ಪರಿಶಿಷ್ಟ ಜಾತಿ ಮೀಸಲು ಪಟ್ಟಿಯ ಮೇಲೂ ಹಲ್ಲೆ 

ಪರಿಶಿಷ್ಟ ಜಾತಿ ಮೀಸಲು ಪಟ್ಟಿಯ ಮೇಲೂ ಹಲ್ಲೆ 

ಪ್ರಜಾಪ್ರಭುತ್ವದ ಆಡಳಿತ ವ್ಯವಸ್ಥೆಯಲ್ಲಿ ಎಲ್ಲ ಜನರ ವಿಶೇಷವಾಗಿ ಸಾವಿರಾರು ವರ್ಷದಿಂದ ಜಾತಿಯ ಅಸಮಾನತೆಯಿಂದ ಅವಕಾಶ ವಂಚಿತರಿಗೆ ಪ್ರಾತಿನಿಧ್ಯ ಇರಬೇಕೆನ್ನುವುದೇ ಮೀಸಲಾತಿ. ಈ ಕಾರಣದಿಂದಲೇ ಸಂವಿಧಾನ ರಚನೆಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಕರಡು ಸಮಿತಿಯ ಅಧ್ಯಕ್ಷರಾಗಿದ್ದ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಮೀಸಲಾತಿಯ ಹಿನ್ನೆಲೆ, ಅರ್ಥ ಮತ್ತು ಅದರ ಅವಶ್ಯಕತೆಯನ್ನು ಹಲವಾರು ಸಂದರ್ಭದಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ.  ಪರಿಶಿಷ್ಟ ಜಾತಿಗೆ ಮೀಸಲಾತಿ ನಿಗದಿಪಡಿಸುವಾಗ ಸಂವಿಧಾನದ ವಿಧಿ 341(2)ಯನ್ನು ಯಾರೂ ಬದಲಾವಣೆ ಮಾಡುವ ಕ್ರಿಯೆಯನ್ನು ಮಾಡಬಾರದು ಎಂದು ಎಚ್ಚರಿಕೆಯನ್ನೂ ಕೊಟ್ಟಿದ್ದರು.. [The Constituent Assembly Debate coupled  with the fact that Article  341 makes it clear that the State Legislature or its Executive has no power of “disturbing” (term  used by Dr. Ambedkar)the Presidential List of Scheduled Castes for the State. This is quoted in the judgement of EV Chinnaiah V/s  State of Andhra Pradesh 2005 SC –AIR page 169]

