ಆಗ್ನೇಯ ಏಷ್ಯಾದಲ್ಲಿ ನಾನು

ಸಿಂಗಪೂರ್ ಮತ್ತು ಭಾರತೀಯ ಮಹಿಳೆಯರ ನಡುವಿನ ಉಡುಪುಗಳ ವ್ಯತ್ಯಾಸದ ಬಗ್ಗೆ ವಿವರಿಸುತ್ತಾ ಅದೇಕೋ ಭಾರತೀಯ ಮಹಿಳೆಯರಿಗೆ ಸೀರೆಯೇ ಸರಿ ಎಂಬ ತೀರ್ಪನ್ನೂ ನೀಡುತ್ತಾರೆ! ಸಿಂಗಪೂರ್ ಮಹಿಳೆಯರ ಮೈಮೇಲೆ ಹೆಚ್ಚೆಂದರೆ ಒಂದೂವರೆ ಮೀಟರ್ ಬಟ್ಟೆ ಇದ್ದರೂ ಅಲ್ಲಿ ಮಹಿಳೆಯರು ಸುರಕ್ಷತವಾಗಿದ್ದಾರೆಂದೂ ಭಾರತೀಯ ಮಹಿಳೆಯರು ಸುಮಾರು ಎಂಟು ಮೀಟರ್ ಬಟ್ಟೆ ತೊಟ್ಟರೂ ಆತ್ಯಾಚಾರಕ್ಕೆ ಒಳಗಾಗುವ ವಿರೋಧಾಭಾಸಗಳನ್ನು ಗಮನಿಸಿರುವ ಲೇಖಕರು ಸಿಂಗಪೂರ್ ಪುರುಷರ ನಡವಳಿಕೆ ಬಗ್ಗೆ ಪುರುಷೋತ್ತಮರೆಂಬಂತೆ ಸರ್ಟಿಫಿಕೆಟ್ ಕೂಡ ನೀಡಿಬಿಡುತ್ತಾರೆ.

ಆಗ್ನೇಯ ಏಷ್ಯಾದಲ್ಲಿ ನಾನು

ಒಂದು ಊರು,ರಾಜ್ಯ ಅಥವಾ ದೇಶದ ಬಗ್ಗೆ ಅಲ್ಲಿನ ಜನರಿಗಿಂತ ಹೆಚ್ಚು ತಿಳಿವಳಿಕೆ ಆಯಾ ಸ್ಥಳಗಳ ಬಗ್ಗೆ ಪ್ರವಾಸಿಗರು ಬರೆದ ಪುಸ್ತಕಗಳನ್ನು ಓದುವುದರಿಂದಲೂ ಲಭ್ಯವಾಗುತ್ತದೆ. ಒಂದು ಊರಿನ ಜನರು ತಾವು ಅಲ್ಲೇ ಹುಟ್ಟಿ ಬೆಳೆದಿರುವುದರಿಂದ ಅಲ್ಲಿನ ಎಲ್ಲ ವಿಷಯಗಳೂ ತಮಗೆ ಗೊತ್ತಿದೆ ಎಂಬ ಭ್ರಮೆಯಲ್ಲಿರುವ ಸಾಧ್ಯತೆ ಇದೆ. ಆದರೆ ಪರಿಸ್ಥಿತಿ ಹಾಗಿರುವುದಿಲ್ಲ. ಪ್ರವಾಸಿಗನೊಬ್ಬನ ಕುತೂಹಲ,ಬೆರಗು ಆತ ಭೇಟಿ ನೀಡಿದ ಪ್ರದೇಶದ ಇಂಚಿಂಚೂ ಮಾಹಿತಿ ಕಲೆ ಹಾಕುವಂತೆ ಮಾಡುತ್ತದೆ. ಕಾಟಾಚಾರಕ್ಕೆ ಪ್ರವಾಸ ಮಾಡುವವರ ಬಗ್ಗೆ ನಾನು ಈ ಮಾತುಗಳನ್ನು ಹೇಳುತ್ತಿಲ್ಲ. ಪ್ರವಾಸಿಗನೊಬ್ಬ ಅಧ್ಯಯನಶೀಲನಾದರೆ,ಉಪನ್ಯಾಸಕನಾಗಿದ್ದರೆ,ಮಗುವಿನ ಮುಗ್ಧತೆ ಇದ್ದರೆ ಪ್ರತಿಯೊಂದು ಅಂಶವನ್ನೂ ತಿಳಿಯುವ ಪ್ರಯುತ್ನ ಮಾಡುತ್ತಾನೆ. ನಾವು ಅಮೆರಿಕನ್ನರಿಗಿಂತ ಅವರ ದೇಶವನ್ನು ಚೆನ್ನಾಗಿ ಅರಿತುಕೊಳ್ಳುವುದು ಅದರ ಬಗ್ಗೆ ಪ್ರಕಟವಾಗಿರುವ ಪುಸ್ತಕಗಳನ್ನು ಓದುವುದರಿಂದ ತಿಳಿದುಕೊಳ್ಳುವುದು ಸಾಧ್ಯವಿದೆ. ಈ ಮಾತನ್ನು ಹೇಳುವುದಕ್ಕೆ ಕಾರಣ ತಿರುಪತಿಹಳ್ಳಿ ಶಿವಶಂಕರಪ್ಪ ಅವರು ಬರೆದಿರುವ ? ಆಗ್ನೇಯ ಏಷ್ಯಾದಲ್ಲಿ ನಾನು ? ಎಂಬ  ಈ ಪ್ರವಾಸ ಕಥನ.

