಬಂಧಿ ಪತ್ರಗಳನ್ನು ಡಿಜಿಟಲ್ ಆಗಿ ಒದಗಿಸಿದರೆ ಆರಾಮವಾಗಿ ಒಬ್ಬ ವ್ಯಕ್ತಿ ಸತ್ತಾಗ ಆತನ ಡಿಜಿಟಲ್ ಖಾತೆ ತೆರೆದು ವ್ಯವಹರಿಸಬಹುದು. ಅದಕ್ಕೂ ಮುಂಚೆ ಮೃತ ವ್ಯಕ್ತಿಯು ತನ್ನಿಚ್ಛೆಯ ಫಲಾನುಭವಿಯ ಹೆಸರನ್ನು ನಮೂದಿಸಿ ಒಪ್ಪಿಗೆಯನ್ನು ನೀಡಿರಬೇಕು. ಆಗ ಮಾತ್ರ ಈ ಕಾಯಿದೆ  ಪ್ರಕಾರ ಮೃತರ ಸಂಬಂಧಿಕರು ಆತನ ಡಿಜಿಟಲ್ ಆಸ್ತಿಯನ್ನು ಬಳಸಬಹುದಾಗಿದೆ ಆದರೆ ಅದರ ಸಂಪೂರ್ಣ ಒಡೆತನವನ್ನು ಪಡೆಯಲಾಗುವುದಿಲ್ಲ. ಆದರೆ ಅವರಿಗೆ ಮೂರು ಹಕ್ಕುಗಳು ದೊರೆಯುತ್ತವೆ. ಮೊದಲನೆಯದಾಗಿ ಆನ್ ಲೈನ್ ಖಾತೆಗೆ ಪೂರ್ಣ ಪ್ರಮಾಣದ ಪರಿಶೀಲನಾ ಅಧಿಕಾರ ಇರುತ್ತದೆ. ಎರಡನೆಯದಾಗಿ ಅಲ್ಪ ಪ್ರಮಾಣದಲ್ಲಿ ಬಳಕೆ ಮಾಡಬಹುದಾಗಿದೆ. ಕೊನೆಯದಾಗಿ ಡೇಟಾ ಡಂಪ್ ಮಾಡಬಹುದಾಗಿರುತ್ತದೆ. ಬಹುತೇಕ ಸರ್ವಿಸ್ ಪ್ರೊವೈಡರ್ ಪ್ರಕಾರ ಮೂರನೆಯ ಹಕ್ಕು ಲಾಭದಾಯಕವಾಗಿರುತ್ತದೆ. 

