ಭೈರಪ್ಪನವರ ಧರ್ಮಶಾಸ್ತ್ರ ಮತ್ತು ಆಳುವವರ ಪರಂಪರೆ

ಭೈರಪ್ಪನವರ ಧರ್ಮಶಾಸ್ತ್ರ ಮತ್ತು ಆಳುವವರ ಪರಂಪರೆ

ಒಂದೆಡೆ ಸ್ಪರ್ಶಕ್ಕಾಗಿ ಹಾತೊರೆಯುವ ಚಪಲ ಮತ್ತೊಂದೆಡೆ ಸ್ಪರ್ಶವನ್ನೇ ಪಾತಕಿ ಕೃತ್ಯ ಎಂದು ಭಾವಿಸುವ ಅಹಮಿಕೆ ಎರಡನ್ನೂ ಸಾರ್ವಕಾಲಿಕವಾಗಿ ಕಾಪಾಡುವ ಸೂಕ್ಷ್ಮ ವಿಕೃತಿಯನ್ನು ಭೈರಪ್ಪನವರ ಮಾತುಗಳಲ್ಲಿ ಕಾಣಬಹುದು.  ಪತ್ನಿ ಮಾತ್ರವೇ ಅಲ್ಲ, ಮಹಿಳೆ ಸದಾ ಪುರುಷ ಸಮಾಜದ ಅಡಿಯಾಳಾಗಿ ಇರಬೇಕೆಂದು ಬಯಸುವ ಧರ್ಮಶಾಸ್ತ್ರವನ್ನು ಬಯಸುವ ಮನಸಿಗೆ, ಪಿ ವಿ ಕಾಣೆಯವರ ಧರ್ಮಶಾಸ್ತ್ರದ ಇತಿಹಾಸ ಎನ್ನುವ ಗ್ರಂಥ ಏಕೆ ನೆನಪಾಯಿತೋ ? ಅದು ಸಂಶೋಧನಾ ಗ್ರಂಥ, ನೀತಿ ಸಂಹಿತೆ ಅಲ್ಲ ಎನ್ನುವುದನ್ನು ಭೈರಪ್ಪನವರು ಗಮನಿಸಬೇಕು ಎನ್ನುತ್ತಾರೆ ನಾ.ದಿವಾಕರ.

 

ಭಾರತದ ಸಂವಿಧಾನದಲ್ಲಿ ಪರಂಪರೆ ಇಲ್ಲ ಎಂದು ಖ್ಯಾತ ಲೇಖಕರಾದ ಎಸ್ ಎಲ್ ಭೈರಪ್ಪ ಹೇಳಿದ್ದಾರೆ. ಪರಂಪರೆ ಎನ್ನುವುದು ಏಕಮುಖಿ ವಿದ್ಯಮಾನವಲ್ಲ ಎನ್ನುವುದನ್ನು ಭೈರಪ್ಪನವರಿಗೆ ಯಾರು ಹೇಳಬೇಕಿಲ್ಲ ಎನಿಸುತ್ತದೆ. ಆದರೆ ಅವರ ಮಾತಿನಲ್ಲಿ ಅಡಗಿರುವ ಪರಂಪರೆ ವಸ್ತುಶಃ ಏಕಮುಖಿಯಾಗಿರಲು ಸಾಧ್ಯ. ಧರ್ಮಶಾಸ್ತ್ರವೇ ನಮ್ಮ ಸಂವಿಧಾನ ಎಂಬ ಅವರ ಮತ್ತೊಂದು ಹೇಳಿಕೆಯಲ್ಲಿ ಈ ಪರಂಪರೆ ಅನಾವರಣಗೊಳ್ಳುತ್ತದೆ. ಅದೇಕೋ ಪಿ ವಿ ಕಾಣೆಯವರನ್ನು ಎಳೆದು ತಂದು ತಮ್ಮ ವ್ಯಾಖ್ಯಾನಗಳಿಗೆ ಚಿಮ್ಮುಹಲಗೆಯಾಗಿ ಭೈರಪ್ಪನವರು ಬಳಸಿಕೊಂಡಿದ್ದಾರೆ. ಇರಲಿ ಧರ್ಮಶಾಸ್ತ್ರಗಳೇ ನಮ್ಮ ಸಂವಿಧಾನವಾಗಬೇಕಿತ್ತು, ಬ್ರಿಟೀಷರೂ ಇದಕ್ಕೆ ಸಿದ್ಧವಾಗಿದ್ದರು ಆದರೆ ಸ್ವತಂತ್ರ ಭಾರತದಲ್ಲಿ ಇದು ಸಾಧ್ಯವಾಗಲಿಲ್ಲ ಎನ್ನುವ ವಿಷಾದವನ್ನು ಅವರ ಮಾತಿನಲ್ಲಿ ಗಮನಿಸಲು ಸಾಧ್ಯ. ಭಾರತದ ಸಂವಿಧಾನದ ಮೂಲ ತತ್ವಗಳಾದ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ, ಸಾಮಾಜಿಕ ಘನತೆ ಮತ್ತು ಜಾತ್ಯತೀತತೆಯನ್ನು ಒಪ್ಪದ ವೈದಿಕ ಮನಸುಗಳಿಗೆ ಭೈರಪ್ಪ ಸ್ಪಂದಿಸಿರುವುದು ಅವರ ಭಾಷಣದಲ್ಲಿ ಸ್ಪಷ್ಟವಾಗಿ ಕಾಣುತ್ತದೆ.

