2019ರಾಗಂತೂ ನೆಮ್ಮದಿ ಇರ್ಲಿಲ್ಲಾ... 2020ರಾಗರ ಈ ನೆಮ್ಮದಿ ಬರ್ಲೀ...!

"2019ರಾಗಂತೂ ಜನ್ರ ಜೀವಕ್ಕ್ ನೆಮ್ಮದಿ ಇರ್ಲಿಲ್ಲಾ"...?. ಹಾಳಾದ್ದ 2019 ಅಂತು ಗದ್ಲದಾಗ್ ಬಂದು ಗದ್ಲಾ ಹಚ್ಚೇ ಹೋತು!. ಈಗ ಬಂದಿರೋ "2020ರಾಗರ .... ನಮ್ಮ ಜನ್ರ ಜೀವಕ್ಕ ನೆಮ್ಮದಿ ಸಿಗತೈತೋ?,  ಇಲ್ಲಾ 2019ರಕಿಂತಾ ಘನಘೋರಾ ಆಕೈತೋ"..? ಅನ್ನೋದ ನನ್ನ ಚಿಂತಿ ಆಗೇತಿ ನೋಡ್ರೀ...?

 2019ರಾಗಂತೂ ನೆಮ್ಮದಿ ಇರ್ಲಿಲ್ಲಾ... 2020ರಾಗರ ಈ ನೆಮ್ಮದಿ ಬರ್ಲೀ...!

ಇದು ಯಾರು ಬರೆದ ಕತೆಯೋ ..ನನಗಾಗಿ ಬಂದ ವ್ಯಥ್ಯೆಯೋ
ಕೊನೆ ಹೇಗೋ ಅರಿಯಲಾರೆ? ಮರೆಯಲಾರೆ
ದಿನಕೊಂದು ವಿವಾದಗಳನಡುವೆ ಕಾಲ ನಡೆದಿದೆ
ಉಳ್ಳಾಗಡ್ಡಿಯ ಬೆಲೆಯಂತು ಮುಗಿಲು ಮುಟ್ಟಿದೆ
ಜನಸಾಮಾನ್ಯನ ಬದುಕು ಹಳ್ಳಾ ಹಿಡಿದಿದೆ
ಜೋಳಾ, ಅಕ್ಕಿ, ತೊಗರಿಬ್ಯಾಳಿ ತುಟ್ಟಿ ಆಗಿವೆ, ತರಕಾರಿ ದರ      
ಕೈಯಸುಡುತಿದೆ ಇದು ಯಾರು ಬರೆದ ಕತೆಯೋ..
ನನಗಾಗಿ ಬಂದ ವ್ಯಥೆಯೋ...

ಲೇ.. ಲೇ... ತಮ್ಮಾ ಬಸ್ಯಾ.., ಏನ್ಲೇ ಇದು. ಬೆಳಿಗ್ಗೆ...ಬೆಳಿಗ್ಗೆ ತೋಡಿರಾಗಾ ಹಾಡಿಕೋತ ಕುಂತಿಯಲ್ಲ!. ಅದು ಕೆರಿಏರಿಮ್ಯಾಗ್?. ಎನ್ಪಾ ನಿನ್ನ ವರಾತಾ..?.

ವರಾತಲ್ರೀ, ಕಾಕಾ ಪರಾತಾಗೇತ್ರೀ ಜೀವ್ನಾ!.

ಯಾಕೋ ತಮ್ಮಾ, ಹಿಂಗಾಗ್!. ಬೆಳಿಗ್ಗೆ, ಬೆಳಿಗ್ಗೆ  ಪರಾತ, ವರಾತಾ ಯಾಕ್, ಎನಾತೂ ಅನ್ನೋದ್ನ ಬಿಡ್ಸಿ ಹೇಳಿ ಆ ಮ್ಯಾಲ್ ಬೇಕಾದ್ರ ನಿನ್ನ ತೋಡಿರಾಗ ಸುರುವಿಟಗಾ?

ಏನ್ ಹೇಳ್ಲಿ ಕಾಕಾ!, "2019ರಾಗಂತೂ ಜನ್ರ ಜೀವಕ್ಕ್ ನೆಮ್ಮದಿ ಇರ್ಲಿಲ್ಲಾ"...?. ಹಾಳಾದ್ದ 2019 ಅಂತು ಗದ್ಲದಾಗ್ ಬಂದು ಗದ್ಲಾ ಹಚ್ಚೇ ಹೋತು!. ಈಗ ಬಂದಿರೋ "2020ರಾಗರ .... ನಮ್ಮ ಜನ್ರ ಜೀವಕ್ಕ ನೆಮ್ಮದಿ ಸಿಗತೈತೋ?,  ಇಲ್ಲಾ 2019ರಕಿಂತಾ ಘನಘೋರಾ ಆಕೈತೋ"..? ಅನ್ನೋದ ನನ್ನ ಚಿಂತಿ ಆಗೇತಿ ನೋಡ್ರೀ...?

