ಇರುವೆ ನೀನೇಕಿಲ್ಲಿರುವೆ !

ತೆಲುಗು ಮೂಲ: ಪೆದ್ದಿಂಟಿ ಅಶೋಕ್‍ಕುಮಾರ್ ಕನ್ನಡಕ್ಕೆ: ಎಂ.ಜಿ. ಶುಭಮಂಗಳ

ಇರುವೆ ನೀನೇಕಿಲ್ಲಿರುವೆ !

“ವ್ಯಕ್ತಿಯನ್ನು ಸಾಯಿಸಿದ ಇರುವೆ...! ನೊಣವೋ, ಸೊಳ್ಳೆಯೋ ಆದರೆ ಇರಬಹುದೇನೋ ಎಂದುಕೊಳ್ಳುತ್ತೇವೆ. ಇರುವೆ ತನ್ನ ವಿಚಿತ್ರ ವರ್ತನೆಯಿಂದ ವ್ಯಕ್ತಿಯನ್ನು ಸಾಯಿಸಿತೆಂದು ಎಲ್ಲೂ ಕೇಳಿಲ್ಲ ಅಲ್ಲವೇ! ಆದರೂ ಅದು ನಿಜವೇ. ಶ್ರಮಜೀವಿಯಾದ ಇರುವೆ ಗೃಹಿಣಿಯನ್ನು ಸಾಯಿಸಿದೆ. ನಂಬಿಕೆಯಿಲ್ಲದಿದ್ದರೆ ಇಂದು ಸಂಜೆ ಐದು ಗಂಟೆಗೆ ಪ್ರಸಾರವಾಗುವ ನಮ್ಮ ಇರುವೆ ನೀನೇಕಿಲ್ಲಿರುವೆ !ಕಾರ್ಯಕ್ರಮ ವೀಕ್ಷಿಸಿ. ಪಾಪುಲರ್ ಟಿವಿಯಲ್ಲಿ ನಿರೂಪಕಿ ಕುತೂಹಲ ಕೆರಳಿಸುತ್ತ ಹೇಳಿದ್ದನ್ನೇ ಮತ್ತೆ ಮತ್ತೆ ಹೇಳುತ್ತಿದ್ದಾಳೆ.

ವೀಕ್ಷಕರು ಇದೇನಪ್ಪ ವಿಚಿತ್ರ ಸುದ್ದಿ ಎಂದು ಬಾಯಿಬಿಟ್ಟುಕೊಂಡು ನೋಡುತ್ತಿದ್ದಾರೆ. ಅರ್ಧ ಗಂಟೆಗೊಮ್ಮೆ ಅದೇ ಪ್ರಕಟಣೆ. ಮನೆ, ಕಚೇರಿ, ರಸ್ತೆ ಹೀಗೆ ಎಲ್ಲಿ ನಾಲ್ಕಾರು ಮಂದಿ ಗುಂಪು ಕೂಡಿದರೂ ಇದೇ ಚರ್ಚೆ. ಒಬ್ಬರು ಅದು ಆಫ್ರಿಕಾ ಇರುವೆ ಎಂದು, ಮತ್ತೊಬ್ಬರು ಅಲ್ಲ ಹೊಸ ಇರುವೆ ಹುಟ್ಟಿರಬೇಕೆಂದು, ಇನ್ನು ಕೆಲವರು ಅದು ವೈರಸ್ ಇರುವೆ ಇರಬಹುದೇನೋ ಎಂದು ಹೀಗೆ ಒಬ್ಬೊಬ್ಬರು ಒಂದೊಂದು ರೀತಿ ಕತೆ ಹೆಣೆಯುತ್ತಿದ್ದಾರೆ. ಒಟ್ಟಾರೆ ಎಲ್ಲರೂ ಐದು ಗಂಟೆಗೆ ಟಿ.ವಿ. ಕಾರ್ಯಕ್ರಮ ನೋಡಲು ಕಾತರದಿಂದ ಕುರ್ಚಿಗೆ ಅಂಟಿಕೊಂಡು ಕುಳಿತಿದ್ದಾರೆ.

ಎಲ್ಲರೂ ಕಾದು ಕುಳಿತಿದ್ದ ಕಾರ್ಯಕ್ರಮದ ಆ ಘಳಿಗೆ ಬಂದೇಬಿಟ್ಟಿತು. ನಿರೂಪಕಿ ಸ್ಕ್ರೀನ್‍ನಲ್ಲಿ ಪ್ರತ್ಯಕ್ಷಳಾಗಿ ಕುತೂಹಲ ಕೆರಳಿಸಿದ್ದ ಕ್ಲಿಪಿಂಗ್‍ಗಳನ್ನೇ ಹಾಕುತ್ತ ಅದನ್ನೇ ತಾನೂ ಹಿನ್ನೆಲೆಯಲ್ಲಿ ಓದುತ್ತಿದ್ದಾಳೆ. ಸ್ವಲ್ಪ ಸಮಯದ ನಂತರ ಏರುಧ್ವನಿಯಲ್ಲಿ“ಅದೊಂದು ತುಂಬಾ ಒಳಭಾಗದ ಹೆಚ್ಚೇನು ಸೌಲಭ್ಯಗಳು ಕಾಣದ ಊರು. ಆ ಊರಿನಲ್ಲಿ ಮೇಕಲ ಪೋಚಯ್ಯನೆಂಬ ದಲಿನನೊಬ್ಬನಿದ್ದಾನೆ. ಆತನಿಗೆ ಒಂದು ಸಂಕಷ್ಟ ಎದುರಾಗಿದ್ದು, ಅದರಿಂದಾಗಿಯೇ ಆತ ಇಂದು ವಾರ್ತೆಯ ಕೇಂದ್ರಬಿಂದುವಾಗಿದ್ದಾನೆ. 

“ರವಿ..ರವಿ..ನನ್ನಧ್ವನಿ ಕೇಳಿಸುತ್ತಿದೆಯಾ..ರವಿ ಅಲ್ಲಿ ಏನು ನಡೆಯುತ್ತಿದೆ, ಇಷ್ಟಕ್ಕೂ ಆತನಿಗೆ ಎದುರಾಗಿರುವ ಕಷ್ಟವಾದರೂ ಏನು, ಆತ ಈಗ ಎಲ್ಲಿದ್ದಾನೆ” ಕೇಳಿದಳು ನಿರೂಪಕಿ. ರಿಪೋರ್ಟರ್ ಸ್ಕ್ರೀನ್‍ನಲ್ಲಿ ಪ್ರತ್ಯಕ್ಷವಾಗಿ“ಹೌದು ಅನಿತ..ನಾನು ಇಲ್ಲಿ ಒಂದು ಆಸ್ಪತ್ರೆಯ ಮುಂದೆ ಇದ್ದೇನೆ. ಪೋಚಯ್ಯನದು ಪಕ್ಕದ ಊರು. ವಾರದ ಹಿಂದೆ ಪೋಚಯ್ಯನ ಹೆಂಡತಿ ಈ ಆಸ್ಪತ್ರೆಯಲ್ಲಿಸಾವಿಗೀಡಾದಳು. ಆಕೆ ಸತ್ತಳೆಂದು ಎಲ್ಲರಂತೆ ಪೋಚಯ್ಯ ಸುಮ್ಮನೆ ಕೂರಲಿಲ್ಲ. ವೈದ್ಯರ ನಿರ್ಲಕ್ಷ್ಯವೇ ತನ್ನ ಹೆಂಡತಿಯ ಸಾವಿಗೆ ಕಾರಣ ಎಂದು ಜನವಾಣಿಗೆ ದೂರು ಸಲ್ಲಿಸಿದ್ದಾನೆ ಅನಿತಾ..” ಆತ ಇನ್ನೂ ಮಾತು ಮುಂದುವರಿಸುವ ವೇಳೆಗೆ “ನಂತರ ಏನಾಯಿತು ರವಿ.. ಪೋಚಯ್ಯನ ಕುರಿತು ಇನ್ನೇನಾದರೂ ಹೆಚ್ಚಿನ ಮಾಹಿತಿಇದೆಯಾ” ಕೇಳಿದಳು. 

