ಅರುಣ್ ಕುಮಾರ್ ಎಂಬ ಕ್ರೆಯಾನ್

ಅರುಣ್ ಕುಮಾರ್ ಎಂಬ ಕ್ರೆಯಾನ್

ಅರುಣ್ ಕುಮಾರ್ ಎಂಬ ಕ್ರೆಯಾನ್

"ಇದು ಯಾವ ಬಣ್ಣ?-ಹಳದಿ. ಇದು ಯಾವುದು?-ನೀಲಿ. ಬೆರಳು ತೋರಿಸಿ 'ಎಷ್ಟು?' ಎರಡು-ಮೂರು...." ಹೀಗೆ ಸರಿಸುಮಾರು ಎರಡೂವರೆ ತಿಂಗಳ ನಂತರ ಈ ಲೋಕದ ಜನ ಗುರುತಿಸಿ ಮತ್ತೊಮ್ಮೆ ಬದುಕಿ ಬಂದ ಗೆಳೆಯ ಆರ್.ಟಿ.ಅರುಣ್ ಕುಮಾರ್.
ಮೊನ್ನೆ 'ಸೂಜಿದಾರ' ಸಿನಿಮಾ ನೋಡಲು ಪುಷ್ಪಾಂಜಲಿ ಟಾಕೀಸ್ ಗೆ ಹೋದಾಗ ಅಲ್ಲೊಬ್ಬ ವಯೋವೃದ್ಧ ಕಂಡಿದ್ದರು. ಟಾಕೀಸ್ ಕಾಂಪೌಂಡ್ ಬದಿ ಆ ಸಂಜೆ ಕುಳಿತು ಎಷ್ಟೋ ವರ್ಷಗಳ ಹೊಡೆತ ತಿಂದ ಕಂಗಳಲ್ಲಿ ಅಸಹಾಯಕವಾಗಿ ನೋಡಿದ್ದರು. ಆ ನೋಟ ಎದೆ ಕಲಕಿತ್ತು. ಒಂದು ದಿನ ಕಳೆದ ಮೇಲೆ ಮತ್ತೆ ಆ ಯಜಮಾನರನ್ನು ಕಂಡು ಮಾತಾಡಿಸಬೇಕೆನ್ನಿಸುವ ಚಡಪಡಿಕೆ ಶುರುವಾಯಿತು. ಬೆಣ್ಣೆದೋಸೆಗಿಂತಲೂ ಮಿಗಿಲಾಗಿ ದಾವಣಗೆರೆಯೆಂಬ  ದಾವಣಗೆರೆಯನ್ನೇ ಬಿಸಿಲು ಬೇಯಿಸುತ್ತಿರುವ ಮಟ ಮಟ ಮಧ್ಯಾಹ್ನವೇ ಮತ್ತೆ ಆ ಅಜ್ಜನ ಕಂಡೆ. ಮಹಾನಗರ ಕಟ್ಟಿಕೊಂಡ ಮಾಗಿದ ನೋವಿನ ಹುಣ್ಣಿನಂತೆ ಅವರ ಕೃಶಗೊಂಡ ದೇಹ. ತುಸು ಪ್ರೀತಿ ತೋರಿಯೇ ಅಜ್ಜನ ಪ್ರವರ ಕೇಳಲೆತ್ನಿಸಿದೆ."ಏನ್ಮಾಡದಪ ಮನಸ್ಸು ಕೆಟ್ಟೋದ್ಮ್ಯಾಲೆ ಹೆಂಗಿದ್ದ್ರೇನೈತಿ? ಇರತನಕ ಇದ್ದ್ರಾತು" ಅಂದರು. ಅಜ್ಜನದು ಅದೇ ದಾವಣಗೆರೆಯ ನರಸರಾಜ ಪೇಟೆ. ವಯಸ್ಸು ಸುಮಾರು ಎಂಭತ್ತರ ಹತ್ತಿರ. ಆಗಿನ ಕಾಲದಲ್ಲೇ ಹತ್ತನೇ ತರಗತಿಯವರೆಗೆ ಓದು. ಗೆಳೆಯನೊಬ್ಬನ ಜೊತೆಗೆ ಸುತ್ತಾಡುವುದು ಅಣ್ಣನಿಗೆ ಕೋಪ ತರಿಸಿ ತನ್ನ ಗೆಳೆಯನನ್ನು ಬೈದು, ತನ್ನ ತಾಯಿಗೆ ಏನೆಲ್ಲಾ ಹೇಳಿ "ಬದುಕಿರಬೇಡ ಕೆರೆಗೋ ಬಾವಿಗೋ ಬಿದ್ದು ಸತ್ಬಿಡು" ಅಂತ ಬೈಸಿದ್ದೇ ಬಂತು, ಅಂದಿನಿಂದ ಇಲ್ಲಿಯತನಕ ಮನೆ ತೊರೆದೇ ಜೀವನ. ಮೊದಮೊದಲು ಯಾ ವುದೋ ಅಂಗಡಿಯಲ್ಲಿ ಲೆಕ್ಕ ಬರೆದು ಹೊಟ್ಟೆ ಹೊರೆದರಂತೆ! ಮುಂದಿನ ಕತೆ ಕೇಳುವ ಹೊತ್ತಿಗೆ ಅಜ್ಜನಿಗೆ ಯಾಕೋ ಅಸಹನೆ ಉಂಟಾಗಿ ಎದ್ದು ಹೊರಟೇಬಿಟ್ಟರು. ನಾನು ಅರೆಬೆಂದ ಮನಸ್ಸಿನಿಂದ ಬಂದವನು ಅನೇಕ ತಿಂಗಳ ಬಳಿಕ ಈ ಆರ್.ಟಿ.ಅರುಣ್ ಕುಮಾರ್ ಅವರನ್ನು ಸಂಧಿಸಿ ಹರಟುತ್ತಾ ರಾತ್ರಿ ಎರಡು ಗಂಟೆಯನ್ನೂ ದಾಟಿಸಿದೆ.
ಲಂಕೇಶರಿಲ್ಲದ ಲಂಕೇಶ್ ಪತ್ರಿಕೆಗೆ ನಾನು ಕೆಲಸ ಮಾಡುತ್ತಿದ್ದ ಕಾಲದಲ್ಲೇ ಪರಿಚಯವಾಗಿದ್ದ ಈ ಅರುಣ್ ಕುಮಾರ್ ಕತೆ ಕೇಳಲು ಬಂದವನು ಕೆಲ ಕ್ಷಣ ಲಂಕೇಶರ ಗುಂಗಿನಲ್ಲೇ ಇದ್ದೆ.ಲಂಕೇಶ್ ನಮ್ಮನ್ನಗಲಿ ಹತ್ತೊಂಬತ್ತು ವರ್ಷ ಕಳೆದವು.‌ಆದರೆ ಅದೆಷ್ಟು ಜನರಲ್ಲಿ ಲಂಕೇಶ್ ಬದುಕುಳಿದು ಬೆಳೆಯುತ್ತಲೇ ಇರುವುದನ್ನು ಕಂಡರೆ ಈ ನೆಲದ ಸಾಕ್ಷಿಪ್ರಜ್ಞೆ ಆಳವಾಗಿ ಬೇರು ಬಿಟ್ಟಿರುವುದು ಸಂತೋಷ ಕೊಡುತ್ತದೆ. ಕೋಮುವಾದಿಗಳ ಬೆವರಿಳಿಸಿದಂತೆಯೇ, ಫ್ಯೂಡಲ್ ಗಳನ್ನೂ, ಭ್ರಷ್ಟರನ್ನೂ, ಸ್ವಜನ ಪಕ್ಷಪಾತದ ಖದೀಮರನ್ನೂ ಜನಸಾಮಾನ್ಯರ, ನೊಂದವರ ನೆಲೆಯಲ್ಲಿ ನಿಂತು ಟೀಕಿಸುತ್ತಲೇ ತಿದ್ದುತ್ತಿದ್ದರು. ಆದರೆ ಈಗ ಮಾಧ್ಯಮಕ್ಕೆ ಆ ವಸ್ತುನಿಷ್ಢತೆ ಉಳಿದಿಲ್ಲ.ಆ ಕಾರಣಕ್ಕಾಗಿಯೇ ಲಂಕೇಶ್ ಸಾವಿರ ರೆಂಬೆಗಳಾಗಿ ಚಿಗುರೊಡೆಯುತ್ತಿರುವುದು.