ಹೋಗ್ಯೋ ಇವನೌನ್, ನಾ ಏನೋ ಅಂತಿದ್ದೇ!.  ತಲೆಹೋಗುವಂತಾ ವಿಷ್ಯಾ ಇರ್ಬೇಕು ಅಂತ ಅನ ಕಂಡಿದ್ದೇ. "ನಿಂದೇನ್ಲೇ ಊರುಸಾಬರಿ!. ಊರ್ ಸುದ್ದಿ ತಗೊಂಡ್ ಮುಲ್ಲಾ ಸೊರಗಿದ್ನಂತ್"!. ನೀ.. ಹಾಡೋದ್ ಕೇಳಿ ನಾ "ಎಲ್ಲೋ ಮತ್ತ ಮಳಿ ಬಂದು, ಜನ್ರು  ತೇಲಿಕೊಂಡ್ ಹೋದ್ರನೂ ಅಂತ್ ಅನಕಂಡಿದ್ದೆ"!. ಯಾಕ್ಪಾ, ಅಂತಾದ್ದೇನಾತು 2019ರಾಗ!.

ಇನ್ನು ಏನೇನ್ ಆಗಬೇಕ್ರೀ ನಿಮ್ಗ!, "ಊರನ್ನೋವು ಸುಡಾಗಾಡ ಆದಂಗ್ ಆಗ್ಯಾವು". "ಒಬ್ರ ಮುಖದಾಗೂ ಚೂಟಿದ್ರ ಹನಿ ರಕ್ತ ಇಲ್ದಂಗ್ ಆಗ್ಯಾವು"?, "ಜನ್ರು  ಕೂಲಿ ಇಲ್ದಕ್ ಹೊಟ್ಟಿಗೆ ಕೂಳಿಗಾಗಿ ದುಡ್ಯಾಕ್ ಕಾಫಿ ಸೀಮಿಗೆ   ಹೋಗ್ಯಾರ"!. "ಮಳಿ ಹೋಗಿ ಅರ್ಧಾ ಹಾಳಾದ್ರು ನಮ್ಮ ಜನಾ!, ಮಳಿ ಬಂದ್   ಪೂರ್ತಿ ಹಾಳ್ಯಾಗ್ ಹೋದ್ರೂ"?. "ಹೆಪ್ಪ ಇರೋರು ಹೆಂಗ್ಯೋ ಜೀವ್ನಾ ನಡ್ಸಾಕ ಹತ್ಯಾರ್!, ಹೆಪ್ಪ ಇಲ್ದೋರು ಮಕ್ಕಳು-ಮರಿನ ಕಟಿಗೊಂಡು ದುಡ್ಮಿ ಇದ್ದಕಡಿಗೆ ಗುಳೆ ಹೋಗ್ಯಾರ್". "ಮನ್ಯಾಗ ನೋಡಿದ್ರ ವಯಸ್ಸಾದ ತಂದಿ-ತಾಯಿ ಜೀವಾ ಹಿಡ್ಕೊಂಡು ಇಳಿಹೊತ್ತ ಕಳ್ಯಾಕ ಹತ್ಯಾವು ನೋಡ್ರೀ"!.

ಈ ವಿಷ್ಯಾ ನಿನ್ಗ ಹೆಂಗ್ಯ ಗೊತ್ತಾತೋ..?

ಹೆಂಗ ಅಂದ್ರ!, ಮೊನ್ನೆ ಗುತ್ಲ ಕೆರಿಗೆ ಹೋಗಿದ್ದೆ, ಅಲ್ಲಿ ಲಮಾಣಿ ಈರಪ್ಪ ಸಿಕ್ಕಿದ್ದಾ. ಮನಿಗೆ ಬರ್ರೀ... ಬಸಣ್ಣಾ ಅಂತ್ ಮನಿಗೆ ಕರ್ಕಕೊಂಡ ಹೋಗಿದ್ದಾ.  ಅವಾಗ "ಅವ್ನ ಮನಿಗೆ ಈ ಗುಳೆ ಹೋಗಿದ್ದ್ರಲ್ ಅವ್ರು ತಾಯಿ-ತಂದಿ ಬಂದಿದ್ವು"!. ಅವುಕ್ ಮೈಯಾಗ ಹುಷಾರ್  ಇದ್ದಿದ್ದಲ್ಲಂತ್ !, ಅದ್ಕ "ಮಗಗ್ ಪೋನ್ ಹಚ್ಚಿ ತಮ್ಗ ಆರಾಮ ಇಲ್ದ ವಿಷ್ಯಾನ ತಿಳ್ಸಾಕ ಅಂತ್ ಹೇಳಿತಿದ್ರು"!, ಆವಾಗ ನನ್ಗ ಗೊತ್ತಾತು.

ಮಕ್ಕಳು ಎಂತವ್ರೋ, " ಈ ವಯಸ್ಸಾದ ತಂದಿ-ತಾಯಿನ ಇಲ್ಲೇ ಬಿಟ್ಟಹೋಗ್ಯಾರಂದ್ರ ಅವ್ರೇಂತಾವ್ರೋ ಮಕ್ಳು"..! ಜೀವಕ್ಕ ಮುಕ್ಳು...?.

ಪಾಪಾ ಮಕ್ಕಳೇನ್ ಮಡ್ತಾರ್ರೀ, "ಪರ ಊರು ಪ್ರಾಣ ಸಂಕ್ಟಾ..!, ಅದ್ಕ ಈ ಮುದ್ಕಾ-ಮುದ್ಕಿನ ತಾಂಡೆದಾಗ ಬಿಟ್ಟು ಹೋಗ್ಯಾರ್!. ಇವುಕ್ ದಾವಾಖಾನಿಗೆ ತೋರ್ಸೆಗೊಳ್ಳಾಕ ರೊಕ್ಕ ಇಲ್ದ ಈರಪ್ಪನ್ ಹತ್ರಾ ಬಂದು, ತಮ್ಮ ಮಗಗ್ ಪೋನ್ ಹಚ್ಚಿ ಕೊಡಕಾ ಹೇಳಿದ್ವು. ಈರಪ್ಪ ಅವ್ರ ಮಗಗ್ ಪೋನ್ ಹಚ್ಚಿನ ಅದೇನೋ ಲಂಭಾಣಿ ಭಾಷಾದಾಗ ಮಾತಾಡಿ ಇವ್ರಕೈಗೆ ಪೋನ್ ಕೊಟ್ಟಾ!.   

