ಪತ್ರಕರ್ತರ ಮೇಲಿನ ಹಲ್ಲೆಗಳು ಮತ್ತು ಕದೀಮರು 

ಪತ್ರಕರ್ತರ ಮೇಲಿನ ಹಲ್ಲೆಗಳು ಮತ್ತು ಕದೀಮರು 

"ಭೀತಿಯುಳ್ಳ ಪತ್ರಕರ್ತ  ಲೋಕತಂತ್ರದಲ್ಲಿ ಸತ್ತ ನಾಗರಿಕನನ್ನು ಸೃಷ್ಟಿಸುತ್ತಾನೆ’ ಮನಿಲಾದಲ್ಲಿ ರಾಮನ್ ಮ್ಯಾಗ್ಸೆಸೆ ಪುರಸ್ಕಾರ ಸ್ವೀಕರಿಸಿ ಮಾತನಾಡಿದ  ಎನ್ ಡಿ ಟಿವಿಯ  ಹಿರಿಯ ಪತ್ರಕರ್ತ ರವೀಶ್ ಕುಮಾರ್ ಅವರ ಮಾತುಗಳನ್ನು ಕೇಳುವಾಗ   ಮಿರ್ಜಾಫುರದ ಸರಕಾರಿ ಶಾಲೆಯಲ್ಲಿ ಮಕ್ಕಳಿಗೆ ಉಣಬಡಿಸಲಾಗಿದ್ದ ’ರೊಟ್ಟಿ ಉಪ್ಪಿನ’ ವಿಡಿಯೋವನ್ನು ತೋರಿಸಿ ಜನರ ಕಣ್ತೆರೆದ ತಪ್ಪಿಗೆ, ಸರಕಾರ ಮತ್ತು ಶಿಕ್ಷಣ ಇಲಾಖೆಯನ್ನು ಎಚ್ಚರಿಸಿದ ತಪ್ಪಿಗೆ  ಆರೋಪಿಯಾದ ಜನಸಂದೇಶ್ ಪತ್ರಿಕೆಯ ಪವನ್ ಕುಮಾರ್ ಜೈಸ್ವಾಲ್ ಮುಖವೇ ಕಣ್ಣೆದುರಿಗೆ ಬಂತು.  

ಅಮೇಜಾನ್ ಪ್ರೈಮ್ ನಲ್ಲಿ ಗುರ್ಮೀತ್ ಸಿಂಗ್ ನಿರ್ದೇಶನದ  ’ಮಿರ್ಜಾಪುರ್’ ವೆಬ್ ಸಿರೀಸ್ ಇದೆ ನೋಡಿ. ನಿತ್ಯವೂ ನಾನು ಕಾಣುವ ಉತ್ತರಪ್ರದೇಶದಲ್ಲಿ ಪ್ರತಿಯೊಂದು ಹಳ್ಳಿಗಳೂ ’ಮಿರ್ಜಾಪುರ್” ನಂತಿವೆ. ಮಾದಕ ವಸ್ತುಗಳು, ಗನ್ನು , ಗೂಂಡಾಗಿರಿ, ಹಿಂಸಾಚಾರವೇ ರಾರಾಜಿಸುವ ಸಮಾಜದಲ್ಲಿ ಜಾತಿ ಹಾಗೂ ಅಪರಾಧಿ ಹಿನ್ನೆಲೆಯುಳ್ಳ ರಾಜಕೀಯ ಶಕ್ತಿಗಳು ಹೇಗೆಲ್ಲ ವ್ಯವಸ್ಥೆಯನ್ನು ಹಾಳುಗೆಡವಿದೆ ಎಂಬುದಕ್ಕೆ ಮಿರ್ಜಾಫುರದ ’ರೊಟ್ಟಿ ಉಪ್ಪಿನ’ ಕತೆ ಒಂದು ಉದಾಹರಣೆ ಮಾತ್ರ.  