ಆದರೂ, ಆಗಿಂದಾಗ್ಗೆ ಹಲವು ರಾಜ್ಯ ಸರ್ಕಾರಗಳು ಈ ಜೇನುಗೂಡಿಗೆ ಕೈ ಹಾಕುವ ಪ್ರಯತ್ನ ಮಾಡುತ್ತಲೇ ಇವೆ. ಈಗ ಅಂತಹ ಹೊಸ ಯತ್ನ ಉತ್ತರ ಪ್ರದೇಶ ಸರ್ಕಾರದಿಂದ ನಡೆದಿದೆ. ಜನಸಂಖ್ಯೆಗೆ ಅನುಗುಣವಾಗಿ ಶೇಕಡಾವಾರು ಮೀಸಲಾತಿ ಸಿಗಬೇಕೆನ್ನುವುದು ಸಂವಿಧಾನದ ಆಶಯ. 2011ರ ಜನಗಣತಿಯ ಪ್ರಕಾರ ಉತ್ತರಪ್ರದೇಶದಲ್ಲಿ ಪರಿಶಿಷ್ಟ ಜಾತಿಯ ಜನಸಂಖ್ಯೆ ಶೇ 21.1ರಷ್ಟು ಇದೆ. ಆದರೆ ವಾಸ್ತವವಾಗಿ ಈ ಜನರಿಗೆ ಶೇ 15ರಷ್ಟು ಮೀಸಲಾತಿ ಜಾರಿಯಲ್ಲಿದೆ. ಅಂದರೆ ಇನ್ನೂ ಶೇ 6.1 ರಷ್ಟು ಮೀಸಲಾತಿ ಸೌಲಭ್ಯದಿಂದ ಈ ಜಾತಿಗಳನ್ನು ವಂಚಿಸಲಾಗಿದೆ. ವಾಸ್ತವ ಪರಿಸ್ಥಿತಿ ಹೀಗಿರುವಾಗ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಅಧಿಸೂಚನೆಯೊಂದನ್ನು ಹೊರಡಿಸಿ ಅತಿಹಿಂದುಳಿದ 17 ಜಾತಿಗಳಿಗೆ ಪರಿಶಿಷ್ಟ ಜಾತಿಯ ಸರ್ಟಿಫಿಕೆಟ್ ಗಳನ್ನು ನೀಡಬಹುದು ಎಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದು ಅದೀಗ ವಿವಾದಕ್ಕೆ ಎಡೆಕೊಟ್ಟಿದೆ. ಯಾವುದೇ ಜಾತಿಯನ್ನು ಪರಿಶಿಷ್ಟ ಜಾತಿಯ ಪಟ್ಟಿಗೆ ಸೇರಿಸುವುದು ಅಷ್ಟು ಸುಲಭವಲ್ಲ. ಇದರ ವಾಸ್ತವಾಂಶ ಗೊತ್ತಿದ್ದೋ ಗೊತ್ತಿಲ್ಲದೆಯೋ ಈ ರೀತಿಯ ಅಧಿಸೂಚನೆ ಹೊರಡಿಸುವುದು ಅವಿವೇಕತನವಲ್ಲದೆ ಮತ್ತೇನೂ ಅಲ್ಲ. ಈ ರೀತಿಯ ಜಾತಿ ಓಲೈಕೆಯ ರಾಜಕಾರಣ ಹೊಸದೇನೂ ಅಲ್ಲ. ಬಹುತೇಕವಾಗಿ ಯಾದವ ಸಮುದಾಯದಲ್ಲಿ ಬರುವ ಈ ಅತಿಹಿಂದುಳಿದ ಜಾತಿಗಳನ್ನು ಪರಿಶಿಷ್ಟ ಜಾತಿಯ ಪಟ್ಟಿಗೆ ಸಮಾಜವಾದಿ ಪಕ್ಷ ಅಧಿಕಾರದಲ್ಲಿದ್ದಾಗ ಮುಖ್ಯಮಂತ್ರಿ ಆಗಿದ್ದ ಅಖಿಲೇಶ್ ಯಾದವ್ ಸಹಾ ಇಂತಹದ್ದೇ ಪ್ರಯತ್ನ ಪಟ್ಟು ವಿಫಲರಾಗಿದ್ದರು. 

ಪರಿಶಿಷ್ಟ ಜಾತಿಗೆ ಹೊಸದಾಗಿ ಬೇರೆ ಜಾತಿಗಳನ್ನು ಸೇರಿಸುವ ಪ್ರಯತ್ನ ಕೇವಲ ಉತ್ತರ ಪ್ರದೇಶಕ್ಕಷ್ಟೇ ಸೀಮಿತವಾಗಿಲ್ಲ. ಕರ್ನಾಟಕದಲ್ಲೂ ಆಗಿಂದ್ದಾಗ್ಗೆ ಇಂತಹ ಪ್ರಯತ್ನಗಳು ನಡೆಯುತ್ತಲೇ ಇವೆ. ಉತ್ತರ ಪ್ರದೇಶ ಸರ್ಕಾರದ ಅಧಿಸೂಚನೆಯು ಸಂವಿಧಾನದ ವಿಧಿ 341 (2)ನ್ನು ಸ್ಪಷ್ಟವಾಗಿ ಉಲ್ಲಂಘನೆ ಆಗುತ್ತದೆ ಎಂಬುದಾಗಿ ಕೇಂದ್ರ ಸಾಮಾಜಿಕ ಸಬಲೀಕರಣ ಖಾತೆ ಸಚಿವ ತಾವರ್ ಚಂದ್ ಗೆಹ್ಲೋಟ್ ಸ್ಪಷ್ಟಪಡಿಸಿದ್ದಾರೆ. ಈ ವಿಧಿಯ ಅನ್ವಯ ಪರಿಶಿಷ್ಟ ಜಾತಿಯ ಪಟ್ಟಿಗೆ ಹೊಸದಾಗಿ ಸೇರ್ಪಡೆ, ಅಥವಾ ಆ ಪಟ್ಟಿಯಿಂದ ಇರುವ ಜಾತಿಯನ್ನು ತೆಗೆಯುವ ಅಧಿಕಾರ ಸಂಸತ್ತಿಗೆ ಮಾತ್ರ ಇದೆ. ಇಂತಹ ಅಧಿಕಾರ ರಾಷ್ಟ್ರಪತಿಗೂ ಇಲ್ಲ. ಸಂವಿಧಾನದ ಈ ವಾಸ್ತವ ಸಂಗತಿಯನ್ನು ಗಮನಿಸದೇ ರಾಜ್ಯ ಸರ್ಕಾರಗಳು ಪದೇ ಪದೇ ಈ ಗೊಂದಲ ಉಂಟು ಮಾಡುತ್ತಿವೆ ಎಂದು ಗೆಹ್ಲೋಟ್ ಹೇಳಿದ್ದಾರೆ. 

