ಬೆಂಗಳೂರು ಜನ್ಯ ಕ್ರೀಡಾ ಪ್ರತಿಭೆಗಳ ಸರಮಾಲೆ 

ಬೆಂಗಳೂರು ಜನ್ಯ ಕ್ರೀಡಾ ಪ್ರತಿಭೆಗಳ ಸರಮಾಲೆ 

ಬ್ಯಾಟ್ಸ್ ಮ್ಯಾನ್ನಿನ ಸ್ಥೈರ್ಯಗೆಡಿಸಲು ಅಥವಾ ಅವನ ಏಕಾಗ್ರತೆಗೆ ಭಂಗ ತರಲು ಎದುರಾಳಿ ತಂಡದವರು ಅನೇಕ ತಂತ್ರಗಳನ್ನು ಅನುಸರಿಸುತ್ತಾರೆ. ಬೌಲರ್ ಬ್ಯಾಟ್ಸ್ ಮ್ಯಾನ್ನತ್ತ ದುರುಗುಟ್ಟಿ ನೋಡುವುದು ಅಥವಾ ಅವನ ಮೇಲೆ ಕೆಟ್ಟ ಪದ ಬಳಸುವುದು ಇದ್ದಿದ್ದೇ. ಟಿವಿ ಯುಗಕ್ಕೆ ಮುಂಚೆ ಕ್ರಿಕೆಟ್ ಪ್ರೇಮಿಗಳು ಉನ್ನತ ದರ್ಜೆಯ ಕ್ರಿಕೆಟ್ ಸವಿಯಲು ಅವಲಂಬಿಸುತ್ತಿದ್ದ ಸಾಧನ ರೇಡಿಯೋ ಅಥವಾ ಟ್ರಾನ್ಸಿಸ್ಟರ್. ಮ್ಯಾಚ್ ನೋಡಲಿಕ್ಕೆ ಹೋದಾಗಲೂ ಅದನ್ನು ಕ್ರೀಡಾಂಗಣಕ್ಕೆ ಕೊಂಡೊಯ್ಯುತ್ತಿದ್ದ ಪದ್ಧತಿ ಇತ್ತು. ಒಮ್ಮೆ ಬಿ ಎಸ್ ಚಂದ್ರಶೇಖರ್ ಬೌಲ್ ಮಾಡುತ್ತಿದ್ದು ಸುನಿಲ್ ಗವಾಸ್ಕರ್ ಬ್ಯಾಟ್ ಮಾಡುತ್ತಿದ್ದರು. ಬೀಟ್ ಆದ ಗವಾಸ್ಕರರತ್ತ ಹೋದ ಚಂದ್ರ ಅವರಿಗೆ ಬೈಗುಳ ಬಳಸಲಿಲ್ಲ. "ಕೇಳಿದ್ಯಾ?" ಪ್ರೇಕ್ಷಕರಾರೋ ರೇಡಿಯೊ ಕಾಮೆಂಟರಿ ಬದಲು ಹಿಂದಿ ಚಿತ್ರಗೀತೆಗಳನ್ನು ಕೇಳುತ್ತಿದ್ದು, ಚಂದ್ರ ಕೇಳಿದ್ದು ಸ್ಟೇಡಿಯಮ್ಮನ್ನು ಅಲೆಅಲೆಯಾಗಿ ತುಂಬಿಕೊಳ್ಳುತ್ತಿದ್ದ ಮುಕೇಶನ ಒಂದು ಹಾಡನ್ನು! ಮುಕೇಶ್ ಹಾಡುಗಳನ್ನು ಆಸ್ವಾದಿಸುತ್ತಿದ್ದ ಚಂದ್ರರನ್ನು ಹುರಿದುಂಬಿಸಲು ಗವಾಸ್ಕರ್ ಕೆಲವೊಮ್ಮೆ ಆ ಗಾಯಕನ ಹಾಡುಗಳನ್ನು ಕ್ರೀಡಾಂಗಣದದಲ್ಲಿ ಗುನುಗುನಿಗಿಸಿದ್ದೂ ಇದೆ. ಚಂದ್ರರನ್ನು ಹತ್ತಿರದಿಂದ ಬಲ್ಲವರಿಗೆ ಇಂತಹ ಪ್ರಸಂಗಗಳು ಗೊತ್ತು.  

