ಒಲಿಂಪಿಕ್ಸ್ ಬಾಕ್ಸಿಂಗ್ ಚಿನ್ನದ ಭರವಸೆ ಮೂಡಿಸಿದ ಅಮಿತ್

ಒಲಿಂಪಿಕ್ಸ್ ಬಾಕ್ಸಿಂಗ್ ಚಿನ್ನದ ಭರವಸೆ ಮೂಡಿಸಿದ ಅಮಿತ್

ಕಳೆದ ವಾರಾಂತ್ಯ ರಷ್ಯಾದ ಎಕತರೀನ್ಬೋರ್ಗ್ ನಲ್ಲಿ ಮುಕ್ತಾಯಗೊಂಡ ವಿಶ್ವ ಬಾಕ್ಸಿಂಗ್ ಚಾಂಪಿಯನ್ ಶಿಪ್ ನ ಭಾರತದ ಕ್ರೀಡಾ ಇತಿಹಾಸದಲ್ಲಿ ರಜತಾಕ್ಷರಗಳಲ್ಲಿ ದಾಖಲಾಗಿದೆ. ಪ್ರಪ್ರಥಮ ಬಾರಿಗೆ ವಿಶ್ವ ಬಾಕ್ಸಿಂಗ್ ಸ್ಪರ್ಧೆಯ ಫೈನಲ್ ನ್ನು ಭಾರತ ಪ್ರವೇಶಿಸಿತು. ಅದರಲ್ಲಿ ಸೆಣಸಿ ರಜತ ಪದಕವನ್ನು ತನ್ನದಾಗಿಸಿಕೊಂಡ ಕೀರ್ತಿ ಅಮಿತ್ ಪಾಲಾಯಿತು.. 52 ಕೆಜಿ ವಿಭಾಗದಲ್ಲಿ ಅಮಿತ್ ರಜತವನ್ನು ಗೆದ್ದರೆ, 63 ಕೆಜಿ ವಿಭಾಗದಲ್ಲಿ ಮನೀಶ್ ಕೌಶಿಕ್ ಕಂಚು ಪದಕ ಗಳಿಸಿ ವಿಕ್ರಮ ಸಾಧಿಸಿದರು. ವಿಶ್ವ ಸ್ಪರ್ಧೆಯಲ್ಲಿ ಇಷ್ಟು ಉತ್ತಮ ಪ್ರದರ್ಶನ ದೇಶದ ಬಾಕ್ಸರ್ ಗಳು ನೀಡಿದ್ದು ಇದೇ ಮೊದಲು. ಸ್ಪರ್ಧಿಸಿದ್ದ ಒಟ್ಟು 78 ರಾಷ್ಟ್ರಗಳ ಪೈಕಿ ಭಾರತದ ಬಾಕ್ಸರ್ ಗಳ ಈ ಸಾಧನೆ ಅವಿಸ್ಮರಣೀಯವಾದದ್ದು ಒಲಂಪಿಕ್ ಕ್ರೀಡೆಗಳು ಸನ್ನಿಹಿತವಾಗುತ್ತಿರುವ ದಿನಗಳಲ್ಲಿ ಇಂತಹ ಸಾಧನೆ ಭಾರತೀಯ ಕ್ರೀಡಾಭಿಮಾನಿಗಳ ಭರವಸೆಯನ್ನು ಇಮ್ಮಡಿಗೊಳಿಸಿದೆ.