ಅವರು ಸಿಂಗಪೂರ್,ವಿಯೆಟ್ನಾಂ,ಕಾಂಬೋಡಿಯಾ ಸೇರಿದಂತೆ ಆಗ್ನೇಯ ಏಷ್ಯಾ ದೇಶಗಳ ಪ್ರವಾಸ ಕುರಿತು ಬರೆದಿರುವ  ಈ ಕೃತಿ ಗ್ರಾಮೀಣ ಭಾರತದ ಪ್ರತಿನಿಧಿಯೊಬ್ಬನ ಅಚ್ಚರಿ ಮತ್ತು ಬೆರಗನ್ನು ತೆರೆದಿಡುತ್ತದೆ. ಅವರು ಉಪನ್ಯಾಸಕರಾಗಿ ಪಡೆದಿರುವ ಅನುಭವದಿಂದ ಈ ಕೃತಿ ತುಂಬ ಸರಳವಾಗಿ,ಎಲ್ಲ ಓದುಗರಿಗೂ ಮನದಟ್ಟಾಗುವಂತೆ ಬರೆಯುವುದು ಸಾಧ್ಯವಾಗಿದೆ.

ಕಥನ ಆರಂಭಿಸುವ ಮುನ್ನ ಬರೆದಿರುವ ಕೆಲವು ಮಾತುಗಳು ಅವರ ಸರಳ ಬದುಕಿನ ಬಗ್ಗೆ ಸೂಚ್ಯವಾಗಿ ತಿಳಿಸುತ್ತವೆ. ಭಾರತೀಯ ಸಂಸ್ಕ್ರೃತಿಯ ಜೀವಸೆಲೆಯನ್ನು ಹೊಂದಿದ್ದು ಬೌದ್ಧ ಧರ್ಮದ ಪ್ರಭಾವಕ್ಕೆ ಒಳಗಾಗಿರುವ ಆಗ್ನೇಯ ಏಷ್ಯಾದ ದೇಶಗಳನ್ನು ನೋಡಲೇಬೇಕೆಂಬ ಸಿಂಗಪೂರ್ ನಲ್ಲಿರುವ ಮಗನ ಒತ್ತಾಯಕ್ಕೆ ಮಣಿದು ಅವರು ಪ್ರವಾಸ ಕೈಗೊಂಡಿದ್ದರು. ಹಣದ ಬಗ್ಗೆ ಚಿಂತೆ ಬೇಡ ಎಂಬ ತಮ್ಮ ಮಗನ ಪ್ರೀತಿಯ ಒತ್ತಡಕ್ಕೆ ಮಣಿದು ಅವರು ಪ್ರವಾಸಕ್ಕೆ ಒಪ್ಪಿಗೆ ನೀಡಿದ್ದರು.

