ಅರಣ್ಯ ಇಲಾಖೆಯಲ್ಲಿ ನಂಬಿಕೆ ದ್ರೋಹ : ಸಸಿಗಳ ಬದಲು ಕಳ್ಳ ಲೆಕ್ಕ ನೆಟ್ಟ ಅಧಿಕಾರಿಗಳು!

ಅರಣ್ಯ ಇಲಾಖೆಯಲ್ಲಿ ನಂಬಿಕೆ ದ್ರೋಹ : ಸಸಿಗಳ ಬದಲು ಕಳ್ಳ ಲೆಕ್ಕ ನೆಟ್ಟ ಅಧಿಕಾರಿಗಳು!

ಜನಸಾಮಾನ್ಯರ ಬಾಯಲ್ಲಿ ನಂಬಿಕೆ ದ್ರೋಹದ ಮಾತುಗಳು ಆಗಿಂದಾಗ್ಗೆ ಕೇಳಿ ಬರುತ್ತದೆ. ಆದರೆ ಸರ್ಕಾರಿ ವ್ಯವಸ್ಥೆಯಲ್ಲೂ ನಂಬಿಕೆ ದ್ರೋಹದ ಪ್ರಕರಣಗಳು ಪತ್ತೆಯಾಗಿವೆ. ವೀರಪ್ಪ ಮೊಯ್ಲಿ ಅವರು ಮುಖ್ಯಮಂತ್ರಿಯಾಗಿದ್ದಾಗ ಐದು ಕೋಟಿ ಸಸಿ ನೆಡುವ ಯೋಜನೆಯೊಂದನ್ನು ಘೋಷಿಸಿದ್ದರು. ಅದರಲ್ಲಿ ಎಷ್ಟು ಗಿಡ ನೆಟ್ಟರೋ, ನೆಟ್ಟಿದ್ದರಲ್ಲಿ ಎಷ್ಟು ಉಳಿಯಿತೋ ಯಾರಿಗೂ ಗೊತ್ತಿಲ್ಲ. ಜನಸಾಮಾನ್ಯರೂ ನೆಟ್ಟ ಗಿಡಗಳ ಸಂಖ್ಯೆ ಲೆಕ್ಕ ಹಾಕಿಕೊಂಡು ಹೋಗುವುದು ಸಾಧ್ಯವೂ ಇಲ್ಲ.. ಹಾಗೆ ನೋಡಿದರೆ ಅರಣ್ಯ ಇಲಾಖೆಯಲ್ಲಿ ಕಾಡು ಲೂಟಿಗೆ ಅವಕಾಶ ಕೊಡುವ ಉನ್ನತಾಧಿಕಾರಿಗಳೇ ನಿವೃತ್ತಿ ನಂತರ ಪರಿಸರವಾದಿಗಳ ಮುಖವಾಡ ತೊಡುತ್ತಾರೆ. ಹೀಗೆ ನಂಬಿಕೆ ದ್ರೋಹ ಮೇಲಿನಿಂದಲೇ ಆರಂಭವಾಗುತ್ತದೆ.ಅಂಥದ್ದೊಂದು ಪ್ರಕರಣವನ್ನು ಪತ್ತೆ ಹಚ್ಚಿರುವ ಅರಣ್ಯ ಇಲಾಖೆಯ ವಿಚಕ್ಷಣಾ ವಿಭಾಗ, ಅರಣ್ಯಾಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಂಡಿದೆ. ಜತೆಗೆ ಗಿಡ ನೆಡದಿದ್ದರೂ ಕಳ್ಳ ಲೆಕ್ಕ ತೋರಿಸಿರುವ ಅಧಿಕಾರಿಗಳ ಪ್ರಕರಣವನ್ನೂ ಲೋಕಾಯುಕ್ತ ಸಂಸ್ಥೆಗೆ ವರ್ಗಾವಣೆ ಮಾಡಿದೆ. ಈ ಕುರಿತು ಜಿ.ಮಹಂತೇಶ್ ವರದಿ.