ಅವ್ರ ಮಗಾ ಏನ್ ಮಾತಾಡಿದ್ನೋ ಏನೋ?, ನನ್ಗಂತು ಅರ್ಥಾ ಆಗಲಿಲ್ಲಾ!. ಆದ್ರ "ಈರಪ್ಪ ತನ್ನ ಬಕ್ಣದಾಗಿಂದ  ಐದನೂರರ ಎರ್ಡ್ ನೋಟ ತಗ್ದ ಈ ಅಜ್ಜಾ-ಅಜ್ಜಿಗೆ ಕೈಗೆ ಕೊಟ್ಟಾ"?. "ಈ ಮುದಕ್ರು ರೊಕ್ಕಾ ಹಿಡ್ಕಂಡ್ ಉರಗೋಲ್‍ನ್ಯಾಗ್ ಕುಂಟಿಗೋತ ಹೊರ್ಗ ನಡ್ದವು ನೋಡ್ರಿ!". ಆ ಮ್ಯಾಲ್ ಈರಪ್ಪ ಜನಾಗುಳೆ ಹೋಗಿದ್ದು ವಿಷ್ಯಾ ಹೇಳ್ದಾ!, "ಈ ಮುದ್ಕಾ-ಮುದ್ಕಿ ಮಕ್ಳು ಗೋವಾಕ್ ಹೋಗ್ಯಾವಂತ್! " ಅವ್ರು ಬಂದು ರೊಕ್ಕಾ ಕೊಡ್ತಾವಂತ್. ಅಲ್ಲಿಮಟಾ "ದಾವಾಖಾನಿಗೆ ತೋರ್ಸಿಕೊಳ್ಳಾಕ್ ರೊಕ್ಕಾ ಕೋಡ್ರೀ... ನಾವು ಊರಿಂದಾ ಬಂದಮ್ಯಾಕ್ ನಿಮ್ಮ ರೊಕ್ಕಾನ ವಾಪಾಸ್ ಕೊಡ್ತವಿ ಅಂತ್ ಹೇಳಿದ್ಕ ಈರಪ್ಪ ಅವ್ರಿಗೆ ರೊಕ್ಕಾ ಕೊಟ್ಟ ಕಳ್ಸಿದ್ನಂತ ನೋಡ್ರಿ".

ಹೌದ.. ಅಲ್ಲೋ, ಹಿಂಗಾದ್ರ ಹೆಂಗೋ...? "ಹೋದ ವರ್ಷ ಮಳಿ ಮಾಡಿದ ಅವಾಂತ್ರಾ ಬಾಳಾ ಐತಿ ಬಿಡೋ"!. 

ಹೌದ್ರೀ... ಕಾಕಾ ಹೌದು, "ನೀವು ಪಟ್ಣಾ ಬಿಟ್ಟು ಹೊರ್ಗ ಹೋಗಂಗಿಲ್ಲಾ!, ಅದ್ಕ ನಿಮ್ಗ ವಿಷ್ಯಾ ಗೊತ್ತಾಗಂಗಿಲ್ಲಾ"?. ನೋಡ್ರೀ. "ಹೊಸಾ ವರ್ಷದ ಹೊಸ್ತಿಲ್ನ್ಯಾಗ್ ಪ್ರವೇಶಾ ಮಾಡಿರೂ ಈ ಹೊತ್ತಿನ್ಯಾಗ್ ಹೋದ ವರ್ಷದಾಗ್ ನಡ್ದಿರೋ  ಕಹಿ ಘಟ್ನೆಗಳ್ನ  ಮಾರಿ ಬಾರು"್ದ!.    "ಈ ಕಹಿ ಘಟ್ನೆಗಳಒಳ್ಗ ನಾವು-ನೀವು ಮರಿಲಾರ್ದಂತಾ  ಪಾಠ ಅಡ್ಗ್ಯಾವು"?.  "ಈ ಪಾಠ ಹೊಸ ವರ್ಷದ ಜೊತಿಗೆ ಸಾಗೋ ನಮ್ಗ-ನಿಮ್ಗ, ಜನ್ರಿಗೆ, ರಾಜ್ಯಕ್ಕ, ದೇಶಕ್ಕ ಹೊಸಾ ದಿಕ್ಕಾಗಬೇಕು"?. "ಹೋದ ವರ್ಷ ಮಾಡಿದ ತಪ್ಪು ಈ ವರ್ಷ ಮರುಕಳ್ಸಬಾರ್ದ್ ನೋಡ್ರೀ"...!   

