ನಂಬಿಗ್ಯಾಗೈತಿ ಕಸುವಣ್ಣ!

ನಂಬಿಗ್ಯಾಗೈತಿ ಕಸುವಣ್ಣ!

ಮೊನ್ನೆ ಭರಮಣ್ಣ ಸಿಕ್ಕಿದ್ದ. ಇಪ್ಪತ್ತು ವರ್ಷಗಳ ಹಿಂದೆ ಹ್ಯಾವಕ ಬಿದ್ದು ಹುಕೀಲಿ ಕಮ್ತ ಮಾಡಿದ ಆಸಾಮಿ. ಇತ್ತೀಚಿನ ಮಳೀ, ನದಿಗಳ ಭೀಕರ ಪ್ರವಾಹ, ನೆರೆಹಾವಳಿಯ ವಿಷಯ ಮಳೀಬೆಳೀ ಜೊತೆಗೆ ತಾನೇ ಬಂತು. ಹೊಳೀ ಅನ್ನೊತ್ತಿಗೆ ಭರಮಣ್ಣನಿಗೆ ತುಂಗಭದ್ರಾ ಹೊಳೀ ನೆಪ್ಪಾತು. ಅಂವಾ ನೋಡಿರೋ ದೊಡ್ಡ ಹೊಳೀ ಅಂದ್ರ ಅದೊಂದೇ. ಹಂಗಾಗಿ ಮೈಲಾರ ಜಾತ್ರಿಗೆ ಚಕ್ಕಡಿ ಕಟ್ಕೊಂಡು ಹೋಗುತಿದ್ದ ದಿನಗಳೆ ಕಣ್ಮುಂದೆ ಮರುಕಳಿಸಿ ತನ್ನ ನೆನಪಿನ ಬುತ್ತಿ ಬಿಚ್ಚಿದ.

ಮೈಲಾರ ಜಾತ್ರಿ ಬರೋದು ಭಾರತ ಹುಣ್ಣಿವೀಗೆ. ಅದಕೂ ತಿಂಗಳ ಮುಂದ ಇರ್ತನ, ಈ ವರ್ಷ ಯಾರು ತಮ್ಮ ಚಕ್ಕಡೀನ ಮೊದ್ಲು ಹೊಳೀ ದಾಟಸ್ತಾರ ಅನ್ನೊದ್ರ ಬಗ್ಗೆ ನಮ್ಮ ನಮ್ಮೊಳಗ ಹ್ಯಾಂವ ಬೀಳೋದು. ಹೋದ ವರ್ಷ ಕೆಂಚನಗೌಡ್ರ ಎತ್ತ ಮೊದಲು ಹೊಳೀ ದಾಟಿದ್ದವು. ಈ ವರ್ಷ ನಮ್ಮ ಎತ್ತು ಮೊದ್ಲ ಹೊಳೀ ದಾಟಬೇಕು ಅನ್ನೋದ ನನಗ ಕೊರ್ಯಾಕ ಹತ್ತು. ಒಂದ ಸಲ ಗೌಡ್ರ ಎದುರಿಗೆ ಆ ಮಾತ ಅಂದ್ಬಿಟ್ಟೆ. ಗೌಡ್ರು ಮುಗುಳ್ನಕ್ಕು `ಆತಲೇ ಭರಮಾ ಆಗಲಿ ಹೋಗು. ನೀನ ಮೊದ್ಲು ಹೊಳೀ ದಾಟ್ತನೀ ಅಂದೀಯಲ, ಹಂಗ  ಆಗ್ಲಿ. ಈ ಸಣಕಲ ಎತ್ತು ಕಟ್ಟಿ ಕೆಂಡ ಅದೆಂಗ್ ದಾಟ್ತಿಯೊ, ಅಲ್ಲೀತನ ಅದೆಂಗ್ ನಿನ್ನೀ ಎತ್ತು ಮೇಸಿ ತಯ್ಯಾರು ಮಾಡ್ತಿಯೊ..ನೋಡೇ ಬಿಡ್ತನೀ.' ಎಂದು ಮೀಸೆ ತಿರುವಿದ್ರು‌. ನನಗ ಇದು ಮತ್ತಷ್ಟು ಹ್ಯಾಂವಾ ಹುಟ್ಟಿಸಿ ಬಿಡ್ತು. ಅದೇನ್ ಬೇಕಾದ್ ಆಗಲಿ, ಈಪಟ ನಮ್ಮೆತ್ತ ಮೊದ್ಲ ಹೊಳೀ ದಾಟಬೇಕು ಅನ್ನೋದ ನನ್ನ ಮೂರೊತ್ತಿನ ಊಟಾತು.

