ಸೂಳೆಯೊಬ್ಬಳ ಆತ್ಮಕಥೆ ಹೊಳೆಗೆಸೆದು...

ಒಮ್ಮೆ ಇಬ್ಬರೂ ಒಬ್ಬಂಟಿ ಕುಳಿತಿದ್ದಾಗ ಮಾತಾಯ್ತು ಇಬ್ಬರ ನಡುವೆ. ಹೊಳೆ ಕೇಳಿತು- ``ರಾಜಿ ನಿನ್ನೊಳಗೆ ಉಳಿದ ಗಂಡಸೊಬ್ಬನ ಹೆಸರೇಳು? ’’ಏನಂತ ಹೇಳಿಯಾಳು ರಾಜಿ?-  ``ನನ್ನೊಳಗೆ ಇಳಿದ ಗಂಡಸರ ಲೆಕ್ಕವಿಲ್ಲ. ನನ್ನೊಳಗೆ ಉಳಿದ ಗಂಡಸಿಲ್ಲ’’.

ಸೂಳೆಯೊಬ್ಬಳ ಆತ್ಮಕಥೆ ಹೊಳೆಗೆಸೆದು...

ಗವ್ವೆನ್ನುವ ಕತ್ತಲಲ್ಲೇ ಹರಿಯುತ್ತಿದ್ದ ಹೊಳೆಯ ಸದ್ದು ಆಲಿಸುತ್ತಾ ಕುಳಿತುಕೊಂಡಿದ್ದಳು ರಾಜಿ, ಬದುಕಲ್ಲಿ ಇನ್ನೇನೂ ಉಳಿದಿಲ್ಲ ಎಂಬ ಶೂನ್ಯಭಾವದೊಂದಿಗೆ. ಅವಳಿಗೆ ಈ ಜಗತ್ತಿನ ಯಾವುದೂ ಈಗ ಬೇಕಿರಲಿಲ್ಲ. ಮನುಷ್ಯ, ಮೃಗ, ಆಕಾಶ,ಭೂಮಿ- ಎಲ್ಲ ಎಲ್ಲದರ ಜತೆಗೂ ಸಂಬಂಧ ಕಡಿದುಕೊಂಡು ಬದುಕುತ್ತಿದ್ದ ರಾಜಿಯ ಬದುಕಿನಂತೆಯೇ ಹೊಳೆಯ ಸದ್ದು ಕೂಡ ಏಕತಾನ. ರಾಜಿಗೆ ಹೊಳೆಯ ಸದ್ದು ಇಷ್ಟವಾಗಿಯೋ ಹೊಳೆಗೆ ರಾಜಿ ಮೌನ ಇಷ್ಟವಾಗಿಯೋ- ಇಬ್ಬರದು ಒಂದೇ ಭಾವ; ಕನ್ನಡಿಯ ಪ್ರತಿಬಿಂಬದಂತಿತ್ತು. ವರ್ಷಾನುವರ್ಷಗಳ ಪರಿಚಯವಿದ್ದರೂ ರಾಜಿ ಮತ್ತು ಹೊಳೆ ಪರಸ್ಪರ   ಹೀಗೆ ಭಯಾನಕ-ಭೀಭತ್ಸ-ಅತಿಘೋರವಾದ ಮೌನದಲ್ಲಿ ಕಾಲಕಳೆಯುತ್ತಿರುವುದು ನನ್ನಲ್ಲಿ ಆಶ್ಚರ್ಯ ತಂದೊಡ್ಡಿತ್ತು!. ನಾನೂ ಅದೆಷ್ಟು ವರ್ಷಗಳಿಂದ ರಾಜಿಯನ್ನು ಮತ್ತು ಹೊಳೆಯನ್ನು ಗಮನಿಸುತ್ತಿದ್ದೇನಲ್ಲ… ರಾಜಿಯ ಕಗ್ಗತ್ತಲ ಪ್ರೀತಿ ಮತ್ತು ಹೊಳೆಯ ಏಕತಾನತೆ ಎಲ್ಲೋ ನನಗೂ ಪ್ರಿಯವಾಗಿ ಹೋದವೇ? ಯೋಚಿಸಿದಾಗಲೆಲ್ಲಾ ಬಾಯ್ತುಂಬಿ ಈಗ ಮಾತಾಡೇಬಿಡಬೇಕೆಂದು ಹೊರಟುಬಿಡುತ್ತಿದ್ದೆ. ಹಾಗಂದುಕೊಳ್ಳುವುದಷ್ಟೇ ನನ್ನ ಅಹಂಕಾರ...