ತನ್ನ ಸಿನಿಮಾ ಹಾಡುಗಳ ಹುಚ್ಚು, ನಟರ ಅನುಕರಣೆ, ಶಾಲಾ ಕಾಲೇಜು ಸಾಂಸ್ಕೃತಿಕ ಸ್ಪರ್ಧೆಗಳ ವಿವರಗಳನ್ನು ಅರುಣ್ ಕುಮಾರ್ ಉತ್ಸಾಹದಿಂದ ಹೇಳುತ್ತಿದ್ದರೂ ನಾನು ನಂತರದ ಮಾತುಗಳಿಗೆ ತುಡಿಯುತ್ತಿದ್ದೆ. ಯಾಕೆಂದರೆ ಮನುಷ್ಯನ ಮಾತುಗಳ ಸೋಸುವ ಜರಡಿ ಕೊಟ್ಟದ್ದೂ ಲಂಕೇಶ್ ಮೇಷ್ಟ್ರಲ್ಲವೇ?
ಮುಂದುವರಿದ ಮಾತುಗಳಲ್ಲಿ ಅವರ ದೊಡ್ಡಪ್ಪ ಆರ್.ಜಿ.ಶಿವಕುಮಾರ್ ಅವರ ರಂಗಭೂಮಿ ಮತ್ತು ಸಿನಿಮಾ ನಂಟು, ಅರುಣ್ ಕುಮಾರ್ ಅವರ ಇಂಜಿನಿಯರಿಂಗ್ ವಿದ್ಯಾಭ್ಯಾಸ, ಅಧ್ಯಾಪನ ವೃತ್ತಿ, ಸ್ಟೇಜ್ ಪರ್ಫಾರ್ಮೆನ್ಸ್, ಪ್ರೇಮ,ತಿರಸ್ಕಾರ,ಉತ್ಸಾಹ ಭ್ರಮೆಗಳೆಲ್ಲ ಸಾಗಿ ಒಂದು ಮೈಲುಗಲ್ಲಿನ ಬಳಿ ನಿಂತದ್ದು ಅಭಿಯಂತರಂಗದ "ತದ್ರೂಪಿ" ನಾಟಕ ಕುರಿತ ಮಾತುಕತೆಗೆ. ಪ್ರಸನ್ನ ಅನುವಾದಿಸಿರುವ ತದ್ರೂಪಿ ನಾಟಕವನ್ನು ಮಾಡಿಸಿದವರು ಅವರ ಗುರು ಚಿದಾನಂದ್.ಅದರಲ್ಲಿ ಒಬ್ಬ ಡಿಕ್ಟೇಟರ್ ಮತ್ತು ಹಜಾಮ ಹೀಗೆ ಎರಡು ವಿಭಿನ್ನ ಪಾತ್ರಗಳಲ್ಲಿ ನಟಿಸಿ ಛಾಪು ಮೂಡಿಸಿದ ಅರುಣ್ ಗೆ ಮತ್ತೊಂದು ಮಜಲನ್ನು ಕಟ್ಟಿಕೊಟ್ಟದ್ದು ಅಂದು ದಾವಣಗೆರೆಯ 'ಪ್ರತಿಮಾ ಸಭಾ' ನಡೆಸಿದ ರಂಗ ತರಬೇತಿ ಶಿಬಿರ. ಸುರೇಶ್ ಆನಗಳ್ಳಿ ನಿರ್ದೇಶನದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ ನಾಟಕ 'ನಂದರಾಜ ಪ್ರಹಸನ'.ಅದಾದ ಮೇಲೆಯೂ ಚಿದಾನಂದ್ ಅವರ ನಿರ್ದೇಶನದ 'ಅಂತಿಗೊನೆ' ನಾಟಕದಲ್ಲಿ ಕ್ರೆಯಾನ್ ಪಾತ್ರವನ್ನೂ ಮಾಡಿ ತಮ್ಮ ಸಾಮರ್ಥ್ಯವನ್ನು ಗಟ್ಟಿ ಮಾಡಿಕೊಂಡರು. ಸಿ.ಬಸವಲಿಂಗಯ್ಯನವರೊಂದಿಗೆ ಬೀದಿ ನಾಟಕಗಳಲ್ಲೂ ಅರಳಿದರು.
