ವಲಸಿಗ ಬಂಗಾಳಿ ಮುಸ್ಲಿಮರನ್ನು ದಶಕಗಳಿಂದ ವೇತನ ನೀಡದೆ ದುಡಿಸುತ್ತಿದ್ದಾರೆ ಬಿಬಿಎಂಪಿ ಗುತ್ತಿಗೆದಾರರು!

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕಸ ಗುತ್ತಿಗೆದಾರರನ್ನು ಒಳಗೊಂಡ ದೊಡ್ಡ ಹಗರಣವೊಂದನ್ನು ‘ದಿ ಫೆಡರಲ್’ ಸುದ್ದಿ ಜಾಲತಾಣದಲ್ಲಿ ಸುದೀಪ್ತೊ ಮಂಡಲ್ ಬಯಲು ಮಾಡಿದ್ದಾರೆ. ಶೋಷಣೆಯ ಕರಾಳತೆಯ ಇನ್ನೊಂದು ರೂಪವನ್ನು ಈ ವರದಿಯಲ್ಲಿ ಕಾಣಬಹುದಾಗಿದೆ.

ವಲಸಿಗ ಬಂಗಾಳಿ ಮುಸ್ಲಿಮರನ್ನು ದಶಕಗಳಿಂದ ವೇತನ ನೀಡದೆ ದುಡಿಸುತ್ತಿದ್ದಾರೆ ಬಿಬಿಎಂಪಿ ಗುತ್ತಿಗೆದಾರರು!

“ನನಗೆ ಹತ್ತು ವರ್ಷಗಳಿಂದ ಸಂಬಳ ನೀಡಿಲ್ಲ, ಇದನ್ನು ಹೇಳುವುದಕ್ಕೆ ನನಗೆ ಯಾವುದೇ ಭಯವಿಲ್ಲ” ಎಂದು ರೋಷಭರಿತ ನೋವಿನಿಂದ ಹೇಳಿದ್ದು ಇಂಡೋ-ಬಾಂಗ್ಲಾದೇಶದ ಗಡಿಪ್ರದೇಶವಾದ ಪಶ್ಚಿಮ ಬಂಗಾಳದ ನಾಡಿಯ ಜಿಲ್ಲೆಯವರಾದ, ಪ್ರಸ್ತುತ ಬಿಬಿಎಂಪಿ ಯಲ್ಲಿ ಕಸದ ಟ್ರಕ್ ಚಾಲಕನಾಗಿ ಕಾರ್ಯನಿರ್ವಹಿಸುತ್ತಿರುವ ಒಬ್ಬ ವ್ಯಕ್ತಿ.

ಆತ ಹಾಜರಾತಿಯ ದಪ್ಪನಾದ ಒಂದು ಕಡತವನ್ನು ಹೊರತೆಗೆದು ಅದನ್ನು ಎತ್ತಿ ಹಿಡಿಯುತ್ತಾ "ಫೋಟೋ ತೆಗೆಯಿರಿ ಈ ಕೊಳೆಗೇರಿಯ 48 ಬಂಗಾಳಿ ಮುಸ್ಲಿಂ ಮಿನಿ-ಟ್ರಕ್ ಮಾಲೀಕರ ಪಟ್ಟಿ ಇದು, ನನ್ನಂತೆ ಇವರಿಗೂ 2007 ಮತ್ತು 2018 ರ ನಡುವೆ ಗುತ್ತಿಗೆದಾರರಿಂದ ಹಣ ಪಾವತಿಸಲಾಗಿಲ್ಲ.ಇಷ್ಟೇ ಅಲ್ಲ ಸ್ವಚ್ಚ ಗೊಳಿಸಲು ಯಾವುದೇ ಪಾವತಿ ಪಡೆಯದ ಸಾವಿರಾರು ಜನರು ಸಹ ಇದ್ದಾರೆ ಎಂದು ಆತ ಬೇಸರದಿಂದ ಹೇಳಿದ.

