ಬೆಂಗಳೂರು ಅರಮನೆ ಆಸ್ತಿಯೂ, ಡಿ.ಕೆ. ಶಿವಕುಮಾರ್ ಬೇನಾಮಿ ಸಂಬಂಧವೂ

ಸುಪ್ರೀಂ ಕೋರ್ಟ್ ಆದೇಶವನ್ನು ನಿರ್ಲಕ್ಷಿಸಿ ಬೆಂಗಳೂರು ಅರಮನೆ ಆಸ್ತಿಯನ್ನು ಪರಭಾರೆ ಮಾಡಲಾಗಿದೆ ಎಂಬ ವಾದವೂ, ಡಿಕೆಶಿ ಬೇನಾಮಿ ಆಸ್ತಿ ವಿಚಾರವೂ ಮಿಳಿತಗೊಂಡು, ಈ ಪ್ರಕರಣವನ್ನ ಜಾರಿ ನಿರ್ದೇಶನಾಲಯ ನ್ಯಾಯಾಲಯದ ಮುಂದೆ ಪ್ರಸ್ತಾಪಿಸಿದೆ. 

ಬೆಂಗಳೂರು ಅರಮನೆ ಆಸ್ತಿಯೂ, ಡಿ.ಕೆ. ಶಿವಕುಮಾರ್ ಬೇನಾಮಿ ಸಂಬಂಧವೂ

ಕಳೆದ ವರ್ಷದ ಇದೇ ದಸರಾ ಸಮಯದಲ್ಲಿ ನಿಧನವಾಗಿ ಸುದ್ದಿಯಾಗಿದ್ದ ರಾಜಮನೆತನದ ವಿಶಾಲಾಕ್ಷಿದೇವಿಯ ಹೆಸರೀಗ ಡಿ.ಕೆ.ಶಿವಕುಮಾರ್ ವಿಚಾರದಲ್ಲಿ ಮತ್ತೆ ಸುದ್ದಿಗೆ ಬಂದಿದೆ.

ಮೈಸೂರಿನ 25 ನೇ ಮತ್ತು ಕಟ್ಟಕಡೆಯ ರಾಜ ಜಯಚಾಮರಾಜೇಂದ್ರ ಒಡೆಯರ್ ಗೆ ಆರು ಮಕ್ಕಳು. ಇದರಲ್ಲಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಒಬ್ಬರೇ ಗಂಡುಸಂತಾನವಾದರೆ ಉಳಿದವರೆಲ್ಲ ಹೆಣ್ಣು ಮಕ್ಕಳು, ಇದರಲ್ಲಿ ಕೊನೆಯವರೇ ವಿಶಾಲಾಕ್ಷಿದೇವಿ. 

480 ಎಕರೆ ವಿಸ್ತೀರ್ಣವಿರುವ ಬೆಂಗಳೂರು ಅರಮನೆ ಸೇರಿದಂತೆ, ವಿವಿಧ ಆಸ್ತಿ ತಗಾದೆ ಈ ರಾಜ ಕುಟುಂಬದವರಲ್ಲೇ ಇತ್ತು. ಮಾಜಿ ಪ್ರಧಾನಿ ದೇವೇಗೌಡರನ್ನ ವಿವಾದ ಬಗೆಹರಿಸಿಕೊಡುವಂತೆ ಮೊರೆ ಹೋಗಿದ್ದಂತೆ, ನ್ಯಾಯಾಲಯಗಳಲ್ಲೂ ಖಟ್ಲೆಗಳಿದ್ದವು. ಇದೆಲ್ಲ ಕೌಟುಂಬಿಕ ವಿಚಾರಗಳು.
ಕೋಟ್ಯಂತರ ಬೆಲೆ ಬಾಳುವ ಬೆಂಗಳೂರು ಅರಮನೆ ಆವರಣದಲ್ಲಿ 52 ಕ್ಕೂ ಹೆಚ್ಚು ಅಕ್ರಮ ನಿರ್ಮಾಣಗಳಿವೆ, ಜಯಮಹಲ್ ರಸ್ತೆ ವಿಸ್ತರಣೆಗೆ 36 ಎಕರೆ ಭೂಮಿ ಬಿಟ್ಟುಕೊಡಬೇಕು, ಈ ಆವರಣದಲ್ಲಿ ವಿವಿಧ ಕಾರ್ಯಕ್ರಮಗಳಿಗೆ ಬಾಡಿಗೆ ಆಧಾರದಲ್ಲಿ ಜಾಗ ಕೊಡುವಂಥದ್ದು ಬೇಡ ಎಂಬಿತ್ಯಾದಿ ವಿಚಾರಗಳು ನ್ಯಾಯಾಲಯದ ಮುಂದಿರುವಂತೆಯೇ, ಆದಾಯ ತೆರಿಗೆ ಇಲಾಖೆಯೂ ಇಂಥ ತಗಾದೆಗಳ ಒಂದು ಭಾಗವಾಗಿದೆ. 

