ಎಪಿಪಿ ಅಕ್ರಮ ಆಯ್ಕೆ ಪ್ರಕರಣ: ಮುಖ್ಯಮಂತ್ರಿ ಕೃಪೆಯಿಂದ ಪ್ರಮುಖ ಆರೋಪಿ ಸಿಕ್ಕಿಬಿದ್ದ ಜಾಗಕ್ಕೇ ವರ್ಗಾವಣೆ ? 

ಎಪಿಪಿ ಅಕ್ರಮ ಆಯ್ಕೆ ಪ್ರಕರಣ: ಮುಖ್ಯಮಂತ್ರಿ ಕೃಪೆಯಿಂದ ಪ್ರಮುಖ ಆರೋಪಿ ಸಿಕ್ಕಿಬಿದ್ದ ಜಾಗಕ್ಕೇ ವರ್ಗಾವಣೆ ? 

ಕೆಎಎಸ್ ಅಧಿಕಾರಿಗಳ ನೇಮಕಾತಿಯಲ್ಲಿನ ಅಕ್ರಮ ಫಲಾನುಭವಿಗಳ ಪರ ಮೈತ್ರಿ ಸರ್ಕಾರ ನಿಂತಿರುವ ಸಂಗತಿ ನಿಮಗೆ ಗೊತ್ತು. ಈಗ ಇದೇ ಸರ್ಕಾರ, ಸರ್ಕಾರಿ ಸಹಾಯಕ ಅಭಿಯೋಜಕರ ನೇಮಕಾತಿಯಲ್ಲಿ ತಮಗೆ ಇಷ್ಟ ಬಂದ ಅಭ್ಯರ್ಥಿಗಳು ಆಯ್ಕೆಯಾಗಲು ಅಕ್ರಮ ನಡೆಸಿರುವ ಆರೋಪಿಗಳ ಪರ ವಕಾಲತ್ತು ವಹಿಸಿದೆ. ಎಪಿಪಿಗಳ ನೇಮಕಕ್ಕಾಗಿ ನಡೆದಿದ್ದ ಪರೀಕ್ಷೆ ಮತ್ತು ಮೌಲ್ಯಮಾಪನ ಪ್ರಕ್ರಿಯೆಗಳಲ್ಲಿ ಗಂಭೀರ ಅಪರಾಧ ಎಸಗಿರುವ ಪ್ರಮುಖ ಆರೋಪಿಯೊಬ್ಬರ ಪರ 2ನೇ ಬಾರಿಗೆ ಟಿಪ್ಪಣಿ ಹಾಕಿರುವ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ಆತ ವರ್ಗಾವಣೆ ಬಯಸಿರುವ ಹಿಂದಿನ ಹುದ್ದೆಯಲ್ಲಿ ಪ್ರತಿಷ್ಠಾಪಿಸಲು ಹೊರಟಿದ್ದಾರೆ.  ಅವರ ಈ ನಡೆ ಅಕ್ರಮ ಫಲಾನುಭವಿಗಳ ಮೊಗದಲ್ಲಿ ಮಂದಹಾಸ ಮೂಡಿಸಿದಂತಾಗಿದೆ ಎಂದು ಜಿ.ಮಹಂತೇಶ್ ಹೇಳುತ್ತಾರೆ..
.
ಸರ್ಕಾರಿ ಸಹಾಯಕ ಅಭಿಯೋಜಕ(ಎಪಿಪಿ)ರ ಹುದ್ದೆಗೆ 2013-14 ನೇ ಸಾಲಿನಲ್ಲಿ ನಡೆದಿದ್ದ ಸ್ಪರ್ಧಾತ್ಮಕ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನದಲ್ಲಿ ನಡೆದಿರುವ ಗಂಭೀರ ಅಪರಾಧಗಳ ಕುರಿತು ನ್ಯಾಯಾಲಯದಲ್ಲಿ ವಿಚಾರಣೆ ಮುಂದುವರೆದಿದೆ. ಈ ಬೆಳವಣಿಗೆ ನಡುವೆಯೇ ಉತ್ತರ ಪತ್ರಿಕೆಗಳಲ್ಲಿನ ಅಂಕಗಳನ್ನು ತಿದ್ದುವುದು ಸೇರಿದಂತೆ ಇನ್ನಿತರೆ ಗಂಭೀರ ಅಪರಾಧ ಎಸಗಿರುವ ಆರೋಪಿಗಳ ವಿರುದ್ಧ  ಕಠಿಣ ಶಿಕ್ಷೆ ಕ್ರಮ ಕೈಗೊಳ್ಳಬೇಕಿದ್ದವರೇ ಆರೋಪಿಗಳ ರಕ್ಷಣೆಗೆ ನಿಂತಿದ್ದಾರೆ. 