    ಹೀಗೆ ಹದಿಹರೆಯದ ಉತ್ಸಾಹ   ಹರಳುಗಟ್ಟುವ ಕಾಲದಲ್ಲಿ ಡಾ.ಕೆ.ಮರುಳಸಿದ್ದಪ್ಪ ಅವರ ಮಗ ಚೈತನ್ಯ ನಿರ್ದೇಶಿಸಿದ ಶಾಂತಿನಾಥ ದೇಸಾಯಿ ಅವರ 'ಓಂಣಮೋ" ಕಾದಂಬರಿ ಆಧಾರಿತ ಧಾರಾವಾಹಿಯಲ್ಲಿ ನಟಿಸಿದರು. ಅಂತೆಯೇ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ 'ಕಾವೇರಿ','ಭಾಗ್ಯ' ಎಂಬ ಜನಪ್ರಿಯ ಧಾರಾವಾಹಿಗಳಲ್ಲೂ ನಟಿಸಿದರು. ಉಪೇಂದ್ರ ನಟಿಸಿರುವ 'ಸೂಪರ್ ಸ್ಟಾರ್' ಸಿನಿಮಾದ ಪುಟ್ಟ ಪಾತ್ರದಲ್ಲೂ ಕಾಣಿಸಿಕೊಂಡರು. ಬದುಕಿನ ಬಾಗಿಲು ಮತ್ತಿನ್ಯಾವುದೋ ಬೆಳಕಿಗೆ ತೆರೆದುಕೊಳ್ಳಬೇಕೆನ್ನುವ ಸಮಯದಲ್ಲಿ ಬೈಕ್ ನಲ್ಲಿ ಅಪಘಾತಕ್ಕೀಡಾಗಿ ಎರಡೂವರೆ ತಿಂಗಳು ಪ್ರಜ್ಞೆ ಕಳೆದುಕೊಂಡಿದ್ದರು ಆರ್.ಟಿ.ಅರುಣ್ ಕುಮಾರ್ ಅದೇ ಬೆಂಗಳೂರಿನಲ್ಲಿ.