ಸಿಂಗಪೂರ್ ಎನ್ನುವುದು ಒಂದು ದೇಶವೇ ಒಂದು ನಗರವೇ ಅಥವಾ ಒಂದು ದ್ವೀಪವೇ ಎಂಬ ಅದೆಷ್ಟೋ ಮಂದಿಯ ಅನುಮಾನಗಳಿಗೆ ಅವರು ಆರಮಭದಲ್ಲೇ ಉತ್ತರಿಸಿ ಸಿಂಗಪೂರ್ ನಗರವೂ ಹೌದು,ದೇಶವೂ ಹೌದು,ದ್ವೀಪವೂ ಹೌದು ಎಂಬುವುದನ್ನು ಮನವರಿಕೆ ಮಾಡಿಕೊಡುತ್ತಾರೆ. ಮೀನಿನ ದೇಹ ಮತ್ತು ಸಿಂಹದ ತಲೆ ಹೊಂದಿರುವ ಕಾಲ್ಪನಿಕ ಪ್ರಾಣಿಯೊಂದನ್ನು ಸಿಂಗಪೂರ್ ನ ರಾಷ್ಟ್ರೀಯ ಲಾಂಛನವಾಗಿಸಿದ್ದೇಕೆ ? ಸಿಂಗಪೂರ್ ಮತ್ತು ಮಲೇಷಿಯಾದಲ್ಲಿ ಯಥೇಚ್ಛ ಮಳೆಯಾಗುವುದಕ್ಕೆ ಕಾರಣವೇನು? ಸಿಂಗಪೂರ್ ರೇವು ಪಟ್ಟಣವಾಗಿ ಅಭಿವೃದ್ಧಿ ಹೊಂದುವುದಕ್ಕೆ ಕಾರಣಗಳೇನು? ಭಾರತ ಮತ್ತು ಚೀನಾ ಮೂಲದ ಜನರು ಸಿಂಗಪೂರ್ ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವುದರ ಹಿನ್ನೆಲೆ ಏನು ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರಗಳಿವೆ. ಇಂಗ್ಲೀಷರು ಸಿಂಗಪೂರ್ ನಲ್ಲಿ ರಬ್ಬರ್ ಮತ್ತು ತವರ ಗಣಿಗಾರಿಕೆಯಿಂದ ಅಪಾರ ಪ್ರಮಾಣದಲ್ಲಿ ಸಂಪಾದನೆ ಮಾಡಿದ್ದರೆ ಭಾರತೀಯರು ಮತ್ತು ಚೀನೀಯರು ಆಧುನಿಕ ಸಿಂಗಪೂರ್ ನಿರ್ಮಿಸುವಲ್ಲಿ ವಹಿಸಿದ ಪಾತ್ರವನ್ನು ಮನಮುಟ್ಟುವಂತೆ ಬರೆದಿದ್ದಾರೆ.

ಆಧುನಿಕ ಸಿಂಗಪೂರ್ ನ ಶಿಲ್ಪಿ,ಮೊದಲ ಪ್ರಧಾನಿ ಲೀ ಕಾನ್ ಯೂ ಬಗ್ಗೆ ಎಂಥವರಿಗೂ ಪ್ರಿತಿ ಹುಟ್ಟುವಂತೆ ಆತನ ವ್ಯಕ್ತಿತ್ವವನ್ನು ಲೇಖಕರು ಚಿತ್ರಿಸಿದ್ದಾರೆ. ಆತನ ದಕ್ಷತೆ, ಬುದ್ಧಿವಂತಿಕೆ,ದೂರದೃಷ್ಟಿ., ಆಧುನಿಕ ಚಿಂತನೆ, ಹೋರಾಟದ ಮನೋಭಾವ ಇಡೀ ಜಗತ್ತೇ ಮಾದರಿ ಎಂಬಂತೆ ನೋಡುತ್ತಿರುವ ಸಿಂಗಪೂರ್ ನಿರ್ಮಾಣದಲ್ಲಿ ಹೇಗೆ ನೆರವಾಗಿದೆ ಎನ್ನುವುದನ್ನೂ ಲೇಖಕರು ವಿವರಿಸಿದ್ದಾರೆ. 1965 ರಲ್ಲಿ ಪ್ರಧಾನಿಯಾದ ಲೀ ಆ ದಿನಗಳಲ್ಲೇ ವಿದೇಶಿ ಬಂಡವಾಳ ಹೂಡಿಕೆಗೆ ಉತ್ತೇಜನ ನೀಡಿದ್ದನೆಂದರೆ ಅಚ್ಚರಿಯಾಗುತ್ತದೆ.