ಪರಿಶಿಷ್ಟ ಜಾತಿ ಪಟ್ಟಿಗೆ ಸಾಂವಿಧಾನಿಕ ಬಲ ಇರುವ ಕಾರಣ ಆಂಧ್ರ ಪ್ರದೇಶದಲ್ಲಿ ನಡೆದ ಒಳಮೀಸಲಾತಿ ಜಾರಿಯೂ ಸಾಧ್ಯವಾಗಿಲ್ಲ. ಅದೇ ಮಾದರಿಯ ಒಳಮೀಸಲಾತಿ ಹೋರಾಟ ಕರ್ನಾಟಕದಲ್ಲಿ ಎರಡು ದಶಕಗಳಿಂದಲೂ ಒಂದು ವರ್ಗದಿಂದ ನಡೆದು ಬಂದಿದ್ದರೂ ಅದು ಸಹಾ ಸಾಧ್ಯವಾಗಿಲ್ಲ. ಈ ಸಂಬಂಧ ರಾಜ್ಯ ಸರ್ಕಾರ ಒಮ್ಮತದಿಂದ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿ ಅದನ್ನು ಕೇಂದ್ರವು ಒಪ್ಪಿ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಆಯೋಗದ ಒಪ್ಪಿಗೆ ಪಡೆದು ಸಂಬಂಧಿಸಿದ ಸಂವಿಧಾನದ ವಿಧಿಗೆ ಅಂದರೆ 341 (2)[ Article 341(2) in The Constitution Of India 1949 (2) Parliament may by law include in or exclude from the list of Scheduled Castes specified in a notification issued under clause ( 1 ) any caste, race or tribe or part of or group within any caste, race or tribe, but save as aforesaid a notification  issued under the said clause shall not be varied by any subsequent notification.] ಕ್ಕೆ ತಿದ್ದುಪಡಿತರಬೇಕಿದೆ. ಈ ತಿದ್ದುಪಡಿ ಮಾಡದೆ ರಾಜ್ಯ ಸರ್ಕಾರಗಳು ಏನೇ ಕಸರತ್ತು ಮಾಡಿದರೂ ಅದು ಜನರ ಕಣ್ಣಿಗೆ ಮಣ್ಣೆರೆಚುವ ಕೆಲಸವಾಗಲಿದೆ. 