ಕನಸಿನಾಗೂ ಅದ, ಮನಸಿನಾಗೂ ಅದ, ಎದ್ರ ಕುಂತ್ರು ನನಗ ನನ್ನ ಎತ್ತಿಂದ ಚಿಂತಿ. ಮನ್ಯಾಗ ಜ್ವಾಳ ಬೇಕಾದಷ್ಟ ಇದ್ವು, ಅವತ್ತಿಂದನ ರಾತ್ರಿ ಮಕ್ಕನಕಿಂತ ಮೊದ್ಲ ಗಿದ್ನ ಜ್ವಾಳ ಕುಚ್ಚಿ ಇಡುತಿದ್ದೆ. ನಸುಕ್ಯಾನಗ ಎದ್ದು, ಎತ್ತಿಗೆ ಹೊಟ್ಟು ಹಾಕೊದಿಕ್ಕಿಂತ ಮೊದ್ಲ ಎರಡೂ ಎತ್ತಿಗೆ ಪಡಿ ಪಡಿ ಜ್ವಾಳ ತಿನ್ಸಾಕ ಹತ್ತಿದೆ. ಮತ್ತ ಎತ್ತಿಗೆ ಹೊಟ್ಟು ಮೇಯಿಸೋದು, ಮೈ ತಿಕ್ಕೋದು. ಸಂಜೆ ಹೊಲದಿಂದ ಬಂದ ಕೂಡಲೆ ಮತ್ತ ಎತ್ತಿನ ಮೈ ತಿಕ್ಕೋದು. ಇಳಿಹೊತ್ತಿಗೆ ಎತ್ತು ಮೇಸಾಕಂತ ಹೋದ್ರ, ಅವಾಗ ಸಣ್ಣತ್ತಿ ಜೊತಿಗೆ ಒಂದಿಷ್ಟು ಜ್ವಾಳ ಕೂಡಿಸಿ ಬಿತ್ತದಿದ್ವೀ. ಅವು ಹೊಡಿಕಿತ್ತು  ಒಳ್ಳೆ  ಹಾಲ್ಗಾಳು ಆಗಿರ್ತಿದ್ವು. ಅವುನ ಕೊಯ್ದು ಎತ್ತಿಗೆ ಮೇಯ್ಸಿತಿದ್ದೆ.

ಎರಡ ವಾರ ಕಳೇದ್ರಾಗ ಎತ್ತು, ಹೇಳ್ತಿನಿ ನಿನಗ ಮಿರಿಮಿರಿ ಮಿಂಚಾಕ ಹತ್ತೀದ್ವು. ದಿನಾನೂ ಎತ್ತು ಮೈ ತೊಳೇಯೋದು, ಸಂಜೀಗೆ ಮೈ ತಿಕ್ಕೋದು ತಪ್ಪಿಸ್ದಂಗ ಮಾಡ್ಕೆಂತ ಬಂದೆ, ಹ್ ಅವನೌನು ಅದ ಗೌಡ್ರು ಎತ್ತು ಮೈಸಿಕೊಂಡು ಮನೀಗೆ ಬರಮುಂದ ಒಮ್ಮಿ ಎದುರಾದ್ರು. ನನ್ನ ಎತ್ತು ನೋಡಿ ಹೌಹಾರಿದವರಂಗ ಗಕ್ಕನ ನಿಂತಬಿಟ್ರು.

