ಬೂಸಿ ಯಡಿಯೂರಪ್ಪ : ಸಂಘಪರಿವಾರದ ಕಡಿವಾಣ ಕಿತ್ತೆಸೆದ ಮುದಿ ಕುದುರೆ

ಬೂಸಿ ಯಡಿಯೂರಪ್ಪ : ಸಂಘಪರಿವಾರದ ಕಡಿವಾಣ ಕಿತ್ತೆಸೆದ ಮುದಿ ಕುದುರೆ

ಕುದುರೆ ರೇಸ್ ನಲ್ಲಿ ಓಡುವ ಕುದುರೆಗಳು ವಯಸ್ಸಾದರೆ. ಕಾಲಿಗೆ ಗಾಯ ಮಾಡಿಕೊಂಡರೆ ಅವುಗಳಿಗೆ ಬೆಲೆ ಇರುವುದಿಲ್ಲ.ಹೆಚ್ಚಿನ ಸಲ ಗಾಯಗೊಂಡ ಕುದುರೆಗಳಿಗೆ ದಯಾಮರಣ ನೀಡಲಾಗುತ್ತದೆ. ರೇಸ್ ಕುದುರೆಗಳು ಆರು ಅಥವಾ ಏಳು ವರ್ಷವಾಗುವವರೆಗೆ ಮಾತ್ರ ಕ್ರಿಯಾಶೀಲವಾಗಿರುತ್ತವೆ. ಆನಂತರ ಅವುಗಳಿಗೆ ನಿವೃತ್ತಿ ನೀಡಲಾಗುತ್ತದೆ. ಬಿಜೆಪಿಯಲ್ಲೂ ಇತ್ತೀಚಿನ ವರ್ಷಗಳಲ್ಲಿ ಇದೇ ರೀತಿಯ ನಿಯಮ ಪಾಲಿಸಲಾಗುತ್ತಿದೆ. ರಾಜಕೀಯವಾಗಿ ಸಂಪೂರ್ಣ ಮೂಲೆಗುಂಪು ಮಾಡಲಾಗುತ್ತದೆ. ಎಲ್.ಕೆ.ಅಡ್ವಾಣಿ ಅವರಂಥ ಹಿರಿಯ ನಾಯಕರ ಕತೆ ಇದಕ್ಕಿಂತ ಭಿನ್ನವಲ್ಲ.

ಹಾಗೇ ಸಂಘ ಪರಿವಾರದ ಕಡಿವಾಣ ಕಿತ್ತೆಸೆದು ತನಗಿಷ್ಟ ಬಂದ ದಿಕ್ಕಿನಲ್ಲಿ ಓಡುತ್ತಿರುವ ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಎಂಬ ಮುದಿಕುದುರೆಯನ್ನು ನಿವೃತ್ತಿಗೊಳಿಸಲು ಸಂಘ ಪರಿವಾರ ಸಕಲ ರೀತಿಯಲ್ಲೂ ಸಜ್ಜಾಗಿದೆ. ಎಷ್ಟೇ ಹೇಳಿದರೂ ಯಾರ ಮಾತನ್ನೂ ಯಡಿಯೂರಪ್ಪ ಕೇಳುತ್ತಿಲ್ಲ ಎಂಬ ಸಿಟ್ಟು ಸಂಘ ಪರಿವಾರದ ಮಹಾನುಭಾವರಿಗಿದೆ. ಬಿಜೆಪಿಗೆ ಅಧಿಕಾರ ತಂದು ಕೊಡುವಲ್ಲಿ ಯಡಿಯೂರಪ್ಪ ವಹಿಸಿದ ಪಾತ್ರ ಬಹುಶಃ ಆ ಪಕ್ಷದ ಇತಿಹಾಸದಲ್ಲೇ ಯಾರೂ ವಹಿಸಿರಲಿಲ್ಲ. ಬಿಜೆಪಿ ಗೆಲುವಿನಗಾಥೆ ಎಂದರೆ ಯಡಿಯೂರಪ್ಪ ಅವರ ಹೋರಾಟಗಾಥೆಯೇ ಆಗಿರುತ್ತದೆ. ಇವೆರಡು ಒಂದನ್ನು ಬಿಟ್ಟು ಇನ್ನೊಂದು ಕಲ್ಪಿಸಿಕೊಳ್ಳುವ ಪ್ರತ್ಯೇಕ ಸಂಗತಿಯಲ್ಲ. 