2017 ರ ಜೂನ್ 28 ರಂದು ವಿಶಾಲಾಕ್ಷಿ ದೇವಿ, ಚಂದ್ರಶೇಖರ ಸುಖಾಪುರಿ ಮಧ್ಯಸ್ಥಿಕೆಯಲ್ಲಿ ಶಶಿಕುಮಾರ್ (ಡಿಕೆಶಿ ನಾದಿನಿ ಪತಿ) ಜತೆ ಒಪ್ಪಂದ ಮಾಡಿಕೊಳ್ಳುತ್ತಾರೆ. ಅದರನುಸಾರ  5 ಎಕರೆ ಭೂಮಿಯನ್ನ 20 ವರ್ಷಗಳ ಅವಧಿಗೆ, ಪ್ರತೀ ಮೂರು ವರ್ಷಕ್ಕೆ ಶೇ.3 ರಷ್ಟು ಬಾಡಿಗೆ ದರ ಏರಿಕೆ ಮಾಡುವುದು ಮತ್ತು ಗುತ್ತಿಗೆ ಮುಗಿದ ಬಳಿಕ ಠೇವಣಿ ಹಣ 20 ಲಕ್ಷ ವಾಪಸ್ಸು ಕೊಡುವುದು ಎಂಬ ಒಪ್ಪಂದವಾಗಿರುತ್ತೆ.

ಅದೇ ದಿನ ಮತ್ತೊಂದು ಒಪ್ಪಂದವಾಗಿ ಯಾವುದೇ ದರ ನಮೂದಿಸದೆ ಪಕ್ಷಗಾರರು ಸಮ್ಮತಿಸಿದ ದರದಲ್ಲಿ ಐದು ಎಕರೆ ಭೂಮಿ ಮಾರಾಟಕ್ಕೆ ಒಪ್ಪಿ, ಅದಕ್ಕಾಗಿ 80 ಲಕ್ಷ ಚೆಕ್ ರೂಪದಲ್ಲಿ ಮುಂಗಡವಾಗಿ ವಿಶಾಲಾಕ್ಷಿದೇವಿಯವರಿಗೆ ಕೊಡಲಾಗಿತ್ತು.. 

ಹೀಗೆ ಮುಂಗಡವಾಗಿ ಕೊಟ್ಟ ಹಣ ಮತ್ತು ನಂತರದಲ್ಲಿ ಕೊಟ್ಟ ನಾಲ್ಕು ಕೋಟಿ ರು.ಗಳನ್ನ ಶಿವಕುಮಾರ್ ಆಪ್ತ ಕಾರ್ಯದರ್ಶಿ ಮತ್ತು ಆಪ್ತ ಸಹಾಯಕನ ಮೂಲಕ ಷಡ್ಡಕ ಶಶಿಕುಮಾರ್ ಗೆ ತಲುಪಿಸಲಾಗಿತ್ತು ಎಂಬುದು ಆದಾಯ ತೆರಿಗೆಯ ಬೇನಾಮಿ ವಿಭಾಗದವರ ವಾದ. ಇಲ್ಲಿ ಶಿವಕುಮಾರ್ ಬೇನಾಮಿ ಆಸ್ತಿ ಮಾಡಿದ್ದಾರೆ, ವಿಶಾಲಾಕ್ಷಿ ವಿಚಾರಣೆ ಸಂದರ್ಭದಲ್ಲಿ ಹಣ ಹೇಗೆ ಬಂತು ಎಂಬ ಪ್ರಶ್ನೆಗೆ ಕೊಟ್ಟ ಉತ್ತರದಲ್ಲಿ ಡಿಕೆಶಿ ಹೆಸರು ಉಲ್ಲೇಖವಿರುವುದರಿಂದ ಇದು ಪಕ್ಕಾ ಬೇನಾಮಿ ವ್ಯವಹಾರ ಎಂದು ನ್ಯಾಯಾಲಯದ ಮುಂದೆ ವಾದಿಸಿದೆ.