ಗೂಂಡಾಗಿರಿಗೆ ಕುಖ್ಯಾತವಾದ  ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥರ ಆಳ್ವಿಕೆಯಲ್ಲಿ ಪತ್ರಕರ್ತರಿಗೆ ಉಳಿಗಾಲವಿಲ್ಲದಂತಾಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯ,  ಪ್ರಜಾಪ್ರಭುತ್ವ, ಸಂವಿಧಾನ ಈ ಶಬ್ದಗಳನ್ನು ದಪ್ಪ ಚರ್ಮದವರಿಗೆ ದಂಡ ಪ್ರಯೋಗಿಸಿ ಕಲಿಸಬೇಕಷ್ಟೇ. ಅಂಥ ಬೌದ್ಧಿಕ ದಾರಿದ್ರ್ಯವಿರುವ ಅಧಿಕಾರದಲ್ಲಿರುವವರನ್ನು ತಡೆಯುವ ಪ್ರಭುತ್ವವೇ ಹಿಂದೂ ಮುಸ್ಲಿಂ, ರಾಮಮಂದಿರ ನಿರ್ಮಾಣದಂಥ ವಿಷಯಗಳಲ್ಲಿ ಮುಳುಗಿರುವಾಗ ಯಾರನ್ನು ದೂರಬೇಕು ? 

ಪವನ್ ಕುಮಾರ್ ಜೈಸ್ವಾಲ್ ಮೇಲೆ ಎಫ್‍ಐ‍ಆರ್ ದಾಖಲಾಗಿಸಿದ್ದನ್ನು ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ತೀವ್ರವಾಗಿ ಖಂಡಿಸಿತು. ಮತ್ತು ಈ ಕೂಡಲೇ ದೂರನ್ನು ಹಿಂಪಡೆಯಬೇಕೆಂದು ನೂರಾರು ಪತ್ರಕರ್ತರು ಮಿರ್ಜಾಪುರ ಜಿಲ್ಲಾಧಿಕಾರಿ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದರು. ಆಡಳಿತದಲ್ಲಿನ ಕುಂದುಕೊರತೆಯನ್ನು ಗಮನಕ್ಕೆ ತಂದು ಎಚ್ಚರಿಸಿದವರನ್ನೇ ಇಂದು ಅಧಿಕಾರದಲ್ಲಿರುವವರು ಆರೋಪಿಗಳನ್ನಾಗಿಸಿ ಜೈಲಿಗಟ್ಟುತ್ತಾರೆಂದರೆ ಸಮಾಜ ಕೊಳೆಯುತ್ತಿದೆ ಅಂತಲೇ ಅರ್ಥ. ಪವನ್ ಜೈಸ್ವಾಲ್ ಮೇಲೆ ಎಫ್ ಐಆರ್ ದಾಖಲಿಸಿದ ಘಟನೆಯ ಬೆನ್ನಿಗೇ ಸುದ್ದಿಯನ್ನು ವರದಿಮಾಡಲು ಹೋಗಿದ್ದ ಕೃಷ್ಣಕುಮಾರ್ ಸಿಂಗ್ ಎಂಬ  ಮತ್ತೊಬ್ಬ ಪತ್ರಕರ್ತನನ್ನು ಐವತ್ತು ಜನರ ಗುಂಪೊಂದು ನಾಯಿಯಂತೆ ಎಗರಿ ಮೈಮೇಲಿನ ಬಟ್ಟೆ ಹರಿದು  ಥಳಿಸುವ ಘಟನೆ ಮಿರ್ಜಾಪುರದಲ್ಲಿಯೇ (2 ಸೆ.) ಸೋಮವಾರ ಘಟಿಸಿದೆ. ಪತ್ರಕರ್ತನ ಬಳಿಯಿದ್ದ ಹಣವನ್ನೂ ದುರುಳರು ದೋಚಿದ್ದಾರೆ. 

ಇದೇ ವರ್ಷ ಉತ್ತರಪ್ರದೇಶದ ಮುಖ್ಯಮಂತ್ರಿ  ಯೋಗಿ ಆದಿತ್ಯನಾಥನನ್ನು ಮದುವೆಯಾಗುತ್ತೇನೆ ಅವರು ನನ್ನ ಸಂಪರ್ಕದಲ್ಲಿದ್ದಾರೆ ಎಂದ ಮಹಿಳೆಯ ವಿಡಿಯೋವನ್ನು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಕ್ಕಾಗಿ ಪತ್ರಕರ್ತ ಪ್ರಶಾಂತ ಕನೋಜಿಯಾ ಮತ್ತು ಅನುಜ್ ಶುಕ್ಲಾ ಎಂಬುವರನ್ನು ಬಂಧಿಸಿದ್ದರು.

ಜೂನ್ 12ರಂದು ನ್ಯೂಸ್24 ವಾಹಿನಿಯ ವರದಿಗಾರ ಅಮಿತ್ ಶರ್ಮಾ ಮೇಲೆ ದಾಳಿ ನಡೆಸಿ ಗಂಭೀರವಾಗಿ ಹಲ್ಲೆ ಮಾಡಿದ್ದರು ರೈಲ್ವೆ ಪೋಲಿಸರು. ಶಾಮ್ಲಿಯಲ್ಲಿ ಗೂಡ್ಸ್ ರೈಲು ಹಳಿ ತಪ್ಪಿದ್ದನ್ನು ವರದಿ ಮಾಡುತ್ತಿದ ಅಮಿತ್ ಶರ್ಮಾನಿಂದ ಕ್ಯಾಮರಾ ಮತ್ತು ಮೊಬೈಲನ್ನು ಕಸಿದುಕೊಂಡು ಥಳಿಸಿದ್ದರು. ದೌರ್ಜನ್ಯವನ್ನು ಖಂಡಿಸಿದ ಶರ್ಮಾನಿಗೆ ಮೂತ್ರವನ್ನು ಕುಡಿಸಿದ್ದರು ಈ ನರಪಿಶಾಚಿಗಳು.  

ಕಳೆದ ಒಂದು ತಿಂಗಳಿನಿಂದಲೂ ಕತ್ತಲಲೋಕದಲ್ಲಿ ವಾಸಿಸುತ್ತಿರುವ ಜಮ್ಮು ಕಾಶ್ಮೀರದ ಜನರ ವಾಸ್ತವ ಸ್ಥಿತಿಗತಿಗಳನ್ನು ವರದಿಮಾಡಲು ಆ ನೆಲದ ಕಣ್ಣು ಮತ್ತು ಕಿವಿಗಳಾಗಿರುವ ಸ್ಥಳೀಯ ಮಾಧ್ಯಮಗಳ ಮೇಲೆ ಅನಿಶ್ಚಿತ ನಿರ್ಬಂಧ ಹೇರಲಾಗಿದ್ದು ಹೊರಗಿನ ಕೆಲ ಪತ್ರಕರ್ತರು ಮಾತ್ರ ಕಾಶ್ಮೀರದ ಸ್ಥಿತಿಗತಿಯ ಕುರಿತು ವರದಿಮಾಡಲು ಹರಸಾಹಸ ಮಾಡಿವೆ. ಅಂತರ್ಜಾಲ, ಮೊಬೈಲ್ ನೆಟ್ ವರ್ಕ್ ಇರದೇ ತಾಂತ್ರಿಕವಾಗಿ ಸಂವಹನ ಕಾರ್ಯ ಅಸಾಧ್ಯವೆಂದು ಸರಕಾರಕ್ಕೆ ಗೊತ್ತಿತ್ತು. 