ಯಡಿಯೂರಪ್ಪ ಲಿಂಗಾಯತ ಸಮುದಾಯಕ್ಕೆ ಸೇರಿದವರು. ಬಸವಣ್ಣ ಕಂಡ ಜಾತ್ಯತೀತ ಸಮಾಜದ ಕಲ್ಪನೆಯ ಫಲವಾಗಿ ರೂಪುಗೊಂಡ ಲಿಂಗಾಯತ ಸಮುದಾಯದವರು. ಹೀಗಾಗಿ ಎಷ್ಟೇ ದುಷ್ಟ ಲಿಂಗಾಯತರಿದ್ದರೂ ಅವರ ಎದೆಯೊಳಗೆ ಬಸವಣ್ಣ, ಅಕ್ಕಮಹಾದೇವಿಯ ವಚನಗಳ ತುಣುಕುಗಳು ತಲೆಮಾರುಗಳಿಂದ ಪ್ರವಹಿಸುತ್ತಲೇ ಬಂದಿರುತ್ತವೆ. ಯಡಿಯೂರಪ್ಪ ಅವರ ವಿರುದ್ಧ ಭ್ರಷ್ಟಾಚಾರದ ಆರೋಪವಿದೆ. ಕೆಲವು ಪ್ರಕರಣಗಳಲ್ಲಿ ಅವರು ಆರೋಪ ಮುಕ್ತರಾಗಿದ್ದರೂ ಇನ್ನೂ ಕೆಲವು ಪ್ರಕರಣಗಳು ಇತ್ಯರ್ಥವಾಗುವವರೆಗೆ ಅವರು ಕಳಂಕರಹಿತರಲ್ಲ.ಆದರೆ ಯಡಿಯೂರಪ್ಪ ಬಿಜೆಪಿ ಸಹಜ ಕೋಮುವಾದಿಯಂತೆ ಎಂದೂ ಕಾಣಲಿಲ್ಲ. ಅದಕ್ಕೆ ಕಾರಣ ಅವರೊಳಗಿನ ಲಿಂಗಾಯತ ಮನಸ್ಸು.ಲಿಂಗಾಯತ ಧರ್ಮ ಬ್ರಾಹ್ಮಣ್ಯವನ್ನು ಧಿಕ್ಕರಿಸಿದ್ದರೂ ಬೆರಳೆಣಿಕೆಯ ಕಾವಿ ಪೋಷಾಕುಧಾರಿಗಳು ಬ್ರಾಹ್ಮಣ್ಯದ ಕಳಂಕ ಮೆತ್ತಿಕೊಂಡಿದ್ದಾರೆ. ಅಂಥ ಸಮಸ್ಯೆ ಬಹುಶಃ ಯಡಿಯೂರಪ್ಪ ಯಾವತ್ತೂ ಎದುರಿಸಿರಲಾರರು. ಅವರನ್ನು ಅನೇಕ ವರ್ಷಗಳಿಂದ ಹತ್ತಿರದಿಂದಲೇ ನೋಡಿರುವ ನನಗೆ ಅದು ಮನದಟ್ಟಾಗಿದೆ. ರಾಜಕೀಯಕ್ಕೆ ಒಂದು ಪಕ್ಷ ಬೇಕು ಅಂತ ಬಿಜೆಪಿಯಲ್ಲಿ ಅವರಿದ್ದಾರೆ ಅಷ್ಟೇ . ಎಷ್ಟೋ ಸಲ ಹಾಗನ್ನಿಸಿದೆ. 