ಇನ್ನು, ಯಾವ ಹುದ್ದೆಯಲ್ಲಿದ್ದುಕೊಂಡು ಅಪರಾಧ ಎಸಗಿದ್ದರೋ ಅದೇ ಹುದ್ದೆಗೆ ವರ್ಗಾವಣೆ ಮಾಡಲು ಸರ್ಕಾರಿ ಅಭಿಯೋಗ ಮತ್ತು ವ್ಯಾಜ್ಯಗಳ ಇಲಾಖೆಗೆ ಚುನಾಯಿತ ಜನಪ್ರತಿನಿಧಿಗಳು ಟಿಪ್ಪಣಿ ಹಾಕುತ್ತಿದ್ದಾರೆ. ಈ ಸಾಲಿನಲ್ಲೀಗ  ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಮುಂಚೂಣಿಯಲ್ಲಿದ್ದಾರೆ. ಆರೋಪಿಗಳು ವರ್ಗಾವಣೆ ಬಯಸಿರುವ ಹಿಂದಿನ  ಹುದ್ದೆಗಳಿಗೇ ವರ್ಗಾವಣೆ ಮಾಡಿ ಎಂದು ಟಿಪ್ಪಣಿ ಹಾಕುತ್ತಿರುವುದು ಅನುಮಾನಗಳಿಗೆ ಕಾರಣವಾಗಿದೆ. 

ಈ ಪ್ರಕರಣದಲ್ಲಿ ಕ್ರಿಮಿನಲ್ ಆರೋಪಕ್ಕೆ ಗುರಿಯಾಗಿ ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸುತ್ತಿರುವ ಪ್ರಮುಖ ಆರೋಪಿ ನಾರಾಯಣಸ್ವಾಮಿ ಪರ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು 2ನೇ ಬಾರಿಗೆ ಟಿಪ್ಪಣಿ ಹಾಕಿರುವುದನ್ನು 'ಡೆಕ್ಕನ್'ನ್ಯೂಸ್' ಇದೀಗ ಹೊರಗೆಡವುತ್ತಿದೆ.

ಈ ಟಿಪ್ಪಣಿ ಆಧರಿಸಿ ಒಳಾಡಳಿತ ಇಲಾಖೆ (ಪೊಲೀಸ್ ಸೇವೆಗಳು-ಬಿ) ಯ ಸರ್ಕಾರದ ಅಧೀನ ಕಾರ್ಯದರ್ಶಿ ಎ ವಿಜಯಕುಮಾರ್ ಅವರು ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆಗೆ ನಿರ್ದೇಶಕರಿಗೆ 2019ರ ಜೂನ್ 13ರಂದು ಪತ್ರ ಬರೆದು ಈ ಸಂಬಂಧ ಪ್ರಸ್ತಾವನೆ ಸಲ್ಲಿಸಲು ನಿರ್ದೇಶಿಸಿದ್ದಾರೆ. ಈ ಪತ್ರದ ಪ್ರತಿ 'ಡೆಕ್ಕನ್'ನ್ಯೂಸ್' ಗೆ ಲಭ್ಯವಾಗಿದೆ. 

