ಭಕ್ತಿಕವಿ ಹರಿಹರನ ರಸಿಕತೆ

ನಮ್ಮ ವಿಮರ್ಶಕ ಪಂಡಿತರು ಹರಿಹರ ಕವಿಗೆ "ಭಕ್ತಿ ಕವಿ" ಎನ್ನುವ ಲೇಬಲ್ ಹಚ್ಚಿ ಜೊತೆಗೆ ಭಕ್ತಿಯ ಹೊರತು ಮತ್ತೇನೂ ಹರಿಹರನ ಕಾವ್ಯಗಳಲ್ಲಿ ಇಲ್ಲವೇನೋ ಎನ್ನುವಂಥ ಮೆಣಸಿನ ಹೊಗೆ ಹಾಕಿ ಓದುಗರನ್ನು ಅವನ ಕಾವ್ಯದ ಓದಿನಿಂದ ದೂರ ಓಡಿಸುವಂಥ ಕೆಲಸ ಮಾಡಿದ್ದಾರೆ. ಹರಿಹರನ ಕಾವ್ಯದ ವೈವಿಧ್ಯತೆ ಮತ್ತು ವಿಶಿಷ್ಟತೆಗಳು, ರಸಿಕತೆ, ಶೃಂಗಾರ ಪ್ರಜ್ಞೆ ಕಾಣಸಿಗುವುದು ನಮಗೆ ಆತನ ರಗಳೆಗಳಿಗಿಂತಲೂ ಆತನ ಚಂಪೂ ಕಾವ್ಯವಾದ "ಗಿರಿಜಾ ಕಲ್ಯಾಣ"ದಲ್ಲಿ.

ಭಕ್ತಿಕವಿ ಹರಿಹರನ ರಸಿಕತೆ

 

 

 

ನಮ್ಮ ವಿಮರ್ಶಕ ಪಂಡಿತರು ಹರಿಹರ ಕವಿಗೆ "ಭಕ್ತಿ ಕವಿ" ಎನ್ನುವ ಲೇಬಲ್ ಹಚ್ಚಿ ಜೊತೆಗೆ ಭಕ್ತಿಯ ಹೊರತು ಮತ್ತೇನೂ ಹರಿಹರನ ಕಾವ್ಯಗಳಲ್ಲಿ ಇಲ್ಲವೇನೋ ಎನ್ನುವಂಥ ಮೆಣಸಿನ ಹೊಗೆ ಹಾಕಿ ಓದುಗರನ್ನು ಅವನ ಕಾವ್ಯದ ಓದಿನಿಂದ ದೂರ ಓಡಿಸುವಂಥ ಕೆಲಸ ಮಾಡಿದ್ದಾರೆ.

 

ಹರಿಹರನ ಕಾವ್ಯದ ವೈವಿಧ್ಯತೆ ಮತ್ತು ವಿಶಿಷ್ಟತೆಗಳು, ರಸಿಕತೆ, ಶೃಂಗಾರ ಪ್ರಜ್ಞೆ ಕಾಣಸಿಗುವುದು ನಮಗೆ ಆತನ ರಗಳೆಗಳಿಗಿಂತಲೂ ಆತನ ಚಂಪೂ ಕಾವ್ಯವಾದ "ಗಿರಿಜಾ ಕಲ್ಯಾಣ"ದಲ್ಲಿ.

 

ಹರಿಹರ ಅದೆಂತಹ ರಸಿಕ, ರಮ್ಯಕವಿ ಎಂಬುದಕ್ಕೆ  "ಗಿರಿಜಾ ಕಲ್ಯಾಣ"ದಲ್ಲಿನ ಕೆಲ ಪ್ರಸಂಗಗಳನನ್ನು ನಿರೂಪಿಸಿರುವ ರೀತಿಯೆ ಸಾಕ್ಷಿ.