ಸಿಂಗಪೂರ್ ನಲ್ಲಿ ರಸ್ತೆಬದಿಯ ಮರಗಳು ಇಚ್ಛೆ ಬಂದಂತೆ ಮೈಚಾಚಿ ಬೆಳೆಯುವಂತಿಲ್ಲ. ಎರಡು ಮೂರು ವರ್ಷಗಳಿಗೊಮ್ಮೆ ಯಂತ್ರಗಳ ನೆರವಿನಿಂದ ಟ್ರಿಂ ಮಾಡುತ್ತಾರೆಂಬ ಕ್ರಮಬದ್ಧ ವಿಷಯವೇ ನಮ್ಮ ಬೆಂಗಳೂರಿನ ಅನಾಥ ಮರಗಳ ಅಡ್ಡಾದಿಡ್ಡಿ ಬೆಳವಣಿಗೆಯನ್ನು ನೆನಪಿಸಿ ಬೇಸರ ಉಂಟು ಮಾಡುತ್ತದೆ. ಲೇಖಕರು ಕಣ್ಣಿಗೆ ಹೊಸದಾಗಿ ಬೆಳೆಯುತ್ತಿರುವ ಮರದ ಸಾಲುಗಳು ಬಾಬ್ ಕಟ್ ಮಾಡಿಸಿಕೊಂಡು ಲಂಗ ಹಾಕಿ ಒಂಟಿ ಕಾಲಿನಲ್ಲಿ ನಿಂತ ಸುಂದರ ಬೆಡಗಿಯರಂತೆ ಕಂಡುಬರುತ್ತದಂತೆ.

ಸಿಂಗಪೂರ್ ಮಹಿಳೆಯರ ಬಗೆಗಿನ ವಿವರಣೆ ಸಂದರ್ಭದಲ್ಲಿ ಲೇಖಕರ ಸೌಂದರ್ಯ ಪ್ರಜ್ಞೆ ಮತ್ತು ರಸಿಕತೆ ಗೊತ್ತಾಗುತ್ತದೆ. ಅವರು ಹೇಳುತ್ತಾರೆ, ‘ಸಿಂಗಪೂರ್ ಮಹಿಳೆಯರು ಬಿಳಿಬೆಲ್ಲದಚ್ಚಿನಂತೆ, ಕುಂಬ ನಿತಂಬಿನಿಯರಲ್ಲ, ಮೈಬಣ್ಣ ಮಿಲ್ಕಿ ವೈಟು, ಬಿಸಿಬಿಸಿಯಾದ ಮೈಸೂರ್ ಪಾಕ್ ನಂತೆ’. ಸಿಂಗಪೂರ್ ಮತ್ತು ಭಾರತೀಯ ಮಹಿಳೆಯರ ನಡುವಿನ ಉಡುಪುಗಳ ವ್ಯತ್ಯಾಸದ ಬಗ್ಗೆ ವಿವರಿಸುತ್ತಾ ಅದೇಕೋ ಭಾರತೀಯ ಮಹಿಳೆಯರಿಗೆ ಸೀರೆಯೇ ಸರಿ ಎಂಬ ತೀರ್ಪನ್ನೂ ನೀಡುತ್ತಾರೆ! ಸಿಂಗಪೂರ್ ಮಹಿಳೆಯರ ಮೈಮೇಲೆ ಹೆಚ್ಚೆಂದರೆ ಒಂದೂವರೆ ಮೀಟರ್ ಬಟ್ಟೆ ಇದ್ದರೂ ಅಲ್ಲಿ ಮಹಿಳೆಯರು ಸುರಕ್ಷತವಾಗಿದ್ದಾರೆಂದೂ ಭಾರತೀಯ ಮಹಿಳೆಯರು ಸುಮಾರು ಎಂಟು ಮೀಟರ್ ಬಟ್ಟೆ ತೊಟ್ಟರೂ ಆತ್ಯಾಚಾರಕ್ಕೆ ಒಳಗಾಗುವ ವಿರೋಧಾಭಾಸಗಳನ್ನು ಗಮನಿಸಿರುವ ಲೇಖಕರು ಸಿಂಗಪೂರ್ ಪುರುಷರ ನಡವಳಿಕೆ ಬಗ್ಗೆ ಪುರುಷೋತ್ತಮರೆಂಬಂತೆ ಸರ್ಟಿಫಿಕೆಟ್ ಕೂಡ ನೀಡಿಬಿಡುತ್ತಾರೆ. ಈ ವಿಷಯದ ವಿವರಣೆಯಲ್ಲಿ ಲೇಖಕರ ಮುಗ್ದತೆ ಮತ್ತು ಗೊಂದಲ ಕಾಣುತ್ತದೆ.