“ಹೌದು ಅನಿತಾ ಆರ್ ಟಿಒ ಪೋಚಯ್ಯನ ದೂರನ್ನು ವೈದ್ಯಾಧಿಕಾರಿಗಳಿಗೆ ಕಳುಹಿಸಿದ್ದಾರೆ. ವೈದ್ಯಾಧಿಕಾರಿ ಪೋಸ್ಟ್ ಮಾರ್ಟಂ ರಿಪೋರ್ಟಿನಲ್ಲಿ ಆಸ್ಪತ್ರೆಗೆ ಬರುವ ವೇಳೆಗೇ ಆಕೆಯ ಪರಿಸ್ಥಿತಿ ಗಂಭೀರವಾಗಿತ್ತೆಂದು, ಕಲುಷಿತ ನೀರು ಕುಡಿದಿದ್ದರಿಂದ ಆಕೆ ಸಾವಿಗೀಡಾಗಿದ್ದಾಳೆ. ಇದು ವೈದ್ಯರ ನಿರ್ಲಕ್ಷ್ಯ ಅಲ್ಲವೇ ಅಲ್ಲಎಂದು ಬರೆದಿದ್ದಾರೆ ಅನಿತಾ..” ಹೇಳಿದನು. ವೀಕ್ಷಕರು ಕುತೂಹಲದಿಂದ ನೋಡುತ್ತಿದ್ದಾರೆ.“ರವಿ..ನಂತರ ಏನಾಯಿತು..ಪೋಚಯ್ಯ ಏನು ಮಾಡಿದ..”

“ಅನಿತಾ.. ಪೋಚಯ್ಯನ ಮನೆಯಲ್ಲಿ ಗ್ರಾಮಪಂಚಾಯಿತಿಯ ನಲ್ಲಿಯಿದೆ. ಅವರೆಲ್ಲಅದೇ ನೀರು ಕುಡಿಯುತ್ತಾರೆ. ಊರಿನಲ್ಲಿ ನಲ್ಲಿ ನೀರು ಬಿಡುವ ಬಾಲಮಲ್ಲು ತನ್ನ ಹೆಂಡತಿಯ ಸಾವಿಗೆ ಕಾರಣವೆಂದು ಪೋಚಯ್ಯನಿಗೆ ತಿಳಿದುಹೋಗಿದೆ. ಕೂಡಲೇ ಆತನ ಮನೆಯ ಮುಂದೆ ಧರಣಿ ಕುಳಿತು ಹಂತಕರನ್ನು ಶಿಕ್ಷಿಸಬೇಕೆಂದು ಪಟ್ಟುಹಿಡಿದಿದ್ದಾನೆ..”ಇನ್ನೂ ಹೇಳುತ್ತಿರುವಾಗಲೇ “ಓಕೆ ರವಿ.. ನಾನು ನಿನ್ನನ್ನು ಮತ್ತೆ ಸಂಪರ್ಕಿಸುತ್ತೇನೆ..”ಎನ್ನುತ್ತ ಲೈವ್‍ಕಟ್ ಮಾಡಿದ ಅನಿತ,“ಇದು ವಿಷಯ. ಪೋಚಯ್ಯ ಅಂಗವಿಕಲ, ಚಿಕ್ಕಂದಿನಲ್ಲೇ ಪೋಲಿಯೋಗೆ ತುತ್ತಾಗಿ ಆತನ ಎರಡು ಕಾಲಗಳು ಸ್ವಾದೀನ ಕಳೆದುಕೊಂಡಿವೆ. ಹೆಂಡತಿಯೇ ಕೂಲಿನಾಲಿ ಮಾಡಿ ಪತಿ, ಮಕ್ಕಳನ್ನು ಸಾಕುತ್ತಿದ್ದಳು. ಹೆಂಡತಿ ಸತ್ತುಹೋದ ಕಾರಣ ಪೋಚಯ್ಯನ ಜೀವನ ದುರ್ಭರವಾಗಿದೆ. ಹಂತಕರನ್ನು ಶಿಕ್ಷಿಸಬೇಕೆಂದು ಬಾಲಮಲ್ಲು ಮನೆಯ ಮುಂದೆ ಧರಣಿ ಕುಳಿತಿದ್ದಾನೆ. ಆ ವಿವರಗಳನ್ನು ವೀಕ್ಷಿಸೋಣ. ಈಗ ಒಂದು ಸ್ಮಾಲ್ ಬ್ರೇಕ್ ”ದಂಡಕ ಪಠಣೆಯಂತೆ ಹಾಡಿ ಮಾಯವಾದಳು. 

ಜನ ಇರುವೆಯನ್ನು ಮರೆತು ಕುತೂಹಲದಿಂದ ನೋಡುತ್ತಿದ್ದಾರೆ. ಮತ್ತೆ ಪ್ರತ್ಯಕ್ಷಳಾದ ಅನಿತ, ಕನ್ನಡ ಇಂಗ್ಲಿಷ್‍ನ್ನು ಬೆರೆಸಿ, “ಇದು ಮ್ಯಾಟರ್.. ಪೋಚಯ್ಯನ ಕತೆ ಕೇಳಿದರೆ ನೋವಾಗುತ್ತದೆಯಲ್ಲವೆ.. ಈಗ ಕಮಾನ್‍ಪುರ್ ನಿಂದ ನಮ್ಮ ರಿಪೋರ್ಟರ್ ಲೈನ್ ನಲ್ಲಿದ್ದಾರೆ. ಅಲ್ಲಿ ಏನು ನಡೆಯುತ್ತಿದೆಯೋ ಆತನನ್ನು ಕೇಳಿ ತಿಳಿದುಕೊಳ್ಳೋಣ..”ಎನ್ನುತ್ತ ಲೈವ್‍ಕನೆಕ್ಟ್ ಮಾಡಿದಳು.

ಸಿಗ್ನಲ್ ತೊಂದರೆಯಿಂದಾಗಿ ಸ್ಕ್ರೀನ್ ತುಂಬ ಚುಕ್ಕೆಗಳು, ಗುರ್ ಎಂದು ಶಬ್ದ. ಕೆಲವೇ ಕ್ಷಣಗಳಲ್ಲಿ ಲೈವ್‍ಕನೆಕ್ಟ್ ಆಯಿತು. ಒಂದು ಗುಡಿಸಲಿನ ಮುಂದೆ ರಿಪೋರ್ಟರ್, ಆತನ ಪಕ್ಕದಲ್ಲಿ ಮತ್ತೊಬ್ಬ ವ್ಯಕ್ತಿ ನಿಂತಿದ್ದಾನೆ.“ಆಂ.. ವೆಂಕನ್ನಾ.. ಕೇಳಿಸುತ್ತಿದೆಯಾ ಕೊಳಾಯಿ ಬಾಲಮಲ್ಲುಏನನ್ನುತ್ತಿದ್ದಾನೆ,” ಕೇಳಿದಳು ಅನಿತ. “ಆಂ.. ಅನಿತಾ.. ನಾನೀಗ ಬಾಲಮಲ್ಲು ಮನೆಯ ಮುಂದೆಯೇ ಇದ್ದೇನೆ. ಆತನೊಂದಿಗೇ ಮಾತನಾಡುತ್ತಿದ್ದೇನೆ,”ಎನ್ನುತ್ತ ಪಕ್ಕದಲ್ಲಿದ್ದ ವ್ಯಕ್ತಿಯನ್ನು“ಬಾಲಮಲ್ಲು ಅವರೇ ನಿಜಕ್ಕೆ ನಡೆದದ್ದೇನು. ನಿಮ್ಮ ಕಾರಣವಾಗಿಯೇ ತನ್ನ ಹೆಂಡತಿ ಸಾವಿಗೀಡಾದದ್ದು ಎಂದು ಮೇಕಲ ಪೋಚಯ್ಯ ಹೇಳುತ್ತಿದ್ದಾರೆ.. ಇದಕ್ಕೆ ನೀವೇನೆನ್ನುತ್ತೀರಿ..”ಎಂದು ಮೈಕ್ ನೀಡಿದನು.

ಬಾಲಮಲ್ಲು ಗಾಬರಿಯಿಂದ, “ಅಯ್ಯಾ.. ನನಗೇನೂ ಗೊತ್ತಿಲ್ಲ. ಕರೆಂಟ್‍ ಇರುವಾಗಲೇ ಟ್ಯಾಂಕ್‍ ತುಂಬಿಸುತ್ತೇನೆ. ದಿನಕ್ಕೆ ಒಂದುಗಂಟೆ ನೀರು ಬಿಡುತ್ತೇನೆ. ಒಮ್ಮೊಮ್ಮೆ ಮಧ್ಯರಾತ್ರಿ ಕರೆಂಟ್ ಬರುತ್ತದೆ. ರಾತ್ರಿಯಿಡೀ ನಿದ್ದೆಯಿರುವುದಿಲ್ಲ. ಅಷ್ಟು ಕಷ್ಟಪಟ್ಟು ಕೆಲಸ ಮಾಡಿದರೆ ನನಗೆ ಕೊಡುವ ಸಂಬಳ ಕೇವಲ ಎರಡು ಸಾವಿರ. ಒಂದು ದಿನ ನೀರು ಬಿಡದಿದ್ದರೆ ನನ್ನನ್ನೇ ಬೈಯ್ಯುತ್ತಾರೆ, ಮೋಟರ್ ಸುಟ್ಟುಹೋದರೂ, ಬೋರ್‍ನಲ್ಲಿ ನೀರಿಲ್ಲದಿದ್ದರೂ ನನ್ನನ್ನೇ ಬೈಯ್ಯುತ್ತಾರೆ. ಹಬ್ಬವಾದರೂ..”