 

ಹರಿಹರನ ರಸಿಕತೆಯು ಎಲ್ಲೂ ಶ್ಲೀಲತೆಯ ಎಲ್ಲೆಯನ್ನು ದಾಟುವುದಿಲ್ಲ. ಆದರೆ ಒಂದು ರೀತಿ ಭಕ್ತಿಯ ತುತ್ತ ತುದಿ ತಲುಪಿದ ಭಕ್ತ ಉನ್ಮಾದತೆಯನ್ನು ಅನುಭವಿಸುವ ಮಾದರಿಯದು

ಗಿರಿಜಾ ಕಲ್ಯಾಣದಲ್ಲಿ ಹೈಮವತಿ ನಾಡಿನ ವರ್ಣನೆಯಿದೆ. ಹೈಮವತಿ ನಾಡು ಪ್ರಾಕೃತಿಕವಾಗಿ ಸಂಪತ್ಭರಿತ ಸಮೃದ್ಧ ನಾಡು. ನಾಡನ್ನು, ನಾಡಿನ ಜನರನ್ನು ವರ್ಣಿಸುತ್ತ, ನಾಡಿನ ಬತ್ತದ ಗದ್ದೆಗಳು ಹಸಿರು ತುಂಬಿ, ಹುಲುಸಾಗಿ, ಸೊಂಪಾಗಿ ಬೆಳೆದು ನಿಂತಿವೆ. ಹೀಗೆ ಬೆಳೆದು ನಿಂತ ಗದ್ದೆಗಳನ್ನು, ತಾವರೆಗಣ್ಣಿನ ವಯಸ್ಸಿಗೆ ಬಂದ ನಾಡ ಹೆಣ್ಣುಗಳು ಕಾಯತ್ತಿದ್ದಾರೆ. ತುಂಬು ಯೌವ್ವನದ ಹೆಣ್ಣುಮಕ್ಕಳಿಗೆ ಗದ್ದೆ ಕಾಯುವ ಕೆಲಸ ಬೇಸರವಾಗಿ, ವಯೋ ಸಹಜ ನಡವಳಿಕೆಗೆ ಅನುಗುಣವಾಗಿ ದಾರಿಯಲ್ಲಿ ಹಾದುಹೋಗುವ ಯುವಕರತ್ತ ಮನ ಹೊರಳುತ್ತದೆ. ಆಗ ಹೆಣ್ಣುಮಕ್ಕಳು ದಾರಿಹೋಕ ಯುವಕರೊಂದಿಗೆ ನಡೆಸುವ ಮಾತುಕತೆ, ಚೆಲ್ಲಾಟಗಳ ಪ್ರಸಂಗವನ್ನು ಹರಿಹರ ಹೀಗೆ ಕಟ್ಟಿಕೊಟ್ಟಿದ್ದಾನೆ.

 

ಗದ್ದೆ ಕಾಯುತ್ತಿರುವ ಹೆಣ್ಣೊಬ್ಬಳು ದಾರಿಯಲ್ಲಿ ಆಯಾಸಗೊಂಡು ಬರುತ್ತಿರುವ ಒಬ್ಬ ಯುವಕನನ್ನು ಕಂಡು ಹೀಗೆನ್ನುತ್ತಾಳೆ.

 

ಪತ್ತಿತು ಬಿಸಿಲುರಿ ಕಾಲಂ

ಮುತ್ತಿತು ನೋವುದಕದಿಚ್ಛೆಯಿಂದಂ ಬೆಳವ್ರಾಯ್ 

ಬಿತ್ತಿತ್ತಯ್ಯೋ ಶ್ರಮಮನಿ

ನಿತ್ತಂ ಕಳೆವವರೆ ಜಾಣರೆನುತಂ ನುಡಿದಳ್"

- ಬಿಸಿಲು ಏರಿತು, ಕಾಲುಗಳು ನೋಯುತ್ತಿವೆ, ಬಾಯಾರಿ ಗಂಟಲೊಳಗಿದೆ, ಅಯ್ಯೋ ಎಷ್ಟು ದಣಿವು, ಇಷ್ಟನ್ನೂ ಒಮ್ಮೆಲೇ ಹೋಗಲಾಡಿಸುವರೇ ಜಾಣರು.. ಎಂದು ಹಾಡಿದಳು.

 ಇದ ಕೇಳಿದ ಯುವಕನೊಬ್ಬ ಅವಳ ಬಳಿ ಬಂದು ತನಗೆ ಬಾಯಾರಿದೆ ನೀರುಣಿಸುವೆಯಾ ಎಂದು ಅವಳನ್ನು ಕೇಳಿದ, ಅದಕ್ಕೆ ಅವಳು ಅರವಟ್ಟಿಗೆಯಲ್ಲಿದ್ದ ನೀರ ತಂದು ಅವನಿಗೆ ಎರೆಯುತ್ತಾಳೆ, ಆಗ ಅವನು