ಆದರೆ ಗುತ್ತಿಗೆದಾರರು ಈ ಅವಧಿಯಲ್ಲಿ ಬಿಬಿಎಂಪಿಯಿಂದ ಟ್ರಕ್ ಗಳ ನಿರ್ವಹಣೆ ಹಾಗೂ ಕಾರ್ಮಿಕರು ಮತ್ತು ಚಾಲಕರಿಗೆ ಸಂಬಳವನ್ನು ನೀಡಲು ಹಣವನ್ನು ಪಡೆಯುತ್ತಿದ್ದಾರೆ. ಅವರು ಪ್ರತಿ ಟ್ರಕ್ ಗೆ  ಕನಿಷ್ಠ ರೂ. 50,000 ಮತ್ತು ದೊಡ್ಡ ಟ್ರಕ್ ಗಳಿಗೆ ಇನ್ನೂ ಹೆಚ್ಚಿನ ಹಣ ಪಡೆಯುತ್ತಾರೆ ಎಂದು ಆತ ಕ್ಯಾಮರಾದ ಎದುರು ಹೇಳಿಕೊಳ್ಳುತಿರುವಾಗಲೇ ಆತನ ಹೆಂಡತಿ ದಯವಿಟ್ಟು ಅವರ ಹೆಸರನ್ನು ಅಥವಾ ಫೋಟೋವನ್ನು ನಿಮ್ಮ ವರದಿಯಲ್ಲಿ ಸೇರಿಸಬೇಡಿ. ಗುತ್ತಿಗೆ ದಾರರಿಗೆ ಗೊತ್ತಾದರೆ ಅವರು ನನ್ನ ಗಂಡನನ್ನು ಕೊಂದು ಬಿಡುತ್ತಾರೆ ಅಥವಾ ಇನ್ನಾವುದೋ ಪೊಲೀಸ್ ಪ್ರಕರಣದಲ್ಲಿ ಇವರನ್ನು ಸಿಲುಕಿಸಿ ಬಿಡುತ್ತಾರೆ ಎಂದು ಅಳುತಿದ್ದಳು.

ಪೊಲೀಸರ ಬಗ್ಗೆ ಅವಳು ಹೀಗೆ ಹೆಳೋಕೆ ಒಂದು ಕಾರಣವಿದೆ. ಕೆಲವು ದಿನಗಳ ಹಿಂದೆ ಬಂಗಾಳಿ ಮುಸ್ಲಿಮರಿಂದ ಪೊಲೀಸರು ಹಣವನ್ನು ಸಂಗ್ರಹಿಸುತ್ತಿದ್ದಾರೆ ಎಂದು ಕೆಲವು ಕಾರ್ಯಕರ್ತರು ದೂರು ನೀಡಿದ ನಂತರ ಪೊಲೀಸರು ಬಂಗಾಳಿ ಮುಸ್ಲಿಮರೊಬ್ಬರ ಅಂಗಡಿಯನ್ನು ಸುಳ್ಳು ಮಾದಕವಸ್ತು ಪ್ರಕರಣದಲ್ಲಿ ಸಿಲುಕಿಸಿ ಅವರನ್ನು ಬಂಧಿಸಿ, ಅಂಗಡಿಯನ್ನು ಮುಚ್ಚಿಸಿದ್ದರು.

ಬಾಂಗ್ಲಾದೇಶಿ ಎಂದು ಬ್ರಾಂಡ್ ಆಗುವ ಭಯ

ಅಕ್ರಮ ವಲಸಿಗರಿಗಾಗಿ ಬಂಧನ ಕೇಂದ್ರವನ್ನು ತೆರೆಯುವ ಹಾದಿಯಲ್ಲಿರುವ ಭಾರತೀಯ ಜನತಾ ಪಕ್ಷದ ನೇತೃತ್ವದ ಕರ್ನಾಟಕ ಸರ್ಕಾರ ಶೀಘ್ರದಲ್ಲೇ ಕರ್ನಾಟಕದಲ್ಲಿ ಅಸ್ಸಾಂನಂತಹ ಪರಿಸ್ಥಿತಿಯನ್ನು ಸೃಷ್ಟಿಸಲಿದೆ. ಈಗಾಗಲೇ  ಬಾಂಗ್ಲಾದೇಶಿಗಳು ಸೇರಿದಂತೆ ದಾಖಲೆರಹಿತ ವಲಸಿಗರಿಗಾಗಿ ಗುರುತಿಸಲು ರಾಜ್ಯದಲ್ಲಿ ನಾಗರಿಕರ ನೋಂದಣಿಯನ್ನು ಪರಿಚಯಿಸುವ ಯೋಜನೆಗಳನ್ನು ಘೋಷಿಸಲಾಗಿದೆ.