ಹಾಗೇ ಹೇಳುತ್ತಿದ್ದವನನ್ನು, “ಬಾಲಮಲ್ಲು ಅವರೇ... ನಿಜಕ್ಕೆ ನಡೆದದ್ದೇನು.. ಪೋಚಯ್ಯನ ಹೆಂಡತಿ ಸತ್ತದ್ದು ಹೇಗೆ,” ಕೇಳಿದನು ವೆಂಕನ್ನ.ಬಾಲಮಲ್ಲುವಿಗೆ ಗಂಟಲು ಒಣಗುತ್ತಿದೆ. “ನನಗೇನು ಗೊತ್ತು ಸಾರ್.. ಈಶ್ವರನ ದೇವಸ್ಥಾನದ ಬಳಿ ದೊಡ್ಡ ಮೋರಿಯ ಬಳಿ ಕೊಳಾಯಿ ಪೈಪುಗಳು ಒಡೆದಿರುವುದು ಮಾತ್ರ ನಿಜವೇ. ಅದು ಪೋಚಯ್ಯನ ಮನೆಯ ಲೈನಿಗೆ ಹೋಗುತ್ತದೆ. ಅಲ್ಲಿಗೂ ಊರಿನಲ್ಲಿರುವ ಆಶಾ ಕಾರ್ಯಕರ್ತೆಗೆ ತಿಂಗಳಿನಿಂದ ಹೇಳುತ್ತಿದ್ದೇನೆ. ಏನಾದರೂ ಆದರೆ ನನ್ನ ತಲೆಗೆ ಬರುತ್ತದೆ ಎಂದು. ಯಾರಿಗಾದರೂ ಹೇಳಿ ರಿಪೇರಿ ಮಾಡಿಸುವಂತೆ ಎಷ್ಟು ಹೇಳಿದರೂ ಕೇಳಿಸಿಕೊಳ್ಳುತ್ತಿಲ್ಲ..”ಎಂದನು. 

ವೆಂಕನ್ನ ಮೈಕ್ ತೆಗೆದುಕೊಳ್ಳುತ್ತ, “ಬಾಲಮಲ್ಲು ಅವರೇ.. ಪೋಚಯ್ಯ ನಿಮ್ಮ ಮನೆಗೆ ಬಂದರಲ್ಲವಾ, ಆತ ಈಗ ಎಲ್ಲಿದ್ದಾರೆ..” ಕೇಳಿದನು.“ಅಯ್ಯಾ.. ತಪ್ಪು ನನ್ನದಲ್ಲ.. ಆಶಾ ಕಾರ್ಯಕರ್ತೆಯದು. ನೀರು ನೀಡುವುದಷ್ಟೆ ನನ್ನ ಕೆಲಸ. ಒಳ್ಳೆಯ ನೀರಾ ಅಲ್ಲವಾ ಎಂಬುದು ಆಕೆಯನ್ನೇ ಕೇಳಬೇಕು ಎಂದು ಹೇಳಿದೆ. ಅವನೀಗ ಆಕೆಯ ಮನೆಯ ಬಳಿ ಇದ್ದಾನೆ”ಎಂದನು. ವೆಂಕನ್ನ“ಅನಿತಾ.. ಇದು ಸಮಾಚಾರ. ಓವರ್ ಟು ಸ್ಟುಡಿಯೋ”ಎನ್ನುತ್ತ ಮುಗಿಸಿದನು.

ನಂತರ ಗಾಲಿ ಕುರ್ಚಿಯಲ್ಲಿ ಕುಳಿತು ಪೋಚಯ್ಯ ಹೋಗುತ್ತಿರುವಂತೆ, ಮಕ್ಕಳಿಬ್ಬರೂ ದೀನರಾಗಿ ನೋಡುತ್ತಿರುವಂತೆ ಕರುಳು ಚುರ್ ಎನ್ನುವಂತಹ ಹಿನ್ನೆಲೆ ಮ್ಯೂಸಿಕ್ ನೊಂದಿಗೆ ವಿಷುವಲ್ಸ್. ಪೋಚಯ್ಯನ ಹೆಂಡತಿಯ ಫೈಲ್ ಫೋಟೋಗಳು.. ಸ್ಕ್ರೀನ್‍ನಲ್ಲಿ ಪ್ರತ್ಯಕ್ಷಳಾದ ಅನಿತ, “ನೋಡುತ್ತಿದ್ದೀರಲ್ಲವಾ ವೀಕ್ಷಕರೇ ನ್ಯಾಯಕ್ಕಾಗಿ ಒಬ್ಬ ಸಾಮಾನ್ಯನ ಹೋರಾಟ. ಈಗ ಪೋಚಯ್ಯ ಆಶಾ ಕಾರ್ಯಕರ್ತೆ ಪುಷ್ಟಾ ಅವರ ಮನೆಯ ಮುಂದಿದ್ದಾರೆ. ಅಲ್ಲಿ ಏನು ನಡೆಯುತ್ತಿದೆಯೋ ತಿಳಿದುಕೊಳ್ಳುವ ಮೊದಲು ಒಂದು ಚಿಕ್ಕ ಬ್ರೇಕ್”ಎಂದಳು.

ಸ್ಕ್ರೀನ್‍ನಲ್ಲಿ ಸಾಕಷ್ಟು ಜಾಹೀರಾತುಗಳು ಹರಿದಾಡುತ್ತಿವೆ..ವೀಕ್ಷಕರು ಈಗ ಇರುವೆಯನ್ನು ಮರೆತು ಪೋಚಯ್ಯನಿಗಾಗಿ ಕಾಯುತ್ತಿದ್ದಾರೆ. “ವೆಲ್‍ಕಮ್‍ ಟು ಇರುವೆ ನೀನೇಕಿಲ್ಲಿರುವೆ!.. ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾಗಿವೆ. ಅಭಿವೃದ್ಧಿ ಕಾರ್ಯಕ್ರಮಗಳೆಂದು, ಪಂಚವಾರ್ಷಿಕ ಯೋಜನೆಗಳೆಂದು ಸರ್ಕಾರಗಳು ಬಡಾಯಿಕೊಚ್ಚುತ್ತಿದ್ದರೂ ಶ್ರೀಸಾಮಾನ್ಯನ ಜೀವನದಲ್ಲಿ ಮಾತ್ರ ಯಾವ ಬದಲಾವಣೆಯಿಲ್ಲ. ಜೀವನ ಹೋರಾಟದಲ್ಲಿ ಆತ ಸೋಲುತ್ತಲೇ ಇದ್ದಾನೆ. ಮೇಕಲ ಪೋಚಯ್ಯನಿಗೆ ನ್ಯಾಯ ಸಿಗುತ್ತದೆಯೇ ಎಂಬುದೇ ನಮ್ಮ ಮುಂದಿರುವ ಪ್ರಶ್ನೆ. ಆಶಾ ಕಾರ್ಯಕರ್ತೆ ಪುಷ್ಪ ಈಗ ಟೆಲಿಫೋನ್ ಸಂಪರ್ಕದಲ್ಲಿದ್ದಾರೆ. ಪೋಚಯ್ಯ ಅಲ್ಲಿ ಏನು ಮಾಡುತ್ತಿರುವರೋ ತಿಳಿದುಕೊಳ್ಳೋಣ” ಎಂದಳು.

