ನಂಬಿಕೆ ಎಂದರೆ ನಂಬಿಕೆ.

ಬಿಸಿಲಿನ ಬೇಗೆ ತಾಳಲಾರದೆ ಹೇಗೆ ವಿಶ್ರಾಂತಿಗಾಗಿ ಮರದ ನೆರಳನ್ನು ಹುಡುಕಿಕೊಂಡು ಹೋಗುತ್ತೇವೆಯೋ, ಹಾಗೆಯೆ   ಒಂದು, ಸಮಾಧಾನಕ್ಕಾಗಿ ಒಂದು ರಿಪ್ರೆಶ್ ನೆಸ್ ಗಾಗಿ ದೇವರೆದುರು ನಿಲ್ಲಬೇಕು.ಅಷ್ಟೆ.ಜಸ್ಟ್ ನಮಗಿರುವ ಒತ್ತಡ, ನೋವನ್ನ ಇಳಿಸೋದಕ್ಕೆ ಅಷ್ಟೆ.ಇದರ ಹೊರತಾಗಿ ಇನ್ಯಾವ ಮಹಾ ಉದ್ದೇಶವಿದ್ದರೂ ಆ  ಕ್ಷಣಕ್ಕೆ ಅದು ಸುಳ್ಳೆ

ನಂಬಿಕೆ ಎಂದರೆ ನಂಬಿಕೆ.

ನೀವು ದೇವರನ್ನ ನಂಬುತ್ತೀರಾ..?

ಹೌದು ಎಂದಾದರೆ ನಿಮ್ಮದು ಯಾವ ತರಹದ ನಂಬಿಕೆ?

ಅರೆ!ಇದೆಂತ ಪ್ರಶ್ನೆ!?

ನಂಬಿಕೆ ಅಂದರೆ ನಂಬಿಕೆ. ಅದು ಯಾವ ತರಹದ್ದು ಅಂದರೆ?

ಜೀವನದಲ್ಲಿ ಏನಾಗುತ್ತೊ ಬಿಡುತ್ತೊ ನಾವಂತೂ ದೇವರನ್ನ ನಂಬಿದ್ದೇವೆ. ದಿನಾಲೂ ದೇವರ ಫೋಟೊಗೆ ಕೈ ಮುಗಿದೆ ಮನೆಯಿಂದ ಹೋರಬೀಳುತ್ತೇವೆ, ಇಲ್ಲಾ ಪ್ರತಿ ದಿನ ಗುಡಿಗೆ ಹೋಗಿ ದೇವರ ಮೂರ್ತಿಗೆ ಕೈ ಮುಗಿದೆ ಕೆಲಸ ಶುರು ಮಾಡುತ್ತೇವೆ .ಸೋಮವಾರ, ಶನಿವಾರ, ಅಮವಾಸ್ಯೆಯಂತಾ ದಿನಗಳಲ್ಲಿ ನಾನ್ ವೆಜ್ ಮುಟ್ಟುವುದಿಲ್ಲ. ವೃತ, ನಿಷ್ಠೆ, ಹಬ್ಬ, ಹರಿದಿನ ಅಂತಾ ಚಾಚೂ ತಪ್ಪದೆ  ಶೃದ್ದೆಯಿಂದ ಮಾಡ್ತೇವೆ.ವರುಷಕ್ಕೊಮ್ಮೆ ಕುಲದೇವರ ದರ್ಶನ ಮಾಡಿ, ಅಲ್ಲಿ ಏನೇನು ಮಾಡಬೇಕೊ ಅದನ್ನೆಲ್ಲ ಮಾಡಿ ಬರುತ್ತೇವೆ. ದೇವರ ಮೇಲೆ ನಂಬಿಕೆ ಇಲ್ಲದಿದ್ದರೆ ಇದೆಲ್ಲಾ ಮಾಡುತ್ತೇವೆಯೆ..?

ಆಯಿತು.

ಸರಿ.