ಅಕ್ರಮ ವಲಸಿಗರನ್ನು ಗುರುತಿಸಿ ಗಡೀಪಾರು ಮಾಡಲಾಗುವುದು ಎಂದು ಪದೇ ಪದೇ ಹೇಳುತ್ತಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಆಕಾಂಕ್ಷೆಗೆ ಇದು ಪೂರಕವಾಗಿದೆ.

"ಬಂಗಾಳಿ ಮುಸ್ಲಿಮರು ಸಾವಿರಾರು ಸಂಖ್ಯೆಯಲ್ಲಿ ವಾಸಿಸುವ ನಗರದ ಹೊರವಲಯದ ಪಟ್ಟಣಗಳಲ್ಲಿ ಪೊಲೀಸರು ಮತ್ತು ಗುಪ್ತಚರ ಅಧಿಕಾರಿಗಳು ಈಗಾಗಲೇ ಓಡಾಡುತ್ತಿದ್ದಾರೆ. ಅವರು ಅಲ್ಲಿರುವ ಯಾರನ್ನಾದರೂ ಅಕ್ರಮ ವಲಸಿಗೆ ಎಂದು ಹೇಳಿಬಿಡುವ ಸಾಧ್ಯತೆಗಳಿವೆ ಎಂದು ಸಾಮಾಜಿಕ ಕಾರ್ಯಕರ್ತ ಆರ್ ಕಲೀಮುಲ್ಲಾ ಹೇಳುತ್ತಾರೆ.  ಬಾಂಗ್ಲಾದೇಶಿಗಳೆಂದು ತಪ್ಪಾಗಿ ಗುರುತಿಸಿ ದಾಖಲಾಗಿರುವ ಪ್ರಕರಣಗಳಲ್ಲಿ ಭಾರತೀಯ ಬಂಗಾಳಿ ಮುಸ್ಲಿಮರಿಗೆ ಕಾನೂನು ರಕ್ಷಣೆ ನೀಡಲು ಕಲೀಮುಲ್ಲಾ  ಹೋರಾಟ ಮಾಡುತ್ತಿದ್ದಾರೆ.

“ಒಬ್ಬ ವ್ಯಕ್ತಿಯನ್ನು ವಿದೇಶಿ ಕಾಯ್ದೆಯಡಿ ಅಕ್ರಮ ವಲಸಿಗ ಎಂದು ದಾಖಲಿಸಿದಾಗ, ಅವರ ಪೌರತ್ವವನ್ನು ಸಾಬೀತುಪಡಿಸಲು ಪುರಾವೆ ನೀಡಬೇಕಾದ ಹೊರೆ ಅವರ ಮೇಲೆ ಇರುತ್ತದೆ. ಅವರು ಭಾರತೀಯರೆಂದು ಸಾಬೀತುಪಡಿಸುವವರೆಗೂ ಅವರನ್ನು ಬಂಧಿಸಬಹುದು ”ಎಂದು ಅಸ್ಸಾಂನಲ್ಲಿ ಎನ್ಆರ್ಸಿಯಿಂದ ಹೊರಗಿಡಲ್ಪಟ್ಟ ಜನರಿಗೆ ಕಾನೂನು ನೆರವು ನೀಡಲು ಹೋರಾಡುತ್ತಿರುವ ಸಂಸ್ಥೆಯೊಂದರ ಸಂಸ್ಥಾಪಕ ಸದಸ್ಯ ವಕೀಲ ದರ್ಶನಾ ಮಿತ್ರ ಹೇಳುತ್ತಾರೆ.

ನಗರದ ಬಂಗಾಳಿ ಮುಸ್ಲಿಮರು ಕಸ ಉದ್ಯಮದಲ್ಲಿ ಮಾತ್ರವಲ್ಲದೆ ಹೋಟೆಲ್ ಗಳಲ್ಲಿ, ಗೃಹ ನಿರ್ಮಾಣದಲ್ಲಿ, ಗೃಹ ಸಹಾಯಕರಾಗಿ, ಮನೆ ಮನೆಗೆ ಸಾಮಾನು ವಿತರಕರಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಅವರಿಗೆ ಸಂಬಳವನ್ನು ಸರಿಯಾಗಿ ಪಾವತಿಸಲಾಗುತ್ತಿಲ್ಲ. ಅವರು ಧ್ವನಿ ಎತ್ತಿದರೆ, ಉದ್ಯೋಗದಾತರು ನೀವು ಬಾಂಗ್ಲಾದೇಶದವರು ಎಂದು ಪೊಲೀಸರಿಗೆ ತಿಳಿಸುವುದಾಗಿ ಬೆದರಿಕೆ ಹಾಕುತ್ತಾರೆ. ಎಂಬುದು ಕಲೀಮುಲ್ಲಾ ಅವರ ಮಾತು.