‘ಹಲೋ..’ ಆಂ.. ಪುಷ್ಪ ಅವರೇ.. ನಾನು ಪಾಪುಲರ್ ಟಿ ವಿ ಯಿಂದ ಮಾತನಾಡುತ್ತಿದ್ದೇನೆ. ನಿಮ್ಮ ನಿರ್ಲಕ್ಷ್ಯದಿಂದ ಪೋಚಯ್ಯನ ಹೆಂಡತಿ ಸತ್ತುಹೋದಳೆಂದು ನಿಮ್ಮ ಮೇಲೆ ಆರೋಪ ನೀವೇನೆನ್ನುತ್ತೀರಿ” ಕೇಳಿದಳು ಅನಿತ. ಪುಷ್ಪ“ಹೂಂ.. ಆಶಾ ಕಾರ್ಯಕರ್ತರೆಂದರೆ ಎಲ್ಲರಿಗೂ ಕೇವಲ. ಗ್ರಾಮವನ್ನು ಸ್ವಚ್ಛವಾಗಿಡಬೇಕು, ನೀರಿನ ಟ್ಯಾಂಕ್‍ಗಳನ್ನು ತೊಳೆಸಬೇಕು, ಬೋರ್ ಗಳ ಸ್ಯಾನಿಟೇಷನ್ ಮಾಡಿಸಬೇಕು. ಗರ್ಭವತಿಯರನ್ನು, ಬಾಣಂತಿಯರನ್ನು ಆಸ್ಪತ್ರೆಗಳಿಗೆ ಕರೆದೊಯ್ಯಬೇಕು.ಈಗ ಸರ್ಕಾರಿ ಆಸ್ಪತ್ರೆಗೆ ಯಾರು ಬರುತ್ತಾರೆ, ಎಲ್ಲರೂ ಖಾಸಗಿ ಆಸ್ಪತ್ರೆಗಳಿಗೆ ಹೋಗುತ್ತಿದ್ದಾರೆ. ಅವರು ನಮ್ಮ ಬಳಿಗೆ ಕರೆದುಕೊಂಡು ಬನ್ನಿ ಎನ್ನುತ್ತಾರೆ, ಇವರು ಸರ್ಕಾರಿ ಆಸ್ಪತ್ರೆಗೆ ಬರುವುದಿಲ್ಲ ಎನ್ನುತ್ತಾರೆ. ಕಾಲರಾ ಬಂದರೂ ನಮಗೇ ಟೆನ್ಷನ್... ಬರ ಬಂದರೂ ನಮಗೇ ಟೆನ್ಷನ್. ಮಳೆಗಾಲ ಬಂದಾಗಲಂತೂ..” ಹೇಳುತ್ತಲೇ ಇದ್ದಾಳೆ.

“ಪುಷ್ಪಅವರೇ.. ವಿಷಯವನ್ನು ಬಿಟ್ಟು ಬೇರೇನೋ ಮಾತನಾಡುತ್ತಿದ್ದೀರಿ. ಮೊದಲು ಪೋಚಯ್ಯನ ಕುರಿತು ಹೇಳಿ”ಕೋಪದಿಂದ ಕೇಳಿದಳು ಅನಿತ.
“ಕೊಳಾಯಿ ಪೈಪು ಒಡೆದಿರುವುದು ನಿಜವೇ. ಈ ವಿಷಯವನ್ನು ನಮ್ಮ ಹೆಲ್ತ್ ಅಸಿಸ್ಟೆಂಟ್‍ಗೆ ಹೇಳಿದೆ. ಅತಿಸಾರಕ್ಕೆ ಔಷಧಿ ಕಳುಹಿಸುವಂತೆಯೂ ಹೇಳಿದೆ. ಅವರು ಏನೂ ಹೇಳಲಿಲ್ಲ. ಈ ತಿಂಗಳಂತೂ ಒಮ್ಮೆಯೂ ಊರಿಗೆ ಬಂದಿಲ್ಲ. ಒಳ್ಳೆಯ ನೀರಾ ಅಲ್ಲವಾ ಎಂದು ಗುರುತಿಸುವುದಷ್ಟೆ ನಮ್ಮ ಕೆಲಸ. ಔಷಧಿ ನೀಡುವುದು ಮಾತ್ರ ನಮ್ಮ ಕೆಲಸವಲ್ಲ. ಹೋಗಿ ಅವರ ಮನೆಯ ಮುಂದೆ ಕುಳಿತುಕೊಳ್ಳುವಂತೆ ಪೋಚಯ್ಯನಿಗೆ ಹೇಳಿದ್ದೇನೆ” ಫೋನ್‍ ಕಟ್‍ ಆಯಿತು. ಅನಿತ ಮತ್ತೆ ಎರಡು ಬಾರಿ ಪ್ರಯತ್ನಿಸಿದರೂ ಸಂಪರ್ಕಕ್ಕೆ ಸಿಗಲಿಲ್ಲ.

“ಸಾರಿ ಫೋನ್‍ ಕಟ್‍ ಆಗಿದೆ. ಈಗ ನಾವು ವಿಷಯಕ್ಕೆ ಬರೋಣ. ಪೋಚಯ್ಯನಿಗೆ ನಡೆಯಲು ಸಹ ಆಗುವುದಿಲ್ಲ. ಮನೆ, ಭೂಮಿ ಏನೂ ಇಲ್ಲ. ಆತ ಈ ವ್ಯವಸ್ಥೆಯ ವಿರುದ್ಧ ಗಟ್ಟಿಯಾಗಿ ಹೋರಾಟ ಮಾಡುತ್ತಿದ್ದಾನೆ. ಪ್ರತಿಯೊಬ್ಬರೂ ಬಹಳ ಸುಲಭವಾಗಿ ತಮ್ಮ ತಪ್ಪನ್ನು ಇತರರ ಮೇಲೆ ಹೊರಿಸಿ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಈ ಸಮಾಜದಲ್ಲಿ ಪೋಚಯ್ಯ ಎಲ್ಲಿಯವರೆಗೆ ಹೋರಾಡಿದ. ತಿಳಿದುಕೊಳ್ಳಬೇಕೆಂದರೆ ಕಮಾನ್‍ಪುರ್ ಹೆಲ್ತ್ ಅಸಿಸ್ಟೆಂಟ್ ಜೋಸೆಫ್‍ ಅವರನ್ನು ಸಂಪರ್ಕಿಸಲೇಬೇಕು. ಅದಕ್ಕೆ ಮೊದಲು ಒಂದು ಸ್ಮಾಲ್ ಬ್ರೇಕ್,” ಹೇಳಿ ಸೆಕೆಂಡುಗಳಲ್ಲಿ ಪ್ರತ್ಯಕ್ಷಳಾದಳು ಅನಿತ.
“ಜೋಸೆಫ್‍ಅವರುಯಾವುದೋ ಮೀಟಿಂಗ್ ನಲ್ಲಿದ್ದಾರಂತೆ. ವಾಟ್ಸಪ್ ವಾಯ್ಸ್ ರೆಕಾರ್ಡ್ ಕಳುಹಿಸಿದ್ದಾರೆ. ಅವರು ಏನು ಹೇಳುವರೋ ಕೇಳೋಣ..” ಎಂದಳು ಅನಿತ.

ಜೋಸೆಫ್‍ ಗಡುಸು ಧ್ವನಿಯಲ್ಲಿ, “ಪೈಪ್ ಲೀಕ್‍ ಆಗಿರುವುದು ನಿಜ. ಆಶಾ ಕಾರ್ಯಕರ್ತೆ ಹೇಳಿದ್ದೂ ವಾಸ್ತವವೇ. ಈ ವಿಷಯವನ್ನು ನಾನು ಕಾರ್ಯದರ್ಶಿಗೆ ದಿನವೂ ಹೇಳುತ್ತಲೇ ಇದ್ದೇನೆ. ನನಗೆ ನಾಲ್ಕು ಊರುಗಳ ಮೇಲ್ವಿಚಾರಣೆ ವಹಿಸಿದ್ದಾರೆ.ಎಲ್ಲೀಂತ ಓಡಾಡುವುದು, ಔಷಧಿ ಕೇಳಿದರೆ ನಾಳೆ, ನಾಳಿದ್ದು ಎನ್ನುತ್ತಾರೆ. ಮೇಲಿನಿಂದ ಬರದೆ ಇದ್ದರೆ ನಾವೆಲ್ಲಿಂದ ತರೋಣ. ಪೋಚಯ್ಯನಿಗೆ ನಾನು ಫೋನ್ ಮಾಡಿ ಹೇಳಿದ್ದೇನೆ. ಇದೆಲ್ಲ ಆ ಪಂಚಾಯಿತಿ ಕಾರ್ಯದರ್ಶಿಯ ನಿರ್ಲಕ್ಷ್ಯ ಎಂದು. ಪೈಪ್‍ ಒಡೆದಿದೆಯೆಂದು ಹೇಳುವುದಷ್ಟೆ ನನ್ನ ಕೆಲಸ. ಅದನ್ನು ರಿಪೇರಿ ಮಾಡಿಸುವುದು ಮಾತ್ರ ಆತನ ಕೆಲಸವೇ. ಹೋಗಿ ಅವರ ಮನೆ ಮುಂದೆ ಕುಳಿತುಕೊಳ್ಳುವಂತೆ ಹೇಳಿದ್ದೇನೆ. ಪೋಲಿಯೋ ಹನಿಗಳು ನಾವೇ, ಮೆದುಳು ಬಾವು ಬಂದರೂ ನಾವೇ, ಅತಿಸಾರಕ್ಕೂ ನಾವೇ, ಜ್ವರಕ್ಕೂ ನಾವೇ.. ಹುಟ್ಟಿದರೂ ನಾವೇ..”

