ಸಪ್ತಸಾಗರದೊಡತಿ ಈ ಭಕುತಿ

ಭಕ್ತಿಯ ಸಾಧನೆ ವಿನೂತನವಾದದ್ದು. ಸ್ವಿಮ್ಮಿಂಗೇ ಒಂದು ವಿಶಿಷ್ಠವಾದ ಕ್ರೀಡೆ. ಸ್ವಿಮ್ಮಿಂಗ್ ಸ್ಪರ್ಧೆ ಒಡ್ಡುವ ಸವಾಲುಗಳ ಸ್ವರೂಪವೇ ಬೇರೆ. ಮುಕ್ತ-ಜಲ ಈಜಿನ ಸವಾಲಂತೂ ಅನೂಹ್ಯವಾದದ್ದು. ಈಜುಕೊಳದ ನೀರಿಗೆ ಭಯಪಡುವ ಜನರಿದ್ದಾರೆ. ಅಂತಹದರಲ್ಲಿ  ಜಲರಾಶಿಯ ಮಧ್ಯದಲ್ಲಿ ಏಕಾಂಗಿಯಾಗಿ ಈಜಲು ಬೇಕಾದ ಮನೋಸ್ಥೈರ್ಯ ಅಪಾರವಾದದ್ದು.

ಸಪ್ತಸಾಗರದೊಡತಿ ಈ ಭಕುತಿ

(ಮುಂದುವರಿದ ಭಾಗ)

ಅಂಟಾರ್ಟಿಕಾ ಸಾಗರದಲ್ಲಿ ಈಜುವ ಸಲುವಾಗಿ ಭಕ್ತಿ ಮುಂಬಯಿನಲ್ಲಿ ಉಲ್ಕಾ ಅಡ್ವರ್ಟೈಸಿಂಗ್ ಕಂಪನಿಯಲ್ಲಿನ ಕೆಲಸಕ್ಕೆ ರಾಜೀನಾಮೆ ನೀಡಿ ಉದಯಪುರಕ್ಕೆ ವಾಪಸ್ಸಾಗುತ್ತಾರೆ.  ಅಂಟಾರ್ಟಿಕಾ ಸಾಧನೆಗಾಗಿ ಸಿದ್ಧತೆ ನಡೆಸಲು ತನ್ನೂರಿನ ಕೆರೆಯಲ್ಲಿ ಈಜಿದರೆ ಸಾಕಾಗದೆಂದು ನಿರ್ಧರಿಸಿ ಪುಟ್ಟ ಮಾನವ-ನಿರ್ಮಿತ ಕೊಳದಲ್ಲಿ ರಾತ್ರಿ ಮಂಜುಗಡ್ಡೆ ತುಂಬಿ ಬೆಳಿಗ್ಗೆ ನೀರಿಗಿಳಿಯುವುದನ್ನು ಅಭ್ಯಾಸ ಮಾಡುತ್ತಾರೆ. ಬೆಳ್ಳಂಬೆಳಿಗ್ಗೆಯೇ ಬರಫ ಕರಗಿದ ನೀರಿಗೆ ಮೈ ಒಡ್ಡಿದಾಗ ಮೈಯನ್ನು ಸಾವಿರ ಸೂಜಿಗಳಿಂದ ಚುಚ್ಚಿದಂತಾಗುತ್ತಿದ್ದರೂ ಲೆಕ್ಕಿಸದೇ,  ಕೊರೆಯುವ ನೀರಿನಲ್ಲಿ ಒಂದೇ ಜಾಗದಲ್ಲಿರುವುದನ್ನು ಅಭ್ಯಾಸ ಮಾಡಿಕೊಳ್ಳುವ ಸಲುವಾಗಿ ಭಕ್ತಿ ತನ್ನ ಹೆಗಲುಗಳ ಮೂಲಕ ನೇತುಹಾಕಿಕೊಂಡಿದ್ದೂ ಉಂಟು. ಹಾಗೆ ಮಾಡಿದಾಗ ಭುಜದ ಮೇಲೆ ಬೊಕ್ಕೆ ಏಳುತ್ತಿದ್ದನ್ನು ನಿರ್ಭಾವವಾಗಿ ವಿವರಿಸುವ ಭಕ್ತಿ ಮನಸ್ಸು ಆದೇಶಿಸಿದ್ದನ್ನು ದೇಹ ಈಡೇರಿಸುತ್ತದೆ ಎಂದು ಕೂಲಾಗಿ ಹೇಳುತ್ತಾರೆ. ದೀರ್ಘಾವಧಿ ನೀರಿನಲ್ಲಿದ್ದು ಹೊರಬಂದ ಭಕ್ತಿಯ ದೇಹವನ್ನು ಬೆಚ್ಚಗಿಡಲು ಮನೆಮಂದಿಯೆಲ್ಲಾ ಆಕೆಯ ಮೇಲೆ ಬೀಳುತ್ತಿದ್ದುದೂ ಉಂಟು. ಅರ್ಧಗಂಟೆಯಾದರೂ ಗಡಗಡ ನಡುಕ. ಹೃದಯದ ಮೇಲೆ ದುಷ್ಪರಿಣಾಮ ಬೀರಬಹುದೆನ್ನುವ ಕಾರಣಕ್ಕೆ ಹತ್ತು ದಿನದ ನಂತರ ಮಂಜುಗಡ್ಡೆಯ ಪ್ರಯೋಗವನ್ನು ನಿಲ್ಲಿಸುತ್ತಾರೆ.