ಈ ತೆರನಾದ ಬೇರೆಬೇರೆ ಕ್ರೀಡೆಗಳಿಗೆ ಸಂಬಂಧಿಸಿದ ಅಪರೂಪದ ಮಾಹಿತಿಯ ಮಹಾಪೂರ ಬೆಂಗಳೂರಿನಲ್ಲಿ ಇತ್ತೀಚೆಗೆ ಬಿಡುಗಡೆಯಾದ ಪ್ಲೇಬ್ಯಾಕ್ ಎಂಬ ಅಪರೂಪದ ಪುಸ್ತಕದಲ್ಲಿ ಅಡಕವಾಗಿದೆ. ಬೆಂಗಳೂರು ತಯಾರಿಸಿದ ಜಿ ಆರ್ ವಿಶ್ವನಾಥ್, ಬಿ ಎಸ ಚಂದ್ರಶೇಖರ್, ಇ ಎ ಎಸ ಪ್ರಸನ್ನ, ಎಸ ಎಂ ಎಚ್ ಕಿರ್ಮಾನಿ ಮುಂತಾದ ಹಿಂದಿನ ಕ್ರಿಕೆಟ್ ತಾರೆಗಳವರೆಗೂ ಬಹಳಷ್ಟು ಜನರ ನೆನಪು ಹೋಗಬಹುದು, ಆದರೆ ಆ ನಾಲ್ವರೂ ಮುಂಚೂಣಿಗೆ ಬರುವುದರಲ್ಲಿ ಮುಖ್ಯಪಾತ್ರ ವಹಿಸಿದ್ದು ವಿ ಸುಬ್ರಮಣ್ಯ ಎಂಬುದು ಎರಡು ತಲೆಮಾರು ಹಿಂದಿನ ಕ್ರಿಕೆಟ್ ಅಭಿಮಾನಿಗಳಿಗಷ್ಟೇ ಗೊತ್ತು. ಎಲ್ಲಾ ತರಹದ ಸೌಕರ್ಯ, ಸವಲತ್ತುಗಳನ್ನು ಪಡೆದ ಇಂದಿನ ಜನಾಂಗ ಸುಬ್ರಮಣ್ಯ (ಸುಬ್ಬು) ಅಂತಹ ಉತ್ಕೃಷ್ಟ ಪ್ರತಿಭೆಯ ಹಿನ್ನೆಲೆ ತಿಳಿದರೆ ಅವಾಕ್ಕಾಗುತ್ತಾರೆ. 

ಮಲ್ಲೇಶ್ವರಂನ ಮನೆಯ ದೊಡ್ಡ ಆವರಣದಲ್ಲಿ ಕಸಿನ್ ಗಳ ಜತೆ ಕ್ರಿಕೆಟ್ ಆಡಿಯಷ್ಟೇ ಅನುಭವವಿದ್ದ ಸುಬ್ಬು ಕ್ರಿಕೆಟ್ ಆಟದ ಬಗ್ಗೆ ತಿಳಿದುಕೊಳ್ಳುತ್ತಿದ್ದುದು ಆಗಿದ್ದ ಏಕೈಕ ಸಮೂಹ ಮಾಧ್ಯಮದ ಸಂಪರ್ಕ ಸಾಧನವಾದ ರೇಡಿಯೋನಿಂದ. ಅದ್ಭುತ ಬ್ಯಾಟಿಂಗ್ ಮತ್ತು ಲೆಗ್ಬ್ರೇಕ್ ಬೌಲ್ ಮಾಡುತ್ತಿದ್ದ ಸುಬ್ಬು ಮೈಸೂರು ತಂಡಕ್ಕೆ ಆಯ್ಕೆಯಾಗಿ ತನ್ನ ಚೊಚ್ಚಲ ರಾನಾಂಜಿ ಪಂದ್ಯವನ್ನು ಹೈದರಾಬಾದ್ ವಿರುದ್ಧ ಆಡಿದಾಗ ತಂಡದ ನಾಯಕನಾದ ಎ ಎಸ್ ಕೃಷ್ಣಸ್ವಾಮಿಗೆ ಸುಬ್ಬು ಯಾರೆಂದೇ ತಿಳಿದಿರಲಿಲ್ಲ. ಸುಬ್ಬು ಹೇಳುವಂತೆ "ಆತ ನಾನು ಯಾರೆಂದು ತಿಳಿದುಕೊಳ್ಳುವ ಪ್ರಯತ್ನವನ್ನೂ ಮಾಡಲಿಲ್ಲ."  ಮೈಸೂರು ಮೂಲದ ಕೃಷ್ಣಸ್ವಾಮಿ ಬೆಂಗಳೂರಿನಿಂದ ತನ್ನ ಹುಟ್ಟೂರಿಗೆ ವಾಪಸ್ ಆಗಿದ್ದರಿಂದ ಆತನಿಗೆ ತನ್ನ ತಂಡದ ಎಲ್ಲಾ ಸದಸ್ಯರ ಕುರಿತು ಮಾಹಿತಿ ಇರುವುದಿಲ್ಲ!