ಭಾರತದಿಂದ ಕ್ವಾರ್ಟರ್ ಫೈನಲ್ ಸುತ್ತು ಪ್ರವೇಶಿಸಿದ ಮತ್ತಿಬ್ಬರು ಸ್ಪರ್ಧಿಗಳೆಂದರೆ ಕವಿಂದರ್ ಸಿಂಗ್ ಬಿಷ್ಟ್ ಮತ್ತು ಸಂಜೀತ್. ಅಂತಿಮ ಎಂಟರ ಸುತ್ತು ಪ್ರವೇಶಿಸಿ ಸತತವಾಗಿ ಎರಡನೇ ಬಾರಿಗೆ ಎಡವಿದ ದೌರ್ಭಾಗ್ಯ ಬಿಷ್ಟ್ ಅವರದಾಯಿತು. ಸತೀಶ್  ಕುಮಾರ್, ಆಶಿಶ್ ಕುಮಾರ್, ಮತ್ತು ಬ್ರಿಜೇಶ್ ಯಾದವರಂಥ ನುರಿತ ಪಟುಗಳಿಗೆ ಈ ಸ್ಪರ್ಧೆ ನಿರಾಶಾದಾಯಕವಾಗಿತ್ತು. ದುರ್ಯೋಧನ ಸಿಂಗ್ ನೇಗಿ ಭರವಸೆ ಮೂಡಿಸಿದರಾದರೂ ಎರಡನೇ ಸುತ್ತಿನಲ್ಲೇ ನಿರ್ಗಮಿಸಿದರು. 91 ಕೆಜಿ ವಿಭಾಗದಲ್ಲಿ ಭಾರತದ ಸಾಧನೆ ಹೇಳಿಕೊಳ್ಳುವಂಥದ್ದೇನಿಲ್ಲ. ಹಾಗಾಗಿ  ಸಂಜೀತ್ ಕ್ವಾರ್ಟರ್ ಫೈನಲ್ಸ್  ಪ್ರವೇಶಿಸಿದ್ದು ಗಮನಾರ್ಹ. ಮನೀಶ್ ಮತ್ತು ಅಮಿತ್ ದೇಶದ ಈವರೆಗಿನ ಮೆಡಲ್ ವಿಜೇತರ ಪೈಕಿ ಐದನೆಯವರಾಗಿ ಮತ್ತು ಆರನೆಯವರಾಗಿ ಹೊರಹೊಮ್ಮಿದ್ದಾರೆ.  ವಿಜೇಂದರ್ ಸಿಂಗ್ (75 ಕೆಜಿ, 2009), ವಿಕಾಸ್ ಕೃಷ್ಣನ್ (69 ಕೆಜಿ, 2011), ಶಿವ ಥಾಪಾ (56 ಕೆಜಿ, 2015), ಮತ್ತು ಗೌರವ್ ಬಿಧುರಿ (56 ಕೆಜಿ, 2017) ಈ ಮುಂಚಿನ ಮೆಡಲಿಗರಾಗಿದ್ದಾರೆ.

ಉಸ್ಬೇಕಿಸ್ತಾನದ ಶಖೋಬಿದೀನ್ ಝೋಇರೊವ್ ವಿರುದ್ಧ 0-5  ಅಪಜಯ ಅನುಭವಿಸಿದ ಅಮಿತ್ ಸೋಲುವಂತೆ ಕಾಣಲಿಲ್ಲ. ಕೇವಲ ಸೋಲಿನ ಅಂತರವನ್ನು ನೋಡಿ ಆ ಪಂದ್ಯದ ಸೆಣಸಾಟವನ್ನು ಊಹಿಸುವಂತಿಲ್ಲ. ಅಮಿತ್ ರ ಬಲವೆಂದರೆ ಅವರ ಆಟದ ಅನಿರೀಕ್ಷತತೆ. ಈ ಅಪಜಯದ ನಂತರ ತಮ್ಮ ಎಂದಿನ ಕ್ರಮವನ್ನು ಬದಲಾಯಿಸಿಕೊಂಡು ಮೂರು ನಿಮಿಷದ ಮೊದಲ ಸುತ್ತಿನಿಂದಲೇ ಆಕ್ರಮಣಕಾರಿಯಾಗಿ ಆಡುವುದಾಗಿ ಅಮಿತ್ ಸಾರಿದ್ದಾರೆ.