"ಅಂಬುವನೆರೆವಾಗಳ್ ಪ್ರತಿ

  ಬಿಂಬಿಸೆ ಕೆಯ್ನೀರೊಳವಳ ವದನಂ ಪಥಿಕಂ

ನಂಬಿ ನಲಿದೀಂಟಿದಂ ಪ್ರತಿ

ಬಿಂಬಾಧರ ಮಧುರ ರಸಮನೀಂಟುವ ತೆರದಿಂ"

ದಾರಿಗನಿಗೆ ನೀರೆರೆಯುವಾಗ ಅವಳ ಮುಖವು ಅವನ ಬೊಗಸೆಯಲ್ಲಿ ಪ್ರತಿಬಿಂಬಿಸಿತು. ಅದನ್ನು ಅವನು  ಅವಳ ನಿಜವಾದ ಮುಖವೆಂದೇ ತಿಳಿದು, ಬೊಗಸೆಯಲ್ಲಿನ ನೀರು ನೀರಲ್ಲ, ಅವಳ ಪ್ರತಿಬಿಂಬದ ಅಧರದ ಮಧುರ ರಸವದು( ತುಟಿಯ ಜೇನು) ಎಂದು ಭಾವಿಸಿ ಅದನ್ನೇ ಹೀರುವಂತೆ ಹೀರಿದ.

ಹೀಗೆ ಯುವಕ ನೀರ್ಕುಡಿದು ಹೋದ ಮೇಲೆ ದಾರಿಯಲ್ಲಿ ಬಂದ ದಾರಿಹೋಕರ ನಡವಳಿಕೆಗಳು ಹೀಗಿದ್ದವು,

 "ನಡೆ ನುಡಿ ಬಳಲ್ಕೆ ಮುನ್ನಂ

   ಕಡು ಚೆಲ್ವೆಯ ರೂಪುಗಂಡ 

    ಬಳಿಕಂ ನಡೆಯರ್

    ನುಡಿಯರ್, ನೀರಂ 

    ಕುಡಿಯರ್

ನಡೆನೋಡುತ್ತಿರ್ಪರತನುಶಿಥಿಲರ್ ಪಥಿಕರ್. "

- ದಾರಿಯಲ್ಲಿ ಹಾದು ಬರುವ ದಾರಿಗರಿಗೆ ಮೊದಲು ನಡೆನುಡಿಗಳಲ್ಲಿ ಬಳಲಿಕೆ ಇತ್ತು. ಆದರೆ ಕಡು ಚೆಲುವೆಯಾದ ಇವಳನ್ನು ಕಂಡ ಕೂಡಲೆ, ಅವರು ನಡೆಯರು, ನುಡಿಯರು, ಬಾಯಾರಿ ಬಳಲಿದ್ದರೂ ನೀರನ್ನೂ ಕುಡಿಯರು, ಮೈ ಮನಸ್ಸು ಶಿಥಿಲಗೊಂಡು ಸುಮ್ಮನೇ ಅವಳನ್ನು ನೋಡುತ್ತಲೇ ಕುಳಿತುಬಿಡುತ್ತಾರೆ.

ಹರಿಹರನು ಹೈಮವತಿ ನಗರದ ಸಂಜೆಯ ವರ್ಣನೆಯ ಮಾಡುವ ಮತ್ತೊಂದು ಸಂದರ್ಭದಲ್ಲಿ , ಆತ ಕಟ್ಟಿಕೊಡುವ ಪ್ರೇಮಿಗಳ ಪ್ರೇಮದ ವರ್ಣನೆಯಂತೂ ಹರಿಹರನ ಸೌಂದರ್ಯ ಪ್ರಜ್ಞೆ ಎಂತಹದು ಎಂಬುದು ತಿಳಿಸುತ್ತದೆ.

ನಗರದಲ್ಲಿ ಸಂಜೆಯಾಗುತ್ತಿದ್ದಂತೆ ಪ್ರೇಮಿಗಳು ತಮ್ಮ ಪ್ರಿಯ- ಪ್ರೇಯಸಿಯರನ್ನು ಹುಡುಕಿಕೊಂಡು ಹೊರಟರಂತೆ.