ಭದ್ರತಾ ದೃಷ್ಟಿಯಿಂದ ಸರಕಾರದ ಸಂಸ್ಥೆಗಳು ಕಾಳಜಿವಹಿಸಿಕೊಳ್ಳಲಿ, ಆದರೆ ಪ್ರಜಾಸತ್ತಾತ್ಮಕ ದೇಶದಲ್ಲಿ ಮಾಧ್ಯಮಗಳು ಭೀತಿ ಇಲ್ಲದೇ ನಿರ್ಭೀತವಾಗಿ, ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವಂತಾಗಬೇಕು. ಆದರೆ ಅನ್ಯಾಯವನ್ನು ವರದಿಮಾಡುವ ಪತ್ರಕರ್ತರನ್ನೇ ಆರೋಪಿಗಳನ್ನಾಗಿಸಿ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಿ ಅಧಿಕಾರದಲ್ಲಿರುವವರು ತಮ್ಮ ಅಧಿಕಾರದ ದುರ್ಬಳಕೆ ಮಾಡುತ್ತಿದ್ದಾಗಲೂ, ಮೂತ್ರ ಕುಡಿಸುವಂಥ ಅಮಾನವೀಯ ದೌರ್ಜನ್ಯಕ್ಕೂ ಪೋಲಿಸರು ಮುಂದಾದಾಗ ಅಂಥವರ ಮೇಲೆ ಕಠಿಣವಾದ ಕ್ರಮತೆಗೆದುಕೊಳ್ಳಬೇಕಾದ  ಸರಕಾರ ಬಾಯಿಮುಚ್ಚಿಕೊಂಡು ಗೂಂಡಾಗಿರಿಯನ್ನು ಪ್ರೋತ್ಸಾಹಿಸುತ್ತಿರುವುದು ದೊಡ್ಡ ದುರಂತ. ಸರಕಾರವೇ ಮಾನವಾಧಿಕಾರಗಳ ಉಲ್ಲಂಘನೆ ಮತ್ತು ಪ್ರಜಾಪ್ರಭುತ್ವದ ನಾಶಕ್ಕೆ ಅವಕಾಶ ನೀಡುತ್ತಿದ್ದುದು ಅತ್ಯಂತ ಘೋರ ಅಪರಾಧ. 

ಇತ್ತೀಚೆಗಷ್ತೇ ವಿತ್ತ ಮಂತ್ರಿ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ನಾರ್ತ್ ಬ್ಲಾಕಿನಲ್ಲಿರುವ ತಮ್ಮ ಸಚಿವಾಲಯವನ್ನು ಪೂರ್ವಾನುಮತಿಯಿಲ್ಲದೇ ಪತ್ರಕರ್ತರು ಪ್ರವೇಶಿಸುವಂತಿಲ್ಲ ಎಂದು ನಿರ್ಬಂಧವನ್ನು ಜಾರಿಗೊಳಿಸಿದ ಕ್ರಮವನ್ನು ಎಡಿಟರ್ಸ್ ಗಿಲ್ಡ್ ಕಟುವಾಗಿ ಖಂಡಿಸಿತ್ತು. ಆ ನಿರ್ಧಾರವನ್ನು ಮರುಪರಿಶೀಲಿಸಿ ಆದೇಶವನ್ನು ಹಿಂಪಡೆಯುವಂತೆ ಆಗ್ರಹಿಸಿತ್ತು.   

ಪತ್ರಕರ್ತರು ಸರಕಾರಿ ಕಚೇರಿಗಳಲ್ಲಿ ಅವರಿಗೆಂದು ನಿಯೋಜಿತವಾಗಿರುವ ರೂಂನಲ್ಲಿ ಆತಿಥ್ಯ ಸ್ವೀಕರಿಸಲೆಂದು ಸರಕಾರಿ ಕಚೇರಿಗೆ ತೆರಳುವುದಿಲ್ಲ, ಅವರು ಸುದ್ದಿ ಸಂಗ್ರಹಿಸುವ ಸವಾಲಿನ ಕರ್ತವ್ಯ ನಿರ್ವಹಿಸಲು ತೆರಳುತ್ತಾರೆ. ಸಚಿವಾಲಯದ ಈ ಆದೇಶ ಮಾಧ್ಯಮ ಸ್ವಾತಂತ್ರ್ಯದ  ಮೇಲಿನ ಪ್ರಹಾರವಾಗಿದೆ ಮತ್ತು ಇದರಿಂದ ಜಾಗತಿಕ ಪತ್ರಿಕಾ ಸ್ವಾತಂತ್ರ್ಯ ಶ್ರೇಯಾಂಕ ಪಟ್ಟಿಯಲ್ಲಿ ಭಾರತ ಮತ್ತಷ್ಟು ಕೆಳಗಿಳಿಯಲಿದೆ ಎಂದು ಖಾರವಾಗಿ ಎಚ್ಚರಿಸಿತ್ತು. 