ಪರಿಶಿಷ್ಟ ಜಾತಿಯ ಈ ಪಟ್ಟಿಗೆ ಜಾತಿ ವ್ಯವಸ್ಥೆಯ ಅಸ್ಪೃಶ್ಯ ಜಾತಿಗಳನ್ನು ಹೊರತುಪಡಿಸಿ ಬೇರೆಯವರನ್ನು  ಸೇರಿಸಿದ್ದೇ ಆದರೆ ಮೀಸಲಾತಿಯ ನಿಜವಾದ ಉದ್ದೇಶವೇ ಹಾಳಾಗುತ್ತದೆ. ಈಗಾಗಲೇ ಕರ್ನಾಟಕದಲ್ಲಿ ಬೋವಿ ಮತ್ತು ಲಂಬಾಣಿ ಜಾತಿಗಳ ಸೇರ್ಪಡೆಯಿಂದ ನಮಗೆ ಅನ್ಯಾಯವಾಗುತ್ತಿದೆ ಎಂಬು ಕೂಗು ಅಸ್ಪೃಶ್ಯ ಜಾತಿಗಳೆಂದು ಹಿಂದೆ ಕರೆಯುತ್ತಿದ್ದ ಜಾತಿಗಳಿಂದ ನಿರಂತರವಾಗಿ ಕೇಳಿ ಬರುತ್ತಲೇ ಇದೆ. ಹೇಗೆ ಈ ಜಾತಿಗಳಿಂದ ಅನ್ಯಾಯವಾಗುತ್ತಿದೆ ಎಂಬುದಕ್ಕೆ ಒಂದು ಸಣ್ಣ ಉದಾಹರಣೆ ಇಲ್ಲಿದೆ. ಅನುದಾನಿತ ಹೈಸ್ಕೂಲಿನಲ್ಲಿ ಡಿ ದರ್ಜೆಯ ನೌಕರ ಹುದ್ದೆಯು ಪರಿಶಿಷ್ಟ ಜಾತಿಗೆ ಮೀಸಲಾಗಿತ್ತು. ಈ ಹುದ್ದೆಗೆ ಅಸ್ಪೃಶ್ಯ ವರ್ಗ ಮತ್ತು ಬೋವಿ ಜನಾಂಗದ ಅಭ್ಯರ್ಥಿಗಳೂ ಸಂದರ್ಶನಕ್ಕೆ ಬಂದಿದ್ದರು. ಈ ಶಾಲೆಯು ಬೇರೆ ಜಾತಿಯ ಆಡಳಿತಕ್ಕೆ ಸೇರಿತ್ತು. ಸಂದರ್ಶನವಾದ ಬಳಿಕ ಸಂದರ್ಶನ ನಡೆಸಿದವರು ಚರ್ಚಿಸಿದ ವಿಷಯ ಮತ್ತು ತೀರ್ಮಾನ ಹೀಗಿದೆ: “ಹೊಲೆಯ ಮಾದಿಗರನ್ನು ಆಯ್ಕೆ ಮಾಡಿದರೆ ಅವರಿಂದ ನಾವು ಕಾಫಿ ತಿಂಡಿ ತರಿಸಿಕೊಂಡು ತಿನ್ನುವುದೇ? ಬದಲಾಗಿ ಬೋವಿ ಜಾತಿಗೆ ಸೇರಿದವನನ್ನು ಆಯ್ಕೆ ಮಾಡಿದರೆ ಈ ಸಮಸ್ಯೆಯೇ ಇರುವುದಿಲ್ಲ. ಮೀಸಲಾತಿ ಕೊಟ್ಟ ಹಾಗೆಯೂ ಆಯಿತು. ಈ ಅಸ್ಪೃಶ್ಯ ಸಮಸ್ಯೆಗೆ ಪರಿಹಾರವನ್ನೂ ಕಂಡು ಹಿಡಿದಂತಾಯಿತು” . ಈ ಆಯ್ಕೆಯ ಸತ್ಯ ಸಂಗತಿಯನ್ನು ಆ ಶಾಲೆಯ ಶಿಕ್ಷಕರೊಬ್ಬರು ಹೇಳಿದ ಸತ್ಯ ಸಂಗತಿ.