ಮ್ಯಾಚ್ ನಂತರ ಭಾರತ ತಂಡದ ಕೋಚ್ ಸಿಎ ಕುಟ್ಟಪ್ಪ  ಅಮಿತ್ ರ ಚುರುಕುತನವನ್ನು ಪ್ರಶಂಸಿಸಿದರು. "ನಾವು ಅಮಿತ್ ಗೆ ಸ್ವಾತಂತ್ರ್ಯ ನೀಡಿದ್ದೇವೆ. ಮೊದಲ ಸುತ್ತನ್ನು ಆತನ ಮನಸ್ಸಿಗೆ ಬಂದಂತೆ ಆಡಲು ಬಿಡುತ್ತೇವೆ (ಆತ ನಮ್ಮ ಭರವಸೆಯನ್ನು ಸಮರ್ಥಿಸುವ ರೀತಿಯಲ್ಲಿ ಆಡುತ್ತಾರೆ). ಉಳಿದ ಸುತ್ತುಗಳಿಗೆ ಮುನ್ನ ಉನ್ನತ ಸಾಧನಾ ನಿರ್ದೇಶಕ ಸ್ಯಾಂಟಿಯಾಗೊ ನೀವಿಯ ಅವರ ಸಲಹೆಯನ್ನು ಪಡೆಯಲಾಗುತ್ತೆ. ತನ್ನ ಆಟದ ಗತಿಯ ಮೇಲೆ ತೀವ್ರ ನಿಗಾ ಇಡುವ ಅಮಿತ್ ತಪ್ಪು ಹೆಜ್ಜೆ ಇಡುವುದೇ ಅಪರೂಪ."

ಕುಟ್ಟಪ್ಪ ಮತ್ತು ಅಮಿತ್ ನಡುವೆ ವಾಗ್ವಾದ ನಡೆಯುವುದೂ ಉಂಟು. "ನಾನು ಈ ರೀತಿ ಆಡುತ್ತೇನೆ, ಹಾಗೆ ಆಡಲು ನನ್ನನ್ನು ಬಿಡಿ, ನಾನು ಗೆಲ್ಲುತ್ತೇನೆ" ಎಂದು ಹೇಳುತ್ತಾ ಆ ಮಾತನ್ನು ಅಮಿತ್ ಉಳಿಸಿಡ್ಕೊಂಡು ನಿದರ್ಶನಗಳೂ ಉಂಟು.

ಅಮಿತ್ ರ ಮತ್ತೊಂದು ಅಪೂರ್ವ ಗುಣವೆಂದರೆ ಎದುರಾಳಿ ಎಷ್ಟೇ ಪ್ರಬಲನಾಗಿದ್ದರೂ ಅದರಿಂದ ವಿಚಲಿತನಾಗದೆ ಇರುವುದು. ಕಾಮನ್ವೆಲ್ತ್ ಪಂದ್ಯಾವಳಿಯಲ್ಲಿ ರಜತ ಪದಕ ಗಳಿಸಿದ ನಂತರ ಏಶಿಯನ್ ಕ್ರೀಡಾಕೂಟದಲ್ಲಿ (ಮತ್ತು ಏಶಿಯನ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ) ಚಿನ್ನದ ಪದಕ ಗಳಿಸಿದ ಅಮಿತ್ ಅದೇ ಕ್ರಮದಲ್ಲಿ, ವಾರಾಂತ್ಯ ಪಡೆದ ರಜತ ಪದಕದ ನಂತರ ಮುಂಬರುವ ಟೋಕಿಯೋ ಒಲಂಪಿಕ್ಸ್ ನಲ್ಲಿ ಚಿನ್ನವನ್ನು ಗೆಲ್ಲುತ್ತಾರೆಂಬ ನಿರೀಕ್ಷೆಯನ್ನು ಮೂಡಿಸಿದ್ದಾರೆ.    

