ಎಲ್ಲ ಮೀರಿದ ಅಸಹನೀಯ ಅತಿರೇಕ ಮತ್ತು ಮಂಡ್ಯ

ಎಲ್ಲ ಮೀರಿದ ಅಸಹನೀಯ ಅತಿರೇಕ ಮತ್ತು ಮಂಡ್ಯ
 
Poetic Justice ಪದಕ್ಕೆ ನ್ಯಾಯ ಸಿಗುವ ಹಾಗೆ ಕಾಣುತ್ತೆ. ಮಿತಿ ಮೀರಿದ ಜಾತಿ, ಹಣ, ಅಧಿಕಾರದ ಮದ ಹಾಗೂ ದುರಹಂಕಾರಕೆ ಜನ ಉತ್ತರ ಕೊಡಲು ಸನ್ನದ್ಧರಾಗಿದ್ದಾರೆ.
 
ರಾಜ್ಯ ಅಲ್ಲ, ಇಡೀ ದೇಶದ ಗಮನ ಸೆಳೆದಿರುವ ಮಂಡ್ಯ ಕ್ಷೇತ್ರ ಸುಮಲತಾ ಅಂಬರೀಶ್ ಅವರ ಸಹನೆಗೆ, ಮತ್ತವರ ಎದುರಾಳಿಗಳ ಅನೇಕ ನೇತಾತ್ಮಕ ಸಂಗತಿಗಳಿಗೆ ಸಾಕ್ಷಿಯಾಗಿದೆ. 
ಈ ರಾಜಕೀಯ ಹೊಲಸಿನ ಸಹವಾಸವೇ ಬೇಡ ಎಂದು ಸುಮ್ಮನಿದ್ದರೂ ಕೆಲವು ಪ್ರಗತಿಪರ ಸೋ ಕಾಲ್ಡ್ ಬುದ್ಧಿಜೀವಿಗಳ ಮೌನ ಕಂಡು ಮನಸು ಒದ್ದಾಡಿ ಬರೆಯಬೇಕೆನಿಸಿದೆ. 
 
ಬಿಜೆಪಿಯ ಕೋಮುವಾದವನ್ನು ವಿರೋಧಿಸುವ ಭರದಲ್ಲಿ ಅಟ್ಟಹಾಸದ ರಾಜಕಾರಣದ ಕುರಿತು ಮೌನ ತಾಳಿರುವ ನಾಡಿನ ಅಕ್ಷರ ಲೋಕದ ಸಂಗಾತಿಗಳ ನಿಲುವಿಗೆ ಮರುಕವೆನಿಸುತ್ತದೆ.
 
ಜಾತ್ಯತೀತ ಪಕ್ಷದ ಕುಟುಂಬ ವ್ಯಾಮೋಹ, ಮೌಢ್ಯತೆ ಹಾಗೂ ಜಾತೀಯತೆ ಕುರಿತು ಮಾತನಾಡದಿರುವ ಭಯ-ಭೀತಿಗೆ ಕಾರಣಗಳನ್ನಾದರೂ ಹೇಳಲಿ. 
ಅದರಲ್ಲೂ ವಿಶೇಷವಾಗಿ ಮಹಿಳೆಯ ಕುರಿತು ಕೀಳು ಮಟ್ಟದ ಮಾತುಗಳಿಗೂ ಮೌನವಹಿಸುವಷ್ಟು ಬರಹಗಾರ ಅಸೂಕ್ಷ್ಮ ಆಗಬಾರದಿತ್ತು. 
 
ಈ ಎಲ್ಲ ಸಂಕಟಗಳನ್ನು ಸಾವಧಾನವಾಗಿ ಸಹಿಸಿಕೊಂಡಿರುವ ಸುಮಲತಾ ಅಂಬರೀಶ್ ಅವರ ಮನೋಧರ್ಮ ಮೆಚ್ಚಬೇಕು. ಪ್ರಬುದ್ಧವಾಗಿ ಎಲ್ಲ ಆರೋಪಗಳಿಗೆ ಉತ್ತರ ಕೊಡುತ್ತ ಜನರಿಗೆ ಹತ್ತಿರವಾಗುತ್ತಿರುವ ಅವರನ್ನು ಬೆಂಬಲಿಸುವ ಅನಿವಾರ್ಯತೆ ಇದೆ.
ಹಣಬಲದ ರಾಜಕಾರಣದಲ್ಲಿ ಸೋಲು, ಗೆಲುವು ಮುಖ್ಯವಾಗಬಾರದು, ನೈತಿಕ ಬೆಂಬಲ ತೋರುವ ಕನಿಷ್ಟ ಸೌಜನ್ಯ ಜೀವಂತವಾಗಿರದಿದ್ದರೆ ಹೇಗೆ?
ಅದರಲ್ಲೂ ವಿಶೇಷವಾಗಿ ನಾಡಿನ ಮಹಿಳೆಯರು ಪಕ್ಷಾತೀತವಾಗಿ ಸುಮಲತಾ ಅಂಬರೀಶ್ ಅವರ ಆತ್ಮವಿಶ್ವಾಸ ಹೆಚ್ಚಿಸಬೇಕು. ಅಧಿಕಾರ ದುರ್ಬಳಕೆ ಮಾಡಿ ಎದುರಾಳಿಗಳು ಗೆದ್ದರೂ ಹೆದರುವ ಅಗತ್ಯವಿಲ್ಲ. 
 