 

ಸರ್ಕಾರದ ವಿವಿಧ ಇಲಾಖೆಗಳು ಕೈಗೆತ್ತಿಕೊಂಡಿರುವ ಹಲವು ಯೋಜನೆಗಳ ಕಾಮಗಾರಿಗಳಲ್ಲಿ ವಿವಿಧ ಸ್ವರೂಪದ ಭ್ರಷ್ಟಾಚಾರ, ಕರ್ತವ್ಯ ಲೋಪ, ಅಧಿಕಾರ ಮತ್ತು ಹಣಕಾಸಿನ ದುರುಪಯೋಗ ಪ್ರಕರಣಗಳು ಸಾಮಾನ್ಯವಾಗಿ ವರದಿಯಾಗುತ್ತಲೇ ಇರುತ್ತವೆ. ಇಂತಹ ಪ್ರಕರಣಗಳು ಹೆಚ್ಚಿನ ತನಿಖೆಗಾಗಿ ಲೋಕಾಯುಕ್ತ ಸಂಸ್ಥೆಗೆ ವರ್ಗಾವಣೆ ಯಾಗುತ್ತಿವೆ .

ವಿಪರ್ಯಾಸವೆಂದರೆ ಪ್ರತಿ ಇಲಾಖೆಯಲ್ಲಿ ವಿಚಕ್ಷಣಾ ವಿಭಾಗವಿದ್ದರೂ ದುರುಪಯೋಗ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯಾಗಿಲ್ಲ. ಪತ್ತೆಯಾಗುವ ಹಲವು ಪ್ರಕರಣಗಳನ್ನು ತನಿಖೆ ನಡೆಸುವ ಇಲಾಖೆ, ಆರೋಪಿತ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡ ನಿದರ್ಶನಗಳು ವಿರಳ.

ಆದರೆ, ಅರಣ್ಯ ಇಲಾಖೆಯ ವಿಚಕ್ಷಣಾ ವಿಭಾಗ ಇದಕ್ಕೆ ಹೊರತಾಗಿದೆ. ವಿವಿಧ ಆರೋಪಗಳಡಿಯಲ್ಲಿ ತನಿಖೆ ನಡೆಸಿರುವ ವಿಚಕ್ಷಣಾ ವಿಭಾಗ  7 ಮಂದಿ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಿದೆ. ವಿಶೇಷ ಎಂದರೆ ಈ ಅಧಿಕಾರಿಗಳ ವಿರುದ್ಧ ‘ಸರ್ಕಾರಕ್ಕೆ ನಂಬಿಕೆ ದ್ರೋಹ’ದ ಆರೋಪ ಹೊರಿಸಿ ಶಿಸ್ತು ಕ್ರಮ ಜರುಗಿಸಿರುವುದು. ಈ ಕುರಿತು 2019 ಮಾರ್ಚ್ 23 ರಂದು ಆದೇಶ ಹೊರಡಿಸಿದೆ.

"ಸಾಗರ ಅರಣ್ಯ ವಿಭಾಗದಲ್ಲಿ 2016-17ನೇ ಸಾಲಿನಲ್ಲಿ ಮುಂಗಡ ಕಾಮಗಾರಿಗಳಲ್ಲಿ 7 ಮಂದಿ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ಸರ್ಕಾರಕ್ಕೆ ನಂಬಿಕೆ ದ್ರೋಹ ಎಸಗುವ ಮೂಲಕ 1966ರ ಕರ್ನಾಟಕ ನಾಗರಿಕ ಸೇವಾ(ನಡತೆ)ನಿಯಮಾವಳಿಗಳಿಗೆ ವಿರುದ್ಧವಾಗಿ ವರ್ತಿಸಿದ್ದಾರೆ," ಎಂಬ ಆರೋಪದ ಮೇರೆಗೆ ಶಿಸ್ತು ಕ್ರಮ ಜರುಗಿಸಿ ಆದೇಶ ಹೊರಡಿಸಿದೆ.