ಆದರೆ ನಿಜಕ್ಕೂ ಇದನ್ನೆಲ್ಲಾ ದೇವರ ಮೇಲೆ ನಂಬಿಕೆ ಇದ್ದಿದ್ದರಿಂದ ಮಾಡುತ್ತಿದ್ದಿರೋ...?ಅಥವಾ ಹಿರಿಯರು ಹಿಂದಿನಿಂದಲೂ ಮಾಡಿಕೊಂಡು ಬಂದಿದಾರೆ ಅಂತಾ ಅವರ ಸಮಧಾನಕ್ಕೆ ಮಾಡ್ತಾ ಇದಿರೊ..? ಏಕೆಂದರೆ ಇವುಗಳೆಲ್ಲ ಆಚರಣೆ ಸಂಪ್ರದಾಯಗಳಾಯಿತು.ಇವು ಯಾವುದು ಕೂಡಾ ದೇವರ ಮೇಲೆ ನಿಮಗೆ ಎಷ್ಟು ನಂಬಿಕೆ ಎನ್ನುವುದಕ್ಕೆ ಸರ್ಟಿಫಿಕೆಟ್ ನೀಡುವುದಿಲ್ಲ.ಹಾಗೆನಾದರೂ ಆದಲ್ಲಿ ಅದೊಂತರಾ ಮಾರ್ಕ್ಸ್ ಕಾರ್ಡ್ ಮಾನದಂಡದಲ್ಲಿ ಒಬ್ಬ ವಿದ್ಯಾರ್ಥಿಯ  ಬುದ್ದಿಮಟ್ಟವನ್ನು ಅಳೆದ ಹಾಗೆ.ಅದರಲ್ಲಿ ಅಸಲಿಯತ್ತು ಯಾವತ್ತಿಗೂ ಸಿಗುವುದಿಲ್ಲ. ಅಂದ ಮೇಲೆ ನೀವು ದೇವರ ಮೇಲಿನ ನಂಬಿಕೆಯನ್ನು ಲೆಕ್ಕಚಾರದ ಮಾನದಂಡದಲ್ಲಿ, ಸರ್ಟಿಫಿಕೆಟ್ ನ ಚೌಕಟ್ಟಿನಲ್ಲಿ ನೋಡುತ್ತಿದ್ದೀರಿ ಎಂದಾಯಿತು.ಅಲ್ಲಿಗೆ  ದೇವರ ಜೊತೆಗೆ ನಮ್ಮ ನಿಮ್ಮದೆನಿದ್ದರೂ ವ್ಯವಹಾರಿಕ ಸಂಬಂಧ.

ಹೌದಲ್ಲವಾ...?

ಹೌದು.

ಆದರೆ ಇದನ್ನು ಯಾವತ್ತಿಗೂ ಯಾವ ಕಾರಣಕ್ಕೂ ಒಪ್ಪದ ನಾವು, ಈಗ ಮಾಡ್ತ ಇರೋದೆ ಹೆಚ್ಚು ಹಾಗೂ ಶ್ರೇಷ್ಠವಾದದ್ದು ಅನ್ನುವ ಭ್ರಮೆಯಲ್ಲಿ ಸದಾ ಇರುತ್ತೇವೆ.ಹಾಗಾಗಿ ದೇವರ ಕುರಿತಾಗಿ ಏನೇ ಮಾಡಿದರೂ ಎಲ್ಲರಿಗೂ ಕಾಣುವಂತೆ ಮಾಡುತ್ತೇವೆ.  ನಾವೇ ಸ್ವತಃ ಏನಾದರೂ ಮಾಡುತ್ತಿದ್ದರೂ ದೇವರನ್ನ ಸಾಕ್ಷಿಯಾಗಿ ಇರಿಸಿಕೊಳ್ಳುತ್ತೇವೆ.ಏಕೆಂದರೆ ನಮ್ಮ ಕೆಲಸದ ಬಗ್ಗೆ ಯಾರೇ  ಸಂಶಯ ವ್ಯಕ್ತಪಡಿಸಿದರೂ ದೇವರ ಮೇಲಿನ ಆಣೆ ಪ್ರಮಾಣ ಆ ಕ್ಷಣಕ್ಕೆ ನಮ್ಮನ್ನ ಸೇಫ್ ಮಾಡುತ್ತದೆ ಅನ್ನೊ ಭರವಸೆ. ಈ ಮೂಲಕ ದೇವರ ಮೇಲಿನ ನಮ್ಮ ನಂಬಿಕೆ ಯಾವ ಮಟ್ಟದಲ್ಲಿದೆ ಎಂದು ತೋರಿಸಿಕೊಳ್ಳುತ್ತಾ,  ನೀವು ಕೂಡಾ ಇದನ್ನ ನಂಬಬೇಕು ಅನ್ನೊ ಭಾವಾನಾತ್ಮಕವಾದ ಹೇರಿಕೆ. ಅಸಲಿಗೆ ದೇವರ ಮೇಲಿನ ನಂಬಿಕೆಗಿಂತ ಇತರರು ನಮ್ಮನ್ನ ನಂಬಲು ನಮಗೆ ದೇವರ ಜರೂರಿ ಜಾಸ್ತಿ ಇದೆ.ಹೀಗೆ ನಮ್ಮ ಮೇಲೆ ನಮಗೆನೆ ನಂಬಿಕೆ ಇಲ್ಲದಂತಹ ಸಂಧರ್ಭಗಳಲ್ಲೆಲ   ದೇವರ ಹೆಸರನ್ನ ಬಳಸಿಕೊಳ್ಳುವುದು  ಹೇಗೂ ರೂಢಿಯಾಗಿಬಿಟ್ಟಿದೆ.ಏಕೆಂದರೆ ನಮಗದು ತೀರಾ ಸುಲಭ ಹಾಗೂ ಸುರಕ್ಷಿತ ಮಾರ್ಗ..