ಪ್ರಾಮಾಣಿಕ ಹಾಗೂ ವಸ್ತುನಿಷ್ಠ ವರದಿಗಾರಿಕೆಯನ್ನು ಸರಕಾರದ ಗೌರವಕ್ಕೆ ಧಕ್ಕೆ ತರುವಂಥ ಕೆಲಸವೆಂದು ವರದಿಗಾರನನ್ನೇ ಆರೋಪಿಯನ್ನಾಗಿಸುವುದು ಯಾವ ನ್ಯಾಯ ! 

ಜಾರ್ಖಂಡದ ತಬ್ರೀಜ್ ಅನ್ಸಾರಿಯನ್ನು ಗುಂಪುದಾಳಿಕೋರರು ಥಳಿಸಿ ಸಾಯಿಸಿದಾಗ ಪ್ರತಿಭಟನಾಕಾರರು ಜಾರ್ಖಂಡವನ್ನು “ಲಿಂಚ್ ರಾಜ್ಯ” ಎಂದಿದ್ದನ್ನು  ಪ್ರಧಾನಿಗಳು ಅದು “ರಾಜ್ಯಕ್ಕೆ ತೋರುವ ಅಗೌರವ” ಎಂದು ಪ್ರತಿಕ್ರಿಯಿಸಿದ್ದರು. ಇದುವರೆಗೂ ಬಿಜೆಪಿ ಗುಂಪುದಾಳಿಯನ್ನು ತಡೆಗಟ್ಟುವ ಯಾವ ಮಸೂದೆಯನ್ನು ತರುವ ಮನಸ್ಸು ಮಾಡಿಲ್ಲ. 

ಪತ್ರಕರ್ತ  ಜೈಸ್ವಾಲನಿಗೆ ಮಾಹಿತಿ ನೀಡಿದ್ದು ಊರಿನ ಪ್ರಧಾನಿಯ ಪ್ರತಿನಿಧಿ. ಆ ಕರೆಯ ಮೇರೆಗೆ ಹೋಗಿ ವಿಡಿಯೋ ಮಾಡಿ ಎಚ್ಚರಿಸಿದ್ದು ಸರಕಾರಕ್ಕೆ ತೋರುವ ಅಗೌರವ ಹೇಗಾಯ್ತು. ? ಮೊದಲು ಆರೋಪ ದಾಖಲಾಗಬೇಕಿದ್ದು ಮಿರ್ಜಾಪುರ ಬ್ಲಾಕ್ ಶಿಕ್ಷಣ ಅಧಿಕಾರಿ ಪ್ರೇಮ್ ಶಂಕರ್ ರಾಮ್ ಅವರ ಮೇಲೆ. ಅವರೇ ಜೈಸ್ವಾಲ್ ನ ಮೇಲೆ ದೂರು ಕೊಟ್ಟವರು.  ಪತ್ರಕರ್ತ ಪವನ್ ಕುಮಾರ್ ಜೈಸ್ವಾಲ್, ಗ್ರಾಮದ ಮುಖ್ಯಸ್ಥನ ಪ್ರತಿನಿಧಿ ರಾಜ್ ಕುಮಾರ್ ಪಾಲ್ ಮತ್ತು ಇನ್ನೂ ಹಲವು ಅಪರಿಚಿತ ವ್ಯಕ್ತಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 120 ಬಿ (ಕ್ರಿಮಿನಲ್ ಪಿತೂರಿ), 186 (ಸರ್ಕಾರಿ ನೌಕರನನ್ನು ಕರ್ತವ್ಯ ನಿರ್ವಹಿಸುವಲ್ಲಿ ಅಡ್ಡಿಪಡಿಸುವುದು), 193 (ಸುಳ್ಳು ಪುರಾವೆಗಳು) ಮತ್ತು 420 (ಮೋಸ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಪ್ರಾಥಮಿಕ ಶಿಕ್ಷಣ ಮಂತ್ರಿ ಸತೀಶ್ ದ್ವಿವೇದಿ ಭ್ರಷ್ಟಾಚಾರ ಅಥವಾ ಎಚ್ಚರಿಸಬಲ್ಲ ಯಾವ ಸುದ್ದಿಯ ಮೇಲೆ ಎಫ್ ಐಆರ್ ಕಾರ್ಯಾಚರಣೆ ಸಲ್ಲದು ಎಂದಿದ್ದಾರೆ,. ಜಿಲ್ಲಾಧಿಕಾರಿ ಅನುರಾಗ ಪಟೇಲ್ ಚಪಾತಿಗೆ ಜೊತೆ  ಉಪ್ಪು ಕೊಟ್ಟಿದ್ದನ್ನು ಮೊದಲು ಒಪ್ಪಿಕೊಂಡು ಈಗ ಪತ್ರಕರ್ತನ ಮೇಲೆ ಹರಿಹಾಯುತ್ತಿದ್ದಾರೆ.   ಅವರ ಪ್ರಕಾರ ಇದೊಂದು ಸಂಚು, ಪತ್ರಕರ್ತನ ಕೆಲಸ ವರದಿ ಮಾಡುವುದೇ ಹೊರತು ವಿಡಿಯೋ ಮಾಡಿ ಹರಿಬಿಡುವುದಲ್ಲ ಎಂದು ಪಾಠ ಹೇಳುವ ಅವರಿಗೆ ಮಕ್ಕಳ ಅನ್ನವನ್ನು ಕದಿಯುವವರನ್ನು ಮೊದಲು ಒದ್ದು ಜೈಲಿಗಟ್ಟಬೇಕು, ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆನ್ನುವ  ಜ್ಞಾನವೂ ಇಲ್ಲವೇ ?  