ಕ್ರಿಪ್ಟೋ ಕರೆನ್ಸಿ ಯ ಜಗತ್ತು 

ಡಿಜಿಟಲ್ ಕರೆನ್ಸಿಯ ಮೇಲೆ ಬೇರೆ ಸ್ಥಿರ, ಚರಾಸ್ತಿಯ ಮೇಲಿರುವಂತ ಹಕ್ಕನ್ನು ಅದರ ಮಾಲೀಕರು ಹೊಂದಿರುತ್ತಾರೆ. ತಮ್ಮ ಮರಣಾನಂತರ ಅದರ ಮೇಲೆ ಕಾನೂನಿನ ಹಕ್ಕನ್ನು ಪಡೆಯುತ್ತಾರೆ. ಇದು ಕ್ರಿಪ್ಟೋ ಕರೆನ್ಸಿಯ ಖಾತೆಯನ್ನು ನಿಯಂತ್ರಿಸಲು, ಉಯಿಲು ಅಥವಾ ವಾರಸುದಾರ ಹಾಗೂ ಟ್ರಸ್ಟ್ ನೇಮಕಕ್ಕೆ ಅನುಕೂಲ ಮಾಡಿಕೊಡುತ್ತದೆ. ಸಾಂಪ್ರದಾಯಿಕ ಅಸ್ತಿ ನಿರ್ವಹಣೆಗೆ ಹೋಲಿಸಿದಾಗ, ಈ ಕ್ರಿಪ್ಟೋ ಕರೆನ್ಸಿಗಳಲ್ಲಿ ಬಹುತೇಕ ನಷ್ಟವಾಗುವ ಅಥವಾ ಕಳೆದುಹೋಗುವ ಸಂಭವವೇ ಜಾಸ್ತಿ.ಕಾರಣ ಈ ಕರೆನ್ಸಿಗಳನ್ನು ಬ್ಲಾಕ್ ಚೈನ್ (block chain technology) ತಂತ್ರಜ್ಞಾನದಲ್ಲಿ ಕೂಡಿಡಲಾಗುತ್ತದೆ. ಪಾಸ್ ವರ್ಡ್ ಮರೆತರೆ ಅಥವಾ ಅಸ್ತಿ ಕಳೆದರೆ ಅದನ್ನು ಮರಳಿ ಪಡೆಯುವುದು ಕಷ್ಟ. ಈ ನಿಟ್ಟಿನಲ್ಲಿ ವಿನಿಮಯ ಕೇಂದ್ರಗಳು ಮತ್ತು ಆನ್ ಲೈನ್ ಖಾತೆಗಳ ಬಳಕೆದಾರರ ಆಸ್ತಿಯನ್ನು ಮರಳಿ ಪಡೆಯಲಾರವು. ಕಾರಣ ಬಹುತೇಕ ಕ್ರಿಪ್ಟೋ ಕರೆನ್ಸಿಗಳು ಬ್ಲಾಕ್ ಚೈನ್ ತಂತ್ರಜ್ಞಾನ ಉಪಯೋಗಿಸಿ ಪ್ರತಿಯೊಬ್ಬ ಬಳಕೆದಾರರಿಗೆ ವೈಯಕ್ತಿಕ ಕೀಲಿಯನ್ನು ನೀಡಿರುತ್ತವೆ. ಈ ಕೀಲಿ ಕಳೆದಲ್ಲಿ ಅದರೊಳಗಿರುವ ಆಸ್ತಿಯ ಮೊತ್ತವನ್ನು ಹಿಂಪಡೆಯಲಾಗುವುದಿಲ್ಲ. 

ಈ ಅಪಾಯವೇ ಬ್ಲಾಕ್ ಚೈನ್ ನ ಶಕ್ತಿಯಾಗಿದೆ. ಈ ದಿನದ ತನಕ ನಿಮ್ಮ ವೈಯಕ್ತಿಕ ಕೀಲಿಯನ್ನು ಯಾರೂ ಕೂಡ ಹ್ಯಾಕ್ ಮಾಡಲಾರರು. ಅದೆಷ್ಟು ವೈಯಕ್ತಿಕವಾಗಿದೆಯೆಂದರೆ ವಿನಿಮಯ ಕೂಡ ಅದನ್ನು ಮರುಸೃಷ್ಟಿ ಮಾಡಲಾರದು. ಹಾಗಾಗಿ ಕೀಲಿ ಕೈ ಇಲ್ಲದಿದ್ದರೆ ಬರಿಗೈಯೇ ಸರಿ. ಒಂದೊಮ್ಮೆ ವೈಯಕ್ತಿಕ ಕೀಲಿ ಇಲ್ಲದಿದ್ದರೆ ಯಾವುದೇ ನ್ಯಾಯಾಲಯದ ಆದೇಶ ಅಥವಾ ಕಾನೂನು ಸಂಬಂಧಿ ಪತ್ರಗಳು ಏನು ಮಾಡಲಾರವು. ಅಕೌಂಟ್ ತೆರೆಯಲಾಗದು. 