ಹಸ್ತಸಾಮುದ್ರಿಕಾ ಶಾಸ್ತ್ರದಲ್ಲಿ ಕೈಬೆರಳುಗಳ ಮಹತ್ವ ಅರಿತು ನಿರ್ಮಿಸಿರುವ ಸನ್ ಟೆಕ್ ಪಾರ್ಕ್,ಮೆರಿನಾ ಬೇ ಸ್ಯಾಡ್ಸ್,ಕೃತಕ ಬೆಟ್ಟದ ಮೇಲೆ ಸಮೃದ್ಧವಾಗಿ ಬೆಳೆಸಿದ ಹಸಿರ ಸಿರಿ ,ಸೆಂಟೋಸ ದ್ವೀಪ ಮೊದಲಾದ ಪ್ರವಾಸಿ ತಾಣಗಳ ವರ್ಣನೆ ಓದುತ್ತಿದ್ದರೆ ನಾವು ಅಲ್ಲೇ ಇರುವಂತೆ ಭಾಸವಾಗುತ್ತದೆ. ಆ ಮಟ್ಟಿಗೆ ಲೇಖಕರಿಗೆ ಅಭಿನಂದನೆ ಸಲ್ಲಿಸಲೇಬೇಕು. ಸಿಂಗಪೂರ್ ಸ್ವಚ್ಚತೆ ಬಗ್ಗೆ ವಿವರಿಸುವಾಗ ಚರಂಡಿಯಲ್ಲಿ ಹರಿಯುವ ನೀರು ಕೂಡ ನಮ್ಮ ಪಶ್ಚಿಮಘಟ್ಟ ಪ್ರದೇಶದಲ್ಲಿ ಹರಿಯುವ ನದಿನೀರಿನಂತೆ ಶುಭ್ರವಾಗಿದೆ ಎನ್ನುತ್ತಾರೆ.