ಸರ್ವೊಚ್ಚ ನ್ಯಾಯಾಲಯ ಬೆಂಗಳೂರು ಅರಮನೆ ಆಸ್ತಿ ಯಾವುದೇ ರೀತಿ ಪರಭಾರೆ ಮಾಡುವಂತಿಲ್ಲ ಎಂದಿದ್ದರೂ, ಇಲ್ಲಿ ಪರಭಾರೆಯಾಗಿದೆ ಎಂಬ ವಾದವೂ, ಡಿಕೆಶಿ ಬೇನಾಮಿ ಆಸ್ತಿ ವಿಚಾರವೂ ಮಿಳಿತಗೊಂಡು, ಈ ಪ್ರಕರಣವನ್ನ ಜಾರಿ ನಿರ್ದೇಶನಾಲಯ ನ್ಯಾಯಾಲಯದ ಮುಂದೆ ಪ್ರಸ್ತಾಪಿಸಿದೆ. ಹೀಗಾಗಿ ಈ ಅಂಶವೂ ಸೇರಿಕೊಂಡು ಡಿಕೆ ಶಿವಕುಮಾರ್ ಬಂಧಿಯಾಗಿರಬೇಕಾಗಿ ಬಂದಿದೆ.

ಗುಂಡ್ಲುಪೇಟೆ ಅಭಯಾರಣ್ಯದಲ್ಲಿ ಪತಿ ಗಜೇಂದ್ರಸಿಂಗ್ ಜತೆ, ವನ್ಯಪ್ರಿಯೆಯಾಗಿದ್ದ ವಿಶಾಲಾಕ್ಷಿದೇವಿಗೆ  ಸಿಕ್ಕಿದ ಎರಡು ಚಿರತೆ ಮರಿಗಳನ್ನ ಸಾಕಿ, ಬುಲ್ಲಿ ಮತ್ತು ಬೇಬಿ ಎಂಬ ಹೆಸರಿಟ್ಟು, ಥೇಟು ಮಕ್ಕಳಂತೆಯೇ ಸಾಕಿದ್ದರು. ನಂತರದಲ್ಲಿ ಕಾಡಿಗೆ ಅವನ್ನ ಬಿಟ್ಟಾಗ ಗಂಡು ಚಿರತೆ ಬುಲ್ಲಿ ಸತ್ತುಹೋಯಿತು. ಹೆಣ್ಣು ಚಿರತೆ ಬೇಬಿಯನ್ನ ನೋಡಲು ವಿಶಾಲಾಕ್ಷಿ ಹೋಗಿ, ಹೆಸರಿಡಿದು ಕೂಗಿದೊಡನೆ ಓಡೋಡಿ ಬರುತ್ತಿತ್ತು, ಇವರ ಮಡಿಲಲ್ಲಿ ಮಲಗಿ ಆಟವಾಡುತ್ತಿತ್ತು. ಅಷ್ಟರ ಮಟ್ಟಿಗಿನ  ಅನೋನ್ಯತೆ ಬೆಳೆಸಿಕೊಂಡಿದ್ದರಿಂದಲೂ ಸುದ್ದಿಯಾಗಿದ್ದ  ವಿಶಾಲಾಕ್ಷಿ ದೇವಿಯ ಆಸ್ತಿ ವಿಚಾರದಲ್ಲಿ ಶಿವಕುಮಾರ್ ಹೆಸರು ಥಳುಕು ಹಾಕಿಕೊಂಡಿದೆ.