ಒಂದು ತುದಿಯಲ್ಲಿ ಕುಳಿತಿರುವ ರಾಜಿ, ರಾಜಿಯ ಸೆರಗನ್ನೇ ಮುಟ್ಟಿ ಹರಿಯುತ್ತಿರುವ ನದಿ, ಇಬ್ಬರನ್ನೂ ಬೇರ್ಪಡಿಸಿದಂತಿರೋ ಜಗತ್ತನ್ನೇ ಕುರುಡಾಗಿಸಿರೋ ಕತ್ತಲು. ಮತ್ತೊಂದು ತುದಿಯಲ್ಲಿ ತನ್ನ ಪಾಡಿಗೆ ತಾನು ಉಸಿರಾಡುತ್ತಿರೋ  ಜೀವರಾಶಿ, ಬಜಾರಿಗೆ ಬಂದಿದ್ದೇವೆಂಬಂತೆ ಬದುಕುತ್ತಿರೋ ಜನ, ಸ್ವಾತಂತ್ರ್ಯದ ಠಸ್ಸೆ ಒತ್ತಿಸಿಕೊಂಡವರಂತೆ ಕುಣಿಯುತ್ತಿರೋ ಮಂದಿ, ಯಾವಯಾವುದಕ್ಕೋ ವಿಲವಿಲ ಒದ್ದಾಡಿ ಸಾಯುತ್ತಿರೋ ಡರ್ಟಿ ಪೀಪಲ್ಸ್…ಒಮ್ಮೆಯಾದರೂ ಈ ಹೊಳೆಯನ್ನು, ಈ ರಾಜಿಯನ್ನು ಮಾತಾಡಿಸಿದ್ದಾರಾ?- ಸಿಟ್ಟು ಕುದಿಯುತ್ತಿತ್ತು. ಕುದ್ದ ಸಿಟ್ಟನ್ನಷ್ಟೇ ಇಟ್ಟುಕೊಂಡು ನಾನಾದರೂ ಏನು ಮಾಡಲಿ? ಉಹ್ಞುಂ… ಸಿಟ್ಟಿಂದ ಸಮಸ್ಯೆ ಬಗೆಹರಿಯಲಾರದೆನಿಸಿತು.