'ಏನಲೇ ಭರಮಾ, ಇವು ಯಾರ ಎತ್ತು? ಜಾತ್ರೀಗೆ ಕಟ್ಟಾಕ ಅಂತನ ಮತ್ತ ಹೊಸಾ ಎತ್ತು ತಂದೇನು?' ಅಂತ ಕಣ್ಣ ಕಿಸಿದು ಕೇಳಿದ್ರು. ನನಗ ಅವ್ರ ಮಾತು ಕೇಳಿ ನಗೀ ಬಂತು. `ಇಲ್ರೀ ಗೌಡ್ರ ಇವು ಮುಂಚೀನ ಎತ್ತ..ಅವ ಮೈಲಾರಿ, ಕುರುವತ್ತಿ' ಅಂದೆ. ಗೌಡ್ರು ಒಂದೂ ಅನ್ನಲಿಲ್ಲ, ಎರಡೂ ಅನ್ನಲಿಲ್ಲ. 'ಭರಮಾ ಹೌದ್ ಬಿಡಲೇ ನೀನು. ಮೇಯಿಸಿದ್ರ ನಿನ್ನಂಗ ಮೇಯಿಸಬೇಕು ಎತ್ತುಗುಳ. ಇದೇನ್ ಮಿಂಚು, ಇದೆಂಥಾ ಕಾಂತಿ...ಅಬ್ಬಬ್ಬಾ ಮೆಚ್ಚಿದೆ ಬಿಡು ನಿನ್ನ' ಅಂದರು. ನನಗೂ ಹುಕಿಯೋ ಹುಕಿ.

ಜಾತ್ರೀ ಸಮೀಪ ಬಂತು. ಚಕ್ಕಡಿ ಐಬುಗಳನ್ನೆಲ್ಲ ಹುಡುಕಿ ದುರಸ್ತಿ ಮಾಡಾಕ ಹತ್ತಿದ್ವಿ. ಉದ್ದಿಗಿ, ನಗಾ, ಅಚ್ಚು, ಹಳಿ ಹಾಕ್ಸೋದು, ಡಂಬರಗಿ ಬಿಗಿಯೋದು, ಮ್ಯಾಲ ಕೊಲ್ಲಾರಿ ಕಟ್ಟೋದು, ಅದರೊಳಗ ಸಣ್ಣ ಏಣಿ ಅಡ್ಡ ಬಿಗಿದು, ಅಲ್ಲಿ ಎತ್ತಿಗೆ ಬೇಕಾದ ಹೊಟ್ಟು ಮೇವು ದಾಸ್ತಾನು ಮಾಡೋದು ಹೀಂಗ ಒಂದ ಎರಡ ಅವಾಗಿನ ಕೆಲಸಾ?

ಜಾತ್ರಿಗೆ ಹೋಗಿ ಬರೋದು ಅಂದ್ರ ಐದು ದಿನದ ಹೊತ್ತು ಬೀಳೋದು. ಕಡಕಲ ರೊಟ್ಟಿ, ಚಟ್ನಿ, ಹಿಂಡಿ, ಮಾದ್ಲಿ ತರಕಾರಿ ಇವಿಷ್ಟು ಮನಿಯಿಂದ ಒಯ್ಯುತಿದ್ದ ಆಹಾರ ಪದಾರ್ಥ. ಮಕ್ಕಳು ಮರಿ ಎಲ್ಲಾ ಸೇರಿ ಒಂದು ಚಕ್ಕಡಿಯಲ್ಲಿ ಹತ್ರಿಂದ ಹನ್ನಂದ್ ಜನ ಹೋಗಬಹುದಾಗಿತ್ತು.