ಇಷ್ಟೆಲ್ಲಾ ಬಣ್ಣ ಹಚ್ಚದೆ ನಾಟಕ ಮಾಡುವ ನಾವು,  ಆ ದೇವರನ್ನ ಬಿಟ್ಟೆವೆಯೆ..‌?ಅವನನ್ನು ಸೆಂಟಿಮೆಂಟಲ್ ಆಗಿ ಬ್ಲಾಕ್ ಮೇಲ್ ಮಾಡ್ತೇವೆ.'ಓ ದೇವರೇ...ನಿನ್ನನ್ನೆ ನಂಬಿದ್ದೇನೆ, ನೀನೆನಾದರೂ ಮಾಡಿ ದಾರಿ ತೋರಲೇಬೇಕು,ಅದಕ್ಕಾಗಿ ನಾನು ನಿನಗೆ ಏನು ಬೇಕಾದ್ರು ಮಾಡೊಕೆ ರೆಡಿ' ಅಂತಾ ಆಮಿಷ ತೋರೋ ಮನಸ್ಥಿತಿಯಲ್ಲಿ ಅವನನ್ನು ಕಟ್ವಿಹಾಕುತ್ತೇವೆ.ಅದಕ್ಕೆ ಸಾಕ್ಷಿಯಂಬಂತೆ ಪೂಜೆ, ಪುನಸ್ಕಾರ, ವೃತ,  ಹರಕೆಗಳನ್ನೆಲ್ಲ ಮಾಡುತ್ತಿದ್ದೇವೆ ಅಂತಾ ನಾಲ್ಕು ಜನರಿಗೆ ಕಾಣುವ ಹಾಗೆ ತೋರಿಸಿಕೊಳ್ಳುತ್ತೇವೆ. ಏಕೆಂದರೆ ನಾಳೆ ಏನಾದ್ರು ಅದರಿಂದ ಒಳ್ಳೆದು ಆದ್ರೆ, ನೋಡಿ ಇದೆಲ್ಲಾ ಮಾಡಿದ್ರಿಂದಲೇ ಒಳ್ಳೆದಾಯಿತು ಅನ್ನೊದಕ್ಕೆ !  ಹಾಗೆನೂ ಆಗದಿದ್ದಾಗ, 'ಅಯ್ಯೋ ದೇವರೆ,ನಾನು ಇಷ್ಟೆಲ್ಲಾ  ಮಾಡಿದ್ರು ನನ್ನ ಕಡೆ ನೀನ್ ಯಾಕ್ ನೋಡ್ತಾ ಇಲ್ಲಾ, ಇನ್ನೇನ್ ಮಾಡಬೇಕು ಹೇಳು'  ಅಂತಾ ಮತ್ತೆ ಅವನಿಗೆ ದುಂಬಾಲು ಬೀಳುವುದಕ್ಕೆ ! ಏಕೆ ಹೀಗೆ ಪದೆ ಪದೆ ಅವನಿಗೆ ಗಂಟು ಬೀಳುತ್ತೇವೆಂದರೆ, ಅವನು ದೇವರು.ಅವನು ನಮ್ಮಿಂದ ಏನೋ ಒಂದು ನಿರೀಕ್ಷೆ ಮಾಡುತ್ತಿದ್ದಾನೆ, ನಾವದನ್ನ ತಿಳಿದುಕೊಂಡು ಪೂರ್ಣಗೊಳಿಸಿದಲ್ಲಿ ಅವನು ನಮ್ಮ ನಿರೀಕ್ಷೆಗಳನ್ನ ಪೂರೈಸುತ್ತಾನೆ ಎನ್ನುವ ವಿಚಿತ್ರವಾದ ಲೆಕ್ಕಚಾರ.ಹಾಗಾಗಿಯೆ ಅವನನ್ನು ಅಷ್ಟು ಸುಲಭವಾಗಿ ಬಿಟ್ಟು ಬಿಡಲು ಸಾಧ್ಯವಿಲ್ಲ.ಅವನನ್ನು ಹಗುರವಾಗಿ ನೋಡುವಂತಿಲ್ಲ. ಅದು ಅಲ್ಲದೆ ಅವನ ದೆಸೆಯಿಂದ ಈ ಜಗತ್ತಿನಲ್ಲಿ ಯಾರ‍್ಯಾರೋ ಏನೇನೋ ಆಗಿ ಹೋಗಿರುವ ಉದಾಹರಣೆ ಇದೆ.ಅಂದ ಮೇಲೆ ನಮಗೂ ದೂರದಲ್ಲಿ ಏನೋ ಒಂದು ಆಸೆ.ಅವನೊಮ್ಮೆ ದೊಡ್ಡ ಮನಸ್ಸು ಮಾಡಿ ನಮ್ಮತ್ತ ದೃಷ್ಟಿ ಹಾಯಿಸಿದರೆ ಏನಾದರೂ ಜಾಕ್ ಪಾಟ್ ಹೊಡೆದರೂ ಹೊಡೆದಿತು ಅನ್ನೋ ನಿರೀಕ್ಷೆ.ಒಟ್ಟಿನಲ್ಲಿ ನಾವು ಏನೋ ಒಂದು ಆಗಬೇಕು.ಹಾಗೆ ಆಗಬೇಕಾದರೆ ಅವನನ್ನು ಒಲಿಸಿಕೋಳ್ಳಬೇಕು.ಹೀಗೆಲ್ಲಾ ಒಲಿಸಿಕೋಳ್ಳಬೇಕೆಂದರೆ ಏನೇನೋ ಮಾಡಬೇಕು.ಇಷ್ಟೆಲ್ಲಾ ಮಾಡಿ ಆದ ಮೇಲೂ ಪ್ರಯೋಜನವಾಗದಿದ್ದರೆ ಅವನನ್ನು ದೂರುವಂತಿಲ್ಲ,ಅವನ ಮೇಲೆ ನಂಬಿಕೆ ಕಳೆದು ಕೊಳ್ಳುವಂತಿಲ್ಲ.ಈ ಹಿಂದೆ ದೇವರು ದಿಂಡರು ಎಲ್ಲಾ ಡೊಂಗಿ ಅಂದಿದ್ದಕ್ಕೆ ಬೆಲೆ ತೆತ್ತ ಉದಾಹರಣೆ ಕಣ್ಮುಂದೆನೆ ಇದೆ.ಹಿರಿಯರು ಮಾಡುತ್ತಿದ್ದ ಆಚರಣೆ, ಸಂಪ್ರದಾಯಗಳನ್ನೆಲ್ಲ ಮಧ್ಯದಲ್ಲಿ ಕೈ ಬಿಟ್ಟಿದ್ದರಿಂದ ಹೀಗಾಗಿದೆ ಅಂತಾ ಜ್ಯೋತಿಷಿಗಳ್ಯಾರೋ ಹೇಳಿದ್ದು   ಬಲವಾಗಿ ತಲೆಯಲ್ಲಿ ಕೂತುಬಿಟ್ಟಿದೆ.ಹಾಗಾಗಿ ನಾವೇನೆ ದೇವರ ಕಾರ್ಯಗಳನ್ನು ಭಕ್ತಿ ಶೃದ್ದೆಯಿಂದ ಮಾಡುತ್ತಿದ್ದೇವೆ ಎಂದು ಹೇಳಿಕೊಂಡರೂ ವಾಸ್ತವದಲ್ಲಿ ಒಂಥರಾ ಭಯದಲ್ಲೆ ಮಾಡುತ್ತೇವೆ.ಹೀಗೆ ಭಯಭಕ್ತಿಯಿಂದ ಮಾಡಿದ ಮೇಲೆ ಆ ತಕ್ಷಣವೆ ಪ್ರತಿಫಲವನ್ನು ನಿರೀಕ್ಷಿಸುತ್ತೇವೆ.ಏಕೆಂದರೆ ಆ ದೇವರ ಹೆಸರಲ್ಲೆ  ಸಾಕಷ್ಟು ಹಣ, ಸಮಯವನ್ನು ಖರ್ಚು ಮಾಡಿರುತ್ತೇವೆ. 