ಹೀಗಿದ್ದರೂ ಲಿಂಗಾಯತ ಧರ್ಮ ಜಾತಿಯಾಗಿದ್ದರ ಫಲವಾಗಿ ಅವರು ನೆಚ್ಚಿಕೊಂಡಿರುವುದು ಲಿಂಗಾಯತರ ಮತಗಳನ್ನೇ. ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಬಂದ ನಂತರ ಕಾಂಗ್ರೆಸ್ ಪಕ್ಷ ನಿರ್ಲಕ್ಷಿಸಿದ್ದ ದಲಿತ ಸಮುದಾಯದ ಕೆಲವು ಪಂಗಡಗಳನ್ನು ಗುರುತಿಸಿ ತಮ್ಮೆಡೆಗೆ ಸೆಳೆದುಕೊಂಡಿದ್ದು, ಹಿಂದುಳಿದ ಜಾತಿಗಳ ಪ್ರತಿಭೆಗಳಿಗೆ ಪ್ರಮುಖ ಅವಕಾಶಗಳನ್ನು ಕಲ್ಪಿಸಿದ್ದು ಯಡಿಯೂರಪ್ಪನವರ ಅದೇ ಲಿಂಗಾಯತ ಧರ್ಮದ ಮನಸ್ಸು. ದಿನದ ಇಪ್ಪತ್ನಾಲ್ಕು ಗಂಟೆಯೂ ರಾಜಕಾರಣವನ್ನೇ ಜೀವಿಸುವ ಯಡಿಯೂರಪ್ಪ ಒಂದರ್ಥದಲ್ಲಿ ಸರ್ವಾಧಿಕಾರಿ. ಯಾರದೇ ಮಾತನ್ನು ಕೇಳುವ ತೆರೆದ ಕಿವಿಗಳು ಅವರಿಗಿಲ್ಲ. ಆನೆ ನಡೆದದ್ದೇ ದಾರಿ ಎಂಬಂತೆ ರಾಜಕೀಯವನ್ನು ಕಂಡುಕೊಂಡವರು. ಒಂದು ಕಾಲದಲ್ಲಿ ಅವರ ವೀರಾವೇಶದ ಮಾತುಗಳು ಮತ ಸೆಳೆಯುವ ಅದ್ಭುತ ಅಸ್ತ್ರಗಳಾಗಿದ್ದವು. ಯಡಿಯೂರಪ್ಪ ಅಧಿಕಾರಾವಧಿಯಲ್ಲೇ ಬಿಜೆಪಿಯನ್ನು ನಿಯಂತ್ರಿಸುವ ಕೆಲವು ಬ್ರಾಹ್ಮಣ್ಯದ ಶಕ್ತಿಗಳು ಸಾಕಷ್ಟು ಸಂಪಾದನೆ ಮಾಡಿ ಭಾರೀ ಬಂಗಲೆಗಳನ್ನು ನಿರ್ಮಿಸಿ ಯಾವ್ಯಾವುದೋ ವ್ಯವಹಾರಗಳಲ್ಲೆಲ್ಲ ಹೂಡಿಕೆ ಮಾಡಿದ್ದಾರೆ.  ಇದೆಲ್ಲ ಯಡಿಯೂರಪ್ಪ ಕೃಪೆಯಿಲ್ಲದೇ ಸಾಧ್ಯವಾಗುತ್ತಿರಲಿಲ್ಲ. 