ದೇವರಿಗಾಗಿ ಮಂದಿರ ಕಟ್ಟುವ, ಮಹಾಕುಂಭಕ್ಕೆ ಸಾವಿರಾರು ಕೋಟಿಗಟ್ತಲೆ ಹಣಸುರಿಯುವ ಆದಿತ್ಯನಾಥರೇ ನೀವು  ಮಕ್ಕಳು ದೇವರ ಸ್ವರೂಪ ಎಂದು ಒಪ್ಪುವುದಾದರೆ ಬಡ ಮಕ್ಕಳ ಅನ್ನ ಕದ್ದವರ ಮೇಲೆ ಸೂಕ್ತಕ್ರಮ ಕೈಗೊಳ್ಳಿ. ನಿಮ್ಮ ರಾಜ್ಯದ ಬಡ ಮಕ್ಕಳು ಹೊಟ್ಟೆತುಂಬ ಉಣ್ಣುವಂತೆ, ಉತ್ತಮ ಶಿಕ್ಷಣವನ್ನು ಪಡೆಯುವಂತೆ  ನೋಡಿಕೊಳ್ಳಿ.  ಶಾಲೆಗಳ ಮಧ್ಯಾಹ್ನದ ಊಟದ ಖರ್ಚುವೆಚ್ಚ, ಆಹಾರ  ಸಾಮಗ್ರಿ ಸರಿಯಾದ ರೀತಿಯಲ್ಲಿ ತಲುಪುತ್ತಿದೆಯೋ ಇಲ್ಲವೋ ಎಂಬುದನ್ನು ನೋಡಿಕೊಳ್ಳುವ ಪ್ರಾಮಾಣಿಕ ಅಧಿಕಾರಿಗಳೂ ಇಲ್ಲವೇ ನಿಮ್ಮ ಆಸ್ಥಾನದಲ್ಲಿ ?  ಆ ಮಕ್ಕಳ ನೆನೆದು ನಿಮ್ಮ ಆತ್ಮ ದುಃಖಿಸುವುದಿಲ್ಲವೇ ?  

