ಆಟಕ್ಕುಂಟು ಲೆಕ್ಕಕ್ಕಿಲ್ಲ ಚಿತ್ರದಲ್ಲಿ ಮಯೂರಿಯದ್ದು ಎಂಥಾ ಪಾತ್ರ?

ಆಟಕ್ಕುಂಟು ಲೆಕ್ಕಕ್ಕಿಲ್ಲ ಚಿತ್ರದಲ್ಲಿ ಮಯೂರಿಯದ್ದು ಎಂಥಾ ಪಾತ್ರ?

ಕಿರುತೆರೆಯಿಂದ ನೇರವಾಗಿ ಹಿರಿತೆರೆಗೆ ಎಂಟ್ರಿ ಕೊಟ್ಟು ಬೇಡಿಕೆಯ ನಟಿಯಾಗಿ ಮಿಂಚುತ್ತಿರುವವರು ಮಯೂರಿ. ಇತ್ತೀಚಿನ ದಿನಗಳಲ್ಲಿ ಸವಾಲಿನ ಪಾತ್ರಗಳನ್ನೇ ಆರಿಸಿಕೊಳ್ಳುತ್ತಿರೋ ಮಯೂರಿ ಪಾಲಿಗೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಚಿತ್ರದಲ್ಲಿಯೂ ಕೂಡಾ ಅಂಥಾದ್ದೇ ಪಾತ್ರ ಸಿಕ್ಕಿದೆ. ಸೈಕಾಲಾಜಿಕಲ್ ಕ್ರೈಂ ಥ್ರಿಲ್ಲರ್ ಜಾನರಿನ ಈ ಸಿನಿಮಾದಲ್ಲಿ ಮಯೂರಿಯದ್ದು ಬೇರೆಯದ್ದೇ ಥರದ ಪಾತ್ರ. ಇದು ಸಾಮಾನ್ಯವಾದ ಸ್ವರೂಪದಲ್ಲಿಯೇ ಮುಂದುವರೆದು ಕ್ಲೈಮ್ಯಾಕ್ಸ್ ಹಂತದಲ್ಲಿ ಅಚ್ಚರಿಯೊಂದಿಗೆ ಪ್ರೇಕ್ಷಕರಿಗೆಲ್ಲ ಶಾಕ್ ಅನ್ನೂ ಕೊಡುವಂತಿದೆಯಂತೆ.

ರಾಮಚಂದ್ರ ನಿರ್ದೇಶನದ ಈ ಚಿತ್ರ ಸಸ್ಪೆನ್ಸ್ ಕ್ರೈಂ ಥ್ರಿಲ್ಲರ್ ಜಾನರಿನದ್ದೇ ಆಗಿದ್ದರೂ ಆ ಸಿದ್ಧಸೂತ್ರಗಳನ್ನು ಮೀರಿದ ಕಥಾ ಹಂದರ ಹೊಂದಿದೆಯಂತೆ. ನಮ್ಮ ನಡುವಿದ್ದೂ ನಮ್ಮ ಅರಿವಿಗೆ ಬಾರದಂಥಾ ಅನೇಕ ಮಾನಸಿಕ ಸಮಸ್ಯೆಗಳಿದ್ದಾವೆ. ಇಂಥಾ ಸಮಸ್ಯೆಯಿಂದ ಬಳಲುತ್ತಿರೋ ಮಂದಿಯನ್ನು ಸಲೀಸಾಗಿ ಗುರುತಿಸೋದು ಕಷ್ಟದ ಕೆಲಸ. ಅವರ ಕಡೆಯಿಂದ ಯಾವುದಾದರೊಂದು ಕ್ರೈಂ ನಡೆಯುವವರೆಗೂ ಕೂಡಾ ಇಂಥಾ ಮಾನಸಿಕ ತೊಂದರೆಗಳು ಪತ್ತೆಯಾಗೋದೇ ಇಲ್ಲ. ಇಂಥಾದ್ದೇ ಸಮಸ್ಯೆಯಿಂದ ತೊಳಲಾಡುವ ಮಯೂರಿಯ ಪಾತ್ರ ಇಡೀ ಕಥೆಗೆ ತಿರುವು ಕೊಡುವಂಥಾದ್ದು.

ಅದನ್ನು ಮಯೂರಿ ಲೀಲಾಜಾಲವಾಗಿಯೇ ನಿರ್ವಹಿಸಿದ್ದಾರಂತೆ. ವಸುಂಧರಾ ಕೃತಿಕ್ ಫಿಲಂಸ್ ಲಾಂಚನದಡಿಯಲ್ಲಿ ನಿರ್ಮಾಣಗೊಂಡಿರೋ ಈ ಚಿತ್ರದಲ್ಲಿ ಸಂಚಾರಿ ವಿಜಯ್ ಮತ್ತು ರಶ್ಮಿಕಾ ಕೂಡಾ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಇನ್ನುಳಿದಂತೆ ಅಚ್ಯುತ್ ಕುಮಾರ್, ಭರತ್ ಸಾಗರ್, ಗೌತಮ್ ಮುಂತಾದವರ ತಾರಾಗಣವಿದೆ. ಪರಮೇಶ್ ಸಿ ಎಂ ಛಾಯಾಗ್ರಹಣ, ನೊಬಿನ್ ಪೌಲ್ ಸಂಗೀತ ಈ ಚಿತ್ರಕ್ಕಿದೆ. ಕನ್ನಡದ ಮಟ್ಟಿಗೆ ತೀರಾ ಅಪರೂಪದ ಕಥೆ ಹೊಂದಿರೋ ಈ ಚಿತ್ರವೀಗ ಬಿಡುಗಡೆಯ ಹೊಸ್ತಿಲಲ್ಲಿದೆ.