ಒಳಾಡಳಿತ ಇಲಾಖೆ ಬರೆದಿರುವ ಪತ್ರದ ಪ್ರತಿ

ನಾರಾಯಣಸ್ವಾಮಿ ಅವರು ಸರ್ಕಾರಿ ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆಯಲ್ಲಿ ಆಡಳಿತಾಧಿಕಾರಿಯಾಗಿದ್ದ ಅವಧಿಯಲ್ಲಿಯೇ ಉತ್ತರ ಪತ್ರಿಕೆಗಳ ಮೌಲ್ಯಮಾಪನದಲ್ಲಿ ಅಕ್ರಮಗಳು ನಡೆದಿದ್ದವು. ಪ್ರಕರಣಕ್ಕೆ ಸಂಬಂಧಿಸಿದಂತೆ 2 ತಿಂಗಳು ಕಾಲ ಜೈಲು ಶಿಕ್ಷೆ ಅನುಭವಿಸಿದ್ದರಲ್ಲದೆ, ಆರೋಪಗಳಿಂದ ಮುಕ್ತಗೊಳಿಸುವ ಸಂಬಂಧ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಇವರ ಅರ್ಜಿ ಕುರಿತು ನ್ಯಾಯಾಲಯದಲ್ಲಿ ಈಗಲೂ ವಿಚಾರಣೆ ಮುಂದುವರೆದಿದೆ. ಈ ಹೊತ್ತಿನಲ್ಲೇ ನಾರಾಯಣಸ್ವಾಮಿ ಅವರನ್ನು ಸರ್ಕಾರಿ ಅಭಿಯೋಗ ಮತ್ತು ವ್ಯಾಜ್ಯಗಳ ಇಲಾಖೆಯ ಆಡಳಿತಾಧಿಕಾರಿ ಹುದ್ದೆಗೆ ವರ್ಗಾವಣೆ ಮಾಡಬೇಕು ಎಂದು ಸ್ವತಃ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಟಿಪ್ಪಣಿ ಹಾಕಿದ್ದರ ಹಿಂದೆ 'ವ್ಯವಹಾರ'ನಡೆದಿದೆಯೇ ಎಂಬ ಅನುಮಾನಗಳು ವಕೀಲರ ವಲಯದಲ್ಲಿ ವ್ಯಕ್ತವಾಗಿವೆ. 

ದೃಢಪಟ್ಟಿರುವ ಆರೋಪಗಳಿವು

ಪ್ರಕರಣದಲ್ಲಿ 2ನೇ ಆರೋಪಿಯಾಗಿರುವ ನಾರಾಯಣಸ್ವಾಮಿ ಅವರ ವಿರುದ್ಧ ಆರೋಪಗಳನ್ನು ಲೋಕಾಯುಕ್ತ ತನಿಖಾಧಿಕಾರಿಗಳು ದೃಢಪಡಿಸಿದ್ದಾರೆ. ಇವರ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆ 1988ರ, 201, 409, 465,468,471, 420, 120(ಬಿ)  ಪ್ರಕಾರ ಶಿಕ್ಷಾರ್ಹ ಅಪರಾಧ ಎಸಗಿದ್ದಾರೆ ಎಂದು ದೋಷಾರೋಪ ಪಟ್ಟಿಯಲ್ಲಿ ವಿವರಿಸಲಾಗಿದೆ.