ಎಂಬಲ್ಲಿಗೆ ನಾವು ನಂಬಿಕೊಂಡ ಆ ನಂಬಿಕೆ ಅನ್ನುವುದು ವ್ಯವಹಾರ ಅಂತಾ ಪ್ರೂವ್ ಆಯಿತು.ಅಂದರೆ ನಾವು ಪರೋಕ್ಷ ವಾಗಿ ದೇವರೊಂದಿಗೆ ಡೀಲ್ ಗೆ ಇಳಿದ ಹಾಗಾಯಿತು.ಹೋಗಲಿ, ನಾವು ನಮ್ಮದೆಂದು ನಂಬಿಕೊಂಡ ಆ ನಂಬಿಕೆಯಾದರೂ ನಮ್ಮದಾ..?ತಲೆ ತಲೆಮಾರುಗಳಿಂದ ಸಂಪ್ರದಾಯ ಆಚರಣೆಯನ್ನೆ ದೇವರ ಮೇಲಿನ ನಂಬಿಕೆ ಅನ್ನೊ ರೀತಿಯಲ್ಲಿ ಹಿರಿಯರು ನಂಬಿಕೊಂಡು  ಬಂದಿದ್ದು.ಅಂದರೆ  ಹಿರಿಯರಿಂದ ಬಂದಿದ್ದು.ಇನ್ನು ಅದು ಯಾವತ್ತಿಗೂ ದೇವರ ಮೇಲಿನ ನಂಬಿಕೆಗೆ ಸರ್ಟಿಫಿಕೆಟ್ ಆಗುವುದಿಲ್ಲ ಎಂದ ಮೇಲೆ,ಅಂತಿಮವಾಗಿ  ನಮ್ಮ ನಂಬಿಕೆಯ ನೆಲೆಗಟ್ಟಿಗೆ ಅಸ್ತಿತ್ವವೆ ಇಲ್ಲವೆಂದಾಯಿತು.