ರಾಜಿಯ ಬಳಿ ನಿಂತು ಅದೊಮ್ಮೆ ಅವಳ ಮನಸಿನ ಬಾಗಿಲು ತಟ್ಟಿದ್ದೆ. ಹೋಗಿ ಬರುವ ನೂರಾರು ಜನ ಹೀಗೆ ಬಾಗಿಲು ತಟ್ಟುತ್ತಲೇ ಇರುತ್ತಾರೆಂಬಂತೆ ನಿರ್ಲಕ್ಷ್ಯವಹಿಸಿದ್ದಳು. ಒಳಗಿಂದ ಕನಿಷ್ಠ `ಯಾರು?’ ಎಂಬ ಧ್ವನಿಯೂ ಬಂದಿರಲಿಲ್ಲ.ಮನಸಿನ ಬಾಗಿಲು ತೆರೆದರಷ್ಟೇ ಮಾತಾಡಬಲ್ಲವನಾಗಿದ್ದೆ. ಬೆಳಕು ಚೆಲ್ಲುತ್ತಲೇ ಉರಿ ಉರಿ ಲೇಪಿಸುತ್ತಿದ್ದ ಸೂರ್ಯನ ಮುಖ ದಿಟ್ಟಿಸಿ ಆಗಲೇ ನೋಡಿದ್ದು ನಾನು. ಅದೊಂದು ಹಾಳುಬಿದ್ದ ಮುಖ. ರಾಜಿಯಂತಹ ಯಾರನ್ನೂ ಈ ಹಾಳುಮುಖದ ಸೂರ್ಯ ತಂಪೆರೆದಿರಲಾರ ಎನಿಸಿತ್ತು. ಹಾಗಾಗಿ ರಾಜಿ ಬಾಗಿಲು ತೆರೆಯಲಿಲ್ಲವೇನೋ? ಅವತ್ತು ಹುಣ್ಣಿಮೆಯ ಫಳಫಳ ರಾತ್ರಿ. ಹಾಳುಮುಖದ ಸೂರ್ಯ ಅದೆತ್ತಲೋ ಓಡಿ ಹೋಗಿ ಚಂದಿರ ದುಂಡಗೆ ಆಕಾಶ ಆವರಿಸಿಕೊಂಡಿದ್ದ. ಎಲ್ಲೋ ಹೋಗುವವನು ರಾಜಿಯಿದ್ದತ್ತ ನಡೆದು ಹೋಗಿದ್ದೆ. ಹುಣ್ಣಿಮೆಯ ಬೆಳಕಲ್ಲಿ ತನ್ನಾತ್ಮದ ಜತೆ ಅಲೆಅಲೆಯಾಗಿ ಸಂವಾದ ನಡೆಸುತ್ತಿರುವಂತೆ ಕಂಡಳು. ಮಾತಾಡಿದರೆಲ್ಲಿ ತನ್ನ ಪೊರೆ ಕಳಚಿ ಕತ್ತಲಗರ್ಭ ಸೇರಿಬಿಡುತ್ತಾಳೋ ಎಂಬ ಸಣ್ಣದೊಂದು ಭಯದೊಂದಿಗೆ ಕೇವಲ ದಿಟ್ಟಿಸಿನೋಡಲು ಅಣಿಯಾದೆ. ಚಂದಿರ ತನ್ನ ಹುಣ್ಣಿಮೆಯನ್ನು ರಾಜಿಗಷ್ಟೇ ಸೀಮಿತಮಾಡಿದಂತ್ತಿತ್ತು. ಹೊಳೆನೀರಿನಲ್ಲಿ ಚಂದಿರನದೂ ರಾಜಿಯದೂ ಅಸ್ತವ್ಯಸ್ತ ಮುಖ; ಮುಟ್ಟಿನೋಡಿ ನೀರು, ಗಾಳಿ ಆಡುತ್ತಿತ್ತು. ಎಂದಿನ ಶೂನ್ಯಭಾವದಲ್ಲಿಯೇ ರಾಜಿ ಇದ್ದಾಳಾ?- ಸೂಕ್ಷ್ಮವಾಗಿ ಅವಳನ್ನು ಗಮನಿಸುತ್ತಿದ್ದೆ. ಶೂನ್ಯದಾಟಿದ ಅಸಂಖ್ಯ ಸಂತೋಷಗಳು ಅವಳ ಮೈ-ಮುಖದ ಮೇಲೆ ಅರಳತೊಡಗಿದ್ದವು.

ಬಹಳ ಹೊತ್ತು ಗಮನಿಸಿದೆ. ಅವಕಾಶ ನೋಡಿ ಕಳ್ಳಹೆಜ್ಜೆಗಳನ್ನಿಡುತ್ತಲೇ ರಾಜಿಯ ಮುಂದೆ ನಿಂತು, ಸ್ವಲ್ಪ ಅದುರುವ ಧ್ವನಿಯಲ್ಲಿ ಕೇಳಿದ್ದೆ-

`ನಿನ್ನ ಆತ್ಮಚರಿತ್ರೆ ಬರೆಯಲೇ?’ ರಾಜಿ ಮೊತ್ತಮೊದಲಬಾರಿಗೆ ಮುಗುಳ್ನಕ್ಕಿದ್ದಳು. ಹೊಳೆಯ ನೀರು ಮತ್ತು ಹುಣ್ಣಿಮೆಯ ಜತೆ ಆಡುತ್ತಲೇ ಮುಗುಳ್ನಗುವಿನೊಂದಿಗೆ ಶಬ್ದಬೆರೆಸಿ ಹೇಳಿದ್ದಳು-`ನನ್ನ ಆತ್ಮಚರಿತ್ರೆಯೇ? ಶವಗಳು ಆತ್ಮಚರಿತ್ರೆ ಬರೆದುಕೊಂಡಿದೆಯೇ? ಆತ್ಮಚರಿತ್ರೆ ಬರೆಯುವುದೇ ಆದರೆ ಈ ಹೊಳೆಯ ನೀರಿನದು, ಈ ಅವರ್ಣನೀಯ ಹುಣ್ಣಿಮೆಯದು ಬರಿ...’

