ಗೋಮೂತ್ರ ಮತ್ತು ಸಗಣಿ ಬಳಸಿ ಬುದ್ಧಿವಂತ ಮಕ್ಕಳ ಜನನಕ್ಕೆ ಪಂಚಗವ್ಯ ಔಷಧ ತಯಾರಿಸ್ತಾರಂತೆ

ಗೋಮೂತ್ರ ಮತ್ತು ಸಗಣಿ ಬಳಸಿ ಬುದ್ಧಿವಂತ ಮಕ್ಕಳ ಜನನಕ್ಕೆ ಪಂಚಗವ್ಯ ಔಷಧ ತಯಾರಿಸ್ತಾರಂತೆ

ಗೋಮೂತ್ರ ಮತ್ತು ಸಗಣಿ ಬಳಸಿ ಅತ್ಯಂತ ಬುದ್ಧಿವಂತ‌ ಮಕ್ಕಳನ್ನು ಅಭಿವೃದ್ಧಿಪಡಿಸಲು ನೆರವಾಗುವ ಪಂಚಗವ್ಯ ಔಷಧ ತಯಾರಿಸಲು ರಾಷ್ಟ್ರೀಯ ಕಾಮಧೇನು ಆಯೋಗವು ಆಯುಷ್ ಸಚಿವಾಲಯದೊಂದಿಗೆ ಶ್ರಮಿಸುತ್ತಿದೆಯಂತೆ.

ಈ ಔಷಧವನ್ನು ಗರ್ಭಿಣಿಯರು ನಿರಂತರವಾಗಿ ಸೇವಿಸಿದರೆ ಚುರುಕಾದ, ಬುದ್ಧಿವಂತ ಮತ್ತು ಆರೋಗ್ಯವಂತ ಮಕ್ಕಳು ಹುಟ್ಟುತ್ತಾರೆಂದು ಆಯೋಗ ಹೇಳಿಕೊಂಡಿದೆ.

ಈ ಔಷಧವನ್ನು ಗೋಮೂತ್ರ, ಸೆಗಣಿ, ಹಾಲು, ತುಪ್ಪ ಮತ್ತು ಮೊಸರು ಬಳಸಿ ಸಿದ್ಧಪಡಿಸಲಾಗುತ್ತದೆ ಎಂದು ಆಯೋಗದ ಅಧ್ಯಕ್ಷ ವಲ್ಲಭಭಾಯ್ ಕಥಿರಿಯಾ 'ದಿ ಪ್ರಿಂಟ್' ಗೆ ತಿಳಿಸಿದ್ದಾರೆ. 

ದೇಶದಲ್ಲಿ ಜಾನುವಾರುಗಳ ಸಂರಕ್ಷಣೆ ಸಲುವಾಗಿ ನರೇಂದ್ರ ಮೋದಿ ಸರ್ಕಾರ ಕಳೆದ ಫೆಬ್ರವರಿಯಲ್ಲಿ ಆಯೋಗ ಸ್ಥಾಪಿಸಿತ್ತು.

ಗುಜರಾತ್ ರಾಜ್ಯದಿಂದ ಹಿಂದೊಮ್ಮೆ ಬಿಜೆಪಿ ಸಂಸದರಾಗಿದ್ದ ಕಥಿರಿಯಾ, ಗೋವಿನ ಐದು ಉತ್ಪನ್ನಗಳನ್ನು ಬಳಸಿ ಪಂಚಗವ್ಯ ಔಷಧ ತಯಾರಿಸುವ ಬಗ್ಗೆ ಶಾಸ್ತ್ರಗಳು‌ ಮತ್ರು ಆಯುರ್ವೇದದಲ್ಲಿ ಮಾಹಿತಿ ಇದೆ ಎಂದಿದ್ದಾರೆ. 

ದೇಶೀಯ ಗೋವಿನ ತಳಿಗಳನ್ನು ಸಂರಕ್ಷಿಸುವ ಜವಾಬ್ದಾರಿಯೂ ಆಯೋಗಕ್ಕಿದ್ದು, ಗೂಳಿಗಳ ವೀರ್ಯದ ಕೊರತೆ ಇರುವುದರಿಂದ ಇತರ ದೇಶಗಳಿಂದ ಆಮದು‌ ಮಾಡಿಕೊಳ್ಳುವ ಒತ್ತಡ ಸರ್ಕಾರಕ್ಕಿದೆ ಎಂದು ತಿಳಿಸಿದ್ದಾರೆ. 

ಪ್ರತಿಯೊಂದು ರಾಜ್ಯದಲ್ಲಿ ಕನಿಷ್ಠ ಒಂದು ವೀರ್ಯ ಉತ್ಪಾದನೆ ಕೇಂದ್ರ ಮತ್ತು ಒಂದು ಕೂಡಿಕೆ ಕೇಂದ್ರ ತೆರೆಯುವುದಷ್ಟೇ ಏಕೈಕ ಪರಿಹಾರವಾಗಿದೆ ಎಂದು ಅವರು ಹೇಳಿದ್ದಾರೆ.

ದೇಶಾದ್ಯಂತ ಸಾರ್ವಜನಿಕ-ಖಾಸಗಿ ಪಾಲುದಾರಿಕೆಯ ಗೋಶಾಲೆಗಳನ್ನು ತೆರೆಯಲು ಚಿಂತನೆ ನಡೆಸಲಾಗಿದೆ. ಭಾರತ ಪ್ರತಿ ವರ್ಷ ರಸಗೊಬ್ಬರವಾಗಿ ಬಳಸಲು 7000ದಿಂದ 15000 ಕೋಟಿ ರೂಪಾಯಿ ಮೊತ್ತದ ಪೊಟಾಷಿಯಂ ಆಮದು ಮಾಡಿಕೊಳ್ಳುತ್ತಿದೆ. ಎಲ್ಲ ಗೋಶಾಲೆಗಳು ಈ ಪ್ರಮಾಣದಲ್ಲಿ ಉತ್ಪಾದನೆ ಮಾಡಿದರೆ ಸರ್ಕಾರಕ್ಕೆ ಸಾಕಷ್ಟು ಉಳಿತಾಯವಾಗುತ್ತದೆ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.