ಅರೆ…….“ನಾ ಖಾವೂಂಗಾ ನ ಖಾನೇ ದೂಂಗಾ ಅಂದವರೆಲ್ಲಿ ಹೋದರು ?     

ನಿಜವಾದ ತನಿಖೆ ಆಗಬೇಕಿರುವುದು ಮಕ್ಕಳ ಮಧ್ಯಾಹ್ನದ ಊಟಕ್ಕೆ ಕೊಡಮಾಡಲಾದ ರೇಷನ್ ದವಸ ಧಾನ್ಯ ಎಲ್ಲಿಗೆ ಹೋಯ್ತು? ಮತ್ತು ತರಕಾರಿಗೆ ಹಂಚಿಕೆಯಾಗಿದ್ದ ಹಣ ಮುಗಿದುಹೋದರೂ ತರಕಾರಿಯ ವ್ಯವಸ್ಥೆ ಯಾಕೆ ಆಗಲಿಲ್ಲ ?  ಸರಕಾರದ ಉಗ್ರಾಣದಿಂದ ಸರ್ಕಾರಿ ಶಾಲೆಗಳಿಗೆ ಹಂಚಿಕೆಯಾಗುವ ದವಸ ಧಾನ್ಯದ ಪ್ರತಿ ವಿವರವನ್ನು ತನಿಖೆಗೆ ಒಳಪಡಿಸುವ ಅಗತ್ಯವಿದೆ. ಎಲ್ಲಿ ಯಾವ ಹೆಗ್ಗಣಗಳು ತಿಂದು ಹಾಕುತ್ತಿವೆ ಮಕ್ಕಳ ಅನ್ನವನ್ನು ಅಂತ ಕಂಡುಹಿಡಿದು ತಕ್ಕ ಕ್ರಮ ತೆಗೆದುಕೊಳ್ಲುವ ಅಗತ್ಯವಿದೆ. ಇದನ್ನು ಕಡೆಗಣಿಸಿ ಜಿಲ್ಲಾಧಿಕಾರಿ ವ್ಯರ್ಥ ರಾಜಕೀಯ ಮಾಡುತ್ತಿದ್ದಾರೆ.  

 ಲಜ್ಜೆಗೆಟ್ಟ ಭ್ರಷ್ಟ ಅಧಿಕಾರಿಗಳು ಅವರ ವಂದಿಮಾಗಧರು ಮತ್ತು ಮಕ್ಕಳ ಬಾಯಿಂದ ತುತ್ತನ್ನು  ಕದಿಯುವ ಖದೀಮರನ್ನು ಮೊದಲು ಜೈಲಿಗಟ್ಟುವ ಬದಲು ಕ್ರಿಮಿನಲ್ ಕೇಸು ದಾಖಲಿಸಿದ್ದು ಅನ್ಯಾಯವನ್ನು ಬಯಲಿಗೆಳೆದ ಪತ್ರಕರ್ತನ ಮೇಲೆ. ಇದೇ ನಮ್ಮ ನ್ಯೂ ಇಂಡಿಯಾ..!  ಇಂಥ ಕಳ್ಳರು ಸುಳ್ಳರು ಇರುವವರೆಗೂ ಭಾರತ ವಿಶ್ವಗುರು ಹೇಗಾದೀತು ?       

ಪತ್ರಿಕೋದ್ಯಮ ಪ್ರಜಾಪ್ರಭುತ್ವದ ಕಾವಲು ನಾಯಿಯಿದ್ದಂತೆ. ಮೊದಲು ನಿರ್ಭೀತ ಪತ್ರಕರ್ತ ಪವನ್ ಕುಮಾರ್ ಜೈಸ್ವಾಲನ ಮೇಲಿನ ಆರೋಪವನ್ನು ಹಿಂತೆಗೆದುಕೊಳ್ಳಿ, ಇದೇ ನಿಮ್ಮ  ಅಂತರಂಗ ಶುದ್ಧಿ, ಇದೇ ಬಹಿರಂಗ ಶುದ್ಧಿ !