ಡಿಜಿಟಲ್ ಅಸ್ತಿ ನಿರ್ವಹಣೆ

ಡಿಜಿಟಲ್ ಕರೆನ್ಸಿಗಳು ಮೌಲ್ಯಯುತವಾಗಿದ್ದು, ಅವುಗಳೂ ಕೂಡ ತೆರಿಗೆ ವ್ಯಾಪ್ತಿಗೆ ಬರುತ್ತವೆ. ಫಲಾನುಭವಿಗಳಿಗೆ ಈ ಆಸ್ತಿಯನ್ನು ವರ್ಗಾಯಿಸುವಾಗ ಸಾಮಾನ್ಯವಾಗಿ ತೊಡಕುಗಳು ಎದುರಾಗುತ್ತವೆ. ಹೀಗಾಗಿ ಡಿಜಿಟಲ್ ಅಸ್ತಿ ಹಾಗೂ ಕ್ರಿಪ್ಟೋ ಕರೆನ್ಸಿಗಳ ನಿರ್ವಹಣೆಯನ್ನು ಮಾಡುವಾಗ ಅವು ಎಲ್ಲಿ ಉದ್ಭವಿಸಿ, ಎಲ್ಲಿ ಕೊನೆಗೊಳ್ಳುತ್ತವೆ ಎಂಬುದನ್ನು ನಿರಂತರವಾಗಿ ಪತ್ತೆ ಹಚ್ಚುತ್ತಿರಬೇಕು. ಇಲ್ಲವಾದಲ್ಲಿ ನಿಮ್ಮ ಡಿಜಿಟಲ್ ಹೆಜ್ಜೆಗುರುತು ಮತ್ತು ಆಸ್ತಿಯು ಕ್ಲೌಡ್ ನಲ್ಲಿ ಸಿಕ್ಕಿ ಹಾಕಿಕೊಳ್ಳುವ ಸಂಭವವಿರುತ್ತದೆ. ಅದನ್ನು ನಿವಾರಿಸಲು ಕೆಲವು ಸಲಹೆಗಳು -

1.ವೈಯಕ್ತಿಕ ಕೀಲಿಯನ್ನು ಪತ್ತೆ ಹಚ್ಚಬೇಕು. ಇದರಿಂದ ಹಣದ ಮೌಲ್ಯದ ಬಗೆಗೆ ಮಾಹಿತಿ ಸಿಗುತ್ತದೆ. 

2.ಆನ್ ಲೈನ್ ವಿನಿಮಯಗಳ ಪರಿಶೀಲನೆ. ಲಾಗಿನ್ ಆಗುವುದು, ಆನ್ ಲೈನ್ ಸರ್ವಿಸ್ ಪ್ರೊವೈಡರ್ ವಿನಿಮಯ ಕೇಂದ್ರದಲ್ಲಿ ಕ್ರಿಪ್ಟೋ ಕರೆನ್ಸಿ ಕೊಂಡಾಗ, ಮಾರಿದಾಗ, ಮತ್ತು ವಿನಿಮಯ ಮಾಡಿದಾಗ ಪಾಸ್ ವರ್ಡ್ ಮತ್ತು ಎರಡು ಸ್ಥರದ ದೃಢೀಕರಣ ನೀಡುವ ಬಗ್ಗೆ ಗಮನ ಹರಿಸಬೇಕು. 

3.ಕ್ರಿಪ್ಟೋ ಕರೆನ್ಸಿಗಳನ್ನು ವಿನಿಮಯ ಮಾಡುವ ಬದಲು ಹಾರ್ಡ್ ಡಿಸ್ಕ್ ನಲ್ಲಿ ತುಂಬಿಡುವುದು. ಎನ್ಕ್ರಿಪ್ಟೆಡ್ (eಟಿಛಿಡಿಥಿಠಿಣeಜ) ಫ್ಲಾಶ್ ಡ್ರೈವ್ ಮತ್ತು ಬಾಹ್ಯ ಹಾರ್ಡ್ ಡಿಸ್ಕ್ ಗಳಲ್ಲಿ ಈ ಹಣವನ್ನು ಸಂಗ್ರಹಿಸಿಡಬಹುದು. ಆದರೆ ಈ ಡ್ರೈವ್ ಗಳು ಹಾಳಾದರೆ ದುಡ್ಡು ಹೋದಂತೆಯೇ ಸರಿ. 