ಪ್ರತಿಯೊಂದು ವಿವರಣೆ ಸಂದರ್ಭದಲ್ಲೂ ಲೇಖಕರ ಒಂದು ಅರ್ಥಪೂರ್ಣ ಕಮೆಂಟ್ ಇದ್ದೇ ಇರುತ್ತದೆ. ಸಿಂಗಪೂರ್ ಬಗ್ಗೆ ಹೇಳುವಾಗ ಅವರು ? ಒಂದು ದೇಶವೆಂದರೆ ಕೇವಲ ಭೌಗೋಳಿಕ ಪ್ರದೇಶವಲ್ಲ. ಅಲ್ಲಿನ ಸುಸಂಸ್ಕೃತ  ವಿದ್ಯಾವಂತ ಜನ ಒಂದು ದೇಶದ ಜೀವನದಿ ಇದ್ದಂತೆ ? ಎನ್ನುತ್ತಾರೆ. ಹೇಗೆ ಒಂದು ದೇಶ ನೀರನ್ನೇ ಪ್ರವಾಸಿ ಸಂಪನ್ಮೂಲವಾಗಿ ಆಕರ್ಷಕವಾಗಿ ಬಳಸಿಕೊಳ್ಳಬಹುದು ಎಂಬುದಕ್ಕೆ ಸಿಂಗಪೂರ್ ನಿದರ್ಶನವಾಗಿರುವ ಬಗೆಯನ್ನು ಅವರು ಅಚ್ಚುಕಟ್ಟಾಗಿ ವಿವರಿಸಿದ್ದಾರೆ. ಶಿಕ್ಷಣ ವ್ಯವಸ್ಥೆಯ ಬಗ್ಗೆ ಹೇಳುತ್ತಾ ಖಾಸಗಿ ಶಿಕ್ಷಣ ಸಂಸ್ಥೆಗಳಿದ್ದರೂ ಪೋಷಕರು ಸರ್ಖಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸಲು ಮುಗಿಬೀಳುವುದೇಕೆ ಎಂಬ ಕಾರಣಗಳನ್ನೂ ನೀಡುತ್ತಾರೆ.ಇದು ಕೇವಲ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಪ್ರೋತ್ಸಾಹಿಸುವ ನಮ್ಮ ಸರ್ಕಾರಗಳಿಗೆ ಕಿವಿಮಾತಿನಂತಿದೆ. ಸಿಂಗಪೂರ್ ನ ವಿದ್ಯುತ್ ಸಂಪರ್ಕ,ಕುಡಿಯುವ ನೀರಿನ ಪೂರೈಕೆ,ಜನರ ಸಂಚಾರಿ ಶಿಸ್ತು,ಕಾರ್ ಖರೀದಿಗೆ ಇರುವ ನಿರ್ಬಂಧಗಳು ಇವೇ ಮೊದಲಾದ ಸಂಗತಿಗಳನ್ನು ವಿವರಿಸುವಾಗ ನಮ್ಮಲ್ಲಿನ ಲೋಪದೋಷಗಳನ್ನು ಸರಿಪಡಿಸಬೇಕಾದ ಅಗತ್ಯಗಳನ್ನು ಎತ್ತಿ ತೋರಿಸುತ್ತದೆ. ಅಷ್ಟೇ ಅಲ್ಲ. ಬೆಂಗಳೂರನ್ನು ಸಿಂಗಪೂರ್ ಮಾಡುವುದಾಗಿ ಹೇಳಿದ್ದ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರ ಮಾತುಗಳು ನೆನಪಾಗುತ್ತವೆ. ಅಂದು ಅವರು ಆ ಮಾತುಗಳನ್ನು ಏಕೆ ಹೇಳಿದ್ದರೆನ್ನುವುದಕ್ಕೆ ಈ ಕೃತಿಯಲ್ಲಿ ಉತ್ತರ ದೊರೆಯುತ್ತದೆ. ಆದರೆ ಅವರು ಹೇಳಿದಂತೆ ಮಾಡಲಿಲ್ಲ. ಬೆಂಗಳೂರು ಸಿಂಗಪೂರ್ ಆಗಲಿಲ್ಲ. ಟ್ರಾಫಿಕ್ ಕಿರಿಕಿರಿ,ಕೊಳೆತು ನಾರುತ್ತಿರುವ ಚರಂಡಿ, ವ್ಯಾಪಾರಿ ಶಿಕ್ಷಣ ಸಂಸ್ಥೆಗಳ ಕಿರುಕುಳ ನೋಡುತ್ತಿದ್ದರೆ ಸಿಂಗಪೂರ್ ಬಗ್ಗೆ,ಅಲ್ಲಿನ ಜನರ ಬಗ್ಗೆ ಅಸೂಯೆ ಉಂಟಾಗುವಂತೆ ಬರೆದಿದ್ದಾರೆ.