ರೆಕಾರ್ಡ್ ಕಟ್ ಮಾಡಿ ಸ್ಕ್ರೀನ್‍ನಲ್ಲಿ ಬಂದ ಅನಿತ, “ಇದು ಜೋಸೆಫ್‍ಅವರ ವಾದ. ಪೋಚಯ್ಯನ ಹೆಂಡತಿ ಸಾವಿಗೆ ಗ್ರಾಮ ಪಂಚಾಯಿತಿ ಕಾರ್ಯದರ್ಶಿಯೇ ಕಾರಣ ಎನ್ನುತ್ತಿದ್ದಾರೆ. ಈಗ ಕಮಾನ್‍ಪುರ್ ಸೆಕ್ರೆಟರಿ ರವಿಚಂದ್ರ ಅವರನ್ನು ಕೇಳಿದರೆ ಈ ಸಮಸ್ಯೆಗೆ ಗತಿ ಕಾಣಿಸಹುದು. ರವಿಚಂದ್ರ ಅವರು ಸಂಪರ್ಕದಲ್ಲಿದ್ದಾರೆ. ವಿಷಯವೇನೆಂದು ಅವರನ್ನೇ ಕೇಳಿ ತಿಳಿದುಕೊಳ್ಳೋಣ..”ಎಂದಳು ಅನಿತ. “ರವಿಚಂದ್ರ ಅವರೇ.. ಪೋಚಯ್ಯನ ಹೆಂಡತಿ ಸಾವಿಗೆ ನೀವೇ ಕಾರಣ ಎನ್ನುತ್ತಿದ್ದಾರೆ. ನೀವೇನೆನ್ನುತ್ತೀರಿ..” ಕೇಳಿದಳು ಅನಿತ. ಫೋನ್ ಸಿಗ್ನಲ್ ತೊಂದರೆಯಿಂದಾಗಿ ಧ್ವನಿ ಸ್ಪಷ್ಟವಾಗಿ ಕೇಳಿಸುತ್ತಿಲ್ಲ, ಕರೆ ಕಟ್‍ಆಯಿತು. ‘ಸಾರಿ ಫಾರ್ ದ ಡಿಸ್ಟರ್ಬ್’ಎನ್ನತ್ತ ಮತ್ತೆ ಫೋನ್ ಸಂಪರ್ಕಕ್ಕೆ ಪ್ರಯತ್ನಿಸಿದಾಗ ಸ್ಪಷ್ಟವಾಗಿ ಕೇಳಿಸುತ್ತಿದೆ. “ಊಂ.. ಹೇಳುತ್ತಾರೆ.. ಹೇಳದೆ ಇನ್ನೇನು ಮಾಡುತ್ತಾರೆ, ಹೇಳದಿದ್ದರೆ ಆಶ್ಚರ್ಯಪಡಬೇಕೇ ಹೊರತು ಹೇಳಿದರೆ ಅಲ್ಲ. ಮನೆಯಲ್ಲಿ ನಲ್ಲಿ ನೀರು ಬರದಿದ್ದರೂ ಸೆಕ್ರೆಟರಿ, ಮನೆ ಮುಂದೆ ಮೋರಿಕಟ್ಟಿಕೊಂಡರೂ ಸೆಕ್ರೆಟರಿ.. ಪಿಂಚಣಿ ಬರದಿದ್ದರೂ ಸೆಕ್ರೆಟರಿ.. ಅಕ್ಕಿ ಬರದಿದ್ದರೂ ಸೆಕ್ರೆಟರಿ.. ಮನೆಯಲ್ಲಿ ಬೆಕ್ಕು ಸತ್ತರೂ ಸೆಕ್ರೆಟರಿ.. ಮಗು ಹುಟ್ಟಿದರೂ ಸೆಕ್ರೆಟರಿ..”ಎಂದು ಉದ್ದಕ್ಕೂ ಹೇಳುತ್ತಿರುವಾಗ ತಡೆದ ಅನಿತ“ರವಿಚಂದ್ರ ಅವರೇ.. ನೀವು ಪ್ರಜೆಗಳ ಕ್ಷೇಮವನ್ನು ನೋಡಿಕೊಳ್ಳ ಬೇಕಾಗಿರುವವರು ಅಷ್ಟು ನಿರ್ಲಕ್ಷ್ಯವಾಗಿರಬಹುದೇ? ನಿಮ್ಮ ಕಾರಣವಾಗಿ ಒಂದು ತುಂಬು ಪ್ರಾಣ ಹೋಗಿದೆ. ಒಂದು ಕುಟುಂಬ ಬೀದಿಗೆ ಬಿದ್ದಿದೆ,”ಕೋಪದಿಂದ ಕೇಳಿದಳು ಅನಿತ.ನಿಧಾನವಾಗಿ ಆದರೆ ಸೂಕ್ಷ್ಮವಾಗಿ, “ನೋಡಮ್ಮಾ.. ಬಾಗಿಲಲ್ಲಿ ನಾಯಿ ಸತ್ತರೆ ಮೂಗು ಮುಚ್ಚಿಕೊಂಡು ಬಾಗಿಲು ಹಾಕಿಕೊಳ್ಳುತ್ತಾರೆ ಹೊರತು, ತೆಗೆದು ದೂರ ಬಿಸಾಡುವುದಿಲ್ಲ. ಸಫಾಯಿಗಳೇ ಬಂದು ತೆಗೆಯಬೇಕು. ಮನೆ ಮುಂದೆ ಮೋರಿಕಟ್ಟಿ ಹೊಡೆದುಕೊಂಡು ಗಬ್ಬು ನಾರುತ್ತಿದ್ದರೂ ನೋಡುತ್ತಾರೇ ಹೊರತು ಮುಟ್ಟುವುದಿಲ್ಲ, ತೆಗೆಯುವುದಿಲ್ಲ. ಅದಕ್ಕೂ ಸಫಾಯಿ ಬರಬೇಕಾದ್ದೇ. ಮನೆ ಗುಡಿಸಿ ಕಸವನ್ನು ಮನೆಮುಂದೆ ಹಾಕುತ್ತಾರೇ ಹೊರತು ದೂರ ಹಾಕುವುದಿಲ್ಲ. ಅದಕ್ಕೆ ಕಸದಗಾಡಿ ಬರಬೇಕು. ಒಬ್ಬರಿಗಾದರೂ ಜವಾಬ್ದಾರಿ ಇರುವುದಿಲ್ಲ”.

“ರವಿಚಂದ್ರ ಅವರೇ.. ಒಬ್ಬರಿಗೆ ಜವಾಬ್ದಾರಿಯನ್ನು ನೆನಪು ಮಾಡುವ ಮೊದಲು ನೀವು ಜವಾಬ್ದಾರಿಯಿಂದಿರಬೇಕು ಅಲ್ಲವೇ. ಆ ಪೈಪನ್ನು ನೀವು ಏಕೆ ರಿಪೇರಿ ಮಾಡಿಸಬಾರದು. ಅದರಿಂದಾಗಿಯೇ ಒಂದು ತುಂಬು ಪ್ರಾಣ ಹೋಯಿತು,”ಕೋಪದಿಂದ ಕೇಳಿದಳು ಅನಿತಾ.“ನಾನು ದಿನವೂ ಸರ್‍ಪಂಚ್‍ ಅವರಿಗೆ ಪ್ರತಿದಿನ ಹೇಳುತ್ತಲೇ ಇದ್ದೇನೆ. ಅವರು ಗ್ರಾಮ ಪಂಚಾಯಿತಿಯಲ್ಲಿ ತೀರ್ಮಾನ ತೆಗೆದುಕೊಂಡು ಆ ನಿಧಿಯಲ್ಲಿ ರಿಪೇರಿ ಮಾಡಿಸಬೇಕು. ಅವರು ಮಾಡಲಿಲ್ಲ. ಅದು ಅವರ ಕೆಲಸ, ನಾನೇನು ಮಾಡುವುದು. ಸರ್‍ಪಂಚ್‍ ಅವರಿಗೆ ಹೇಳುವುದಷ್ಟೆ ನನ್ನ ಜವಾಬ್ದಾರಿ. ನಾನೇ ಕಾರಣ ಎಂದು ನೀವು ಹೇಗೆ ಹೇಳುತ್ತೀರಿ..”ಆತನ ಮಾತಿನಲ್ಲಿ ಅಸಹನೆ ಎದ್ದು ಕಾಣುತ್ತಿತ್ತು.