ಪಾಪ, ಪಿ ವಿ ಕಾಣೆಯವರನ್ನು ಕೆಲ ಕಾಲ ಮರೆಯೋಣ. ಏಕೆಂದರೆ ಅವರು ಹಲವು ಸಂಪುಟಗಳಲ್ಲಿ ರಚಿಸಿರುವ ಧರ್ಮಶಾಸ್ತ್ರದ ಇತಿಹಾಸ ಭಾರತೀಯ ಧರ್ಮಶಾಸ್ತ್ರದ ಸ್ಥೂಲ ಪರಿಚಯ ಮತ್ತು ವಿಶ್ಲೇಷಣೆಯನ್ನೊಳಗೊಂಡಿದೆ.  ಸಂಘಪರಿವಾರ ಪ್ರತಿಪಾದಿಸುವ ಮತ್ತು  ವೈಭವೀಕರಿಸುವ ಹಿಂದೂ ಧರ್ಮವನ್ನು ಭಾರತೀಯ ಧರ್ಮಶಾಸ್ತ್ರಗಳೊಂದಿಗೆ ನೇರವಾಗಿ ತಳುಕು ಹಾಕುವುದು ಬೇಕಿಲ್ಲ. ಆದರೆ ಭೈರಪ್ಪನವರಿಗೆ ಇದು ಬೇಕಿದೆ. ಭಾರತೀಯ ಸಂಸ್ಕೃತಿ ಎಂದರೆ ಹಿಂದೂ ಸಂಸ್ಕೃತಿ, ಧರ್ಮಶಾಸ್ತ್ರ ಎಂದರೆ ಹಿಂದೂ ಧರ್ಮಶಾಸ್ತ್ರ ಎಂದು ವಾದಿಸುವ ಮೂಲಕ ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಪರಿವರ್ತಿಸುವ ಬೃಹತ್ ಯೋಜನೆಗೆ ಸಾರಸ್ವತ ಲೋಕದ ಪ್ರತಿನಿಧಿಯಾಗಿ ಭೈರಪ್ಪನವರು ಕಾಣುತ್ತಾರೆ. ಇರಲಿ, ಅವರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗೌರವಿಸುತ್ತಲೇ ಅವರ ಕೆಲವು ಮಾತುಗಳನ್ನು ಗಮನಿಸಬೇಕಾಗುತ್ತದೆ. ಭಾರತದ ಸಂವಿಧಾನದಲ್ಲಿ ಪರಂಪರೆ ಇಲ್ಲ ಎಂದು ಹೇಳುವ ಮೂಲಕ ಭೈರಪ್ಪನವರು ಏನನ್ನು ಹೇಳಹೊರಟಿದ್ದಾರೆ. ಪರಂಪರೆ ಎನ್ನುವುದು ಒಂದು ನಿರ್ದಿಷ್ಟ ಚೌಕಟ್ಟಿನೊಳಗೆ ಬಂಧಿಸಲ್ಪಟ್ಟಿದೆಯೇ. ಭಾರತದಲ್ಲಿ ಹಲವಾರು ಪರಂಪರೆಗಳಿವೆ. ಹಿಂದೂ, ಬೌದ್ಧ, ಜೈನ, ಶರಣ, ಲೋಕಾಯತ ಇತ್ಯಾದಿ. ಸಂವಿಧಾನದಲ್ಲಿ ಯಾವ ಪರಂಪರೆ ಇಲ್ಲ ?