ವಿಯೆಟ್ನಾಂನಲ್ಲಿರುವ ಲಿಂಗ ಸಮಾನತೆ,ಆಹಾರವಾಗಿ ನಾಯಿ ಮತ್ತು ಮೊಸಳೆ ಮಾಂಸ, ಕುಸಿದ ಡಾಂಗ್(ಅಲ್ಲಿನ ಕರೆನ್ಸಿ)ಮೌಲ್ಯ ಇವೇ ಮೊದಲಾದ ವಿಷಯಗಳನ್ನು ಉದಾಹರಣೆ ಸಹಿತ ವಿವರಿಸುವಾಗ ಲೇಖಕರ ಒಳಗಿರುವ ಉಪನ್ಯಾಸಕ ಜಾಗೃತಗಾಗಿರುವುದು ಎದ್ದು ಕಾಣುತ್ತದೆ. ಗುಡ್ಡಗಾಡುಗಳಿಂದ ತುಂಬಿರುವ ವಿಯೆಟ್ನಾಂ ಕಾಫಿ,ಕರಿಮೆಣಸು,ಏಲಕ್ಕಿ ಮೊದಲಾದ ಸಾಂಬಾರ ಬೆಳೆಗಳನ್ನು ಬೆಳೆಯುತ್ತಿರುವುದು, ಅಲ್ಲಿ ಹರಿಯುತ್ತಿರುವ ನದಿಗಳು  ಇವೇ ಮೊದಲಾದ ಸಂಗತಿಗಳ ಉಲ್ಲೇಕ ಕೊಡಗು ಜಿಲ್ಲೆಯಂತೆ ಭಾಸವಾಗುತ್ತದೆ. ಅಮೆರಿಕದ ವಿರುದ್ದ ಹತ್ತೊಂತ್ತು ವರ್ಷ ಯುದ್ದ ಮಾಡಿ ಗೆದ್ದ ಪುಟ್ಟ ರಾಷ್ಟ್ರ ವಿಯೆಟ್ನಾಂನಲ್ಲಿ ಅಸಂಖ್ಯಾತ ಅಂಗವಿಕಲರು ಭಿಕ್ಷೆ ಬೇಡದಂತೆ ಸರ್ಕಾರ ರೂಪಿಸಿರು ವ್ಯವಸ್ಥೆ ಹೇಗೆ ಬದುಕು ಕಟ್ಟಿಕೊಡಬಲ್ಲದು ಎನ್ನುವುದಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ. ಹೊಚಿಮಿನ್  ಎಂಬ ದೇಶಭಕ್ತನಿಂದಾಗಿ ವಿಯೆಟ್ನಾಂನ ಅಖಂಡತೆ ಉಳಿದಿರುವ ಬಗ್ಗೆ, ನಿನ್ ಬಿನ್  ಪ್ರದೇಶದಲ್ಲಿರುವ ಸುಂದರ ಸರೋವರ, ದೋಣಿ ವಿಹಾರ ಹುಟ್ಟಿಸುವ ರೋಮಾಂಚನವನ್ನೆಲ್ಲ ಲೇಖಕರು ಸೊಗಸಾಗಿ ವಿವರಿಸಿದ್ದಾರೆ. ಇನ್ನಷ್ಟು ಚಿತ್ರವಿಚಿತ್ರ, ರೋಚಕ ಸಂಗತಿಗಳನ್ನೆಲ್ಲ ಲೇಖಕರು ದಾಖಲಿಸಿದ್ದಾರೆ.