ಅಮಿತ್ ಫೈನಲ್ ಸ್ಪರ್ಧೆಗೆ ಕಣಕ್ಕೆ ಇಳಿಯುವ ಮುನ್ನವೇ ಹರ್ಯಾಣದ ಜಜ್ಜಾರ್ ಹಳ್ಳಿಯ ಅವರ ಮನೆ ಮಿನಿ ಟೆಂಟ್ ಸಿನೆಮಾ ಆಗಿ ಪರಿವರ್ತಿತವಾಗಿತ್ತು. ಊರಿನ ಅಂಗಡಿಗಳೆಲ್ಲವೂ ಮುಚ್ಚಿದ್ದವು. ದೇವಸ್ಥಾನದ ಅರ್ಚಕರನ್ನು ಆಹ್ವಾನಿಸಲಾಗಿತ್ತು. ಅರವತ್ತಕ್ಕೂ ಹೆಚ್ಚು ಮಂದಿ ಸಂಬಂಧಿಕರು, ಸ್ನೇಹಿತರಿಗೆ ಸಡಗರವೋ ಸಡಗರ. ಮಳೆ ಬಾರದಿರಲಿ, ಎಂದು ದೇವರಿಗೆ ಪ್ರಾರ್ಥನೆ ಸಲ್ಲಿಸಿ ತಮ್ಮ ಮನೆಗಳಿಂದ ಹೊರಟ ಮಂದಿಯೂ ಇದ್ದರು.  ಅಮಿತ್ ಚಿನ್ನವನ್ನು ಗೆಲ್ಲುವ ನಿರೀಕ್ಷೆಯಲ್ಲಿ ಕೆಲವರು ಲಡ್ಡು ತಂದಿದ್ದರು. ಪಂದ್ಯ ಯಾವ ಟಿವಿ ಚಾನೆಲ್ ನಲ್ಲಿ ಬರುತ್ತೆ ಎನ್ನುವುದು ಎಲ್ಲರ ಪ್ರಶ್ನೆಯಾಗಿತ್ತು. ಇಂಟರ್ನೆಟ್ ನ ಮೂಲಕ ಸ್ಟ್ರೀಮ್ ಆಗಿ ಪ್ರಸಾರವಾಗುವುದನ್ನು  ತಿಳಿಸುವುದಾದರೂ ಹೇಗೆ ಎಂಬುದು ಅಮಿತ್ ರ ಅಣ್ಣ ಅಜಯ್ ರ ಸವಾಲಾಗಿತ್ತು. ಎಲ್ಲರಿಗೂ ಟಿವಿ ವೀಕ್ಷಿಸಲು ಸಾಧ್ಯವಾಗುವಂತೆ ಅದನ್ನು ಅಂಗಳಕ್ಕೆ ಸಾಗಿಸಿ  ಫ್ರಿಡ್ಜ್ ಮೇಲೆ ಇಡಲಾಗಿತ್ತು. ಕೆಲವರಿಗಷ್ಟೇ ಕುರ್ಚಿಯ ಸೌಕರ್ಯ ಒದಗಿಸಲು ಸಾಧ್ಯವಾಗಿತ್ತು.  ಮ್ಯಾಚ್ ಗೆ ಮುಂಚೆಯೇ ನೆರೆದಿದ್ದ ಪರಿಚಯಸ್ಥರನ್ನು ಅಮಿತ್ ಕುರಿತು ಲಭ್ಯವಿರುವ ಮ್ಯೂಸಿಕ್ ವೀಡಿಯೊವನ್ನು ಪ್ರದರ್ಶಿಸುವುದರ ಮೂಲಕ ಮನರಂಜನೆ ಒದಗಿಸಿದರು. ಅಮಿತ್ ಸುವರ್ಣ ಗಿಟ್ಟಿಸಿದ ಏಷ್ಯಾಡ್ ಫೈನಲ್ ನನ್ನೂ ತೋರಿಸಿದರು.

ಶಖೋಬಿದೀನ್  ಅಮಿತ್ ಮೇಲೆ  ಪ್ರಹಾರ ಮಾಡಿದಾಗಲೆಲ್ಲ ಖಿನ್ನರಾಗುತ್ತಿದ್ದ ವೀಕ್ಷಕರು ಅಮಿತ್ ಪ್ರತಿ-ಆಕ್ರಮಣ ಮಾಡಿ ತನಗಿಂತ ಎತ್ತರದ ಪ್ರತಿಸ್ಪರ್ಧಿಗೆ ಲಘುವಾಗಿ ಹೊಡೆತ ನೀಡಿದರೂ ಹರ್ಷೋದ್ಘಾರ ಮಾಡುತ್ತಿದ್ದರು. ಮೊದಲ ಸುತ್ತನ್ನು ಟಿವಿ ಪರದೆಯ ಯಾವ ಭಾಗದಲ್ಲಿ ಪಾಯಿಂಟ್ಸ್ ಪ್ರದರ್ಶಿತವಾಗುತ್ತಿದೆ ಎಂದು ಹುಡುಕುವುದರಲ್ಲೇ ಕಳೆದ ಹಿರಿಯರೊಬ್ಬರು ಅಮಿತ್ ಎಷ್ಟು ಬಾರಿ ಮುಷ್ಠಿ ಪ್ರಹಾರ ಮಾಡಿದರು ಎಂಬುದನ್ನು ಎಣಿಸುವುದರಲ್ಲಿ ಕಳೆದರು.