ಪ್ರೇಮದ ಉನ್ಮಾದದಲ್ಲಿದ್ದ   ಪ್ರೇಮಿಗಳಿಗೆ

"ಒದವಿದ ಕಳ್ತಲೆಯೊಳ್

  ಸಮ್ಮುದದಿಂ ಪೊರಮಟ್ಟ ಜಾರಮಿಥುನಾಳಿಗೆ ಕಂ

ಡುದೆ ಬರವು ಎಳಸಿತೆ ಮನಮ್ ಇರ್ದುದೆ ಮನೆ ಪಟ್ಟಿದುದೆ ಪಾಸು ಮುಟ್ಟಿತೆ ಮರ್ಮಂ"

 

- ಕವಿದ ಕತ್ತಲೆಯಲ್ಲಿ ಪ್ರೇಮಿಗಳು ಉನ್ಮತ್ತ ಪ್ರೇಮದಲಿ ಹೊರಗೆ ತಮ್ಮ ಪ್ರಿಯರನ್ನು ಕಾಣಲು ಬರುತ್ತಿದ್ದಾಗ ಕಂಡದ್ದೆ, ಆಗಮನ, ಬಯಸಿದ್ದೇ ಅಪೇಕ್ಷೆ, ಸಿಕ್ಕ ನೆಲವೇ ಹಾಸಿಗೆ, ತಾವು ತಮ್ಮ ಪ್ರಿಯರ ಮುಟ್ಟಿದ ಅಂಗವೇ ಮರ್ಮಾಂಗ ಎಂಬಂತೆ ಪ್ರೇಮದಲಿ ಉನ್ಮತ್ತರಾದರಂತೆ.

 

ಮತ್ತೊಂದೆಡೆಯಲ್ಲಿ ಗೆಳೆಯನೊಬ್ಬನು, ಹೆಣ್ಣೊಬ್ಬಳಿಗೆ ಬಳೆತೊಡಿಸಲು, ಅವಳ ಹಸ್ತಕ್ಕಾಗಿ ಕೈ ಚಾಚುತ್ತಾನೆ. ಆಗ ಹೆಣ್ಣಿನ ಗೆಳತಿಯೊಬ್ಬಳು, ತನ್ನ ಗೆಳತಿಗೆ ಬಳೆ ಬೇಡವೆಂದು, ಅದಕ್ಕೆ ಕಾರಣವಿದೆ ಎನ್ನತ್ತಾಳೆ, ಕಾರಣವೆಂದರೆ..

 

"ಪರಿರಂಭಾರಂಭಣದಾ

ತುರಸಮಯದೊಳಂ ಮನೋಹರ ವ್ಯಾಜದೊಳಂ

ವಿರಹದೊಳಂ ತನ್ನಿನಿಯಂ

ಬರೆ ಸುಖದೊಳಗಬಲೆಗೆಂತು ನಿಲ್ವುವು ಬಳೆಗಳ್"

 

ಅಂದರೆ 

ಆಲಂಗಿಸುವ ಆತುರದಲ್ಲಿ, ಪ್ರೀತಿಯ ಜಗಳದಲ್ಲಿ, ವಿರಹದಲ್ಲಿ ತನ್ನ ಇನಿಯನು ಬಂದನೆಂದರೆ ಬಳೆಗಳು ಹೇಗೆ ಉಳಿಯುತ್ತವೆ

ಎನ್ನುತ್ತಾಳೆ.

 

ಅಲ್ಲೆ ಇದ್ದ ಮತ್ತೊಬ್ಬ ಗೆಳತಿಯು ತನ್ನನ್ನು ಬಾಧಿಸುತ್ತಿರುವ ವಿರಹವನ್ನು ಹೀಗೆ ವಿವರಿಸುತ್ತಾಳೆ.

"ಅಸವಸದಿಂದಿನನುಳಿದೊಡೆ

ದೆಸೆ ಕಾವುಳಮಸಗಿ ಮಾನಿನಿಗೆ ಮಧು ಮರುಕಂ

ಸಸಿ ಬಿಸಿ ಕಾವಂ ದಾವಂ

ಬಿಸಿಜಂ ಬಿಸಮನಿಲನನಲನೆನಿಸಿತ್ತಾಗಳ್"

 

- ರವಿಯೂ ಅವಸರ ಅವಸರವಾಗಿ ಮುಳುಗಿದ, ದಿಕ್ಕು ದಿಕ್ಕಿಗೂ ಮಂಜು ಮಸುಗಿತು, ಆಗ ಮಾನವತಿಯಾದವಳಿಗೆ ವಿರಹ ಅತಿಯಾಗಿ, ಮಧುಮಾಸವು ದುಃಖವನ್ನು ಹೆಚ್ಚಿಸಿ, ಚಂದಿರ ಬೆಚ್ಚಗೆ ಕಂಡ, ಕಾಮ ದಾವಾಗ್ನಿಯಾದ, ಕಮಲವೂ ವಿಷದಂತೆ ಅಸಹ್ಯವಾಯಿತು, ಗಾಳಿಯೂ ಬೆಂಕಿಯಾಯಿತು. ಹೀಗೆ ವಿರಹ ಕಾಲದಲ್ಲಿ ಅನುಕೂಲವಾದ ವಸ್ತುಗಳೂ ಪ್ರತಿಕೂಲವಾಗುತ್ತವೆ.