ಉದಯಪುರದಲ್ಲಿ ಈಜುವ ಸೌಲಭ್ಯ ಹೆಚ್ಚಿಲ್ಲದ ಕಾರಣ, ಶಾಲೆಯಲ್ಲಿ ವ್ಯಾಸಂಗ ಮಾಡುವಾಗ ಬಿಡುವಿನ ಸಮಯದಲ್ಲಿ ನೃತ್ಯವನ್ನೂ, ಕರಾಟೆಯನ್ನೂ ಕಲಿಯುವುದಕ್ಕೆ ವಿನಿಯೋಗಿಸಿದ ಭಕ್ತಿಯ ಫಿಟ್ನೆಸ್ ಗೆ ಅವುಗಳ ಕೊಡುಗೆಯೂ ಇದ್ದೇ ಇದೆ. ಯೋಗಾಭ್ಯಾಸವೂ ಆಕೆಯನ್ನು ಗಟ್ಟಿಗೊಳಿಸುವುದರಲ್ಲಿ ಮಹತ್ವದ ಪಾತ್ರ ವಹಿಸಿದೆ. ತನಗಿದ್ದ ಭಯ, ಆತಂಕ ಮತ್ತು ಸಂಶಯಗಳನ್ನು ನಿವಾರಿಸಿಕೊಳ್ಳಲು ಹಿರಿಯ ಶಿಕ್ಷಕರಿಂದ ಮಾರ್ಗದರ್ಶನ  ಪಡೆದು ಅದರಂತೆ ಭಕ್ತಿ ಧ್ಯಾನದಲ್ಲೂ ತೊಡಗಿದ್ದುಂಟು.