“ಇಷ್ಟಕ್ಕೂ ಪೋಚಯ್ಯ ಆತನ ಮಕ್ಕಳು ಎಲ್ಲಿದ್ದಾರೆ..”“ಎಲ್ಲಿರುತ್ತಾರೆ.. ಸರ್‍ಪಂಚ್ ಮನೆಯ ಮುಂದೆಯೇ. ಅಲ್ಲಿ ಹೋಗಲು ಹೇಳಿದೆ. ಜಗತ್ತಿನಲ್ಲಿ ಯಾವುದು ಅದಷ್ಟಕ್ಕದೇ ನಮ್ಮ ಮುಂದೆ ಬರುವುದಿಲ್ಲ. ಕೇಳದಿದ್ದರೆ ಅಮ್ಮನೂ ತುತ್ತು ಇಕ್ಕುವುದಿಲ್ಲ. ಇಟ್ಟರೂ ಕಲೆಸಿ ಇಡುವಳೇ ಹೊರತು, ಅಗೆದು ಇಡುವುದಿಲ್ಲ. ಕೆಲವು ಕೆಲಸಗಳನ್ನು ನಾವಾಗಿಯೇ ಮಾಡಿಕೊಳ್ಳಬೇಕು. ಒಬ್ಬರ ಮೇಲೆ..” ಫೋನ್‍ಕಟ್ ಮಾಡಿದಳು ಅನಿತ.ನಗುತ್ತ“ಹೀಗೇ ಮಾತನಾಡಿದರೆ ಇಡೀ ಭಗವದ್ಗೀತೆ ಹೇಳುವಂತಿದ್ದಾರೆ. ನಾವು ವಿಷಯಕ್ಕೆ ಬರೋಣ. ಪೋಚಯ್ಯ ಈಗ ಎಲ್ಲಿರುವನೋ ತಿಳಿದಿದೆ. ಸರ್‍ಪಂಚ್‍ ಗ್ರಾಮಕ್ಕೆ ತಂದೆಯಿದ್ದಂತೆ. ಇಲ್ಲಾದರೂ ಪೋಚಯ್ಯನಿಗೆ ನ್ಯಾಯ ಸಿಗುತ್ತದೆಯೋ ಇಲ್ಲವೋ ನೋಡೋಣ. ಈಗೊಂದು ಸ್ಮಾಲ್ ಬ್ರೇಕ್”ಎಂದು ಮಾಯವಾದಳು.

ಅನಿತ ಮತ್ತೆತೆರೆ ಮೇಲೆ ಪ್ರತ್ಯಕ್ಷವಾಗುವವರೆಗೂ ಯಾರೂ ಕಣ್ಣರೆಪ್ಪೆ ಮುಚ್ಚಲಿಲ್ಲ, ಚಾನೆಲ್ ಬದಲಾಯಿಸಲಿಲ್ಲ. ತೆರೆಯಲ್ಲಿ ಕಾಣಿಸಿಕೊಂಡ ತಕ್ಷಣ, “ಇದುಪ್ರಜೆಗಳ ಕ್ಷೇಮಾಭಿವೃದ್ಧಿ ರಾಜ್ಯ. ಆದರೂ ಕುಡಿಯಲು ಶುದ್ಧ ನೀರು ನೀಡದ ಪರಿಸ್ಥಿತಿ. ತಪ್ಪು ನಡೆದರೆ ಸರಿಪಡಿಸಲಾಗದ ಪರಿಸ್ಥಿತಿ. ನ್ಯಾಯ ಕೇಳಿದರೆ ಉತ್ತರವಿಲ್ಲದ ಪರಿಸ್ಥಿತಿ. ಲೋಪ ಇರುವುದೆಲ್ಲಿ. ಇದುಒಬ್ಬ ಪೋಚಯ್ಯನ ಸಮಸ್ಯೆ ಅಲ್ಲ. ನಮ್ಮೆಲ್ಲರ ಸಮಸ್ಯೆ. ಯಾವಾಗಲಾರದರೂಒಮ್ಮೆ ನಮಗೂ ಎದುರಾಗಬಹುದಾದ ಸಮಸ್ಯೆ. ಈಗ ಕಮಾನ್‍ಪುರ್‍ಗ್ರಾಮ ಸರ್‍ಪಂಚ್‍ಕೊಂಡಲರಾವು ನಮ್ಮ ಸ್ಟುಡಿಯೋದಲ್ಲಿದ್ದಾರೆ. ಏನು ನಡೆಯಿತೆಂದು ಅವರನ್ನೇ ಕೇಳೋಣ..”ಎನ್ನುತ್ತಿದ್ದಂತೆ ಸ್ಕ್ರೀನ್ ಬದಲಾಯಿತು.

ಅನಿತ, ಕೊಂಡಲರಾವು ಇಬ್ಬರೂ ಕುರ್ಚಿಯಲ್ಲಿ ಕುಳಿತಿದ್ದಾರೆ. ಅನಿತ ಗಂಟಲು ಸರಿಪಡಿಸಿಕೊಳ್ಳುತ್ತ “ಕೊಂಡಲರಾವು ಅವರೇ.. ಹೇಳಿ, ಇದಕ್ಕೆ ಕಾರಣ ನೀವೇ ಎನ್ನುತ್ತಿದ್ದಾರೆ, ನೀವೇನೆನ್ನುತ್ತೀರಿ?” ಕೇಳಿದಳು.

ಕೊಂಡಲರಾವು ವ್ಯಂಗ್ಯವಾಗಿ ನಕ್ಕು, “ನರವಿಲ್ಲದ ನಾಲಿಗೆ ಏನಾದರೂ ಆಡುತ್ತದೆ. ಸರ್‍ಪಂಚ್ ಗೆ ತಿಂಗಳಿಗೆ ಸಾವಿರಾರು ರುಪಾಯಿ ಸಂಬಳ ಬರುತ್ತದೆಯಾ ಏನು? ಎಲ್ಲಿಂದ ತರೋಣ. ಗ್ರಾಮಪಂಚಾಯಿತಿಯಲ್ಲಿಒಂದು ಪೈಸೆ ಉಳಿತಾಯ ಇಲ್ಲ.ಯಾವುದೇ ನಿಧಿ ಕೂಡ ಬಂದಿಲ್ಲ. ಈಗಾಗಲೇ ನಾನು ಒಂದು ಲಕ್ಷ ಸ್ವಂತವಾಗಿಖರ್ಚು ಮಾಡಿದ್ದೇನೆ. ಹೋದ ತಿಂಗಳು ರೆಡ್ಡಿ ಬೀದಿಯನಲ್ಲಿ ಪೈಪು ಒಡೆದಿತ್ತು. ಹೀಗೇ ಅವರು ಮನೆ ಮುಂದೆ ಕುಳಿತರು. ದೇವರೇ ಎಂದುಕೊಳ್ಳುತ್ತ ಜೇಬಿನಿಂದ ಹಾಕಿದೆ. ನೀರಿಲ್ಲವೆಂದು ಗೌಡರ ಬೀದಿಯವರೆಲ್ಲ ಒಟ್ಟಾಗಿ ಬಿಂದಿಗೆ ಹಿಡಿದು ಮನೆಮುಂದೆ ದಾಂಗುಡಿ ಇಟ್ಟರು. ಅದಕ್ಕೂ ಕೈಯಿಂದ ಖರ್ಚು ಹಾಕಿ ಬೋರ್‍ವೆಲ್ ಹಾಕಿಸಿದೆ..”ಕೊಂಡರಾವು ಹೇಳುತ್ತಿರುವಾಗಲೇ“ರೆಡ್ಡಿಗಳು, ಗೌಡರಿಗೇ ಹೊರತು ಉಳಿದವರಿಗೆ ಮಾಡಿಸುವುದಿಲ್ಲವಾ” ಕೇಳಿದಳು ಅನಿತ. ಬೆಚ್ಚಿಬೀಳುತ್ತ “ಆಂ.. ಅಲ್ಲ.. ಎಲ್ಲರಿಗೂ ಮಾಡಿಸುತ್ತೇವೆ. ಆದರೆ, ಕೆಲವು ನಮ್ಮಅಧೀನಕ್ಕೆ ಬರುವುದಿಲ್ಲ. ಅದು ನಾವು ಮಾಡಬಾರದು. ಮಾಡಿದರೂ ಬಿಲ್ ಬರೆಯುವ ಹಾಗಿಲ್ಲ. ಉದಾಹರಣೆಗೆ ಪೋಚಯ್ಯನ ಪೈಪ್ ಲೈನ್ ತೆಗೆದುಕೊಳ್ಳೋಣ. ಅದು ಕಾಂಟ್ರ್ಯಾಕ್ಟರ್ ಜವಾಬ್ದಾರಿ. ಆರು ತಿಂಗಳ ಹಿಂದೆ ಆತನೇ ಗುತ್ತಿಗೆ ತೆಗೆದುಕೊಂಡು ಮಾಡಿದ್ದಾನೆ. ವರ್ಷದವರೆಗೆ ಏನೇ ರಿಪೇರಿಗಳಿದ್ದರೂ ಆತನೇ ಮಾಡಿಸಬೇಕು. ಸೆಕ್ರೆಟರಿ ಹೇಳಿದ ಕೂಡಲೇ ಪೈಪ್‍ ರಿಪೇರಿ ಮಾಡಿಸುವಂತೆ ಫೋನ್ ಮಾಡುತ್ತಿದ್ದೇನೆ. ಆತ ಕೇಳಿಸಿಕೊಳ್ಳುತ್ತಲೇ ಇಲ್ಲ..”“ಯಾಕೆ ಕೇಳುತ್ತಿಲ್ಲ? ಮಾಡಿಸಬೇಕಾದ್ದು ಅವರ ಜವಾಬ್ದಾರಿ ಅಲ್ಲವಾ!” ಕೇಳಿದಳು ಅನಿತ.’