ಹಾಗಾದರೆ ನಮ್ಮ ನಂಬಿಕೆಯ ನೆಲೆಗಟ್ಟಿನ ಅಸ್ತಿತ್ವ ಇರುವುದಾದರೂ ಎಲ್ಲಿ..?

ಮತ್ತೆಲ್ಲೂ ಇಲ್ಲಾ. ಅದು ನಮ್ಮಲ್ಲೆ ಇದೆ.ಹೇಗೆ ರೋಗಿಗಳು ಇದ್ದರಷ್ಟೆ ಡಾಕ್ಟರಿಗೆ ಮಹತ್ವವಿರುತ್ತದೊ, ಹೇಗೆ ಕೇಸು  ಖೈದಿಗಳಿದ್ದರಷ್ಟೆ ಪೊಲೀಸರಿಗೆ ವಕೀಲರಿಗೆ ಕೆಲಸವಿರುತ್ತೊ, ಹಾಗೆಯೆ ಮನುಷ್ಯನೆಂಬ ಪ್ರಾಣಿ ಇರುವುದರಿಂದಲೆ ದೇವರಿಗೆ ಪ್ರಾಮುಖ್ಯತೆ ಇರುವುದು. ಸಕಲ ಜೀವರಾಶಿಗಳ ಸೃಷ್ಠಿರಕರ್ತ ದೇವರೇ ಅಂತಾ ಎಷ್ಟೆ ಹೇಳಿದರೂ,  ಮನುಷ್ಯನ ಹೊರತಾಗಿ ಬೇರಾವ ಪ್ರಾಣಿಗಳು ದೇವರನ್ನು ನಂಬುವುದಿಲ್ಲ ಅನ್ನೋದು ಕೂಡಾ ಅಷ್ಟೆ ಸತ್ಯ.ಏಕೆಂದರೆ ಅವುಗಳಿಗೆ ಅರಿವು ಅನ್ನೊದು ಇಲ್ಲಾ.  ಅಂದ ಮೇಲೆ ಮನುಷ್ಯನಿಗಷ್ಟೆ ದೇವರ ಅಗತ್ಯವಿದೆ.ಏಕೆಂದರೆ ಮನುಷ್ಯ ಭಾವನಾತ್ಮಕ ಜೀವಿ,ಕಲ್ಪನಾ ಜೀವಿ,ವಿಚಾರವಾದಿ, ಜ್ಞಾನಿ. ಅವನ ಕಷ್ಟ ,ತೋಳಲಾಟಗಳು ಏನೇ ಇದ್ದರೂ ಅದು ಅವನ ಮನಸ್ಸಿನೊಂದಿಗೆನೆ ಬಡಿದಾಡುತ್ತಿರುತ್ತದೆ.ಆ ಮನಸ್ಸಿಗೆ  ನೋವು, ಹತಾಶೆ,ಅಸಮಾಧಾನ,ಅಶಾಂತಿ,ಅತಂತ್ರತೆ  ಹೀಗೆ ಏನೇ ಅಂತಾ ಆದರೂ ಎಲ್ಲೂ ಸಮಾಧಾನ ಅಂತ ಕಾಣದಾದಾಗ, ಕೊನೆಯಲ್ಲಿ ಅವನು ಬರುವುದು ದೇವರ ಬಳಿಗೆನೆ.ಅಲ್ಲಿಯೆ ಅವನಿಗೆ ದೇವರ ಮೇಲಿನ ನಂಬಿಕೆ ಮೊದಲು ಹುಟ್ಟುವುದು, ಆದರೆ ಹಾಗೆ ಹುಟ್ಟಿದ ಆ ನಂಬಿಕೆಯ ಗಟ್ಟಿತನವೆಷ್ಟು ಹಾಗೂ ಅದು ಎಲ್ಲಿಯ ತನಕ ಅನ್ನೊದೆ  ದೊಡ್ಡ ಪ್ರಶ್ನೆ?