ಉಳಿ ಹಿಡಿದು ಪುಟಗಳಲ್ಲಿ ರಾಜಿಯನ್ನು ಕೆತ್ತಲುಹೋದ ನನಗೆ, ಅವಳು ಹೇಳಿದ್ದಾದರೂ ಏನೆಂದು ಅರ್ಥೈಸಿಕೊಳ್ಳಲು ತಕ್ಷಣದ ಮಟ್ಟಿಗೆ ಸಾಧ್ಯವಾಗಲೇಯಿಲ್ಲ. ನನ್ನ ಬುದ್ದಿಗೇ ಉಳಿಪೆಟ್ಟು ನೀಡಿ ಸುಧಾರಿಸಿಕೊಳ್ಳುವಂತೆ ಮಾಡಿದ್ದಳು ರಾಜಿ. ಆತ್ಮಚರಿತ್ರೆಯ ನೆಪದ ಹಿಂದೆ ಒಬ್ಬಂಟಿ ರಾಜಿಯನ್ನು ಅಪ್ಪಿಕೊಳ್ಳುವ, ಮುದ್ದಿಸುವ, ಸಂತೈಸುವ, ಅವಳ ಜತೆ ಒಂದಾಗಿಬಿಡುವ ನನ್ನೊಳಗಿನ ಸುಪ್ತ ಪುರುಷ ಆಸೆಗಳ ಮೇಲೆಲ್ಲ ಉಳಿಪೆಟ್ಟು ತಿಂದ ದೇಹದಿಂದ ಸೋರಿದ ರಕ್ತ ಹರಡಿಕೊಳ್ಳತೊಡಗಿತ್ತು. ಮೊಲೆ ಹಿಗ್ಗಿಸಲೆಂದು ಹೋಗಿದ್ದ ನಾನು ತಲೆತಗ್ಗಿಸಿಕೊಂಡು ಕಾಲ್ಕಿತ್ತಿದ್ದೆ.

ರಾಜಿಯನ್ನು ತೊರೆದ ಗಂಡಸಿನ ಬಗ್ಗೆ ನನ್ನೊಳಗೆ ಸಾವಿರ ಪ್ರಶ್ನೆಗಳಿದ್ದವು. ಕುತೂಹಲಕ್ಕಂತೂ ಮಿತಿ ಇರಲಿಲ್ಲ. ಅಪ್ಸರೆ ಅಂತಾರಲ್ಲ ಹಾಗಿರುವ ರಾಜಿಯನ್ನು ಆ ಗಂಡಸು ತೊರೆದಿರಲಾರ; ಈಕೆಯೇ ದೂರ ತಳ್ಳಿರಬಹುದು- ಅಯೋಗ್ಯ ಎಂಬ ಕಾರಣಕ್ಕೋ, ತನಗೆ ಹೊಂದಾಣಿಕೆಯಾಗದವನೆಂಬ ಕಾರಣಕ್ಕೋ… ನನ್ನಂತೆಯೇ ಅವಳನ್ನು ಇಷ್ಟಪಡುತ್ತಿದ್ದ ಅದೆಷ್ಟು ಜನ ಪುರುಷರಲ್ಲಿಯೂ ಈ ಕುತೂಹಲಭರಿತ ಪ್ರಶ್ನೆಗಳು ಎದ್ದಿರದೇ ಇರವು. ಅಪ್ಪಿಕೊಳ್ಳುವುದಕ್ಕೆ ಸಾವಿರ ಕಾರಣ, ದಾರಿಗಳನ್ನು ಹುಡುಕಿಕೊಳ್ಳುವ ನಾವು ತೊರೆಯುವುದಕ್ಕೆ ಒಂದೇ ಒಂದು ಕಾರಣ, ದಾರಿ ಕಂಡುಕೊಳ್ಳುತ್ತಿರುತ್ತೇವೆ. ರಾಜಿಯ ಬದುಕಲ್ಲೂ ಅಂಥದ್ದೇನೋ ಘಟಿಸಿರಬಹುದು. ಅದೇನು ಘಟಿಸಿತೆಂದು ಕೆದಕುವ ಜತೆಗೆ ಅವಳ ಸಾಮಿಪ್ಯ ಕೂಡ ದಕ್ಕಿಸಿಕೊಳ್ಳಬಹುದೆಂದು ಆತ್ಮಚರಿತ್ರೆ ಬರೆಯುವವನಂತೆ ಹೋಗಿದ್ದಷ್ಟೇ. ಅದಕ್ಕೆಲ್ಲಿ ಅವಳು ಸೊಪ್ಪು ಹಾಕಿದಳು?... ಸೊಪ್ಪು ಹಾಕದ ಸೊಕ್ಕಿನ ಸೂಳೆ! ನನ್ನೊಳಗೆ ಬೈಗುಳದ ಸಂತೆ.