ಕನ್ನಡ ನಾಡು, ನುಡಿ, ಸಂಸ್ಕೃತಿ ಬಗ್ಗೆ ಪೂಂಖಾನು ಪೂಂಖವಾಗಿ ಮಾತನಾಡುವ ಸಾಹಿತಿಗಳು ಕಲ್ಯಾಣದ ಶರಣರನ್ನು, ಹಳೆ ಮೈಸೂರು ಭಾಗದ ದೇಸಿ ಜನಪದರನ್ನು ಮರೆತಂತಿದೆ. 
ಹೆಣ್ಣನ್ನು ಕೀಳಾಗಿ ಕಾಣುವವರ ಅಟ್ಟಹಾಸಕೆ ಪಕ್ಷ ರಾಜಕಾರಣದ ಸಿದ್ಧಾಂತ ಹಾಗೂ ಜಾತ್ಯತೀತ ಹೆಸರಿನ ಮೌನ ಅಸಮಂಜಸ. 
 
ಯಾರೋ ಗೆಳೆಯರು ’ಅಯ್ಯೋ ಸುಮಲತಾ ಬಿಜೆಪಿ ಬೆಂಬಲ ಪಡೆದು ಕೋಮುವಾದಿಯಾದರು’ ಎಂಬ ತಕರಾರು ಎತ್ತಿದ್ದಾರೆ. ಸುಮಲತಾ ಬಿಜೆಪಿ ಸೇರಿದ್ದರೆ ತಾನೆ ಕೋಮುವಾದಿಯಾಗುವುದು? ಅವರಾಗಿ ನೀಡಿದ ಬೆಂಬಲ ನಿರಾಕರಿಸುವುದು ಅಹಂಕಾರವಾಗುವುದಿಲ್ಲವೇ?  ಅನಿವಾರ್ಯವಾಗಿ ಬಿಜೆಪಿ ಈ ನಿಲುವು ತಳೆದು ರಾಷ್ಟ್ರೀಯ ಪಕ್ಷ ಎಂಬ ಅಹಂಕಾರ ಬದಿಗಿರಿಸಿ ಸೌಜನ್ಯ ಮೆರೆದಿದೆ. ಸಿನೆಮಾ ನಟರು ಅಂಬರೀಶ್ ಕೊಡುಗೆಯ ಋಣ ತೀರಿಸಲು ಬಹಿರಂಗ ಅಖಾಡಕ್ಕೆ ಇಳಿದು ತಮ್ಮ ಹೀರೋಯಿಸಮ್ ಒರೆಗೆ ಹಚ್ಚಿದ್ದಾರೆ. 
 
ದಯವಿಟ್ಟು ನಾಡಿನ ಬುದ್ಧಿಜೀವಿಗಳು ತಮ್ಮ ದಿವ್ಯ ಮೌನ ಮುರಿದು ಮಾತನಾಡಿ ಸೂಕ್ಷ್ಮತೆಯ ನಿರೂಪಿಸಲಿ.
ಸುಮಲತಾ ಅಂಬರೀಶ್ ಅವರದು ಪಕ್ಷಾತೀತ ಪರಿಪಕ್ವ ಸ್ಪರ್ಧೆ ಎನ್ನುವ ಕಾರಣಕ್ಕಾದರೂ ಬುದ್ಧಿಗೊಂದಿಷ್ಟು ಚುರುಕು ಮೂಡಿಸಿಕೊಳ್ಳಲಿ. 
ವಿಶೇಷವಾಗಿ ಮಹಿಳೆಯರು ಮೌನ ಮುರಿದು ಮಾತನಾಡುವ ಸಬಲೀಕರಣದ ಅವಕಾಶ ಸದುಪಯೋಗ ಪಡಿಸಿಕೊಂಡು ನೈತಿಕ ಬೆಂಬಲ ನೀಡಲಿ ಎಂದು ನಿವೇದಿಸಿಕೊಳ್ಳುತ್ತೇನೆ.