ಬಹುತೇಕ ಜನರ ನಂಬಿಕೆ ಅನ್ನೊದು ಇರುವ ಕಷ್ಟ ಕಳೆದು ಹೋಗುವವರೆಗೆ ಮಾತ್ರವೆ ಆಗಿರುತ್ತದೆ.ಒಂದಿಷ್ಟು ಸಮಾಧಾನ, ಖುಷಿ ಅಂತಾ ಕಂಡ ಮೇಲೆ ಅಪ್ಪಿ ತಪ್ಪಿಯೂ ಅವರಿಗೆ ದೇವರು ನೆನಪಾಗೊದಿಲ್ಲ.ಆದರೆ ನಂಬಿಕೆ ಅಂದರೆ ನಂಬಿಕೆ ಅಲ್ಲವಾ..? ಹೇಗೆ ಸಂಕಟ ಬಂದಾಗ ವೆಂಕಟ ಎನ್ನುತ್ತೆವೆಯೋ ಹಾಗೆಯೆ ಒಂದು ಸಂಭ್ರವಿದ್ದಾಗಲೂ  ವೆಂಕಟ ಅಂತಾ ಜೋರಾಗಿ ಅನ್ನಬೇಕಲ್ಲವಾ...? ಯಾಕೆ ನಾವು ಅನ್ನೊದಿಲ್ಲ? ಯಾಕೆ ಆ ವೇಳೆಯಲ್ಲಿ ದೇವರು ನಮಗೆ ನೆನಪಿಗೆ ಬರೋದಿಲ್ಲ?ಹಾಗಾದರೆ ನಮ್ಮ ನಂಬಿಕೆಯ ಅಸ್ತಿತ್ವದ ನೆಲೆಗಟ್ಟು  ಟೊಳ್ಳಾ..?

ಹೌದು, ನಮಗೆ ದೇವರು ಅನ್ನುವ ಆಪದ್ಭಾಂದವ ಆಗಾಗ ಬೇಕಾಗುವ ತಾತ್ಕಾಲಿಕ ಅಗತ್ಯತೆ. ಆದರೆ ಅವನು ಕೊಡುವ ಪರಿಹಾರವನ್ನು ಮಾತ್ರ ಶಾಶ್ವತವಾಗಿಯೆ ಬಯಸುತ್ತೇವೆ. ಅದೇ ಕಾರಣಕ್ಕೊ ಏನೊ ಚಿಕ್ಕ ಚಿಕ್ಕ ಖುಷಿ, ಸಮಾಧಾನ ಆದಾಗಲೆಲ್ಲ  ಇದೇ ಶಾಶ್ವತ ಅಂತಾ ಭ್ರಮೆಯಲ್ಲಿರುತ್ತೇವೆ. ಅದು ತಾತ್ಕಾಲಿಕ ಅಂತಾ ಗೊತ್ತಾದ ಮೇಲೆ ಏನೊ ಎಡವಟ್ಟಾಯಿತು ಅಂತಾ ತಪ್ಪಾಗಿ ತಿಳಿದು ದೇವರಿಗೆನೆ ಲಂಚ ಪರ್ಸೆಂಟೇಜ್ ಅಂತಾ ಕೊಡಲು ಹೋಗುತ್ತೇವೆ.ಅಲ್ಲಿಗೆ ದೇವರ ಮೇಲಿನ ನಮ್ಮ ಟೊಳ್ಳಾದ ನಂಬಿಕೆಯ ನೆಲೆಗಟ್ಟು ಪೂರ್ತಿಯಾಗಿ ಹಳಿ ತಪ್ಪಿ ಹೋಗಿರುತ್ತದೆ. 

ಹಾಗಾದರೆ ನಮ್ಮ ನಂಬಿಕೆಯ ನೆಲೆಗಟ್ಟು  ಹಳಿ ತಪ್ಪದಂತೆ ಆಗಲು ಏನು ಮಾಡಬೇಕು?