ಇಷ್ಟೆಲ್ಲಾ ಸಿದ್ಧತೆ ನಡೆಸಿದ ಭಕ್ತಿ ಅಂಟಾರ್ಟಿಕಾ ಸಾಗರದ ಮಡಿಲಿಗಿಳಿಯಲು ಸನ್ನದ್ಧರಾಗುತ್ತಾರೆ.   ಕೊರೆವ ಚಳಿಯಿಂದ ಆಕೆ ವಿಚಲಿತರಾಗುವುದಿಲ್ಲ. ಆದರೆ, ಬೇರೆ ಪ್ರತಿಕೂಲ ಅಂಶಗಳು ಎದುರಾಗುತ್ತವೆ. ಮಾಮೂಲಿ ಸಮುದ್ರದ ನೀರಿಗಿಂತ ಕ್ಷಾರದಂಶ ಅತಿ ಹೆಚ್ಚಿರುತ್ತದೆ. ಸುತ್ತಲೂ ಕರಗುತ್ತಿರುವ ಮಂಜಿನ ಪದರಗಳು. ನೀರು ನೀರಾಗಿರದೆ ಸಾಂದ್ರತೆ ಹೆಚ್ಚುಳ್ಳ ಎಣ್ಣೆಯಂತಿದ್ದು ಈಜುವುದು ಕಷ್ಟವಾಗಿರುತ್ತದೆ. ಕ್ಷಣಕಾಲ ತಾನು ಗುರಿಮುಟ್ಟಬಲ್ಲೆನೇ ಎಂಬ ಸಂಶಯ ಮನಸ್ಸಿನಲ್ಲಿ ಮೂಡುತ್ತದೆ, ಆದರೆ ದೇಹದ ಜತೆ ಮನಸ್ಸನ್ನೂ ಗಟ್ಟಿಗೊಳಿಸಿದ್ದ ಭಕ್ತಿ ಒಂದೊಂದೇ ಬೀಸಿನತ್ತ ಗಮನಕೊಡುವುದಾಗಿ ನಿರ್ಧರಿಸಿ ಮುಂದುವರಿಯುತ್ತಾರೆ. ಅವರಿಗೆ ದಿಶೆ ತೋರಲು ಬೋಟ್ ಮುಂದಿರುತ್ತದೆ. ವೆಟ್ ಸೂಟ್ ಧರಿಸದೆಯೇ  ಕುಳಿರ್ಗಾಳಿಯ ಹೊದಿಕೆ ಹೊದ್ದು,  ಕೊರೆಯುವ ನೀರನ್ನು ಸೀಳುತ್ತಾ ಈಜುತ್ತಾರೆ. ಎರಡೂ ಕಾಲು ಕಿ.ಮೀ ದೂರ  ಈಜಿ  ಬೃಹತ್ ಸಾಗರದಲ್ಲಿ ಗೋಚರಿಸದಷ್ಟು ಸಣ್ಣದಾದ ಭಕ್ತಿಯ ಮಾನವಾಕೃತಿ ಚೇತನದ ಮೇರು ಸಾಧನೆಗಳಿಗೆ ದೃಷ್ಟಾಂತವಾಗಿ ಹೊರಹೊಮ್ಮುತ್ತಾರೆ. ಆಕೆಯ  ಜಲಾಂತರ್ಗಾಮಿ ಯಾನದ ಉದ್ದಕ್ಕೂ ಪೆಂಗ್ವಿನ್ ಹಕ್ಕಿಯೊಂದು ಆಕೆಯ ಸಾಧನೆಗೆ ಸಾಕ್ಷಿಯಾಗಿ ಸಾಥ್ ಕೊಡುತ್ತದೆ.

ಉತ್ತರ ಧ್ರುವದಲ್ಲಿ ಆಕೆ ಮಾಡಿದ ಅಪೂರ್ವ ಸಾಧನೆಯ ಐದು ವರ್ಷದ ನಂತರ ದಕ್ಷಿಣ ಧ್ರುವದಲ್ಲೂ ಭಕ್ತಿ ತಮ್ಮ ಸಹಿ ಹಾಕಿಬರುತ್ತಾರೆ. ತಮ್ಮ ನೂತನ ಸಾಧನೆಯನ್ನು "ಸುಂದರ, ಆದರೆ ಭಯಾನಕ" ಎಂದು ಬಣ್ಣಿಸುತ್ತಾರೆ.

ತಮ್ಮ ಬೃಹತ್ ಸಾಧನೆಯ ಬಗ್ಗೆ ಭಕ್ತಿ ನಿಸ್ಸಂಕೋಚವಾಗಿ ಮಾತನಾಡುತ್ತಾರೆ. ಅದು ಸ್ವಪ್ರಶಂಸೆಯಾಗಿ ಕೇಳುವುದಿಲ್ಲ. ಸಾಧಕಿಯ ಸಾಧನೆಯ ನಿರೂಪಣೆಯಾಗಷ್ಟೇ ಕೇಳುತ್ತದೆ. ಒಂದು ವೇಳೆ ಅದು ಸ್ವಪ್ರಶಂಸೆಯೇ ಆದರೂ ವೈ ನಾಟ್?  ದಶಕಗಳ ಹಿಂದೆ ಮೈಕ್  ಪೆರೇರಾ ಸ್ನೂಕರ್ ಜಗತ್ತಿನ ಚಾಂಪಿಯನ್ ಆಗಿ ವಿಜೃಂಭಿಸಿದಾಗ, ಭಾರತದ ಅಂದಿನ ಕ್ರಿಕೆಟ್ ತಾರೆ ಸುನಿಲ್ ಗವಾಸ್ಕರ್ ನ ಸಾಧನೆಗಿಂತ ತನ್ನ ಸಾಧನೆ ಯಾವ ರೀತಿ ಕಡಿಮೆ ಎಂದು ಕೇಳಿದ್ದರು. ಆ ಪ್ರಶ್ನೆ ನನಗೆ ಸಮಂಜಸ ಎನಿಸಿತ್ತು. ಅವರ ಆತ್ಮಾಭಿಮಾನದ ದ್ಯೋತಕವಾಗಿತ್ತು. ಹಾಗೆಯೇ ಭಕ್ತಿ ತನ್ನ ಸಾಧನೆಯ ಬಗ್ಗೆ ಮತ್ತಷ್ಟು ಮಾತನಾಡಲಿ. ಈಗಾಗಲೇ ಅವರು ನಾಡಿನ ಜನತೆಗೆ ಸ್ಪೂರ್ತಿ ತುಂಬುವ ನಿಟ್ಟಿನಲ್ಲಿ ಅನೇಕ ಕಡೆ ಪ್ರೇರಣಾತ್ಮಕ ಉಪನ್ಯಾಸಗಳನ್ನು ಕೊಟ್ಟಿದ್ದಾರೆ.

