ಸಮಾನತೆಯ ಹರಿಕಾರ,ವಿಶ್ವಜ್ಞಾನಿ, ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಸ್ಮರಣೆ

ಸಮಾನತೆಯ ಹರಿಕಾರ,ವಿಶ್ವಜ್ಞಾನಿ, ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಸ್ಮರಣೆ

ಜಗತ್ತಿನಲ್ಲಿ ನೂರಾರು ವ್ಯಕ್ತಿಗಳು ಜನಿಸಿ ಇತಿಹಾಸ ಸೃಷ್ಟಿಸಿದ್ದಾರೆ. ಆದರೆ ಇತಿಹಾಸದ ದಿಕ್ಕನ್ನೆ ಬದಲಾಯಿಸಿದ ಏಕೈಕ ವ್ಯಕ್ತಿ ಮಹಾನ್ ಮಾನವತಾವಾದಿ ,ಮಹಿಳಾಪರ ಹೋರಾಟಗಾರರು, ಬಹುಜನರ ಸೂರ್ಯ. 

ಡಾ. ಬಿ. ಆರ್. ಅಂಬೇಡ್ಕರ್... ಸಮಾನತೆಯ ಹರಿಕಾರ, ಸಂವಿಧಾನ ಶಿಲ್ಪಿ, ಹೊಸ ಭಾರತದ ನಿರ್ಮಾತೃ... ದೇಶ ಕಂಡ ಮಹಾನ್ ಚೇತನ ಇವರು. ಇಡೀ ಭಾರತಕ್ಕೆ ಸ್ಫೂರ್ತಿ ತುಂಬಿದ, ಅಸ್ಪೃಶ್ಯತೆ, ಅಸಮಾನತೆ ವಿರುದ್ಧ ಹೋರಾಡಿದ ಮಾರ್ಗದರ್ಶಿ. ಮಹಿಳಾ ಸಮಾನತೆ, ಪ್ರಗತಿಯ ಕನಸು ಕಂಡ ನಾಯಕ. ಇಂತಹ ಮೇರು ವ್ಯಕ್ತಿತ್ವದ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 129ನೇ ಜನುಮದಿನ ಇಂದು. 14ನೇ ಏಪ್ರಿಲ್ 1891ರಲ್ಲಿ ಮಧ್ಯಪ್ರದೇಶದ ಮಾಹೋ ಎಂಬಲ್ಲಿ ಜನಿಸಿದ ಡಾ ಅಂಬೇಡ್ಕರ್ ಅವರು ಬಾಲ್ಯದ ದಿನಗಳಲ್ಲಿ ಬರೀ ಕಷ್ಟವನ್ನೇ ಕಂಡಿದ್ದವರು. ಅಸ್ಪೃಶ್ಯತೆ ಎಂಬ ಭೂತ ಬಲವಾಗಿ ಬೇರೂರಿದ್ದ ಆ ಕಾಲದಲ್ಲಿ ಅಂಬೇಡ್ಕರ್ ತುಂಬಾ ನೋವುಂಡಿದ್ದರು. ಇದೇ ನೋವಿನ ಜೀವನ ಬಳಿಕ ಅವರನ್ನು ಒಬ್ಬ ಹೋರಾಟಗಾರರನ್ನಾಗಿ ರೂಪಿಸಿತ್ತು, ಸಾಮಾಜಿಕ ಸಮಾನತೆಯ ಕನಸು ಕಾಣುವಂತೆ ಮಾಡಿತ್ತು. ಹೀಗೆ ಛಲದಿಂದ ಭವ್ಯ ಭಾರತದ ಕನಸು ಕಾಣುತ್ತಾ ಕಷ್ಟದ ನಡುವೆಯೂ ಬೆಳೆದ ಅಂಬೇಡ್ಕರ್ ಅವರು ನಮ್ಮ ದೇಶದ ಅಪೂರ್ವ ನಾಯಕರಲ್ಲಿ ಒಬ್ಬರಾದರು, ಅದೆಷ್ಟೋ ಜನರಿಗೆ ಸ್ಫೂರ್ತಿಯ ಚಿಲುಮೆಯಾಗಿದ್ದರು, ಸಂವಿಧಾನ ಶಿಲ್ಪಿಯಾಗಿ ರೂಪುಗೊಂಡಿದ್ದರು. ಸಂವಿಧಾನ ಭಾರತದ ಪಾಲಿನ ಪವಿತ್ರ ಗ್ರಂಥ. ಈ ಪವಿತ್ರ ಗ್ರಂಥದ ಗಂಧದ ಮೂಲಕ ಪ್ರಜಾಪ್ರಭುತ್ವಕ್ಕೊಂದು ಅರ್ಥ ಕಲ್ಪಿಸಿಕೊಡುವ ವ್ಯವಸ್ಥೆಯನ್ನು ಜಾರಿಗೆ ತರಲಾಯಿತು. ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಪ್ರೇರಣೆ ಅಂಬೇಡ್ಕರ್ ಅವರು..