ಲೇಖಕರ ಪ್ರಕಾರ ಕಾಂಬೋಡಿಯಾ ಶಾಪಗ್ರಸ್ಥ ದೇಶ. ಪೋಲ್ ಪಾಟ್ ಎಂಬ ಕ್ರೂರಿ ಇಡೀ ದೇಶದ ನೆಮ್ಮದಿ, ಅಭಿವೃದ್ದಿ ಪಥವನ್ನು ನಾಶ  ಮಾಡಿದ ಬಗ್ಗೆಯನ್ನು ಲೇಖಕರು ಇಲ್ಲಿ ಪ್ರಸ್ತಾಪಿಸಿದ್ದಾರೆ. ಅಲ್ಲಿನ ವ್ಯಾಪಾರ ವಹಿವಾಟಿನಲ್ಲಿ ಪ್ರಮುಖ ಪಾತ್ರ ವಹಿಸಿರುವ ಮಹಿಳೆಯರಿಗೆ ಪುರುಷರು ಸಹಾಯಕರಾಗಿರುವುದನ್ನು ಲೇಖಕರ ಕಣ್ಣು ವಿಶೇಷವಾಗಿ ಗಮನಿಸಿದೆ. ಕಾಂಬೋಡಿಯ ಅಪ್ಪಟ ಹಿಂದೂ ಸಂಸ್ಕೃತಿಯ ದೇಶವಾಗಿದ್ದರೂ ಬೌದ್ದ ಧರ್ಮವನ್ನು ಅವಲಂಬಿಸಿರುವುದು, ಅಲ್ಲಿನ ಜಗತ್ಪ್ರಸಿದ ಆಂಗ್ ಕೋರ್ ವಾಟ್ ದೇವಾಲಯ ಸಮುಚ್ಛಯದಲ್ಲಿ  ಹಿಂದೂ ಪುರಾಣಗಳ ಚಿತ್ರಣ, ಧರ್ಮಗಳ ನಡುವಿನ ಐತಿಹಾಸಿಕ ಮೇಲಾಟ, ಮತ್ಸ್ಯಗಳೊಂದಿಗೆ ವಹಿಸುವ ಪೊಲೀಸರು ಹೀಗೆ ಎಲ್ಲ ವಿಷಯಗಳ ಬಗ್ಗೆ  ಲೇಖಕರು ಗಮನ ಹರಿಸಿದ್ದಾರೆ.

ಸಿಂಗಪೂರ್, ವಿಯೆಟ್ನಾಂ ಮತ್ತು ಕಾಂಬೋಡಿಯಾ ದೇಶಗಳಗೆ ಪ್ರವಾಸ ಹೋಗಬೇಕೆನ್ನುವವರಿಗೆ ಇದೊಂದು ಉಪಯುಕ್ತ ಮಾರ್ಗದರ್ಶಿಯಂತೆಯೂ ಇದೆ, ಪ್ರವಾಸ ಹೋಗಲಾಗದು ಎಂದು ಅಸಹಾಯಕರಾದವರಿಗೆ ಈ ದೇಶಗಳನ್ನು ಕಣ್ಣಿಗೆ ಕಟ್ಟಿದಂತೆ ಚಿತ್ರಿಸಿರುವ  ಕಥನವೇ ಎಲ್ಲವನ್ನೂ ಹೇಳುತ್ತದೆ. ಓದು ಬಲ್ಲ ಎಲ್ಲ ವಯೋಮಾನದವರೂ ಅರ್ಥ ಮಾಡಿಕೊಳ್ಳುವಷ್ಟು ಅನಗತ್ಯ ಪಾಂಡಿತ್ಯ ಪ್ರದರ್ಶನಕ್ಕೆ  ಅವಕಾಸ ನೀಡದೇ ಸರಳವಾಗಿ ಬರೆದಿದ್ದಾರೆ. ಈ ದೇಶಗಳಲ್ಲಿ ಅವರು ಕಂಡದ್ದು, ಕೇಳಿದ್ದರ ಜತೆ ತಮ್ಮ ಅನುಭವಕ್ಕೆ ಪೂರಕವಾದ ಅಧಿಕೃತ ಮಾಹಿತಿಯನ್ನೂ ಒದಗಿಸಿದ್ದಾರೆ.  ಭೌಗೋಳಿಕ, ಐತಿಹಾಸಿಕ, ಸಾಂಸ್ಕೃತಿಕ, ಆರ್ಥಿಕ ಕ್ಷೇತ್ರಗಳ ಸ್ವಾರಸ್ಯಕರ ಮಾಹಿತಿಗಳನ್ನು ಒಳಗೊಂಡಿರುವ ಈ ಪ್ರವಾಸ ಕಥನ ಬರೆದಿರುವುದು  ನಿಜಕ್ಕೂ ಸಾರ್ಥಕವಾಗಿದೆ. 

-ಆಗ್ನೇಯ ಏಷ್ಯಾದಲ್ಲಿ ನಾನು, ಪ್ರವಾಸಕಥನದ ಮುನ್ನುಡಿಯಿಂದ