ಪೋಲಿಸರು, ಬಿಬಿಎಂಪಿ ಅಧಿಕಾರಿಗಳು, ಗುತ್ತಿಗೆದಾರರು, ರಾಜಕಾರಣಿಗಳು ಎಲ್ಲರೂ ಒಟ್ಟಿಗೆ ಇದ್ದಾರೆ. ನೀವು ಯಾರಿಗೆ ದೂರು ನೀಡಿದರೂ ಅವರು ಬಂದು ನಮ್ಮನ್ನೇ ಬಾಂಗ್ಲಾ ದೇಶಿಗರೆಂದು ಹೇಳಿ ಜೈಲಿಗೆ ಹಾಕಿಬಿಡುತ್ತಾರೆ. ನಾವು ಇಲಿಗಳಂತೆ ಅಡಗಿ ಕೂರ ಬೇಕಾಗಿದೆ ಆದರೆ ನಮಗೆ ಹಣ ನೀಡಬೇಕಾದವರು ನಿರ್ಭೀತಿಯಿಂದ ಓಡಾಡುತ್ತಿದ್ದಾರೆ. ಎಂಬುದು ಬಂಗಾಳಿ ಮುಸ್ಲಿಮರ ಅಳಲು.

ಹಗರಣ

ಒಂದು ದಶಕದಿಂದ ಸಂಬಳ ಪಡೆಯದೆ ಮಿನಿ-ಟ್ರಕ್ ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಕಾರ್ಮಿಕರನ್ನು ಹುಡುಕಲು ಮೊದಲು ಅಂತಾರಾಷ್ಟ್ರೀಯ ಟೆಕ್ ಪಾರ್ಕ್ ಬಳಿ ಹೋಗಲಾಯಿತು. ಆದರೆ ಅಲ್ಲಿ ಸಿಕ್ಕಿದ್ದು 13 ಜನರು ಮಾತ್ರ. ಮಿಕ್ಕವರು ಸ್ಥಳದಲ್ಲಿ ಇರಲಿಲ್ಲ ಕೆಲಸಕ್ಕಾಗಿ ಬೇರೆ ಜಾಗಕ್ಕೆ ಹೋಗಿದ್ದರು.

ಅಲ್ಲಿದ್ದವರು ಅತಂತ್ರ  ಸ್ಥಿತಿಯ ನೋವನ್ನು ವಿವರಿಸಲು ಮುಂದಾದರು. “ನಾವು (ಬಂಗಾಳಿ ಮುಸ್ಲಿಮರು)ಪ್ರತಿದಿನ ನೋಡಲು, ಮಾಡಲು ಅಸಹ್ಯವಾಗಿರುವಂತಹ ಕಸದ ಕೆಲಸ ಮಾಡುತ್ತೇವೆ. ಪ್ರತಿದಿನ ಬೆಳಿಗ್ಗೆ ಬೀದಿಗಳನ್ನು ಸ್ವಚ್ಚಗೊಳಿಸುವ ಕಸಗುಡಿಸುವವರಂತಲ್ಲ ಎಂದು ಮುರ್ಷಿದಾಬಾದ್ ನ ವ್ಯಕ್ತಿಯೊಬ್ಬರು ಹೇಳಿದರು.

ಪೌರಕಾರ್ಮಿಕರು ಎಂದು ಕರೆಯಲ್ಪಡುವ 18,000 ಕ್ಕೂ ಹೆಚ್ಚು ಸ್ವೀಪರ್ ಗಳು ಬಿಬಿಎಂಪಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವುಗಳಲ್ಲಿ ಬಹುಪಾಲು ತೆಲುಗು, ತಮಿಳು ಮತ್ತು ಕನ್ನಡ ಮಾತನಾಡುವ ದಲಿತ ಸಮುದಾಯಗಳಿಗೆ ಸೇರಿದವರಾಗಿದ್ದಾರೆ.