ಇದನ್ನು ಭೈರಪ್ಪನವರು ಹೇಳುವುದಿಲ್ಲ. ಅವರ ಕಾದಂಬರಿಗಳು ಹೇಳುತ್ತವೆ ಎನ್ನುವುದು ಬೇರೆ ವಿಚಾರ. ಆದರೆ ಧರ್ಮಶಾಸ್ತ್ರವೇ ನಮ್ಮ ಸಂವಿಧಾನ ಎಂದು ಸಂಘ ಪರಿವಾರದ ಶಂಖನಾದಕ್ಕೆ ತಲೆದೂಗುವ ಮೂಲಕ ಭೈರಪ್ಪನವರು ಹಿಂದುತ್ವ ರಾಜಕಾರಣದ ಸಾಹಿತ್ಯಕ ಅಭಿವ್ಯಕ್ತಿಯಾಗಿ ಸ್ವತಃ ಅನಾವರಣಗೊಂಡಿದ್ದಾರೆ.  ನಿಜ, ಭಾರತದ ಸಂವಿಧಾನದಲ್ಲಿ ಇವರು ಬಯಸುವ ಪರಂಪರೆ ಇಲ್ಲ. ಆದರೆ ಶತಮಾನಗಳಿಂದ ಭಾರತದ ನೆಲ ಸಂಸ್ಕೃತಿ ಮತ್ತು ಜನ ಸಂಸ್ಕೃತಿ ಅನುಸರಿಸಿಕೊಂಡು ಬಂದಿರುವ ಮಾನವೀಯ ಪರಂಪರೆ ಖಂಡಿತವಾಗಿಯೂ ಇದೆ. ಹಾಗಾಗಿಯೇ ಭಾರತದ ಸಂವಿಧಾನ ವಿಶ್ವದಲ್ಲೇ ಅತ್ಯಂತ ಶ್ರೇಷ್ಟ ಎಂದು ಪ್ರಸಿದ್ಧಿಯಾಗಿದೆ. ಅಂದ ಮಾತ್ರಕ್ಕೆ ಸಂವಿಧಾನ ಪ್ರಶ್ನಾತೀತವೂ, ದೈವೀಕವೂ ಎಂದು ಭಾವಿಸಬೇಕಿಲ್ಲ. ಕಾಲದಿಂದ ಕಾಲಕ್ಕೆ ಸಾಮಾಜಿಕ ಅಭಿವೃದ್ಧಿ ಮತ್ತು ಬೌದ್ಧಿಕ ಪ್ರಗತಿಗೆ ಅನುಗುಣವಾಗಿ ಸಂವಿಧಾನವನ್ನು ತಿದ್ದುಪಡಿ ಮಾಡುವ ಅವಕಾಶವೂ ಇದೆ. ಹಾಗಾಗಿಯೇ ಮಹಿಳೆಯರು ಇಂದು ಕೊಂಚ ಉಸಿರಾಡಲು ಸಾಧ್ಯವಾಗಿದೆ. ಭೈರಪ್ಪನವರ ಸಮಸ್ಯೆ ಎಂದರೆ ಈ ಬೆಳವಣಿಗೆ ಅವರಿಗೆ ಅಪಾಯಕಾರಿಯಾಗಿ ಕಾಣುತ್ತದೆ. ಮಹಿಳಾ ಸ್ವಾತಂತ್ರ್ಯ ಎಂದ ಕೂಡಲೇ ಪಾಶ್ಚಾತ್ಯ ಸಂಸ್ಕೃತಿ ಯ ಹೇರಿಕೆ ಎಂದು ಬೊಬ್ಬಿಡುತ್ತಾ, ಭಾರತೀಯ ಸಂಸ್ಕೃತಿ ಯೇ ನಾಶವಾಗಿಹೋಗುತ್ತದೆ ಎನ್ನುವ ಧೋರಣೆಯನ್ನು ಭೈರಪ್ಪನವರ ಮಾತುಗಳಲ್ಲಿ , ಸೂಚ್ಯವಾಗಿ ಕಾಣಬಹುದು.