ಹೌದೋ ತಮ್ಮಾ, ನಿನ್ನ ಮಾತಿನ್ಯಾಗು ಸತ್ಯಾಂಶ ಐತಿ!. "2019ರ ಆಗಸ್ಟ್ ತಿಂಗ್ಳೂ ನಮ್ಮ  ಉತ್ತರಕರ್ನಾಟಕಕ್ಕ   ಕರಾಳ ತಿಂಗ್ಳಾಗಿತ್ತು"!. "ಮಹಾರಾಷ್ಟ್ರ ತನ್ನ ಆಣಿಕಟ್ಟಿಗಳಿಂದಾ  ಹೊರ್ಗ ಬಿಟ್ಟ ನೀರ್ಗೆ, ಭಾರೀ ಮಳೆಗೆ, 22 ಜಿಲ್ಲಾದನ್ ಜನ್ರು ಪ್ರವಾಹ ಎದ್ರಿಸಿದ್ರು"?.   ಅದ್ರಾಗೂ "ಬೆಳಗಾವಿ, ಬಿಜಾಪುರ, ರಾಯಚೂರು, ಕಲಬುರ್ಗಿ, ಯಾದಗಿರಿ, ಹಾವೇರಿ, ಗದಗಜಿಲ್ಲಾದಾಗಿನ   ಜನ್ರು ಭಾರಿ ತೊಂದ್ರೀ ಅನುಭವಿಸಿದ್ರು"!,   "40,000 ಮನಿಗಳು ಬಿದ್ರ, 2000ಕ್ಕೂ ಹೆಚ್ಚುಗ್ರಾಮಗಳು ಗಂಗವ್ವನ್ ಪಾಲಾಗಿದ್ವು"?.  "ಈ ಪ್ರವಾಹದೊಳ್ಗ 900ಕ್ಕೂ  ಹೆಚ್ಚು  ದನಾ-ಕರು ಸತ್ರ..., ಹಲವಾರು ಜನ್ರು  ತಮ್ಮ ಪ್ರಾಣ ಕಳ್ಕಕೊಂಡ್ರ.... 69,7948 ಜನ್ರ ರಕ್ಷಣೆ ಮಾಡೋದ್ರ ಜೊತಿಗೆ ಈಜನ್ರನ್ ಉಳ್ಸಾಕಂತ್ , 1160 ನಿರಾಶ್ರಿತ ಶಿಬಿರಗಳ್ನ ಆರಂಭಿಸಿತ್ತು ಸರ್ಕಾರ್"!.  

"ಆವಾಗ ಮನಿ ಕಳ್ಕಂಡಿರೂ ಜನಾ ಇನ್ನು ಬಯಲಾಗ ಅದಾರ್ ನೋಡ್ರೀ"! ಕಾಕಾ, ಈ"ಮನಿಕಳ್ಕೊಂಡಿರೋ ಜನ್ರಿಗೆ ಸರಕಾರ ಮನಿಕಟ್ಸಾಕಂತ್ ರೊಕ್ಕಾ ಬಿಡುಗಡೆ ಮಾಡಿದ್ರ...., ಈಹೊಲ್ಸ ರಾಜಕಾರ್ಣಿಗಳು, ಕೆಲ್ವು ಹೊಲ್ಸ ಅಧಿಕಾರಿಗಳು ಸೇರಿಕೊಂಡು "ಮನಿ ಬಿದ್ದರನ್ ಬಿಟ್ಟು, ಮನಿ ಬಿಳಲಿಲ್ಲದವ್ರನ್ ಫಲಾನುಭವಿಗಳು ಅಂತ್" ಮಾಡಿ ಅವ್ರಿಗೆ ಪರಿಹಾರದ ರೊಕ್ಕಾನ ಕೊಟ್ಟಾರ್"?. "ನಿಜವಾದ ಫಲಾನುಭವಿಗಳು ಸರ್ಕಾರದ ರೊಕ್ಕಾ ತಮ್ಗ ಬರೊದಿಲ್ಲ ಅಂತ್ ತಿಳ್ಕಂಡ ಕಾಫಿಸೀಮಿಗೆ, ಗೊವಾಕ್ಕ ಮಕ್ಳು-ಮರಿನ ಕಟಿಗೊಂಡ್ ದೂಡ್ಕಂಡ್ ಬಂದ್ ಮನಿ ಕಟ್ಸಿಕೊಂಡ್ರಾತು ಅಂತ್ ಎಷ್ಟೋ ಕುಟುಂಬಗಳು ಗುಳೆ ಹೋಗಾವು ನೋಡ್ರೀ"!.

ಹೌದೋ ತಮ್ಮಾ..., "ರೊಕ್ಕಾ ಕೊಟ್ಟೋರ್ಗೆ ಈ ರಾಜಕಾರ್ಣಿಗಳು ಮನಿ ಕೊಟ್ಟಾರ್" "ರೊಕ್ಕಾ ಕೊಡ್ಲಿಲ್ದರ್ನ ಫಲಾನುಭವಿ ಲಿಸ್ಟ್‍ನಿಂದಾ ಅವ್ರ ಹೆಸ್ರು ತಗ್ದಹಾಕ್ಯಾರ್ ನೋಡು?". 

ಹೌದ್ರೀ ಕಾಕಾ, ಮೊನ್ನೆ "ನೆರಿಯೋಳ್ಗ ಮನಿಕಳ್ಕೊಂಡ ಫಲಾನುಭವಿಗಳೆಲ್ಲಾ ತಮ್ಮ ಹೆಸ್ರ ಪಟ್ಟಿಯಿಂದಾ ತಗ್ದ ಹಾಕಿದ್ದಕ್ ದೇವಗೆರಿ ಪಂಚಾಯ್ತಿಗೆ ಬಿಗಾ ಜಡ್ದು ಧಿಕ್ಕಾರ ಕೂಗಿದ್ರ ನೋಡ್ರೀ"!. "ಇವ್ರಿಗೆ ನ್ಯಾಯಾ ಸಿಗತೈತೋ...? ಇಲ್ಲೋ...? ಅನ್ನೋದ ನನ್ನ ಚಿಂತ್ಯಾಗೇತ್ರೀ ನೋಡ್ರಿ!". 

ಚಿಂತಿ ಮಾಡಬ್ಯಾಡೋ?, "ಒಳ್ಳೆದಿನಾ ಬಂದ್ ಬರ್ತಾವು!. ಆದ್ರ ಸ್ವಲ್ಪ ಕಾಯಬೇಕೇನ್ಪಾ", ಅಂದಂಗ್ ದೇಶದ್ ವಿಚಾರಾನ ಹೇಳಲಿಲ್ಲಾ....!.  

ಏನ್ ಹೇಳಬೇಕ್ರೀ...., "ಹೋದ ವರ್ಷ ಫೆಬ್ರವರಿ 14 ರಂದ್ ಜಮ್ಮು ಕಾಶ್ಮೀರದ ಪುಲ್ವಾಮಾದಾಗ ಪಾಪಿಗೇಡಿಗಳು ದಾಳಿಮಾಡಿ ಕಾರ್‍ಬಾಂಬ್ ಸಿಡ್ಸಿ ನಮ್ಮ 44 ಸೈನಿಕರ್ನ ಸಾಯಿಸಿದ್ರು".  ಈ ಘಟ್ನೆಬಗ್ಗೆ ದೇಶಾದ್ಯಂತ  ಜನ ಆಕ್ರೋಶ ವ್ಯಕ್ತ ಪಡ್ಸಿದ್ರು,  "ಈ ಘಟ್ನಾ ನಡ್ದ   12 ದಿನದ್ಗಾಗ್    ಫೆಬ್ರವರಿ 26ನೇ ತಾರಿಖಿಗೆ  ನಮ್ಮ ಸೈನಿಕರು  ಪಾಕಿಸ್ತಾನದಮ್ಯಾಲ್     ದಾಳಿ ಮಾಡಿ, ಉಗ್ರರ್  ಹೆಡಿಮುರ್ಗಿ ಕಟ್ಟಿದ್ರು". 

ಅಲ್ಲೋ ಆ ಕಾವು ಆರದ್ರಾಗ್  "ಮೇ ತಿಂಗ್ಳಾಗ್ ಫೋನಿ ಚಂಡಮಾರುತ ಬಂತು, ಸಾರ್ವಜನಿಕ್ರ ಮತ್ತು ಸರ್ಕಾರ್ದ ಮತ್ತ ಈ ದೇವ್ರ ಆಸ್ತಿ- ಪಾಸ್ತಿಗೆ ಹಾನಿ ಮಾಡ್ತು"?.

ಯಾವ ದೇವ್ರ ಆಸ್ತಿ ಹಾನಿ ಆಗಿತ್ರೀ...
ಎಲ್ಲದೀ ಬಸ್ಯಾ , "ಈಪುರಿ ಜಗನ್ನಾಥನ ದೇವಸ್ಥಾನಕ್ಕು ಧಕ್ಕೆ ಆಗಿತ್ತು"..?
ನನ್ಗ ಗೊತ್ತಿರಲಿಲ್ಲಾ ನೋಡ್ರೀ... 

"ನಿನ್ಗ ಗೊತ್ತಿರೋದು ಒಂದ್ ಮಲ್ಲೇಶಣ್ಣನ ಚಾ ಅಂಗಡ್ಯಾಗಿನ್ ಪುರಿಬಾಜಿ ಅಷ್ಟ!, ನನ್ಗ ಗೊತ್ತಿಲ್ಲಾ ಅಂತ್ ತಿಳ್ಕಂಡಿಏನ್"!. 

ಈಗ್ಯಾಕ್ ಪುರಿ-ಬಾಜಿ ನೆನ್ಪಿಗೆ ತರ್ತೀರಿ ಬಿಡ್ರಿ, "ಹೋದ ವರ್ಷದ ಅಂತ್ಯದಾಗ  ಕೇಂದ್ರ ಸರ್ಕಾರ ಈ ಪೌರತ್ವ  ಕಾಯ್ದೆಕ್ ತಿದ್ದುಪಡಿ ತಂದಿದ್ದೇ ತಂದಿದ್ದು, ದೇಶದ ತುಂಬಾ ಗಲ್ಬಿ ನಡ್ದಾವು,   ಗೋಲಿಬಾರ್‍ಗಳೂ ನಡ್ದಾವು"?. ಅದ್ರಾಗೂ ನಮ್ಮ ಮಂಗ್ಳೂರಾಗ  ಇಬ್ರು ಸತ್ತಹೋದ್ರು. "ಈಗ ಸತ್ತೋರ  ಕುಟುಂಬಕ್ಕ ಪರಿಹಾರ ಕೊಡ್ಬೇಕ್.....? ಕೊಡ್ಬಾರ್ದ...? ಅನ್ನೋದ್ಕ ಗದ್ಲಾ ನಡ್ದಾವು ನೋಡ್ರಿ"!.

ಅದ್ನ ಒತ್ತಟೆಕ್ ಒಕ್ಕಡ ಆತ್ಲಾಗ್,   ಬಸ್ಯಾ.. ನಿ ಏನ್ ಅನ್ನೂ "ನಮ್ಮ ದೇಶ ವಿಶ್ವಕಪ್‍ನ್ಯಾಗ ಎಡ್ವಿ, ಮುಗ್ಗರ್ಸಿ ಬಿದ್ದಿದ್ಕ್ ನನ್ಗ ಬಾಳಾ ಬ್ಯಾಸ್ರಾಗಿತ್ತು ನೋಡ್"!

ಹೋಗ್ಲಿ ಬಿಡ್ರಿ, "ಕ್ರಿಕೆಟ್‍ನ್ಯಾಗ್ ನಮ್ಮವ್ರು ಕಡ್ದ ಕಟ್ಟಿ ಹಾಕಿದ್ದು ಅಷ್ಟ್ರಾಗ ಐತಿ"?.

ಹಂಗ್ ಅಂದ್ರ ಹೆಂಗೋ...?,   "ದೋನಿ, ಕೊಯ್ಲಿ, ರಾಹು, ಕೇತುಗಳಂತಾ  ಚಾಣಾಕ್ಷ  ಆಟಗಾರ್ರು ಇದ್ರು ಸತಗಿ ನಮ್ಮ ಟೀಂನವ್ರು  2019ರ ಕ್ರಿಕೆಟ್ ವಿಶ್ವಕಪ್ ಗೆಲ್ಲಾಕ ಆಗ್ಲಿಲ್ಲಾ"?.   

ನೋಡೋ "ಕ್ರಿಕೆಟ್ ಈಗ ಕ್ರೀಡೆ ಆಗಿ ಉಳ್ದಿಲ್ಲಾ?. ಅದು ಭಾಜಿ ಕಟ್ಟೋ ದಂಧೆ ಆಗಿತಿ!". ಅದ್ರ ವಿಷ್ಯಾ ಬಿಡೂ, ಅಲ್ಲೋ "ಬಂಡಿಪುರ್ದಾಗ್ ಕಾಡ್ಗಿಗೆ ಬೆಂಕಿ ಬಿದ್ದಿತ್ತಲ್ಲ"!... 

"ಬಂಡಿಪುರ್ದ ಕಾಡ್ಗಿಚ್ಚು... ಬರಿ ಕಾಡ್ಗೆ ಅಷ್ಟ ಅಲ್ರೀ, ನಾಡ್ಗೂ ಹಬ್ಬಿತ್ತು"?. "ಬಂಡಿಪುರ್ದಾಗ್   ಫೆ. 21-2019ಕ್ಕ ಹತಗೆಂಡೆ ಬೆಂಕಿ ಫೆ.25ರವರೆಗೆ ಹರ್ಡಿ ಕಾಡೆಲ್ಲಾ ಸುಟ್ಟಹೋತು"!. "ಕಾಡಿನ್ಯಾಗ್  ಇದ್ದ ಪ್ರಾಣಿ, ಪಕ್ಷಿಗಳು ಸುಟ್ಟ ಬೆಂದ ಹೋದ್ವು"?.   "ಕಾಡ್ಗೆ ಬಿದ್ದ ಬೆಂಕಿ ಹೆಂಗೋ ಆರ್ಸಿದ್ದಾತು ಅನ್ನೋದ್ರಾಗ, ನಾಡಿಗೆ ಬೆಂಕಿ ಬಿತು"್ತ!. "ಕೈ-ಕಾಲು ಪಕ್ಷದವ್ರು ಕುಡ್ಕಿ ಮಾಡಿಕೊಂಡ್ ಮದ್ವಿ ಅರ್ಧಾದಾಗ ಮುರ್ದಹೋತು"?. "ಆಪರೆಷನ್ ಪಿತಾಮಹಾ ಅನ್ಸಿಕೊಂಡಿದ್ದ ಯಡೆಯೂರ್ಸಪ್ಪನವರು ಕೊನೆಗೂ ಆಪರೆಷನ್ ಕಮ್ಲದ ಕಮಾಲ್ ಮಾಡೆಬಿಟ್ರೂ"!.  "ಪದೇ... ಪದೆ..ಅವ್ರು ಮಾಡ್ತಿದ್ದ ಆಪರೇಷನಗಳು ಫೇಲ್ ಆಗತಿದ್ವು!". "ಕಡಿಗೆ ಅವ್ರು ತಲಿಕೆಟ್ಟ್ ಒಂದ್ ಕೈನೋಡೆಬಿಡೋಣು ಅಂತ್ ಆಪರೆಷನ್ ಮಾಡಿದ್ರೋ ನೋಡ್ರಿ"?. "ಈ ಕೈಪಕ್ಷದ್ವು, ಹೊರಿಒಕ್ಕಟ ಪಕ್ಷದ ಕೆಲ್ವು ಎಂಎಲ್‍ಎಗಳು ಹಂಗ್ ಬಂದ್ ಆಪರೇಶನ ಬುಟ್ಟ್ಯಾಗ  ಬಿದ್ವು".

"ಮಗ್ನ ಹಂಗ್ ಹೆಂಗ್ಯ ಅವ್ರು ಬಂದ್ ಬಿಳ್ತಾರ್!, ಒಂದು ಅವ್ರ ಯಾರರ್ ಈಆಪರೇಷನ್ ಬುಟ್ಟಿಗೆ ದೂಡಿರ್ಬೇಕು, ಇಲ್ಲಾಂದ್ರ ಅವ್ರ ಏನೇನರ್ ಬೇಡ್ಕಿ ಇಟ್ಟ್ ಬಂದ್ ಬಿದ್ದಿರಬೇಕು"?.

ಅದು ನನ್ಗ ಗೊತ್ತಿಲ್ರೀ, ಉಪಚುನಾವಣೆ ಒಳ್ಗ ಅವ್ರ್ನ ಗೆಲ್ಸೋ ಮೂಲಕ್   ಮುಖ್ಯಮಂತ್ರಿ ಕುರ್ಚೆನ ಮತ್ತೋಟು ಗಟ್ಟಿಮಾಡಿಕೊಂಡಿರೋ ಯಡೆಯೂರ್ಸಪ್ಪನವರು, "ತಾವು ಸಿಎಂ ಆಗಾಕ ರಾಜೀನಾಮೆ ನೀಡಿ ಕಾರ್ಣ ಆದೋರನ ಕೈಬಿಡಂಗಿಲ"್ಲ ಅಂತ್ ಅವು ಆರ್ಸಿ ಬಂದ್ ಮ್ಯಾಕ ಸತ್ಗಿ "ನಿಮ್ಮನ್ನ ಮಂತ್ರಿ ಮಾಡೋದ ಖರೆ"?, ಅಂತ "ಅವ್ಕ ಮುಗಿಗೆ ಬೆಣ್ಣಿ ಸವ್ರಿಕೊತ ನೂರದಿನಾ ಕಳ್ದ ಬಿಟ್ಟಾರ"?, "ಹೋದ ವರ್ಷ ಅಂತು ಅವು ಮಂತ್ರಿ ಆಗ್ಲಿಲ್ಲಾ!, ಈವರ್ಷರ ಮಂತ್ರಿ ಆಕ್ವಾವ್ ಇಲ್ಲಾ ಹಂಗ್ ಎಮ್‍ಎಲ್‍ಎ ಆಗಿ ಕಮಲಪಕ್ಷದಾಗ ಕಳ್ದ  ಹೊಕ್ಕಾವ ನೋಡಬೇಕ್ರೀ.   

ರಾಜಕೀಯದ ಸುದ್ದಿ ಒಳ್ಗ ಉಳ್ಳಾಗಡ್ಡಿ ಗದ್ಲಾ ಎಲ್ಗೆ ಬಂದೈತೋ....

"ಎಪ್ಪಾ, ಉಳ್ಳಾಗಡ್ಡಿ ಅಂದಕೂಡ್ಲೆ ಎದಿ ದಸಕ್ಕಂತೈತಿ ನೋಡ್ರಿ.!. ಕೆ.ಜಿಗೆ 150- 200 ರೂಪಾಯಿ ಬೆಲೆ ಏರಿದ್ದು ಇನ್ನು ಕೆಳ್ಗ ಬರಕಾ ವಲ್ಲೆ ಅಂತೈತಿ"!.

 ಹಂಗಾದ್ರ "ಹೊಸಾವರ್ಷದಾಗ ಉಳ್ಳಾಗಡ್ಡಿ ರೇಟ್ ಕಡ್ಮಿ ಆಗಂಗಿಲ್ಲಾ ಅಂತಿ"?. ಆದ್ರ, ನಿ ಏನ್ ಅನ್ನೂ ಬಸ್ಯಾ "ಉಳ್ಳಾಗಡ್ಡಿ ಹೆಚ್ಗಿ ಆಗಿರೋ ರೇಟು ರೈತರಿಗೆ ಮುಟ್ಟಬೇಕ್" ಅದ್ರ ಬಗ್ಗೆ ಸರ್ಕಾರ ಕ್ರಮ ತಗಾಬೇಕು ನೋಡ್!.

ಕಾಕಾರ "2019 ನೇ ಇಸ್ವಿಯೋಳ್ಗ ನ.27ಕ್ಕ ಹೈದ್ರಾಬಾದ್‍ನ್ಯಾಗ್    ನಾಲ್ಕ ಮಂದಿ ರಾಕ್ಸಸರ್ರು   ಯುವತಿ   ಮ್ಯಾಲ್ ಅತ್ಯಾಚಾರ ಎಸ್ಗಿ ಆಕಿನ ಕೊಂದ ಸುಟ್ಟುಹಾಕಿದ ಪೈಶಾಚಿಕ ಕೃತ್ಯ ನನ್ಗ ಎದಿಗೆ ಕಲ್ಲಿಲೇ ಹೊಡ್ದಂಗ್ ಕಾಡಾಕ ಹತ್ತೇತಿ"! ನೋಡ್ರಿ. 

"ಇಂತಾ ಸುಳೆಮಕ್ಳನ್ ನಡರಸ್ತೆದಾಗ ನೇಣ ಹಾಕಬೇಕ್ ಅಂದ್ರ ಕಾಮ್ಕ ಸುಳೆಮಕ್ಳಿಗೆ ಬುದ್ದಿ ಬರತೈತಿ ನೋಡ್"?.

ಕಾಕಾರ ನಮ್ಮ "ಧಾರ್ವಾಡದೊಳ್ಗ ಮಾರ್ಚ್ 19 ಕ್ಕ   ದೊಡ್ಡ ಬಿಲ್ಡಿಂಗ್ ಬಿದ್ದಿತಲ್ರೀ... ಅದ್ರಾಗ್  ಸಿಕ್ಕಂಡ್ 15 ಮಂದಿ ಪ್ರಾಣಾ ಕಳ್ಕೊಂಡಿದ್ರು". "ಆ ಬಿಲ್ಡಿಂಗ್ ಮಾಲಕಗ ಶಿಕ್ಷೆ ಆತನ್ರೀ"....?  

"ಎಲ್ಲೆ ಆಕೈತೋ...? ಅದು ಅಷ್ಟ ಸುಲಭ ಅಲ್ಪಾ"?. "ಅದ್ರ ಬಗ್ಗೆ ತನಿಖೆ ಆಗಬೇಕ್, ಆ ತನಿಖಾ ವರದಿ ಬಂದಮ್ಯಾಕ್ ಶಿಕ್ಷೆ-ದಂಡಾ"!. "ಅಲ್ಲಿಮಟಾ ಇರೋರ್ಯಾರೋ ....ಸಾಯೋರಯಾರೋ... ನಡಿ". ಮಾತಾಡಿ, ಮಾತಾಡಿ ನೀರಡಿಕೆ ಆಗೇತಿ, ಎಲ್ಲರೆ ನೀರ್ ಕುಡೇನ್ ನಡಿ, ಎನ್ನುತ್ತಾ ಕಾಕಾ ಚರ್ಚೆ ಮೊಟಕು ಗೊಳಿಸಿದಾ.....

ಕಾಕಾರ, ಕಾಕಾರ..ಇಲ್ಲೇ ಕೇಳ್ರೀ,.. "ಪೇಜಾವರಶ್ರೀ  ತೀರಿಕೊಂಡ್ರಂತ್ ನೋಡ್ರಿ", ಬ್ರೇಕಿಂಗ್ ಸುದ್ದಿ ಬರಕಾಹತ್ತೇತಿ...!.

ಏ.. ಹೌದೋ, ಅವ್ರಿಗೆ ಅರಾಮ ಇರ್ಲಿಲ್ಲಾ... ಅಂತ, ಹೋದವಾರ ಅವ್ರ್ನ ದಾವಾಖಾನಿಗೆ ಸೇರ್ಸಿದ್ರರು!. "ಆದ್ರ ಅವ್ರು ಈಗಿನ ಸಂದರ್ಭದಾಗ ಇನ್ನು ಹತ್ತಾರ ವರ್ಷ ಬದುಕಿರಬೇಕಿತ್ತು",  "ಅವ್ರು ಕೆಲ್ವು ಸರ್ತಿ ರಾಮನ ಮಂದಿ ಪರವಾಗಿ ಮಾತಾಡತಿದ್ರು,.....!. "ಆದ್ರ  ದಲಿತ ಕೇರಿಗೆ ಭೇಟಿ ನೀಡಿದ್ದು, ದಲಿತರೊಂದಿಗೆ ಸಹಭೋಜ್ನಾ ಮಾಡೋ ಮೂಲ್ಕಾ, ನಮ್ಮ ಮುಸ್ಲೀಬಾಂಧವರಿಗೆ ಇಫ್ತಾರ್ ಕೂಟ ಆಯೋಜಿಸೋ ಮೂಲಕ ಧಾರ್ಮಿಕ ಭಾವೈಕ್ಯತೆ ಮೆರೆದಿದ್ದರು.   ಅಸಮಾನತೆ ಕೂಗು ಕ್ಷೀಣಿಸುವಂತಾ  ಪ್ರಯತ್ನಾ ಮಾಡಿದ್ರು",  "ಹಾವೇರಿಗೆ ಅವ್ರು ಬಂದ ಹೊತ್ತಿನ್ಯಾಗ ನಮ್ಮ ದಲಿತ ಮುಖಂಡ ಪೃಥ್ವಿರಾಜ ಬೆಟಗೇರಿ ಮನಿಗೆ ಭೇಟಿ ನೀಡಿದ ಹೊತ್ತಿನ್ಯಾಗ್ ನನ್ನೂ  ಕರ್ಕಂಡ ಹೋಗಿದ್ರು" !."ಸಮಾಜಕ್ಕೆ ಆಗಾಗ ಮಾರ್ಗದರ್ಶಕರಾಗಿದ್ದ ಶ್ರೀಗಳ ಇಷ್ಟ ಲಗೂ ಹೋಗಬಾರ್ದಿತ್ತು".. "ಹೋದ ವರ್ಷ ಜನವರಿ ತಿಂಗ್ಳಾಗ್ ಸಿದ್ದಗಂಗಾದ ಡಾ.ಶಿವಕುಮಾರಶ್ರೀಗಳು ನಮ್ಮನ್ನ ಅಗ್ಲಿದ್ದ್ರು". "ಈಅಜ್ಜಾರು ಲಕ್ಷಾಂತರ ಮಕ್ಕಳಿಗೆ ಅನ್ನ ನೀಡೋದ್ರ ಜೊತಿಗೆ ಅರಿವು ನೀಡಿ ಮಕ್ಕಳ ಬದ್ಕಿಗೆ ದಾರಿ ದೀಪಾಗಿದ್ರು" . ಈ2020ರಾಗ ಇನ್ನು ಏನೇನ್  ಕಾದೈತೋ ಯಾರಿಗೆ ಗೊತ್ತೋ? ತಮ್ಮಾ ನಡಿ. ನಡಿ... ಹೊತ್ತಾತು. ಹೊಟ್ಟೆ ಹಸ್ದಾವು ಮನೆಕಡಿಗೆ ಹೋಗಣ ನಡಿ ಎನ್ನುತ್ತಾ ಕಾಕಾ-ಬಸ್ಯಾ ಮತು ಮುಗಿಸಿದರು.