ಹೊಳೀ ಅಂದ್ರ ಆವಾಗ ಭಾರತ ಹುಣ್ಣೀವ್ಯಾಗೂ ಸೊಂಟಮಟ ನೀರು ಇರ್ತಿತ್ತು. ಹಂಗ ಸೆಳವೂ ಇರ್ತಿತ್ತು. ಹೊಳೀ ಒಂದು ದಂಡ್ಯಾಗ ಹರೀತಿತ್ತು. ಆದ್ರ ಇನ್ನೊಂದು ದಂಡಿವರೆಗೂ ಉಸುಕಿನ ರಾಶಿ ರಾಶಿ, ಆ ಉಸುಕಿನಾಗೂ ಚಕ್ಕಡಿ ಗಾಲಿ ಸಿಕ್ಕೋಳ್ತಿದ್ವು.

ಅಂತಿಂಥಾ ಎತ್ತು  ಆ ಹೊಳಿಯಾಗ ಚಕ್ಕಡಿ ಎಳೆಯೋದು ಕಷ್ಟ ಇತ್ತು. ಅದಕ ನಾವು ಜಾತ್ರಿಗೆ ಹೂಡೋ ಎತ್ತ ತಿಂಗಳೊಪ್ಪತ್ತು ಮೊದ್ಲಿದ್ದನ್ನ ಚೆನ್ನಾಗಿ ಮೇಯಿಸ್ತಿದ್ವಿ. ಈಗ ಬಿಡ್ರೀ ಹೊಳ್ಯಾಗ ಉಸುಕೂ ಇಲ್ಲ. ನೀರೂ ಇಲ್ಲ. ಜಾತ್ರೀ ಮುಂದ ಅಣೆಕಟ್ಟಿಂದ ಕುಡಿಯಾಕಂತ ನೀರು ಬಿಡ್ತಾರ. ಅವೂ ಬಂದ್ರ ಬಂದ್ವು, ಇಲ್ಲಾಂದ್ರ ಇಲ್ಲ. ಅವಾಗ ಏನಾತಂದ್ರ ನಾನೂ ಹಂಗಾಗಿ ಎತ್ತು ಚಂದ ಜ್ವಾಪಾನ ಮಾಡಿದ್ದೆ. ಏನ ಆಗಲಿ ಹೊಳೀನ ನಾನ ಮೊದ್ಲ ದಾಟಿಸಬೇಕು ಅನ್ನೋದೊಂದ್ ಛಲ ತಲ್ಯಾಗ ಹೊಕ್ಕ ಬಿಟ್ಟಿತ್ತು.

ಚೌಡದಾನಪುರ ದಾಟಿ ಹೊಳಿಗೆ ಚಕ್ಕಡಿ ಇಳದ್ವು. ನಾಕೈದು ಚಕ್ಕಡಿ ನಂತ್ರ ನಾವಿದ್ವಿ. ಉಸುಕಿನಾಗೇನ ನನ್ನ ಮುಂದಿನ ಎತ್ತು ಭರಭರ ಹೋದ್ವು. ಹೊಳೀ ನೀರಾಗ ಇಳೀತನ ಹಿಂದ ಮುಂದ ಮಾಡಾಕ ಹತ್ತಿದ್ವು. ಸ್ವಲ್ಪ ದೂರ ಅವ್ರ ಹಿಂದ ಹಿಂದ ಹೋದೆ. ಅಲ್ಲಿಂದ ಹೊಳಿ ಆಳ ಒಂದ ಮಟ್ಟ ಇರೋದ ತಿಳ್ಕೊಂಡನ, ನನ್ನ ಮುಂದಿನ ಚಕ್ಕಡಿ ಬಾಜುನ ಚಕ್ಕಡಿ ಓಡಿಸಿದೆ. ಈಗ ನನ್ನ ದಾರಿ ಖುಲ್ಲಾ ಆಗಿತ್ತು.  ಒಂದ ಒಂದ್ ಸಲ ಎರಡೂ ಎತ್ತಿನ  ಬೆನ್ನು ಸವರಿ ` ಮೈಲಾರಿ, ಕುರವತ್ತಿ' ಅಂದವನ ಬಾಲ ತಿರುವಿದೆ. ಅವಕೂ ಇದ ಬೇಕಿತ್ತು ಅನ್ನೋ ಹಂಗ, ಹಂಗ ಈಸ್ ಬಿದ್ದೋರಂಗ ಚಕ್ಕಡಿ ತಗಂಡ ಎದ್ದ ಬಿಟ್ವು.. ನೋಡ ನೋಡದ್ರಾಗ ನಮ್ ಚಕ್ಕಡಿ ಮೈಲಾರದ ದಂಡಿ ಸೇರಿತ್ತು.