ಸುಬ್ಬುವಿನ ಸಾಮರ್ಥ್ಯದ ಪರಿಚಯವಿದ್ದ ಹೊಸ ಕ್ಯಾಪ್ಟನ್ ವಾಸುದೇವಮೂರ್ತಿ  ಅದೇ ಸೀಜನ್ನಿನ ರಣಜಿ ಫೈನಲ್ ನಲ್ಲಿ ಸುಬ್ಬುವಿಗೆ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಡ್ತಿ ನೀಡುತ್ತಾರೆ. ಸುಬ್ಬು  ಶತಕ ಸಿಡಿಸಿ ತನ್ನ ಪ್ರತಿಭೆಯನ್ನು ಜಾಹೀರುಗೊಳಿಸುತ್ತಾರಾದರೂ, ಮೈಸೂರು ತಂಡ ಇನಿಂಗ್ಸ್ ಒಂದರ ಅಪಜಯ ಅನುಭವಿಸುತ್ತಾರೆ. ಮರುವರ್ಷ ರಣಜಿ ಸೆಮಿಫೈನಲ್ ನಲ್ಲಿ ಕುಂಜು ಮಣಿ ಎಂಬ ಅಡ್ಡ ಹೆಸರಿನಿಂದಲೂ ಕರೆಯಲ್ಪಡುತ್ತಿದ್ದ ಸುಬ್ಬು ಅದೇ ತಂಡದ ವಿರುದ್ಧ 99 ರನ್ ಗಳಿಸುತ್ತಾರೆ. ಕೆಲ ಕ್ರಮಂಕಾದ ಬ್ಯಾಟ್ಸ್ ಮ್ಯಾನ್ ರನ್ನು ರಕ್ಷಿಸಲು ಹೋಗಿ ಶತಕ ವಂಚಿತರಾಗುತ್ತಾರೆ. ದುಲೀಪ್ ಟ್ರೋಫಿಯಲ್ಲಿ ಉತ್ತರ ಮತ್ತು ಪಶ್ಚಿಮ ವಲಯಗಳ ವಿರುದ್ಧ ಮಿಂಚಿದ ಸುಬ್ಬು ಭಾರತದ ತಂಡಕ್ಕೂ ಆಯ್ಕೆಯಾಗಿ ಕೆಲವು ಪಂದ್ಯಗಳನ್ನಾಡುತ್ತಾರೆ. ಮದ್ರಾಸ್ ನಲ್ಲಿ ನಡೆದ ವಿಂಡೀಸ್ ವಿರುದ್ಧದ ಟೆಸ್ಟ್ ನಲ್ಲಿ ವೆಸ್ಲಿ ಹಾಲ್ ಮತ್ತು ಗ್ರಿಫಿತ್ ರಂಥ ಗುಣಮಟ್ಟದ ವೇಗಿಗಳನ್ನು ಸದೆಬಡಿದು 61 ಗಳಿಸಿದ್ದು ಬಿಟ್ಟರೆ  ಟೆಸ್ಟ್ ಗಳಲ್ಲಿ ಸುಬ್ಬು ಅಂತ ಯಶಸ್ಸು ಕಾಣಲಿಲ್ಲ. (ಇಂಗ್ಲೆಂಡ್ ವಿರುದ್ಧ ಆರಂಭಿಕ ಬ್ಯಾಟ್ಸಮನ್ ಬಾಯ್ಕಾಟ್ ವಿಕೆಟ್ ಗಳಿಸಿದ್ದು ಅವರ ಸಾಧಾರಣ ಬೌಲಿಂಗ್ ಯಶಸ್ಸಿನ ಮುಖ್ಯಾಂಶ.) ಕ್ರಿಕೆಟ್ ಗೆ ಅಂತಹ ಪ್ರೋತ್ಸಾಹವಿರದಿದ್ದ ಕಾರಣಕ್ಕಾಗಿ ಸುಬ್ಬು ಆಸ್ಟ್ರೇಲಿಯಾಗೆ ಸ್ಥಳಾಂತರಗೊಳ್ಳುತ್ತಾರೆ. ಸುಬ್ಬುವಿನ ಸಹೋದರರಾಳದ ವಿ ರಾಮದಾಸ್ ಮತ್ತು ವಿ ಕೃಷ್ಣಪ್ರಸಾದ್ ಕೂಡ ರಾಜ್ಯತಂಡವನ್ನು ಪ್ರತಿನಿಧಿಸಿದ್ದರು. 

ಬಾಂಬೆ, ಮದರಾಸು ನಗರಗಳಲ್ಲಿದ್ದಂತೆ ಯಾವುದೇ ಹೆಸರಾಂತ ಕ್ರಿಕೆಟ್ ಟೂರ್ನಮೆಂಟ್ ಗಳೂ ಬೆಂಗಳೂರಿನಲ್ಲಿಲ್ಲದಿದ್ದ ಕಾಲಘಟ್ಟದಲ್ಲಿ ಸುಬ್ಬು ಹೆಸರು ಮಾಡಿದ್ದು ಹೆಚ್ಚುಗಾರಿಕೆಯೇ. 

ಬೆಂಗಳೂರು-ಜನ್ಯ  ಇತರೆ ಕ್ರಿಕೆಟ್ ಆಟಗಾರರಾದ ಬಿ ಜಯರಾಮ್, ಎಂ ಚಿನ್ನಸ್ವಾಮಿ, ಶಾಂತಾ ರಂಗಸ್ವಾಮಿ ಕೂಡ ಈ ವಿಶಿಷ್ಟ ಪುಸ್ತಕದಲ್ಲಿ ದಾಖಲಾಗಿದ್ದಾರೆ. 

ನಮ್ಮಲ್ಲಿ ಕ್ರಿಕೆಟ್ ಅತ್ಯಂತ ಜನಪ್ರಿಯ ಕ್ರೀಡೆಯಾಗಿರುವುದರಿಂದ ಪ್ಲೇಬ್ಯಾಕ್ ಪುಸ್ತಕದಲ್ಲಿ ಪ್ರಸ್ತಾಪವಾಗಿರುವ ಕ್ರಿಕೆಟಿಗರನ್ನು ಕುರಿತು ಲೇಖನ ಆರಂಭಿಸಿದೆ. ಎರಿಕ್ ಪ್ರಭಾಕರ್, ಹೆನ್ರಿ ರೆಬೆಲೋ, ಮಾರ್ಜರಿ ಸುಆರೆಜ್, ಡಿಯಾನ ತೆವಾರಿ, ಸಿಎಂ ಮುತ್ತಯ್ಯ, ಕೆನ್ನೆತ್ ಪೊವೆಲ್, ಎನ್ ಲಿಂಗಪ್ಪ, ಪಿಸಿ ಪೊನ್ನಪ್ಪ, ನಿರ್ಮಲ ಪೊನ್ನಪ್ಪ, ಸಲ್ದಾನ ಮಾಸ್ಕರನಾಸ್ (ಅಥ್ಲೆಟಿಕ್ಸ್); ಎಂ ರಾಜಗೋಪಾಲ್, ಬ್ರಿಟೊ ಸಹೋದರಿಯರು, ಎಂಪಿ ಗಣೇಶ್, ವಿಜೆ ಪೀಟರ್ (ಹಾಕಿ); ಅಹ್ಮದ್ ಖಾನ್, ಕೆವಿ ವರದರಾಜ್, ಎಂ ಕೆಂಪಯ್ಯ (ಫುಟ್ಬಾಲ್); ದೇಚ್ಚು ಅಪ್ಪಚ್ಚು, ಲಾರಾ ವುಡ್ಬ್ರಿಜ್, (ಟೆನಿಸ್); ಉಷಾ, ಸುಂದರ್ ರಾಜ್ (ಟೇಬಲ್ ಟೆನಿಸ್);  ಅರವಿಂದ್ ಸವೂರ್ (ಬಿಲಿಯರ್ಡ್ಸ್/ಸ್ನೂಕರ್); ಮತ್ತು ಆರ್ಥರ್ ಸುಆರೆಜ್  (ಬಾಕ್ಸಿಂಗ್) ರ ಕುರಿತು ಸಮಗ್ರ ಲೇಖನಗಳಿವೆ.