ಉಪ ಅರಣ್ಯ ಸಂರಕ್ಷಣಾಧಿಕಾರಿ ಮೋಹನ್ ಎನ್ ಗಂಗೊಳ್ಳಿ, ವೆಂಕಟೇಶ್, ಎಂ ಎಸ್ ರವಿಕುಮಾರ್, ಟಿ ಆರ್ ಹಿತ್ತಲಮನಿ, ಎಂ ರಾಘವೇಂದ್ರ, ಪ್ರವೀಣ್ಕುಮಾರ್, ಹೇಮಗಿರಿ ಅಂಗಡಿ ಅವರು ಸರ್ಕಾರದ ವಿರುದ್ಧ ನಂಬಿಕೆ ದ್ರೋಹ ಆರೋಪಕ್ಕೆ ಗುರಿಯಾಗಿದ್ದಾರೆ. ಈ ಪೈಕಿ ಮೋಹನ್ ಗಂಗೊಳ್ಳಿ ಅವರು ಸಾಗರ ಮತ್ತು ಹೊಸನಗರ ತಾಲೂಕಿನ ವ್ಯಾಪ್ತಿಯಲ್ಲಿ 2 ಸಾವಿರ ಎಕರೆ ಅರಣ್ಯ ಭೂಮಿಯನ್ನು ಅನರ್ಹರಿಗೆ ಮಂಜೂರು ಮಾಡಿದ್ದ ಆರೋಪ ಮೇರೆಗೆ ಉಪ ಲೋಕಾಯುಕ್ತರ ತನಿಖೆ ಎದುರಿಸುತ್ತಿದ್ದಾರೆ.

ಸಾಗರ ಅರಣ್ಯ ವಿಭಾಗದಲ್ಲಿ 2016-17ನೇ ಸಾಲಿನಲ್ಲಿ ಮುಂಗಡ ಕಾಮಗಾರಿಗಳಲ್ಲಿ 7,56,043 ರು. ದುರುಪಯೋಗವಾಗಿರುವುದನ್ನು ವಿಚಕ್ಷಣಾ ವಿಭಾಗ ತನಿಖೆಯಲ್ಲಿ ಸಾಬೀತುಪಡಿಸಿದೆ. "ಸರ್ಕಾರದ ಹಣವು ದುರುಪಯೋಗವಾಗಿರುವುದು ಪ್ರಕರಣದ ಗಂಭೀರತೆಯನ್ನು ಹೆಚ್ಚಿಸಿದೆ ಎಂಬ ಅಂಶವೂ ಸರ್ಕಾರದ ಪರಿಗಣನೆಗೆ ಬಂದಿರುತ್ತದೆ. ಆದ್ದರಿಂದ ಆರೋಪಿತ ಅಧಿಕಾರಿಗಳ ಈ ವರ್ತನೆಯಿಂದ ಆರ್ಥಿಕ ಸೂತ್ರಗಳಿಗೆ ಭಂಗ ಉಂಟಾಗಿದೆ," ಎಂದು ಶಿಸ್ತು ಕ್ರಮ ಜರುಗಿಸಿ ಹೊರಡಿಸಿರುವ ಆದೇಶದಲ್ಲಿ ಉಲ್ಲೇಖಗೊಂಡಿದೆ.

ಈ ಪ್ರಕರಣದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಮೋಹನ್ ಎನ್ ಗಂಗೊಳ್ಳಿ ಮತ್ತು ವೆಂಕಟೇಶ್ ನಿವೃತ್ತಗೊಂಡಿದ್ದರೂ, ಇವರ ವಿರುದ್ಧ ವಿವರವಾದ ಶಿಸ್ತು ಕ್ರಮ ಜರುಗಿಸಲು ಆದೇಶಿಸಿರುವುದು ಮತ್ತೊಂದು ವಿಶೇಷ.

 

ನೆಡದ ಗಿಡಗಳಿಗೂ ಖರ್ಚು ತೋರಿಸಿದ ಅಧಿಕಾರಿಗಳು

ಸಾಗರ ಅರಣ್ಯ ವಿಭಾಗದಲ್ಲಿ ನಡೆದಿದ್ದ ಕಾಮಗಾರಿಗಳಲ್ಲಿನ ಅವ್ಯವಹಾರ ಪ್ರಕರಣದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಿರುವ ಬೆನ್ನಲ್ಲೇ , ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ(ಮನ್ರೇಗಾ) ಯೋಜನೆಯಲ್ಲಿನ ಅಕ್ರಮಗಳ ಆರೋಪದ ಮೇರೆಗೆ ಸಹಾಯಕ/ಉಪ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಉಪ ವಲಯ ಅರಣ್ಯಾಧಿಕಾರಿಗಳ ವಿರುದ್ಧದ ಪ್ರಕರಣವನ್ನು ಹೆಚ್ಚಿನ ತನಿಖೆಗಾಗಿ ಉಪ ಲೋಕಾಯುಕ್ತರಿಗೆ ವಹಿಸಿ 2019ರ ಮಾರ್ಚ್ 28ರಂದು ಆದೇಶಿಸಿದೆ.