ಗೌರಿ ಸಂಪಾದಕತ್ವದಲ್ಲಿ ಬರುತ್ತಿದ್ದ ಲಂಕೇಶ್ ಪತ್ರಿಕೆಗೆ ನಾನು ದಾವಣಗೆರೆ ಮತ್ತು ಬಳ್ಳಾರಿ ಜಿಲ್ಲೆಗಳ ವರದಿ ಮಾಡುತ್ತಿದ್ದ ಕಾಲದಲ್ಲಿ ನನಗೆ ನಿಜಕ್ಕೂ ಅರುಣ್ ಕುಮಾರ್ ಮಾಡುತ್ತಿದ್ದ ಸಹಾಯ ಮನಸ್ಸಿನಲ್ಲಿ ಈಗಲೂ ಹಸಿಯಾಗಿದೆ. ನಿರಾಡಂಬರದ, ಜವಾರಿ ಮಾತಿನ ಅರುಣ್ ಕೊಂಚ ಭೋಳೇ ಸ್ವಭಾವದವರೂ ಹೌದು. ಮನೋ ದಾರ್ಢ್ಯದ ಬಲದಿಂದ ಈಗ ಕ್ಯಾನ್ಸರ್ ರೋಗದೊಂದಿಗೂ ಸೆಣಸಿ ಜೀವನ ಪ್ರೀತಿಯನ್ನು ಉಳಿಸಿಕೊಂಡು ಸಾಗುತ್ತಿರುವ ಈ ಕಥನದ ಮುಕ್ತಾಯದ ವೇಳೆಗೆ ಮತ್ತೆ ಪ್ರಸಕ್ತ ಭಾರತ, ಸುಳ್ಳಿನ ರಾಜಕಾರಣ, ಅಧಿಕಾರ  ಹಿಡಿಯಲು ಬಿಲದೊಳಗವಿತುಕೊಂಡು ನೀಚ ಪಟ್ಟುಗಳ ಹಿಡಿಯುತ್ತಿರುವ ರಾಜಕಾರಣಿಗಳು ಹೀಗೆ ಎಲ್ಲಾ ತರಹದ ಮಾತುಗಳು ನಡೆದಾಗ ಮತ್ತೆ ಮತ್ತೆ ಲಂಕೇಶ್ ನೆನಪಾದರು. ಒಂದು ಸಾಮಾಜಿಕ ರಾಜಕೀಯ ಪರಿವರ್ತನಾ ಕಾಲಘಟ್ಟದ ಆದರ್ಶ ಮತ್ತು ಗೊಂದಲಗಳನ್ನು ವಾಸ್ತವದ ಬಿಕ್ಕಟ್ಟುಗಳ ಮೂಲಕ ಕಟ್ಟಿಕೊಟ್ಟ ನಾಟಕ 'ಸಂಕ್ರಾಂತಿ'. ಅರುಣ್ ಅಂದು ದಾವಣಗೆರೆಯ ಬಿ‌.ಜಿ.ನಾಗರಾಜ್ ಮಾಡಿದ್ದ 
ಪಾತ್ರ ನೆನಪಿಸಿಕೊಂಡು: " ಬಸವಣ್ಣ ಬ್ರಾಹ್ಮಣರ ಮಂತ್ರಗಳಂತೆ ಶರಣರ ವಚನಗಳೂ ಉತ್ತಿ ಬಿತ್ತಿ ಬೆಳೆಯಲಾರವು"  ಎಂಬ ತೀಕ್ಷ್ಣ ಒಳನೋಟವುಳ್ಳ ಮಾತನ್ನು ಜ್ಞಾಪಿಸಿದರು.
ಅದೇ ಮಾತಿನ ಗುಂಗಿನಲ್ಲೇ ಅರುಣ್ ಕುಮಾರ್ ಎಂಬ ಕ್ರೆಯಾನ್ ನನ್ನು ಬಿಟ್ಟು ಮನೆ ಸೇರಿದೆ. ಮಾರನೆ ಬೆಳಗಿನ ಬಿಸಿಲು ಇನ್ನೂ ತೀಕ್ಷ್ಣವಾಗಿತ್ತು."ಸಂಸ್ಕೃತಿ ಇಲ್ಲದ ಶಿಕ್ಷಣ ಪಡೆದವರು ಮನುಷ್ಯ ಲೋಕವನ್ನು ಇನ್ನೂ ಜಾತಿ ಪಂಗಡಗಳಾಗಿ ತುಂಡರಿಸುತ್ತಲೇ ಇರುತ್ತಾರೆ" ಎನ್ನುವ ಅರುಣ್ ಕುಮಾರ್ ಮಾತು ಬಿಸಿಲಿಗಿಂತಲೂ ಪ್ರಖರವಾಗಿ ನಾಟಿತ್ತು.
                                                                                                                              ಮಲ್ಲಿಕಾರ್ಜುನಗೌಡ ತೂಲಹಳ್ಳಿ