ಹೊಳೀ ದಂಡಿಯಿಂದ ಗುಡಿಗೆ ಹೋಗೊ ದಾರಿ ಆಜುಬಾಜು ಹೊಲದ ರೈತರು, ಜಾತ್ರಿ ಬರೋದ್ರೊಳಗ ಹಿಂಂಗಾರಿ ಫೀಕು ತಕ್ಕೊಂಡು ತೆರವು ಮಾಡಿರ್ತಿದ್ರು. ಹೊಳಿಸಾಲು ಆದ್ರಿಂದ ಎಲ್ಲಾ ನೀರಾವರಿ ಹೊಲ. ದೊಡ್ದೊಡ್ಡ ಕಾಲುವೆ, ಒಡ್ಡು ಇರ್ತಿದ್ವು. ನಾವ್ ಇತ್ಲಾಗ ಹೊಳಿಗೂ, ಅತ್ಲಾಗ ಗುಡಿಗೂ ಸಮೀಪಾಗೊ ಹಂಗ ಗುಡಾರ ಹೊಡೀಬೇಕಿತ್ತು. ಅಲ್ಲೊಂದು ದೊಡ್ಡ ಒಡ್ಡು ಇತ್ತು. ಅದನ್ನ ದಾಟಸಲಾರದ ನಮ್ಮೋರು ಸುತ್ತರದ ಬರೋಣು ಅಂದ್ರು. ನಾವ್ ಹಂಗ್ ಸುತ್ತರದ ಬರೋದ್ರಾಗ ಬ್ಯಾರೆ ಊರೋರು ಬರೋ ಅವಕಾಶ ಇತ್ತು. ನಾನ್ ನಾಕ್ ಹುಡುಗ್ರಿಗೆ ಚಕ್ಕಡಿ ಹಿಂದ ಡಂಬರಗಿಗೆ  ಜೋತು ಬೀಳಾಕ ಹೇಳ್ದವನ` ಚಾ ಕುರವತ್ತಿ' ಎಂದೆ. ಹೇಳ್ತಿನಿ ಚಕ್ಕಡಿ ಒಡ್ಡ ದಾಟಿ ಕಾಲುವೆಕ್ ಬಿತ್ತು. ಮತ್ತೊಮ್ಮೆ `ಚಾ ಮೈಲಾರಿ ಅಂದೆ. ಕಾಲುವೆನೂ ದಾಟಿತ್ತು. ನಾವ ಮೊದ್ಲ ಆ ಜಾಗ ಹಿಡಿದ್ವಿ. 

ಆಮ್ಯಾಲ ಇವ್ರು ಸುತ್ತಾಕೆಂಡು ಬಂದ್ರು. `ಭರಮಾ, ಆಲೇ ಬಂದಿಯಲ್ಲಲೇ.. ಎಲ್ಲಾಸಿ ಬಂದಿ' ಅಂತ ಕೇಳಿದ್ರು. ನಾನು ಒಡ್ಡು ತೋರ್ಸಿದೆ. ಅದನ್ನ ನೋಡಿ ಅವ್ರು ಮಿಗಿ ಮೀರಿಧಾಂವ ಬಿಡಲೇ ನೀನು ಅಂದ್ರು. 