ಧಾರವಾಡ ಜಿಲ್ಲೆಯ ಸಾಮಾಜಿಕ ಅರಣ್ಯ ವಿಭಾಗ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ರಸ್ತೆ ಬದಿ ಗಿಡ ನೆಡುವ ಯೋಜನೆಯಲ್ಲಿ ಅರಣ್ಯಾಧಿಕಾರಿಗಳು ನರೇಗಾ ಮಾರ್ಗಸೂಚಿಯನುಸಾರ ಗುಂಡಿ ತೆಗೆದು ಗಿಡಗಳನ್ನು ನೆಡದೇ ನೆಲದ ಮೇಲೆ ನೆಟ್ಟು ಸಸಿಗಳಿಗೆ ನೀರು ಗೊಬ್ಬರ ಹಾಕಿಲ್ಲ. ಅಲ್ಲದೆ, ಗಿಡಗಳು ಒಣಗುವ ಸ್ಥಿತಿಯಲ್ಲಿದ್ದರೂ ಸರಿಯಾಗಿ ಪೋಷಣೆ ಮಾಡದ ಅಧಿಕಾರಿಗಳು, ಕಾಮಗಾರಿ ನಡೆಸಲಾಗಿದೆ ಎಂದು ಲೆಕ್ಕ ತೋರಿಸಿ ಹಣ ದುರುಪಯೋಗಪಡಿಸಿಕೊಂಡಿದ್ದಾರೆ. ಹಾಗೆಯೇ ಖರ್ಚಾದ ಮೊತ್ತಕ್ಕೆ ಅಧಿಕಾರಿಗಳು ಯಾವುದೇ ದಾಖಲೆಗಳನ್ನು ನೀಡದೇ ದುರುಪಯೋಗಪಡಿಸಿ ಅಕ್ರಮ ನಡೆಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಆದೇಶದಲ್ಲಿ ವಿವರಿಸಲಾಗಿದೆ.

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ ವಿ ಗೋಮಾಡಿ, ಎ ಐ ಬಾಗಲಕೋಟ್, ಎಂ ಡಿ ಕಣಗಿಲ್, ಎಚ್ ಎಸ್ ಪವಾರ್ ಅವರು ಅಕ್ರಮ ನಡೆಸಿರುವ ಆರೋಪಕ್ಕೆ ಗುರಿಯಾಗಿದ್ದಾರೆ. 2015-16ನೇ ಸಾಲಿನಲ್ಲಿ ಅರಣ್ಯ ಇಲಾಖೆ ಕೈಗೆತ್ತಿಕೊಂಡಿದ್ದ ಅರಣ್ಯೀಕರಣ ಯೋಜನೆ ಕಾಮಗಾರಿಗಳಿಗೆ 8,57,26,470 ರು.ಲಭ್ಯವಾಗಿತ್ತು. ಕಾಮಗಾರಿ ಸಂಪೂರ್ಣವಾಗಿ ಅನುಷ್ಠಾನವಾಗಿದೆ ಎಂದು ಕಳ್ಳ ಲೆಕ್ಕ ತೋರಿಸಿದ್ದ ಈ ಅರಣ್ಯಾಧಿಕಾರಿಗಳು, ಇದಕ್ಕೆ ಪೂರಕವಾದ ದಾಖಲೆಗಳನ್ನು ಒದಗಿಸಿರಲಿಲ್ಲ.