ಆದರೆ? ಯಡಿಯೂರಪ್ಪ ತಮ್ಮ ಮಾತು ಕೇಳುತ್ತಿಲ್ಲ ಎಂಬ ಕೋಪ ಸಂಘ ಪರಿವಾರಕ್ಕಿದೆ. ಯಡಿಯೂರಪ್ಪ ಅವರನ್ನು ಮಾಜಿ ನಾಯಕ ಮಾಡಲೆಂದೇ ಕೆಜೆಪಿಯಿಂದ ಬಿಜೆಪಿಗೆ ವಾಪಸ್ ಕರೆತಂದ ಶಕ್ತಿಗಳಿಗೆ ಯಡಿಯೂರಪ್ಪ ನಡೆ ಒಂದಿಷ್ಟೂ ಇಷ್ಟವಾಗುತ್ತಿಲ್ಲ. ಯಾಕೆಂದರೆ ಯಡಿಯೂರಪ್ಪ ಸುಮ್ಮನಿರುವ ವ್ಯಕ್ತಿಯಲ್ಲ. ಅವರು ಬಿಜೆಪಿಯ ದೇವೇಗೌಡರಿದ್ದಂತೆ. ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷದ ಯಡಿಯೂರಪ್ಪ ಇದ್ದಂತೆ. ಯಡಿಯೂರಪ್ಪ ಅವರನ್ನು ಬದಿಗೆ ತಳ್ಳಿ ಇನ್ಯಾರನ್ನೋ ಅಂದರೆ ತಾವು ಹೇಳಿದಂತೆ ಕೇಳುವ ವ್ಯಕ್ತಿಯನ್ನು ಅಧಿಕಾರಕ್ಕೆ ತರುವುದು ಸಂಘ ಪರಿವಾರದ ಉದ್ದೇಶ. ನರೇಂದ್ರ ಮೋದಿ ಅಲೆ ಇದೆ ಎಂಬ ಭ್ರಮೆಯಲ್ಲೇ ಇರುವ ಸಂಘ ಪರಿವಾರ, ವ್ಯಕ್ತಿ ಯಾರಾದರೂ ಕರ್ನಾಟಕದಲ್ಲಿ ಅಧಿಕಾರ ಪಡೆಯಬಹುದು ಎಂಬ ನಂಬಿಕೆಯಲ್ಲಿದೆ. ಹೀಗಾಗಿ ಅವರ್ಯಾರಿಗೂ ಯಡಿಯೂರಪ್ಪ ಬೇಕಿಲ್ಲ. ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿ ಅಧಿಕಾರಕ್ಕೆ ತಂದ ಯಡಿಯೂರಪ್ಪ ಈಗ ಬೇಕಿಲ್ಲ. ಹೀಗಾಗಿಯೇ ಮೈತ್ರಿ ಸರ್ಕಾರದ ಪಾಲುದಾರ ಪಕ್ಷಗಳು ಕಿತ್ತಾಡಿಕೊಂಡು ಅದಾಗಿಯೇ ನೆಲಕಚ್ಚಬೇಕೇ ಹೊರತು ಬಿಜೆಪಿ ಯಾವುದೇ ಪ್ರಯತ್ನವನ್ನೂ ಮಾಡುವುದೇ ಬೇಡ ಎಂದು ಸಂಘ ಪರಿವಾರ ಕಿವಿಮಾತು ಹೇಳಿದರೂ ಯಡಿಯೂರಪ್ಪ ಕೇಳುತ್ತಿಲ್ಲ. ಸಂಘ ಪರಿವಾರಕ್ಕೆ ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿಯಾಗುವುದು ಬೇಡ.

ಇದನ್ನೆಲ್ಲ ಅರಿತ ಲಿಂಗಾಯತ ಸಮುದಾಯ ಯಡಿಯೂರಪ್ಪ ಬೆನ್ನಿಗೆ ನಿಂತಿದೆ. ಇತ್ತೀಚಿನ ಶಾಸಕರ ರಾಜೀನಾಮೆ ಪ್ರಕರಣದಲ್ಲಿ ಎರಡು ದಿನಗಳ ಹಿಂದೆ ವಿಧಾನಸೌಧದಲ್ಲಿ ನಡೆದ ಬೆಳವಣಿಗೆಗಳನ್ನೇ ಗಮನಿಸಿದ್ದರೆ ನಿಮಗೇ ಗೊತ್ತಾಗುತ್ತದೆ. ಯಡಿಯೂರಪ್ಪ ಅವರ ಜತೆ ಇದ್ದುದು ರೇಣುಕಾಚಾರ್ಯ, ಜಗದೀಶ್ ಶೆಟ್ಟರ್, ಉಮೇಶ್ ಕತ್ತಿ ಸೇರಿದಂತೆ ಕೆಲವು ಪ್ರಮುಖ ಲಿಂಗಾಯತರು. ಇತರ ಜಾತಿಗೆ ಸೇರಿದ ಬಿಜೆಪಿ ಪ್ರಮುಖರು ಕೊನೇ ಗಳಿಗೆಯಲ್ಲಿ ಯಡಿಯೂರಪ್ಪ ಜತೆ ಕಾಣಿಸಿಕೊಂಡರೇ ಹೊರತು ಆರಂಭದಿಂದಲೂ ಇರಲಿಲ್ಲ.ಇದರ ಅರ್ಥ ಇಷ್ಟೇ. ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿ   ಆಗಬೇಕೆನ್ನುವುದು ಲಿಂಗಾಯತರ ಬಯಕೆಯೇ ಹೊರತು ಸಂಘ ಪರಿವಾರದ್ದಲ್ಲ. 