ಸ್ವಲ್ಪ ಹೊತ್ತಿಗೆ ಗೌಡ್ರು ಚಕ್ಕಡಿ ಬಂತು. `ಭರಮಣ್ಣ, ನೀ ಮುಕ್ಕಟ್ ಬಂದಿದ್ಕ ನಮಗ ಈ ಜಾಗ ಸಿಕ್ತು ನೋಡು. ಇಲ್ಲಾಂದ್ರ ನಾವು ಹಿಂದಿನ ಸಾಲಿಗೆ ಹೋಗಬೇಕಾಗಿತ್ತು. ಅಂತೂ ಅಂದ್ಕೋಂಡಿದ್ದ ಸಾಧಿಸೆ ಬಿಟ್ಟಿ ಮಗಾ ನೀನ್ ಅಂತ ಹುಬ್ಬು ಹಾರಿಸಿದ್ರು. ಅಲ್ಲೇ ಇದ್ದ ಫಕ್ಕೀರಪ್ಪಜ್ಜ ಈ ಸಲ ನೋಡ್ರಿ ಗೌಡ್ರ..`ಭರಮನೆತ್ತು ಹೊಳೀ ದಾಟಿದ್ವಲೇ ಫರಾಕ್ ' ಅಂತನ ಆಗೋದು ಕಾರ್ಣೀಕ ಅಂತ ಆಷಾಡಿ  ನಕ್ಕ. ಅದನ್ನ ಕೇಳಿ, ಎಲ್ರೂ ನಕ್ಕಿದ್ದೆ ನಕ್ಕಿದ್ದು.

ಭರಮಣ್ಣನ ಮೈಲಾರ ಜಾತ್ರಿ ಕತೀ ಕೇಳಿಕೆಂತ ನಾವು ಜಾತ್ರಿ ಮಾಡಿ ಬಂದಾಂಗಿತ್ತು. ಅವನ ಕಣ್ಣಾಗಿನ ಮಿಂಚಲ್ಲಿ ನನಗ ಬೇಂದ್ರೆ ಅಜ್ಜನ ಹಾಡು ನೆಪ್ಪಾತು.....‌‌‌..

`ಹರಗೋಣ ಬಾ ಹೊಲ ಹಸನಾಗಿ
ಬಿದ್ದದ ಹ್ಯಾಂಗೊ ಕಾಲ್‌ಕಸವಾಗಿ

ಬಿತ್ತಿದರ ಕಾಳು ಹನಿಹನಿಯಾಗಿ
ಬರ್ತಾಳ ತಾಯಿ ತೆನಿತೆನಿಯಾಗಿ
ನಂಬಿಗಿಲೆ ತುಂಬ್ಯದ ನಮ್ಮ ಬಾಳು
ನಂಬಿಗೆಲೆ ಬಿತ್ತೋಣ ನಮ್ಮ ಕಾಳು

ನಂಬಿಗೇಲೆ ದುಡೀತಾನ ಬಸವಣ್ಣ
ನಂಬಿಗ್ಯಾಗೈತಿ ಅವನ ಕಸುವಣ್ಣ
ಕಸುವಲೇ ಬೆಳೆಸೋಣ ಎತ್ತಗೋಳು
ಎತ್ತಲ್ಲ ಅವು ನಮ್ಮ ಮುತ್ತಗೋಳು

ನಂಬೆಣ್ಣಗ ಒಲಿದಾನೊ ಶಿವ ನೋಡೊ
ಇಂಬೀಲಿ ಬೇಡೋದ ಅಂವಗ ಬೇಡೊ
ಕೊಟ್ಟರ ಕೊಡ್ತಾನ ಶಿವನೆಲ್ಲಾ
ಕೊಡಾವ್ರ ಹೊಟ್ಟಿಮಾತ ಶಿವಬಲ್ಲಾ

ಹೊತ್ತಿಗ್ಯಾಗ ಬರಿ ಶಾಸ್ತ್ರದಾಧಾರ
ಕುತ್ತಿಗೀ ಮ್ಯಾಲೈತಿ ನೊಗಭಾರ
ನಂಬಿಗ್ಯಾಗ ಸೆಲೀತದ ಬಲ ಎಲ್ಲಾ
ನಂಬಗೀನ ಸೋರಿದರ ಬಲ ಇಲ್ಲಾ!