ಅನುಮತಿ ಇಲ್ಲದೆ ಪತ್ನಿಯೊಡನೆ ಸಂಪರ್ಕ ಬೆಳೆಸುವುದನ್ನು ಅತ್ಯಾಚಾರ ಎಂದು ಪರಿಗಣಿಸಬೇಕು ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ. ಈ ನಿಟ್ಟಿನಲ್ಲಿ ಕಾನೂನು ತಿದ್ದುಪಡಿ ಮಾಡುವಂತೆಯೂ ಕೇಂದ್ರ ಸರ್ಕಾರಕ್ಕೆ ಆದೇಶಿಸಿದೆ. ಇಂತಹ ಕಾನೂನು ಜಾರಿಯಾದರೆ ಪತ್ನಿಯನ್ನು ಮುಟ್ಟಲು ಪುಸ್ತಕದಲ್ಲಿ ಸಹಿ ಮಾಡಬೇಕಾದ ಪರಿಸ್ಥಿತಿ ಎದುರಾಗುತ್ತದೆ ಎಂಬ ಆತಂಕವನ್ನು ಮಾನ್ಯರು ವ್ಯಕ್ತಪಡಿಸಿದ್ದಾರೆ. ಈ ಆತಂಕ ಏಕೆ ? ಏಕೆಂದರೆ ಭೈರಪ್ಪನವರು ಬಯಸುವ ಧರ್ಮಶಾಸ್ತ್ರ ಎನ್ನುವ ಸಂವಿಧಾನದಲ್ಲಿ ಕೆಲವರನ್ನು ಮುಟ್ಟುವುದು ಅಪರಾಧ ಇನ್ನು ಕೆಲವರನ್ನು ಮುಟ್ಟುವುದು ಮತ್ತು ಮನಬಂದಂತೆ ಬಳಸಿಕೊಳ್ಳುವುದು ಆಜನ್ಮ ಸಿದ್ಧ ಹಕ್ಕು ಅಲ್ಲವೇ ? ಒಂದೆಡೆ ಸ್ಪರ್ಶಕ್ಕಾಗಿ ಹಾತೊರೆಯುವ ಚಪಲ ಮತ್ತೊಂದೆಡೆ ಸ್ಪರ್ಶವನ್ನೇ ಪಾತಕಿ ಕೃತ್ಯ ಎಂದು ಭಾವಿಸುವ ಅಹಮಿಕೆ ಈ ಎರಡನ್ನೂ ಸಾರ್ವಕಾಲಿಕವಾಗಿ ಕಾಪಾಡುವ ಸೂಕ್ಷ್ಮ ವಿಕೃತಿಯನ್ನು ಭೈರಪ್ಪನವರ ಮಾತುಗಳಲ್ಲಿ ಕಾಣಬಹುದು.  ಪತ್ನಿ ಮಾತ್ರವೇ ಅಲ್ಲ, ಮಹಿಳೆ ಸದಾ ಪುರುಷ ಸಮಾಜದ ಅಡಿಯಾಳಾಗಿ ಇರಬೇಕೆಂದು ಬಯಸುವ ಧರ್ಮಶಾಸ್ತ್ರವನ್ನು ಬಯಸುವ ಮನಸಿಗೆ, ಪಿ ವಿ ಕಾಣೆಯವರ ಧರ್ಮಶಾಸ್ತ್ರದ ಇತಿಹಾಸ ಎನ್ನುವ ಗ್ರಂಥ ಏಕೆ ನೆನಪಾಯಿತೋ ? ಅದು ಸಂಶೋಧನಾ ಗ್ರಂಥ, ನೀತಿ ಸಂಹಿತೆ ಅಲ್ಲ ಎನ್ನುವುದನ್ನು ಭೈರಪ್ಪನವರು ಗಮನಿಸಬೇಕು.