ಇಷ್ಟೆ, ನಮಗೆ ನಮ್ಮ ಮೇಲೆ ಗಟ್ಟಿಯಾದ ನಂಬಿಕೆ ಬರಬೇಕು. ನಾವು ನಿಜಕ್ಕೂ ದೇವರನ್ನ ನಂಬುತ್ತೆವೆ ಎಂದರೆ, ಅದು ನಮ್ಮನ್ನ ನಾವು ನಂಬುತ್ತೇವೆ ಎಂದೆ ಅರ್ಥ.ನಮಗೆ ನಮ್ಮ ಮೇಲೆ ನಂಬಿಕೆ ಇದೆ ಎಂದರೆ ಅದು ನಮ್ಮ ಮೇಲೆ ನಮಗಿರುವ ಆತ್ಮವಿಶ್ವಾಸವೆಂದೆ ಅರ್ಥ.ನೋಡಿ ಬೇಕಾದ್ರೆ.. ಆತ್ಮವಿಶ್ವಾಸವಿರುವ ಕಡೆ ಅಳುಕು ಎಂಬುದು ಇರುವುದಿಲ್ಲ ,ಕೀಳರಿಮೆಗೆ ಅವಕಾಶವಿಲ್ಲ, ಕಳವಳ ತಳಮಳದ ಸುಳಿವಿರುವುದಿಲ್ಲ , ಆತ್ಮವಿಶ್ವಾಸ ಇರುವ ಕಡೆ ಗೊಂದಲಕ್ಕೆ ಜಾಗವಿಲ್ಲ, ಅಸ್ಪಷ್ಟತೆಗೆ ಆಸ್ಪದವಿಲ್ಲ, ಅಡ್ಡ ಯೋಚನೆಗಳಂತೂ ಬರುವುದೆ ಇಲ್ಲಾ, ಅಂದ ಮೇಲೆ ವಾಮಮಾರ್ಗ ಒಳಮಾರ್ಗಗಳೆಂಬ ದಾರಿಗಳಿಲ್ಲ ,ಎಲ್ಲಕ್ಕಿಂತ ಹೆಚ್ಚಾಗಿ ಆತ್ಮವಿಶ್ವಾಸವಿರುವ ಕಡೆ ಭಯ ಎನ್ನುವ ಶಬ್ದಕ್ಕೆ ಅರ್ಥವೆ ಇರುವುದಿಲ್ಲ.