ಈ ಕುರಿತು ತನಿಖೆ ನಡೆಸಿದ್ದ ಲೋಕಾಯುಕ್ತ ಪೊಲೀಸರು "ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಅನುದಾನ ಬಿಡುಗಡೆಯಾದ ಮೊತ್ತಕ್ಕೆ ಅನುಗುಣವಾಗಿ ಸಸಿಗಳ ನಿರ್ವಹಣಾ ಕಾಮಗಾರಿ ನಡೆದಿಲ್ಲ. ಸಸಿಗಳನ್ನು ಸಮರ್ಪಕವಾಗಿ ನೆಡದೆ ಅವುಗಳು ನಾಶಕ್ಕೆ ಕಾರಣರಾಗಿದ್ದಾರೆ. ಆದರೂ ನೆಟ್ಟ ಗಿಡಗಳನ್ನು ನಿರ್ವಹಣೆ ಮಾಡಲಾಗಿದೆಯೆಂದು ಆರೋಪಿತ ಅಧಿಕಾರಿ, ಸಿಬ್ಬಂದಿ ಅಳತೆ ಪುಸ್ತಕದಲ್ಲಿ ದೃಢೀಕರೀಸಿ ಅನುದಾನ ಬಿಡುಗಡೆ ಮಾಡಿಸಿಕೊಂಡು ಕರ್ತವ್ಯ ಲೋಪ ಎಸಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ," ಎಂದು ವರದಿಯಲ್ಲಿ ವಿವರಿಸಿದ್ದರು.

2015-16ನೇ ಸಾಲಿನಲ್ಲಿ  ಕುಂದಗೋಳ ತಾಲೂಕು ಬರಪೀಡಿತ ಎಂದು ಘೋಷಣೆಯಾಗಿತ್ತಲ್ಲದೆ ನೆಟ್ಟ ಗಿಡಗಳ ಪೋಷಣೆಗೆ ಟ್ಯಾಂಕರ್ ಮೂಲಕ ನೀರು ಹಾಯಿಸಲಾಗಿದೆ ಎಂದು ಆರೋಪಿತ ಅಧಿಕಾರಿಗಳು ತನಿಖಾಧಿಕಾರಿಗಳಿಗೆ ಸಮಜಾಯಿಷಿ ನೀಡಿದ್ದರು. ಆದರೆ, ನೆಟ್ಟ ಗಿಡಗಳ ಪೋಷಣೆಗೆ 3 ವರ್ಷಗಳವರೆಗೆ ನಿರ್ವಹಣೆಗಾಗಿಯೇ ಅನುದಾನ ಪೂರ್ಣ ಬಳಕೆ ಮಾಡಿದ್ದರೂ ಸಹ ಬದುಕುಳಿದಿರುವ ಗಿಡಗಳ ಸಂಖ್ಯೆಗೆ ಹೋಲಿಕೆ ಮಾಡಿದಲ್ಲಿ ಹಣ ದುರುಪಯೋಗವಾಗಿರುವ ಸಾಧ್ಯತೆಯೇ ಹೆಚ್ಚಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

"ಟ್ಯಾಂಕರ್ಗಳಲ್ಲಿ ನೀರು ಹಾಯಿಸಿರುವ ಬಗ್ಗೆ ಸಮರ್ಪಕ ದಾಖಲೆಗಳಿಲ್ಲ. ನೆಡುತೋಪಿನ ಬಳಿಕೆಯ ನೀರಿನ ಮೂಲಗಳು ಬತ್ತಿ ಹೋದ ಕಾರಣದಿಂದ ಟ್ಯಾಂಕರ್ಗಳ ಮೂಲಕ ಗಿಡಗಳಿಗೆ ನೀರುಣಿಸಲಾಗಿದೆ ಎಂದು ಆರೋಪಿ ಅಧಿಕಾರಿಗಳು ಪ್ರತಿ ರಕ್ಷಾ ಹೇಳಿಕೆ ನೀಡಿದ್ದರೂ ಪ್ರತಿಶತ 10ರಷ್ಟು ಪ್ರಮಾಣದ ಸಸಿಗಳನ್ನು ಉಳಿಸಿಕೊಂಡಿಲ್ಲ. ಹೀಗಾಗಿ ಸರ್ಕಾರದ ಹಣದ ಸದ್ಬಳಕೆ ಆಗಿಲ್ಲ ಎಂಬುದು ದೃಢಪಡುತ್ತದೆ," ಎಂದು ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ವರದಿಯಲ್ಲಿ ಹೇಳಿದ್ದಾರೆ.