ವಾಸ್ತವ ಎಂದರೆ ಭೈರಪ್ಪನವರು ಪ್ರಸ್ತಾಪಿಸಲು ಬಯಸುವುದು ಮನುಸ್ಮೃತಿಯನ್ನು. ಅಂಬೇಡ್ಕರರ ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಪರಿಕಲ್ಪನೆಯಲ್ಲಿ ಅರಳಿರುವ ಭಾರತದ ಸಂವಿಧಾನ ಮಾನವ ಘನತೆಯನ್ನು ಎತ್ತಿಹಿಡಿಯಲು ಬಯಸುತ್ತದೆ. ಮನುಸ್ಮೃತಿ ನ್ಯಾಯ ಮತ್ತು ಸಮಾನತೆ ಎನ್ನುವ ಉದಾತ್ತ ಚಿಂತನೆಗಳನ್ನು ವರ್ಗೀಕರಿಸಲು ಯತ್ನಿಸುತ್ತದೆ. ಹಾಗಾಗಿಯೇ ಮನುಸ್ಮೃತಿಯ ಅನುಯಾಯಿಗಳಿಗೆ ಶಬರಿಮಲೆ ದೇವಾಲಯಕ್ಕೆ ಋತುಮತಿಯಾದ ಮಹಿಳೆ ಪ್ರವೇಶಿಸುವುದು ಮಹಾನ್ ಅಪರಾಧವಾಗಿ ಕಾಣುತ್ತದೆ. ಗರ್ಭಗುಡಿ ಪ್ರವೇಶಿಸಲು ಹೇಗೆ ನಿರ್ಬಂಧಗಳಿರುವುದೋ ಹಾಗೆಯೇ ದೇವಾಲಯ ಪ್ರವೇಶಿಸಲೂ ನಿರ್ಬಂಧಗಳಿವೆ ಅಲ್ಲವೇ ? ಶಬರಿಮಲೆ ವಿವಾದದಲ್ಲಿ ಗಮನಿಸಬೇಕಾದ್ದು ಈ ಸ್ಪೃಶ್ಯ ಮತ್ತು ಅಸ್ಪೃಶ್ಯರ ನಡುವೆ ನಮ್ಮ ಸಮಾಜ ಮತ್ತು ಸಂಸ್ಕೃತಿಲ್ಲಿ ಇರುವ ತಾರತಮ್ಯಗಳನ್ನು. ಇಲ್ಲಿ ಮಹಿಳೆ ಅಸ್ಪೃಶ್ಯಳಾಗುತ್ತಾಳೆ. ಜಾತಿ ಗೌಣವಾಗುತ್ತದೆ. ಮತ್ತೊಂದೆಡೆ ಜಾತಿ ಮುನ್ನೆಲೆಗೆ ಬರುತ್ತದೆ, ಮಹಿಳೆ ಗೌಣವಾಗುತ್ತಾಳೆ. ಈ  ಹೀನ ಸಂಸ್ಕೃತಿಯನ್ನೇ ಭಾರತೀಯ ಸಂಸ್ಕೃತಿ ಎಂದು ಬಿಂಬಿಸುವ ಯತ್ನವನ್ನು ಮನು ತನ್ನ ಸ್ಮೃತಿಗಳ ಮೂಲಕ ಮಾಡಿದ್ದಾನೆ, ಆಧುನಿಕ ಮನುವಾದಿಗಳು ಇದನ್ನೇ ಪುಷ್ಟೀಕರಿಸುತ್ತಿದ್ದಾರೆ.