4.ಕಾನೂನು ಸಂಬಂದಿ ಪತ್ರಗಳ ಪರಿಷ್ಕರಿಸುವಿಕೆ. ರುಫಡಾ ವು ನಂಬಿಕಸ್ಥರಿಗೆ ಡಿಜಿಟಲ್ ಖಾತೆಯ ಪರಿಶೀಲನೆ ಅವಕಾಶ ನೀಡುವುದರಿಂದ ಎಲ್ಲ ಕಾನೂನಾತ್ಮಕ ಪತ್ರಗಳನ್ನು ಸರಿಯಾದ ರೀತಿಯಲ್ಲಿ ಒದಗಿಸಿರಬೇಕು. 

5.ಎಲ್ಲ ಡಿಜಿಟಲ್ ಅಸ್ತಿ, ಪಾಸ್ ವರ್ಡ್ ಮತ್ತು ಲೊಕೇಶನ್ ಗಳನ್ನು ಟ್ರ್ಯಾಕ್ ಮಾಡಬೇಕು. ಎಲ್ಲ ಫೇಸ್ ಬುಕ್, ಇನ್ಸ್ಟಾಗ್ರಾಮ್, ಟ್ವಿಟ್ಟರ್ ವೆಬ್ ಸೈಟ್ ಗಳನ್ನು ಟ್ರ್ಯಾಕ್ ಮಾಡುತ್ತಿರಬೇಕು. 

2019ರ ಫೆಬ್ರವರಿ ಯಲ್ಲಿ ಭಾರತದ ಜೈಪುರದಲ್ಲಿ,  ಕ್ವಾಡ್ರಿಗಾ ಸಿ ಎಕ್ಸ್ (Quadriga CX) ಎಂಬ ಕ್ರಿಪ್ಟೋ ಕರೆನ್ಸಿ ಎಕ್ಸ್ಚೇಂಜ್ ನ ಸಂಸ್ಥಾಪಕನಾದ ಗೆರಾಲ್ಡ್ ವಿಲಿಯಂ ಕಾಟನ್ (Gerald william cotton)ರ ಅಕಾಲಿಕ ಮರಣವು 1000ಕೋಟಿ ಯನ್ನು ಯಾರಿಗೂ ಸಿಗದಂತೆ ಈ ಭೂಮಿಯಿಂದಲೇ ಮಾಯವಾಗಿಸಿದೆ. ಕಾರಣ ಆತನ ಪಾಸ್ ವರ್ಡ್ ಮತ್ತು ಉಯಿಲಿನ ಬಗ್ಗೆ ಯಾರಿಗೂ ತಿಳಿದಿಲ್ಲ. ಅವರ ಈ ಡಿಜಿಟಲ್ ಕರೆನ್ಸಿ ವ್ಯವಹಾರವು ಭಾರತ ಮತ್ತು ಕೆನಡಾದಾದ್ಯಂತ ಹರಡಿತ್ತು. ಹೇಳಿ ಕೇಳಿ ಸ್ಮಾರ್ಟ್ ಫೋನ್ ಕ್ರಾಂತಿ, ಡಿಜಿಟಲ್ ಜಗತ್ತಿನೊಳಗೆ ಪ್ರವೇಶಿಸಿರುವ ನಾವು ಕೂಡ ಬೆರಳ ತುದಿಯಲ್ಲಿ ವ್ಯವಹಾರ ಮಾಡುತ್ತಿದ್ದೇವೆ. ಈ ಡಿಜಿಟಲ್ ಕರೆನ್ಸಿ ನಮ್ಮ ಪೇಪರ್ ಕರೆನ್ಸಿ ಯನ್ನು ನುಂಗಿ ಅದರ ಜಾಗ ಆಕ್ರಮಿಸುವ ಕಾಲ ಬಹು ದೂರವಿಲ್ಲ. ಈ ನಿಟ್ಟಿನಲ್ಲಿ ರುಫಡಾದಂಥ ಡಿಜಿಟಲ್ ಕರೆನ್ಸಿ ಗೆ ಸಂಬಂಧಿಸಿದ ಕಾಯಿದೆಯ ಅನುಷ್ಠಾನದ  ಅಗತ್ಯ ಭಾರತಕ್ಕಿದೆ. ಇದರ ಬಗ್ಗೆ ಸರ್ಕಾರಗಳು ಚಿಂತನೆ ನಡೆಸಬೇಕಿದೆ.