ಟೇಬಲ್ ಮೇಲೆ ಅಮಿತ್ ಗಳಿಸಿರುವ ಎಲ್ಲಾ ಪದಕಗಳನ್ನೂ ಸುರಿದ ಅವರ ತಾಯಿ ಉಷಾ ರಾಣಿ ಅವನ್ನು ಯಾವ ಸ್ಪರ್ಧೆಯಲ್ಲಿ ಗೆಲ್ಲಲಾಯಿತೆಂಬುದರ ಕಾಮೆಂಟರಿ ನೀಡುತ್ತಿದ್ದರು. ಆ ತಾಯಿಗೆ ಮಗ ಈ ಮಟ್ಟಿನ ಸಾಧನೆ ಮಾಡುವನೆಂಬ ಅಂದಾಜು ಇರಲಿಲ್ಲ. ಒಂಭತ್ತು ತಿಂಗಳಿಗೆ ಮುನ್ನವೇ ಜನಿಸಿದ ಮಗುವಿಗೆ ಹುಟ್ಟಿನಿಂದಲೂ ಅನಾರೋಗ್ಯದ ಸಮಸ್ಯೆ. ದುರ್ಬಲ ಹುಡುಗನ ಚೇಷ್ಟೆಗೆನೂ ಕೊರತೆ ಇರಲಿಲ್ಲ. ಅವಿತುಕೊಂಡಿದ್ದು, ಛಂಗನೆ ಅಮಾಯಕರ ಮುಂದೆರಗಿ ಗಾಬರಿಗೊಳಿಸುವುದು ಆ ಚೇಷ್ಟೆಗಳಲ್ಲೊಂದು. ಅದೇ ರಸ್ತೆಯಲ್ಲಿ ವಾಸಿಸುವ ಹತ್ತಿರದ ಸಂಬಂಧಿಕರು ಅಡುಗೆ ಮಾಡುವ ವೇಳೆಯಲ್ಲಿ ಅವರನ್ನು ಗಾಬರಿಗೊಳಿಸಿದ ಬಾಲಕ ಅಮಿತ್ ಆಕೆಯನ್ನು ಒಲೆಯ ಬೆಂಕಿಗೆ ಆಹುತಿ ನೀಡಿಬಿಡುವುದರಲ್ಲಿದ್ದುದ್ದನ್ನು ಉಷಾ ನೆನಪಿಸಿಕೊಳ್ಳುತ್ತಾರೆ.

ಎಳೆಯದರಲ್ಲೇ ಬಾಕ್ಸಿಂಗ್ ಕಲಿಯಲಿಕ್ಕೆ ಶುರುವಿಟ್ಟುಕೊಂಡ ಅಮಿತ್ ಅದೇ ವೇಳೆಯಲ್ಲಿ ಪಾಠದ ಮನೆಗೂ ಹೋಗಬೇಕಿತ್ತು. ತಾಯಿಗೋ ಮಗ ಓದುವುದು ಬೇಕಿತ್ತು. ಮಗನ ಸಹಪಾಠಿಗಳು ಅಮಿತ್ ದೊಡ್ಡ ಬಾಕ್ಸರ್ ಆಗಿ ರೂಪುಗೊಳ್ಳುತ್ತಾನೆ, ತಡೆಯಬೇಡಿ ಎಂದು ಹೇಳಿ ಜತೆಗೆ ಕರೆದೊಯ್ಯುತ್ತಿದ್ದರು. ಕಳೆದ   ಕೆಲವು ವರ್ಷಗಳಿಂದ ಬಾಕ್ಸಿಂಗ್ ನೈಪುಣ್ಯತೆಯ ಮಟ್ಟವನ್ನು ಸ್ಪರ್ಧೆಯಿಂದ ಸ್ಪರ್ಧೆಗೆ ಮೇಲಕ್ಕೆ ಒಯ್ಯುತ್ತಿರುವ 24 ವಯಸ್ಸಿನ ಅಮಿತ್ ಗೆಳೆಯರ ಭವಿಷ್ಯವನ್ನು ನಿಜವಾಗಿಸಿದ್ದಾರೆ.