'ಪರೀಕ್ಷೆ ಪ್ರಕ್ರಿಯೆ ಸಮಯದಲ್ಲಿ ಮೊದಲನೇ ಆರೋಪಿ ಜತೆ ಶಾಮೀಲಾಗಿ ಕೆಲವು ಅಭ್ಯರ್ಥಿಗಳಿಗೆ ಸಂಬಂಧಿಸಿದ ಉತ್ತರ ಪತ್ರಿಕೆಗಳಲ್ಲಿನ ಅಂಕಗಳನ್ನು ತಿದ್ದಿ, ಮೌಲ್ಯಮಾಪಕರ ಸಹಿಗಳನ್ನು ನಕಲು ಮಾಡಿದ್ದಾರೆ. ಮೌಲ್ಯಮಾಪಕರು ಅಂಕಗಳನ್ನು ಬರೆಯುವ ಸ್ಥಳದಲ್ಲಿ ಅಂಕಗಳ ಬರವಣಿಗೆ ಬರೆದಿರುವುದು ಮತ್ತು ತಿದ್ದಿರುವುದು ಎಫ್ಎಸ್ಎಲ್ ವರದಿಯಿಂದ ದೃಢಪಟ್ಟಿದೆ,' ಎಂಬ ಅಂಶ ಲೋಕಾಯುಕ್ತ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ದೋಷಾರೋಪ ಪಟ್ಟಿಯಿಂದ ತಿಳಿದು ಬಂದಿದೆ

ದೋಷಾರೋಪಣೆಯ ಪಟ್ಟಿಯ ಪ್ರತಿ 

ಅದೇ ರೀತಿ 'ಉತ್ತರ ಪತ್ರಿಕೆಗಳನ್ನು ಬದಲಾಯಿಸಿ, ಉತ್ತರ ಪತ್ರಿಕೆಗಳಲ್ಲಿ ಮೌಲ್ಯಮಾಪಕರು ಮೌಲ್ಯಮಾಪನ ಮಾಡಿದಂತೆ ಅಂಕಗಳನ್ನು ನೀಡಿ ಮೌಲ್ಯಮಾಪಕರು ಅಂಕಗಳನ್ನು ಬರೆಯುವ ಸ್ಥಳದಲ್ಲೇ ಅಂಕಗಳನ್ನು ಬರೆದಿದ್ದಾರೆ. ಮೌಲ್ಯಮಾಪಕರ ಮತ್ತು ಕೊಠಡಿ ಮೇಲ್ವಿಚಾಕರ ಸಹಿಗಳನ್ನು ನಕಲು ಮಾಡಿ ಬೇಜವಾಬ್ದಾರಿತನದಿಂದ ದುರ್ನಡತೆ ತೋರಿದ್ದಾರೆ. ತಮಗೆ ಇಷ್ಟ ಬಂದ ಅಭ್ಯರ್ಥಿಗಳು ಆಯ್ಕೆ ಆಗಲು ಅನುಕೂಲವಾಗುವಂತೆ ಹೆಚ್ಚಿನ ಅಂಕಗಳಿಗೆ ಬದಲಾಯಿಸುವ ಮೂಲಕ ಅಕ್ರಮ ಲಾಭ ಗಳಿಸಲು ಅಕ್ರಮ ಎಸಗಿರುವುದು ತನಿಖೆಯಲ್ಲಿ ಕಂಡು ಬಂದಿದೆ,' ಎಂಬ ಗಂಭೀರ ವಿಷಯವೂ ದೋಷಾರೋಪ ಪಟ್ಟಿಯಲ್ಲಿ ವಿವರಿಸಲಾಗಿದೆ. 

ಲೋಕಾಯುಕ್ತ ನ್ಯಾಯಾಲಯದ ನಿರ್ದೇಶನದ ಮೇರೆಗೆ ತನಿಖೆ ನಡೆಸಿದ್ದ ಲೋಕಾಯುಕ್ತ ಪೊಲೀಸರು, ನಾರಾಯಣಸ್ವಾಮಿ ಸೇರಿದಂತೆ ಉಳಿದ ಆರೋಪಿಗಳು ಎಸಗಿರುವ ಅಪರಾಧಗಳನ್ನು ದೃಢಪಡಿಸಿದ್ದಾರಲ್ಲದೆ, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಯನ್ನೂ ಸಲ್ಲಿಸುವ ಮೂಲಕ ಅಕ್ರಮಗಳನ್ನು ಅನಾವರಣಗೊಳಿಸಿದ್ದಾರೆ.