ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಪೌರತ್ವ ತಿದ್ದುಪಡಿ ಮಸೂದೆ ಮಂಡಿಸಿದ ಅಮಿತ್ ಶಾ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಪೌರತ್ವ ತಿದ್ದುಪಡಿ ಮಸೂದೆ ಮಂಡಿಸಿದ ಅಮಿತ್ ಶಾ

ದೆಹಲಿ:ಭಾರೀ ಕೋಲಾಹಲ ಮತ್ತು ವಿರೋಧ ಪಕ್ಷಗಳ ಪ್ರತಿಭಟನೆಯ ನಡುವೆಯೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಡಿಸೆಂಬರ್ 9  ಸೋಮವಾರ ಪೌರತ್ವ ತಿದ್ದುಪಡಿ  ಮಸೂದೆಯನ್ನು ಮಂಡಿಸಿದ್ದಾರೆ. ಸಂಸತ್ತಿನಲ್ಲಿ ಮಸೂದೆಯ ಪರ ಮತ್ತು ವಿರೋಧವಾಗಿ ಮತ ಚಲಾಯಿಸಲಾಯಿತು. ಮಸೂದೆಯ ಕುರಿತಾಗಿ ಸದನದಲ್ಲಿ ಚರ್ಚಿಸುವ ಸಲುವಾಗಿ ನಡೆದ ಔಪಚಾರಿಕ ಮತದಾನದಲ್ಲಿ ಮಸೂದೆಯ ಪರವಾಗಿ 293 ಮತಗಳು, ವಿರುದ್ದವಾಗಿ 82 ಮತಗಳು ಚಲಾವಣೆಯಾದವು.

ಈ ಮಸೂದೆಯು ಸಂವಿಧಾನದ 14 ನೇ ವಿಧಿಯನ್ನು ಉಲ್ಲಂಘಿಸುತ್ತದೆ ಆದ್ದರಿಂದ ಕೆಳಮನೆಯಲ್ಲಿ ಚರ್ಚಿಸಬಾರದು ಎಂದು ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಆರೋಪಿಸಿದ್ದವು. ಈ ಗದ್ದಲದ ನಡುವೆಯೂ ಮಸೂದೆಯನ್ನು ಸಮರ್ಥಿಸಿಕೊಂಡ ಅಮಿತ್ ಶಾ, ಉದ್ದೇಶಿತ ಶಾಸನವು ಯಾವುದೇ ಕಾರಣಕ್ಕೂ ಮುಸ್ಲಿಮರ ವಿರುದ್ಧವಿಲ್ಲ ಎಂದು ಹೇಳಿದ್ದಾರೆ.

ಇದರ ನಡುವೆ ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಒವೈಸಿ ಅವರು ಅಮಿತ್ ಶಾ ಅವರನ್ನು 'ಹಿಟ್ಲರ್'ಗೆ ಹೋಲಿಸಿದ್ದರು. ಪೌರತ್ವ ತಿದ್ದುಪಡಿ ಮಸೂದೆಗೆ ದೇಶಾದ್ಯಂತ ವಿರೋಧ ವ್ಯಕ್ತವಾಗಿದೆ. ಪಶ್ಚಿಮ ಬಂಗಾಳ ಮುಂಖ್ಯಮಂತ್ರಿ ಮಮತಾ ಬ್ಯಾನರ್ಜಿ ಈ ಕಾಯ್ದೆಯನ್ನು ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಜಾರಿಯಾಗಲು ಬಿಡುವುದಿಲ್ಲ ಎಂದು ಹೇಳಿದ್ದರು.