ಹರಿವ ಹೊಳೆಯೊಳಗೆ ಯಾರು ಮೈ ಅದ್ದಿ ಒದ್ದೆಮಾಡಿಕೊಂಡರೇನು? ಹೊಳೆಯೊಳಗಿಳಿದ, ಈಜಾಡಿದ ಸುಖವನ್ನು ಇಳಿದೀಜಾಡುವವನಷ್ಟೇ ಅನುಭವಿಸಬಲ್ಲ. ಹೊಳೆಗೇನು ಸುಖ? ಅದಕ್ಕೆಲ್ಲಿ ರೋಮಾಂಚನ? ರಾಜಿ ಥೇಟು ಹೊಳೆಯಂತೆ ಬದುಕಿದವಳು. ಈಜಾಡಿದವರು, ಸುಖಪಟ್ಟವರ ಲೆಕ್ಕ ರಾಜಿಯಾಗಲೀ, ಹೊಳೆಯಾಗಲೀ ಇಟ್ಟಿರಲಿಲ್ಲ. ಲೆಕ್ಕವಿಡಲಾದರೂ ಸಾಧ್ಯವಿತ್ತೆ? ದರ್ದಿನ ಒಳಗೇ ಬದುಕುತ್ತಿರುವ ಇಬ್ಬರು; ದರ್ದು ಗಮನಿಸದೇ ಸುಖಪಟ್ಟು ಹೋದವರ ನೆನಪಾಗಲೀ, ಮುಖಪರಿಚಯವಾಗಲೀ ಇಟ್ಟುಕೊಂಡಿರಲಿಲ್ಲ. ಅವರಿಗದು ಬೇಕೂ ಇರಲಿಲ್ಲ. ಒಮ್ಮೆ ಇಬ್ಬರೂ ಒಬ್ಬಂಟಿ ಕುಳಿತಿದ್ದಾಗ ಮಾತಾಯ್ತು ಇಬ್ಬರ ನಡುವೆ.ಹೊಳೆ ಕೇಳಿತು- ``ರಾಜಿ ನಿನ್ನೊಳಗೆ ಉಳಿದ ಗಂಡಸೊಬ್ಬನ ಹೆಸರೇಳು? ’’ಏನಂತ ಹೇಳಿಯಾಳು ರಾಜಿ?-  ``ನನ್ನೊಳಗೆ ಇಳಿದ ಗಂಡಸರ ಲೆಕ್ಕವಿಲ್ಲ. ನನ್ನೊಳಗೆ ಉಳಿದ ಗಂಡಸಿಲ್ಲ’’.

ರಾಜಿಯ ಉತ್ತರಕ್ಕೆ ಹೊಳೆ ಬೆಚ್ಚಿಬಿದ್ದಿತ್ತು. ಇನ್ನೇನು ಮತ್ತೆ ಮೌನ ಆವರಿಸಿಕೊಳ್ಳುತ್ತಿದೆ ಎನ್ನುವಾಗ ರಾಜಿಯೂ ಒಂದು ಪ್ರಶ್ನೆ ಕೇಳಿದಳು ಹೊಳೆಗೆ-

``ನಿನಗಿಷ್ಟವಾದ ಗಂಡಸು ಯಾರೇ?’’ ಹೊಳೆಗೆ ಕ್ಷಣಹೊತ್ತು ಯೋಚನೆ. ತನ್ನ ಮೈಮೇಲೇಳುತ್ತಿದ್ದ ಅಲೆಅಲೆಗಳನ್ನೆಲ್ಲ ಸ್ತಬ್ಧಗೊಳಿಸಿ ಮಾತಾಡಿತ್ತು- ``ನೀನು ಗಂಡಸಿನ ಭಾರಹೊತ್ತು ಹಮಾಲಿಯಾದೆ, ಅವರದೇ ಅನಿಷ್ಟ ತೊಳೆದು ನಾ ಮಾಲಿಯಾದೆ’’
-ಇಬ್ಬರೂ ಆಕಾಶ ಗುಡುಗಿದಂತೆ ಜೋರಾಗಿ ನಕ್ಕರು. ಕಂಡಕಂಡಲ್ಲೆಲ್ಲ ಸಿಡಿಲು ಎಸೆದು ಕುಣಿದರು. ಅಬ್ಬರಿಸಿದಂತೆ ಮಳೆ ಕೊನೆಗೆ ಅತ್ತರು. ಕ್ಷಣಹೊತ್ತು ಇಡೀ ಕೋಟಿಕುಲಗಳು ಅಲುಗಾಡಿದಂತಾಯ್ತು.