ದೇವರ ಮೇಲಿನ ನಂಬಿಕೆ ಅಂದರೆ ಇದು. ಎಲ್ಲವೂ  ನಿಖರ. ಹಾಗೆ ಅಷ್ಟೆ ಪ್ರಖರ... ಅಲ್ಲಿ ಡೌಟ್ ಎನ್ನುವ ಪದಕ್ಕೆ ಜಾಗವೆ ಇಲ್ಲಾ. ಏಕ್ಸಾಮ್ ಚೆನ್ನಾಗಿ ಆಗುವ ಹಾಗೆ ಮಾಡಪ್ಪ ದೇವರೇ ಅಂತಾ ದೇವರಲ್ಲಿ ಬೇಡಿಕೊಂಡು ಬಂದು, ಮರುಕ್ಷಣದಲ್ಲೆ  ಏಕ್ಸಾಮ್ ಏನಾಗುತ್ತೊ ಏನೊ ಅಂತಾ ಡೌಟ್ ಪಟ್ಟರೆ, ಅದು  ದೇವರಿಗೆ ನೀವು ನೇರವಾಗಿ  ಮಾಡುವ ಅವಮಾನ.ಅದು ನಿಮ್ಮಲ್ಲಿಯದೆ ದೋಷ. ನಿಮಗೆ ನಿಮ್ಮ ಮೇಲೆಯೆ ಡೌಟ್ ಇರುವುದಲ್ಲದೆ,ದೇವರನ್ನು ಡೌಟ್ ನಿಂದ ನೋಡುತ್ತಿದ್ದೀರಿ ಎಂದಾಯಿತು.ಅಲ್ಲಿಗೆ ನಿಮ್ಮ ಭಕ್ತಿ ಪ್ರಾರ್ಥನೆ ಎಲ್ಲಾ ಕಾಟಾಚಾರವಾದಂತಾಯಿತು. ಹಾಗಾಗುವಂತಿಲ್ಲ.   ಒಂದು ಸಾರಿ ದೇವರನ್ನು ನಂಬಿದ ಮೇಲೆ ಮುಗೀತು.ಅದು ಲೈಪ್ ಟೈಮ್ ರೀಚಾರ್ಜ್ ಆದಂತೆ ಆಗಬೇಕು.ಕೇವಲ ಬ್ಯಾಟರಿ ಬ್ಯಾಕ್ ಅಪ್ ಗಷ್ಟೆ ಮಂದಿರ, ಮಸೀದಿ,ಚರ್ಚ್ ಅಂತಾ  ಕಡೆಗೆ  ಹೋಗಬೇಕು. ಅಂದರೆ,ಬಿಸಿಲಿನ ಬೇಗೆ ತಾಳಲಾರದೆ ಹೇಗೆ ವಿಶ್ರಾಂತಿಗಾಗಿ ಮರದ ನೆರಳನ್ನು ಹುಡುಕಿಕೊಂಡು ಹೋಗುತ್ತೇವೆಯೋ, ಹಾಗೆಯೆ   ಒಂದು, ಸಮಾಧಾನಕ್ಕಾಗಿ ಒಂದು ರಿಪ್ರೆಶ್ ನೆಸ್ ಗಾಗಿ ದೇವರೆದುರು ನಿಲ್ಲಬೇಕು.ಅಷ್ಟೆ.ಜಸ್ಟ್ ನಮಗಿರುವ ಒತ್ತಡ, ನೋವನ್ನ ಇಳಿಸೋದಕ್ಕೆ ಅಷ್ಟೆ.ಇದರ ಹೊರತಾಗಿ ಇನ್ಯಾವ ಮಹಾ ಉದ್ದೇಶವಿದ್ದರೂ ಆ  ಕ್ಷಣಕ್ಕೆ ಅದು ಸುಳ್ಳೆ.  ನಮ್ಮ ಎಲ್ಲಾ ಸಮಸ್ಯೆಗಳು ಮನಸ್ಸಿನಲ್ಲಿ ಒತ್ತಡ ಹಾಗೂ ನೋವಿನ ರೂಪದಲ್ಲಿರುವುದರಿಂದ  ಅದನ್ನ  ಇಳಿಸುವುದೆ ನಮ್ಮ ಮೊದಲ ಆದ್ಯತೆ ಆಗಿರುತ್ತದೆ ಅನ್ನೊದು ನಮ್ಮೋಳಗಿರುವ ಅಸಲಿ ಸತ್ಯ.ಆ ಕೆಲಸವಾದಾಗ ಸಹಜವಾಗಿ ಎಂಬಂತೆ ಒಂದು ರಿಲಾಕ್ಸ್ ಷನ್ ಅನ್ನುವುದು ಸಿಗುತ್ತೆ.ಆಗ ಮನಸ್ಸು ರಿಪ್ರೆಶ್ ಆಗಿ ಹೊಸ ಹುಮ್ಮಸ್ಸು ಎನರ್ಜಿಯೊಂದಿಗೆ ಎದ್ದು ನಿಲ್ಲುತ್ತೆ. ಒತ್ತಡವೆಲ್ಲ ಕಳಚಿಹೋಗಿ ಮನಸ್ಸು  ರಿಪ್ರೆಶ್ ನೆಸ್ ಆಗುವ ಆ ಚಮತ್ಕಾರ ಇದೆಯಲ್ಲ, ಅದಕ್ಕೆ ಬೆಲೆ ಕಟ್ಟಲು ಎಂದಿಗೂ ಸಾಧ್ಯವಿಲ್ಲ.ಅದನ್ನೆ ಹಿರಿಯರು ದೇವರ ಚಮತ್ಕಾರ ಎನ್ನುವುದು.ಅದು ಇರುವುದರಿಂದಲೇ ಜೀವನದಲ್ಲಿ ಎಂತಹ ಸಂದರ್ಭದಲ್ಲೂ, ಎಂತಹುದೆ ಕಷ್ಟ ಬಂದು, ಮುಗಿದೆ ಹೋಯಿತು ಎನ್ನುವಂತಿದ್ದರೂ ನಾವು ಹೇಗೂ ಎಲ್ಲವನ್ನು   ಎದುರಿಸಿ ನಿಂತುಬಿಡುತ್ತೇವೆ. ಇದುವೆ ದೇವರ ಮೇಲಿನ ನಂಬಿಕೆ ಉಂಟು ಮಾಡುವ ಜಾದೂ.ಅಂತೆಯೆ ದೇವರ ಮೇಲಿನ ನಮ್ಮ ಈ ನಂಬಿಕೆಯನ್ನ ಪ್ರಪಂಚಕ್ಕೆ ತೋರಿಸಲು ಯಾವ  ಸರ್ಟಿಫಿಕೆಟ್ ಇಲ್ಲಾ.ಅಲ್ಲಿ ನಾವು ನಮ್ಮ ದೇವರು ಅಷ್ಟೆ.  ಅದರ ಹೊರತಾಗಿ ಬೇರಾವ ಸಂಗತಿಗಳಿಲ್ಲ.ಇರಲೂಕೂಡದು. ಏಕೆಂದರೆ

ನಂಬಿಕೆ ಎಂದರೆ ನಂಬಿಕೆ.

                                                                                     ಮಧುಕರ್ ಬಳ್ಕೂರ್