ಸಂಘ ಪರಿವಾರಕ್ಕೆ ನರೇಂದ್ರ ಮೋದಿಯ ಸರ್ವಾಧಿಕಾರವನ್ನು ಸಹಿಸಿಕೊಳ್ಳುವ ಅನಿವಾರ್ಯತೆ ಇದೆಯೇ ಹೊರತು ಯಡಿಯೂರಪ್ಪನವರ ಸರ್ವಾಧಿಕಾರವನ್ನು ಸಹಿಸಿಕೊಳ್ಳುವ ಔದಾರ್ಯ ಈಗಿಲ್ಲ. ದಡ ದಾಟಿದ ಮೇಲೆ ಇನ್ನೇಕೆ ಬೇಕು? ಹಾಗಂತ ಯಡಿಯೂರಪ್ಪ ರಾಜಕೀಯವಾಗಿ ಸಂಪೂರ್ಣ ಸ್ವಚ್ಛ ವ್ಯಕ್ತಿಯೇನೂ ಅಲ್ಲ. ಈ ಕ್ಷಿಪ್ರ ಕ್ರಾಂತಿಯಲ್ಲೂ ಕೆಲವು ಕೋಟಿಗಳನ್ನು ಖರ್ಚು ಮಾಡಿರುವುದಾಗಿ ಅವರೇ ಆಪ್ತರ ಬಳಿ ಹೇಳಿಕೊಂಡಿದ್ದಾರಂತೆ. 

ಈ ನಡುವೆಯೇ ಯಡಿಯೂರಪ್ಪ ಅವರನ್ನು ಹೊರಗಿಟ್ಟು ಬಿಜೆಪಿ ಸರ್ಕಾರ ರಚಿಸುವ ಇನ್ನೊಂದು ಗುಂಪು ಕೂಡ ಪ್ರಯತ್ನಿಸುತ್ತಿದೆ. ಕುಮಾರಕೃಪ ಅತಿಥಿ ಗೃಹದಲ್ಲಿ ಸಚಿವ ಸಾ.ರಾ.ಮಹೇಶ್, ಬಿಜೆಪಿ ಉಸ್ತುವಾರಿ ಮುರಳೀಧರ ರಾವ್ ಮತ್ತು ಕೆ.ಎಸ್.ಈಶ್ವರಪ್ಪ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ ಎಂಬ ತಳ್ಳಿಹಾಕಲಾಗದ ಸನ್ನಿವೇಶ ಈ ಬೆಳವಣಿಗೆಯನ್ನು ಪುಷ್ಟೀಕರಿಸುತ್ತದೆ. ಯಡಿಯೂರಪ್ಪ ಹೊರತು ಪಡಿಸಿದರೆ ಬಿಜೆಪಿಯಲ್ಲಿ ಕಾಣುವುದು ಈಶ್ವರಪ್ಪ, ಆರ್.ಅಶೋಕ….ಇಂಥ ಮುಖಗಳೇ. ಒಬ್ಬರಿಗಾದರೂ ಘನತೆ, ಗಾಂಭೀರ್ಯ, ವಿಶಿಷ್ಠ ವ್ಯಕ್ತಿತ್ವ ಇದೆಯೇ? ಸಂಘ ಪರಿವಾರಕ್ಕೆ ಬಿಜೆಪಿಗೆ ಮುಖವೇ ಇಲ್ಲದವರು ಬೇಕಾಗಿದ್ದಾರೆ. ದೇಶಾದ್ಯಂತ ಒಂದೇ ಮುಖ ಅವರಿಗೆ ಬೇಕು. ಅದು ಮೋದಿಯ ಮುಖವಾಡಗಳ ಮುಖ. ಉಳಿದವರೆಲ್ಲ ಕೀಲು ಗೊಂಬೆಗಳಂತಿರಬೇಕು. ಯಡಿಯೂರಪ್ಪ ಅಂಥವರಲ್ಲ. ಅವರು ಎಷ್ಟೆಂದರೂ ಮಾಸ್ ಲೀಡರ್. ಬಿಜೆಪಿ ಒಲ್ಲದ ಸರ್ವಾಧಿಕಾರಿ.