ದಲಿತ ಪೌರಕರ್ಮಿಕರು ಜಾತಿ ಆಧರಿತ ತಾರತಮ್ಯ ಎದುರಿಸುತ್ತಲೇ ಇರುತ್ತಾರೆ ಮತ್ತು ಗುತ್ತಿಗೆದಾರರಿಂದ ಶೋಷಣೆಗೆ ಒಳಗಾಗುತ್ತಾರೆ ಹಾಗೂ ಅತ್ಯಂತ ಕಡಿಮೆ ಸಂಬಳ ಪಡೆಯುತ್ತಾರೆ.  ಬಂಗಾಳಿ ಮುಸ್ಲಿಮರು, ಕಸದ ಲಾರಿಗಳನ್ನು ಓಡಿಸುತ್ತಿರುವ, ಆ ಲಾರಿಗಳಲ್ಲಿ ಕೆಲಸಮಾಡುತ್ತಿರುವ ಅತ್ಯಂತ ದುರ್ಬಲ ಮತ್ತು ಶೋಷಿತ ಜನರು.

ಕಸಗುಡಿಸುವವರ ಕೆಲಸ ಕೊನೆಯಾಗುವಲ್ಲಿಂದ ನಮ್ಮ ಕೆಲಸವು ಪ್ರಾರಂಭವಾಗುತ್ತದೆ. ಕಸವನ್ನು ಒಂದೇ ಸ್ಥಳದಲ್ಲಿ ರಾಶಿ ಮಾಡಲು ಅವರು ಪೊರಕೆಗಳು, ಸಲಿಕೆಗಳು ಮತ್ತು ತಳ್ಳುಗಾಡಿಗಳನ್ನು ಬಳಸುತ್ತಾರೆ.ಆದರೆ ನಾವು ಕಷ್ಟಕ್ಕೆ ಸಿಲುಕುವವರು, ಕಸವನ್ನು ನಮ್ಮ ಕೈಗಳಿಂದ ಟ್ರಕ್ ಗಳಲ್ಲಿ ತುಂಬಿಸಿ ಮರುಬಳಕೆ ಘಟಕಗಳಿಗೆ ಕೊಂಡೊಯ್ಯುತ್ತೇವೆ ”ಎಂದು ಮುರ್ಷಿದಾಬಾದ್ ನ ವ್ಯಕ್ತಿ ಹೇಳುತ್ತಾರೆ.

ಗುತ್ತಿಗೆದಾರರಿಂದ ನಮಗೆ ಕೇವಲ ವೇತನ ಮಾತ್ರ ಬರಬೇಕಾಗಿರುವುದಲ್ಲ. “ಅವರು ವಾಹನದ ಇಂಧನ ಅಥವಾ ನಿರ್ವಹಣೆಯ ಹಣವನ್ನು ಪಾವತಿಸಿಲ್ಲ. ಕಸವನ್ನು ಟ್ರಕ್ ಗೆ ಸಾಗಿಸಲು ಮತ್ತು ಅದನ್ನು ಇಳಿಸಲು ನಮಗೆ ಸಹಾಯ ಮಾಡುವ ಸಹಾಯಕರಿಗೂ ನಾವು ಪಾವತಿಸಬೇಕಾಗಿರುತ್ತದೆ. ಎಂದು ಆ ಗುಂಪಿನ ಒಬ್ಬರು ಹೇಳಿದರು. ಈ ಸಹಾಯಕರು ಯಾವಾಗಲೂ ಟ್ರಕ್ ನ ಹಿಂಭಾಗದಲ್ಲಿ ಪ್ರಯಾಣಿಸುತ್ತಾರೆ ಮತ್ತು ಕಸದ ಮೇಲೆ ಕುಳಿತುಕೊಳ್ಳುತ್ತಾರೆ.

ಟ್ರಕ್ ಮಾಲೀಕರು 10 ವರ್ಷಗಳ ಕಾಲ ವೇತನವಿಲ್ಲದೆ ಹೇಗೆ ಬದುಕುಳಿದರು ಮತ್ತು ಇಂಧನ, ನಿರ್ವಹಣೆ ಮತ್ತು ಕಾರ್ಮಿಕ ವೆಚ್ಚಗಳನ್ನು ಪೂರೈಸುವಲ್ಲಿ ಯಶಸ್ವಿಯಾದರು. ಎಂಬ ಪ್ರಶ್ನೆಗೆ ಕಸವನ್ನು ಬೇರ್ಪಡಿಸುವ ಮೂಲಕ ಮತ್ತು ಮರುಬಳಕೆ ಮಾಡಬಹುದಾದ ವಸ್ತುಗಳನ್ನು ಮಾರಾಟ ಮಾಡುವ ಮೂಲಕ ಎಂದು ಪಶ್ಚಿಮ ಬಂಗಾಳದ ಕೃಷ್ಣನಗರದ ವ್ಯಕ್ತಿಯೊಬ್ಬರು ಉತ್ತರಿಸಿದರು.