ಭೈರಪ್ಪನವರು ಹೊರಸೂಸಿರುವ ಈ ಮನಸ್ಥಿತಿಯನ್ನು ಭಾರತದ ಆಳುವ ವರ್ಗಗಳಲ್ಲೂ ಕಾಣಬಹುದು, ಪ್ರಭುತ್ವದ ಸಂರಚನೆಯಲ್ಲೂ ಕಾಣಬಹುದು ಮತ್ತು ಗೋಸುಂಬೆ ರಾಜಕಾರಣಿಗಳಲ್ಲೂ ಕಾಣಬಹುದು. ಅಷ್ಟೇಕೆ ನಿರ್ಭಯಾ, ಸೌಜನ್ಯ, ಕಥುವಾ, ಧಾನೇಶ್ವರಿ ಮುಂತಾದ ಪ್ರಕರಣಗಳನ್ನು ಗಮನಿಸಿದಾಗ ಮಠಾಧೀಶರಲ್ಲೂ ಕಾಣಬಹುದು. ಮಹಿಳೆಗೆ ತನ್ನದೇ ಆದ ಅಸ್ತಿತ್ವ, ಅಸ್ಮಿತೆ ಮತ್ತು ಘನತೆ ಇದೆ ಎಂದು ಒಪ್ಪಲು ಈ ಮನಸುಗಳು ಹಿಂಜರಿಯುತ್ತವೆ.  ಹಾಗಾಗಿಯೇ ಋತುಮತಿಯಾಗುವ ಮಹಿಳೆಗೆ ಅಯ್ಯಪ್ಪನ ದರ್ಶನ ಲಭ್ಯವಿರುವುದಿಲ್ಲ ಆದರೆ ಕಾಮುಕರ ಸ್ಪರ್ಶಕ್ಕೆ ಅವರೇನೂ ಹೊರತಾಗಿರುವುದಿಲ್ಲ. ಮಹಿಳೆಯರ ಮೇಲಿನ ಅತ್ಯಾಚಾರ ಹೆಚ್ಚಾಗಲು ಪಾಶ್ಚಾತ್ಯ ಸಂಸ್ಕೃತಿ ಮತ್ತು ಉಡುಪುಗಳೇ ಕಾರಣ ಎಂದು ಹೇಳುವವರಿಗೆ ಅತ್ಯಾಚಾರಕ್ಕೊಳಗಾದ ಕಥುವಾದ ಹಸುಳೆ ಹೇಗೆ ಕಾಣಿಸುತ್ತದೋ ? ಭೈರಪ್ಪನವರು ವೈಭವೀಕರಿಸುವ ಧರ್ಮಶಾಸ್ತ್ರದಲ್ಲಿ (ಪಿ ವಿ ಕಾಣೆಯವರ ಗ್ರಂಥ ಅಲ್ಲ) ಮಹಿಳೆ ಕೆಲವೊಮ್ಮೆ ಸ್ಪರ್ಶಿಸಲೇಬೇಕಾದ, ಸ್ಪರ್ಶವನ್ನು ಧಿಕ್ಕರಿಸಲಾಗದ ಭೋಗದ ವಸ್ತುವಾಗುತ್ತಾಳೆ ಇನ್ನು ಕೆಲವು ಸಂದರ್ಭಗಳಲ್ಲಿ ಸಂಪೂರ್ಣ ಅಸ್ಪೃಶ್ಯಳಾಗುತ್ತಾಳೆ. ವೈದಿಕ ಸಂಪ್ರದಾಯದ ಆಚರಣೆಗಳಲ್ಲಿ ಇದನ್ನು ಕಾಣಬಹುದು. ಆದರೆ ಪುರುಷ ಸಮಾಜದ ಕಾಮುಕತೆಗೆ ಮಹಿಳೆ, ಯಾವುದೇ ವಯಸ್ಸಿನವಳಾದರೂ, ಯಾವುದೇ ಸ್ಥಿತಿಯಲ್ಲಿದ್ದರೂ, ಅಸ್ಪೃಶ್ಯಳಾಗುವುದಿಲ್ಲ. ಸರ್ವೋಚ್ಚ ನ್ಯಾಯಾಲಯದ ತೀರ್ಪು ಈ ಪುರುಷಪ್ರಧಾನ ಮನಸ್ಥಿತಿಯನ್ನು ಧಿಕ್ಕರಿಸುವ ಒಂದು ಆಯಾಮವಷ್ಟೆ. ಹಾಗಾಗಿಯೇ ಇಷ್ಟೊಂದು ಆಕ್ರೋಶ , ಹತಾಶೆ ಮತ್ತು ಹಪಹಪಿ.