ಸಾಮಾನ್ಯವಾಗಿ ಮೀಸಲಾತಿಯ ವಂಚನೆ ಎಲ್ಲಡೆಯೂ ಹೀಗೆಯೇ ಆಗುತ್ತಿದೆ. ಮತ್ತೊಂದು ಸಂಗತಿಯನ್ನು ಗಮನಿಸುವುದು ಮುಖ್ಯ. ಬಿಜೆಪಿಯ ಬಹುತೇಕ ಸಂಸತ್ ಸದಸ್ಯರು ಸಹಾ ಪರಿಶಿಷ್ಟ ಜಾತಿಯಲ್ಲಿ ಬರುವ ಸ್ಪೃಶ್ಯ ಜಾತಿಗಳಿಗೆ ಸೇರಿದವರು ಎನ್ನುವುದನ್ನು ಗಮನಿಸಿದ್ದೇನೆ. ಈ ವಸ್ತುಸ್ಥಿತಿಯನ್ನು ಗಮನಿಸಿದರೆ ಪರಿಶಿಷ್ಟ ಜಾತಿಯ ಪಟ್ಟಿಗೆ ಅಸ್ಪೃಶ್ಯ ಜಾತಿಗಳಷ್ಟೇ ಇರುವುದು ಮುಖ್ಯ. ಆಗ ಮಾತ್ರ ಈ ಜಾತಿಗಳಿಗೆ ನ್ಯಾಯ ಸಿಗಬಹುದು. 

ಕೇಂದ್ರ ಸರ್ಕಾರ ಈಗ ಆರ್ಥಿಕವಾಗಿ ಹಿಂದುಳಿದ ಉನ್ನತ ಜಾತಿ ಎನಿಸಿಕೊಂಡವರಿಗೂ ಶೇ 10 ರಷ್ಟು ಮೀಸಲಾತಿ ಕಲ್ಪಿಸಿರುವುದರಿಂದ ಉಳಿದ ಹಿಂದುಳಿದ ಜಾತಿಗಳ ಬೇಡಿಕೆಗಳನ್ನು ಗಮನಿಸಿ ಮತ್ತಷ್ಟು ಅಂದರೆ ಆಯಾ ಜಾತಿಗಳ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಲು ಸಂವಿಧಾನ ತಿದ್ದುಪಡಿ ತರುವುದೇ ಉತ್ತಮ ಮಾರ್ಗ. ಇಲ್ಲವಾದರೆ ಹೆಸರಿಗೆ ಮಾತ್ರ ಮಿಸಲಾತಿ ಇದ್ದು ಅದು ಯಾರಿಗೂ ದಕ್ಕದಿದ್ದರೆ ಅಂತಹ ಮೀಸಲಾತಿಯಿಂದ ಯಾವ ಪ್ರಯೋಜನವೂ ಇರುವುದಿಲ್ಲ.

ಇದರ ಜೊತೆಗೆ ಕೇಂದ್ರ ಸರ್ಕಾರ ತನ್ನ ಎಲ್ಲ ಇಲಾಖೆಗಳಲ್ಲಿ ಖಾಲಿ ಇರುವ ಲಕ್ಷಾಂತರ ಹುದ್ದೆಗಳನ್ನು ತುಂಬಬೇಕು. ಹಾಗೆಯೇ ವಿಶ್ವ ವಿದ್ಯಾನಿಲಯಗಳು ಸೇರಿದಂತೆ ರಾಜ್ಯ ಸರ್ಕಾರಗಳು ಸಹಾ ಖಾಲಿ ಇರುವ ಹುದ್ದೆಗಳಿಗೆ ನೇಮಕ ಮಾಡಬೇಕೆಂದು ರಾಜ್ಯಗಳಿಗೂ ಸ್ಪಷ್ಟ ಸೂಚನೆ ನೀಡಬೇಕು. ಉನ್ನತ ವ್ಯಾಸಂಗ ಮಾಡಿ ಉದ್ಯೋಗವಿಲ್ಲದೆ ಬೀದಿಗಳಲ್ಲಿರುವ ಯುವಜನರಿಗೆ ಉದ್ಯೋಗ ನೀಡಿ ಅವರನ್ನು ಜವಾಬ್ದಾರಿಯುತ ನಾಗರಿಕರನ್ನಾಗಿ ರೂಪಿಸಬೇಕಾದುದು ಯಾವುದೇ ಒಂದು ನಾಗರಿಕ ಮತ್ತು ಸಂವಿಧಾನ ಬದ್ಧ ಸರ್ಕಾರದ ಆದ್ಯ ಕೆಲಸವಾಗಬೇಕು.