ಆದರೆ ಸಂಘ ಪರಿವಾರದ ಮೂಲಗಳ ಪ್ರಕಾರ ಮಿತ್ರಪಕ್ಷಗಳ ಕಿತ್ತಾಟದಲ್ಲಿ ಸರ್ಕಾರ ಪತನಗೊಂಡು ವಿಧಾನಸಭೆ ವಿಸರ್ಜನೆಯಾದರೆ ಮಾತ್ರ ಬಿಜೆಪಿ ಚುನಾವಣೆಯಲ್ಲಿ ತನ್ನ ಶಕ್ತಿ ಪ್ರದರ್ಶಿಸಬೇಕೇ ಹೊರತು ಆರು ಕೊಟ್ಟರೆ ಅತ್ತೆ ಕಡೆ, ಮೂರು ಕೊಟ್ಟರೆ ಸೊಸೆ ಕಡೆ ಎನ್ನುವಂಥ ಶಾಸಕರನ್ನು ನೆಚ್ಚಿಕೊಂಡು ಸರ್ಕಾರ ರಚಿಸುವುದು ಬೇಕಿಲ್ಲ. ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ವಿವಿಧ ಪಕ್ಷಗಳಲ್ಲಿ ಅಲ್ಪ ಪ್ರಮಾಣದಲ್ಲಾದರೂ ಹಂಚಿ ಹೋಗಿರುವ ಲಿಂಗಾಯತ ಸಮುದಾಯ ಕೇವಲ ಯಡಿಯೂರಪ್ಪ ಅವರ ಅನುಯಾಯಿಗಳಾಗಿಯೇ ಬಿಜೆಪಿಯಲ್ಲಿ ಗುರುತಿಸಿಕೊಂಡಿಲ್ಲ ಎಂದು ಸಂಘ ಪರಿವಾರ ಭಾವಿಸಿದೆ. ಕೇಂದ್ರದಲ್ಲಿ ಮೋದಿ ಸರ್ಕಾರ ಬಂದ ನಂತರ ರಾಜ್ಯದಲ್ಲಿ ಯಾರೇ ನಾಯಕರಾದರೂ ಲಿಂಗಾಯತರೂ ಬಿಜೆಪಿ ಜತೆ ಗುರುತಿಸಿಕೊಳ್ಳುತ್ತಾರೆ ಎಂದೇ ಬಲವಾಗಿ ನಂಬಿದೆ. ಹೀಗಾಗಿ ಬಿಜೆಪಿ ಪಾಲಿಗೆ ಯಡಿಯೂರಪ್ಪ ಗೆಲ್ಲುವ ಕುದುರೆಯಾಗಿ ಉಳಿದಿಲ್ಲ. ಕುದುರೆ ಯಾವುದಾದರೂ ಗೆಲ್ಲಿಸುವುದು ಮೋದಿಯೇ ಎಂಬ ಗಟ್ಟಿ ನಂಬಿಕೆಯೇ ಇದೆಲ್ಲಕ್ಕೆ ಕಾರಣವಾಗಿದೆ. 

ಕಾಂಗ್ರೆಸ್ ಮತ್ತು ಜೆಡಿಎಸ್ ಕಿತ್ತಾಟದ ನಡುವೆ ಅಧಿಕಾರ ಪಡೆಯುವ ಪ್ರಯತ್ನ ಬೇಡ ಎಂಬ ಸಂಘ ಪರಿವಾರದ ನಿರ್ದೇಶನವನ್ನೂ ಧಿಕ್ಕರಿಸಿರುವ ಯಡಿಯೂರಪ್ಪ ಬಿಜೆಪಿ ಪಾಲಿಗೆ ಮೈಲಿಗೆಯಾಗಿಬಿಟ್ಟಿದ್ದಾರೆ. ಯಡಿಯೂರಪ್ಪ ಇದೇ ರೀತಿ ಸಂಘ ಪರಿವಾರದ ನಿರ್ದೇಶನ ಧಿಕ್ಕರಿಸುತ್ತಾ ಹೋದರೆ ಅವರನ್ನು ಪಕ್ಷದಿಂದ ಉಚ್ಚಾಟಿಸುವ ಸಾಧ್ಯತೆಯೂ ಇಲ್ಲದಿಲ್ಲ ಎನ್ನುತ್ತವೆ ಸಂಘ ಪರಿವಾರದ ಮೂಲಗಳು. ಆದರೆ ಯಡಿಯೂರಪ್ಪ ವಿರುದ್ಧ ಅಂಥ ನಿಷ್ಠುರ ಕ್ರಮ ಕೈಗೊಳ್ಳುವ ಧೈರ್ಯ ಸಂಘ ಪರಿವಾರಕ್ಕಿದೆಯೇ? ಮುಂದಿನ ದಿನಗಳು ವಾಸ್ತವವನ್ನು ಬಿಚ್ಚಿಡಲಿವೆ. ಅಲ್ಲಿಯವರೆಗೆ ಕಾಯಲೇ ಬೇಕು.