ನಮ್ಮ ಸಮಾಜ, ದಾಂಪತ್ಯ ಮತ್ತು ಸಂಸಾರವನ್ನು ಒಡೆದು ಭೀತಿ ಹುಟ್ಟಿಸುವ ಹುನ್ನಾರಗಳಿವು ಎಂಬ ಆತಂಕ ವ್ಯಕ್ತಪಡಿಸುವ ಭೈರಪ್ಪನವರು ಮಾನವ ಅಭ್ಯುದಯದ ಇತಿಹಾಸವನ್ನೊಮ್ಮೆ ಅವಲೋಕನ ಮಾಡಲಿ. ಒಡೆದು ಕಟ್ಟುವುದರ ಮೂಲಕವೇ ಸಮಾಜ ಇಂದು ಪ್ರಬುದ್ಧತೆಯತ್ತ ಮುನ್ನಡೆದಿದೆ. ಆದರೆ ಭಾರತೀಯ ಸಮಾಜ ಇನ್ನೂ ಪ್ರಬುದ್ಧತೆಯನ್ನು ಸಾಧಿಸಿಲ್ಲ. ಹೌದು ಸ್ಥಾಪಿತ ವ್ಯವಸ್ಥೆಯ ಸುಭದ್ರ ಕೋಟೆಗಳನ್ನು ಒಡೆದು ಹೊಸ ಜಗತ್ತನ್ನು ಕಟ್ಟಲು ಸಮಾಜ ಮುನ್ನಡೆಯಲೇಬೇಕಿದೆ. ಇದು ಇಂದಿನ ವಿದ್ಯಮಾನವಲ್ಲ. ಭಾರತದ ಇತಿಹಾಸದಲ್ಲೇ ಬುದ್ಧ, ಬಸವ, ಶರಣರು, ಲೋಕಾಯತರು ಶತಮಾನಗಳ ಹಿಂದೆ ಇದಕ್ಕೆ ಅಡಿಪಾಯ ಹಾಕಿದ್ದಾರೆ. ಭೈರಪ್ಪನವರು ವೈಭವೀಕರಿಸುವ ಧರ್ಮಶಾಸ್ತ್ರಗಳಲ್ಲಿ ಅಡಗಿರುವ ಸೂಕ್ಷ್ಮ ತಂತುಗಳನ್ನು ಈ ಚಿಂತನೆಗಳು ಅಲುಗಾಡಿಸಿವೆ ಹಾಗೆಯೇ ಹೊಸ ಮಾರ್ಗಗಳನ್ನೂ ನಿರ್ಮಿಸಿವೆ. ಈ ಹೊಸ ಮಾರ್ಗಗಳ ಮುಂದುವರಿಕೆಯಾಗಿ ಭಾರತದ ಸಂವಿಧಾನ ರೂಪುಗೊಂಡಿದೆ. ನಿಜ, ಅಂಬೇಡ್ಕರ್ ಅವರ ಸಾಮಾಜಿಕ ಚಿಂತನೆಗಳು ಮತ್ತು ಸಂವೇದನಾಶೀಲ ಧೋರಣೆ ಭಾರತದಲ್ಲಿ ಬೇರೂರಿದ್ದ ಒಂದು ವಿಕೃತ ಸಂಸ್ಕøತಿಯ ಕೋಟೆಯನ್ನು ಧ್ವಂಸ ಮಾಡಿದೆ, ಒಡೆದು ಪುನಃ ಕಟ್ಟಲು ಅವಕಾಶ ಒದಗಿಸಿದೆ. ಈ ಅವಕಾಶವನ್ನು ವ್ಯಾಟಿಕನ್ ಮೂಲದ್ದು ಎಂದು ಹೇಳುವುದು ಅಪ್ರಬುದ್ಧತೆ ಎಂದಷ್ಟೇ ಹೇಳಬಹುದು.

ಭಾರತದ ಆಳುವವರ ಪರಂಪರೆ ಸಂಪೂರ್ಣವಾಗಿ ಸಂವಿಧಾನಬದ್ಧವಾಗಿಲ್ಲ ಎನ್ನುವುದನ್ನೂ ಈ ಸಂದರ್ಭದಲ್ಲಿ ಗಮನಿಸಬೇಕಿದೆ. ಆದರೂ ದಲಿತರು, ಮಹಿಳೆಯರು, ಶೋಷಿತ ಸಮುದಾಯಗಳು, ಅವಕಾಶವಂಚಿತರು ಮತ್ತು ಅಂಚಿಗೆ ತಳ್ಳಲ್ಪಟ್ಟ ಸಮುದಾಯಗಳ ಹಕ್ಕೊತ್ತಾಯಗಳಿಗೆ ಮಣಿದು ಕೆಲವು ಚಾರಿತ್ರಿಕ ಬದಲಾವಣೆಗಳಿಗೆ ಮುನ್ನುಡಿ ಹಾಡುತ್ತಿರುವುದನ್ನು ಗಮನಿಸಬಹುದು.  