ಭಕ್ತಿಯ ಸಾಧನೆ ವಿನೂತನವಾದದ್ದು. ಸ್ವಿಮ್ಮಿಂಗೇ ಒಂದು ವಿಶಿಷ್ಠವಾದ ಕ್ರೀಡೆ. ಸ್ವಿಮ್ಮಿಂಗ್ ಸ್ಪರ್ಧೆ ಒಡ್ಡುವ ಸವಾಲುಗಳ ಸ್ವರೂಪವೇ ಬೇರೆ. ಮುಕ್ತ-ಜಲ ಈಜಿನ ಸವಾಲಂತೂ ಅನೂಹ್ಯವಾದದ್ದು. ಈಜುಕೊಳದ ನೀರಿಗೆ ಭಯಪಡುವ ಜನರಿದ್ದಾರೆ. ಅಂತಹದರಲ್ಲಿ  ಜಲರಾಶಿಯ ಮಧ್ಯದಲ್ಲಿ ಏಕಾಂಗಿಯಾಗಿ ಈಜಲು ಬೇಕಾದ ಮನೋಸ್ಥೈರ್ಯ ಅಪಾರವಾದದ್ದು. ನುರಿತ ಈಜುಪಟುಗಳೂ ಸಮುದ್ರದಲ್ಲಿ ಈಜುವುದಕ್ಕೆ ಹಿಂದೇಟು ಹಾಕುತ್ತಾರೆ. ಭೂಮಿಯ ದರ್ಶನವಿಲ್ಲ. ಅಲೆಗಳ ಭೋರ್ಗರೆತ. ಸುನಾಮಿಯಂಥ ಪ್ರಕೃತಿ ವಿಕೋಪವನ್ನು ನೆನೆಸಿಕೊಂಡರೇ ಸಮುದ್ರದ ಸಹವಾಸವೇ ಬೇಡವೆನಿಸುತ್ತದೆ. ತಿಮಿಂಗಿಲವೋ, ಶಾರ್ಕೋ ಎದುರಾದರೆಂಬ ಭಯ ಮತ್ತೊಂದೆಡೆ. (ಇಂಗ್ಲಿಷ್ ಚಾನೆಲ್ ಈಜುವ ಸಾಹಸ ಕೈಗೊಂಡಾಗ ಬೃಹತ್ ತಿಮಿಂಗಿಲ ಹತ್ತಿರದಲ್ಲೇ ಹಾದುಹೋಗಿತ್ತು!) ನೇರವಾಗಿ ಒಂದು ದಿಕ್ಕಿನಲ್ಲಿ ಈಜವುದೇ ಸವಾಲು. ಕೆಲವೊಮ್ಮೆ ಪಕ್ಕದಿಂದ ಏಳುವ ಸುಳಿ, ಈಜುಗಾರ್ತಿಯನ್ನು ಪಕ್ಕಕ್ಕೆ ದಬ್ಬುತ್ತಿರುತ್ತದೆ. ಸಾವಿರಾರು ಜನ ನೋಡಿ ಹುರಿದುಂಬಿಸುವ ಕ್ರೀಡೆಯಲ್ಲ. ಹಿಮಾಲಯದಲ್ಲಿ ಕುಳಿತು ತಪಸ್ಸು ಮಾಡುವ ಋಷಿಯಂತೆ. ಬೆಂಬಲಕ್ಕಾರೂ ಇಲ್ಲ. ಸವಾಲುಗಳ ಜೊಂಪೆ, ಜೊಂಪೆ. ಸವಾಲುಗಳನ್ನು ಯಶಸ್ವಿಯಾಗಿ ಎದುರಿಸಿ, ಸ್ಪರ್ಧೆಯನ್ನು ಗೆಲ್ಲುವುದು ಒಂದು ರೀತಿಯಾದರೆ, ಸವಾಲುಗಳನ್ನು ಎದುರಿಸುವಾಗಲೇ ಆನಂದದ ಉತ್ಕಟಾವಸ್ಥೆ ತಲುಪುವುದು ಮತ್ತೊಂದೇ ನಮೂನೆ. ಭಕ್ತಿಯ ಪರಾಕಾಷ್ಠೆ. ಭಕ್ತಿ ತನ್ನ ಏಕಾಂತ ಸಾಹಸಗಳಲ್ಲಿ ಮುಟ್ಟುವುದು ಅಂತಹ ಭಕ್ತಿಯ ಪರಾಕಾಷ್ಠೆ.