ದೇಹದಣಿಸಿ ಕಣ್ಣುಗಳು ಎಷ್ಟೇ ಹುಡುಕಿದರೂ ಇವತ್ತು ರಾಜಿ ಕಾಣಿಸುತ್ತಿಲ್ಲ. ನನ್ನ `ಸೂಳೆಯೊಬ್ಬಳ ಆತ್ಮಕಥೆ’ ಕೃತಿಯ ಬಿಡುಗಡೆ ಕಾರ್ಯಕ್ರಮದ ಮಧ್ಯೆ ರಾಜಿ ಕೂಡ ಇಷ್ಟುದಿನ ನೆನಪಾಗಿರಲಿಲ್ಲ. ಕೃತಿಯಂತೂ ಬಿಡುಗಡೆಯಾಗಿ ಸಾವಿರಾರು ಪ್ರತಿಗಳಿಗೆ ಬೆಡಿಕೆ ಕುದುರಿಸಿಕೊಳ್ಳುತ್ತಿರುವ ಹೊತ್ತಲ್ಲಿ ನನ್ನದೇ ಹಸ್ತಾಕ್ಷರದ ಪ್ರತಿಯೊಂದನ್ನು ಕೈಯಲ್ಲಿಡಿದುಕೊಂಡು ರಾಜಿಗಾಗಿ ಹುಡುಕುತ್ತಿದ್ದೇನೆ; ನನಗೆ ಸಿಗದ ಅವಳ ಕೈ-ಮೈಯ ಬೆಚ್ಚನೆಯ ಸ್ವರ್ಶ ಈ ನನ್ನ ಕೃತಿಗಾದರೂ ನಸೀಬಾಗಬಹುದೆಂದು. ಹಗಲು ಹುಡುಕಲು ಹೊರಟಿದ್ದು ಈಗ ರಾತ್ರಿಯಾಗಿದೆ. ಹೊಳೆಯ ದಂಡೆಯಲ್ಲಿ ಇರಲೇಬೇಕಾಗಿದ್ದ ರಾಜಿ, ಕತ್ತಲ ಜತೆಯೇ ಇರುತ್ತೇನೆಂಬಂತೆ ರಾಜಿಮಾಡಿಕೊಂಡಿದ್ದ ರಾಜಿ, ಹುಣ್ಣಿಮೆ ಜತೆ ಆಟವಾಡುತ್ತಿದ್ದ ರಾಜಿ, ಹೊಳೆಯ ಜತೆ ಮಾತಾಡುತ್ತಿದ್ದ ರಾಜಿ…

ಎಷ್ಟು ಕೂಗಿ ಕರೆದರೂ ಅವಳೆಲ್ಲಿ? ಎಲ್ಲಿ ಹೋದಳು? ಹೊಳೆಗೂ, ಗವ್ವೆನ್ನುವ ಕತ್ತಲಿಗೂ, ಅಂಗಳ-ಹಿತ್ತಲಿಗೂ ಕೇಳಿದೆ… ಕೇಳುತ್ತಲೇ ಇದ್ದೇನೆ ಈಗಲೂ...`ಎಲ್ಲಿದ್ದಾಳೆ ರಾಜಿ?’

ಸೂಳೆಯೊಬ್ಬಳ ಆತ್ಮಕಥೆ ಹೊಳೆಗೆಸೆದು...

ಅತ್ಯಾಚಾರಗೈದು ಕೊಲೆಮಾಡಿ ಹೊಳೆಗೆಸೆದ ಪ್ರಕರಣವೊಂದು ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಸುದ್ದಿ ಪತ್ರಿಕೆಯ ಮೂಲೆಯಲ್ಲಿ ಇವತ್ತು ಪ್ರಕಟವಾಗಿದೆ.