 

ಕಡೆಯದಾಗಿ ಹರಿಹರನು ಹೈಮವತಿ ನಗರದ ಉದ್ಯಾನವನವನ್ನು ವರ್ಣಿಸುವ ಸಂದರ್ಭದಲ್ಲಿ ಮಾವಿನ ಮರ ಮತ್ತು ಗಿಳಿಗಳ ಸಂಬಂಧದ ವರ್ಣನೆಯನ್ನು ಮಾಡುವ  ಒಂದು ಪದ್ಯವಂತೂ ಆರೋಗ್ಯಕರ ಲೈಂಗಿಕ ಶಿಕ್ಷಣದ ಪಾಠವನ್ನು ತಿಳಿಸುವವಂತಿದೆ.

 

"ಬಿಗಿಯಪ್ಪಿ ಮೊಗಮನಿಟ್ಟಾ

ಲಿಗಳವು ನಸುಮುಚ್ಚೆ ಪಕ್ಷಯುಗಮೆಳಲೆ ರಸಂ

ದೆಗೆವ ದನಿ ನಿಮಿರೆ ನಾಲಗೆ

ಚಿಗುರುತ್ತಿರೆ ಸವಿದುದೊಂದು ಗಿಳಿ ತನಿವಣ್ಣಂ"

- ಅಲ್ಲಿ ಒಂದು ಗಿಳಿಯು, ಒಂದು ರಸಭರಿತ ಹಣ್ಣನ್ನು ಬಿಗಿದಪ್ಪಿ, ಹಣ್ಣಿಗೆ ಬಾಯಿ ಹಾಕಿ, ಕಣ್ಣುಗಳ ನಸುಮುಚ್ಚಿ, ಸ್ತಬ್ಧವಾಗಿ ರಸವನ್ನು ಹೀರುವಾಗ ಅದರ ಸೀತ್ಕಾರದ ದನಿ ಹೆಚ್ಚಿ, ನಾಲಗೆ ಚಪ್ಪರಿಸುತ್ತಾ ಸವಿಯುತ್ತಿದೆ.

 

- ಮೇಲ್ನೊಟಕ್ಕೆ ಗಿಣಿಯೊಂದು ಮಾವಿನ ಹಣ್ಣನ್ನು ಸವಿಯುತ್ತಿರುವ ಚಿತ್ರವಾಗಿ ಕಂಡರೂ ಇಲ್ಲಿ ಹರಿಹರ ಕಟ್ಟಿಕೊಡುತ್ತಿರುವುದು ಪ್ರೇಮದಲ್ಲಿ ಉನ್ಮತ್ತರಾದ ಗಂಡು- ಹೆಣ್ಣಿನ  ಔಪರಿಷ್ಟಕರತವೆಂಬ ಅರೋಗ್ಯಕರ ಲೈಂಗಿಕ ಭಂಗಿಯ ( ಔಪರಿಷ್ಟಕರತ ಎಂಬುದು ಸಂಭೋಗದ ಮೊದಲು ಗಂಡು ಹೆಣ್ಣು ತೊಡಗುವ ಮುಖರತಿಯ ಅಂದರೆ oral sex ಒಂದು ಭಂಗಿ) ಒಂದು ಚಿತ್ರವನ್ನೆ.

 

ಮೇಲಿನ ಎಲ್ಲ ಪ್ರಸಂಗಗಳಲ್ಲಿ ನಮಗೆ ಕಾಣುವ  ಹರಿಹರನ ಸೌಂದರ್ಯ ಪ್ರಜ್ಞೆ ಮತ್ತು ರಸಿಕತೆಯನ್ನು ನೋಡಿದರೆ ನಮ್ಮ ವಿಮರ್ಶಕರು ಹರಿಹರನನ್ನು ಭಕ್ತಿ ಕವಿಯೆಂಬ ಗೂಟಕ್ಕೆ ಕಟ್ಟಿಹಾಕಿದ್ದಾರೆ ಎನ್ನಿಸುತ್ತದೆ.