“ಹೌದು ಅವರದ್ದೇ, ಆದರೆ ಏನು ಮಾಡೋಣ. ಅಧಿಕಾರ ಪಕ್ಷದ ಕುತಂತ್ರ. ನಾವು ವಿರೋಧ ಪಕ್ಷದಲ್ಲಿದ್ದೇವೆ. ಅವರು ಅಧಿಕಾರ ಪಕ್ಷದಲ್ಲಿದ್ದಾರೆ. ನಾವು ಹೇಳಿದರೆ ಕೇಳುತ್ತಾರಾ. ಮೊದಲೇ ಆತ ಶಾಸಕರ ಕಡೆಯ ವ್ಯಕ್ತಿ. ಆದರೂ ಅವರು ತಾನೆ ಏನು ಮಾಡುತ್ತಾರೆ.. ಬೋರ್‍ಕೊರೆ ಯುವವರು, ಪೈಪ್‍ಲೈನ್ ಹಾಕಿಸಿಕೊಳ್ಳುವವರು ಎಚ್ಚರಿಕೆಯಿಂದ ಹಾಕಿಸಿಕೊಳ್ಳಬೇಕಲ್ಲವೇ. ಇಷ್ಟಬಂದಂತೆ ಎಲ್ಲೆಂದರಲ್ಲಿ ರಸ್ತೆ ಅಗೆಯುತ್ತಾರೆ. ಕೇಜ್ ವ್ಹೀಲ್‍ನಲ್ಲಿ ಜೋರಾಗಿ ಟ್ರ್ಯಾಕ್ಟರ್ ಓಡಿಸುತ್ತಾರೆ. ನಮ್ಮ ಮಾತು ಕೇಳಿದರಲ್ಲವಾ..”ಕೊಂಡಲರಾವು ಹೇಳುತ್ತಲೇ ಹೋದಾಗ“ಇಷ್ಟಕ್ಕೂ ಈಗ ಪೋಚಯ್ಯ ಎಲ್ಲಿದ್ದಾನೆ? ಆತನಿಗೆ ನ್ಯಾಯ ಸಿಗುತ್ತದೆ ಎನ್ನುತ್ತೀರಾ?”

ಕೊಂಡಲರಾವ್ ನಗುತ್ತ“ತಪ್ಪದೆ ಸಿಗುತ್ತದೆ. ನಾವೆಲ್ಲ ಪೋಚಯ್ಯನಿಗೆ ನ್ಯಾಯ ಸಿಗುವವರೆಗೂ ಹೋರಾಡುತ್ತೇವೆ. ಇದಕ್ಕೆ ಹೊಣೆ ಆ ಕಾಂಟ್ರ್ಯಾಕ್ಟರ್ ಮತ್ತು ಆತನಿಗೆ ಆ ಕೆಲಸ ನೀಡಿದ ಈ ಸರ್ಕಾರ. ಆತನ ಮನೆಮುಂದೆ ಧರಣಿ ಮಾಡುವಂತೆ ಪೋಚಯ್ಯನನ್ನು ಕಳುಹಿಸಿದ್ದೇನೆ. ನಮ್ಮ ಕೆಲವು ಕಾರ್ಯಕರ್ತರನ್ನು ಜೊತೆಗೆ ಕಳುಹಿಸಿದ್ದೇನೆ. ಕಾಂಟ್ರ್ಯಾಕ್ಟರ್ ನ್ನು ಫೋನಿನಲ್ಲಿ ಮಾತನಾಡಿದ್ದೇನೆ. ಈ ಹೊತ್ತಿಗೆ ಸಮಸ್ಯೆ ಬಗೆಹರಿದಿರಬಹುದು.
ನಿಮ್ಮ ದೃಷ್ಟಿಯಲ್ಲಿ ಪೋಚಯ್ಯ ಮಾಡುತ್ತಿರುವ ಹೋರಾಟ ಸರಿಯೇ?” ಕೇಳಿದಳು ಅನಿತ.

“ನೂರಕ್ಕೆ ನೂರು ಸರಿ... ಪೋಚಯ್ಯ ತನ್ನ ಕಷ್ಟ ತಾನು ಪಡುತ್ತಜೀವನ ನಡೆಸುತ್ತಿರುವವನು. ಅಂತಹ ವ್ಯಕ್ತಿ ಇಷ್ಟು ಗಟ್ಟಿಯಾಗಿ ಹೋರಾಡುತ್ತಿದ್ದಾನೆಂದರೆ, ಆತನನ್ನು ನೋಡಿ ನಾವು ಕಲಿತು ಕೊಳ್ಳಬೇಕು. ಅಷ್ಟೇ ಅಲ್ಲ ನಾಳೆದಿನ ಎಲ್ಲಿ ಏನು ಅನ್ಯಾಯ ನಡೆದರೂ ಪೋಚಯ್ಯನನ್ನು ಸ್ಫೂರ್ತಿಯಾಗಿ ತೆಗೆದುಕೊಂಡು ಹೋರಾಡಬೇಕು. ಪೋಚಯ್ಯಜಯ ಗಳಿಸಿದರೆ ಕೋಟ್ಯಂತರ ಜನ ಸ್ಫೂರ್ತಿ ಹೊಂದುತ್ತಾರೆ. ಆತ ನಿಶ್ಚಿತವಾಗಿ ಗೆಲುವು ಸಾಧಿಸುತ್ತಾನೆ. ಈ ಸರ್ಕಾರಕ್ಕೆ ಬುದ್ಧಿ ಹೇಳುತ್ತಾನೆ. ಬರುವ ಚುನಾವಣೆಯಲ್ಲಿ ಪ್ರಜೆಗಳೆಲ್ಲ..” ಏನೋ ಹೇಳಹೊರಟನು ಕೊಂಡಲರಾವು.

“ಧನ್ಯವಾದಗಳು ಕೊಂಡಲರಾವು ಅವರೇ.. ನೀವು ನಮ್ಮ ಸ್ಟುಡಿಯೋಗೆ ಬಂದು ಪೋಚಯ್ಯನಿಗೆ ಬೆಂಬಲ ಸೂಚಿಸಿದ್ದಕ್ಕೆ..” ಮುಗಿಸಿದಳು ಅನಿತ.
ಕೊಂಡಲರಾವು ಎದ್ದು ನಿಂತು ಎರಡು ಕೈಗಳನ್ನು ಜೋಡಿಸಿ ನಮಸ್ಕರಿಸಿದನು. ಸ್ಕ್ರೀನ್ ಬದಲಾಯಿತು.

“ಇದು ಈ ಹೊತ್ತಿನ ವಿಶೇಷ ಸುದ್ದಿ. ಕೊಂಡಲರಾವು ಅವರು ಪೋಚಯ್ಯನ ಹೋರಾಟವನ್ನು ಕೋಟ್ಯಂತರ ಮಂದಿಗೆ ಸ್ಫೂರ್ತಿ ಎಂದು ಕೊಂಡಾಡಿದರು, ಇಷ್ಟಕ್ಕೂ ಪೋಚಯ್ಯ ಗೆದ್ದನಾ ಇಲ್ಲವಾ? ತಿಳಿಯುವುದಕ್ಕೆ ಮುನ್ನ ಒಂದು ಚಿಕ್ಕ ಬ್ರೇಕ್”ಎಲ್ಲಿಗೂ ಹೋಗದೆಕಾಯ್ತಾಇರಿ...

ಎರಡು ನಿಮಿಷದ ವಿವಿಧ ಜಾಹೀರಾತುಗಳ ನಂತರ ಪ್ರತ್ಯಕ್ಷಳಾದ ಅನಿತ, “ಇದುಒಬ್ಬ ಸಾಮಾನ್ಯನಆವೇದನೆ..ಜಗ್ಗದದಿಟ್ಟ ಹೋರಾಟ. ವೆಲ್‍ಕಂಟುಇರುವೆ ನೀನೇಕಿಲ್ಲಿರುವೆÉ! ಎಷ್ಟೋ ಹೋರಾಟಗಳನ್ನು ನೋಡಿದ್ದೇವೆ. ಎಷ್ಟೋ ಯೋಧರನ್ನು ನೋಡಿದ್ದೇವೆ. ಆದರೆ ಪೋಚಯ್ಯನಂತಹ..”ಎನ್ನುತ್ತ ಅನಿತ ಸ್ವಲ್ಪಹೊತ್ತು ಪೋಚಯ್ಯನನ್ನುತನ್ನದೇ ಭಾಷೆಯಲ್ಲಿ ವರ್ಣಿಸಿ, “ಈಗ ವಿಷಯಕ್ಕೆ ಬರೋಣ, ಕಮಾನ್‍ಪುರ್‍ನಲ್ಲಿಕಾಂಟ್ರ್ಯಾಕ್ಟರ್ ಮನೆಯ ಮುಂದೆ ಏನು ನಡೆಯಿತೆಂದು ನೋಡೋಣ. ನಮ್ಮ ರಿಪೋರ್ಟರ್ ವೆಂಕನ್ನ ಅಲ್ಲೇ ಇದ್ದಾರೆ. ಅವರನ್ನೇ ಕೇಳಿ ತಿಳಿದುಕೊಳ್ಳೋಣ.”. ಲೈವ್‍ನಲ್ಲಿ ಮೈಕ್ ಹಿಡಿದು ವೆಂಕನ್ನ ಕಾಣಿಸಿದನು.