ಈ ಹಕ್ಕೊತ್ತಾಯಗಳೇ ಧರ್ಮಶಾಸ್ತ್ರಗಳ ಅಡಿಪಾಯವನ್ನು ಅಲುಗಾಡಿಸುತ್ತಿದೆ. ಹಾಗಾಗಿಯೇ ಶಬರಿಮಲೆಯ ಮೂಲಕ, ಊನ ಘಟನೆಯ ಮೂಲಕ, ಕಂಬಾಲಪಲ್ಲಿಯ ಮೂಲಕ, ಖೈರ್ಲಾಂಜಿಯ ಮೂಲಕ, ದಾದ್ರಿಯ ಮೂಲಕ, ಕಥುವಾ ಮೂಲಕ, ನಿರ್ಭಯಾಳ , ಧಾನೇಶ್ವರಿಯ ಮೂಲಕ ಈ ದೇಶದ ಸಾಮಾಜಿಕ ವ್ಯವಸ್ಥೆಯನ್ನು ಮತ್ತು ಸಾಂಸ್ಕೃತಿಕ ಭೂಮಿಕೆಯನ್ನು ಆವರಿಸಿರುವ ಪಿತೃಪ್ರಧಾನ ಮನಸ್ಥಿತಿಯನ್ನು ಪ್ರದರ್ಶಿಸಲಾಗುತ್ತಿದೆ. ಈ  ವೈರುಧ್ಯಗಳ ವಿರುದ್ಧ ದನಿ ಎತ್ತುವುದು ಭಾರತೀಯ ಸಂಸ್ಕøತಿಗೆ ಅಪಚಾರ ಎಸಗಿದಂತೆ ಎಂದರೆ ಅಂತಹ ಸಂಸ್ಕೃತಿಯನ್ನು ಇತಿಹಾಸದ ಕಸದಬುಟ್ಟಿಗೆ ಎಸೆಯುವುದು ನಾಗರಿಕ ಸಮಾಜದ ಕರ್ತವ್ಯವಾಗಬೇಕಲ್ಲವೇ ?

ಈ ಕರ್ತವ್ಯವನ್ನು ಭಾರತದ ನಾಗರಿಕ ಸಮಾಜ ಎಲ್ಲಿ ನಿರ್ವಹಿಸಿಬಿಡುತ್ತದೆಯೋ ಎಂಬ ಆತಂಕವನ್ನು ಇತ್ತೀಚಿನ ದಿನಗಳಲ್ಲಿ ಕಾಣುತ್ತಿದ್ದೇವೆ. ಹಾಗಾಗಿಯೇ ಪ್ರಧಾನಿ ಮೋದಿಯವರೂ ಸಾಧ್ವಿ ಪ್ರಜ್ಞಾ ಸಿಂಗ್ ಹಿಂದೂ ಅಸ್ಮಿತೆಯ ಸಂಕೇತ ಎಂದು ಹೇಳುತ್ತಾರೆ. ಏಕೆಂದರೆ ಸ್ಥಾಪಿತ ವ್ಯವಸ್ಥೆಯ ಮನುಕುಲ ವಿರೋಧಿ ಭದ್ರಕೋಟೆಗಳನ್ನು ಧ್ವಂಸಗೊಳಿಸಿ ಹೊಸ ಮಾನವೀಯ ಸಮಾಜವನ್ನು ನಿರ್ಮಿಸುವ ಮನಸುಗಳಿಗೆ ಧರ್ಮಶಾಸ್ತ್ರಗಳ ಅಮಲು ಏರಿಸುವ ಕೆಲಸವನ್ನು ಸಾಧ್ವಿಯಂಥವರು ನಿಭಾಯಿಸುತ್ತಾರೆ. ಈಗಾಗಲೇ ಮನುಸ್ಮೃತಿಯ ಬೀಜಗಳನ್ನು ಶೋಷಿತರಲ್ಲಿ ಬಿತ್ತಲಾಗಿದೆ. ಇದು ಚಿಗುರಿ ವಿಕಸಿಸುವಂತೆ ಕಾಪಾಡಲು ಕಾವಲುಗಾರರ ಪಡೆ ಸಿದ್ಧವಾಗಿದೆ. ಈ ಕೋಟೆ ಎಲ್ಲಿ ಛಿದ್ರವಾಗುವುದೋ ಎಂಬ ಭೀತಿ ಧರ್ಮಶಾಸ್ತ್ರದ ಪ್ರತಿಪಾದಕರನ್ನು ಕಾಡುತ್ತಿದೆ. ಇಲ್ಲಿ ಮಹಿಳೆ ನಿಮಿತ್ತ ಮಾತ್ರಳಾಗಿ ಸಂಕಥನದ ಒಂದು ಭಾಗವಾಗುತ್ತಾಳೆ. ಭೈರಪ್ಪನವರ ಉಪನ್ಯಾಸದ ತಿರುಳನ್ನು ಇಲ್ಲಿ ಗ್ರಹಿಸಬಹುದು.