ನಂತರ ಇವರಲ್ಲೊಬ್ಬರು ನಮಗೆ ಅಷ್ಟರವರೆಗೂ ತಿಳಿಸದ ಒಪ್ಪಂದದ ಒಂದು ಅಂಶವನ್ನು ಬಹಿರಂಗಪಡಿಸಿದರು. ಅದೇನೆಂದರೆ “ಮೊದಲ ದಿನವೇ ಗುತ್ತಿಗೆದಾರರು ನಮಗೆ ಏನನ್ನೂ ಪಾವತಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಒಣ ತ್ಯಾಜ್ಯವನ್ನು ಬೇರ್ಪಡಿಸಲು ಮತ್ತು ಮಾರಾಟ ಮಾಡಲು ನಮಗೆ ಅವಕಾಶ ನೀಡಲಾಗುವುದು ಎಂಬುದು ಯಾವಾಗಲೂ ಒಪ್ಪಂದವಾಗಿತ್ತು, ಎಂದು ಅವರು ಹೇಳಿದರು. ಇದು ಬಿಬಿಎಂಪಿಗೆ ಗೊತ್ತಿಲ್ಲದಂತೆ ಮಾಡಲಾದ ಒಪ್ಪಂದ.  ಇದಕ್ಕೆ ಮಿಕ್ಕವರು ಕೋಪದಿಂದ ಅವರಿಗೆ, “ಗುತ್ತಿಗೆದಾರ ಬಿಬಿಎಂಪಿಯಿಂದ ನಮ್ಮ ಹೆಸರಿನಲ್ಲಿ ಹಣ ಸಂಗ್ರಹಿಸಿದ್ದಾರೆಂದು ನಿಮಗೆ ತಿಳಿದಿಲ್ಲವೇ? ಅದು ನಮ್ಮ ಹಣ, ಒಪ್ಪಂದ ಕಾನೂನುಬಾಹಿರ.” ಎಂದು ರೇಗಿದರು.

ಅವರು ಕುಳಿತಲ್ಲಿಯೇ ಕೆಲವು ಲೆಕ್ಕಾಚಾರಗಳನ್ನು ಮಾಡಿ “ಬಿಬಿಎಂಪಿ ಪ್ರತಿ ಟ್ರಕ್ ಗೆ ಮಾಸಿಕ ₹50,000 ರೂ.ಗಳನ್ನು ಗುತ್ತಿಗೆದಾರನಿಗೆ ಪಾವತಿಸುತ್ತದೆ. ನನ್ನ ಬಳಿ ಮೂರು ಟ್ರಕ್ ಗಳು ಇದ್ದವು. ವರ್ಷಕ್ಕೆ 6 ಲಕ್ಷ, ಪ್ರತಿ ಟ್ರಕ್ ಗೆ, ಈ 10 ವರ್ಷಗಳಲ್ಲಿ ಅವರು ಬಿಬಿಎಂಪಿಯಿಂದ ನನ್ನ ಹೆಸರಿನಲ್ಲಿ ಕನಿಷ್ಠ 1.8 ಕೋಟಿಗಳನ್ನು ಸಂಗ್ರಹಿಸಿದ್ದಾರೆ ಎಂದು ಒಬ್ಬರು ಹೇಳಿದರು ಮತ್ತು ಇತರರು ಎಷ್ಟು ಹಣವನ್ನು ಕಳೆದುಕೊಂಡಿದ್ದಾರೆ ಎಂದು ಲೆಕ್ಕಹಾಕಲು ಶುರುಮಾಡಿದರು.

ಗುಲಾಮ ಕಾರ್ಮಿಕರ ಅಂತ್ಯವಿಲ್ಲದ ಪೂರೈಕೆ?