ನಾಡು ಕಂಡ ಹೆಸರಾಂತ ಕ್ರೀಡಾ ಲೇಖಕರಾದ ಆರ್ ಕೌಶಿಕ್, ಜಯಂತ್ ಕೋಡ್ಕಣಿ, ಗುಳು ಎಜ್ಹಿಕಲ್, ಮುಂತಾದವರು ಮೇಲೆ ಹೆಸರಿಸಿದ ಕ್ರೀಡಾಪ್ರತಿಭೆಗಳ ಚಿತ್ರಣ ನೀಡಿದ್ದಾರೆ. 

ಕ್ರೀಡೆಗೆ ಮನೆಯಲ್ಲಾಗಲೀ, ಸಮಾಜದಲ್ಲಾಗಲೀ ಏನೇನೂ ಉತ್ತೇಜನ ಸಿಗದಿದ್ದ ದಿನಗಳಲ್ಲಿ ಸ್ವಪ್ರೇರಿತರಾಗಿ ಕ್ರೀಡಾಂಗವನ್ನು ಪ್ರವೇಶಿಸಿ ಅಲ್ಲಿ ಎದುರಿಸಬೇಕಾದ ಸವಾಲುಗಳ ಸ್ವರೂಪವೇನು, ಹುಮ್ಮಸ್ಸು ಮತ್ತು ಪರಿಶ್ರಮದಿಂದ ಆ ತಲೆಮಾರಿನ ಈ ಪ್ರತಿಭೆಗಳು ಸಾಧನೆಯ ಉತ್ತುಂಗಕ್ಕೇರಿದ ರೋಚಕ ಮಾಹಿತಿಯನ್ನರಿಯಲು ಈ ಪುಸ್ತಕ ಸಹಾಯಕ. ಇಂದಿನ ಮತ್ತು ಮುಂದಿನ ತಲೆಮಾರಿನ ಕ್ರೀಡಾಪಟುಗಳನ್ನೂ, ಕ್ರೀಡೋತ್ಸಾಹಿಗಳನ್ನೂ ಹುರಿದುಂಬಿಸುವಲ್ಲೂ ಇದು ಗಣನೀಯ ಪಾತ್ರವಹಿಸಬಲ್ಲದು.

ಆ ದಿನದ ಪ್ರತಿಭೆಗಳ ಪರಿಚಯವಿರುವ ಮಾಜಿ ಕ್ರೀಡಾ ಸಚಿವೆ ಮಾರ್ಗರೇಟ್ ಆಳ್ವ ಮತ್ತು ಪುಸ್ತಕದ ಸಂಪಾದಕ ಮತ್ತು ಹಿರಿಯ ಪತ್ರಕರ್ತ ಸ್ಟಾನ್ಲಿ ಕರ್ವಾಲೋ ಪುಸ್ತಕದ ಬೆನ್ನುಡಿ ಬರೆದಿದ್ದಾರೆ. ಬೆಂಗಳೂರಿನ ಪ್ರಕಾಶಕರೇ ಆದ ಎಟಿಸಿ ಪಬ್ಲಿಷರ್ಸ್ ಪುಸ್ತಕವನ್ನು ಹೊರತಂದಿದ್ದಾರೆ. 

ಇದೇನಿದು, ಅಸಾಧಾರಣ ಪ್ರತಿಭೆಗಳಾದ  ಅನಿಲ್ ಕುಂಬ್ಳೆ, ಪ್ರಕಾಶ್ ಪಡುಕೋಣೆ, ಮುಂತಾದವರ ಪ್ರಸ್ತಾಪವೇ ಇಲ್ಲ ಎಂದು ಹುಬ್ಬೇರಿಸುವವರಿಗೆ: ದೂರುವ ಅಗತ್ಯವಿಲ್ಲ. ಬೆಂಗಳೂರು ಸೃಷ್ಟಿಸಿದ  ಕ್ರೀಡಾ ಪ್ರತಿಭೆಗಳನ್ನೂ, ಕ್ರೀಡಾಲೋಕಕ್ಕೆ ಅವರ ಕೊಡುಗೆಯನ್ನೂ ದಾಖಲಿಸುವಲ್ಲಿ ಪ್ಲೇಬ್ಯಾಕ್ ಮೊದಲ ಹೆಜ್ಜೆಯಷ್ಟೆ. ಮತ್ತಿತರರ ಕುರಿತು ಪುಸ್ತಕಗಳು ಬಾಕಿ ಇವೆ.