ಅಂಬೇಡ್ಕರ್ ಅವರ ಮಾತುಗಳು...

*ಇತಿಹಾಸವನ್ನ  ಮರೆತವರು, ಇತಿಹಾಸವನ್ನು ಸೃಷ್ಟಿಸಲಾರರು


* ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ ಕಲಿಸುವ ಧರ್ಮ ನನಗೆ ಇಷ್ಟ

ಮಹಿಳೆಯರು ಸಾಧಿಸಿದ ಪ್ರಗತಿಯ ಮಟ್ಟದಿಂದ ನಾನು ಸಮುದಾಯವೊಂದರ ಪ್ರಗತಿಯನ್ನು ಅಳೆಯುತ್ತೇನೆ

ಬದುಕು ಸುದೀರ್ಘವಾಗಿರುವುದಕ್ಕಿಂತ ಶ್ರೇಷ್ಠವಾಗಿರಬೇಕು

* ಕಾನೂನು ಮತ್ತು ಸುವ್ಯವಸ್ಥೆ ರಾಜಕೀಯ ದೇಹಕ್ಕೆ ಔಷಧಿ ಇದ್ದಂತೆ. ರಾಜಕೀಯ ದೇಹ ಅನಾರೋಗ್ಯಕ್ಕೊಳಗಾದರೆ ಖಂಡಿತವಾಗಿಯೂ ಔಷಧಿ ನೀಡಬೇಕಾಗುತ್ತದೆ

ಪ್ರತಿಸಲ ದೇಶಾದ್ಯಂತ ಸಂಭ್ರಮದಿಂದ ಅಂಬೇಡ್ಕರ್ ಜಯಂತಿಯನ್ನು ಆಚರಿಸಲಾಗುತ್ತಿತ್ತು. ಈ ಸಲ ಕೊರೊನಾ ವೈರಸ್ ಕಾರಣಕ್ಕೆ ಸರಳವಾಗಿ ಅಂಬೇಡ್ಕರ್ ಜಯಂತಿ ಆಚರಿಸಲು ನಿರ್ಧರಿಸಲಾಗಿದೆ. ಅಂಬೇಡ್ಕರ್ ಅವರು ನಮ್ಮ ಹೆಮ್ಮೆ. ಹೀಗಾಗಿ, ಬಾಬಾ ಸಾಹೇಬ್ ಅವರ ತತ್ವ ಆದರ್ಶವನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕಾಗಿದೆ. ಈ ಮೂಲಕ ನಮ್ಮ ದೇಶವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲು ಎಲ್ಲರೂ ಕೈಜೋಡಿಸಬೇಕಾಗಿದೆ. ಹೀಗಾಗಿ, ಅಂಬೇಡ್ಕರ್ ಜಯಂತಿ ಸಮಾಜದಲ್ಲಿ ಇನ್ನಷ್ಟು ಬದಲಾವಣೆಗೆ ಪ್ರೇರಣೆಯಾಗಲಿ, ಅಸಮಾನತೆ ದೂರವಾಗಿ ಎಲ್ಲೆಲ್ಲೂ ಶಾಂತಿ ನೆಮ್ಮದಿ ನೆಲೆಗೊಳ್ಳಲಿ...