“ಅನಿತಾ ಅಂದುಕೊಂಡದ್ದು ಒಂದು ಆದದ್ದೊಂದು ಎನ್ನುವ ಹಾಗೆ ನಡೆದಿದೆ. ಪೋಚಯ್ಯನಿಗೆ ಕೊನೆಗೆ ನಿರಾಸೆಯೇ ಉಳಿಯಿತು. ಇಷ್ಟಕ್ಕೆ ಮೊದಲು ಇಬ್ಬರು ಮಕ್ಕಳೊಂದಿಗೆ ಅಳುತ್ತ  ಹೊರಟು ಹೋದನು”ಎಂದು ಬೇಸರದಿಂದಲೇ ಹೇಳಿದನು.“ನಿಜಕ್ಕೆ ನಡೆದದ್ದೇನು ವೆಂಕನ್ನಾ.. ಪೋಚಯ್ಯ ಎಲ್ಲಿಗೆ ಹೋದನು?”ಅನಿತ ಕೇಳಿದಳು.

ಗಂಟಲು ಸರಿಪಡಿಸಿಕೊಳ್ಳುತ್ತ ಮತ್ತೊಮ್ಮೆ ಮೈಕ್ ಹಿಡಿದು, “ಗೊತ್ತಿಲ್ಲ ಅನಿತಾ. ಟ್ರ್ಯಾಕ್ಟರ್‍ಕೇಜ್‍ ವ್ಹೀಲ್ಸ್ ಹತ್ತಿದ್ದಕ್ಕಾಗಿ ಪೈಪ್‍ ಒಡೆಯಿತೆಂದು, ಕಾಂಟ್ರ್ಯಾಕ್ಟರ್ ತನ್ನ ತಪ್ಪನ್ನು ಊರಿನ ಟ್ರ್ಯಾಕ್ಟರ್ ಯಜಮಾನನತ್ತ ಬೆರಳು ತೋರಿಸಿದಾಗ, ಆ ಯಜಮಾನ ತಪ್ಪನ್ನು ಟ್ರ್ಯಾಕ್ಟರ್ ಚಲಾಯಿಸಿದ ಡ್ರೈವರ್ ಮೇಲೆ ಹಾಕಿದನು. ಇದಕ್ಕೆಲ್ಲ ಕಾರಣ ಡ್ರೈವರ್ ಎಂದುಕೊಳ್ಳುತ್ತಿರುವಾಗ ಕಾಲಿಗೆ ಇರುವೆ ಕಚ್ಚಿದ್ದರಿಂದ ತಾನು ಬ್ರೇಕ್‍ನಿಂದ ಕಾಲೆತ್ತಿದ್ದಾಗ,  ಟ್ರ್ಯಾಕ್ಟರ್ ನಿಯಂತ್ರಣ ತಪ್ಪಿ ಕೊಳಾಯಿ ಪೈಪ್‍ ಒಡೆದದ್ದಾಗಿ ಡ್ರೈವರ್ ಪ್ಪನ್ನು ಇರುವೆಯ ಮೇಲೆ ಹೊರಿಸಿದನು,”ಎಂದನು ವೆಂಕನ್ನ.

“ವೆಂಕನ್ನ.. ಪೋಚಯ್ಯನ ಹೆಂಡತಿ ಸಾವಿಗೆ ಕೆಂಪು ಇರುವೆ ಕಾರಣವೆಂದರೆ ಗ್ರಾಮದ ಜನ ಏನನ್ನುತ್ತಿದ್ದಾರೆ,” ಏನೋ ಪರಿಹಾರ ಸಿಕ್ಕಂತೆ ಕೇಳಿದಳು ಅನಿತ.“ಅನಿತಾ! ಎಲ್ಲರೂ ನಿಜವೇ ಎನ್ನುತ್ತಿದ್ದಾರೆ. ತಪ್ಪೆಲ್ಲ ಕೆಂಪು ಇರುವೆಯದೇ ಎನ್ನುತ್ತಿದ್ದಾರೆ. ಕೆಲವರು ಪೋಚಯ್ಯನನ್ನು ಗೇಲಿ ಮಾಡುತ್ತಿದ್ದಾರೆ. ಮತ್ತೆ ಕೆಲವರು ಅನುಕಂಪ ತೋರುತ್ತಿದ್ದಾರೆ. ಕೆಲವರು ಇದೇನೋ ದೊಡ್ಡಜೋಕ್‍ ಎನ್ನುವಂತೆ ಮಾತನಾಡಿಕೊಳ್ಳುತ್ತಿದ್ದಾರೆ. ಅದು ನಮ್ಮಕರ್ಮ ಎಂದು ಸುಮ್ಮನಿರಬೇಕೇ ಹೊರತು ಎಲ್ಲಕಡೆಗೂ ಈ ತಿರುಗಾಟವೇನು ಎಂದು ಕೆಲವರು ವಿಮರ್ಶಿಸುತ್ತಿದ್ದಾರೆ.”ಕೊನೆಗೆ ಕನ್‍ಕ್ಲೂಷನ್ ನೀಡಿದಳು ಅನಿತ.

“ಇದು ನಿಜವಾದ ವಿಷಯ... ಈಗಲಾದರೂ ನಂಬುವಿರಾ, ಒಂದು ಕೆಂಪು ಇರುವೆ ಮನುಷ್ಯನನ್ನು ಸಾಯಿಸಿತೆಂದು. ಇರುವೆಯಂತೆ ಕಷ್ಟಪಡುವ ಒಂದುಜೀವ ಇರುವೆಗೇ ಬಲಿಯಾಯಿತು. ಈ ಸಮಾಜದಲ್ಲಿ ಒಂದು ಇರುವೆಯಂತೆಹ ಗುರವಾದ ಪೋಚಯ್ಯ ಇರುವೆಯನ್ನು ಏನೂ ಮಾಡಲಾಗದೆ ಅಸಹಾಯಕನಾಗಿ ಮನೆಗೆ ಬಂದುನಾನೇಕೆ ಹುಟ್ಟಿದೆನಪ್ಪಾ ಎಂದು ನೋವಿನಿಂದ ರೋದಿಸುತ್ತಿದ್ದಾನೆ. ಸುಮ್ಮನೆ ಚಿಕ್ಕ ವಿಷಯಕ್ಕೆಲ್ಲ ರಾದ್ಧಾಂತ ಮಾಡಿದನೆಂದು ಜನ ನಗಾಡಿ ಕೊಳ್ಳುತ್ತಿದ್ದಾರೆ, ಇದೇ ಈ ಹೊತ್ತಿನ ವಿಶೇಷ ಸುದ್ದಿ. ಮತ್ತೊಂದು ಬಿಸಿ ಬಿಸಿ ಸುದ್ದಿಯೊಂದಿಗೆ ಮತ್ತೆ ನಾಳೆ ಭೇಟಿಯಾಗೋಣ.. ಅದುವರೆಗೂ ವಿರಾಮ”

ಒಂದುಕಿರು ನಗೆ ನಕ್ಕು ಅನಿತ ಮಾಯವಾದಳು. ಅದುವರೆಗೂ ಆತಂಕದಿಂದ ನೋಡುತ್ತಿದ್ದ ವೀಕ್ಷಕರ ಉಸಿರು ಹಗುರವಾಯಿತು.ಮರುದಿನ ಮಾತ್ರ“ನಿಲ್ಲದ ಪೋಚಯ್ಯನ ಹೋರಾಟ.. ಆರ್.ಟಿ.ಒ. ಕಚೇರಿ ಮುಂದೆಧರಣಿ”ಎಂದು ದಿನಪತ್ರಿಕೆಯಲ್ಲಿದಪ್ಪ ಅಕ್ಷರಗಳಲ್ಲಿ ಸುದ್ದಿ ಪ್ರಕಟವಾಗಿದೆ.