ಇಷ್ಟೆಲ್ಲಾ ಸಾಧನೆಗಳು ಆಕೆಯ ಸಾಹಸಮಯ ಬದುಕಿಗೆ ಸಾಲದೆನ್ನುವಂತೆ ಭಕ್ತಿ ಸದ್ಯಕ್ಕೆ ಫ್ಲೋರಿಡಾಗೆ ತೆರಳಿದ್ದಾರೆ. ಟೋಕಿಯೋ ಒಲಿಂಪಿಕ್ಸ್ ಗೆ ತಯಾರಿ ನಡೆಸುವುದು ಆಕೆಯ ಮುಖ್ಯ ಉದ್ದೇಶ. ಅಂದರೆ ಮರಳಿ ಸ್ಪರ್ಧಾತ್ಮಕ ಸ್ವಿಮ್ಮಿಂಗಿಗೆ ಬರುತ್ತಿದ್ದಾರೆ. ಸಹಾಯಕ ಶಿಕ್ಷಕಿಯಾಗಿಯೂ ಸೇವೆ ಸಲ್ಲಿಸುತ್ತಿರುವುದರಿಂದ ತರಬೇತಿಗೆ ಸಾಕಷ್ಟು ಸಮಯ ಸಿಗುತ್ತಿಲವೆಂಬುದು ಆಕೆಯ ಒಂದು ಕೊರಗಾದರೆ ಪ್ರಾಯೋಜಕರ ಬೆಂಬಲವಿಲ್ಲದಿರುವುದು ಆಕೆಯ ಮತ್ತೊಂದು ಕೊರಗು. ಆಕೆಯ ಇದುವರೆಗಿನ ಸಾಹಸಗಳಿಗೆ ಕೋಟ್ಯಂತರ ಹಣ ವ್ಯಯವಾಗಿದೆ.   

ಸಾಹಸವೆಂದರೆ ಪಾಶ್ಚಿಮಾತ್ಯರಿಂದಲೇ ಮಾತ್ರ ಸಾಧ್ಯ ಅನ್ನುವ ತಪ್ಪು ಕಲ್ಪನೆ ಇಂದೂ ನಮ್ಮ ಸಮಾಜದಲ್ಲಿದೆ. ಭಕ್ತಿಯಂತಹ ಅಪ್ರತಿಮ ಸಾಧಕರು ಅದನ್ನು ನಿವಾರಿಸಲಿ. ಹೆಚ್ಚು ಹೆಚ್ಚು ಯುವಜನರಿಗೆ ಭಕ್ತಿ ಸ್ಪೂರ್ತಿಯಾಗಲಿ.

ಅಂದ ಹಾಗೆ, ಭಕ್ತಿಯ ಬಗ್ಗೆ ಬೆಂಗಳೂರಿಗರೂ ವಿಶೇಷವಾಗಿ ಹೆಮ್ಮೆಪಡಲು ಕಾರಣವೊಂದಿದೆ. ಆಕೆ ಸಮೂಹ ಮಾಧ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದದ್ದು ನಗರದ ಸಿಂಬಯಾಸಿಸ್ ಸಂಸ್ಥೆಯಲ್ಲಿ.