ಬಾಂಗ್ಲಾದೇಶದ ಕಾರ್ಮಿಕರನ್ನು ವಾಸ್ತವವಾಗಿ ಗುತ್ತಿಗೆದಾರರು ನೇಮಿಸಿಕೊಳ್ಳುವುದಿಲ್ಲ ಆದರೆ ಕಾರ್ಮಿಕ ದಲ್ಲಾಳಿಗಳು ಈ ಕಾರ್ಮಿಕರನ್ನು ಇಲ್ಲಿಗೆ ಕಳುಹಿಸುತ್ತಾರೆ. ಎರಡೂ ದೇಶಗಳ ಗಡಿಯುದ್ದಕ್ಕೂ ಈ ಕಳ್ಳಸಾಗಣೆ ನಡೆಯುತ್ತದೆ. ಕಾರ್ಮಿಕರ ಮತ್ತು ಬಿಬಿಎಂಪಿ ಗುತ್ತಿಗೆದಾರರ ನಡುವೆ ಯಾವುದೇ ಮಾತುಕತೆಗಳು ನಡೆಯುವುದಿಲ್ಲ. ಕಾರ್ಮಿಕ ದಲ್ಲಾಳಿಗಳು ಮತ್ತು ಬಿಬಿಎಂಪಿ ಗುತ್ತಿಗೆದಾರರ ನಡುವೆ ಮಾತುಕತೆ ನಡೆಯುತ್ತದೆ.

ಬಿಬಿಎಂಪಿ ನೀಡುವ ದರಗಳ ಬಗ್ಗೆ ನಾವು ಬಿಬಿಎಂಪಿಯ ರಾಮಕಾಂತ್ ಅವರೊಂದಿಗೆ ಪರಿಶೀಲಿಸಿದಾಗ, ಅವರು ಹೇಳುತ್ತಾರೆ, “ಗುತ್ತಿಗೆದಾರರಿಗೆ ಪ್ರತಿ ಟಿಪ್ಪರ್ ಗೆ, 51,000 ಪಾವತಿಸಲಾಗುತ್ತದೆ. ಚಾಲಕನಿಗೆ, 18,000 ಮತ್ತು ಕ್ಲೀನರ್ ಗೆ ತಿಂಗಳಿಗೆ, 13,000 ಸಿಗಬೇಕಿದೆ. ಪಿಎಫ್ ಮತ್ತು ಇಎಸ್ಐ ಕಡಿತಗಳ ನಂತರ ಈ ಮೊತ್ತ ಸಿಗಬೇಕು. ಇದು ಇಂಧನ ಮತ್ತು ನಿರ್ವಹಣೆಯನ್ನು ಒಳಗೊಂಡಿರುತ್ತದೆ ಎಂದರು. ”

ಮತ್ತೊಂದು ಬಂಗಾಳಿ ಮುಸ್ಲಿಮರು ಕಾರ್ಯನಿರ್ವಹಿಸುತ್ತತಿರುವ ಪ್ರದೇಶಕ್ಕೆ ಭೆಟಿನೀಡಿದಾಗ ಅಲ್ಲಿಯೂ ಬಹುವರ್ಷಗಳಿಂದ ವೇತನವನ್ನು ಪಡೆಯದೇ ಕಾರ್ಯನಿರ್ವಹಿಸುತ್ತಿರವ ಅನೇಕ ಜನ ಸಿಕ್ಕರು.ಅಲ್ಲಿದ್ದ ಎಲ್ಲಾ ಟ್ರಕ್ ಗಳು, ಎಲ್ಲವೂ ಬಾಂಗ್ಲಾದೇಶದವರ ಒಡೆತನದಲ್ಲಿದ್ದವು. ಗುತ್ತಿಗೆದಾರರು ನಮ್ಮನ್ನು ಅವರ ಅನುಕೂಲಕ್ಕಾಗಿ ಬಳಸಿಕೊಳ್ಳುತಿದ್ದಾರೆ ಎಂಬುದು ಅವರೆಲ್ಲರ ಅರೋಪ.

ಈ ಬಗ್ಗೆ ಇನ್ನಾದರೂ ಬಿಬಿಎಂಪಿ ಎಚ್ಚೆತ್ತುಕೊಂಡು, ಗುತ್ತಿಗೆದಾರರ ವಿರುದ್ದ ಕಾನೂನು ಕ್ರಮವನ್ನು ಜರುಗಿಸಿ ಬೆಂಗಳೂರಿನ ಕಸ ನಿರ್ವಹಣೆಮಾಡುತ್ತಿರುವ ಬಂಗಾಳಿ ಮುಸ್ಲಿಮರಿಗೆ ದಶಕಗಳಿಂದ ಆಗುತ್ತಿರುವ ಅನ್ಯಾಯಕ್ಕೆ ಈಗಲಾದರೂ ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕಿದೆ.