ಖತ್ನಾ ಅಂದಾಗಲೆಲ್ಲ...

ನಾನು ರಾಜನಂತೆ ಕುಳಿತುಕೊಂಡೆ. ಕುದುರೆ ಮುಂದೆ ಸಾಗಿತು. ಬೀದಿ ಬೀದಿ ಓಡಾಡಿತು. ನನ್ನ ಹಿಂದೆ ಮಕ್ಕಳ, ದೊಡ್ಡವರ ದಂಡು ಕುತೂಹಲದಿಂದ ಹಿಂಬಾಲಿಸುತ್ತಿತ್ತು.

ಖತ್ನಾ ಅಂದಾಗಲೆಲ್ಲ...

ಮಾರ್ನಮಿ ಬೈಲಿನ ರಹೀಂಖಾನ್ ದಿನ ಸೂಚಿಸಿದ್ದ. ನನಗೋ ಆ ದಿನ ಯಾವಾಗ ಬರುತ್ತೋ ಅಂತ ಕುತೂಹಲ, ಅಷ್ಟೇ ಕಾತರ. ಅಮ್ಮಿ ಅಬ್ಬ ಇಡೀ ಗಾಂಧಿ ಬಜಾರು ತಿರುಗಾಡಿ ಖರ್ಜೂರ, ಬೆಣ್ಣೆ ಹೊತ್ತು ತಂದಿದ್ದರು. ಬೆಣ್ಣೆ ಕಾಯಿಸಿ ತುಪ್ಪ ಮಾಡಿ ಅದರೊಳಗೆ ಖರ್ಜೂರ ನೆನೆಸಿಟ್ಟಿದ್ದರು. ಮನೆ ತುಂಬ ಘಮಘಮ. ಯಾವಾಗ ಕೊಡುತ್ತಾರೋ ಎಂಬ ಆಸೆ. ``ಅಮ್ಮಿ ಕೊಡಮ್ಮಿ’’ ಎಂದರೆ, ``ನಿಂಗೇ ಮಗೂ, ಯಾರಿಗೂ ಕೊಡಲ್ಲ. ನೀನೇ ತಿನ್ನುವಂತೆ...’’ ಎಂದು ಸಮಾಧಾನ ಮಾಡಿ, ``ಖತ್ನಾ ಆಗೋವರೆಗೆ ಕೊಡಂಗಿಲ್ಲ. ಅಲ್ಲಾಹು ಸಿಟ್ಟಾಗಿಬಿಟ್ರೆ ಹೊಟ್ಟೆನೋವು ಬರುತ್ತೆ’’ ಎನ್ನುತ್ತಿದ್ದಳು. ಮಾರ್ನಮಿ ಬೈಲಿನ ರಹೀಂಸಾಬ್ ಅದ್ಯಾವಾಗ ಬರುತ್ತಾನೋ ಖತ್ನಾ ಯಾವಾಗ ಮಾಡ್ತಾನೋ ತಿನ್ನೋಕೆ ಯಾವಾಗ ಕೊಡ್ತಾಳೋ? ಕಾತರ ಮುಗಿಯುವಂತಿರಲಿಲ್ಲ.

ನನಗಾಗ ಎಂಟೊಂಬತ್ತು ವರ್ಷ ವಯಸ್ಸು. ಸೀಗೆಹಟ್ಟಿ ಸರ್ಕಾರಿ ಶಾಲೆಯಲ್ಲಿ ನಾಲ್ಕನೇ ಕ್ಲಾಸು ಓದುವ ಪುಟ್ಟ ಹುಡುಗ. ನಮ್ಮ ಓಣಿಯಲ್ಲಿದ್ದ ಸದಾನಂದ, ರಮೇಶ, ಸೀನ, ಫೈರೋಜ್‍ನ ಜೊತೆ ಸಂಜೆ ಗೋಲಿ ಆಡೋದು. ರಬ್ಬರ್ ಬಾಲ್ ತಂದು ಕ್ರಿಕೆಟ್ ಆಡೋಕೆ ಪ್ರಯತ್ನಿಸೋದು. ಬಾಡಿಗೆಗೆ ಸೈಕಲ್ ತಂದು ಕಲಿಯೋದು, ಆಟವೆಲ್ಲ ಮುಗಿದ ಮೇಲೆ ಅಮ್ಮಿ ಕಟ್ಟುತ್ತಿದ್ದ ಬೀಡಿಯ ಬಾಯಿ ಮುಚ್ಚಿ ಕೊಡೋದು... ಇಷ್ಟೇ ನನ್ನ ದಿನಚರಿ. ಬೀಳೋದು, ಗಾಯ ಮಾಡಿಕೊಳ್ಳೋದು, ರಕ್ತ ಬಂದ ಜಾಗಕ್ಕೆ ಬೆಂಕಿಪೊಟ್ಟಣದ ಮದ್ದು ಕಿತ್ತು ಹಚ್ಚಿಕೊಂಡು ಮಣ್ಣು ಸವರಿ ಬಿಡೋದು, ಹುಣಸೆಕಾಯಿಗೆ ಹೊಡೆದ ಕಲ್ಲು ಯಾರದೋ ತಲೆಗೆ ತಾಕಿ ಅವರು ಓಡಿಸಿಕೊಂಡು ಬರೋದು, ನಾವು ಓಡಿ ಹೋಗಿ ಬಚ್ಚಿಟ್ಟುಕೊಳ್ಳೋದು, ಕಲ್ಲಿನೇಟಿಗೆ ಬಿದ್ದ ಹುಣಸೆಕಾಯಿ ಚಟ್ನಿಗೆ ಅಶೋಕನಂಗಡಿಯ ಹೊರಗಿರುತ್ತಿದ್ದ ಮೂಟೆಯಿಂದ ಉಪ್ಪು ಕದ್ದು ಚಡ್ಡಿಗೆ ಸೇರಿಸಿ ಹೊಟ್ಟೆತುಂಬುವವರೆಗೆ ತಿಂದು ಬಡೋದು... ದಿನಚರಿಯ ಆಗಾಗಿನ ಮುಖ್ಯಾಂಶಗಳು.

ಅದೊಂದು ದಿನ ಗಾಂಧಿ ಟೋಪಿ ಹೆಡ್‍ಮಾಸ್ಟರ್ ಶಾಲೆಗೆ ಬೇಸಿಗೆ ರಜೆ ಎಂದು ಟಾಂ ಟಾಂ ಮಾಡಿದರು. ಮನೆಗೆ ಓಡೋಡಿ ಬಂದು ಪುಸ್ತಕ ತುಂಬಿದ್ದ ಬ್ಯಾಗ್ ಮೂಲೆಗೆಸೆದು ಆಟಕ್ಕೆ ಓಡಲು ಹೋದೆ. ಅಮ್ಮಿ ತಡೆದು ನಿಲ್ಲಿಸಿದಳು. ``ನಾಳೇನೇ ನಿನ್ ಖತ್ನಾ...’’ ಎಂದಳು. ಶಾಲೆಯ ರಜೆಯ ಖುಷಿ ಜೊತೆ ರಹೀಂಸಾಬ್ ನಾಳೆ ಬಂದು ಖತ್ನಾ ಮಾಡಿ ಹೋದ್ಮೇಲೆ ತಿನ್ನೋಕೆ ತುಪ್ಪದ ಖರ್ಜೂರ ಸಿಕ್ಕುತ್ತಲ್ಲ ಅಂತ ಮತ್ತೊಂದು ಖುಷಿ. ಓಡೋಡಿ ಹೋಗಿ ಗೋಲಿಯಾಡುತ್ತಿದ್ದ ಸದೂ, ರಮೇಶ, ಸೀನಂಗೆ ``ನಾಳೆ ನನ್ನ ಖತ್ನಾ ಕಂಡ್ರೋ... ತುಪ್ಪದ ಖರ್ಜೂರ ಸಿಕ್ಕುತ್ತೆ’’ ಬಹಳ ಬಹಳ ಸಂತೋಷಪಟ್ಟುಕೊಂಡು ಹೇಳಿದ್ದೆ. ಸದೂ, ರಮೇಶ, ಸೀನನಿಗೆಲ್ಲ ಏನೋ ಹೊಸ ವಿಷಯ ಕೇಳಿದಂತಾಗಿ ಆಡುತ್ತಿದ್ದ ಆಟ ನಿಲ್ಲಿಸಿ ``ಖತ್ನನಾ? ಹಂಗಂದ್ರೇನೋ?’’ ಅಂತ ನನಗೇ ಪ್ರಶ್ನೆ ಮಾಡಿದರು. ಹೌದಲ್ವಾ! ಖತ್ನಾ ಅಂದ್ರೆ ಏನು? ನಂಗೂ ಗೊತ್ತಾಗದೇ ``ನಂಗೇನೂ ಗೊತ್ತಿಲ್ಲಪ್ಪ, ಮಾರ್ನಮಿಬೈಲ್ ರಹೀಂಸಾಬು ಬಂದು ಖತ್ನಾ ಮಾಡ್ತಾರಂತೆ. ತಿನ್ನೋಕೆ ತುಪ್ಪದ ಖರ್ಜೂರ ಕೊಡ್ತಾರಂತೆ’’ ಎಂದು ಹೇಳಿದರೂ ಅವರಿಗೆ ಕುತೂಹಲ ಬಗೆಹರಿದಂತೆ ಕಾಣಲಿಲ್ಲ. ಆಗಲ್ಲಿಗೆ ಬಂದವನು ಫೈರೋಜ್. ``ಇವ್ನಿಗೆ ಕೇಳ್ರೋ, ಗೊತ್ತಿರುತ್ತೆ’’ ಎಂದೆ. ಅವರು ಕೇಳಿದರು. ಫೈರೋಜ್ ನಾಚಿಕೊಂಡು ನಿಂತ- ಅದನ್ನೆಲ್ಲಾ ಹೆಂಗ್ರೋ ಹೇಳೋದು’’ ಎಂದು ಆಟಕ್ಕೆ ಸಿದ್ಧವಾದ. ನನಗೂ `ಖತ್ನಾ ಅಂದ್ರೇನು?’ ಅಂತ  ತಿಳಿದುಕೊಳ್ಳುವ ಕುತೂಹಲ. ``ನೀ ಹೇಳಲ್ಲಾಂದ್ರೆ ನಾಳೆ ನಿಂಗೆ ತುಪ್ಪದ ಖರ್ಜೂರ ಕೊಡಲ್ಲ ನೋಡು’’ ಎಂದು ಆಸೆ ಹುಟ್ಟಿಸಲು ಪ್ರಯತ್ನಿಸಿದೆ. ಎಷ್ಟು ಒತ್ತಾಯ ಮಾಡಿದ್ರೂ ಫೈರೋಜ್ ಹೇಳಲೇ ಇಲ್ಲ.

ಆಡಲು ಮನಸ್ಸಾಗದೇ ಮನೆಗೆ ಓಡೋಡಿ ಬಂದೆ. ಅಮ್ಮಿ ಬೀದಿಯರೆಲ್ಲ ಬಜಾರಿಗೆ ಹೋಗಿದ್ದರು. ಯಾರಿಗೆ ಕೇಳೋದು? ಮುಬೀನ ಕಾಣಿಸಿಕೊಂಡಳು. ಎಸ್ಸೆಸ್ಸೆಲ್ಲಿ ಫೇಲಾಗಿದ್ದ ಮುಬೀನಾಳಿಗೆ ಗೊತ್ತಿರಬಹುದೆಂದು ಅವಳ ಬಳಿಗೆ ಹೋದೆ. ``ಆಪಾ, ಖತ್ನಾ ಅಂದ್ರೇನೆ?’’ ಪ್ರಶ್ನಿಸಿದೆ. ಅವಳ ಬೆಳ್ಳಗಿದ್ದ ಮುಖ ಕೆಂಪಾಗಿ ಹೋಯ್ತು. ವೇಲನ್ನು ಮುಖಕ್ಕಿಟ್ಟುಕೊಂಡು ಎಡೆಬಿಡದ ಹಾಗೆ ನಗಲು ಶುರು ಮಾಡಿದಳು. ಮತ್ತೆ ಕೇಳಿದೆ. ``ಥೂ ಹೋಗೋ, ಅದೆಲ್ಲ ಹೇಳಬಾರ್ದು. ನಿನ್ನ ಅಮ್ಮಿಗೆ ಕೇಳು ಹೇಳ್ತಾರೆ’’ ಎಂದು ಹೋದಳು. ಅಮ್ಮಿ ಬಜಾರಿಂದ ಬರುವವರೆಗೆ ನನಗೆ ತಾಳ್ಮೆಯಿರಲಿಲ್ಲ. ತಲೆ ತುಂಬಾ `ಖತ್ನಾ’ ತುಂಬಿಕೊಂಡಿತ್ತು ಕತ್ತಲಾದ ಮೇಲೆ ಅಂತೂ ಅಮ್ಮಿ ಬಂದಳು. ಮನೆಯೊಳಗಿನ್ನೂ ಕಾಲಿಟ್ಟಿರಲಿಲ್ಲ ಅಮ್ಮಿ. ಆಗಲೇ ಕೇಳಿದ್ದೆ-``ಅಮ್ಮಿ ಖತ್ನಾ ಅಂದ್ರೇನು?’’

`ಅದ್ಯಾಕೋ, ನಿಂಗೆ ತುಪ್ಪದ ಖರ್ಜೂರ ಕೊಟ್ಟರಾಯಿತಲ್ವಾ?’’ ಎಂದಳು ಅಮ್ಮಿ. ``ಖತ್ನಾ ಅಂದ್ರೇನು ಮೊದ್ಲು ಹೇಳಮ್ಮಿ’’ ಎಂದು ಹಠ ಹಿಡಿದು ನಿಂತಾಗ ಅಮ್ಮಿ ಹೇಳಲೇಬೇಕಾಯಿತು. ``ನಿಂಗೆ ಕುದ್ರೆ ಮೇಲೆ ಕೂರ್ಸಿ ಊರು ಸುತ್ತಿಸ್ತಾರೆ. ತಾಮ್ರದ ಕೊಡಪಾನದ ಮೇಲೆ ಕೂರ್ಸಿ ಅಲ್ಲಾಹುನ ನೆನಪಿಸ್ಕೋತಾರೆ. ನಿಂಗೆ ಆಮೇಲೆ ತುಪ್ಪದ ಖರ್ಜೂರ ಕೊಡ್ತಾರೆ...’’ ಅಮ್ಮಿ ವಿವರಿಸಿದಾಗ ತುಪ್ಪದ ಖರ್ಜೂರ ಸಿಗೋ ಆಸೆ ಜೊತೆಗೆ ಈಗ ಕುದುರೆ ಮೇಲೆ ಊರಲ್ಲಿ ಸವಾರಿ ಹೋಗಬೇಕೆಂಬುದನ್ನು ಕಲ್ಪಿಸಿಕೊಂಡು ಮತ್ತಷ್ಟು ಖುಷಿಗೊಂಡೆ.

ನಾಳೆ ಅನ್ನೋ ಆ ದಿನ ಕೊನೆಗೂ ಬಂದು ಬಿಟ್ಟಿತ್ತು. ಮಾರ್ನಮಿ ಬೈಲಿನ ರಹೀಂಸಾಬ್ ತನ್ನ ನಾಲ್ಕು ಜನ ಅಸಿಸ್ಟೆಂಟುಗಳ ಜೊತೆ ಮನೆಗೆ ಬಂದ. ಆದಾಗಲೇ ಅಮ್ಮಿ ಸ್ನಾನ ಮಾಡಿಸಿ, ಕುರಾನ್ ಪಠಿಸಿ, ಒಂದು ಕಡೆ ಕುಳ್ಳಿರಿಸಿದಳು. ಸಂಬಂಧಿಕರೆಲ್ಲ ಕೆನ್ನೆಗೆ ಎಣ್ಣೆ ಹಚ್ಚಿ ಚಿಲ್ಲರೆ ಕಾಸು ಹಾಕಿ ರಸಂ ಮುಗಿಸಿದರು. ಬೀದಿಯ ಹೆಂಗಸರು, ಗಂಡಸರೂ ಸೇರಿಕೊಂಡಿದ್ದರು. ಆದರೆ, ಮುಬೀನಾ, ತಾಜ್, ಕಲಾವತಿ, ರೂಪ ಯಾರೂ ಕಾಣಿಸದಿದ್ದುದು ನೋಡಿ ಕುತೂಹಲವಾಯಿತು. ಕುದುರೆ ಮೇಲೆ ಸವಾರಿ ಬಂತು ಅಂತ ಯಾರೋ ಬಂದು ಹೇಳಿದ ಮೇಲೆ ನನ್ನನ್ನು ಕುದುರೆ ಬಳಿ ಕರೆದೊಯ್ದರು. ಕುದುರೆಗೆ ನನಗಿಂತ ಹೆಚ್ಚಾಗಿ ಸಿಂಗರಿಸಲಾಗಿತ್ತು. ಸುತ್ತಲೂ ಇದ್ದ ಜನರಲ್ಲಿ ರಮೇಶ್, ಸದಾ, ಸೀನ, ಫೈರೋಜ್ ಕಾಣಿಸಿಕೊಂಡರೂ ಮುಬೀನಾ, ತಾಜ್, ಕಲಾವತಿ, ರೂಪ ಯಾರೂ ಕಾಣಿಸಲಿಲ್ಲ. ಅಬ್ಬ ಕುದುರೆ ಮೇಲೆ ನನ್ನನ್ನು ಕುಳ್ಳಿರಿಸಿದ. ನಾನು ರಾಜನಂತೆ ಕುಳಿತುಕೊಂಡೆ. ಕುದುರೆ ಮುಂದೆ ಸಾಗಿತು. ಬೀದಿ ಬೀದಿ ಓಡಾಡಿತು. ನನ್ನ ಹಿಂದೆ ಮಕ್ಕಳ, ದೊಡ್ಡವರ ದಂಡು ಕುತೂಹಲದಿಂದ ಹಿಂಬಾಲಿಸುತ್ತಿತ್ತು. ಊರನ್ನು ಸುತ್ತಿದ ಕುದುರೆ ಮನೆ ಮುಂದೆ ಬಂದು ನಿಂತಿತು.

ಕುದುರೆಯಿಂದ ಇಳಿದವನೇ ಅಮ್ಮಿ ಬಳಿ ಓಡಿ ಹೋದೆ. ``ತಾಂಬೆಕಾ ಕೊಡಪಾನ್ ಎಲ್ಲಿ?’’ ಎಂದಾಗ ಅಮ್ಮಿಯ ಜೊತೆಯಿದ್ದ ಹೆಂಗಸರೆಲ್ಲ ಮುಸಿಮುಸಿ ನಕ್ಕರು. ಅಬ್ಬ ನನ್ನನ್ನು ಕರೆದೊಯ್ದು ಸಿಂಗಾರಗೊಂಡಿದ್ದ ರೂಮಿನೊಳಗೆ ಇದ್ದ ತಾಮ್ರದ ಕೊಡಪಾನದ ಮೇಲೆ ಕುಳಿತುಕೊಳ್ಳಲು ಹೇಳಿದ. ಹಾಗೆ ಕೂರುವ ಮುಂಚೆ ನನ್ನನ್ನು ಬೆತ್ತಲೆ ಮಾಡಲಾಯಿತು. ಮಾರ್ನಮಿ ಬೈಲಿನ ರಹೀಂಸಾಬ್ ಹಿತ್ತಾಳೆ ಹಿಡಿಕೆಯ ಕತ್ತರಿಯ ಹರಿತ ಪರೀಕ್ಷಿಸುತ್ತಿದ್ದ. ನನಗ್ಯಾಕೋ ಅನುಮಾನ ಶುರುವಾಯಿತು. ರಹೀಂಸಾಬ್ ಜೊತೆಗಿದ್ದ ನಾಲ್ವರು ಅಸಿಸ್ಟೆಂಟ್‍ಗಳು ``ಆ ಬೇಟಾ’’ ಎಂದು ಆಹ್ವಾನಿಸಿ ಕೊಡಪಾನದ ಮೇಲೆ ಕೂರಿಸಿದರು. ರಹೀಂಸಾಬ್ ಮಂತ್ರ ಆರಂಭವಾಯಿತು. ಮಂತ್ರಗಳೆಲ್ಲ ಮುಗಿದ ಮೇಲೆ ತುಪ್ಪದ ಖರ್ಜೂರ ಕೊಡ್ತಾರಲ್ಲ ಅಂತ ಮನಸ್ಸಿನೊಳಗಿತ್ತು. ಅದನ್ನು ಯಾರ್ಯಾರಿಗೆ ಕೊಡಬೇಕಂತ ಲೆಕ್ಕಾಚಾರ ಹಾಕುತ್ತಿದ್ದೆ. ಮುಬೀನಾ, ಕಲಾವತಿ, ತಾಜ್, ರೂಪರಿಗೆಲ್ಲ ಕೂಡಲೇ ಬಾರದೆಂದು ನಿರ್ಧಾರ ಮಾಡಿಕೊಂಡೆ. ನನ್ನನ್ನು ಹಿಡಿದು ಕೂರಿಸಿದ ನಾಲ್ವರೂ ನನ್ನನ್ನು ಬಲವಾಗಿ ಹಿಡಿದುಕೊಂಡರು. ಹಿಡಿದುಕೊಂಡ ರಭಸಕ್ಕೆ ``ಅಮ್ಮೀ...’’ ಅಂತ ಜೋರಾಗಿ ಕೂಗಿದ್ದಷ್ಟೇ ನೆನಪು. ಕೊಡಪಾನದ ತುಂಬಾ ರಕ್ತವೋ ರಕ್ತ. ಮೂತ್ರ ಮಾಡುವ ಜಾಗದಲ್ಲಿ ಬ್ಯಾಂಡೇಜು ಸುತ್ತಿ ವಿಪರೀತ ಭಾರ ಮಾಡಿ ಹಾಕಿದ್ದ ಮಾರ್ನಮಿಬೈಲ್‍ನ ರಹೀಂಸಾಬ್. ಅಲ್ಲಿ ಕತ್ತರಿಸಿದಂತೆ ನೋವಾಗುತ್ತಿತ್ತು.  ಬ್ಯಾಂಡೇಜು ದಾಟಿಕೊಂಡು ರಕ್ತ ಕಾಣಿಸುತ್ತಿತ್ತು. ಕಾಲು ಅಗಲ ಮಾಡಿ ಹಾಸಿಗೆ ಮೇಲೆ ಮಲಗಿಸಿದ್ದರು. ಎದ್ದು ಹೋಗಿ ಒಂದೂ ಎರಡು ಮಾಡುವಂತಿರಲಿಲ್ಲ. ತಾತ ಬ್ಯಾಂಡೇಜು ಸುತ್ತಿದ್ದ ಜಾಗಕ್ಕೆ ಗಾಳಿ ಹಾಕುತ್ತಿದ್ದುದರಿಂದ ಆಗಾಗ ಹಾಯ್ ಎನಿಸುತ್ತಿತ್ತು.

ಪಕ್ಕದಲ್ಲಿಯೇ ಕುಳಿತ ಅಮ್ಮಿ ತುಪ್ಪದ ಖರ್ಜೂರದ ಬಾಟಲು ತಂದಿಟ್ಟು ``ಆಗಾಗ ತಿನ್ನು ಮಗೂ’’ ಎಂದು ಹೇಳಿ ಎದ್ದುಹೋದಳು. ಖತ್ನಾ ಅಂದ್ರೇನು ಅಂತ ಈಗ ಗೊತ್ತಾಯಿತು. ಮುಬೀನಾ, ಫೈರೋಜ್ ನಾಚಿಕೊಂಡಿದ್ದು ಯಾಕೆ ಅಂತಲೂ ಅರ್ಥವಾಯಿತು. ಮುಬೀನಾ, ತಾಜ್, ಕಲಾವತಿ, ರೂಪ ಯಾರಾದರೂ ರೂಮೊಳಗೆ ಬಂದುಬಿಟ್ಟಾರೆಂದು ಗಾಢ ನಿದ್ದೆಯಲ್ಲೂ ಆಗಾಗ ಎಚ್ಚರವಾಗ್ತಿತ್ತು...